ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ ಸೇವೆ (ಐಎಎಸ್, ಐಪಿಎಸ್, ಐಎಫ್‌ಎಸ್) ಅಧಿಕಾರಿಗಳ ಕುಟುಂಬ ಸದಸ್ಯರು ನಡೆಸುತ್ತಿರುವ ಉದ್ಯಮ ಮತ್ತು ಹಣಕಾಸಿನ ಚಟುವಟಿಕೆಗಳ ವಿವರಗಳನ್ನು ಒದಗಿಸಬಹುದೇ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿದೆ.
ವಿಧಾನಸಭೆ ಸದಸ್ಯ ಹಾಗೂ ಜಾತ್ಯತೀತ ಜನತಾದಳ ಶಾಸಕಾಂಗ ಸಭೆಯ ನಾಯಕ ಸಿ ಬಿ ಸುರೇಶ್‌ಬಾಬು ಅವರು ನಿಯಮ 351ರ ಅಡಿ ಕೇಳಿದ್ದ ಸೂಚನೆಗೆ ಸಿದ್ದರಾಮಯ್ಯ ಅವರು ನೀಡಲಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ವೃಂದದ ಅಧಿಕಾರಿಗಳು ಕೇಂದ್ರ ಸರ್ಕಾರದ ಡಿಒಪಿಟಿಗೆ ಕೇವಲ ಸ್ಥಿರಾಸ್ತಿ ವಿವರಗಳನ್ನು ಮಾತ್ರ ಸಲ್ಲಿಸುತ್ತಿದ್ದಾರೆ. ಆದರೆ ಚರಾಸ್ತಿಗಳ ವಿವರಗಳನ್ನು ಸಲ್ಲಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವು ನೀಡಿದ್ದ ಸೂಚನೆಗಳನ್ನು ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳ ಕುಟುಂಬ ಸದಸ್ಯರು ಹಲವು ಉದ್ಯಮಗಳು ಮತ್ತು ಹಣಕಾಸಿನ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಬೆಳವಣಿಗೆ ನಡುವೆಯೇ ಜಾತ್ಯತೀತ ಜನತಾದಳ ಶಾಸಕಾಂಗ ಸಭೆ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಅವರು ನಿಯಮ 351ರ ಅಡಿ ಸೂಚನೆಯಡಿ ಕೇಳಿರುವ ಪ್ರಶ್ನೆಯು ಮುನ್ನೆಲೆಗೆ ಬಂದಿದೆ. ಇದಕ್ಕೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ವೈಯಕ್ತಿಕ ಮಾಹಿತಿಗಳನ್ನು ಸದನಕ್ಕೆ ಸಲ್ಲಿಸುವ ಬಗ್ಗೆ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯ ಕೋರಿದೆ ಎಂದು ಉತ್ತರಿಸಿದ್ದಾರೆ.
ನಿಯಮ 351ರ ಅಡಿ ಸೂಚನೆಯಲ್ಲೇನಿದೆ?
ಅಖಿಲ ಭಾರತ ಸೇವೆಗೆ ಸೇರಿದ ಕುಟುಂಬ ಸದಸ್ಯರು ಯಾವುದೇ ಉದ್ಯಮ ಮತ್ತು ಹಣಕಾಸಿನ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಅಂತಹ ವ್ಯವಹಾರಗಳನ್ನು ಅಧಿಕಾರಿಯವರು ಸರ್ಕಾರಕ್ಕೆ ವರದಿ ಮಾಡಬೇಕು. ಈ ಸಂಬಂಧ ಅಖಿಲ ಭಾರತ ಸೇವೆಗಳು (ನಡತೆ ನಿಯಮ 1968ರ ನಿಯಮ 13(3)ರಲ್ಲಿ ತಿಳಿಸಿದೆ. ಅಲ್ಲದೇ ಸರ್ಕಾರಕ್ಕೆ ಸಲ್ಲಿಸುವ ಇಂತಹ ವರದಿಯಲ್ಲಿ ಉದ್ಯಮ, ಹಣಕಾಸಿನ ಚಟುವಟಿಕೆಗಳ ಪ್ರಾಥಮಿಕ ವಿವರಗಳನ್ನೂ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿರುವುದು ತಿಳಿದು ಬಂದಿದೆ.
ಉದ್ಯಮದ ಸ್ವರೂಪ, ಬಂಡವಾಳ, ಬಂಡವಾಳದ ಹಣಕಾಸಿನ ಮೂಲಕ, ಉದ್ಯಮ ಸ್ಥಳ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕು. ಆದರೆ ರಾಜ್ಯದಲ್ಲಿ 6 ಮಂದಿ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು ನಡೆಸುತ್ತಿರುವ ಉದ್ಯಮದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ 6 ಅಧಿಕಾರಿಗಳು ಯಾರು, ಕರ್ನಾಟಕ ರಾಜ್ಯದವರೇ ಅಥವಾ ಹೊರರಾಜ್ಯದವರೇ, ಅಧಿಕಾರಿಗಳ ಹೆಸರು, ವಿವರ ಹಾಗೂ ರಾಜ್ಯದಲ್ಲಿ ಯಾವ ಉದ್ಯಮ ನಡೆಸಲುಲ ಅನುಮತಿ ನೀಡಲಾಗಿದೆ. ಈ ಬಗ್ಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ ಮಾಹಿತಿ ಇಲ್ಲವೇ ಎಂದು ನಿಯಮ 351ರ ಅಡಿಯ ಸೂಚನೆಯಲ್ಲಿ ಕೇಳಿದ್ದರು.

ಅಲ್ಲದೇ ಇಲಾಖೆಯಲ್ಲಿ ಈ ಮಾಹಿತಿ ಲಭ್ಯವಿದ್ದಲ್ಲಿ ಸ್ಪಷ್ಟವಾದ ಮಾಹಿತಿ ನೀಡದಿರಲು ಕಾರಣಗಳೇನು, ಈ ಸಂಬಂಧ ಮುಖ್ಯಮಂತ್ರಿಗಳು, ಇಲಾಖೆಯ ಮುಖ್ಯಸ್ಥರು ಮಾಹಿತಿಗಳನ್ನು ನೀಡದಂತೆ ಸೂಚನೆ ಏನಾದರೂ ನೀಡಲಾಗಿದೆಯೇ, ನೀಡಿದಲ್ಲಿ ಕಡತದಲ್ಲಿ ನೀಡಲಾಗಿದೆಯೇ, ಪತ್ರದ ಮೂಲಕ ನೀಡಲಾಗಿದೆಯೇ ಎಂದು ಸುರೇಶ್ ಬಾಬು ನಿಯಮ 351ರ ಅಡಿಯ ಸೂಚನೆಯಲ್ಲಿ ಪ್ರಶ್ನಿಸಿದ್ದರು.
ಅಲ್ಲದೇ ಸರ್ಕಾರಿ ಅಧಿಕಾರಿಗಳು ಪತ್ರಿಕಾ ಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿರುವ ವಿಷಯದ ಬಗ್ಗೆಯೂ ಸುರೇಶ್ ಬಾಬು ಇದೇ ಸೂಚನೆಯಲ್ಲಿ ಪ್ರಸ್ತಾವಿಸಿದ್ದರು. ಇಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿರುವ ಸುರೇಶ್ ಬಾಬು ಅವರು ಇದಕ್ಕೆ ಕಾರಣಗಳೇನು ಎಂದು ಕೇಳಿದ್ದಾರೆ.
ಇಂತಹ ಪ್ರಕರಣಗಳ ಮೇಲೆ ಏನಾದರೂ ಪ್ರಭಾವ ಬೀರಲಾಗಿದೆಯೇ, ಹಾಗಿಲ್ಲದಿದ್ದಲ್ಲಿ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರಲು ಕಾರಣಗಳೇನು ಎಂದು ನಿಯಮ 351ರಡಿ ಸೂಚನೆಯಲ್ಲಿ ಸುರೇಶ್ ಬಾಬು ಅವರು ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಮುಖ್ಯಮಂತ್ರಿ ನೀಡಿರುವ ಉತ್ರರದಲ್ಲೇನಿದೆ?
ವಿಷಯದಲ್ಲಿ ಪ್ರಸ್ತಾವಿಸಿರುವಂತೆ ಈವರೆಗೂ 6 ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು ನಡೆಸುತ್ತಿರುವ ಉದ್ಯಮದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಅಧಿಕಾರಿಗಳ ವೈಯಕ್ತಿಕ ಮಾಹಿತಿಗಳನ್ನು ಸದನಕ್ಕೆ ಸಲ್ಲಿಸುವ ಬಗ್ಗೆ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು ನಡೆಸುವ ಹಣಕಾಸಿನ ವ್ಯವಹಾರಗಳು ಮತ್ತು ಉದ್ಯಮಗಳ ವಿವರಗಳನ್ನು ಒದಗಿಸಬಹುದೇ ಎಂಬುದರ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
ಅದೇ ರೀತಿ ಅಧಿಕಾರಿಗಳ ವೈಯಕ್ತಿಕ ಮಾಹಿತಿಗಳನ್ನು ಸದನಕ್ಕೆ ಸಲ್ಲಿಸುವ ಬಗ್ಗೆ ನಿಯಮಾವಳಿಗಳ ಅನ್ವಯ ಪರಿಶೀಲಿಸಿ ಐಪಿಎಸ್ ಅಧಿಕಾರಿಗಳ ಕುಟುಂಬ ಸದಸ್ಯರು ನಡೆಸುವ ಹಣಕಾಸಿನ ವ್ಯವಹಾರಗಳು ಮತ್ತು ಉದ್ಯಮದ ಮಾಹಿತಿಯನ್ನು ಸದನಕ್ಕೆ ಒದಗಿಸಬೇಕಾಗುತ್ತದೆಯೇ ಎಂಬ ಬಗ್ಗೆ ಕರ್ನಾಟಕ ವಿದಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರ ಅಭಿಪ್ರಾಯ ಕೋರಿದೆ. ಸದ್ಯ ಈ ಅಂಶವು ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ರರಿಸಿದ್ದಾರೆ.

ಅಲ್ಲದೇ ಎಡಿಜಿಪಿ ಎಂ ಚಂದ್ರಶೇಖರ್ ಅವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2024ರ ಸೆಪ್ಟಂಬರ್ ರಲ್ಲಿ ಮಾಧ್ಯಮಗಳಿಗೆ ಅನಪೇಕ್ಷಿತ ಹೇಳಿಕೆಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ದೂರುಗಳು ಸ್ವೀಕೃತವಾಗಿವೆ. ಈ ದೂರುಗಳ ಬಗ್ಗೆ ಒಳಾಡಳಿತ ಇಲಾಖೆಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ವಿವರಿಸಿರುವುದು ತಿಳಿದು ಬಂದಿದೆ.
ರಾಜ್ಯದ ಬಹುತೇಕ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ಡಿಒಪಿಟಿಗೆ ಕೇವಲ ಸ್ಥಿರಾಸ್ತಿ ವಿವರಗಳನ್ನು ಸಲ್ಲಿಸುತ್ತಿದ್ದಾರೆ. ಚರಾಸ್ತಿಗಳು ಮತ್ತು ಬ್ಯಾಂಕ್‌ಗಳಲ್ಲಿ, ಹಣಕಾಸಿ ಸಂಸ್ಥೆಗಳಲ್ಲಿ ಹೂಡಿರುವ ಹಣಕಾಸು, ಷೇರುಗಳು, ಡಿಬೆಂಚರುಗಳು ಮತ್ತು ಪೀಠೋಪಕರಣ, ಷೇರುಗಳ ಲಾಭಾಂಶಗಳು, ಷೇರು ಮತ್ತು ಉದ್ಯಮಗಳಲ್ಲಿ ಹೂಡುತ್ತಿರುವ ಹಣಕಾಸಿನ ವಿವರ ಮತ್ತು ಅದರ ಮೂಲಗಳನ್ನು ಒದಗಿಸುತ್ತಿಲ್ಲ.
ಉತ್ತರ ಪ್ರದೇಶ ಸರ್ಕಾರ ಮಾತ್ರ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಕರ್ನಾಟಕ ಸರ್ಕಾರವು ಇದುವರೆಗೂ ಇಂತಹ ಕಟ್ಟುನಿಟ್ಟಿನ ಸೂಚನೆ ನೀಡಿಲ್ಲ. ಹೀಗಾಗಿ ಯಾವೊಬ್ಬ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಚರಾಸ್ತಿ ಸೇರಿದಂತೆ ಇನ್ನಿತರೆ ವಿವರಗಳನ್ನು ಒದಗಿಸಿಲ್ಲ. ಆದರೆ ಕೆಎಎಸ್ ಅಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಈ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದಾರೆ. ಆದರೆ ಈ ಯಾವ ವಿವರಗಳೂ ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ. ಮಾಹಿತಿ ಹಕ್ಕಿನ ಅಡಿಯಲ್ಲಿ ಈ ಸಂಬಂಧ ಕೇಳುವ ಅರ್ಜಿಗಳನ್ನೂ ತಿರಸ್ಕರಿಸಲಾಗುತ್ತಿದೆ. ಇದೊಂದು ವೈಯಕ್ತಿಕ ಮಾಹಿತಿ ಎಂದು ಮಾಹಿತಿ ಹಕ್ಕು ಅಧಿಕಾರಿಗಳು ಹಿಂಬರಹ ನೀಡುತ್ತಿರುವುದನ್ನು ಸ್ಮರಿಸಬಹುದು.







