ಅಂದಾಜುಗಳಲ್ಲಿ ಗಣನೀಯವಾಗಿ ಇಳಿಮುಖ; 2,651.77 ಕೋಟಿ ಕೊರತೆ, ಟ್ರಾಮಾ ಕೇಂದ್ರಗಳಿಗೂ ಅನುದಾನವಿಲ್ಲ

ಬೆಂಗಳೂರು; ವೈದ್ಯಕೀಯ ಶಿಕ್ಷಣ ಇಲಾಖೆಯ ಮೂರು ಲೆಕ್ಕ ಉಪ ಶೀರ್ಷಿಕೆಗಳಲ್ಲಿ ಕಳೆದ 3 ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಅಂದಾಜುಗಳಲ್ಲಿಯೇ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಲ್ಲದೇ 2025-26ರಲ್ಲಿ ಮಂಡಿಸಿದ್ದ ಪ್ರಸ್ತಾವನೆಗೂ ಅನುಮೋದಿತ ಅನುದಾನದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2,651.77 ಕೋಟಿ ರು ಕೊರತೆ ರೂಪದಲ್ಲಿ ಪರಿಣಿಮಿಸಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ವೆಚ್ಚ ಮರು ಪಾವತಿಯಲ್ಲಿಯೂ 6 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಹಾಗೆಯೇ  ಬದಾಮಿ ಮತ್ತು ಕುಳಗೇರಿ ಕ್ರಾಸ್‌ನಲ್ಲ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆಗೆ ಅನುದಾನ ಕೊರತೆ ಕಾಣಿಸಿಕೊಂಡಿದೆ. 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ಹೇಳಿದ್ದರೂ ಸಹ ಶೇ.15ರಷ್ಟು ಸೀಟುಗಳನ್ನು ಎನ್‌ಐಆರ್ ಕೋಟಾದಡಿಯಲ್ಲಿ ಮೀಸಲಿರಿಸುವ ಪ್ರಸ್ತಾವನೆಗೂ ಆರ್ಥಿಕ ಇಲಾಖೆಯು ಇನ್ನೂ ಅನುಮೋದನೆ ನೀಡಿಲ್ಲ.

 

ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ 2026ರ ಜನವರಿ 8ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯು, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಆರ್ಥಿಕ ವರ್ಷ 2025-26ರ ಆಯವ್ಯಯ ಅಂದಾಜುಗಳಲ್ಲಿ ಒದಗಿಸಿರುವ ಅನುದಾನದ ಮಾಹಿತಿಗಳ ಕುರಿತು ಚರ್ಚಿಸಿದೆ. ಅಲ್ಲದೇ ಅನುದಾನದ ಮಾಹಿತಿಗಳನ್ನು ಉಪ ಲೆಕ್ಕ ಶೀರ್ಷಿಕೆವಾರು ಪರಾಮರ್ಶಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

2025-26ರಲ್ಲಿ ಮಂಡಿಸಿದ್ದ ಆಯವ್ಯಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ 6,105.90 ಕೋಟಿ ರುಗಳನ್ನು ಪ್ರಸ್ತಾವಿಸಿತ್ತು. ಆದರೆ ಇದಕ್ಕೆ ಎದುರಾಗಿ ಆಯವ್ಯಯದಲ್ಲಿ 3,559.54 ಕೋಟಿ ರು ಮಾತ್ರ ಅನುಮೋದಿಸಿತ್ತು. ಅಂದರೇ ಸರಾಸರಿ ಶೇಕಡ 58.30ರಷ್ಟು ಮಾತ್ರ ಅನುಮೋದಿತ ಅನುದಾನವಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2,651.77 ಕೋಟಿ ರು ಕೊರೆತೆಯಾಗಿರುವುದು ನಡವಳಿಯಿಂದ ಗೊತ್ತಾಗಿದೆ.

 

 

‘ಈ ಸಕಾರಣಗಳಲ್ಲಿ ಎಲ್ಲಾ ಸಂಸ್ಥೆಗಳಿಂದ ಸ್ವೀಕೃತವಾದ ಅನುದಾನದ ಬೇಡಿಕೆ 853.09 ಕೋಟಿ ರುಪಾಯಿ ಅನುದಾನವು ಸದರಿ ಆರ್ಥಿಕ ವರ್ಷ ಅಂದರೇ 2026ರ ಮಾರ್ಚ್‌ 31ರ ಅಂತ್ಯಕ್ಕೆ ಅವಶ್ಯಕವಾಗಿದೆ,’ ಎಂದು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿರುವುದು ತಿಳಿದು ಬಂದಿದೆ.

 

 

ಆಯವ್ಯಯದಲ್ಲಿ ಪ್ರಸ್ತಾವಿಸಿದ ಮೊತ್ತ ಮತ್ತು ಅನುಮೋದಿತವಾಗಿರುವ ಮೊತ್ತದ ನಡುವೆ ವ್ಯತ್ಯಾಸಗಳಿರುವುದರಿಂದ ಬಹುಮುಖ್ಯವಾಗಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಅರ್ಥಿಕ ವ್ಯತ್ಯಯಗಳು ಉಂಟಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಆರ್ಥಿಕ ವ್ಯತ್ಯಯಗಳು ಉಂಟಾಗದಂತೆ ಸುಗಮ ಕಾರ್ಯನಿರ್ವಹಣೆಗೆ ಇರುವ ಉಪ ಲೆಕ್ಕ ಶೀರ್ಷಿಕೆ 103 ಯಡಿಯಲ್ಲಿನ ಸಹಾಯಾನುದಾನಗಳಲ್ಲಿ ಹೆಚ್ಚಳವಾಗಬೇಕು ಎಂದು ಅಭಿಪ್ರಾಯಿಸಿದೆ.

 

ಉಪ ಲೆಕ್ಕ ಶೀರ್ಷಿಕೆ 103 ಯಡಿಯಲ್ಲಿನ ಸಹಾಯಾನುದಾನಗಳಲ್ಲಿ ಸಾಮಾನ್ಯ ಅಡಿಯಲ್ಲಿ 475.96 ಕೋಟಿ ಮತ್ತು115.-ಗುತ್ತಿಗೆ/ಹೊರಗುತ್ತಿಗೆ ಅಡಿಯಲ್ಲಿ 190.82 ಕೋಟಿ ಸೇರಿ ಒಟ್ಟಾರೆ 666.78 ಕೋಟಿ ರುಪಾಯಿಗಳು ಅವಶ್ಯಕವಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿರುವುದು ಗೊತ್ತಾಗಿದೆ.

 

 

ಅಲ್ಲದೇ ‘ಆರ್ಥಿಕ ವರ್ಷ 2023-24, 2024-25 ಮತ್ತು 2025-26ರ ಆಯವ್ಯಯ ಅಂದಾಜುಗಳಲ್ಲಿ 103 ಮತ್ತು 115ರ ಉಪ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ವರ್ಷದಿಂದ ವರ್ಷದಿಂದ ಗಣನೀಯವಾಗಿ ಇಳಿಮುಖವಾಗುತ್ತಿದೆ,’ ಎಂಬ ಅಂಶವನ್ನು ಸಭೆಯು ಪರಿಶೀಲಿಸಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

2026-27ಕ್ಕೆ 14,422.50 ಕೋಟಿ ಬೇಡಿಕೆ ಪ್ರಸ್ತಾವ

 

2026027ನೇ ಸಾಲಿಗೆ ರಾಜಸ್ವ ವೆಚ್ಚ (2210) ಒಟ್ಟಾರೆ 7,245.58 ಕೋಟಿ ರುಪಾಯಿ ಮತ್ತು ಬಂಡವಾಳ ವೆಚ್ಚ (4210) ಅಡಿಯಲ್ಲಿ 2,306.10 ಕೋಟಿ ರು ಗಳನ್ನು ಪ್ರಸ್ತಾವಿಸಲು ಚರ್ಚಿಸಿದೆ. ಅಲ್ಲದೇ ಆಯವ್ಯಯ ಘೋಷಣೆಗಳಿಗೆ ಒಟ್ಟು ಆಯವ್ಯಯ ಅಂದಾಜು 4,870.52 ಕೋಟಿ ಸೇರಿ ಒಟ್ಟಾರೆ 14,422.20 ಕೋಟಿ ರುಪಾಯಿ ಬೇಡಿಕೆ ಪ್ರಸ್ತಾವನೆಗಳ ಕುರಿತೂ ಚರ್ಚಿಸಿದೆ.

 

6 ಕೋಟಿ ಬಾಕಿ

 

ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ವೆಚ್ಚ ಮರು ಪಾವತಿಯಲ್ಲಿಯೂ 6 ಕೋಟಿ ರು ಬಾಕಿ ಉಳಿಸಿಕೊಂಡಿದೆ. ‘ಪ್ರಸ್ತುತ ಅಂದಾಜು 6 ಕೋಟಿ ರು ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ. ಈ ಬಿಲ್‌ಗಳನ್ನು ಪಾವತಿಸಲು ಅನುದಾನ ಬಿಡುಗಡೆಯೊಂದಿಗೆ ಒಂದು ಬಾರಿಗೆ ಅನ್ವಯಿಸುವಂತೆ ಪಾವತಿಗೆ ಸೂಕ್ತ ಆದೇಶ ಹೊರಡಿಸಬೇಕು,’ ಎಂದು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಸಭೆಯು ನಿರ್ಣಯಿಸಿರುವುದು ಗೊತ್ತಾಗಿದೆ.

 

 

ಭರ್ತಿಯಾಗದ 437 ಹುದ್ದೆಗಳು

 

ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಗಳಲ್ಲಿಹುದ್ದೆಗಳು ಸೃಜನೆಯಾಗಿದ್ದರೂ ಸಹ ಇದುವರೆಗೂ 437 ಹುದ್ದೆಗಳನ್ನು ಭರ್ತಿ ಮಾಡಿಲ್ಲ.

 

ರಾಯಚೂರಿನಲ್ಲಿರುವ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗಗಳಿಗೆ ಅಗತ್ಯವಿದ್ದ 100 ಬೋಧಕ ಮತ್ತು ಬೋಧಕೇತರ ಹುದ್ದೆಗಳು, ಅಂಕಾಲಜಿ ವಿಭಾಗಕ್ಕೆ ಅವಶ್ಯವಿರುವ 149 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸೃಜಿಸುವ ಸಂಬಂಧ ಸಭೆಯಲ್ಲಿ ಚರ್ಚೆಯಾಗಿದೆ. ಈ ಪ್ರಸ್ತಾವನೆ ಸಲ್ಲಿಕೆಯಾಗಿ ಹಲವು ತಿಂಗಳಾದರೂ ಸಹ ಆರ್ಥಿಕ ಇಲಾಖೆಯು ಇನ್ನು ಸಹಮತಿಸಿಲ್ಲ.

 

 

ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಒಟ್ಟಾರೆ 52 ಹುದ್ದೆಗಳನ್ನು ಸೃಜಿಸಲಾಗಿತ್ತು. ಇದರಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿದ್ದವು. ಈ ಹುದ್ದೆಗಳನ್ನು ನೇರ ನೇಮಕಾತಿಗೆ ಸಹ ಇನ್ನೂ ಅನುಮತಿ ದೊರೆತಿಲ್ಲ. ಅದೇ ರೀತಿ ಸಿಎಂಸಿಆರ್‍ಐ, ಚಿತ್ರದುರ್ಗ ಸಂಸ್ಥೆಯಲ್ಲಿ 11 ಬೋಧಕ ಹುದ್ದೆಗಳನ್ನು ರದ್ದುಗೊಳಿಸಿತ್ತು. ಈ ಹುದ್ದೆಗಳ ಪೈಕಿ ಫಿಸಿಯೋಜಿ ಮತ್ತು ಡೆಂಟಸ್ಟ್ರಿ ವಿಭಾಗದ ತಲಾ 01 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಮರು ಸ್ಥಾಪಿಸಬೇಕು ಎಂದು ಅರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಲು ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ತಿಳಿದು ಬಂದಿದೆ.

 

ಕೊಪ್ಪಳದಲ್ಲಿರುವ ಕಿಮ್ಸ್‌ನಲ್ಲಿಯೂ ಸಹ 31 ಬೋಧಕ ಹುದ್ದೆಗಳನ್ನು ಸೃಜಿಸಿದ್ದರೂ ಭರ್ತಿಗೆ ಇನ್ನೂ ಅನುಮತಿಯೇ ದೊರೆತಿಲ್ಲ. ಹಾಗೆಯೇ ಇದೇ ಕಿಮ್ಸ್‌ ಸಂಸ್ಥೆಯ ನುತನ 450 ಹಾಸಿಗೆ ಸಾಮರ್ಥ್ಯದ ಬೋಧಕ ಆಸ್ಪತ್ರೆ ಮತ್ತು 150 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಒಟ್ಟು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಬೋಧಕೇತರ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ.

 

 

ಕಲ್ಬುರ್ಗಿ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ಸುಟ್ಟ ಗಾಯಗಳ ಘಟಕ ಆಸ್ಪತ್ರೆಗೆ ಅವಶ್ಯವಿರುವ ಮಾನವ ಸಂಪನ್ಮೂಲವೂ ಇಲ್ಲ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿದ್ದರೂ ಸಹ ಈ ಹುದ್ದೆಗಳ ಭರ್ತಿಗೆ ಇನ್ನೂ ಅನುಮತಿ ದೊರೆತಿಲ್ಲ. ಮತ್ತೊಂದು ವಿಶೇಷವೆಂದರೇ ಇದೇ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಅಧೀಕ್ಷಕರ ಹಾಗೂ ಪ್ರಾಂಶುಪಾಲರ ಹುದ್ದೆಗಳೂ ಸಹ ಸೃಜನೆಯಾಗಿಲ್ಲ. ಈ ಸಂಬಂಧದ ಪ್ರಸ್ತಾವವು ಅರ್ಥಿಕ ಇಲಾಖೆಯಲ್ಲಿದ್ದರೂ ಸಹ ಇನ್ನೂ ಅನುಮೋದನೆ ದೊರೆತಿಲ್ಲ. ಹೀಗಾಗಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಲು ಸಚಿವರು ಸೂಚಿಸಿರುವುದು ಗೊತ್ತಾಗಿದೆ.

 

ಕಲ್ಬುರ್ಗಿಯಲ್ಲಿನ ಜಿಮ್ಸ್‌ನಲ್ಲಿಯೂ ಎಂಬಿಬಿಎಸ್‌ ನ ಪ್ರವೇಶ ಮಿತಿಯನ್ನು 150ರಿಂದ 200ಕ್ಕೆ ಹೆಚ್ಚಿಸಿದೆ. ಇದರ ಭಾಗವಾಗೊ 92 ಹುದ್ದೆಗಳನ್ನು ಸೃಜಿಸುವ ಪ್ರಸ್ತಾವವೂ ಆರ್ಥಿಕ ಇಲಾಖೆಯಲ್ಲಿ ಕೊಳೆಯುತ್ತಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆರಿಯರ್ ಅಡ್ವಾನ್ಸ್‌ಮೆಂಟ್‌ ಯೋಜನೆ ಜಾರಿಗೊಂಡಿದೆ. ಈ ಯೋಜನೆ ಭಾಗವಾಗಿ ಸ್ವಾಯತ್ತ ವೈದ್ಯಕೀಯ ಕಾಲೇಜು, ಡೆಂಟಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೋಧಕರು ಈಗಾಗಲೇ ಕಾಲ ಪದನ್ನೋತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಸಹಾಯಕ ಮತ್ತು ಸಹ ಪ್ರಾಧ್ಯಾಪಕರುಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ. ಹೀಗಾಗಿ ಎನ್‌ಎಂಸಿ ಪರಿವೀಕ್ಷಣೆಗೆ ಬಂದ ಸಂದರ್ಭದಲ್ಲಿ ಬೋಧಕ ವರ್ಗದ ಹುದ್ದೆಯು ಕೊರತೆ ಕಾಣಿಸಿಕೊಳ್ಳಲಿದೆ.

 

ಅಲ್ಲದೇ ಇದಕ್ಕೆ ಯಾವುದೇ ಆರ್ಥಿಕ ಸೌಲಭ್ಯವಿಲ್ಲ. ಹೀಗಾಗಿ ಸಂಸ್ಥೆಯಲ್ಲಿನ ಯುಜಿ ಮತ್ತು ಪಿಜಿ ಸೀಟುಗಳ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲು ಆರ್ಥಿಕ ಇಲಾಖೆಯು ಯಾವುದೇ ಕ್ರಮವಹಿಸಿಲ್ಲ. ಕ್ರಿಮ್ಸ್‌ ಸಂಸ್ಥೆಗೆ ಎಂಬಿಬಿಎಸ್‌ನ ಕೋರ್ಸ್‌ ಸೀಟುಗಳನ್ನು 200ಕ್ಕೆ ಹೆಚ್ಚಿಸಿದೆ. ಎನ್‌ಎಂಸಿ ನಿಯಮಾವಳಿಗಳ ಪ್ರಕಾರ ಬೋಧಕ ಹುದ್ದೆಗಳಿಲ್ಲ. ಹೀಗಾಗಿ ಈ ಹುದ್ದೆಗಳನ್ನು ಸೃಜಿಸಿ ಮಂಜೂರು ಮಾಡಿದ್ದಲ್ಲಿ ಆರ್ಥಿಕ ಹೊರೆಯುಂಟಾಗಲಿದೆ.

 

 

ಹೀಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ಉಂಟಾಗುವ ಆರ್ಥಿಕ ಹೊರೆಯನ್ನು ನಿವಾರಣೆ ಮಾಡಬೇಕು ಮತ್ತು ನಿಯಮಾನುಸಾರ ಪರಿಶೀಲಿಸಿ ಹುದ್ದೆಗಳನ್ನು ಮಂಜೂರು ಮಾಡಲಾಗುವುದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.

 

ಟ್ರಾಮಾ ಕೇರ್‍‌ ಕೇಂದ್ರ ಸ್ಥಾಪನೆಗೆ ಅನುದಾನ ಕೊರತೆ

 

ಬದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಆಯವ್ಯಯ (ಕಂಡಿಕೆ  157 (2)) ರಲ್ಲಿ ಘೋಷಿಸಿದ್ದರು. ಈ ಸಂಬಂಧ ಇಲಾಖೆಯೂ ಸಹ ಅಂದಾಜು ಪಟ್ಟಿಯನ್ನು ಆರ್ಥಿಕ ಇಲಾಖೆಗೂ ಸಲ್ಲಿಸಿತ್ತು. ಇದಕ್ಕಾಗಿ ಅನುದಾನವನ್ನು ರಾಜ್ಯ ರಸ್ತೆ ಸುರಕ್ಷತಾ ನಿಧಿಯಿಂದ ಪಡೆಯಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿತ್ತು.

 

 

ಆದರೆ ಸಾರಿಗೆ ಇಲಾಖೆಯು ಅನುದಾನದ ಕೊರತೆಯಿದೆ ಎಂದು ಪ್ರಸ್ತಾವನೆಯನ್ನು ಹಿಂದಿರುಗಿಸಿದೆ. ಹೀಗಾಗಿ ಕುಳಗೇರಿ ಕ್ರಾಸ್ ಮತ್ತು ಚಿತ್ರದುರ್ಗದಲ್ಲಿ ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸುವುದನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡಿಲ್ಲ ಎಂದು ಪ್ರಸ್ತಾವವು ವಾಪಸ್‌ ಬಂದಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಎನ್‌ಆರ್‍ಐ ಸೀಟು ಭರ್ತಿಗೆ ದೊರೆಯದ ಅನುಮೋದನೆ

 

ಆಡಳಿತ ಸುಧಾರಣೆ ಆಯೋಗದ ಶಿಫಾರಸ್ಸಿನಂತೆ ರಾಜ್ಯದ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 3,950 ಯುಜಿ ಮತ್ತು 1986 ಪಿಜಿ ಸೀಟುಗಳ ಪೈಕಿ ಶೇ. 15ರಷ್ಟನ್ನು ಎನ್‌ಆರ್‍‌ಐ ಸೀಟುಗಳನ್ನಾಗಿ ಪರಿವರ್ತಿಸಬೇಕು. ಇದನ್ನು 2026-27ನೇ ಸಾಲಿಗೆ ಮೀಸಲಿರಿಸಬೇಕು ಎಂಬ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಇದುವರೆಗೂ ಪರಿಗಣಿಸಿಲ್ಲ. ಶೇ. 15ರಷ್ಟು ಎನ್‌ಆರ್‍ಐ ಸೀಟುಗಳಿಂದ ಸಂಸ್ಥೆಗಳ ಆರ್ಥಿಕ ಸಬಲತೆಗೆ ಅನುಕೂಲವಾಗುತ್ತದೆ ಎಂದು ಸಮರ್ಥಿಸಿದ್ದರೂ ಸಹ ಆರ್ಥಿಕ ಇಲಾಖೆಯು ಇನ್ನೂ ಅನುಮೋದನೆ ನೀಡಿಲ್ಲ.

Your generous support will help us remain independent and work without fear.

Latest News

Related Posts