ಸಿಎಂ ಮೂಲಸೌಕರ್ಯ ಯೋಜನೆ; ಅಸಹಕಾರ, ಪ್ರಸ್ತಾವಗಳ ತಿರಸ್ಕಾರ, ಅಲವತ್ತುಕೊಂಡ ಕಾಂಗ್ರೆಸ್‌ ಶಾಸಕರು

ಬೆಂಗಳೂರು; ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರ ವಿವೇಚನೆಗೆ ಬಿಟ್ಟಿರುವ ಅನುದಾನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತ ಪಕ್ಷದ ಶಾಸಕರಿಗೂ ಅಧಿಕಾರಿಗಳು ಸಹಕರಿಸುತ್ತಿಲ್ಲ. ಹೀಗಾಗಿ ಅಂದುಕೊಂಡಂತೆ ಕೆಲಸಗಳು ಆಗುತ್ತಿಲ್ಲ ಕಾಂಗ್ರೆಸ್‌ ಶಾಸಕರು, ಅಲವತ್ತುಕೊಂಡಿದ್ದಾರೆ.

 

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸುತ್ತ ರಾಜಕಾರಣ ನಡೆಯುತ್ತಿರುವ ಹೊತ್ತಿನಲ್ಲೇ ಅಧಿಕಾರಿಗಳು, ಕಾಂಗ್ರೆಸ್‌ ಶಾಸಕರಿಗೇ ಅಸಹಕಾರ ತೋರುತ್ತಿದ್ದಾರೆ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ. 2026ರ ಜನವರಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಕಾಂಗ್ರೆಸ್‌ ಶಾಸಕ ಪ್ರಕಾಶ್‌ ಕೆ ಕೋಳಿವಾಡ್ ಅವರು ಮುಖ್ಯಮಂತ್ರಿಯ ಗಮನಸೆಳೆಯಲಿದ್ದಾರೆ.

 

ಈ ಸಂಬಂಧ ಕಾಂಗ್ರೆಸ್‌ ಶಾಸಕ ಪ್ರಕಾಶ್ ಕೆ ಕೋಳಿವಾಡ್ ಅವರು ಮುಖ್ಯಮಂತ್ರಿ ಅವರ ಗಮನಸೆಳೆಯಲು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 73ರ ಮೇರೆಗೆ ಗಮನಸೆಳೆಯುವ ಸೂಚನೆಯನ್ನು ಮಂಡಿಸಿದ್ದಾರೆ. ಈ ಸೂಚನೆಯನ್ನು 2026ರ ಜನವರಿ 28ರಂದು ವಿಧಾನಸಭೆಯಲ್ಲಿ ಮಂಡಿಸಲಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗಮನ ಸೆಳೆಯುವ ಸೂಚನೆಯಲ್ಲೇನಿದೆ?

 

ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ದಿ ಯೋಜನೆ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರ ವಿವೇಚನೆಗೆ ಬಿಟ್ಟ ಅನುದಾನದಲ್ಲಿ ರೋಬೋ ಟೀಚರ್‍‌, ಹೆಲ್ತ್‌ ಎಟಿಎಂ, ಡಿಜಿಟಲ್ ಲೈಬ್ರರಿಯಂತಹ ಹೊಸ ಹೊಸ ಆವಿಷ್ಕಾರಯುತ ತಂತ್ರಜ್ಞಾನ ಅಳವಡಿಸಲು ಸರ್ಕಾರದ ಅಧಿಕಾರಿಗಳು ತಾಂತ್ರಿಕ ನೆಪವೊಡ್ಡಿ ಕಾಮಗಾರಿಗಳಿಗೆ ಅನುಮೋದನೆ ನೀಡಲು ತಿರಸ್ಕಾರ ಅಥವಾ ವಿಳಂಬ ಅನುಸರಿಸುತ್ತಿದ್ದಾರೆ.

 

 

ಶಾಸಕರು ಅಂದುಕೊಂಡಂತೆ ಆಗದ ಕೆಲಸ

 

ಅಧಿಕಾರಿಗಳ ಅಸಹಕಾರದಿಂದ ನಾವು ಅಂದುಕೊಂಡ ಕೆಲಸ ಮಾಡಲು ಆಗುತ್ತಿರುವುದಿಲ್ಲ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ ಶಾಸಕರ ವಿವೇಚನೆಗೆ ಬಿಟ್ಟ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಸಹಕಾರ ನೀಡಿ ಅನುಷ್ಠಾನಗೊಳಿಸುವಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಶಾಸಕ ಪ್ರಕಾಶ್‌ ಕೋಳಿವಾಡ್‌ ಅವರು ಗಮನ ಸೆಳೆಯುವ ಸೂಚನೆಯಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಈ ಗಮನ ಸೆಳೆಯುವ ಸೂಚನೆಯು 2026ರ ಜನವರಿ 28ರಂದು ವಿಧಾನಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ವಿಧಾನಸಭೆಯ ಕಾರ್ಯದರ್ಶಿಗಳು ಯೋಜನೆ ಮತ್ತು ಸಾಂಖ್ಯಿಕ ಸಚಿವರಿಗೆ ಈ ಗಮನ ಸೆಳೆಯುವ ಸೂಚನೆಯನ್ನು ರವಾನಿಸಿರುವುದು ಗೊತ್ತಾಗಿದೆ.

 

 

ಸಿಎಂ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ”ಗಳ ಕುರಿತು ಸಿದ್ದರಾಮಯ್ಯ ಅವರು ಈಚೆಗಷ್ಟೇ ಪ್ರಗತಿ ಪರಿಶೀಲನಾ ಸಭೆ ನಡೆಸಿ ಚರ್ಚೆ ನಡೆಸಿದ್ದರು. ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ ನೀಡಿದ ಅನುದಾನದಲ್ಲಿ ಆಯಾ ಶಾಸಕರು ತಮ್ಮ ವಿವೇಚನಾ ಕೋಟಾದ ಕಾಮಗಾರಿಗಳಿಗೆ ಶೇ.25ರಷ್ಟು ಮೊತ್ತ ಬಳಸಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ.

 

ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಕುರಿತು ಆರ್ಥಿಕ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯಾ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇ. 50ರಷ್ಟು ಅನುದಾನವನ್ನು ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ ಕಾಮಗಾರಿಗಳಿಗೆ, ಶೇ. 25ರಷ್ಟು ಗ್ರಾಮೀಣ ಮತ್ತು ಮೂಲಸೌಕರ್ಯ ಕಾಮಗಾರಿಗಳಿಗೆ ವಿನಿಯೋಗಿಸಲು ಸೂಚಿಸಿತ್ತು.

 

ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಒದಗಿಸುವುದು, ಕೃಷಿ, ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ರಸ್ತೆಗಳ ನಿರ್ಮಾಣ ಮಾಡುವುದು, ಜನರ ದೈನಂದಿನ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯ ಅನುಷ್ಠಾನಗೊಳಿಸಲು ನಿರ್ದೇಶಿಸಿತ್ತು.

 

10 ಕೋಟಿವರೆಗಿನ ಕಾಮಗಾರಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಅನುಮೋದನೆ ನೀಡಬೇಕು. 10 ಕೋಟಿಗೂ ಅಧಿಕ ಮೊತ್ತಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಕಾಮಗಾರಿಗಳ ಕನಿಷ್ಟ ಮೊತ್ತ 1 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳ ಕಾಮಗಾರಿಗಳ ಕನಿಷ್ಟ ಮೊತ್ತ 20 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಭೂ ಸ್ವಾಧೀನ ಕಾಮಗಾರಿ, ಆಡಳಿತಾತ್ಮಕ ವೆಚ್ಚಗಳಿಗೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಬಳಕೆ ಮಾಡಿಕೊಳ್ಳಲು ನಿರ್ಬಂಧಿಸಲಾಗಿದೆ.

 

ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

 

2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ರೂ.25 ಕೋಟಿಯಂತೆ ಒಟ್ಟು ರೂ. 3,510 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಈಗಾಗಲೇ ರೂ. 2,040 ಕೋಟಿ ಮೊತ್ತದಲ್ಲಿ ಶೇ.58ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ.920 ಕೋಟಿ ವೆಚ್ಚ ಭರಿಸಲಾಗಿದೆ. ಇನ್ನೂ ರೂ. 1,205 ಕೋಟಿ ಬಿಡುಗಡೆ ಮಾಡಲು ಬೆಳಗಾವಿ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಆದೇಶ ನೀಡಲಾಗಿದೆ ಎಂದು ಹೇಳಿದ್ದರು.

 

ಅನುಷ್ಠಾನ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. 2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ ರೂ.1,890 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 250 ಕೋಟಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ ರೂ. 8,666.50 ಕೋಟಿ ಅನುಮೋದನೆ ನೀಡಲಾಗಿದೆ. ಈಗಾಗಲೇ ರೂ.1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ.

 

ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ, ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡಬೇಕು. 2024-25 ನೇ ಸಾಲಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಒಟ್ಟು ರೂ. 8,666.50 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts