ಪತ್ರಿಕೆ, ಟಿವಿ ಜಾಹೀರಾತಿಗಾಗಿ 1,132 ಕೋಟಿ ರು. ವೆಚ್ಚ; ಈ ವರ್ಷದ ಖರ್ಚಿನಲ್ಲಿ ಸಾರಿಗೆ ಇಲಾಖೆಯೇ ನಂ.1!

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಮುಗ್ಗಟ್ಟಿನಲ್ಲಿರುವ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕೆ ಮಾತ್ರ ನೀರಿನಂತೆ ಹಣ ಸುರಿಯುತ್ತಿದೆ. ಈ ಆರ್ಥಿಕ  (2025-26) ಸಾಲಿನಲ್ಲಿ  ಕಳೆದ ನವೆಂಬರ್‌ನವರೆಗೆ 139.39 ಕೋಟಿ ರು. ವೆಚ್ಚ ಮಾಡಿದೆ.

 

ಇದರಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾಹೀರಾತು ಮತ್ತು ಪ್ರಚಾರಕ್ಕೆಂದೇ ಇದುವರೆಗೆ 588.86 ಕೋಟಿ ರು. ಖರ್ಚು ಮಾಡಿದಂತಾಗಿದೆ.

 

ಇದಲ್ಲದೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿವಿಧ ಯೋಜನೆಗಳ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ಒದಗಿಸಲು ಹಾಗೂ ಇಲಾಖೆಯ ಇತರ ಕಾರ್ಯಕ್ರಮಗಳಿಗಾಗಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಲೆಕ್ಕಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನೂ ಸೇರಿಸಿದರೆ ಈ ಮೊತ್ತವು 1,132 ಕೋಟಿ ರು.ಗಳಿಗಿಂತಲೂ ಹೆಚ್ಚಾಗಲಿದೆ.

 

2025ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ನೀಡಿರುವ ಉತ್ತರದಿಂದ ಈ ಮಾಹಿತಿ ಬಹಿರಂಗಗೊಂಡಿದೆ.

 

 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಜಾಹೀರಾತು ಮತ್ತು ಪ್ರಚಾರ ಸಂಬಂಧ 2023-24ನೇ ಆರ್ಥಿಕ ಸಾಲಿನಲ್ಲಿ 270.02 ಕೋಟಿ ರು. ಹಾಗೂ 2024-25ನೇ ಸಾಲಿನಲ್ಲಿ 179.45 ಕೋಟಿ ರು. ಮತ್ತು  2025-26ನೇ ಸಾಲಿನ ನವೆಂಬರ್‌ ಅಂತ್ಯದವರೆಗೆ 139.39 ಕೋಟಿ ರು. ಖರ್ಚು ಮಾಡಲಾಗಿದೆ.

 

 

 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2023-24ನೇ ಸಾಲಿನಲ್ಲಿ 101.74 ಕೋಟಿ ರು. ಹಾಗೂ 2024-25ನೇ ಸಾಲಿನಲ್ಲಿ 95.45 ಕೋಟಿ ರು. ಗಳನ್ನು ಪತ್ರಿಕೆಗಳಲ್ಲಿ ಮತ್ತು ಟೆಲಿವಿಷನ್‌ ಚಾನೆಲ್‌ಗಳಲ್ಲಿ ಜಾಹೀರಾತು ನೀಡಲು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

 

ಸರ್ಕಾರದ ಆಯ-ವ್ಯಯ ಘೋಷಣೆಯ ಅನುದಾನ ಬಿಡುಗಡೆಯಾಗಿದೆಯೇ,  2023 ರಿಂದ 2025ರ ರವರೆಗೆ ಜಾಹೀರಾತುಗಳನ್ನು ಪ್ರಕಟಿಸಲು ವಿನಿಯೋಗಿಸಿರುವ ಅನುದಾನವೆಷ್ಟು,  ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಆಯ-ವ್ಯಯ ಘೋಷಣೆಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ವಿವಿಧ ಇಲಾಖೆಗಳು ಮತ್ತು ನಿಗಮ-ಮಂಡಳಿಗಳು ವೆಚ್ಚಮಾಡಿರುವ ಇಲಾಖಾವಾರು ವೆಚ್ಚದ ವಿವರವನ್ನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಒದಗಿಸಿದ್ದಾರೆ.

 

 

ಈ ಮಾಹಿತಿ ಪ್ರಕಾರ ಇದುವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 35.51 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಅಂದರೆ 2024-25ನೇ ಸಾಲಿನಲ್ಲಿ 95.45 ಕೋಟಿ ರು. ವಿನಿಯೋಗಿಸಿತ್ತು. 2023-24ನೇ ಆರ್ಥಿಕ ಸಾಲಿನಲ್ಲಿ 101.74 ಕೋಟಿ ರು. ಖರ್ಚು ಮಾಡಲಾಗಿತ್ತು.

 

ಯಾವ ಇಲಾಖೆಯಿಂದ ಎಷ್ಟು ಖರ್ಚು?

 

ಈ ಆರ್ಥಿಕ ಸಾಲಿನಲ್ಲಿ ಕಳೆದ ನವೆಂಬರ್‌ ಅಂತ್ಯದವರೆಗೆ ವಾರ್ತಾ ಇಲಾಖೆಯನ್ನು ಬಿಟ್ಟರೆ, ಜಾಹೀರಾತು ಮತ್ತು ಪ್ರಚಾರಕ್ಕಾಗಿ ಕ್ಷೇತ್ರ ಪ್ರಚಾರ ಶಾಖೆಯು  ಅತಿಹೆಚ್ಚು ಹಣ ವಿನಿಯೋಗಿಸಿದ ಸಂಸ್ಥೆಯಾಗಿದೆ. ಈ ಶಾಖೆಯು 13.81 ಕೋಟಿ ರು. ಖರ್ಚು ಮಾಡಿದೆ. ಮೂರನೇಯ ಸ್ಥಾನದಲ್ಲಿ ಸಾರಿಗೆ ಇಲಾಖೆ ಇದೆ. ಇದು 13.40 ಕೋಟಿ ರು. ವಿನಿಯೋಗಿಸಿದೆ. ಇದರ ನಂತರದ ಸ್ಥಾನದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದ್ದು, ಇದು 12.17 ಕೋಟಿ ರು. ಖರ್ಚು ಮಾಡಿದೆ.

 

 

ಸಮಾಜ ಕಲ್ಯಾಣ ಇಲಾಖೆ 2.98 ಕೋಟಿ ರು., ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2.68 ಕೋಟಿ ರು. ಕಾರ್ಮಿಕ ಇಲಾಖೆ 2.27 ಕೋಟಿ ರು., ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ ಲಿಮಿಟೆಡ್‌ ಸಂಸ್ಥೆಯು 2.14 ಕೋಟಿ ರು. ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ 1.86 ಕೋಟಿ ರು., ಸಣ್ಣ ನೀರಾವರಿ ಇಲಾಖೆ 1.56 ಕೋಟಿ ರು., ಕಂದಾಯ ಇಲಾಖೆ 1.33 ಕೋಟಿ ರು., ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ 1.50 ಕೋಟಿ ರು. ಕರ್ನಾಟಕ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ 1.28 ಕೋಟಿ ರು. ಹಣ ವಿನಿಯೋಗಿಸಿವೆ.

 

2023-24ನೇ ಸಾಲಿನಲ್ಲಿ ವಾರ್ತಾಇಲಾಖೆಯನ್ನು ಬಿಟ್ಟರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಜಾಹೀರಾತಿಗೆ ಅತಿ ಹೆಚ್ಚು ಎಂದರೆ 14.70 ಕೋಟಿ ರು. ಖರ್ಚು ಮಾಡಿತ್ತು. ಈ ಆರ್ಥಿಕ ಸಾಲಿನಲ್ಲಿ ಕ್ಷೇತ್ರ ಪ್ರಚಾರ ಶಾಖೆಯು 12.21 ಕೋಟಿ ರು. ಖರ್ಚು ಮಾಡಿತ್ತು. ಸಾರಿಗೆ ಇಲಾಖೆ 9.53 ಕೋಟಿ ರು., ಬೆಂಗಳೂರು ವಿದ್ಯುಚ್ಚಕ್ತಿ ಸರಬರಾಜು ನಿಗಮ (ಬೆಸ್ಕಾಂ) 2.29 ಕೋಟಿ ರು., ಇಂಧನ ಇಲಾಖೆ 6.84 ಕೋಟಿ ರು., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 5.97 ಕೋಟಿ ರು. ವೆಚ್ಚ ಮಾಡಿದೆ.

 

 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 4.72 ಕೋಟಿ ರು., ಸಮಾಜ ಕಲ್ಯಾಣ ಇಲಾಖೆ 4.60 ಕೋಟಿ ರು., ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3.15 ಕೋಟಿ ರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 2.75 ಕೋಟಿ ರು., ಕಾರ್ಮಿಕ ಇಲಾಖೆ 1.65 ಕೋಟಿ ರು., ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ 1.31 ಕೋಟಿ ರು. ಖರ್ಚು ಮಾಡಿದ್ದವು.

 

2024-25ನೇ ಸಾಲಿನಲ್ಲಿ ವಾರ್ತಾ ಇಲಾಖೆಯು ಈಗಾಗಲೇ ತಿಳಿಸಿದಂತೆ 95.45 ಕೋಟಿ ರು. ಖರ್ಚು ಮಾಡಿದ್ದರೆ, ಸಾರಿಗೆ ಇಲಾಖೆಯು ಅತಿ ಹೆಚ್ಚು ಎಂದರೆ 25.98 ಕೋಟಿ ರು. ಖರ್ಚು ಮಾಡಿತ್ತು. ಕೇಂದ್ರ ಪರಿಹಾರ ಸಮಿತಿ 3.71 ಕೋಟಿ ರು., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 3.07 ಕೋಟಿ ರು. ಖರ್ಚು ಮಾಡಿತ್ತು. 2024-25ನೇ ಸಾಲಿನಲ್ಲಿ ಪ್ರಚಾರ ಶಾಖೆಯು 8.99 ಕೋಟಿ ರು. ಖರ್ಚು ಮಾಡಿದೆ. ಕೃಷಿ ಇಲಾಖೆ 1.47 ಕೋಟಿ ರು., ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 1.90 ಕೋಟಿ ರು., ಕನ್ನಡ ಮತ್ತು ಸಂಸ್ಕೃತಿ ಇಲಾಖೆ 1.66 ಕೋಟಿ ರು., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 1.53 ಕೋಟಿ ರು. ಖರ್ಚು ಮಾಡಿವೆ.

 

2023-24ನೇ ಸಾಲಿನಲ್ಲಿ 6.84 ಕೋಟಿ ರು. ಖರ್ಚು ಮಾಡಿದ್ದ ಇಂಧನ ಇಲಾಖೆ 2024-25ನೇ ಸಾಲಿನಲ್ಲಿ ಮತ್ತು 2025-26ನೇ ಸಾಲಿನಲ್ಲಿ ಇದುವರೆಗೆ ಒಂದು ರುಪಾಯಿಯನ್ನೂ ಜಾಹೀರಾತಿಗಾಗಿ ಖರ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ಈ ಉತ್ತರದಲ್ಲಿ ತಿಳಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಈ ಉತ್ತರ ಪ್ರಕಾರ, ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕಾಗಿದ್ದ ರಾಜ್ಯ ಶಿಕ್ಷಣ ಇಲಾಖೆಯು 2023-24ನೇ ಸಾಲಿನಲ್ಲಿ 3 ಲಕ್ಷ ರು.ಗಳನ್ನಷ್ಟೇ ಖರ್ಚುಮಾಡಿತ್ತು. 2024-25ನೇ ಸಾಲಿನಲ್ಲಿ ಒಂದು ರುಪಾಯಿಯನ್ನೂ ಜಾಹೀರಾತಿಗೆ ನೀಡಿಲ್ಲ. 2025-6 ಸಾಲಿನಲ್ಲಿ ಇದುವರೆಗೆ 4.77 ಲಕ್ಷ ರು.ಗಳನ್ನಷ್ಟೇ ವಿನಿಯೋಗಿಸಿದೆ.

 

 

ಹಣ ಕೊಟ್ಟಿದ್ದು ಯಾರಿಗೆ?

 

2023-24 ಮತ್ತು 2024-25ನೇ ಸಾಲಿನಲ್ಲಿ ಪ್ರಚಾರ ಮತ್ತು ಜಾಹೀರಾತಿಗಾಗಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯ ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನೀಡಿದ್ದಾರೆ.

 

ಜಾಹೀರಾತಿಗಾಗಿ 2023-24 ನೇ ಸಾಲಿನಲ್ಲಿ ಒಟ್ಟು 71 ಸಂಸ್ಥೆಗಳಿಗೆ 101.74 ಕೋಟಿ ರು. ಹಣ ನೀಡಲಾಗಿದೆ. ಇದರಲ್ಲಿ 29 ಪತ್ರಿಕಾ ಸಂಸ್ಥೆಗಳಾಗಿದ್ದರೆ, ಉಳಿದವು ಜಾಹೀರಾತು ಏಜೆನ್ಸಿಗಳಾಗಿವೆ. 2024-25ನೇ ಸಾಲಿನಲ್ಲಿ ಒಟ್ಟು 74 ಸಂಸ್ಥೆಗಳಿಗೆ 95.44 ಕೋಟಿ ರು. ಹಣವನ್ನು ನೀಡಲಾಗಿದೆ. ಇದರಲ್ಲಿ 29 ಪತ್ರಿಕಾ ಸಂಸ್ಥೆಗಳಾಗಿದ್ದರೆ, ಉಳಿದವು ಜಾಹೀರಾತು ಏಜೆನ್ಸಿಗಳಾಗಿವೆ.

 

ಪತ್ರಿಕೆಗಳ ವಿಶೇಷ ಸಂಚಿಕೆಗಳಿಗಾಗಿ 2023-24ನೇ ಸಾಲಿನಲ್ಲಿ 32.41 ಲಕ್ಷ ರು. ಹಾಗೂ 2024-25ನೇ ಸಾಲಿನಲ್ಲಿ 93.07 ಲಕ್ಷ ರು.ಗಳನ್ನು ಸರ್ಕಾರ ನೀಡಿದೆ. ಇದಲ್ಲದೇ ಲೇಖನ ಸಾಮಗ್ರಿಗಳಿಗಾಗಿ ಈ ಎರಡು ವರ್ಷಗಳಲ್ಲಿ ಒಟ್ಟು 3.40 ಲಕ್ಷ ರು. ಖರ್ಚು ಮಾಡಲಾಗಿದೆ. ಅಸೋಸಿಯೇಟ್‌ ಜರ್ನಲಿಸ್ಟ್‌ ಎಂಬ ಸಂಸ್ಥೆಗೆ 2023-24ನೇ ಸಾಲಿನಲ್ಲಿ 15.75 ಲಕ್ಷ ರು. ಹಾಗೂ 2024-25ನೇ ಸಾಲಿನಲ್ಲಿ 2.48 ಕೋಟಿ ರು.ಗಳನ್ನು ಸರ್ಕಾರ ನೀಡಿದೆ ಎಂದು ಮುಖ್ಯಮಂತ್ರಿಗಳು ಈ ಉತ್ತರದಲ್ಲಿ ತಿಳಿಸಿದ್ದಾರೆ. ಇದು ಪತ್ರಕರ್ತರ ಸಂಘಟನೆಯೇ, ಜಾಹೀರಾತು ಏಜೆನ್ಸಿಯೇ ಎಂಬುದು ಸ್ಪಷ್ಟವಾಗಿಲ್ಲ.

 

 

ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಜಾಹೀರಾತು ಅನುಷ್ಠಾನ ನಿಯಮಗಳನ್ವಯ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಉತ್ತರಗಳನ್ನು ನೀಡುವ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

 

ನ್ಯಾಷನಲ್‌ ಹೆರಾಲ್ಡ್‌, ಇತರೆ ಪತ್ರಿಕೆ, ಟಿವಿಗಳಿಗೆ ಜಾಹೀರಾತು, ಪ್ರಚಾರ; 3 ವರ್ಷದಲ್ಲಿ 1,076.27 ಕೋಟಿ ವೆಚ್ಚ!

 

2025ರ ಆಗಸ್ಟ್‌ನಲ್ಲಿ ನಡೆದ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿಯೂ ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಡಾ. ಧನಂಜಯ ಸರ್ಜಿ ಮತ್ತು ಸಿ.ಕೆ. ರಾಮಮೂರ್ತಿ ಮತ್ತು ಡಿ.ಎಸ್‌. ಅರುಣ್‌ ಅವರು ರಾಜ್ಯ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಮಾಡುತ್ತಿರುವ ಖರ್ಚಿನ ಕುರಿತು ಪ್ರಶ್ನೆ ಕೇಳಿದ್ದರು.

 

ಈ ಸಂದರ್ಭದಲ್ಲಿ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಿಗೆ 2023-24, 2024-25 ಮತ್ತು 2025-26ರ ಜುಲೈವರೆಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಅಂದಾಜು 1,076.27 ಕೋಟಿ ರು. ವೆಚ್ಚ ಮಾಡಿದ್ದಾಗಿ ತಿಳಿಸಿದ್ದರು. ಈ ಕುರಿತು ʻದಿ ಫೈಲ್‌ʼ ವಿವರವಾಗಿ ವರದಿ ಮಾಡಿತ್ತು.

Your generous support will help us remain independent and work without fear.

Latest News

Related Posts