ಪರೀಕ್ಷೆ, ಮೌಲ್ಯಮಾಪನಕ್ಕೆ ನಿಯೋಜನೆ; 82,000 ಶಿಕ್ಷಕರು, ಉಪನ್ಯಾಸಕರು ಗಣತಿಯಿಂದ ಹೊರಗುಳಿಯಲಿದ್ದಾರೆಯೇ?

ಬೆಂಗಳೂರು; ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರು, ಉಪನ್ಯಾಸಕರನ್ನು ಜನಗಣತಿ ನಿಯೋಜಿಸಬಾರದು, ಗಣತಿದಾರರನ್ನಾಗಿ ನೇಮಕಕ್ಕೆ ವಿನಾಯಿತಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಮುಖ್ಯ ಕಾರ್ಯದರ್ಶಿಗಳ ಮೊರೆ ಹೊಕ್ಕಿದೆ.

 

ಕೇಂದ್ರ ಸರ್ಕಾರವು ಇದೇ 2026ರ ಏಪ್ರಿಲ್‌ 15ರಿಂದ ಮೇ 15ರವರೆಗೆ ಜನಗಣತಿ ನಡೆಸಲಿದೆ. ಈ ಕಾರ್ಯಕ್ಕೆ ಜನಗಣತಿ ನಿಯಮಗಳು–1990ರ ಪ್ರಕಾರ ಶಿಕ್ಷಕರು, ಗುಮಾಸ್ತರು ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯನ್ನು ಗಣತಿದಾರರಾಗಿ ನೇಮಿಸಬಹುದು. ಆದರೆ ರಾಜ್ಯದಲ್ಲಿ ಇದೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಚಟುವಟಿಕೆಗಳೂ ಸಹ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ನಡೆಯಲಿದೆ.

 

ಹೀಗಾಗಿ ಶಿಕ್ಷಕರು ಮತ್ತು ಉಪನ್ಯಾಸಕರ ನಿಯೋಜನೆಗೆ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವ ಸಲ್ಲಿಸಿದೆ.
ಈ ಪ್ರಸ್ತಾವವನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೂ ಸಹ ಅನುಮೋದಿಸಿದ್ದಾರೆ ಮತ್ತು ಈ ಸಂಬಂಧ ಅಧಿಸೂಚನೆ ಹೊರಡಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪರೀಕ್ಷಾ ಚಟುವಟಿಕೆಗೆ ನಿಯೋಜನೆಯಾಗಿರುವರನ್ನು ಗಣತಿ ಕಾರ್ಯದಿಂದ ವಿನಾಯಿತಿ ನೀಡಲು ಇನ್ನೂ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಒಂದೊಮ್ಮೆ ಅಧಿಸೂಚನೆ ಹೊರಬಿದ್ದಲ್ಲಿ ಅಂದಾಜು 82,000 ಶಿಕ್ಷಕರು ಗಣತಿ ಚಟುವಟಿಕೆಯಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಗಣತಿ ಕಾರ್ಯಕ್ಕೆ ಅಡಚಣೆಯಾಗುವ ಸಾಧ್ಯತೆಗಳು ಹೆಚ್ಚಿವೆ.

 

ದ್ವಿತೀಯ ಪಿಯುಸಿ ಪರೀಕ್ಷೆಯು 2026ರ ಏಪ್ರಿಲ್‌ 25ರಿಂದ 2026ರ ಮೇ 9ರವರೆಗೆ ನಡೆಯಲಿದೆ. ಈಗಾಗಲೇ ಅಂತಿಮ ವೇಳಾಪಟಿಯನ್ನೂ ಪ್ರಕಟಿಸಿದೆ. ಈ ಪರೀಕ್ಷೆ ನಂತರ ಮೌಲ್ಯಮಾಪನ ಕಾರ್ಯಗಳು ಮತ್ತು ಫಲಿತಾಂಶ ಪ್ರಕಟಿಸುವ ಪೂರ್ವ ಸಿದ್ಧತೆಗಳೂ ಸಹ 2026ರ ಮೇ 11ರಿಂದ 2026ರ ಮೇ 25ರವರೆಗೆ ನಡೆಸಲು ಇಲಾಖೆಯು ಉದ್ದೇಶಿಸಿದೆ.

 

 

ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂದಾಜು 1,60,000 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರಾಜ್ಯದಾದ್ಯಂತ ಅಂದಾಜು 350 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಅಂದಾಜು 9,000 ಉಪನ್ಯಾಸಕರು, ಪ್ರಾಂಶುಪಾಲರು, ಅಧಿಕಾರಿಗಳು, ಸಿಬ್ಬಂದಿ ವರ್ಗದ ಅಗತ್ಯವಿದೆ.

 

 

ಹಾಗೆಯೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು 30 ಮೌಲ್ಯಮಾಪನ ಕೇಂದ್ರಗಳಲ್ಲಿ 12,000 ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ.

 

 

 

ಅದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಸಹ 2023ರ ಮಾರ್ಚ್‌ 18ರಿಂದ ಏಪ್ರಿಲ್‌ 2ರವರೆಗೆ ನಡೆಯಲಿದೆ. ಈ ಪರೀಕ್ಷೆಗೂ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.

 

 

ಈ ಪರೀಕ್ಷೆಗೆ ಅಂದಾಜು 9,00,000 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವೂ ಏಪ್ರಿಲ್‌ 6ರಿಂದ 18ರವರೆಗೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ 300 ಮೌಲ್ಯಮಾಪನ ಕೇಂದ್ರಗಳಲ್ಲಿ ಈ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಅಂದಾಜು 70,000 ಶಿಕ್ಷಕರು ಮತ್ತು ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗುತ್ತದೆ.

 

 

ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳನ್ನು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲಮಿತಿಯಲ್ಲಿ ಕೈಗೊಳ್ಳಬೇಕಿದೆ. ಹೀಗಾಗಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ತೊಡಗುವುದರಿಂದ ಈ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರು, ಉಪನ್ಯಾಸಕರನ್ನು ಗಣತಿ ಕಾರ್ಯದಿಂದ ಕೈ ಬಿಡಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯ ಜಿಲ್ಲಾ ಉಪ ನಿರ್ದೇಶಕರು ಇಲಾಖೆಯನ್ನು ಕೋರಿದ್ದರು.

 

ಶಿಕ್ಷಕರು ಮತ್ತು ಉಪನ್ಯಾಸಕರ ನಿಯೋಜನೆಗೆ ವಿನಾಯಿತಿ ನೀಡಿದಲ್ಲಿ ಜನಗಣತಿ ಕಾರ್ಯಚಟುವಟಿಕೆ ಮೇಲೆ ಬೀರುವ ಪರಿಣಾಮಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮುನೀಶ್‌ ಮೌದ್ಗಿಲ್ ಅವರು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಮೇಲ್ವಿಚಾರಕರು ಸಾಮಾನ್ಯವಾಗಿ ಗಣತಿದಾರರಿಗಿಂತ ಹಿರಿಯ ಹುದ್ದೆಯವರಾಗಿರಬೇಕು. ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ವಿಭಾಗಗಳಲ್ಲಿ ವಿಭಾಗೀಯ ಆಯುಕ್ತರು ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾರೆ. ಮಹಾನಗರ ಪ್ರದೇಶಗಳಲ್ಲಿ ಪುರಸಭೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿ ಅಥವಾ ಹೆಚ್ಚುವರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

 

 

ಮುಂಬರುವ ಜನಗಣತಿ ಕಾರ್ಯಕ್ಕಾಗಿ ಮನೆಪಟ್ಟಿ ಹಾಗೂ ಮನೆಗಣತಿ ಮತ್ತು ಜನಗಣತಿ ಹಂತಗಳ ವೇಳಾಪಟ್ಟಿಯನ್ನು ಈಗಾಗಲೇ ಗೃಹ ಸಚಿವಾಲಯವು ಬಿಡುಗಡೆ ಮಾಡಿದೆ. 2021ರ ಜನಗಣತಿಗಾಗಿ ಸಿದ್ಧಪಡಿಸಿದ್ದ ಎಲ್ಲ 33 ಪ್ರಶ್ನೆಗಳ ಪ್ರಶ್ನಾವಳಿಯನ್ನೇ ಈ ಬಾರಿ ಕೂಡ ಬಳಸಿಕೊಳ್ಳಲು ಉದ್ದೇಶಿಸಿದೆ.

 

ಮನೆಭೇಟಿ ಹಂತದಲ್ಲಿ ಮಾಹಿತಿ ಸಂಗ್ರಹಣೆ ನಡೆಯಲಿದೆ. ಈ ಹಂತವು ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಬೇಕಿತ್ತು. ಆದರೀಗ ಮತ್ತು ಪರೀಕ್ಷೆ, ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆಗೆ ವಿನಾಯಿತಿ ನೀಡಿದಲ್ಲಿ ಈ ಕಾರ್ಯವು ವಿಳಂಬವಾಗಲಿದೆ.

 

ಗಣತಿ ನಡೆಸುವ ಸಂದರ್ಭದಲ್ಲಿ ಕಟ್ಟಡ ಸಂಖ್ಯೆ, ಗಣತಿ ಮಾಡಲಾಗುವ ಮನೆಯ ಮಹಡಿ, ಗೋಡೆ ಮತ್ತು ಛಾವಣಿಗೆ ಬಳಸಿರುವ ಪ್ರಮುಖ ವಸ್ತುಗಳು, ಮನೆಯ ಬಳಕೆ ಹಾಗೂ ಅದರ ಸ್ಥಿತಿ, ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಅದೇ ರೀತಿ, ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ, ಹೆಸರು, ಕುಟುಂಬದ ಮುಖ್ಯಸ್ಥರ ಲಿಂಗ, ಎಸ್ಸಿ/ಎಸ್ಟಿ ಅಥವಾ ಇತರ ವರ್ಗಕ್ಕೆ ಸೇರಿದ ಮಾಹಿತಿಗಳು, ಮನೆಯ ಮಾಲೀಕತ್ವದ ಸ್ಥಿತಿ, ಮನೆಯಲ್ಲಿ ಇರುವ ವಾಸದ ಕೊಠಡಿಗಳ ಸಂಖ್ಯೆ ಹಾಗೂ ಮನೆಯಲ್ಲಿ ವಾಸಿಸುವ ವಿವಾಹಿತ ಜೋಡಿಗಳ ಸಂಖ್ಯೆಯ ಮಾಹಿತಿಯನ್ನೂ ಸಂಗ್ರಹಿಸಲಿದೆ.

 

 

ಗಣತಿ ಅಧಿಕಾರಿಗೆ ಮನೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕಾಗಿದ್ದು, ಸೆನ್ಸಸ್ ಆ್ಯಪ್ ಅಥವಾ ಗಣತಿದಾರರ ಮನೆಭೇಟಿಯ ಸಂದರ್ಭದಲ್ಲಿ ಕುಡಿಯುವ ನೀರಿನ ಮುಖ್ಯ ಮೂಲ, ವಿದ್ಯುತ್ ವ್ಯವಸ್ಥೆ, ಶೌಚಾಲಯದ ಲಭ್ಯತೆ ಮತ್ತು ಅದರ ವಿಧ, ತ್ಯಾಜ್ಯ ನೀರಿನ ಹೊರಹೋಗುವ ವ್ಯವಸ್ಥೆ ಹಾಗೂ ಸ್ನಾನ ಸೌಲಭ್ಯಗಳ ವಿವರಗಳನ್ನು ದಾಖಲಿಸಲಿದೆ.

 

ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಮನೆಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದ್ದು, ಜನಗಣತಿ ಹಂತವು 2027ರ ಫೆಬ್ರುವರಿ 9ರಿಂದ 28ರವರೆಗೆ ನಡೆಯಲಿದೆ. 2027ರ ಮಾರ್ಚ್ 1ನ್ನು ಉಲ್ಲೇಖ ದಿನಾಂಕವಾಗಿ ಪರಿಗಣಿಸಲಾಗುತ್ತದೆ.2027ರ ಜನಗಣತಿಗೆ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ, ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿಯನ್ನು ಜನವರಿ 15, 2026ರೊಳಗೆ ಪೂರ್ಣಗೊಳಿಸಬೇಕೆಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ರಿಜಿಸ್ಟ್ರಾರ್‌ ಜನರಲ್‌ (RGI) ನೂತನ ಸುತ್ತೋಲೆಯ ಮೂಲಕ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ.

 

ಸುತ್ತೋಲೆಯ ಪ್ರಕಾರ, ದೇಶವ್ಯಾಪಿ ನಡೆಯಲಿರುವ ದತ್ತಾಂಶ ಸಂಗ್ರಹಣೆಯ ಪ್ರಮುಖ ಹೊಣೆ ಗಣತಿದಾರರು ಮತ್ತು ಮೇಲ್ವಿಚಾರಕರ ಮೇಲಾಗಿರುತ್ತದೆ. ಪ್ರತಿ ಗಣತಿದಾರರಿಗೆ 700–800 ಜನಸಂಖ್ಯೆಯ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿ ಆರು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕನನ್ನು ನಿಯೋಜಿಸುವಂತೆ ಸೂಚಿಸಿದೆ. . ಜೊತೆಗೆ, ತುರ್ತು ಪರಿಸ್ಥಿತಿಗಳಿಗೆ ಉಪಯೋಗವಾಗುವಂತೆ ಶೇ 10ರಷ್ಟು ಮೀಸಲು ಸಿಬ್ಬಂದಿಯನ್ನು ಇಡಬೇಕೆಂದು ಸೂಚಿಸಲಾಗಿದೆ.

 

ಜನಗಣತಿ ನಿಯಮಗಳು–1990ರ ಪ್ರಕಾರ, ಶಿಕ್ಷಕರು, ಗುಮಾಸ್ತರು ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯನ್ನು ಗಣತಿದಾರರಾಗಿ ನೇಮಿಸಬಹುದು. ಮೇಲ್ವಿಚಾರಕರು ಸಾಮಾನ್ಯವಾಗಿ ಗಣತಿದಾರರಿಗಿಂತ ಹಿರಿಯ ಹುದ್ದೆಯವರಾಗಿರಬೇಕು. ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ವಿಭಾಗಗಳಲ್ಲಿ ವಿಭಾಗೀಯ ಆಯುಕ್ತರು ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾರೆ. ಮಹಾನಗರ ಪ್ರದೇಶಗಳಲ್ಲಿ ಪುರಸಭೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿ ಅಥವಾ ಹೆಚ್ಚುವರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

 

ಜನಗಣತಿಗಾಗಿ ದೇಶಾದ್ಯಂತ ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸುವ ಯೋಜನೆ ರೂಪಿಸಲಾಗಿದೆ. ನೇಮಕಾತಿ, ಬ್ಲಾಕ್ ಹಂಚಿಕೆ, ಮೇಲ್ವಿಚಾರಣಾ ವಲಯಗಳ ನಿಗದಿ ಮತ್ತು ಕ್ಷೇತ್ರ ಕಾರ್ಯದ ನೈಜ ಸಮಯದ ಪ್ರಗತಿಯ ಮೇಲ್ವಿಚಾರಣೆ ನಡೆಸಲು RGI ‘Census Management and Monitoring System (CMMS)’ ಎಂಬ ಡಿಜಿಟಲ್‌ ಪೋರ್ಟಲ್ ಅನ್ನು ನಿರ್ಮಿಸಿದೆ.

 

ಸುತ್ತೋಲೆಯಲ್ಲಿ, 2027ರ ಜನಗಣತಿಯಲ್ಲಿ ಡಿಜಿಟಲ್ ವಿಧಾನಗಳ ಬಳಕೆ ಹೆಚ್ಚಿರುವುದರಿಂದ, ಸಿಬ್ಬಂದಿಗಳ ಗುರುತಿಸುವಿಕೆ ಮತ್ತು ಸಿಎಂಎಂಎಸ್ ಪೋರ್ಟಲ್‌ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮುಂಚಿತವಾಗಿ ಆರಂಭಿಸಿ ಪೂರ್ಣಗೊಳಿಸುವುದು ಅತ್ಯವಶ್ಯಕ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ನೈಜ ದತ್ತಾಂಶ ಸಂಗ್ರಹಣೆಯನ್ನು ನೇಮಕಾತಿಯ ನಂತರ ಮಾಡಬಹುದಾದರೂ, ಗುರುತು ಮತ್ತು ನೋಂದಣಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸಿದೆ.

Your generous support will help us remain independent and work without fear.

Latest News

Related Posts