ಬೆಂಗಳೂರು; ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಎಸ್ಪಿ ರವಿ ಡಿ ಚನ್ನಣ್ಣನವರ್ (ಹಾಲಿ ಸಿಐಡಿ ಎಸ್ಪಿ) ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದಲೇ 50 ಲಕ್ಷ ರು. ವಸೂಲಿ ಮಾಡಿ ದೂರುದಾರ ಮಂಜುನಾಥ್ ಎಂಬುವರಿಗೆ ಅನ್ಯಾಯ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದಾರೆ.
ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸುವುದು, ದೂರುದಾರರ ಪ್ರತಿಸ್ಪರ್ಧಿ ವಿರೋಧಿಗಳ ಜತೆ ಶಾಮೀಲಾಗುವುದು, ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆಯಿಡುವುದು, ಅಕ್ರಮವಾಗಿ ಬಂಧನದಲ್ಲಿರಿಸುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ವಾರ್ಷಿಕ ವರದಿ ಸಿದ್ದಪಡಿಸಿರುವ ಬೆನ್ನಲ್ಲೇ ರವಿ ಡಿ ಚನ್ನಣ್ಣನವರ್ ಸೇರಿ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ನೀಡಿರುವ ದೂರು ಮುನ್ನೆಲೆಗೆ ಬಂದಿದೆ.
ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕಿದ್ದ ಎಸ್ಪಿ ರವಿ ಡಿ ಚನ್ನಣ್ಣನವರ್ ಮತ್ತಿತರ ಪೊಲೀಸ್ ಅಧಿಕಾರಿಗಳು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ದೂರು ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೆಟ್ಟಿಲೇರಿದೆ.
2021ರ ಸೆಪ್ಟಂಬರ್ 28ರಂದು ಸಲ್ಲಿಕೆಯಾಗಿರುವ ದೂರನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ದೂರಿನ ಪ್ರತಿ ಮತ್ತು ಈ ಸಂಬಂಧ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಪೊಲೀಸ್ ಅಧಿಕಾರಿಗಳು ಬೇಡಿಕೆ ಇರಿಸಿದ್ದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರೊಂದಿಗೆ ನಡೆಸಿದ್ದ ಸಂಭಾಷಣೆಯ ಧ್ವನಿಮುದ್ರಿಕೆಯೂ ತಮ್ಮ ಬಳಿ ಇದೆ ಎಂದು ದೂರುದಾರ ಮಂಜುನಾಥ್ ಅವರು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿರುವುದು ದೂರಿನಿಂದ ತಿಳಿದು ಬಂದಿದೆ. ದೂರು ಸಲ್ಲಿಕೆಯಾಗಿ 3 ತಿಂಗಳಾದರೂ ಒಳಾಡಳಿತ ಇಲಾಖೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.
‘ನನಗೀಗ ಯಾವುದೇ ದಾರಿ ಕಾಣಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನಗೆ ಹೆಣ್ಣು ಮಗಳಿದ್ದಾಳೆ. ನಾನು ನನ್ನ ಜವಾಬ್ದಾರಿಯಿಂದ ಪಲಾಯನ ಮಾಡಲು ಮನಸು ಒಪ್ಪುತ್ತಿಲ್ಲ. ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಧ್ವನಿ ಮುದ್ರಣ, ವಾಟ್ಸಾಪ್ ಸಂದೇಶಗಳು ನನ್ನ ಬಳಿ ಇವೆ. ತನಿಖೆಯ ಸಂದರ್ಭದಲ್ಲಿ ಇವೆಲ್ಲವನ್ನೂ ಮುಂದಿರಿಸುತ್ತೇನೆ.ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು,’ ಎಂದು ದೂರಿನಲ್ಲಿ ಮಂಜುನಾಥ್ ಕೋರಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆಯ್ಲಲದೆ ದೂರುದಾರ ಮಂಜುನಾಥ್ ಎಂಬುವರು ತಮ್ಮ ಪತ್ನಿ ಆಭರಣಗಳನ್ನು ಮಾರಾಟ ಮಾಡಿ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದರು. ಹಣ ತಲುಪಿದ ನಂತರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು ಎಂಬ ಸಂಗತಿಯು ದೂರಿನಿಂದ ಗೊತ್ತಾಗಿದೆ.
ಆರೋಪಿಯಿಂದಲೇ 50 ಲಕ್ಷ ಸುಲಿಗೆ?
‘ನನ್ನ ಮನೆ ಬ್ಯಾಂಕ್‌ನಿಂದ ಹರಾಜಿಗೆ ಬಂದಿದ್ದರೂ ಪೊಲೀಸ್ ಅಧಿಕಾರಿಗಳು ಬೇಡಿಕೆ ಇರಿಸಿದ್ದ ಹಣವನ್ನು ನೀಡಿದ್ದೇನೆ. ಆಭರಣಗಳ ಮಾರಾಟದಿಂದ ಬಂದ ಹಣವನ್ನು ನೀಡಿದ್ದರೂ ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ಸಹಕರಿಸಿದ್ದಾರೆ. ಎಸ್ ಪಿ ರವಿ ಚನ್ನಣ್ಣನವರ್ ಅವರಿಗೆ 25.00 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಮತ್ತು ಡಿವೈಎಸ್ಪಿ ಕಚೇರಿಯ ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರು.ಗಳನ್ನು ನೀಡಲಾಗಿದೆ ಎಂದು ಆರೋಪಿ ಅಶೋಕ್ ಎಂಬಾತ ಕಂದಪ್ಪ ಮತ್ತು ಸಂಪತ್ ಎಂಬುವರ ಮುಂದೆ ಬಾಯ್ಬಿಟ್ಟಿದ್ದಾನೆ,’ಎಂದು ದೂರುದಾರ ಮಂಜುನಾಥ್ ಅವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.
ಎಫ್‌ಐಆರ್ ದಾಖಲಿಸಲು 5 ಲಕ್ಷ ರು. ವಸೂಲಿ
ವಂಚನೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗುವ ಮುನ್ನವೇ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿದ್ದ ರವಿ ಡಿ ಚೆನ್ನಣ್ಣನವರ್ ಅವರ ಹೆಸರಿನಲ್ಲಿ 5.00 ಲಕ್ಷ ರು.ಗಳಿಗೆ ಬೇಡಿಕೆ ಇರಿಸಲಾಗಿತ್ತು. ಈ ಪೈಕಿ 4 ಲಕ್ಷ ರು.ಗಳನ್ನು ಇನ್ಸ್‌ಪೆಕ್ಟರ್ ಶ್ರೀನಿವಾಸ್ ಎಂಬುವರ ಸೂಚನೆ ಮೇರೆಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಶುಭಾ/ಅನಿತಾ ಎಂಬುವರಿಗೆ ತಲುಪಿಸಲಾಗಿತ್ತು. ಹಣ ತಲುಪಿರುವ ಬಗ್ಗೆ ಶುಭಾ ಎಂಬುವರು ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರಿಗೆ ಮೊಬೈಲ್ ಫೋನ್ ಮೂಲಕ ಖಚಿತಪಡಿಸಿದ್ದರು ಎಂಬುದು ದೂರಿನಿಂದ ತಿಳಿದು ಬಂದಿದೆ.
ಬೇಡಿಕೆ ಇರಿಸಿದ್ದ ಒಟ್ಟು 5 ಲಕ್ಷ ರು. ಪೈಕಿ ಇನ್ನೂ ಒಂದು ಲಕ್ಷ ರು. ಬಾಕಿ ಹಣವನ್ನು ಎಸ್ ಪಿ ಅವರು ಕೇಳಿದ್ದರು ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ಎಂಬುವರ ವಿರುದ್ಧ ದೂರಲಾಗಿದೆಯಲ್ಲದೆ ಬಾಕಿ ಇರುವ ಹಣ ನೀಡಿದ ಮೇಲೆ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲು ಕರೆ ಮಾಡುತ್ತಾರೆ ಎಂಬ ಆಪಾದನೆಯೂ ದೂರಿನಲ್ಲಿ ವಿವರಿಸಲಾಗಿದೆ.
ಎಫ್‌ಐಆರ್ ದಾಖಲಿಸಲು ಬೇಡಿಕೆ ಇರಿಸಿದ್ದ ಒಟ್ಟು ಹಣವನ್ನು ಹೊಂದಿಸುವಲ್ಲಿ ಒತ್ತಡಕ್ಕೆ ಒಳಗಾಗಿದ್ದ ಮಂಜುನಾಥ್ ಅವರು 2020ರ ನವೆಂಬರ್ 28ರಂದು ಅನಿತಾ ಎಂಬುವರಿಗೆ ಬಾಕಿ ಹಣವನ್ನು ತಲುಪಿಸಿದ್ದರು. ಈವೇಳೆಯಲ್ಲಿ ಮತ್ತೊಬ್ಬ ಅಧಿಕಾರಿ ಶುಭಾ ಅವರು ಸ್ಥಳದಲ್ಲಿಯೇ ಇದ್ದರು. ಆದರೆ ಆ ವೇಳೆಯಲ್ಲಿ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಣ ತಲುಪಿದ ನಂತರ ಎಫ್‌ಐಆರ್ ದಾಖಲು
ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಡಿಸೆಂಬರ್ 5ರಂದು ಅಶೋಕ್ ಎಂಬುವರು ಸೇರಿದಂತೆ ಒಟ್ಟು 12 ಆರೋಪಿಗಳ ವಿರುದ್ಧ ಎಫ್‌ಐಆರ್ (ಎಫ್‌ಐಆರ್ ಸಂಖ್ಯೆ; 0369/2020) ದಾಖಲಿಸಲಾಗಿದೆ. ಇದಾದ ನಂತರ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರ ಮಾರ್ಗದರ್ಶನದ ಮೇರೆಗೆ ದೂರುದಾರ ಮಂಜುನಾಥ್ ಅವರು ಹೆಬ್ಬಗೋಡಿ ಡಿವೈಎಸ್ಪಿ ಮಹದೇವಪ್ಪ ಅವರನ್ನು ಭೇಟಿ ಮಾಡಿದ್ದರು. ಅವರು ಸಹ 2.50 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದರು. ಬೇರೆ ದಾರಿಯಿಲ್ಲದೇ ಮಂಜುನಾಥ್ ಅವರು ಈ ಪೈಕಿ 50,000 ರು.ಗಳನ್ನು ಅದೇ ದಿನದಂದು ಡಿವೈಎಸ್ಪಿ ಮಹದೇವಪ್ಪ ಅವರಿಗೆ ನೀಡಿದ್ದರು ಎಂಬ ಅಂಶ ದೂರಿನಿಂದ ಗೊತ್ತಾಗಿದೆ.
ಎಸ್ಪಿ ರವಿ ಚನ್ನಣ್ಣನವರ್ ಹೆಸರಿನಲ್ಲಿ 5 ಲಕ್ಷ ಹಾಗೂ ಡಿಎವೈಎಸ್ಪಿ ಮಹದೇವಪ್ಪ ಎಂಬುವರಿಗೆ 50,000 ರು. ವಸೂಲು ಮಾಡಿದ ನಂತರ ಒಟ್ಟು 12 ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆಯಲ್ಲಿ ಆರೋಪಿಗಳು ಮಂಜುನಾಥ್ ಅವರಿಗೆ ಹಣವನ್ನು ಹಿಂದಿರುಗಿಸಲು ಒಪ್ಪಿದ್ದರು. ಆದರೆ ಇದೇ ಹೊತ್ತಿನಲ್ಲಿ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಅಶೋಕ್ ಎಂಬುವರು ತಲೆಮರೆಸಿಕೊಂಡಿದ್ದರು. ಈ ಮಧ್ಯೆ ಅಶೋಕ್ ಎಂಬಾತನಿಗೆ ನಿರೀಕ್ಷಣಾ ಜಾಮೀನು ಕೂಡ ದೊರಕಿತ್ತು. ಆದರೆ ಇದ್ದಕ್ಕಿದ್ದಂತೆ ಈ ಪ್ರಕರಣವು ಎಸ್ಪಿ ರವಿ ಡಿ ಚೆನ್ನಣ್ಣನವರ್ ಅವರ ಸೂಚನೆ ಮೇರೆಗೆ 2020ರ ಡಿಸೆಂಬರ್ 15ರಂದು ಡಿವೈಎಸ್‌ಪಿ ಮಹದೇವಪ್ಪ ಎಂಬುರಿಗೆ ವರ್ಗಾವಣೆಯಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆ ನಂತರ ಡಿವೈಎಸ್ಪಿ ಮಹದೇವಪ್ಪ ಅವರ ಸೂಚನೆಯಂತೆ ಕಾಶಿ (9952158888) ಎಂಬುವರಿಗೆ ಬಾಕಿ ಇದ್ದ 2.00 ಲಕ್ಷ ರು.ಗಳನ್ನು 2020ರ ಡಿಸೆಂಬರ್ 16ರಂದು ದೂರುದಾರ ಮಂಜುನಾಥ್ ಅವರು ತಲುಪಿಸಿದ್ದರು. ಈ ಪ್ರಕರಣದಲ್ಲಿ ಎಸ್ ಪಿ ರವಿ ಚೆನ್ನಣ್ಣನವರ್ ಮತ್ತು ಡಿವೈಎಸ್ಪಿ ಮಹದೇವಪ್ಪ ಅವರು ಆರೋಪಿ ಅಶೋಕ್ ಎಂಬುವರೊಂದಿಗೆ ಶಾಮೀಲಾಗಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಮತ್ತು ತನಿಖೆಯಿಂದ ಆರೋಪಿಯು ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಮಂಜುನಾಥ್ ಅವರು ದೂರಿದ್ದಾರೆ.
ವಂಚನೆ ಆಗಿದ್ಹೇಗೆ?
ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿಯ ಅಶೋಕ್ ಎಂಬುವರು ತಿಮ್ಮರಾಯಸ್ವಾಮಿ ಬ್ಲೂ ಮೆಟಲ್ಸ್ ಕ್ರಷರ್ ನಡೆಸುತ್ತಿದ್ದರು. ಕ್ರಷರ್ ಉದ್ಯಮವು ಮುಚ್ಚುವ ಹಂತದಲ್ಲಿದೆ. ಹೊಸದಾಗಿ ಕ್ರಷರ್ ಉದ್ಯಮ ನಡೆಸುವ ಸಲುವಾಗಿ ಮಂಜುನಾಥ್ ಅವರಿಂದ 40.00 ಲಕ್ಷ ಹಣ ಪಡೆದಿದ್ದರು. ಆದರೆ ಇದರಿಂದ ನಿರೀಕ್ಷಿತ ಲಾಭವಿಲ್ಲ, ಈ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಅದರಲ್ಲಿ ಬರುವ ಹಣವನ್ನು ಬಂಡವಾಳವಾಗಿಸಿ ಹೊಸದಾಗಿ ಆದಿ ಬೈರವ ಬ್ಲೂ ಮೆಟಲ್ ಕ್ರಷರ್ ಉದ್ಯಮ ನಡೆಸಬಹುದು ಎಂದು ಮಂಜುನಾಥ್ ಅವರನ್ನು ಅಶೋಕ್ ಎಂಬಾತ ನಂಬಿಸಿದ್ದ.
ಇವರ ಮಾತನ್ನು ನಂಬಿದ್ದ ಮಂಜುನಾಥ್ ಅವರು ತಮ್ಮ ಕಾರ್ಖಾನೆಯನ್ನು ಮಾರಾಟ ಮಾಡಿ 2019ರ ಮೇ 14ರಂದು 3.96 ಕೋಟಿ ರು.ಳನ್ನು ಎಸ್ಸೆ ಕಾರ್ಪೋರೇಟ್ ಕಂಪನಿಗೆ ಮಾರಾಟ ಮಾಡಿ ವೆಂಕಟೇಶನ್ ಎಂಬುವರಿಗೆ ನೋಂದಣಿ ಮಾಡಿಕೊಟ್ಟಿದ್ದರು. ಇದರಿಂದ ಬಂದ ಹಣವನ್ನು ಡಿಡಿ ರೂಪದಲ್ಲಿ ಅತ್ತಿಬೆಲೆ ಗೆಸ್ಟ್ ಲೈನ್ ಹೋಟೆಲ್‌ನಲ್ಲಿ ನೇರವಾಗಿ ಅಶೋಕ್ ಎಂಬುವರಿಗೆ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆ ನಂತರ ಇದೇ ಹಣವನ್ನು ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಹೊಸದಾಗಿ ಮಾಡಿಸಿದ್ದ ಖಾತೆಗೆ (ಖಾತೆ ಸಂಖ್ಯೆ; 19200000003520) ಜಮಾ ಮಾಡಲಾಗಿತ್ತು. ಇದಾದ 2-3 ದಿನಗಳ ನಂತರ ಅಶೋಕ್ ಎಂಬಾತ ‘ ಅಷ್ಟು ಹಣ ನಿನ್ನ ಖಾತೆಯಲ್ಲಿದ್ದರೆ ನಿನಗೆ ಐ ಟಿ ಯಿಂದ ತೊಂದರೆಯಾಗುತ್ತದೆ. ಆದ್ದರಿಂದ ನಾನು ಹೇಳಿದವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸು ಎಂದು ನಂಬಿಸಿದ್ದ.
ಆರ್‌ಟಿಜಿಎಸ್ ಮೂಲಕ 3.96 ಕೋಟಿ ವರ್ಗಾವಣೆ
ಅದರಂತೆ ಸುಬ್ರಮಣಿ ಎಂಬುವರು ಹೊಂದಿದ್ದ ಇಂಡಿಯನ್ ಬ್ಯಾಂಕ್ ಖಾತೆಗೆ 35 ಲಕ್ಷ, ಅತ್ತಿಬೆಲೆ ಕರೂರು ವೈಶ್ಯ ಬ್ಯಾಂಕ್‌ನಲ್ಲಿ ಎಬಿಆರ್ ಬಾರ್ ಅಂಡ್ ರೆಸ್ಟೋರೆಂಟ್ ಖಾತೆಗೆ 25 ಲಕ್ಷ, ಮಾಯಸಂದ್ರ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಮಂಗಳ ಅವರಿಗೆ 25 ಲಕ್ಷ, ಹೊಸರಿನಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಶಿವಶಂಕರ್ ಎಂಬುವರಿಗೆ 60 ಲಕ್ಷ ರು., ಹೊಸೂರಿನಲ್ಲಿದ್ದ ಫೆಡರಲ್ ಬ್ಯಾಂಕ್‌ನಲ್ಲಿ ಬೆಸ್ಟ್ ಎಲೆಕ್ಟ್ರಿಕಲ್ ಹೊಂದಿದ್ದ ಖಾತೆಗೆ 35 ಲಕ್ಷ ರು., ಉಮಾ ಎಂಬುವರ ಖಾತೆಗೆ 5 ಲಕ್ಷ, ಕೆ ರೇಣುಕ ಎಂಬುವರು ಹೊಂದಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಖಾತೆಗೆ 1.30 ಕೋಟಿ, ಮಂಜುನಾಥ್ ಎಂಟರ್ ಪ್ರೈಸೆಸ್‌ಗೆ 8 ಲಕ್ಷ, ಗೀತಾ ಶೈಲೇಶ್ ಪಾಟೀಲ್ ಅವರ ಖಾತೆಗೆ 4 ಲಕ್ಷ, ಚೇತನ್ ಶೈಲೇಶ್ ಪಾಟೀಲ್ ಖಾತೆಗೆ 4 ಲಕ್ಷ ಸೇರಿ ಒಟ್ಟು 3.96 ಕೋಟಿ ರು.ಗಳನ್ನು ಆರ್‌ಟಿಜಿಎಸ್ ಮುಖಾಂತರ ಹಣ ವರ್ಗಾವಣೆ ಮಾಡಿದ್ದರು ಎಂಬ ವಿವರಣೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ‘ದಿ ಫೈಲ್’ ಮಾಡಿದ್ದ ದೂರವಾಣಿ ಕರೆಯನ್ನು ಎಸ್ಪಿ ರವಿ ಡಿ ಚನ್ನಣ್ಣನವರ್ ಅವರು ಸ್ವೀಕರಿಸಲಿಲ್ಲ. ಹಾಗೆಯೇ ಈ ಸಂಬಂಧ ಪ್ರತಿಕ್ರಿಯೆ ಕೋರಿ ವಾಟ್ಸಾಪ್ ಮೂಲಕ ಸಂದೇಶ ಕಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.
ಗುತ್ತಿಗೆದಾರರಿಂದ ಶೇ. 40ರಷ್ಟು ಪರ್ಸೆಂಟೇಜ್, ಕೈಗಾರಿಕೆಗಳ ಪರವಾನಿಗೆ ನವೀಕರಣಕ್ಕೆ ಪರಿಸರ ಮಂಡಳಿ ಅಧಿಕಾರಿಗಳು ಕೈಗಾರಿಕೋದ್ಯಮಿಗಳಿಂದ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ದೂರು ಸಲ್ಲಿಕೆಯಾಗಿರುವುದನ್ನು ಸ್ಮರಿಸಬಹುದು.