ಬೆಂಗಳೂರು; 847 ಸಂಖ್ಯೆ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಈ ವರದಿಯು ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ವಸತಿ ಕಾಮಗಾರಿಗಳಲ್ಲಿನ ಅಕ್ರಮ, ಅವ್ಯವಹಾರಗಳ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದೆ.

2019-20ರಿಂದ 2023-24ರವರೆಗೆ ಎಂಐಎಸ್ ವರದಿ ಪ್ರಕಾರ 39 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 5.04 ಕೋಟಿ ರು ವೆಚ್ಚದಲ್ಲಿ ಒಟ್ಟಾರೆ 2,560 ವಸತಿ ಕಾಮಗಾರಿಗಳಿದ್ದವು. ಈ ಪೈಕಿ ಲೆಕ್ಕ ಪರಿಶೋಧನೆಯು 847 ಕಾಮಗಾರಿಗಳನ್ನು ಪರಿಶೀಲಿಸಿತ್ತು. ಈ 847 ಕಾಮಗಾರಿಗಳಿಗೆ 1.91 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು. ಈ ವೆಚ್ಚವೇ ಅಕ್ರಮವಾಗಿತ್ತು ಎಂದು ಸಿಎಜಿಯು ಪರಿಶೀಲನೆ ವೇಳೆಯಲ್ಲಿ ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

462 ಪ್ರಕರಣಗಳಲ್ಲಿ ನಿರ್ಮಾಣದ ವಿವಿಧ ಹಂತಗಳಿಗೆ (ಅಡಿಪಾಯ, ಲಿಂಟೆಲ್, ಮೇಲ್ಛಾವಣಿ) ಮಸ್ಟರ್ ರೋಲ್ ಗಳನ್ನು ಸೃಷ್ಟಿಸುವ ಮೂಲಕ ನರೇಗಾ ಅಡಿಯಲ್ಲಿ ಪಾವತಿಸಲಾಗಿತ್ತು. ಆದರೆ ವಸತಿ ಯೋಜನೆಗಳ ವೆಬ್ಸೈಟ್ಗಳಿಂದ ಪಡೆದ ಮಾಹಿತಿಯು ಮನೆಗಳೂ ಹಿಂದಿನ ಅವಧಿಯಲ್ಲಿಯೇ ಪೂರ್ಣಗೊಂಡಿದ್ದವು ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

8 ಪ್ರಕರಣಗಳಲ್ಲಿ ಅಗತ್ಯ ಭೂಮಿಯನ್ನು ಹೊಂದಿಲ್ಲದ ಅಥವಾ ಈಗಾಗಲೇ ನಿರ್ಮಿಸಲಾದ ಮನೆಗಳಿಗೆ ವಸತಿ ಯೋಜನೆಗಳ ಅಡಿಲ್ಲಿ ಕೌಶಲ್ಯ ರಹಿತ ವೇತನ ಉದ್ಯೋಗ ಒದಗಿಸಿತ್ತು. 117 ಪ್ರಕರಣಗಳಲ್ಲಿ ಮನೆಗಳ ಹಂತವಾರು ನಿರ್ಮಾಣಕ್ಕೆ ಅನುಮತಿಸಿದ ಮಿತಿಗಿಂತ ಹೆಚ್ಚಿನ ಮಾನವ ದಿನಗಳನ್ನು ಪಾವತಿಸಲಾಗಿತ್ತು. ಭುವನ್ ಪೋರ್ಟಲ್ನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ ಯಾವುದೆ ಕಾಮಗಾರಿಯನ್ನು ಕಾರ್ಯಗತಗೊಳಿಸದೇ ಇದ್ದರೂ ಸಹ 12 ಪ್ರಕರಣಗಳಲ್ಲಿ ಮಸ್ಟರ್ ರೋಲ್ಗಳ ಮೇಲೆ ಪಾವತಿಗಳನ್ನು ಮಾಡಲಾಗಿತ್ತು. ಮತ್ತು ಕಾಮಗಾರಿಯ ವಿವಿಧ ಹಂತಗಳಿಗೆ ಅದೇ ಛಾಯಾಚಿತ್ರಗಳನ್ನು ಅಪ್ಲೊಡ್ ಮಾಡಲಾಗಿತ್ತು ಎಂಬುದನ್ನು ಸಿಎಜಿಯು ಪತ್ತೆ ಹಚ್ಚಿದೆ.
ಕಲ್ಬುರ್ಗಿಯ ಅಳಂದ, ಕಮಲಾಪುರ, ಕೊಪ್ಪಳದ ಯಲಬುರ್ಗಾ, ಮಮಡ್ಯ ಮದ್ದೂರು,ಮಂಡ್ಯ, ಶಿವಮೊಗ್ಗ ಸಾಗರ, ಶಿಕಾರಿಪುರ, ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ ಆಯ್ದ 39 ಗ್ರಾಮ ಪಂಚಾಯ್ರಿಗಳಲ್ಲಿ ಸಿಎಜಿಯು ವಸತಿ ಕಾಮಗಾರಿಗಳನ್ನು ಪರಶೀಲಿಸಿದೆ. ಈ ಪೈಕಿ ಕಲ್ಬುರ್ಗಿಯ ಅಳಂದದಲ್ಲಿ 46 , ಕಮಲಾಪುರದಲ್ಲಿ 194, ಗಂಗಾವತಿ 307, ಯಲಬುರ್ಗದ 488, ಮದ್ದೂರಿನಲ್ಲಿ 197, ಮಂಡ್ಯ 175, ಸಾಗರದಲ್ಲಿ 234, ಶಿಕಾರಿಪುರದಲ್ಲಿ 125, ತಿಪಟೂರಿನಲ್ಲಿ 587, ತುರುವೇಕೆರೆಯಲ್ಲಿ 207 ಸೇರಿ ಒಟ್ಟಾರೆ 2,560 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದವು.

ಈ 2,560 ಕಾಮಗಾರಿಗಳಲ್ಲಿ 847 ಕಾಮಗಾರಿಗಳಿಗೆ 1.90 ಕೋಟಿ ರು ವೆಚ್ಚವಾಗಿತ್ತು. ಸಿಎಜಿಯು ಈ ಕಾಮಘಾರಿಗಳ ಪೈಕಿ 653 ಕಾಮಗಾರಿಗಳನ್ನು ತನಿಖೆ ನಡೆಸಿತ್ತು. ಈ ಕಾಮಗಾರಿಗಳಿಗೆ 1.18 ಕೋಟಿ ರು ವೆಚ್ಚವಾಗಿತ್ತು. ‘ಆಯ್ದ ತಾಲೂಕುಗಳಲ್ಲಿ ಪರೀಕ್ಷಾ ತನಿಖೆ ನಡೆಸಿದ ಕಾಮಗಾರಿಗಳಲ್ಲಿ ಶೇ. 56ರಿಂದ 99ರವರೆಗಿನ ವ್ಯಾಪ್ತಿಯಲ್ಲಿ ಇಂತಹ ಅಕ್ರಮಗಳು ನಡೆದಿರುವುದನ್ನು ಗಮನಿಸಬಹುದು. ಇದು ಪರಿಶೀಲನೆಗಳನ್ನು ಸಮರ್ಪಕವಾಗಿ ಮಾಡಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಮತ್ತು 1.19 ಕೋಟಿ ಅಕ್ರಮ ಪಾವತಿಯಲ್ಲಿ ಪರಿಣಿಮಿಸಿತ್ತು,’ ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕಾಮಗಾರಿಯ ಸ್ಥಳಗಳಲ್ಲಿ ಅಳತೆಗಳನ್ನು ತೆಗೆದುಕೊಳ್ಳದೇ ಪಾವತಿಗಳನ್ನು ಮಾಡಲಾಗಿತ್ತು. ಇಂತಹ ಅಕ್ರಮಗಳ ಅಕ್ರಮಗಳ ಹೆಚ್ಚಿನ ಪ್ರಕರಣಗಳು ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆಯ ಕೊರತೆ ಕಂಡು ಬಂದಿತ್ತು. ಮತ್ತು ನರೇಗಾ ನಿಧಿಯ ಸೋರಿಕೆ ಮತ್ತು ದುರುಪಯೋಗಕ್ಕೆ ಕಾರಣವಾಗಿತ್ತು. ಎಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನ ನಡೆಸಲಾಯಿತೋ ಅಲ್ಲಿಯೂ ಸಹ ಅಂತಹ ಯಾವುದೆ ನ್ಯೂನತೆಗಳನ್ನು ಎತ್ತಿ ತೋರಿಸಲಿಲ್ಲ. ಇವು ಕೇವಲ ನಿದರ್ಶನಾತ್ಮಕ ಪ್ರಕರಣಗಳಾಗಿವೆ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕುರಿತು ಸಿಎಜಿ ಮಾಡಿದ್ದ ಅವಲೋಕನಗಳನ್ನು ರಾಜ್ಯ ಸರ್ಕಾರವು ಸಹ ಒಪ್ಪಿಕೊಂಡಿದೆ. ಮತ್ತು ಲೆಕ್ಕ ಪರಿಶೋಧಕರು ಮಾಡಿದ ಅಭಿಪ್ರಾಯಗಳ ಆಧಾರದ ಮೇಲೆ ಜಿಲ್ಲಾ ಪಂಚಾಯ್ತಿಗಳ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಲೆಕ್ಕ ಪರಿಶೋಧಕರಿಗೆ ತಿಳಿಸಿತ್ತು.

ಗ್ರಾಮೀಣಾಭಿವೃದ್ದಿ ಸಚಿವಾಲಯವು 2014ರಲ್ಲಿ ಮತ್ತು ರಾಜ್ಯ ಸರ್ಕಾರವು 2016ರಲ್ಲಿ ಹಲವು ಆದೇಶಗಳನ್ನು ಹೊರಡಿಸಿತ್ತು. ಈ ಪ್ರಕಾರ ಮನೆಗಳ ನಿರ್ಮಾಣವನ್ನು ಒಮ್ಮುಖಗೊಳಿಸುವ ಮಾರ್ಗಸೂಚಿಗಳ ಪ್ರಕಾರ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಯು ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ವತಃ ಕೈಗೆತ್ತಿಕೊಂಡಿದ್ದರೇ ನರೇಗಾ ಅಡಿಯಲ್ಲಿ 90 ಮಾನವ ದಿನಗಳ ಕೌಶಲ್ಯರಹಿತ ಮಜೂರಿ ಘಟಕಕ್ಕೆ ಅರ್ಹನಾಗಿರುತ್ತಾನೆ. ಹಿಮದೆ ನೀಡದ ವೇತನ ಉದ್ಯೋಗಕ್ಕಾಗಿ ಫಲಾನುಭವಿಗೆ ಪರಿಹಾರ ನೀಡುವುದು ಇದರ ಉದ್ದೇಶವಾಗಿದೆ. ನಿರ್ಮಾಣದ ಹಂತಗಳ ಅಧಾರದ ಮೇಲೆ 90 ದಿನಗಳ ವೇತನ ಪಾವತಿಗಳನ್ನು ಮಾಡಬೇಕಿತ್ತು.

ಘನತ್ಯಾಜ್ಯ ನಿರ್ವಹಣಾ ಶೆಡ್ ನಿರ್ಮಾಣದಲ್ಲಿ ವ್ಯತ್ಯಾಸಗಳ ಪತ್ತೆ
ಘನತ್ಯಾಜ್ಯ ನಿರ್ವಹಣಾ ಶೆಡ್ಗಳ ನಿರ್ಮಾಣದಲ್ಲಿ ಹಲವು ವ್ಯತ್ಯಾಸಗಳನ್ನು ಪತ್ತೆ ಹಚ್ಚಿರುವ ಸಿಎಜಿಯು ಇಲ್ಲಿಯೂ ಸಹ ನಕಲಿ ದಾಖಲೆಗಳ ಮತ್ತು ಕಾರ್ಯಗತಗೊಳಿಸದೇ ಇದ್ದ ಕೆಲಸಗಳಿಗೆ ಮೋಸದ ಪಾವತಿಗಳಾಗಿವೆ ಎಂದು ವರದಿಯಲ್ಲಿ ದಾಖಲಿಸಿದೆ. ಕಲ್ಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಬಬಲಾಡ್ ಗ್ರಾಮ ಪಂಚಾಯ್ತಿಯಲ್ಲಿ 2021ರಲ್ಲಿ ಘನತ್ಯಾಜ್ಯ ನಿರ್ವಹಣೆ ಶೆಡ್ ನಿರ್ಮಾಣ ಕಾಮಗಾರಿಯನ್ನು ವಾರ್ಷಿಕ ಕಾರ್ಯ ಯೋಜನೆಯಲ್ಲಿ ಸೇರಿಸಿತ್ತು. ಈ ಕಾಮಗಾರಿ ಅಂದಾಜು ವೆಚ್ಚವು 19.45 ಲಕ್ಷ ರುವಾಗಿತ್ತು. ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗವು ಈ ಕಾಮಗಾರಿಯ ಅನುಷ್ಠಾನಗೊಳಿಸಿತ್ತು.

ದಾಖಲೆಗಳ ಪ್ರಕಾರ ಈ ಕಾಮಗಾರಿಯನ್ನು ಏಪ್ರಿಲ್ 2023ರಲ್ಲಿ ಆರಂಭಿಸಲಾಗಿತ್ತು. ಮತ್ತು ಇದಕ್ಕಾಗಿ ವೇತನ 3.39ಲಕ್ಷ ಮತ್ತು ಸಾಮಗ್ರಿಗಾಗಿ 15.06 ಲಕ್ಷ ಸೇರಿ ಒಟ್ಟಾರೆ 18.45 ಲಕ್ಷ ವೆಚ್ಚ ಭರಿಸಿತ್ತು. ಲೆಕ್ಕ ಪರಿಶೋಧಕರ ಪರಿಶೀಲನೆ ಸಂದರ್ಭದಲ್ಲಿಯೂ ಈ ಕಾಮಗಾರಿಯು ಇನ್ನೂ ಪ್ರಗತಿಯಲ್ಲಿತ್ತು.
ದಾಖಲೆಗಳನ್ನು ತಿದ್ದಲಾಗಿತ್ತೇ?
ಈ ಕಾಮಗಾರಿಗೆ ಸಂಬಂಧಿಸಿದಂತೆ ಜಿಯೋ ಟ್ಯಾಗ್ ಮಾಡಿದ ಛಾಯಾಚಿತ್ರ ಸೇರಿದಂತೆ ಎನ್ಎಂಆರ್ಗಳು, ಸಾಮಗ್ರಿ ಬೆಲೆಪಟ್ಟಿಗಳು ಮತ್ತು ಸಾಮಗ್ರಿ ಬಿಲ್ಗಳಂತಹ ದಾಖಲೆಗಳನ್ನು ತಿದ್ದಲಾಗಿತ್ತು. ಕಲ್ಬುರ್ಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಅವರ ಪ್ರಕಾರ ಈ ಕಾಮಗಾರಿಯನ್ನು 2023ರ ಏಪ್ರಿಲ್ನಿಂದ ಈ ಕಾಮಗಾರಿಯನ್ನು ಆರಂಭಿಸಲಾಗಿದೆ. ಆದರೆ ಪಿಡಿಒ ಪ್ರಕಾರ ಈ ಕಾಮಗಾರಿಯು 2023ರ ಮಾರ್ಚ್ 24ರಿಂದ 2023ರ ಮಾರ್ಚ್ 29ರವರೆಗೆ ನಡೆಸಲಾಗಿದೆ. ಮತ್ತು 2023ರ ಮೇ 19ರ ಅಂತ್ಯಕ್ಕೆ ಒಟ್ಟಾರೆ 50 ಮಾನವ ದಿನಗಳಿಗೆ 15,450 ರುಗಳನ್ನು ಪಾವತಿಸಲಾಗಿತ್ತು.

ಈ ಕಾಮಗಾರಿಯಲ್ಲಿ ಬಳಸಿದ್ದ 20 ಎನ್ಎಂಆರ್ಗಳಲ್ಲಿ ಯಾವುದನ್ನೂ ಎನ್ಆರ್ಇಜಿ ಸಾಫ್ಟ್ ಮೂಲಕ ಸೃಷ್ಟಿಸಿರಲಿಲ್ಲ. ಇದು ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆಗಳ ವಿವರಗಳೇ ಇರಲಿಲ್ಲ. ಇದಲ್ಲದೇ ಇವುಗಳಲ್ಲಿ ಯಾವುದು ಮಾಪನ ಪುಸ್ತಕ (ಎಂಬಿ) ಅನುಗುಣವಾದ ಪುಟ ಸಂಖ್ಯೆಗಳ ಬಗ್ಗೆ ಉಲ್ಲೇಖಿಸಿಲ್ಲ. ಇದಲ್ಲದೇ ಮಾಪನ ಪುಸ್ತಕ ದಾಖಲೆಯಿಲ್ಲದೇ 1.17 ಲಕ್ಷ ವೇತನ ಪಾವತಿಯನ್ನು ಕಾರ್ಯಗತಗೊಳಿಸಿದ ಕಾಮಗಾರಿ ಅವಧಿಗೆ ಎಂಟು ಎನ್ಎಂಆರ್ ಮಾಡಲಾಗಿತ್ತು. ಮೊದಲ ಮಾಪನ ಪುಸ್ತಕ ರೆಕಾರ್ಡಿಂಗ್ನ್ನು 2023ರ ನವೆಂಬರ್ 2ರಂದು ಮಾಡಲಾಗಿತ್ತು.
ಕೆಟಿಪಿಪಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಟಂಡರ್ ಪ್ರಕ್ರಿಯೆಯನ್ನು ಅನುಸರಿಸದೇ ಬೆಲೆಪಟ್ಟಿಗಳನ್ನು ಆಹ್ವಾನಿಸಿತ್ತು. ಈ ಮೂಲಕ 15.06 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿತ್ತು. ಬೆಲೆಪಟ್ಟಿಗಳು, ದಿನಾಂಕಗಳು ಮತ್ತು ಮಾರಾಟಗಾರರು, ಪೂರೈಕೆದಾರರ ಸಹಿಗಳನ್ನು ಹೊಂದಿರಲಿಲ್ಲ. ಇದು ವಹಿವಾಟಿನ ನೈಜತೆಯನ್ನು ಪ್ರಶ್ನೆ ಮಾಡುತ್ತದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
ಅಲ್ಲದೇ ಎಲ್ಲಾ 20 ಎನ್ಎಂಆರ್ಗಳು 2023ರ ಮಾರ್ಚ್ ರಿಂದ 2023ರ ನವೆಂಬರ್ವರೆಗಿನ ಅವಧಿಗೆ ಕಾರ್ಮಿಕರನ್ನು ತೊಡಗಿಸಿಕೊಂಡಿದೆ. ಆದರೆ 5.99 ಲಕ್ಷ ವೆಚ್ಚದ ಅಗತ್ಯ ಸಾಮಗ್ರಿಗಳನ್ನು (ಇಟ್ಟಿಗೆ, ಸಿಮೆಂಟ್, ಮರಳು, ಉಕ್ಕು ಮತ್ತು ಸುಣ್ಣದ ಕಲ್ಲು) 2024ರ ಫೆ.1ರ ಬೆಲೆಪಟ್ಟಿಗಳ ಮೂಲಕ ಖರೀದಿಸಿತ್ತು. ಕಾಮಗಾರಿಯು ಪೂರ್ಣಗೊಂಡ ನಂತರ ಈ ಸಾಮಗ್ರಿಗಳನ್ನು ಖರೀದಿಸಿರುವುದನ್ನು ವಿವರಿಸಲಾಗದು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಮತ್ತು ಕೈಗೊಂಡಿರುವ ಕಾಮಗಾರಿಯ ಸತ್ಯಾಸತ್ಯತೆ ಬಗ್ಗೆ ಅನುಮಾನವನ್ನು ಹುಟ್ಟು ಹಾಕುತ್ತದೆ ಎಂದು ಹೇಳಿದೆ.
ಯಾರ ಕೈಚಳಕ?
ಭುವನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾದ ಜಿಯೋ ಟ್ಯಾಟ್ ಮಾಡಿದ ಛಾಯಾಚಿತ್ರಗಳನ್ನೂ ಲೆಕ್ಕ ಪರಿಶೋಧಕರು ಭೌತಿಕವಾಗಿ ಪರಿಶೀಲಿಸಿದ್ದಾರೆ. ಇದರ ಪ್ರಕಾರ ಯಾವುದೇ ರಚನೆ, ಶೆಡ್, ಕಟ್ಟಡವೇ ಇರಲಿಲ್ಲ. ಆದರೆ ಬೇರೆ ಭಾಗದಲ್ಲಿರುವ ಮತ್ತೊಂದು ತ್ಯಾಜ್ಯ ನಿರ್ವಹಣಾ ಶೆಡ್ ಛಾಯಾಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು. ಈ ಕಾಮಗಾರಿಗೆ ಅಕ್ರಮವಾಗಿ ಪಾವತಿಸಲಾಗಿತ್ತು. ಎನ್ಎಂಆರ್ಗಳು, ಸಾಮಗ್ರಿ ಬಿಲ್ಗಳು, ಛಾಯಾಚಿತ್ರಗಳು ಮತ್ತಿತರೆ ಕಡ್ಡಾಯ ದಾಖಲೆಗಳನ್ನು ಕೈಚಳಕದಿಂದ ನಿರ್ವಹಿಸಲಾಗಿತ್ತು. ಮತ್ತು ಸರ್ಕಾರಿ ಹಣದ ಸಂಭವನೀಯ ದುರುಪಯೋಗವಾಗಿತ್ತು ಎಂದು ಸಿಎಜಿ ಪರಿಶೀಲನೆ ವೇಳೆ ತಿಳಿದು ಬಂದಿದೆ.
ಅಪೂರ್ಣವಾಗಿದ್ದರೂ ಹಣ ಪಾವತಿ
ಅಳಂದದ ಕಮಲಾನಗರ ಗ್ರಾಮ ಪಂಚಾಯ್ತಿಯಲ್ಲಿ ಎಂಜಿಏನ್ಆರ್ಇಜಿಎಸ್ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಶೆಡ್ ನಿರ್ಮಾಣಕ್ಕೆ 19.45 ಲಕ್ಷ ಅಂದಾಜಿಸಿತ್ತು. ಈ ಕಾಮಗಾರಿಯನ್ನು 2022ರ ಜನವರಿ 19ರಂದು ಪ್ರಾರಂಭಿಸಿತ್ತು. ಮತ್ತು 2023ರ ಮಾರ್ಚ್ 24ರಂದು 17.09 ಲಕ್ಷದ ವೆಚ್ಚದಲ್ಲಿ ಪೂರ್ಣಗೊಳಿಸಿತ್ತು. ಈ ಪೈಕಿ 15.45 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಟೆಂಡರ್ ಇಲ್ಲದೆಯೇ ಖರೀದಿಸಲಾಗಿತ್ತು. ಮಾಪನ ಪುಸ್ತಕವನ್ನು ದಾಖಲೆಯಲ್ಲಿ ಇರಿಸಿರಲಿಲ್ಲ. ಹೀಗಾಗಿ ಪಾವತಿ ಮಾಡಿದ್ದರ ನಿಖರತೆಯನ್ನು ಕಂಡು ಹಿಡಿಯಲು ಸಿಎಜಿ ಕೈಯಲ್ಲಿಯೂ ಆಗಿಲ್ಲ. ಯೋಜನೆ ಪೂರ್ನಗೊಳಿಸುವಿಕೆ ವರದಿ ಮತ್ತು ಮೂರನೇ ಹಂತದ ಜಿಯೋ ಟ್ಯಾಗ್ ಮಾಡಿದ ಛಾಯಾಚಿತ್ರ ಮತ್ತು ಗುಣಮಟ್ಟ ನಿಯಂತ್ರಣ ವರದಿಗಳು ಸಹ ದಾಖಲೆಯಲ್ಲಿ ಇರಲಿಲ್ಲ. 1.64ಲಕ್ಷ ವೇತನ ವೆಚ್ಚ ಮತ್ತು 15.45 ಲಕ್ಷ ಸಾಮಗ್ರಿ ವೆಚ್ಚ ಸೇರಿದಂತೆ 17.09 ಲಕ್ಷ ವೆಚ್ಚದ ನಂತರ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಚೆಕ್ ಡ್ಯಾಂ ನಿರ್ಮಾಣ- ಮೋಸದ ಪಾವತಿ
ಯಲಬುರ್ಗಾ ತಾಲೂಕಿನ ತಲಕೇರಿ ಗ್ರಾಮ ಪಂಚಾಯ್ತಿಯಲ್ಲಿ 10 ಲಕ್ಷ ರು ಅಂದಾಜು ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿಯೂ ಮೋಸದಿಂದ ಪಾವತಿಸಲು ದಾಖಲೆಗಳನ್ನೇ ತಿದ್ದಲಾಗಿತ್ತು. ಸಣ್ಣ ಕಾಮಗಾರಿಗಳಾಗಿ ವಿಂಗಡಿಸಬಾರದು ಎಂದು ನಿಯಮದಲ್ಲಿದ್ದರೂ ಸಹ 8 ಕಮಾನುಗಳನ್ನು ಹೊಂದಿರುವ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಯನ್ನು ಎರಡು ಕಾಮಗಾರಿಗಳನ್ನಾಗಿ ವಿಂಗಡಿಸಲಾಗಿತ್ತು. ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿಯನ್ನು ತಪ್ಪಿಸಲು ಅಂದಾಜು ವೆಚ್ಚವನ್ನು ತಲಾ 10 ಲಕ್ಷಕ್ಕೆ ವೆಚ್ಚಕ್ಕೆ ಸೀಮಿತಗೊಳಿಸಲಾಗಿತ್ತು. ಈ ಎರಡೂ ಕಾಮಗಾರಿಗಳ ಕಡತಗಳಲ್ಲಿನ ಮಸ್ಟರ್ ರೋಲ್ಗಳನ್ನು ಎನ್ಇಆರ್ಇಜಿ ಸಾಫ್ಟ್ ಮೂಲಕ ಸೃಜಿಸಿರಲಿಲ್ಲ. ಹೀಗಾಗಿ ಅವುಗಳ ಸತ್ಯಾಸತ್ಯತೆಯೂ ಸಹ ಅನುಮಾನಸ್ಪದವಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಸಲ್ಲಿಕೆಯಾಗದ ಬೆಲೆಪಟ್ಟಿ
ಈ ಎರಡೂ ಕಾಮಗಾರಿಗಳನ್ನು ನಿರ್ವಹಿಸಿದ್ದ ಸಾಮಗ್ರಿ ಪೂರೈಕೆಗಾಗಿ ಅಮರೇಶ್ವರ ಎಂಟರ್ ಪ್ರೈಸೆಸ್ ಯಾವುದೇ ಬೆಲೆ ಪಟ್ಟಿಯನ್ನು ಸಲ್ಲಿಸಿರಲಿಲ್ಲ. ಆದರೆ 10.25 ಲಕ್ಷ ರುಪಾಯಿಗಳನ್ನು ಅಮರೇಶ್ವರ ಎಂಟರ್ ಪ್ರೈಸೆಸ್ಗೆ ಪಾವತಿಸಲಾಗಿತ್ತು. ಅಕ್ರಮ ಪಾವತಿಗೆ ಅನುಕೂಲವಾಗುವಂತೆ ಹೊಂದಾಣಿಕೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಿಸಿದೆ. ಹಾಗೆಯೇ ಈ ಎರಡೂ ಕಾಮಗಾರಿಗಳ ಮಸ್ಟರ್ ರೋಲ್ಗಳ ಪ್ರಕಾರ 2019ರ ಸೆ.7ರಿಂದ 2019ರ ಅಕ್ಟೋಬರ್ 2ರ ಅವಧಿಯಲ್ಲಿ 960 ಮಾನವ ದಿನಗಳನ್ನು ಒದಗಿಸುವ ಮೂಲಕ ದೈಹಿಕ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಮತ್ತು ಸಾಮಗ್ರಿ ಖರೀದಿಗಾಗಿ 12.03 ಲಕ್ಷವನ್ನು ಪಾವತಿಸಲಾಗಿತ್ತು.
ಇದಷ್ಟೇ ಅಲ್ಲ ಕಾಮಗಾರಿಯ ಸತ್ಯಾಸತ್ಯತೆ ಕಂಡುಹಿಡಿಯಲು ಸಿಎಜಿಯು ಗೂಗಲ್ ಅರ್ಥ್ ಮತ್ತು ಐತಿಹಾಸಿಕ ಚಿತ್ರಣವನ್ನು ಬಳಸಿಕೊಂಡು ವಿವರಗಳನ್ನು ಪರಿಶೀಲಿಸಿತ್ತು. ಇದರ ಪ್ರಕಾರ 2020ರ ಜನವರಿಯೊಳಗೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಚೆಕ್ ಡ್ಯಾಂ ಕಾಮಗಾರಿ ಲಭ್ಯವಿರಲಿಲ್ಲ ಎಂಬುದನ್ನು ಸಿಎಜಿಯು ಕಂಡು ಹಿಡಿದಿರುವುದು ಗೊತ್ತಾಗಿದೆ.

‘ಹೀಗೆ ಯಲಬುರ್ಗಾದ ಪಿಆರ್ಇಡಿ ಎಂಜಿಎನ್ಆರ್ಇಜಿಎಸ್ ಅಡಿಯಲ್ಲಿ 14.42 ಲಕ್ಷಗಳ ಅಕ್ರಮ ಪಾವತಿಯನ್ನು ಕ್ಲೈಮ್ ಮಾಡಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿತ್ತು. ಅಪ್ಲೋಡ್ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಯಿಂದ ವಿವರಣೆ ಪಡೆಯಲಾಗುವುದು ಎಂದು ರಾಜ್ಯ ಸರ್ಕಾರವು ಸಿಎಜಿಗೆ ತಿಳಿಸಿತ್ತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.







