ಬೆಂಗಳೂರು; ಸಂಸದೆ ಸೋನಿಯಾ ಗಾಂಧಿ ಅಳಿ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ 1,100 ಎಕರೆ ವಿಸ್ತೀರ್ಣದ ಜಮೀನಿಗೆ ನಕಲಿ ಮ್ಯುಟೇಷನ್ ರಿಜಿಸ್ಟರ್ ಮಾಡಿಕೊಟ್ಟಿರುವ ಆರೋಪಕ್ಕೆ ಗುರಿಯಾಗಿರುವ ತಹಶೀಲ್ದಾರ್ ದಯಾನಂದ್ ಸೇರಿ ಒಟ್ಟು 7 ಮಂದಿ ಅಧಿಕಾರಿ, ನೌಕರರ ವಿರುದ್ಧ ವಿಚಾರಣೆಗೆ ರಾಜ್ಯ ಸರ್ಕಾರವು 10 ತಿಂಗಳಾದರೂ ಪೂರ್ವಾನುಮತಿ ನೀಡಿಲ್ಲ.
ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯು 10,000 ಕೋಟಿ ರುಪಾಯಿ ಬೆಲೆಬಾಳುವ 1,100 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಕಬಳಿಸಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ರಮೇಶ್ ಎನ್ ಆರ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರರ್ಜಿಯಲ್ಲಿನ ಆರೋಪಗಳ ಕುರಿತು ಪ್ರಾಥಮಿಕ ವಿಚಾರಣೆ ನಡೆಸಲು ಲೋಕಾಯುಕ್ತದ ರಾಮನಗರ ಜಿಲ್ಲಾ ಡಿವೈಎಸ್ಪಿ ಅವರು ಲೋಕಾಯುಕ್ತದ ಎಡಿಜಿಪಿ ಅವರಿಗೆ 2023ರ ಮೇ 25ರಂದು ಪತ್ರ ಬರೆದಿದ್ದರು.
ಆದರೆ ಈ ಪತ್ರ ಸರ್ಕಾರದಲ್ಲಿ ಸ್ವೀಕೃತವಾಗಿ 2 ವರ್ಷ ಕಳೆದಿದೆ. ಆದರೂ ಈ ಅರ್ಜಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಯಾವುದೇ ಕ್ರಮ ವಹಿಸಿಲ್ಲ. ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಅಧಿಕಾರಿಗಳು ಸಮಾಲೋಚನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕರು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 17(3) ಅಡಿಯಲ್ಲಿ ಪೂರ್ವಾನುಮತಿ ನೀಡಬೇಕು ಎಂದು 2025ರ ಮಾರ್ಚ್ 21ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೆನಪೋಲೆ ಬರೆದಿದ್ದರು. ಈ ನೆನಪೋಲೆ ಸ್ವೀಕೃತವಾಗಿ 10 ತಿಂಗಳಾದರೂ ಪೂರ್ವಾನುಮತಿ ನೀಡಿಲ್ಲ. ಸದ್ಯ ಈ ಕಡತವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಾಖೆಯಲ್ಲಿ ಧೂಳು ತಿನ್ನುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಪತ್ರ ವ್ಯವಹಾರಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ದಯಾನಂದ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಕುಮಾರ್, ದಕ್ಷಿಣ ತಾಲೂಕಿನ ಉಪ ತಹಶೀಲ್ದಾರ್ ಗುರುರಾಜ್, ತಾವರೆಕೆರೆ ಹೋಬಳಿಯ ಕಂದಾಯ ನಿರೀಕ್ಷಕ ರವಿಕುಮಾರ್, ಗಂಗೇನಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಅಂಜನ್, ವಿಜಯಕುಮಾರ್ ಅವರನ್ನು ವಿಚಾರಣೆ ಮಾಡಲು ಎಸಿಬಿಯ ತನಿಖಾಧಿಕಾರಿಯು ಪೂರ್ವಾನುಮತಿ ಕೋರಿದ್ದರು.
ಈ ಪೈಕಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕಂದಾಯ ನಿರೀಕ್ಷಕರಾದ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಅಂಜನ್, ವಿಜಯಕುಮಾರ್ ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲು ಅನುಮತಿ ನೀಡಿದ್ದರು. ಅಲ್ಲದೇ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ತಾವರೆಕೆರೆ ಹೋಬಳಿಯ ಹಿಂದಿನ ಉಪ ತಹಶೀಲ್ದಾರ್ ಗುರುರಾಜ್ ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲು ಅನುಮತಿ ನೀಡಿದ್ದರು. ನಂತರ ಈ ದೂರರ್ಜಿಯ ವಿಚಾರಣೆಯು ಎಸಿಬಿಯಿಂದ ಲೋಕಾಯುಕ್ತದ ರಾಮನಗರ ಠಾಣೆಗೆ ವರ್ಗಾವಣೆಗೊಂಡಿತ್ತು.

ಇದಾದ ನಂತರ ಲೋಕಾಯುಕ್ತದ ರಾಮನಗರ ಡಿವೈಎಸ್ಪಿ, ಎದುರುದಾರರ ವಿರುದ್ಧ ಪ್ರಾಥಮಿಕ ವಿಚಾರಣೆ, ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಕಾಯ್ದೆ 1988ರ (ತಿದ್ದುಪಡಿ 2018ರಂತೆ) ಕಲಂ 17(ಎ) ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಒದಗಿಸಿಕೊಡಬೇಕು ಎಂದು ಮರು ಮನವಿ ಮಾಡಿದ್ದರು.

ಅಲ್ಲದೇ ದೂರರ್ಜಿಯ ತ್ವರಿತ ವಿಚಾರಣೆಗಾಗಿ ಎದುರುದಾರ ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ವಿಚಾರಣೆಗೆ ಪೂರ್ವಾನುಮತಿ ಬಾಕಿ ಇತ್ತು.

ಈ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿ ನೀಡಲು ತಹಸೀಲ್ದಾರ್ ದಯಾನಂದ, ಶಿವಕುಮಾರ್, ಮಂಜಪ್ಪ ಅವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡಬೇಕು ಎಂದು 2025ರ ಫೆ.5ರಂದು ರಾಮನಗರ ಲೋಕಾಯುಕ್ತ ಎಸ್ಪಿ ಎಸ್ ಸುಧೀರ್ ಅವರು ಮರು ಮನವಿ ಸಲ್ಲಿಸಿದ್ದರು.

ಈ ಮರು ಮನವಿ ಪರಿಗಣಿಸಿದ್ದ ಲೋಕಾಯುಕ್ತದ ಪೊಲೀಸ್ ಮಹಾನಿರೀಕ್ಷಕರು 2025ರ ಮಾರ್ಚ್ 21ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೆನಪೋಲೆಯನ್ನೂ ಸಹ ಬರೆದಿದ್ದರು.

ದೂರರ್ಜಿಯಲ್ಲಿ ಉಲ್ಲೇಖಿಸಿರುವ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದ್ದ ತಹಶೀಲ್ದಾರ್‍ಗಳ ವಿರುದ್ಧ ಆರೋಪಗಳ ಕುರಿತಾಗಿ ತನಿಖೆ, ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 17(ಎ) ಅಡಿಯಲ್ಲಿ ಪೂರ್ವಾನುಮತಿ ನೀಡಲು 4 ತಿಂಗಳ ಅವಧಿ ನಿಗದಿಪಡಿಸಿದೆ. ಆದರೆ ಇದುವರೆಗೂ ಎದುರುದಾರರ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ಪೂರ್ವಾನುಮತಿ ನೀಡಿಲ್ಲ ಎಂದು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕರು 2025ರ ಮಾರ್ಚ್ 21ರಂದು ಬರೆದಿದ್ದ ನೆನಪೋಲೆಯಲ್ಲಿ ವಿವರಿಸಿದ್ದರು.
ಹೀಗಾಗಿ ಲೋಕಾಯುಕ್ತ ತನಿಖಾಧಿಕಾರಿ ಮರು ಮನವಿ ಪ್ರಕಾರ ಸರ್ಕಾರಿ ನೌಕರರ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ರೀತಿ ಪೂರ್ವಾನುಮತಿ ನೀಡಬೆಕು ಎಂದು ಮತ್ತೊಮ್ಮೆ ಕೋರಿದ್ದರು.
ಲೋಕಾಯುಕ್ತ ಮತ್ತು ಕಂದಾಯ ಇಲಾಖೆಯ ನಡುವೆ ಪತ್ರ ವ್ಯವಹಾರಗಳಲ್ಲಿಯೇ ಕಾಲಹರಣವಾಗಿದೆ. ಸದ್ಯ ಈ ಕಡತವು 2025ರ ಡಿಸೆಂಬರ್ 20ರಂದು ಕಂದಾಯ ಇಲಾಖೆಯ ವಿಭಾಗದ ಲಾಗಿನ್‌ನಲ್ಲಿರುವುದು ಗೊತ್ತಾಗಿದೆ.

ಪ್ರಕರಣವೇನು?
2013ರಿಂದ 2018ರ ಅವಧಿಯಲ್ಲಿ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯ ಹೆಸರಿನಲ್ಲಿ ತಾವರಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ವರ್ತೂರು, ನರಸೀಪುರ ಮತ್ತು ಪೆದ್ದನಪಾಳ್ಯ ಗ್ರಾಮಗಳಲ್ಲಿರುವ 1,100 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತುಗಳಿಗೆ ಮತ್ತು ದಾಖಲೆಗಳೇ ಇಲ್ಲದ ಸ್ವತ್ತುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು ಎಂದು ದೂರರ್ಜಿ ಸಲ್ಲಿಕೆಯಾಗಿತ್ತು.
ಅಲ್ಲದೇ ಗಂಗೇನಹಳ್ಳಿ ಸರ್ವೇ ನಂಬರ್ 01ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 7,8,9, 10, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 01ರಿಂದ 35 ಮತ್ತು ಪೆದ್ದನಪಾಳ್ಯ ಗ್ರಾಮದ ಸರ್ವೇ ನಂಬರ 17,18,19,20 ರಲ್ಲಿನ ಸ್ವತ್ತುಗಳಿಗೆ ಡಿಎಲ್‌ಎಫ್ ಸಂಸ್ಥೆಯು ಬೇಲಿ ಹಾಕಿತ್ತು. ಇದರ ಮೌಲ್ಯವು 7,000 ಕೋಟಿ ರುಗೂ ಹೆಚ್ಚಿನ ಮೌಲ್ಯವಿದೆ ಎಂದು ಅಂದಾಜಿಸಿತ್ತು.
ಡಿಎಲ್‌ಎಫ್ ಸಂಸ್ಥೆಗೆ ನಕಲಿ ಮ್ಯುಟೇಷನ್ ರಿಜಿಸ್ಟರ್ ಮಾಡಿಕೊಟ್ಟು ಭೂ ಕಬಳಿಕೆಗೂ ತಹಶೀಲ್ದಾರ್‍ಗಳಾದ ದಯಾನಂದ, ಶಿವಕುಮಾರ್, ಮಂಜಪ್ಪ, ಗುರುರಾಜಪ್ಪ ಅವರು ಸಹಕರಿಸಿದ್ದರು ಎಂದು ದೂರರ್ಜಿಯಲ್ಲಿ ಆರೋಪಿಸಲಾಗಿತ್ತು.
ಡಿಎಲ್‌ಎಫ್ ಸಂಸ್ಥೆಯು ಕಬಳಿಸಿದೆ ಎಂದು ಆರೋಪಿಸಲಾಗಿರುವ 1,100 ಎಕರೆಗಳಷ್ಟು ವಿಸ್ತೀರ್ಣದ ಸ್ವತ್ತುಗಳ ಪೈಕಿ ಶೇ. 90 ರಷ್ಟು ಸ್ವತ್ತುಗಳು ಸರ್ಕಾರೀ ಸ್ವತ್ತುಗಳಾಗಿವೆ ಎಂದು ಎನ್ ಆರ್ ರಮೇಶ್ ಪ್ರತಿಪಾದಿಸಿದ್ದರು. ಅಲ್ಲದೇ ಇನ್ನುಳಿದ ಶೇ.10 ರಷ್ಟು ಸ್ವತ್ತುಗಳಿಗೆ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಆರೋಪಿಸಿದ್ದರು. ತಿಪ್ಪಗೊಂಡನ ಹಳ್ಳಿ ಜಲಾಶಯವನ್ನು ಸೇರಿಕೊಳ್ಳುವ ಅರ್ಕಾವತಿ ನದಿಯು ಹರಿಯುತ್ತಿರುವ ಸಮೃದ್ಧ ಪ್ರದೇಶಗಳಾಗಿರುವ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ ಮತ್ತು ಪೆದ್ದನಪಾಳ್ಯ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಬೆಲೆಯಿದೆ ಎಂದು ಹೇಳಲಾಗಿದೆ.
ಈ ಪ್ರದೇಶಗಳಲ್ಲಿನ ನೆಲದ ಬೆಲೆ ಚ.ಅಡಿಯೊಂದಕ್ಕೆ ಕೇವಲ 2,100/- ಎಂದೇ ಲೆಕ್ಕ ಹಾಕಿದರೂ ಸಹ ಎಕರೆಯೊಂದಕ್ಕೆ 9,14,76,000/- (ಒಂಬತ್ತು ಕೋಟಿ ಹದಿನಾಲ್ಕು ಲಕ್ಷದ ಎಪ್ಪತ್ತಾರು ಸಾವಿರ) ಗಳಂತೆ ಒಟ್ಟು 1,110 ಎಕರೆ ವಿಸ್ತೀರ್ಣದ ಪ್ರದೇಶಕ್ಕೆ ಸುಮಾರು ₹ 10,153,83,60,000/- (ಹತ್ತು ಸಾವಿರದ ಒಂದು ನೂರಾ ಐವತ್ತ ಮೂರು ಕೋಟಿ ಎಂಬತ್ತಮೂರು ಲಕ್ಷದ ಅರವತ್ತು ಸಾವಿರ) ಗಳಾಷ್ಟಾಗಿದೆ ಎಂದು ಎನ್ ಆರ್ ರಮೇಶ್ ಅವರು ಅಂದಾಜಿಸಿದ್ದರು.
ರಾಬರ್ಟ್ ವಾದ್ರಾ ಅವರು 2004ಕ್ಕೂ ಮೊದಲು ಸಣ್ಣ ಪ್ರಮಾಣದ ಲೋಹದ ವಸ್ತುಗಳ ವ್ಯಾಪಾರಿಯಾಗಿದ್ದರು. 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್(ಐ) ಪಕ್ಷದ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪ್ರಭಾವವನ್ನು ಬಳಸಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 14 ಬೇರೆ ಬೇರೆ ಹೆಸರುಗಳ ಸಂಸ್ಥೆಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಸೃಷ್ಟಿಸಿಕೊಂಡಿದ್ದರು ಎಂದು ರಮೇಶ್ ಎನ್.ಆರ್. ಆಪಾದಿಸಿದ್ದರು.
ಹರಿಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾರವರು ಡಿಎಲ್‌ಎಫ್ ಮತ್ತು ಇನ್ನಿತರ ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ನಡೆಸಿರುವ ಸರ್ಕಾರಿ ಭೂ ಕಬಳಿಕೆ ಹಗರಣಗಳನ್ನು ಬಯಲು ಮಾಡಿದ್ದರು. ಇದಾದ ನಂತರ ಸರ್ವೋಚ್ಛ ನ್ಯಾಯಾಲಯ”ದ ಆದೇಶದಂತೆ ರಚನೆಯಾಗಿದ್ದ ನ್ಯಾಯಮೂರ್ತಿ ಎಸ್ ಎನ್ ದಿಂಗ್ರಾ ನೇತೃತ್ವದ ಆಯೋಗವು ಸಲ್ಲಿಸಿದ್ದ ಮಧ್ಯಂತರ ವರದಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ರಾಬರ್ಟ್ ವಾದ್ರಾ ಸೇರಿದಂತೆ ಡಿಎಲ್ಎಫ್ ಸಂಸ್ಥೆಯ ಹಲವರ ವಿರುದ್ಧ 13 ಕ್ಕೂ ಹೆಚ್ಚು ಎಫ್‌ಐಆರ್ ಗಳನ್ನು ದಾಖಲಿಸಿ ತನಿಖೆ ನಡೆಸಿತ್ತು.









