ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ಅದಾನಿಗೆ ರತ್ನಗಂಬಳಿ; ಕಾನೂನು ಅಭಿಪ್ರಾಯ ಕೈ ಸೇರದೆಯೇ ಕೇಂದ್ರಕ್ಕೆ ಪ್ರಸ್ತಾವ

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂಬ ಕಾನೂನು ಇಲಾಖೆಯ ಅಭಿಪ್ರಾಯಕ್ಕೂ ಎದುರು ನೋಡದೆಯೇ  ಲೆಟರ್ ಅಫ್‌ ಇಂಟೆಂಟ್‌ನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ನೇರವಾಗಿ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿದೆ.

 

ಲೋಕಸಭೆ ಪ್ರತಿಪಕ್ಷ  ನಾಯಕ ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್‌ನ ಧುರೀಣರು ಅದಾನಿ ವಿರುದ್ಧ ಪ್ರತಿನಿತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಇತ್ತ ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕಾನೂನು ಅಭಿಪ್ರಾಯಕ್ಕೆ ಎದುರು ನೋಡದೆಯೇ ಅದಾನಿ ಸಮೂಹಕ್ಕೆ ಅನುಕೂಲವಾಗುವಂತೆ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿ ಪ್ರಸ್ತಾವ ಸಲ್ಲಿಸಿದೆ.   2026ರ ಆರಂಭದಲ್ಲೇ  ಬಹುದೊಡ್ಡ ಹಗರಣಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮುನ್ನುಡಿ ಬರೆದಂತಾಗಿದೆ.

 

ಈ ಪ್ರಕರಣದಲ್ಲಿ ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್‌ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ (ಗಣಿ) ರಾಜ್ಯದ ಹಿತಾಸಕ್ತಿಯನ್ನೇ ಬಲಿಕೊಟ್ಟಿರುವುದು  ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ಈ ಹಗರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ  ಉನ್ನತ ಅಧಿಕಾರಿಗಳೂ ಸಹ ಶಾಮೀಲಾಗಿದ್ದಾರೆಯೇ  ಎಂಬ ಅನುಮಾನಗಳು ವ್ಯಕ್ತವಾಗಿವೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ,  ಕೈಗಾರಿಕೆ,  ವಾಣಿಜ್ಯ ಇಲಾಖೆ (ಗಣಿ)ಯ ನಡವಳಿ, ಕೇಂದ್ರ ಸರ್ಕಾರದ ನಿರ್ದೇಶನ ಕೋರಿ ಸಲ್ಲಿಸಿರುವ ಪ್ರಸ್ತಾವದ ಪ್ರತಿ ಮತ್ತು  ಕಾನೂನು ಇಲಾಖೆಯು ನೀಡಿರುವ 5 ಪುಟಗಳ  ಅಭಿಪ್ರಾಯದ ಪ್ರತಿಯೂ  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾನೂನು ಅಭಿಪ್ರಾಯ ಕೈ ಸೇರುವ ಮುನ್ನವೇ ಪ್ರಸ್ತಾವ ಸಲ್ಲಿಸಿದ್ದೇಕೆ?

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.  ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)   ಈ ಅಭಿಪ್ರಾಯಕ್ಕೂ ಕಾಯಲಿಲ್ಲ. ಬದಲಿಗೆ ಕಾನೂನು ಅಭಿಪ್ರಾಯ ತನ್ನ ಕೈ ಸೇರುವ ಮುನ್ನವೇ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

 

ಕಾನೂನು ಇಲಾಖೆಯ ಅಭಿಪ್ರಾಯವನ್ನು ತಿಳಿದುಕೊಳ್ಳದೆಯೇ ಮತ್ತು  ಭಾರೀ ಆರ್ಥಿಕ ಪರಿಣಾಮಗಳನ್ನು ಯೋಚಿಸದೆಯೇ  ಕೇಂದ್ರ ಸರ್ಕಾರಕ್ಕೆ ತರಾತುರಿಯಲ್ಲಿ  ಪ್ರಸ್ತಾವ ಸಲ್ಲಿಕೆಯಾಗಿರುವ ಕಾರಣ,  ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರುಪಾಯಿಗಳಷ್ಟು ನಷ್ಟ ಸಂಭವಿಸುವ ಸಾಧ್ಯತೆಗಳೂ ಇವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

 

ಮತ್ತೊಂದು  ವಿಶೇಷವೆಂದರೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ  2 ದಿನದ ನಂತರ ಕಾನೂನು ಅಭಿಪ್ರಾಯವು ಇಲಾಖೆಗೆ ತಲುಪಿರುವುದು ಗೊತ್ತಾಗಿದೆ. 2024ರಲ್ಲೇ ಭೌತಿಕ  ಕಡತವು ಕಾನೂನು ಇಲಾಖೆಯಲ್ಲಿದ್ದರೂ ಹಲವು ದಿನಗಳ  ಕಾಲ ತನ್ನ ಬಳಿಯೇ ಇಟ್ಟುಕೊಂಡಿತ್ತು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ 2 ದಿನದ ನಂತರ ಅಭಿಪ್ರಾಯದ ಕಡತವನ್ನು ಕೈಗಾರಿಕೆ ವಾಣಿಜ್ಯ ಇಲಾಖೆ (ಗಣಿ) ಗೆ ರವಾನಿಸಿರುವುದು ತಿಳಿದು ಬಂದಿದೆ.

 

ಕಾನೂನು ಅಭಿಪ್ರಾಯದ ಸುಳಿವು ಹೊಂದಿದ್ದ ಇಲಾಖೆಯ ಚಾಲಾಕಿತನ

 

ಒಂದೊಮ್ಮೆ ಕಾನೂನು ಇಲಾಖೆಯು ತನ್ನ ಅಭಿಪ್ರಾಯವನ್ನು ಮೊದಲೇ ನೀಡಿದ್ದರೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅಡ್ಡಿಯುಂಟಾಗುತ್ತಿತ್ತು. ಕೇಂದ್ರ ಸರ್ಕಾರದ ನಿರ್ದೇಶನ ಕೋರುವ ಪ್ರಸ್ತಾವಕ್ಕೆ ಕಾನೂನು ಇಲಾಖೆಯ ಅಭಿಪ್ರಾಯವು ಅಡ್ಡಿಪಡಿಸಬಹುದು ಎಂದು ಮೊದಲೇ ಅಂದಾಜಿಸಿದಂತಿದ್ದ  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು, ಕೇಂದ್ರಕ್ಕೆ   ಪ್ರಸ್ತಾವ ಸಲ್ಲಿಕೆ ಸಂದರ್ಭದಲ್ಲಿ ಕಾನೂನು ಅಭಿಪ್ರಾಯದ ಅರಿವು ಇಲಾಖೆಗೆ ಇರಲೇ ಇಲ್ಲ ಎಂದು ಸಮರ್ಥಿಸುವಂತಹ ಚಾಲಾಕಿತನ ಪ್ರದರ್ಶಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌,  ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳನ್ನು  ಪುನರಾವರ್ತಿತವಾಗಿ  ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಗುರಿಯಾಗಿದೆ.  ಎಂಎಂಡಿಆರ್‍‌ ಕಾಯ್ದೆ ಸೆಕ್ಷನ್‌ 21 (1) ಮತ್ತು (2)ರ ಅಡಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು  ಕ್ರಮ ಕೈಗೊಳ್ಳುವಲ್ಲಿ   (ಗಣಿ ), ಸಂಪೂರ್ಣವಾಗಿ ವಿಫಲವಾಗಿದೆ.

 

ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ಗೆ ಸಂಬಂಧಿಸಿದಂತೆ ಎಸಿಸಿ  ಲಿಮಿಟೆಡ್ ಪರವಾಗಿ ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದ (MDPA) ಅನ್ನು ಕಾರ್ಯಗತಗೊಳಿಸಲು ಅನುಮತಿ ಇದೆಯೇ, ಮತ್ತು  ವಿಶೇಷವಾಗಿ  ಉಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳ ಕುರಿತಾಗಿ  ಕಾನೂನು ಅಭಿಪ್ರಾಯವನ್ನು ಕೋರಲಾಗಿದೆ. ಇಲಾಖೆಯು ಸಲ್ಲಿಸಿದ ಕಡತ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದೆ.

 

2020ರ ಅಕ್ಟೋಬರ್‍‌ 5ರಂದು  2020ರ ಅಕ್ಟೋಬರ್ 05 ರಂದು ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ 533.65 ಹೆಕ್ಟೇರ್ ಭೂಪ್ರದೇಶದಲ್ಲಿ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ನ ಹರಾಜಿಗಾಗಿ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿತ್ತು.  ಮತ್ತು ಎಸಿಸಿ  ಲಿಮಿಟೆಡ್ ಮಾತ್ರ   ಅರ್ಜಿ ಸಲ್ಲಿಸಿತ್ತು.  ಮತ್ತು ಈಗ ಎಸಿಸಿ  ಲಿಮಿಟೆಡ್ ಪರವಾಗಿ ಆದೇಶ ಹೊರಡಿಸಲು ಬಯಸಿದೆ.  ಈ  ಹರಾಜು ಪ್ರಕ್ರಿಯೆಯಲ್ಲಿ ಐಬಿಎಂ  ಬೆಲೆಯ ಶೇ.  35.15 ರಷ್ಟು ಉಲ್ಲೇಖಿಸಿತ್ತು.

 

 

ಕಾನೂನು ಇಲಾಖೆಯಿಂದ ಟೆಂಡರ್ ಷರತ್ತಿನ ಷರತ್ತು 10(ಎಫ್) ಉಲ್ಲೇಖ

 

ಈ ಪ್ರಕರಣದಲ್ಲಿ ಅಭಿಪ್ರಾಯ ನೀಡಿರುವ ಕಾನೂನು ಇಲಾಖೆಯು ಟೆಂಡರ್ ಷರತ್ತಿನ ಷರತ್ತು 10(ಎಫ್) ನ್ನು ಉಲ್ಲೇಖಿಸಿದೆ. ಎಂಎಂಡಿಆರ್ 1957ರಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ನಿಬಂಧನೆಗಳ ಪ್ರಕಾರ ಬಿಡ್ಡರ್‍‌ ರಾಜ್ಯದಲ್ಲಿ  ಹಿಂದಿನ ಗಣಿಗಾರಿಕೆ ಚಟುವಟಿಕೆ ನಡೆಸಿದ್ದಕ್ಕೆ ಮೊತ್ತ ಪಾವತಿಸಬೇಕು. ಮತ್ತು ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ನಿರ್ಧರಿಸುವ ಎಲ್ಲಾ ಬಾಕಿಗಳನ್ನೂ ಸಹ ತೀರುವಳಿ ಮಾಡುವುದಾಗಿ ಮುಚ್ಚಳಿಕೆ ನೀಡಬೇಕು.

 

 

ಒಂದೊಮ್ಮೆ ಬಾಕಿಗಳನ್ನು ನಿರ್ಧರಿಸದೇ ಇದ್ದರೇ ಎಂಎಂಡಿಅರ್‍‌ ಕಾಯ್ದೆ 1957ರ ನಿಯಮದ ನಿಬಂಧನೆಗಳ ಪ್ರಕಾರ ಹಿಂದಿನ ಗಣಿಗಾರಿಕೆ ಚಟುವಟಿಕೆಯಿಂದ ಉಂಟಾದ ನಷ್ಟವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು 10 ಎಫ್‌ನ ಸಾರಾಂಶವನ್ನು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಎಸಿಸಿ ಲಿಮಿಟೆಡ್‌ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನೂ ಕಾನೂನು ಇಲಾಖೆಯು ಅವಲೋಕಿಸಿದೆ. ಈ ಅರ್ಜಿಗಳೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ಕಾನೂನು ಇಲಾಖೆಯು,  ಕಂಪನಿಯು  ಅಧಿಸೂಚನೆಯ   10(ಎಫ್) ನಲ್ಲಿನ ಷರತ್ತುಗಳನ್ನು  ಪಾಲಿಸಿಲ್ಲ.  ಅಲ್ಲದೇ  ಎಸಿಸಿ ಲಿಮಿಟೆಡ್‌ ಗೆ  ಮತ್ತೊಂದು 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರಿಯುವುದು ರಾಜ್ಯ ಹಿತಾಸಕ್ತಿಯಾಗುವುದಿಲ್ಲ ಅಥವಾ 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರೆಯುವುದು  ವಿವೇಕಯುತವೂ ಅಲ್ಲ ಎಂದು ಕಾನೂನು ಇಲಾಖೆಯು ಸ್ಪಷ್ಟವಾಗಿ ಹೇಳಿದೆ.

 

2 ವರ್ಷ ಕಾನೂನುಬಾಹಿರ ಗಣಿಗಾರಿಕೆ

 

2020ರ ಅಕ್ಟೋಬರ್‍‌ 5ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಎಸಿಸಿ ಲಿಮಿಟೆಡ್‌ ಸುಮಾರು 2 ವರ್ಷಗಳ ಕಾಲ ಕಾನೂನುಬಾಹಿರವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸಿದೆ. ದಂಡ ವಸೂಲಿ ಮಾಡುವ ಆದೇಶ ಹೊರಡಿಸಿರುವುದನ್ನು ಹೊರತುಪಡಿಸಿದರೇ ಬೇರೆ ಯಾವುದೇ ಕ್ರಮವಹಿಸಿಲ್ಲ. ಕಾಮನ್ ಕಾಸ್‌/ ಯೂನಿಯನ್ ಆಫ್‌ ಇಂಡಿಯಾದ 2017ರ ಪ್ರಕರಣದಲ್ಲಿ ಸುಪ್ರೀಕೋರ್ಟ್‌ ನೀಡಿರುವ ತೀರ್ಪನ್ನು ಕಾನೂನು ಅಭಿಪ್ರಾಯದಲ್ಲಿ ಉಲ್ಲೇಖವಾಗಿದೆ.

 

ಕಾನೂನುಬದ್ಧ ಪ್ರಾಧಿಕಾರವಿಲ್ಲದೆ ಗಣಿಗಾರಿಕೆಯನ್ನು ನಡೆಸಿದರೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್‌ 21(5) ಅನ್ವಯವಾಗುತ್ತದೆ. ಹೀಗಾಗಿ ರಾಯಧನ, ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆಯ ಶೇ.100ರಷ್ಟನ್ನೂ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲದೇ  ಅಂತಹ ವಸೂಲಾತಿಯು ಕ್ರಿಮಿನಲ್ ಮೊಕದ್ದಮೆಯಿಂದ ಸ್ವತಂತ್ರವಾಗಿದೆ ಎಂದು ಕಾನೂನು ಅಭಿಪ್ರಾಯದಲ್ಲಿ ವಿವರಿಸಿದೆ.

 

‘ಆದ್ದರಿಂದ, ವಸೂಲಾತಿಯನ್ನು ಕೇವಲ ದಂಡದ ಮೊತ್ತಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಸಂಪೂರ್ಣ ₹850.21 ಕೋಟಿ ರು.ಗಳನ್ನು  ವಸೂಲಿ ಮಾಡಬೇಕು. ಕಂಪನಿಯು ರಾಜ್ಯದ ಅನುಮತಿಯಿಲ್ಲದೆ ಸುಮಾರು ಎರಡು ವರ್ಷಗಳ ಕಾಲ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದು ಎಂಎಂಡಿಆರ್ ಕಾಯಿದೆಯಡಿಯಲ್ಲಿ “ಕಾನೂನುಬಾಹಿರ ಗಣಿಗಾರಿಕೆ” ಯ ವ್ಯಾಖ್ಯಾನದೊಳಗೆ ಸ್ಪಷ್ಟವಾಗಿ ಬರುತ್ತದೆ,’ ಎಂದು ‍ಹೇಳಿರುವುದು ಗೊತ್ತಾಗಿದೆ.

 

ಜಯಂತ್‌/ ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ (2020) 18 SCC 401)  ಅಪರಾಧಗಳ ಸಂಯೋಜನೆ ಅಥವಾ ದಂಡದ ಪಾವತಿಯು ಕ್ರಿಮಿನಲ್ ಮೊಕದ್ದಮೆಗೆ ಅಡ್ಡಿಯಾಗುವುದಿಲ್ಲ. ಆಡಳಿತಾತ್ಮಕ ದಂಡಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನೂ ಉಲ್ಲೇಖಿಸಿದೆ.

 

ಹೀಗಾಗಿ, ವಿತ್ತೀಯ ದಂಡಕ್ಕೆ ಸೀಮಿತವಾದ ಪ್ರಸ್ತುತ ಇಲಾಖಾ ಕ್ರಮವು ಕಾನೂನುಬದ್ಧವಾಗಿ ಸಾಕಷ್ಟಿಲ್ಲ.  ಮತ್ತು ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್  ಕಾಯಿದೆಯ ಸೆಕ್ಷನ್ 21(1) ಮತ್ತು (2) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಅನುಗುಣವಾಗಿ, ಆಡಳಿತ ಇಲಾಖೆಯು ತಕ್ಷಣವೇ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆ, ರಾಯಧನ, ಬಡ್ಡಿ ಮತ್ತು ದಂಡದ ಶೇ. 100ರಷ್ಟು  ವಸೂಲಿಗಾಗಿ ಬೇಡಿಕೆಗಳನ್ನು ಹೆಚ್ಚಿಸಿಬೇಕಲ್ಲದೇ ಅದನ್ನು  ಜಾರಿಗೊಳಿಸಬೇಕು ಎಂದು ಹೇಳಿದೆ.

 

 

ಹಾಗೆಯೇ ಕಾನೂನುಬಾಹಿರ  ಗಣಿಗಾರಿಕೆ ಮತ್ತು ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್‌ಗಳು 21(1) ಮತ್ತು 21(2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

ಎಸಿಸಿಯನ್ನು ನಿರ್ಬಂಧಿಸಿ

 

ಈ ಪ್ರಕರಣದಲ್ಲಿ ಗಮನಾರ್ಹವಾದ ಆರ್ಥಿಕ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಲದೇ  ಬಿಡ್ಡಿಂಗ್/ಹರಾಜು ಕಾರ್ಯವಿಧಾನಗಳು ಒಳಗೊಂಡಿರುವುದರಿಂದ   ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು.  ಮತ್ತು ಕಾನೂನುಗಳ ಪರಿಪಾಲನೆಯನ್ನು  ಖಚಿತಪಡಿಸಿಕೊಳ್ಳುವವರೆಗೆ  ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ  ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಕಾನೂನು ಇಲಾಖೆಯು ಶಿಫಾರಸ್ಸು ಮಾಡಿದೆ. ಇದನ್ನು ಸಚಿವ ಎಚ್‌ ಕೆ ಪಾಟೀಲ್‌ ಅವರೂ ಸಹ ಅನುಮೋದಿಸಿದ್ದಾರೆ.

 

 

ಗಣಿ ಸಚಿವರ ಸೂಚನೆಯಲ್ಲೇನಿತ್ತು?

 

ಎಸಿಸಿ ಲಿಮಿಟೆಡ್‌ ಪುನಃ ಹರಾಜು ಮೂಲಕ ಪಡೆದಿರುವ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ನ ಯಶಸ್ವಿ ಬಿಡ್‌ದಾರರೆಂದು ಘೋಷಿಸುವ ಸಂದರ್ಭದಲ್ಲಿ 2021ರ ಸೆ.27ರಂದು ಅಫಿಡೆವಿಟ್‌ನಲ್ಲಿ ಸಲ್ಲಿಸಿರುವ ಅಂಡರ್‍‌ ಟೇಕಿಂಗ್‌ನ ಷರತ್ತಿಗೆ ಒಳಪಟ್ಟು ಎಂಡಿಪಿಎ ಕಾಯ್ದೆಯನ್ನು ಕಾರ್ಯಗತಗೊಳಿಸುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸದ್ಯ ಲೆಟರ್ ಆಫ್‌ ಇಂಟೆಂಟ್‌ನ ಅವಧಿಯು ಮುಕ್ತಾಯವಾಗುತ್ತಿರುವುದರಿಂದ ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಆದೇಶವನ್ನು ಪಾಲಲಿಸುವ ಷರತ್ತಿಗೆ ಒಳಪಟ್ಟು ಸದರಿಯವರಿಂದ ಪುನಃ ಅಫಡೆವಿಟ್‌ ಪಡೆದು ಎಸಿಸಿ ಲಿಮಿಟೆಡ್‌ಗೆ ಎಂಡಿಪಿಎನ್ನು ಕಾರ್ಯಗತ ಮಾಡುವ ಕುರಿತಂತೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಸಲ್ಲಿಸಬೇಕು ಎಂದು ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಸೂಚಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಉಪನಿರ್ದೇಶಕರ ಪತ್ರದಲ್ಲೇನಿದೆ?

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮುಖ್ಯವಾಗಿ ರಾಜಸ್ವ ಸಂಗ್ರಹಿಸುವ ಇಲಾಖೆಯಾಗಿದೆ. ಮುಖ್ಯಮಂತ್ರಿಯವರು ಇಲಾಖೆಯ ರಾಜಸ್ವ ಸಂಗ್ರಹನೆಯ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿರುತ್ತಾರೆ. ಪ್ರಸ್ತುತ ಪ್ರಕರಣದಲ್ಲಿ ಎಸಿಸಿ ಲಿಮಿಟೆಡ್‌ ಹೊಂದಿರುವ ಗಣಿ ಗುತ್ತಿಗೆ (ಸಂಖ್ಯೆ 2641)ರ ಮೇಲೆ ರಾಜಧನ ಹಾಗೂ ದಂಡದ ಬಾಕಿ ಮೊತ್ತ ಸೇರಿ 850,21,08,522 ಗಳಷ್ಟನ್ನು ಗಣಿ ಗುತ್ತಿಗೆದಾರರು ಪಾವತಿಸಬೇಕಾಗಿದೆ. ಈ ಒತ್ತವನ್ನು ಪಾವತಿಸುವ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ 03 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಉಪ ನಿರ್ದೇಶಕರು ಕಡತದಲ್ಲಿ ದಾಖಲಿಸಿದ್ದರು.

 

ಅಲ್ಲದೇ ಈ ಸಂದರ್ಭದಲ್ಲಿ ಎಸಿಸಿಸ ಲಿಮಿಟೆಡ್‌ ಅವರು ಹೊಸದಾಗಿ ಹರಾಜಿನಲ್ಲಿ ಪಡೆದಿರುವ ಮತ್ತೊಂದು ಖನಿಜ ಬ್ಲಾಕ್‌ ಆದ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಬ್ಲಾಕ್‌ಗೆ ಕರಾರು ಅಮಲ್ಜಾರಿಗಾಗಿ ಶಾಸನಬದ್ಧ ದಾಖಲೆಗಳು ಮತ್ತು ಅಂಡರ್‍‌ ಟೇಕಿಂಗ್ ಸಲ್ಲಿಸಿದ್ರೂ ಸಹ ಈ ಸಂಸ್ಥೆಯು ಈಗಾಗಲೇ ಹೊಂದಿರುವ ಮತ್ತೊಂದು ಗಣಿ ಗುತ್ತಿಗೆಗೆ ಸರ್ಕಾರಕ್ಕೆ 850 ಕೊಟಿ ಬಾಕಿ ಉಳಿಸಿಕೊಂಡಿರುವುದರಿಂದ ಹೊಸದಾಗಿ ಹರಾಜಿನಲ್ಲಿ ಪಡೆದಿರುವ ಮತ್ತೊಂದು ಗಣಿ ಗುತ್ತಿಗೆಯ ಅಮಲ್ಜಾರಿ ವಿಚಾರವು ಅತೀ ಸೂಕ್ಷ್ಮ ಮತ್ತು ಪ್ರಮುಖ ವಿಷಯವಾಗಿದೆ ಎಂದು ವಿವರಿಸಿದ್ದರು.

 

‘ಇದು ಆರ್ಥಿಕ ಅಂಶಗಳನ್ನೂ ಒಳಗೊಂಡಿದೆ. ಹೀಗಾಗಿ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದ ನಂತರ ಸೂಕ್ತವಾಗಿ ಪರಿಶೀಲಿಸಬೇಕಿತ್ತು. ಸರಿ ಸುಮಾರು 850 ಕೋಟಿ ರು.ಗಳ ರಾಜಸ್ವ ಒಳಗೊಂಡಿರುವುದರಿಂದ ಆರ್ಥಿಕ ಇಲಾಖೆಯ ಸಹಮತಿ, ಅಭಿಪ್ರಾಯ ಪಡೆದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬಹುದಾಗಿದೆ,’ ಎಂದು ಉಪ ನಿರ್ದೇಶಕರು ಕಡತದಲ್ಲಿ 2025ರ ಡಿಸೆಂಬರ್‍‌ 24ರಂದೇ ಸಲಹೆ ನೀಡಿದ್ದರು.

 

ಆದರೂ ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ. ಮೇಲಾಗಿ ಕಾನೂನು ಇಲಾಖೆಯ ಶಿಫಾರಸ್ಸಿನ ಅಭಿಪ್ರಾಯವು ಕೈ ಸೇರುವ ಮುನ್ನವೇ  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಕೇಂದ್ರ ಸರ್ಕಾರದ ನಿರ್ದೇಶನ ಕೋರಿದೆ. ಕೇಂದ್ರ ಸರ್ಕಾರದ ನಿರ್ದೇಶನ ಕೋರಲು ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರು ಅನುಮೋದಿಸಿರುವುದು ಸಹ ಗೊತ್ತಾಗಿದೆ.

 

ಕೋರಿರುವ ನಿರ್ದೇಶನದಲ್ಲೇನಿದೆ?

 

ರಾಜ್ಯ ಸರ್ಕಾರಕ್ಕೆ 850 ಕೋಟಿ ರುಪಾಯಿ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು 2026ರ ಜನವರಿ 7ರಂದು  ನೇರವಾಗಿ ಕೇಂದ್ರ ಸರ್ಕಾರದ ನಿರ್ದೇಶನ ಕೋರಿದ್ದಾರೆ.

 

ಭಾರೀ ಪ್ರಮಾಣದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್ ಗೆ ಗುತ್ತಿಗೆ ಕರಾರು ಪತ್ರವನ್ನು ಕಾರ್ಯಗತಗೊಳಿಸುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವ (Director, DMG Letter No.:DMG-17012/15/2021/2025-26, dated:03.01.2026) ಸಲ್ಲಿಸಿದ್ದರು. ಈ ಪ್ರಸ್ತಾವದ ಕುರಿತು ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ 2025ರ ಡಿಸೆಂಬರ್‍‌ 15ರಂದು ಸಭೆ ನಡೆದಿತ್ತು.

 

ಲೆಟರ್ ಆಫ್‌ ಇಂಟೆಂಟ್‌ ಅವಧಿಯ ಸಿಂಧುತ್ವವು 2026ರ ಜನವರಿ 3ರಂದು ಮುಕ್ತಾಯಗೊಂಡಿದೆ. ಅದನ್ನು ಈ ದಿನಾಂಕಕ್ಕಿಂತ ಮೊದಲು ಕಾರ್ಯಗತಗೊಳಿಸಬೇಕಾಗಿದೆ ಎಂಬ ಕಾರಣವನ್ನು ಮುಂದಿರಿಸಿರುವ ಸರ್ಕಾರವು ಲೆಟರ್ ಆಫ್‌ ಇಂಟೆಂಟ್‌ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಿರುವುದು ಗೊತ್ತಾಗಿದೆ.

 

ಎಸಿಸಿ ಲಿಮಿಟೆಡ್‌ನಿಂದ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಮತ್ತು ಪಾವತಿಸಲು ಬಾಕಿ ಉಳಿಸಿಕೊಂಡಿದ್ದ ಮೊತ್ತದ ಕುರಿತು 2025ರ ಡಿಸೆಂಬರ್ 15ರಂದು ನಡೆದಿದ್ದ ಸಭೆಯಲ್ಲಿ ಚರ್ಚಿಸಲಾಗಿತ್ತು. ಲೆಟರ್ ಆಫ್ ಇಂಟೆಂಟ್‌ ಅವಧಿಯ ಸಿಂಧುತ್ವವು 2026ರ ಜನವರಿ 3ರಂದು ಮುಕ್ತಾಯಗೊಳ್ಳಲಿದೆ. ಮತ್ತು ಇದರ ಎಂಡಿಪಿಎಯನ್ನು 2026ರ ಜನವರಿ 3ಕ್ಕಿಂತ ಮೊದಲು ಕಾರ್ಯಗತಗೊಳಿಸಬೇಕಿದೆ. ಹೀಗಾಗಿ ಲೆಟರ್ ಆಫ್‌ ಇಂಟೆಂಟ್‌ ಅವಧಿಯನ್ನು ವಿಸ್ತರಿಸಲು 2026ರ ಜನವರಿ 2ರಂದೇ ಎಸಿಸಿ ಲಿಮಿಟೆಡ್‌ ಕೋರಿತ್ತು.

 

ಈ ಕೋರಿಕೆ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕ್ಷಿಪ್ರಗತಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ಎಂಎಂಡಿಆರ್ ಕಾಯ್ದೆ 1957ರ ಸೆಕ್ಷನ್ 31ರ ಅನ್ವಯ ಲೆಟರ್ ಅಫ್‌ ಇಂಟೆಂಟ್‌ ಅವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲು ಭಾರತ ಸರ್ಕಾರದ ಗಣಿ ಸಚಿವಾಲಯದಿಂದ ನಿರ್ದೇಶನ ಪಡೆಯಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಪ್ರಸ್ತಾವಿಸಿದ್ದರು.

 

ಸೆಕ್ಷನ್ 31ರಲ್ಲೇನಿದೆ?

 

ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 (MMDR ಕಾಯ್ದೆ) ದ ಸೆಕ್ಷನ್ 31ರಲ್ಲಿ ವಿಶೇಷ ಪ್ರಕರಣಗಳಲ್ಲಿ ನಿಯಮಗಳ ಸಡಿಲಿಕೆ ಮಾಡಲು ಅವಕಾಶವಿದೆ. ಖನಿಜ ಅಭಿವೃದ್ಧಿಗೆ ಅಗತ್ಯವೆಂದು ಪರಿಗಣಿಸಿದಲ್ಲಿ ಖನಿಜ ರಿಯಾಯಿತಿಗಳಿಗೆ (ಅನುಮತಿ, ಪರವಾನಗಿಗಳು, ಗುತ್ತಿಗೆಗಳು) ವಿನಾಯಿತಿಗಳನ್ನು ನೀಡಲು ಅಥವಾ ಪ್ರಮಾಣಿತ ನಿಯಮಗಳನ್ನು ಸಡಿಲಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಇದು ವಿಶಿಷ್ಟ ಸಂದರ್ಭಗಳು ಎಂದು ದಾಖಲಾಗಿರಬೇಕು. ಇದರ ಮೇಲ್ವಿಚಾರಣೆ ಅಧಿಕಾರವನ್ನು ಈ ಕಾಯ್ದೆಯ ಸೆಕ್ಷನ್‌ 31ರಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಕಲ್ಪಿಸಿದೆ. ಈ ಸಂಗತಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯು ಗಮನಿಸಿದೆ ಎಂದು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಸೆಕ್ಷನ್ 13 ರ ಅಡಿಯಲ್ಲಿನ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗಿಂತ ಭಿನ್ನವಾಗಿವೆ. ಖನಿಜಗಳಿಗೆ ಪರಿಶೋಧನಾ ಪರವಾನಗಿಗಳು ಮತ್ತು ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದು, ಷರತ್ತುಗಳು, ಕಾರ್ಯವಿಧಾನಗಳು, ಶುಲ್ಕಗಳು ಮತ್ತು ರಾಯಧನಗಳನ್ನು ನಿಗದಿಪಡಿಸುವುದು, ಪರಿಶೋಧನೆ ಮತ್ತು ಹೊರತೆಗೆಯುವಿಕೆಯನ್ನು ನಿಯಂತ್ರಿಸಲು ನಿಯಮ ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ ಎಂದು ಕೇಂದ್ರ ಸರ್ಕಾರದ ಗಮನಸೆಳೆದಿರುವುದು ತಿಳಿದು ಬಂದಿದೆ.

 

‘ಈ ಮೇಲಿನ ಸಂಗತಿಗಳು ಮತ್ತು ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲೆಟರ್ ಆಫ್‌ ಇಂಟೆಂಟ್‌ನ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಈ ಸಂದರ್ಭದಲ್ಲಿ ಎಂಡಿಪಿಎಯನ್ನು ಕಾರ್ಯಗತಗೊಳಿಸಲು ಭಾರತ ಸರ್ಕಾರದ ಗಣಿ ಸಚಿವಾಲಯದಿಂದ ಸೂಕ್ತ ನಿರ್ದೇಶನಗಳನ್ನು ಕೋರಲಾಗಿದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಪತ್ರದಲ್ಲಿ ಮತ್ತೇನಿದೆ?

 

ಕಲಬುರ್ಗಿ ಜಿಲ್ಲೆಯ ಕಣ್ಣೂರು (ವಾಡಿ ಪ್ರದೇಶ) ಸುಣ್ಣದಕಲ್ಲು ಬ್ಲಾಕ್‌ನ 550 ಹೆಕ್ಟೇರ್ ವಿಸ್ತೀರ್ಣದ (ಸರ್ಕಾರಿ ಭೂಮಿ 16.35 ಹೆಕ್ಟೇರ್ ಮತ್ತು 533.65 ಹೆಕ್ಟೇರ್ ಪಟ್ಟಾ ಭೂಮಿ) ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಟೆಂಡರ್ ಆಹ್ವಾನಿಸಿತ್ತು. 2020ರ ಅಕ್ಟೋಬರ್‍‌ 5ರಂದು ಟೆಂಡರ್ ಹರಾಜಾಗಿತ್ತು. ಇದರಲ್ಲಿ ಎಸಿಸಿ ಲಿಮಿಟೆಡ್ ಅತೀ ಹೆಚ್ಚು ಬಿಡ್‌ನ್ನು ಅಂದರೆ ಐಬಿಎಂನ ಸರಾಸರಿ ಬೆಲೆ ಶೇ. 35.15ರಷ್ಟು ಉಲ್ಲೇಖಿಸಿತ್ತು. ಎಸಿಸಿ ಲಿಮಿಟೆಡ್ ಅನ್ನು ಆದ್ಯತೆಯ ಬಿಡ್ಡರ್ ಎಂದು ಘೋಷಿಸಲಾಗಿತ್ತು.

 

2021ರ ಜನವರಿ 4ರಂದು ಲೆಟರ್ ಅಫ್‌ ಇಂಟೆಂಟ್‌ನ್ನು ನೀಡಲಾಗಿತ್ತು. ಇದು ಒಟ್ಟು 5 ವರ್ಷಗಳ ಅವಧಿ ಎಂದರೇ 2026ರ ಜನವರಿ 3ರಂದು ಮುಕ್ತಾಯಗೊಳ್ಳಲಿದೆ.

 

ಎಸಿಸಿ ಲಿಮಿಟೆಡ್ ಅನ್ನು ಯಶಸ್ವಿ ಬಿಡ್ಡರ್ (ಎಂ.ಎಲ್. ಸಂಖ್ಯೆ. 2641) ಎಂದು ಘೋಷಿಸುವಾಗಲೇ ಕಂಪನಿಯು ನಿರ್ವಹಿಸುವ ಗಣಿಗಾರಿಕೆ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಬಾಕಿ ಇರುವ ಮತ್ತು ಪಾವತಿಸಬೇಕಾದ ಎಲ್ಲಾ ಬಾಕಿಗಳನ್ನು ಪಾವತಿಸಲು ಕಂಪನಿಯು ಕ್ರಮ ಕೈಗೊಳ್ಳುತ್ತದೆ ಎಂದು ಟೆಂಡರ್ ದಾಖಲೆಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ 2021ರ ಸೆ.27ರಂದು ಪ್ರಮಾಣ ಪತ್ರ ರೂಪದಲ್ಲಿ ಕಂಪನಿಯು ಸಲ್ಲಿಸಿತ್ತು.

 

1957 ರ ಎಂಎಂಡಿಆರ್ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರ 2021ರ ಡಿಸೆಂಬರ್ 29ರಂದು ಮೆಸ್ಸರ್ಸ್ ಎಸಿಸಿ ಲಿಮಿಟೆಡ್ ಅನ್ನು ಯಶಸ್ವಿ ಬಿಡ್ಡರ್ ಎಂದು ಗುರುತಿಸಲಾಗಿತ್ತು.

 

ಪ್ರಸ್ತುತ ಸಂದರ್ಭದಲ್ಲಿ ಲೆಟರ್ ಆಫ್‌ ಇಂಟೆಂಟ್ ಹೊಂದಿರುವವರು ಸಿಎಫ್‌ಇ ಗಾಗಿ ಒಪ್ಪಿಗೆಯನ್ನು ಸಲ್ಲಿಸಿಲ್ಲ. ಆದಾಗ್ಯೂ, ಗುಲ್ಬರ್ಗಾದ ಕೆಎಸ್‌ಪಿಸಿಬಿ ಪ್ರಾದೇಶಿಕ ಕಚೇರಿಯಿಂದ ಬಂದ ಪತ್ರವನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಸಿಎಫ್‌ಇ ಪ್ರಕ್ರಿಯೆಯಲ್ಲಿದೆ ಮತ್ತು ಎಂಡಿಪಿಎಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅಗತ್ಯವನ್ನು ಪೂರೈಸಲು ಈ ಪತ್ರವನ್ನು ನೀಡಲಾಗಿದೆ ಎಂದು ಹೇಳಲಾಗಿತ್ತು.

 

ಪ್ರಸ್ತುತ, ಎಸಿಸಿ ಲಿಮಿಟೆಡ್, (ಎಂ.ಎಲ್. ಸಂಖ್ಯೆ. 2461ರ) ಗುತ್ತಿಗೆದಾರರಾಗಿದ್ದಾರೆ. ರಾಯಧನ/ಬಡ್ಡಿಗಾಗಿ ರೂ. 492.51 ಕೋಟಿಗಳನ್ನು ಒಳಗೊಂಡಂತೆ ರೂ. 850.21 ಕೋಟಿ ಮೊತ್ತದ ಬಾಕಿಯನ್ನು ಹೊಂದಿದೆ. ಅದರಲ್ಲಿ ರೂ. 125.00 ಕೋಟಿಗಳನ್ನು ಠೇವಣಿ ಮಾಡಲಾಗಿದೆ. ರೂ. 367.51 ಕೋಟಿ ಬಾಕಿಯನ್ನು ಹೊರತುಪಡಿಸಿ ರೂ. 482.69 ಕೋಟಿ ರು ದಂಡ ವಿಧಿಸಲಾಗಿದೆ.

 

ಕಂಪನಿಯು ಈಗಾಗಲೇ ಹೊಂದಿರುವ ಯಾವುದೇ ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದಂತೆ ಎಲ್ಲಾ ಬಾಕಿಗಳನ್ನು ಪಾವತಿಸಲು ರಾಜ್ಯ ಸರ್ಕಾರಕ್ಕೆ ಕಂಪನಿಯು ಹೊಣೆಗಾರಿಕೆ ಹೊಂದಿದೆ. ಗುತ್ತಿಗೆದಾರರು ಬಾಕಿಗಳನ್ನು ಪಾವತಿಸಿಲ್ಲ. ಬದಲಿಗೆ ರಾಜ್ಯ ಸರ್ಕಾರಕ್ಕೆ ರಾಯಧನ ಬಾಕಿ ಮತ್ತು ದಂಡವನ್ನು ಪಾವತಿಸುವ ಸಂಬಂಧ ಕರ್ನಾಟಕದ ಉಚ್ಚ ನ್ಯಾಯಾಲಯ ಮೊರೆ ಹೊಕ್ಕಿದೆ.

 

ಮೌಲ್ಯಮಾಪನ ಮತ್ತು ಹಿಂದಿನ ಉತ್ಪಾದನೆಯಿಂದ ಉಂಟಾಗುವ ರಾಯಧನ/ಬಡ್ಡಿಯ ವಸೂಲಿಗೆ ಸಂಬಂಧಿಸಿದಂತೆ (WP ಸಂಖ್ಯೆ 25298/2024) ಅಕ್ರಮ ಗಣಿಗಾರಿಕೆ ಆರೋಪಕ್ಕಾಗಿ 482.69 ಕೋಟಿ ರೂ. ದಂಡದ ಬೇಡಿಕೆಯನ್ನು (WP ಸಂಖ್ಯೆ 18655/2025) ಪ್ರಶ್ನಿಸಿದೆ. ಅಲ್ಲದೇ 2025ರ ಸೆ.9ರ ಪರಿಷ್ಕರಣಾ ಆದೇಶದಿಂದ ಉದ್ಭವಿಸಿರುವ ರಾಯಧನ/ಬಡ್ಡಿ ಬೇಡಿಕೆಗೆ ಸಂಬಂಧಿಸಿದ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ಹೊಸದಾಗಿ ಪರಿಗಣಿಸಲು (WP ಸಂಖ್ಯೆ 36850/2025 ) ಅರ್ಜಿ ಸಲ್ಲಿಸಿದೆ.

 

ಈ ಮೇಲಿನ ರಿಟ್ ವಿಚಾರಣೆಯಲ್ಲಿ, ಕಂಪನಿಯು ಗುತ್ತಿಗೆ ಇಲ್ಲದೆ ಮತ್ತು ಶಾಸನಬದ್ಧ ಪರವಾನಗಿಗಳಿಲ್ಲದೆ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸಿದೆ. ಮತ್ತು ಬೇಡಿಕೆಗಳು ಕಾನೂನುಬದ್ಧ ಮತ್ತು ಜಾರಿಗೊಳಿಸಬಹುದಾದಂತಹವು ಎಂದು ರಾಜ್ಯವು ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ ಎಂದು ಪತ್ರದಲ್ಲಿ ವಿವರಿಸಿದೆ.

 

ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರವು ತಕ್ಷಣದ ಅಗತ್ಯ ಕ್ರಮವನ್ನು ಪ್ರಾರಂಭಿಸಿದೆ. ಆದ್ದರಿಂದ, ಬಾಕಿ ಇರುವ ಎಲ್ಲಾ ಬಾಕಿಗಳನ್ನು ತೆರವುಗೊಳಿಸಿದ ನಂತರವೇ ಕಂಪನಿಯ ವಿನಂತಿಯನ್ನು ಪರಿಗಣಿಸಲಾಗುತ್ತದೆ ಎಂದೂ ಹೇಳಿರುವುದು ಗೊತ್ತಾಗಿದೆ.

 

ಈ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಗಣಿ) ರೋಹಿಣಿ ಸಿಂಧೂರಿ ಅವರ ಪ್ರತಿಕ್ರಿಯೆ ಪಡೆಯಲು ‘ದಿ ಫೈಲ್‌’, 2026ರ ಜನವರಿ 14ರಂದೇ ಇ-ಮೈಲ್‌ ಮೂಲಕ ಪ್ರಶ್ನಾವಳಿ ಕಳಿಸಿತ್ತು.

 

 

 

ಆದರೆ 2026 ಜನವರಿ 16ವರೆಗೂ ರೋಹಿಣಿ ಸಿಂಧೂರಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಸಚಿವ ಎಚ್‌ ಕೆ ಪಾಟೀಲ್ ಅವರಿಗೂ ಸಹ ದಿ ಫೈಲ್‌ ಇ-ಮೈಲ್ ಮೂಲಕ ಪ್ರಶ್ನಾವಳಿ ಕಳಿಸಿತ್ತು.

 

 

 

2026ರ ಜನವರಿ 16ರವರೆಗೂ ಸಚಿವ ಎಚ್‌ ಕೆ ಪಾಟೀಲ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

 

ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ದಿ ಫೈಲ್‌ 2026ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts