ಬೆಂಗಳೂರು; ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ, ಮದ್ದೂರು ಮತ್ತು ದಾವಣಗೆರೆ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 2024 ಮತ್ತು 2025ರಲ್ಲಿ ಗಣೇಶ ಹಬ್ಬ ಸಂದರ್ಭದಲ್ಲಿ ನಡೆದಿದ್ದ ಕೋಮು ಗಲಭೆಗಳಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ಕಂಡು ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಒಪ್ಪಿಕೊಂಡಿದೆ.
ಅಲ್ಲದೇ ಈ ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಮತ್ತು ಲೋಪದಿಂದಾಗಿ ಈ ಎರಡೂ ವರ್ಷಗಳಲ್ಲಿ ಸರ್ಕಾರ, ಸಾರ್ವಜನಿಕ ವ್ಯಕ್ತಿಗಳಿಗೆ, ಅಂಗಡಿಮುಂಗಟ್ಟುಗಳಿಗೆ 4.56 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ. ಆದರೆ ಈ ಆರ್ಥಿಕ ನಷ್ಟವನ್ನು ನಿರ್ಲಕ್ಷ್ಯ ವಹಿಸಿದ್ದ ಪೊಲೀಸ್ ಅಧಿಕಾರಿಗಳಿಂದ ನಯಾ ಪೈಸೆಯನ್ನೂ ವಸೂಲಿ ಮಾಡಿಲ್ಲ.
ಕೋಮು ಗಲಭೆಗಳನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯ ವಹಿಸಿದ್ದರ ಕುರಿತು ಇದರಿಂದಾಗಿರು ಆರ್ಥಿಕ ನಷ್ಟದ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಚ್ ವಿಶ್ವನಾಥ್ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಒದಗಿಸಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

ರಾಜ್ಯದಲ್ಲಿ 2024-25 ಮತ್ತು 2025-26ನೇ ಸಾಲಿನ ಗಣೇಶ ಹಬ್ಬ ಸಂದರ್ಭದಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯದಲ್ಲಿ 2024ರಲ್ಲಿ 24 ಮತ್ತು 2025ರಲ್ಲಿ 10 ಪ್ರಕರಣ, ದಾವಣಗೆರೆಯಲ್ಲಿ 2024ರಲ್ಲಿ 6 ಮತ್ತು 2025ರಲ್ಲಿ 1 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಕೋಮು ಗಲಭೆಗಳಿಗೆ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು, ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳ ಕರ್ತವ್ಯ ಲೋಪ, ನಿರ್ಲಕ್ಷ್ಯತೆಯಿಂದ ಸರ್ಕಾರಕ್ಕೆ, ಸಾರ್ವಜನಿಕರಿಗೆ ಪ್ರತಿ ವ್ಯಕ್ತಿಗೆ, ಪ್ರತಿ ಕುಟುಂಬಕ್ಕೆ ಉಂಟಾದ ಆರ್ಥಿಕ ನಷ್ಟದ ವಿವರವನ್ನೂ ಒದಗಿಸಿದ್ದಾರೆ.
ನಿರ್ಲಕ್ಷ್ಯ, ಲೋಪದಿಂದಾಗಿ 4.56 ಕೋಟಿ ನಷ್ಟ
ನಾಗಮಂಗಲ ಟೌನ್‌ನಲ್ಲಿ 2024 ಮತ್ತು 2025ನೇ ಸಾಲಿನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ನಡದಿದ್ದ ಕೋಮು ಗಲಭೆ ಪ್ರಕರಣಗಳಲ್ಲಿ ಡಿವೈಎಸ್ಪಿ ಡಾ ಸುಮಿತ್ ಆರ್ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ರವಿ ಬಿ ಜೆ, ಹೆಡ್ ಕಾನ್ಸ್‌ಟೆಬಲ್ ರಮೇಶ್ ಎಂಬ ಅವರ ಕರ್ತವ್ಯ ನಿರ್ಲಕ್ಷ್ಯ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇವರ ನಿರ್ಲಕ್ಷ್ಯ ಮತ್ತು ಲೋಪದಿಂದಾಗಿ ಒಟ್ಟಾರೆ 4,56,45,000 ರು ನಷ್ಟವಾಗಿದೆ.

ಆದರೂ ಈ ಅಧಿಕಾರಿಗಳಿಂದ ನಷ್ಟ ವಸೂಲು ಮಾಡಿಲ್ಲ. ಬದಲಿಗೆ ಇವರಿಂದ ಆರ್ಥಿಕ ನಷ್ಟ ಉಂಟಾಗಿರುವುದಿಲ್ಲ. ಅದರೂ ಕರ್ತವ್ಯ ಲೋಪದ ಬಗ್ಗೆ ಶಿಸ್ತು ಕ್ರಮ ವಹಿಸಲಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ.
ಡಾ ಸುಮಿತ್ ಆರ್, ಅಶೋಕ್ ಕುಮಾರ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ರವಿ, ರಮೇಶ್, ಅವರಿಗೆ ವಾರ್ಷಿಕ ವೇತನ ಬಡ್ತಿಯನ್ನು 3 ತಿಂಗಳ ಕಾಲ ಪರಿಣಾಮ ಬೀರದಂತೆ ಮುಂದೂಡಿದೆ ಎಂದು ಮಾಹಿತಿ ನೀಡಿದೆ.
ಮದ್ದೂರಿನಲ್ಲಿ ನಡೆದಿದ್ದ ಗಲಭೆಗೆ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಎಂ ಅವರಿಂದ ಕರ್ತವ್ಯ ಲೋಪ, ನಿರ್ಲಕ್ಷ್ಯ ಉಂಟಾಗಿದೆ. ಆದರೂ ಆರ್ಥಿಕ ನಷ್ಟ ಉಂಟಾಗಿರುವುದಿಲ್ಲ. ಆದಾಗ್ಯೂ ಕರ್ತವ್ಯ ಲೋಪದ ಬಗ್ಗೆ ಶಿಸ್ತು ಕ್ರಮ ಜರುಗಿಸಿದೆ. ಕಾರಣ ಕೇಳಿ ನೋಟೀಸ್ ಮತ್ತು ದೋಷಾರೋಪಣೆ ಪಟ್ಟಿ 1,2,3,4ನ್ನ ಹೊರಡಿಸಿದೆ ಎಂದು ಮಾಹಿತಿ ನೀಡಿದೆ.
ನಾಗಮಂಗಲ ಮತ್ತು ಮದ್ದೂರು ತಾಲೂಕಿನಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣಗಳಲ್ಲಿಯೇ ಅತೀ ಹೆಚ್ಚು ನಷ್ಟವುಂಟಾಗಿರುವುದು, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.


ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಯಾವೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ ಲೋಪವೂ ಕಂಡು ಬಂದಿಲ್ಲ ಎಂದು ಹೇಳಿರುವ ಗೃಹ ಸಚಿವರು ಆರ್‍ಎಂಸಿ ಯಾರ್ಡ್ ಪೊಲೀಸ್ ಸ್ಟೇಷನ್‌ನಲ್ಲಿ ಪಿಎಸ್ಐ ಸಚಿನ್ ಬಿರಾದರ್ ಅವರ, ಷಣ್ಮುಖ, ವತ್ಸಲಾ ಟಿ ಅವರ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಮಾಹಿತಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಕೋಮು ಗಲಭೆ ಉಂಟಾಗಲು ಇವರುನೇರವಾಗಿ ಕಾರಣಕರ್ತರಲ್ಲ. ಹೀಗಾಗಿ ಪ್ರಕರಣ ದಾಖಲಿಸಿಲ್ಲ. ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ. ಅಮಾನತಿನ ಆದೇಶ ಮತ್ತು ದೋಷಾರೋಪಣೆ ಹೊರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶ್ವನಾಥ್ ಪ್ರಶ್ನೆಯಲ್ಲೇನಿತ್ತು?
2024-25 ಮತ್ತು 2025-26ರ ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಪ್ರತ್ಯೇಕವಾಗಿ ಪ್ರತಿಯೊಂದು ಗಲಭೆಗಳಿಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ/ಜಿಲ್ಲಾ ಪೊಲೀಸರ/ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳ ಕರ್ತವ್ಯಲೋಪ/ ನಿರ್ಲಕ್ಷ್ಯತೆಯಿಂದ ಸರ್ಕಾರಕ್ಕೆ/ಸಾರ್ವಜನಿಕರಿಗೆ/ಪ್ರತಿ ವ್ಯಕ್ತಿಗೆ/ಪ್ರತಿ ಕುಟುಂಬಕ್ಕೆ ಉಂಟಾದ ಆರ್ಥಿಕ ನಷ್ಟ ಎಷ್ಟು, ಈ ಎರಡು ವರ್ಷಗಳ ಕೋಮು ಗಲಭೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯತೆ/ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆ ಹಾಗೂ ಪೊಲೀಸ್ ಠಾಣೆ/ವಿಭಾಗವಾರು/ಘಟಕವಾರು ಪ್ರತ್ಯೇಕವಾಗಿ ದಾಖಲೆಗಳೊಂದಿಗೆ ವರದಿ ನೀಡಬೇಕು ಎಂದು ಕೋರಿದ್ದರು.
ಈ ಘಟನೆಗಳ ಬಗ್ಗೆ ಕೈಗೊಳ್ಳಲಾದ ತನಿಖೆಗಳ ವರದಿಗಳ ಬಗ್ಗೆ ನಿರ್ಲಕ್ಷ್ಯತೆ ತೋರಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಕೈಗೊಂಡ ಕ್ರಮದ ಬಗ್ಗೆ ಪ್ರತ್ಯೇಕವಾಗಿ ವರದಿ ನೀಡಬೇಕು. ಹಾಗೂ ಈ ಘಟನೆಗಳ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಅಲ್ಪ ಸಂಖ್ಯಾತರ ಆಯೋಗವು ತನಿಖೆ ಕೈಗೊಂಡಿದ್ದಲ್ಲಿ ಸದರಿ ತನಿಖಾ ಸಂಸ್ಥೆಗಳಿಂದ ನಡೆಸಿದ ನಡೆಸಿ ಸಲ್ಲಿಸಿದ ವರದಿಯನ್ವಯ ಸರ್ಕಾರಕ್ಕೆ/ಪ್ರತಿ ವ್ಯಕ್ತಿಗೆ ಸರ್ಕಾರಿ ಸಂಸ್ಥೆಗೆ/ಖಾಸಗಿ ಸಂಸ್ಥೆಗಳಿಗೆ ಉಂಟಾದ ಆರ್ಥಿಕ ನಷ್ಟ ಎಷ್ಟು ಎಂದು ಪ್ರಶ್ನಿಸಿದ್ದರು.

ಈ ಗಲಭೆಗಳ ಬಗ್ಗೆ ಕರ್ತವ್ಯ ಲೋಪ ನಿರ್ಲಕ್ಷ್ಯತೆ ಎಸಗಿದ ಅಧಿಕಾರಿಗಳ ವಿರುದ್ಧ ಅಪರಾಧ ಮೊಕದ್ದೊಮೆ ಹೂಡಲಾಗಿದೆಯೇ, ಅಪರಾಧ ಮೊಕೊದ್ದಮೆ ದಾಖಲಿಸದಿದ್ದಲ್ಲಿ ದಾಖಲಿಸದಿರಲು ಕಾರಣವೇನು, ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನಷ್ಟವು ಸರ್ಕಾರಕ್ಕೆ/ಬಡಜನರಿಗೆ/ಸಂಸ್ಥೆಗಳಿಗೆ ಇತರೆ ವ್ಯಾಪಾರಸ್ಥರಿಗೆ ಉಂಟಾಗಿರುವ ನಷ್ಟವನ್ನು ಗಲಭೆ/ಘಟನೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತೆ ತೋರಿದ ಪೊಲೀಸ್ ಅಧಿಕಾರಿಗಳಿಂದ ಉಂಟಾದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಹಿತಿಯನ್ನು ಕೋರಿದ್ದರು.
ಈ ಆರ್ಥಿಕ ನಷ್ಟವನ್ನು ಗಲಭೆ ನಿಯಂತ್ರಿಸಲು ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳಿಂದ ವಸೂಲಿ ಮಾಡದಿರಲು ಕಾರಣವೇನು, ಇದುವರೆಗೂ ಕ್ರಮ ಕೈಗೊಳ್ಳದಿದ್ದಲ್ಲಿ ಈಗಲಾದರೂ ಸರ್ಕಾರಕ್ಕೆ ಸಾರ್ವಜನಿಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಗಲಭೆ ನಿಯಂತ್ರಿಸಲು ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ವರದಿ ನೀಡಬೇಕು ಎಂದು ಕೋರಿದ್ದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಎರಡು ಕೋಮುಗಳ ನಡುವೆ ನಡೆದಿದ್ದ ಸಂಘರ್ಷ ವೇಳೆಯಲ್ಲಿ ಮುಸ್ಲಿಂ ಮತ್ತು ಇತರೆ ಜನಾಂಗಕ್ಕೆ ಸೇರಿದವರಿಗೆ ಆಗಿರುವ ಆರ್ಥಿಕ ನಷ್ಟದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ನೀಡಿರುವ ನಷ್ಟದ ಮೊತ್ತದ ಮಧ್ಯೆ ವ್ಯತ್ಯಾಸವಿರುವುದು ಕಂಡು ಬಂದಿತ್ತು.
ಕೋಮು ಸಂಘರ್ಷ ಪ್ರಕರಣ; ನಾಗಮಂಗಲದಲ್ಲಿ ಸಂಭವಿಸಿದ್ದ ನಿಜವಾದ ಆರ್ಥಿಕ ನಷ್ಟವೆಷ್ಟು?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರತ್ಯೇಕವಾಗಿ ವರದಿ ಸಲ್ಲಿಸಿವೆ. ಈ ವರದಿಗಳಲ್ಲಿ ನಮೂದಿಸಿರುವ ಆರ್ಥಿಕ ನಷ್ಟದ ಅಂಕಿ ಸಂಖ್ಯೆಗಳು ಏಕರೂಪವಾಗಿಲ್ಲ. ಬದಲಿಗೆ ವ್ಯತ್ಯಾಸಗಳು ಕಂಡು ಬಂದಿವೆ.
ಅಲ್ಪಸಂಖ್ಯಾತರ ಆಯೋಗದ ವರದಿಯಲ್ಲೇನಿತ್ತು?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 2024ರ ಸೆ.11ರಂದು ಗಣಪತಿ ವಿಸರ್ಜನೆ ವೇಳೆಯಲ್ಲಿ ಉಂಟಾದ ಎರಡು ಕೋಮುಗಳ ಸಂಘರ್ಷದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ವೀಕ್ಷಿಸಿ ಕಟ್ಟಡ, ಮುಂಗಟ್ಟುಗಳಿಗೆ ಆಗಿರುವ ಹಾನಿಯ ಮೊತ್ತವನ್ನು ಅಂದಾಜಿಸಿತ್ತು.
ಆಯೋಗದ ವರದಿ ಪ್ರಕಾರ ಮುಸ್ಲಿಂ ಜನಾಂಗದ 71 ಮಂದಿಗೆ ಸೇರಿದ ಕಟ್ಟಡ, ಅಂಗಡಿ ಮುಂಗಟ್ಟುಗಳಿಗೆ ಅಂದಾಜು 3,26,43,000 ರು. ಆರ್ಥಿಕ ನಷ್ಟವಾಗಿದೆ. ಇತರೆ ಜನಾಂಗಕ್ಕೆ ಸೇರಿದ 13 ಮಂದಿಗೆ 20,40,000 ರು ನಷ್ಟವಾಗಿದೆ.
ಮಂಡ್ಯ ಜಿಲ್ಲಾಧಿಕಾರಿ ವರದಿಯಲ್ಲೇನಿದೆ?
ಮಂಡ್ಯ ಜಿಲ್ಲಾಧಿಕಾರಿಗಳು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ನಷ್ಟವನ್ನು ಅಂದಾಜಿಸಿದ್ದರು. ಜಿಲ್ಲಾಧಿಕಾರಿಗಳ ಪ್ರಕಾರ ನಾಗಮಂಗಲದಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಒಟ್ಟಾರೆ 2,66,30,000 ರು.ನಷ್ಟು ಆರ್ಥಿಕ ನಷ್ಟವಾಗಿದೆ.
ಮುಸ್ಲಿಂ ಜನಾಂಗದ 24 ಮಂದಿಗೆ ಸೇರಿದ ಕಟ್ಟಡಗಳಿಗೆ 1,38,90,000 ರು, ಸಾಮಗ್ರಿಗಳಿಗೆ 57,00,000 ರು ಸೇರಿ ಒಟ್ಟಾರೆ 1,95,90,000 ರು., ಇತರೆ ಜನಾಂಗದ 13 ಮಂದಿಗೆ ಸೇರಿದ ಕಟ್ಟಡಗಳಿಗೆ 8,65,000 ರು., ಸಾಮಗ್ರಿಗಳಿಗೆ 61,75,000 ರು ಸೇರಿ ಒಟ್ಟಾರೆ 70,40,000 ರು ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ.

ಒಟ್ಟಾರೆ ಮುಸ್ಲಿಂ ಮತ್ತು ಇತರೆ ಜನಾಂಗದ ಕಟ್ಟಡಗಳಿಗೆ 1,47,55,000 ರು., ಸಾಮಗ್ರಿಗಳಿಗೆ 1,18,75,000 ರು ಸೇರಿ ಒಟ್ಟಾರೆ 2,66,30,000 ರು.ನಷ್ಟು ನಷ್ಟವಾಗಿದೆ ಎಂದು ವರದಿಯಿಂದ ಗೊತ್ತಾಗಿದೆ.
ಅದೇ ರೀತಿ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಸಹ ಕಳೆದ ಮೂರು ವರ್ಷದಲ್ಲಿ (2023ರಿಂದ 2025) ಕೋಮು ಗಲಭೆಯಲ್ಲಿ ಹತ್ಯೆ, ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಸಚಿವ ಡಾ ಜಿ ಪರಮೇಶ್ವರ್ ಅವರು 2024ರಲ್ಲಿ ಮಾತ್ರ ಕೋಮು ಗಲಭೆಗಳಲ್ಲಿ 1, 2025ರಲ್ಲಿ 6 ಹತ್ಯೆ ಪ್ರಕರಣ ನಡೆದಿದೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.









