ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಆರ್ ಮಹದೇವ ಅವರು ಪ್ರೆಸ್ಟೀಜ್ ಟೆಕ್ ಪಾರ್ಕ್ 3 ಗೆ ಮಾರ್ಗಸೂಚಿಗಳ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ 103.5 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.
ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಈ ಪ್ರಕರಣದ ಬಗ್ಗೆ ಜಂಟಿ ವಿಚಾರಣೆ ನಡೆಸಲಾಗಿತ್ತಾದರೂ ಇದುವರೆಗೂ ಈ ಪ್ರಕರಣವು ಅಂತ್ಯ ಕಂಡಿಲ್ಲ.
ಆರ್ ಮಹದೇವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆಗೊಳ್ಳುವ ಮುನ್ನ ಶಿವಾಜಿನಗರ ಉಪ ನೋಂದಣಿ ಕಚೇರಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಅವಧಿಯಲ್ಲಿಯೇ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ನೋಂದಣಿ ಮಾಡಿದ್ದರು. ಇದರಿಂದ ಸರ್ಕಾರಕ್ಕೆ 103.5 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿತ್ತು ಎಂದು ಆರೋಪಿಸಲಾಗಿತ್ತು.
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೇ ಈ ಪ್ರಕರಣವು ನಡೆದಿತ್ತು. ಸಿದ್ದರಾಮಯ್ಯ ಅವರ ಅವಧಿ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ, ಮತ್ತು ಆ ನಂತರ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಈ ಪ್ರಕರಣವು ತಾರ್ಕಿಕ ಅಂತ್ಯ ಕಂಡಿಲ್ಲ.
ಸರ್ಕಾರದ ಬೊಕ್ಕಸಕ್ಕೆ ಆಗಿದ್ದ ಆರ್ಥಿಕ ನಷ್ಟದ ಕುರಿತು ಆರ್ ಮಹದೇವ ಮತ್ತು ಮತ್ತೊಬ್ಬ ಉಪ ನೋಂದಣಾಧಿಕಾರಿಯಾಗಿದ್ದ ರಾಜೇಶ್ವರಿ ಹೆಗ್ಗಡೆ ಎಂಬುವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್ ಮತ್ತು ಜಂಟಿ ಇಲಾಖೆ ವಿಚಾರಣೆ ಪ್ರಕ್ರಿಯೆಯನ್ನು ಈ ಇಬ್ಬರೂ ಉಪ ನೋಂದಣಾಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮತ್ತು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಸರ್ಕಾರವು ಕೊರತೆ ರಾಜಸ್ವ ವಸೂಲಾತಿಗಾಗಿ ದಾಖಲಿಸಿರುವ ರಿಟ್ ಅಪೀಲು (ಸಂಖ್ಯೆ – 731/2020) ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಈ ಪ್ರಕರಣದಲ್ಲಿ ಅಪೀಲು ತಿರಸ್ಕೃತಗೊಂಡಲ್ಲಿ ಪ್ರತಿವಾದಿ ನೋಂದಣಾಧಿಕಾರಿಗಳ ವಿರುದ್ಧ ಕ್ರಮವಹಿಸುವ ಮೂಲ ಉದ್ದೇಶವೇ ವಿಫಲಗೊಳ್ಳುತ್ತದೆ. ಆದ್ದರಿಂದ ಮುಂದಿನ ಆದೇಶದವರೆಗೆ ಪ್ರತಿವಾದಿ ನೋಂದಣಾಧಿಕಾರಿಗಳ ವಿರುದ್ಧ ಕ್ರಮವಹಿಸದಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಸಂಭವಿಸಿರುವ 103.5 ಕೋಟಿ ರುಪಾಯಿಗಳು ವಸೂಲಾಗಿಲ್ಲ ಮತ್ತು ಪ್ರಕರಣವು ನ್ಯಾಯಾಲಯದಲ್ಲೇ ಇರುವುದರಿಂದ ದಸ್ತಾವೇಜುಗಳನ್ನೂ ರದ್ದುಪಡಿಸಿಲ್ಲ.
2020 ರಲ್ಲಿ ನಡೆದಿದ್ದ ವಿಧಾನ ಪರಿಷತ್ ಅಧಿವೇಶನದಲ್ಲೇ ಸದಸ್ಯ ಎನ್ ರವಿಕುಮಾರ್ ಅವರು ಈ ಸಂಬಂಧ ಪ್ರಶ್ನೆ ಕೇಳಿದ್ದರು.

ಇಲಾಖೆ ವಿಚಾರಣೆ ಅಂತಿಮ ವರದಿ ಬಂದ ನಂತರ ವರದಿಯನ್ನು ಆಧರಿಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನುಕೈಗೊಳ್ಳಲಾಗುತ್ತದೆ ಎಂದು ಹಿಂದಿನ ಕಂದಾಯ ಸಚಿವರಾಗಿದ್ದ ಹಾಲಿ ಪ್ರತಿಪಕ್ಷ ನಾಯಕರಾಗಿರುವ ಆರ್ ಅಶೋಕ್ ಅವರು ವಿಧಾನ ಪರಿಷತ್‌ಗೆ ಉತ್ತರ ನೀಡಿದ್ದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ನೋಂದಣಿ ನಿಯಮಗಳು 1965ರ ನಿಯಮ 170 ಅಡಿ 2018ರ ಡಿಸೆಂಬರ್ 7ರಂದು ಕಾರಣ ಕೇಳುವ ನೋಟೀಸ್ ಜಾರಿ ಮಾಡಿತ್ತು. ಅವರಿಂದಲೇ ಏಕೆ ವಸೂಲಾಯಿಸಬಾರದು ಎಂಬುದಕ್ಕೆ ಸಕಾರಣ ನೀಡಲು ಸೂಚಿಸಿತ್ತು ಎಂದು ಉತ್ತರದಲ್ಲಿ ತಿಳಿಸಿದ್ದರು.
ಈಗಾಗಲೇ ನೋಂದಾಯಿಸಿರುವ ದಸ್ತಾವೇಜನ್ನು ಏಕಪಕ್ಷೀಯವಾಗಿ ರದ್ದುಪಡಿಸುವ ಅಧಿಕಾರವು ಇಲಾಖೆಗೆ ಇರುವುದಿಲ್ಲ. ಸಂಬಂಧಪಟ್ಟ ದಸ್ತಾವೇಜಿನ ಉಭಯ ಪಕ್ಷಕಾರರು ಒಪ್ಪಿ ರದ್ದತಿ ಪತ್ರಗಳನ್ನು ಸಹಿ ಮಾಡಿ ಹಾಜರುಪಡಿಸಿದಲ್ಲಿ ಉಪ ನೋಂದಣಾಧಿಕಾರಿಗಳು ನಿಯಮಾನುಸಾರ ಅಂತಹ ರದ್ದತಿ ಪತ್ರಗಳನ್ನು ನೋಂದಾಯಿಸುತ್ತಾರೆ. ಇಲ್ಲವಾದಲ್ಲಿ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ನೋಂದಣಿಯಾದ ದಸ್ತಾವೇಜುಗಳನ್ನುರದ್ದುಪಡಿಸಲು ದಾವೆ ದಾಖಲಿಸಬಹುದು ಎಂದು ಅಶೋಕ್ ಉತ್ತರಿಸಿದ್ದರು.

ಈಗಾಗಲೇ ನೋಂದಣಿಯಾಗಿರುವ ದಸ್ತಾವೇಜುಗಳನ್ನು ಅಮಾನತಿನಲ್ಲಿಡಲು ನೋಂದಣಿ ಕಾಯ್ದೆಯಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ನ್ಯಾಯಾಲಯದ ಅಂತಿಮ ಆದೇಶ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದ್ದರು.
2025ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿಯೂ ಸದಸ್ಯ ಡಿ ಎಸ್ ಅರುಣ್ ಅವರು ಇದೇ ಪ್ರಕರಣದ ಕುರಿತು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ 2025ರ ಡಿಸೆಂಬರ್ 17ರಂದು ಈಗಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರ ನೀಡಿದ್ದಾರೆ.
ಡಿ ಎಸ್ ಅರುಣ್ ಕೇಳಿದ್ದ ಪ್ರಶ್ನೆಯಲ್ಲೇನಿತ್ತು?
ಪ್ರೆಸ್ಟೀಜ್ ಟೆಕ್ ಪಾರ್ಕ್ 3 ಎಂಬ ಹೆಸರಿನಲ್ಲಿ 2014-15ರಲ್ಲಿ ವರ್ತೂರು ಹೋಬಳಿಯಿಂದ ಬೆಳಂದೂರು ಖಾನೆ ಗ್ರಾಮದ ಸರ್ವೇ ನಂಬರ್‍ಗಳಾದ 110/1, 110/2, 110/3ರಲ್ಲಿ ನಿರ್ಮಿಸಿದ್ದ ವಾಣಿಜ್ಯ ಸಂಕೀರ್ಣದ ವಾಣಿಜ್ಯ ಬ್ಲಾಕ್‌ಗಳನ್ನು 135 ವಿವಿಧ ಗ್ರಾಹಕರುಗಳಿಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ನೋಂದಣಿ ಮಾಡಿರುವ ತಪ್ಪಿತಸ್ಥ ಅಧಿಕಾರಿಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ.
ಉದ್ದೇಶಪೂರ್ವವಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಯನ್ನು ಅಮಾನತುಗೊಳಿಸದಿರಲು ಕಾರಣವೇನು ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.

ಸರ್ಕಾರಕ್ಕೆ ನಷ್ಟ ಉಂಟು ಮಾಡಬೇಕೆಂಬ ಕಾರಣದಿಂದಲೇ ಉದ್ದೇಶಪೂರ್ವಕವಾಗಿ ಪ್ಲಾನ್ ಮಾಡಿ 103.5 ಕೋಟಿ ನಷ್ಟ ಉಂಟುಮಾಡಿರುವ ಅಧಿಕಾರಿಯಿಂದಲೇ ಸದರಿ ಮೊತ್ತವನ್ನು ವಸಸೂಲಿ ಮಾಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದ್ದಾರೆ.
2014-15ರಲ್ಲಿ ವರ್ತೂರು ಹೋಬಳಿಯ ವರ್ತೂರು ಹೋಬಳಿಯಿಂದ ಬೆಳಂದೂರು ಖಾನೆ ಗ್ರಾಮದ ಸರ್ವೇ ನಂಬರ್‍ಗಳಾದ 110/1, 110/2, 110/3ರಲ್ಲಿ ನಿರ್ಮಿಸಿದ್ದ ವಾಣಿಜ್ಯ ಸಂಕೀರ್ಣದ ವಾಣಿಜ್ಯ ಬ್ಲಾಕ್‌ಗಳನ್ನು 135 ವಿವಿಧ ಗ್ರಾಹಕರುಗಳಿಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ನೋಂದಣಿ ಮಾಡಿರುವುದು ಸಾಬೀತಾಗಿರುವುದಿರಂದ ಈ ನೋಂದಣಿಯನ್ನು ರದ್ದುಗೊಳಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಕೋರಿದ್ದಾರೆ.
ಸರ್ಕಾರದ ಉತ್ತರವೇನು?
ಪ್ರೆಸ್ಟೀಜ್ ಟೆಕ್ ಪಾರ್ಕ್ 3 ರ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಾವೇಜುಗಳು ಶಿವಾಜಿನಗರ ಉಪ ನೋಂದಣಿ ಕಚೇರಿಯಲ್ಲಿ 2014-15ರಲ್ಲಿ ಮತ್ತು 2015-16ರಲ್ಲಿ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ, ಅಮಾನಿ ಬೆಳಂದೂರು ಗ್ರಾಮದಲ್ಲಿ ಅಭಿವೃದ್ಧಿಪಡಿಸಿದ್ದ ಸರ್ವೆನಂಬರ್ 110/1, 110/2, 110/3ರಲ್ಲಿದ್ದ 8 ಎಕರೆ 7 ಗುಂಟೆಯಲ್ಲಿ (ಹಾಲಿ ಬಿಬಿಎಂಪಿ ವ್ಯಾಪ್ತಿ) ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರ ನಿಗದಿಪಡಿಸಿದೆ.

134 ದಸ್ತಾವೇಜುಗಳಲ್ಲಿ ಉಪನೋಂದಣಾಧಿಕಾರಿ ಮಹದೇವ್ ಅವರು ಒಟ್ಟು 131 ದಸ್ತಾವೇಜುಗಳನ್ನು ನೋಂದಾಯಿಸಿದ್ದರು. ಮತ್ತು ಮತ್ತೊಬ್ಬ ಉಪ ನೋಂದಣಾಧಿಕಾರಿ ರಾಜೇಶ್ವರಿ ಹೆಗ್ಗಡೆ ಎಂಬುವರು 03 ದಸ್ತಾವೇಜುಗಳನ್ನು ನೋಂದಾಯಿಸಿರುತ್ತಾರೆ. ಇವರ ವಿರುದ್ಧ ಈಗಾಗಲೇ 2019ರ ಅಕ್ಟೋಬರ್ 28ರಂದು ಜಂಟಿ ಇಲಾಖೆ ವಿಚಾರಣೆ ಆರಂಭಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ (ಸಂಖ್ಯೆ 1754/2023) ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯವು ರಿಟ್ ಅರ್ಜಿ (ಸಂಖ್ಯೆ 100328/2023) ರಲ್ಲಿ ನೀಡಿರುವ ತೀರ್ಪಿನ ಅನ್ವಯ ಕ್ರಮವಹಿಸುವಂತೆ 2024ರ ಮಾರ್ಚ್ 20ರಂದು ತೀರ್ಪು ನೀಡಿರುತ್ತದೆ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಜೇಶ್ವರಿ ಹೆಗ್ಗಡೆ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಬೆಳಗಾವಿಯಲ್ಲಿ ಅರ್ಜಿ ಸಲ್ಲಿಸಿದ್ದು (ಸಂಖ್ಯೆ 10189/2020)ನ್ನು ದ2019ರ ಅಕ್ಟೋಬರ್ 28ರಂದು ಜಾರಿಮಾಡಿದ್ದ ದೋಷಾರೋಪಣೆ ಪಟ್ಟಿಯನ್ನು ರದ್ದುಪಡಿಸಿ ನ್ಯಾಯಾಲಯವು 2022ರ ಆಗಸ್ಟ್ 4ರಂದು ತೀರ್ಪು ನೀಡಿದೆ.
ಈ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ (ಸಂಖ್ಯೆ 100328/2023) ಸಲ್ಲಿಸಿದ್ದು ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯವು ಸರ್ಕಾರವು ಕೊರತೆ ರಾಜಸ್ವ ವಸೂಲಾತಿಗಾಗಿ ದಾಖಲಿಸಿರುವ ರಿಟ್ ಅಪೀಲು ಸಂಖ್ಯೆ (731/2020) ಪ್ರಕರಣದ ವಿಚಾರಣೆ ಬಾಕಿ ಇದ್ದು ಸದರಿ ಪ್ರಕರಣದಲ್ಲಿ ಅಪೀಲು ತಿರಸ್ಕೃತಗೊಂಡಲ್ಲಿ ಪ್ರತಿವಾದಿ ನೋಂದಣಾಧಿಕಾರಿಗಳ ವಿರುದ್ಧ ಕ್ರಮವಹಿಸುವ ಮೂಲ ಉದ್ದೇಶವೇ ವಿಫಲಗೊಳ್ಳುತ್ತದೆ. ಆದ್ದರಿಂದ ಮುಂದಿನ ಆದೇಶದವರೆಗೆ ಪ್ರತಿವಾದಿ ನೋಂದಣಾಧಿಕಾರಿಗಳ ವಿರುದ್ಧ ಕ್ರಮವಹಿಸದಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಇಲಾಖೆ ವಿಚಾರಣೆಯನ್ನು ನಡೆಸದಂತೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ 2025ರಂದು ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಮೆಮೋ ದಾಖಲಿಸಲಾಗಿದೆ. ಪ್ರಕರಣಖವು ನ್ಯಾಯಾಲಯದಲ್ಲಿ ಬಾಕಿ ಇದ್ದು ದಸ್ತಾವೇಜುಗಳ ನೋಂದಣಿ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಆರಂಭದಲ್ಲೇ ಆರ್ ಮಹದೇವ ಅವರು, ವಿಶೇಷ ಕರ್ತವ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗಲೂ ಸಹ ಅವರ ವಿರುದ್ಧ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಆಪಾದನೆಗಳು ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಮತ್ತು ಆರ್ ಮಹದೇವ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಆಡಿಯೋ ತುಣುಕುಗಳು ವೈರಲ್ ಆಗಿದ್ದನ್ನು ಸ್ಮರಿಸಬಹುದು.









