ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಎಂ ಡಿ ನೇಮಕ; ಅಧಿಸೂಚನೆ ರಾಜ್ಯಪಾಲರ ಗಮನದಲ್ಲೇ ಇಲ್ಲ, ಪದನಾಮ ದುರ್ಬಳಕೆ?

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ  ಜೆ ಜೆ ಪದ್ಮನಾಭ ಅವರನ್ನು  ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ರಾಜ್ಯಪಾಲರ ಪದನಾಮವನ್ನೇ ಸರ್ಕಾರವು  ದುರುಪಯೋಗಪಡಿಸಿಕೊಂಡಿತ್ತು!

 

ಜೆ ಜೆ ಪದ್ಮನಾಭ ಅವರನ್ನು  ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದ  ಪ್ರಾಧಿಕಾರ ಯಾವುದು ಎಂದು ರಾಜ್ಯಪಾಲರು ಸರ್ಕಾರದಿಂದ ಬಯಸಿದ್ದ  ಸೂಕ್ತ ಸ್ಪಷ್ಟೀಕರಣವು, ರಾಜ್ಯಪಾಲರ ಪದನಾಮವನ್ನು ದುರುಪಯೋಗಪಡಿಸಿಕೊಂಡಿತ್ತೇ ಎಂಬ ಮಾತುಗಳಿಗೆ ಪುಷ್ಟಿ ನೀಡಿದೆ.

 

ನಿಗಮದ 88 ಕೋಟಿ ರುಪಾಯಿಗಳನ್ನು  ಅಕ್ರಮವಾಗಿ ವರ್ಗಾವಣೆ ಮಾಡಿದ್ದ  ಪ್ರಕರಣದಲ್ಲಿ ಹಿಂದಿನ ಸಚಿವ ಬಿ ನಾಗೇಂದ್ರ ಅವರಿಗೆ ಸಿಬಿಐ ಪುನಃ ನೋಟೀಸ್‌ ನೀಡಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಬಯಸಿದ್ದ ಸ್ಪಷ್ಟೀಕರಣವು ಮುನ್ನೆಲೆಗೆ ಬಂದಿದೆ. ರಾಜ್ಯಪಾಲರು ಕೋರಿದ್ದ ಸ್ಪಷ್ಟೀಕರಣವು, ಈ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ.

 

ಅಲ್ಲದೇ ಜೆ ಜೆ ಪದ್ಮನಾಭ್ ಅವರನ್ನು ನಿಗಮಕ್ಕೆ  ನೇಮಿಸಿದ್ದ ನೇಮಕ ಪ್ರಾಧಿಕಾರ ಯಾರು ಎಂದು ಸ್ಪಷ್ಟವಾಗಿ ಪ್ರಶ್ನಿಸುವ  ಮೂಲಕ  ಈ ಪ್ರಕರಣದಲ್ಲಿ  ಸರ್ಕಾರವನ್ನು  ಮತ್ತೊಮ್ಮೆ  ಸಿಲುಕಿಸಲು ರಾಜ್ಯಪಾಲರು  ಯತ್ನಿಸಿರಬಹುದೇ  ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಹಾಗೆಯೇ ಜೆ ಜೆ ಪದ್ಮನಾಭ ಅವರ ನೇಮಕದ ಹಿಂದಿನ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳು, ನ್ಯೂನತೆಗಳು, ಉಲ್ಲಂಘನೆಗಳ ಪಟ್ಟಿಯೂ ಸಹ ಬಹಿರಂಗವಾಗಿದೆ.

 

ಜೆ ಜೆ ಪದ್ಮನಾಭ್ ಅವರನ್ನು ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು  ರಾಜ್ಯಪಾಲರು ನೇಮಕ ಪ್ರಾಧಿಕಾರವಾಗಿದ್ದಾರೆ. ಹೀಗಾಗಿ ಅವರ  ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯವು ರಾಜ್ಯಪಾಲರನ್ನು ಕೋರಿತ್ತು.

 

ವಿಶೇಷವೆಂದರೇ  ‘ರಾಜ್ಯಪಾಲರ ಆದೇಶ ಅನುಸಾರ ಮತ್ತು ಅವರ ಹೆಸರಿನಲ್ಲಿ’ ಎಂದು ಜೆ ಜೆ ಪದ್ಮನಾಭ ಅವರನ್ನು ನಿಗಮಕ್ಕೆ  ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ಸಮಾಜ ಕಲ್ಯಾಣ ಇಲಾಖೆಯು   ಹೊರಡಿಸಿದ್ದ ಅಧಿಸೂಚನೆಯು ರಾಜ್ಯಪಾಲರ ಗಮನದಲ್ಲೇ ಇರಲಿಲ್ಲ. ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಬಯಸಿ ಕೋರಿರುವ ಪತ್ರದ ಪ್ರಕಾರ  ಜೆ ಜೆ ಪದ್ಮನಾಭ ಅವರನ್ನು ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ರಾಜ್ಯಪಾಲರು ನೇಮಿಸಿಲ್ಲ.

 

ಹಾಗೆಯೇ ಜೆ ಜೆ ಪದ್ಮನಾಭ್ ಅವರ ನೇಮಕ ಪ್ರಕ್ರಿಯೆಗಳಲ್ಲಿ ಹಲವಾರು ನ್ಯೂನತೆಗಳೂ ಸಹ ಕಂಡು ಬಂದಿವೆ. ಪದ್ಮನಾಭ್ ಅವರ ವಿರುದ್ಧದ ಈ ಹಿಂದಿನ  ಹಲವು ಆರೋಪಗಳ ಸಂಬಂಧ ಶಿಸ್ತು ಕ್ರಮ ಜರುಗಿಸಲು ಸಹಮತಿ ವ್ಯಕ್ತಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯೇ ತನ್ನ ಅಧೀನದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಯಲ್ಲೇನಿತ್ತು?

 

ಜಾರಿ ನಿರ್ದೇಶನಾಲಯದ ಪ್ರಕಾರ ಜೆ ಜೆ ಪದ್ಮನಾಭ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ  ರಾಜ್ಯಪಾಲರೇ  ನೇಮಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರ ಕಚೇರಿಯೂ ಸೂಕ್ತ ಸ್ಪಷ್ಟೀಕರಣ ಬಯಸಿತ್ತು.  ಅಲ್ಲದೇ  2025ರ ಏಪ್ರಿಲ್‌ 11ರಂದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ  ಈ ಕುರಿತು  ಪತ್ರವನ್ನೂ ಬರೆದಿತ್ತು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಅವರು ಬರೆದಿದ್ದ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪತ್ರದ ಪ್ರಕಾರ ಜೆ ಜೆ ಪದ್ಮನಾಭ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ರಾಜ್ಯಪಾಲರು ನೇಮಿಸಿಲ್ಲ. ಆದರೆ ಈ ನಿಗಮದ ಆರ್ಟಿಕಲ್ ಆಫ್‌ ಅಸೋಸಿಯೇಷನ್‌ 14ರ ಪ್ರಕಾರ ರಾಜ್ಯಪಾಲರೇ  ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವ ಪ್ರಾಧಿಕಾರವಾಗಿದ್ದಾರೆ.

 

 

 

ಹೀಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಜೆ ಜೆ ಪದ್ಮನಾಭ ಅವರನ್ನು  ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದ ಪ್ರಾಧಿಕಾರ ಯಾವುದು ಎಂಬ ಕುರಿತು ಸೂಕ್ತ ಸ್ಪಷ್ಟೀಕರಣ ನೀಡಬೇಕು ಎಂದು ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ನೇಮಕಕ್ಕೆ ಸೂಚಿಸಿದ್ದು ಯಾರು?

 

ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಜೆ ಜೆ ಪದ್ಮನಾಭ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು  ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕಣ ಮತ್ತು ಕ್ರೀಡಾ ಸಚಿವರಾಗಿದ್ದ ಬಿ ನಾಗೇಂದ್ರ ಅವರು 2023ರ ಜೂನ್‌ 22ರಂದು  ಸೂಚಿಸಿದ್ದರು.

 

 

 

ಈ ನಿರ್ದೇಶನದ ಪ್ರಕಾರ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಜೆ ಜೆ ಪದ್ಮನಾಭ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೇಜರ್ ಮಣಿವಣ್ಣನ್ ಅವರು ಸೂಚಿಸಿದ್ದರು. ಮತ್ತು ಇದನ್ನು ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೂ ಅನುಮೋದಿಸಿದ್ದರು.

 

ಇದಾದ ನಂತರ  ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿ ಹೆಸರಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸ್ವಂತ ವೇತನ ಶ್ರೇಣಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಜೆ ಜೆ ಪದ್ಮನಾಭ ಅವರನ್ನು ಸಮಾಜ ಕಲ್ಯಾಣ ಇಲಾಖೆಯು ನೇಮಿಸಿತ್ತು.   2023ರ ಜೂನ್‌ 23ರಂದೇ ಅಧಿಸೂಚನೆ ಹೊರಡಿಸಿತ್ತು.

 

 

ಸರ್ಕಾರದ ಅಧೀನ ಕಾರ್ಯದರ್ಶಿ ಶಿವಲಿಂಗಪ್ರಭು ವಾಲಿ ಅವರು ಅಧಿಸೂಚನೆಗೆ ಸಹಿ ಮಾಡಿದ್ದರು. ಅಲ್ಲದೇ ಈ ಅಧಿಸೂಚನೆಗೆ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕಣ ಮತ್ತು ಕ್ರೀಡಾ ಸಚಿವ  ಅನುಮೋದಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು.

 

ಅಧಿಸೂಚನೆ ಹೊರಬಿದ್ದ ದಿನದಂದೇ ಜೆ ಜೆ ಪದ್ಮನಾಭ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯಭಾರ ವಹಿಸಿಕೊಂಡಿದ್ದರು.

 

 

ಕವಿತಾ ಎಂ ವಾರಂಗಲ್ ಅವರು ಕಾರ್ಯಭಾರವನ್ನು  ಹಸ್ತಾಂತರಿಸಿದ್ದರು.

 

ಕವಿತಾ ವಾರಂಗಲ್ ಅವರ ಸೇವೆಯನ್ನು ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಿಂದಿರುಗಿಸಿತ್ತು. 2023ರ ಜೂನ್‌ 27ರಂದು ಅಧಿಸೂಚನೆ ಹೊರಡಿಸಿತ್ತು.

 

 

ಇದಾದ ನಂತರ ಜೆ ಜೆ ಪದ್ಮನಾಭ ಅವರ ನೇಮಕಾತಿ ಸಂಬಂಧ ಸೂಕ್ತ ತಿದ್ದುಪಡಿ ಆದೇಶ ಹೊರಡಿಸಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು 2023ರ ಜುಲೈ 3ರಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

 

‘ಸದರಿ ಅಧಿಕಾರಿಗಳ ಮೂಲ ಹುದ್ದೆ ಉಪ ಪ್ರಧಾನ ವ್ಯವಸ್ಥಾಪಕ ಆಗಿದ್ದು ಸ್ವಂತ ವೇತನ ಶ್ರೇಣಿಯ ಮೇಲೆ ಪ್ರಧಾನ ವ್ಯವಸ್ಥಾಪಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರ್ಕಾರದ ಆದೇಶದಲ್ಲಿ ಪ್ರಧಾನ ವ್ಯವಸ್ಥಾಪಕರು ಎಂದು ನಮೂದಿಸಿದೆ. ಅಲ್ಲದೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹುದ್ದೆಗೆ ನೇಮಿಸಿ ಆದೇಶಿಸಿದೆ. ಆದ್ದರಿಂದ ಸೂಕ್ತ ತಿದ್ದುಪಡಿ ಆದೇಶ ಹೊರಡಿಸಬೇಕು,’ ಎಂದು ಪತ್ರದಲ್ಲಿ ಕೋರಿದ್ದರು.

 

 

ಇದನ್ನಾಧರಿಸಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿ‍ಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಯಾವ ಯಾವ ಇಲಾಖೆಯ ಅಧಿಕಾರಿಗಳು ಹಾಗೂ ಇವರ ಮೂಲ ಹುದ್ದೆಯ ವೇತನ ಶ್ರೇಣಿಯ, ಹುದ್ದೆ ಹೆಸರು ಮತ್ತು ಮೂಲ ಇಲಾಖೆಯ ದಾಖಲೆಗಳ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯು ಕೇಳಿತ್ತು. ಈ ಸಂಬಂಧ 2023ರ ಜುಲೈ 10ರಂದು ಪತ್ರ ಬರೆದಿತ್ತು. ಈ ಈ ಪತ್ರಕ್ಕೆ ನಿಗಮವು ಯಾವುದೇ ವರದಿ ಸಲ್ಲಿಸಿರಲಿಲ್ಲ.

 

 

ಹೀಗಾಗಿ 2023ರ ಜುಲೈ 25ರಂದು ಮತ್ತೊಮ್ಮೆ ಪತ್ರ ಬರೆದಿತ್ತು. ನಿಗಮವು 2023ರ ಆಗಸ್ಟ್‌ 5ರಂದು ವರದಿ ಸಲ್ಲಿಸಿತ್ತು.

 

 

 

 

ಈ ವರದಿ ಪ್ರಕಾರ ಈ ನಿಗಮದಲ್ಲಿ ಕಂದಾಯ, ಜಿಲ್ಲಾ ಪಂಚಾಯತ್‌, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಲೆಕ್ಕ ಪತ್ರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಕಿರಿಯ ಶ್ರೇಣಿ, ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಪೌರಾಯುಕ್ತರು, ಕೆಎಎಸ್‌ ಹಿರಿಯ ಶ್ರೇಣಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮೂಲ ಹುದ್ದೆಯಲ್ಲಿದ್ದ ಒಟ್ಟು 18 ಮಂದಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

 

 

ಈ ಪ್ರಕ್ರಿಯೆಗಳು ನಡೆಯುತ್ತಿದ್ದ ಹೊತ್ತಿನಲ್ಲೇ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಹೆಚ್‌ ಪುಟ್ಟಸ್ವಾಮಿ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ವಂದಿತಾ ಶರ್ಮಾ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು.

 

 

ಈ ದೂರಿನ ಪ್ರಕಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕೇಡರ್ಗೆ ಸರಿ ಹೊಂದದ ಕೆಳ ಹಂತದ ಜೆ ಜೆ ಪದ್ಮನಾಭ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿದ್ದರು.

 

ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿತ್ತೇ?

 

ಜೆ ಜೆ ಪದ್ಮನಾಭ ಅವರು ಮೂಲತಃ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ವೃಂದದ ಅಧಿಕಾರಿ. ಇವರ ವೇತನ ಶ್ರೇಣಿ 67,550 – 1,09,600 ರು ಆಗಿದೆ. ಆದರೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅರ್ಹತೆಗೆ 74,400-1,09,600 ವೇತನ ಶ್ರೇಣಿ ಇರಬೇಕು. ಇದರ ಪ್ರಕಾರ ಜೆ ಜೆ ಪದ್ಮನಾಭ ಅವರು ಆರನೇ ಸ್ಥಾನದಲ್ಲಿದ್ದರು. ಆದರೂ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ ಪದ್ಮನಾಭ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

 

ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೇ ಅವ್ಯವಹಾರ ಆರೋಪ

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿ‍ಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗುವ ಮುನ್ನವೇ ಪದ್ಮನಾಭ ಅವರ ವಿರುದ್ಧ 6 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆಸಿದ್ದ ಆರೋಪವಿತ್ತು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪುಟ್ಟಸ್ವಾಮಿ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರದ ಪ್ರಕಾರ ಐಎಸ್‌ಬಿ ಯೋಜನೆಯಡಿ ಕೆನರಾ ಬ್ಯಾಂಕ್‌ನ ಕಲ್ಕೆರೆ ಶಾಖೆಯ ವ್ಯವಸ್ಥಾಪಕರೊಂದಿಗೆ ಶಾಮೀಲಾಗಿ ಸುಮಾರು 6 ಕೋಟಿ ರುಗಳಿಗೂ ಹೆಚ್ಚಿನ ಅವ್ಯವಹಾರ ನಡೆಸಿದ್ದರು. ಈ ಸಂಬಂಧ ಬೆಂಗಳೂರಿನ ಮಾಗಡಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ಕೂಡ ದಾಖಲಾಗಿತ್ತು.

 

 

ಪದ್ಮನಾಭ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸುವ ಹೊತ್ತಿನಲ್ಲಿಯೂ ವಿಚಾರಣೆ ನಡೆಯುತ್ತಿತ್ತು. ಆದರೂ ಈ ಸಂಗತಿಯನ್ನು ನಿರ್ಲಕ್ಷ್ಯಿಸಿ ಸರ್ಕಾರವು ಪದ್ಮನಾಭ ಅವರನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

 

ಸುತ್ತೋಲೆ ಉಲ್ಲಂಘನೆ

 

ಯಾವುದೇ ಇಲಾಖೆಯಲ್ಲಿಯಾದರೂ ಕೆಳ ದರ್ಜೆ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆಗೆ ಸ್ವಂತ ವೇತನ ಶ್ರೇಣಿ ಆಧಾರದ ಮೇಲೆ ನೇಮಕ ಮಾಡುವುದು ಮತ್ತು ನಿಯೋಜಿಸುವುದಕ್ಕೆ ನಿರ್ಬಂಧವಿದೆ.

 

 

 

ಕರ್ನಾಟಕ ಸರ್ಕಾರದ ಸಚಿವಾಲಯವು 2023ರ ಸೆ.12ರಂದೇ ಸುತ್ತೋಲೆ ಹೊರಡಿಸಿತ್ತು.

 

 

 

 

ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಅಧೀನ ಇಲಾಖೆ, ನಿಗಮ, ಮಂಡಳಿ, ಸಂಸ್ಥೆ, ಆಯೋಗದಲ್ಲಿ ಅಧಿಕಾರಿ, ನೌಕರರು ಸ್ವಂತ ವೇತನ ಶ್ರೇಣಿ ಮೇರೆಗೆ ಮೇಲ್ದರ್ಜೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂತಹ ಪ್ರಕರಣಗಳು ಇಲಾಖೆಯಲ್ಲಿ ಮರುಕಳಿಸಬಾರದು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆಪ್ತ ಕಾರ್ಯದರ್ಶಿ ಅವರು ಅಧೀನ ಕಾರ್ಯದರ್ಶಿಗಳಿಗೆ 2023ರ ಜುಲೈ 5ರಂದೇ  ಟಿಪ್ಪಣಿ ಹೊರಡಿಸಿದ್ದರು.

 

 

 

 

ಆದರೂ ಈ ಸುತ್ತೋಲೆಯನ್ನು ಖುದ್ದು ಸಮಾಜ ಕಲ್ಯಾಣ ಇಲಾಖೆಯೇ  ಉಲ್ಲಂಘಿಸಿತ್ತು.   ಜೆ ಜೆ ಪದ್ಮನಾಭ ಅವರು ಕೆಳ ದರ್ಜೆ ಅಧಿಕಾರಿಯಾಗಿದ್ದರೂ ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿ ಮೇಲೆ ನೇಮಿಸಿತ್ತು. ಇದಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೇಜರ್ ಮಣಿವಣ್ಣನ್ ಅವರು ಅನುಮೋದಿಸಿದ್ದರು.

 

ಅದೇ ರೀತಿ ಪದ್ಮನಾಭ ಅವರು ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿಯೂ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಮಾಜ ಕಲ್ಯಾಣ ಇಲಾಖೆಯೂ ಸಹಮತಿ ನೀಡಿತ್ತು.

 

 

ಮತ್ತೊಂದು ವಿಶೇಷವೆಂದರೇ ಪದ್ಮನಾಭ್ ಅವರು  ನಿಗಮದಲ್ಲಿ ನಿಯಮಬಾಹಿರವಾಗಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಭಾರಿ ಕರ್ತವ್ಯ ಅವಧಿ ಪೂರ್ಣಗೊಂಡಿದ್ದರೂ ಸಹ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರಲಿಲ್ಲ.

 

ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ; 6 ತಿಂಗಳ ನಂತರವೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದ ಪದ್ಮನಾಭ್‌

 

ಜೆ ಜೆ ಪದ್ಮನಾಭ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 6 ತಿಂಗಳ ನಂತರವೂ ಮುಂದುವರೆಸಬೇಕಿದ್ದರೇ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕು. ಆದರೆ ಜೆ ಜೆ ಪದ್ಮನಾಭ್‌ ಅವರನ್ನು ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಮುಂದುವರೆಸುವ ಸಂಬಂಧ ಆರ್ಥಿಕ ಇಲಾಖೆಗೆ ಕಡತವನ್ನು ಸಲ್ಲಿಸಿರಲಿಲ್ಲ

 

ಬದಲಿಗೆ  ನಿಯಮಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿಯೇ ನಿಗಮದಲ್ಲಿ 88 ಕೋಟಿ ರು. ಅಕ್ರಮವಾಗಿ ವರ್ಗಾವಣೆ ಆಗಿತ್ತು. ಈ ಕುರಿತು ‘ದಿ ಫೈಲ್’ 2024ರ ಜುಲೈ 25ರಂದೇ ವರದಿ ಪ್ರಕಟಿಸಿತ್ತು.

 

ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್‌!

 

ಅಲ್ಲದೇ  ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ರುಪಾಯಿಗಳನ್ನು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿತ್ತಲ್ಲದೇ ನಿಗಮವನ್ನು ಬ್ಯಾಂಕ್‌ ಕತ್ತಲಲ್ಲಿಟ್ಟಿತ್ತು. ಈ ಕುರಿತೂ ದಿ ಫೈಲ್‌ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts