ಬೆಂಗಳೂರು; ಅಪರಾಧಿಕ ಒಳಸಂಚು, ಜೀವ ಬೆದರಿಕೆ ಮತ್ತು ನಂಬಿಕೆ ದ್ರೋಹ, ಚೆಕ್ ಬೌನ್ಸ್ ಆರೋಪದಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿ ವೆಂಕಟೇಶ್ ಅವರ ಪುತ್ರ ರಜತ್ ವೆಂಕಟೇಶ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತೇಜಸ್ವಿ ಮರಿಯಪ್ಪ ಎಂಬುವರು ನೀಡಿರುವ ದೂರನ್ನಾಧರಿಸಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ 2025ರ ಡಿಸೆಂಬರ್ 4ರಂದೇ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್‍ನ್ನು 2025ರ ಡಿಸೆಂಬರ್ 5ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ತೇಜಸ್ವಿ ಮರಿಯಪ್ಪ ಅವರು ಸಲ್ಲಿಸಿದ್ದ ದೂರು ಮತ್ತು ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ವೆಂಕಟೇಶ್ ಅವರ ಪುತ್ರ ರಜತ್ ವೆಂಕಟೇಶ್ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ.

ದೂರಿನಲ್ಲೇನಿದೆ?
ಸ್ನೇಹಾ ರಾಕೇಶ್, ರಜತ್ ವಿ ಅವರು ಸಮಾಜದಲ್ಲಿ ಉನ್ನತ ಸ್ಥಾನಮಾನ, ಕೋಟಿಗಟ್ಟಲೆ ಹಣದ ವಹಿವಾಟು, ಲೆಕ್ಕಪರಿಶೋಧಿತ ಹಣಕಾಸು ವರದಿಗಳು, ಉನ್ನತ ಮಟ್ಟದ ಸಂಪರ್ಕಗಳು, ಮಾಧ್ಯಮ ಸಂಪರ್ಕ ಮತ್ತು ವೃತ್ತಿಪರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ನಾನು ಅವರ ಮಾತುಗಳು ಮತ್ತು ಭರವಸೆಗಳನ್ನು ನಂಬಿದ್ದೆ. ಆದರೂ ಮೋಸ ಹೋದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮತ್ತು ಆಸ್ತಿಗೆ ಸಂಬಂಧಿಸಿದಂತೆ ನೋಂದಾಯಿತ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಿದ್ದೆ. ಆ ಸಮಯದಲ್ಲಿ, ಆಸ್ತಿಯ ಮೌಲ್ಯ ಸುಮಾರು 26 ಕೋಟಿಗಳಷ್ಟಿತ್ತು. ಅದನ್ನು 17 ಕೋಟಿ ರುಪಾಯಿಗೆ ಮಾರಾಟ ಮಾಡಿದ್ದೆ ಎಂದು ಹೇಳಿದ್ದಾರೆ.

ನನ್ನ ಹಣಕಾಸಿನ ಪರಿಸ್ಥಿತಿ ದೃಷ್ಟಿಯಿಂದ ಆಸ್ತಿಯನ್ನು ಮಾರಾಟ ಮಾಡಿದ್ದೆ. ಹಣವನ್ನು ಮರುಪಾವತಿಸುವ ಅವರ ಸಾಮರ್ಥ್ಯದ ಬಗ್ಗೆ ಖಾಸಗಿ ಹಣಕಾಸು ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿದ್ದವು. ವಿಶೇಷವಾಗಿ ನನ್ನ ಆಸ್ತಿಗೆ ಸಂಬಂಧಿಸಿದಂತೆ ಸಂಪೂರ್ಣ ಬಾಡಿಗೆ ಆದಾಯವನ್ನು ನಾನು ಪಡೆಯುತ್ತಿದ್ದೆ.

ಹೀಗಾಗಿ ಸ್ನೇಹಾ ರಾಕೇಶ್ ಅವರು ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ತಿಳಿಸಿದ್ದರು. ಹೀಗಾಗಿ ಅವರ ಹೆಸರಿಗೆ ಸೇಲ್ ಡೀಡ್ ಮಾಡಿಕೊಡಲಾಗಿತ್ತು.

ಆದರೆ ಅವರು ನನಗೆ ಮೋಸ ಮಾಡಿದ್ದಾರೆ. ನನ್ನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಯಾವುದೇ ಹಣ ಪಾವತಿಸಿಲ್ಲ.

ಅಗತ್ಯವಾದ ಹಣಕಾಸಿನ ಮೂಲಗಳನ್ನು ಹೊಂದಿದ್ದಾರೆಂದು ಸುಳ್ಳು ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.


ಎಫ್‌ಐಆರ್‍ನಲ್ಲೇನಿದೆ?
ದೂರುದಾರರಾದ ತೇಜಸ್ವಿ ಮರಿಯಪ್ಪ ಎಂಬುವರು ಬೆಂಗಳೂರು ನಗರ ಬನಶಂಕರಿ 2ನೇ ಹಂತದ ಇಂಡಸ್ಟ್ರಿಯಲ್ ಲೇ ಔಟ್‌ನ 27ನೇ ಕ್ರಾಸ್‌ನಲ್ಲಿರುವ ಖಾತೆ ನಂ 42/1- (ಪಿಐಡಿ ನಂ 56-152-4/1-3) ರಲ್ಲಿ 16,990.60 ಚದರ ಅಡಿ ವಿಸ್ತೀರ್ಣದ ಕಟ್ಟಡ ಹೊಂದಿದ್ದರು. ಈ ಕಟ್ಟಡವನ್ನು ಏಜೆಂಟ್ ಆದ ರಾಬಿನ್ ಫ್ರಾನ್ಸಿಸ್ ಎಂಬಾತನ ಮೂಲಕ ಸ್ನೇಹಾ ರಾಕೇಶ್, ರಜತ್ ವಿ ಎಂಬುವರಿಗೆ 17.50 ಕೋಟಿ ರು ಮೊತ್ತಕ್ಕೆ 2022ರ ನವೆಂಬರ್ 23ರಂದು ಮಾರಾಟ ಮಾಡಿದ್ದರು. ಅಲ್ಲದೇ ಶಾಂತಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ (ನಂ Book NO 1 SHR-05762-2022-23 CD NO SHRD 1118 DATED 23-11-2022) ಸೇಲ್ ಡೀಡ್ ಮಾಡಿಕೊಟ್ಟಿದ್ದರು.
ಈ ಕಟ್ಟಡವನ್ನು ಖರೀದಿಸಿದ್ದ ಸ್ನೇಹ ರಾಕೇಶ್ ಮತ್ತು ರಜತ್ ವೆಂಕಟೇಶ್ ಎಂಬುವರು ನೋಂದಣಿ ಸಮಯದಲ್ಲಿ 17.50 ಕೋಟಿ ರು ಮೊತ್ತಕ್ಕೆ ಚೆಕ್ (ಐಸಿಐಸಿಐ ಬ್ಯಾಂಕ್ – ಹನುಮಂತ ನಗರ ಶಾಖೆ- ಚೆಕ್ ನಂ 000819, 000820, 000821, 000822) ನೀಡಿದ್ದರು. ಈ ಚೆಕ್‌ಗಳನ್ನು ತೇಜಸ್ವಿ ಮರಿಯಪ್ಪ ಅವರು ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಈ ಚೆಕ್‌ಗಳ ಮೇಲಿನ ಸಹಿಗಳು ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ ಈ ಎಲ್ಲಾ ಚೆಕ್‌ಗಳೂ ಬೌನ್ಸ್ ಆಗಿದ್ದವು.

ಇದಾದ ನಂತರ ಆರೋಪಿಗಳು ದೂರುದಾರರಾದ ತೇಜಸ್ವಿ ಮರಿಯಪ್ಪ ಎಂಬುವರಿಗೆ ಆರೋಪಿತರು ಹಣ ಕೊಡಲು ಬೇರೆ ಬೇರೆ ಕಾರಣಗಳನ್ನು ನೀಡಿ ಮುಂದೂಡಿದ್ದರು. ಅಲ್ಲದೇ ಆರೋಪಿಗಳಿಬ್ಬರೂ ಸ್ಥಿರಾಸ್ತಿಯಲ್ಲಿ ಸ್ವಾಧೀನದಲ್ಲಿದ್ದರು. ಮತ್ತು ಬಾಡಿಗೆ ಹಣವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಎಫ್‌ಐಆರ್‍ನಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಆರೋಪಿಗಳು ಅಪರಾಧಿಕ ಒಳಸಂಚು ರೂಪಿಸಿ ದೂರುದಾರರಿಗೆ ವಂಚನೆ ಮಾಡುವ ಉದ್ದೇಶದಿಂದ ಇಟ್ಟುಕೊಂಡು ಸ್ಥಿರಾಸ್ತಿಯನ್ನು ಖರೀದಿ ಮಾಡಿ ಚೆಕ್‌ಗಳ ಮೇಲೆ ಹೊಂದಾಣಿಕೆಯಾಗದ ಸಹಿಗಳನ್ನು ಮಾಡಿಕೊಟ್ಟು ಉದ್ದೇಶಪೂರ್ವಕವಾಗಿ ದೂರುದಾರರಿಗೆ ವಂಚನೆ ಮಾಡಿ ನಂಬಿಕೆ ದ್ರೋಹ ಮಾಡಿರುತ್ತಾರೆ. ನಂತರ ಆರೋಪಿಗಳು ದೂರುದಾರರು ಹಣ ಕೇಳಿದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ,’ ಎಂದು ಆರೋಪಿಸಿರುವುದು ಎಫ್‌ಐಆರ್‍ನಿಂದ ತಿಳಿದು ಬಂದಿದೆ.
ದೂರಿನಲ್ಲಿ ಉಲ್ಲೇಖಿಸಿರುವ ಸ್ನೇಹಾ ರಾಕೇಶ್ ಮತ್ತು ರಜತ್ ವಿ ಅವರು ಅಕರ್‌ಮ್ಯಾಕ್ಸ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಸ್ನೇಹಾ ರಾಕೇಶ್ ಅವರಿಗೆ ಯುರೋಪ್-ಇಂಡಿಯಾ ಬ್ಯುಸಿನೆಸ್ ಲೀಡರ್ಸ್ ಕಾನ್ಫ್‌ರೆನ್ಸ್ ಗ್ಲೋಬಲ್ ಅಚೀವರ್ಸ್ ಆಫ್ ಮಹಾತ್ಮಾ ಗಾಂಧಿ ಲೀಡರ್‌ಶಿಪ್ ಅವಾರ್ಡ್ ಪುರಸ್ಕೃತರಾಗಿದ್ದರು.

ಇದರ ಜೊತೆಗೆ ವೃತ್ತಿಪರ ಶ್ರೇಷ್ಠತೆಗಾಗಿ ನೀಡುವ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬ್ಯಾಂಕಾಕ್‌ನ ಹಿಂದ್ ರತನ್ ಅವಾರ್ಡ್, ಇಂಟರ್‌ನ್ಯಾಷನಲ್ ಅಚೀವರ್ಸ್ ಅವಾರ್ಡ್, ಆರ್ಯಭಟ ಇಂಟರ್‌ನ್ಯಾಷನಲ್ ಅವಾರ್ಡ್, ಚಂಡಿಗಢದ ನ್ಯಾಚುರಲ್ ರಿಸೋರ್ಸಸ್ ಆಫ್ ಇಂಡಿಯಾದ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಏಷ್ಯಾ ಒನ್ ಏಜ್ ಮ್ಯಾಗಜಿನ್ ನೀಡುವ ಇಂಡಿಯಾಸ್ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ಸ್ ಲೀಡರ್ಸ್ ಅಚೀವ್ಮೆಂಟ್ ಅವಾರ್ಡ್‌ಗೂ ಪಾತ್ರರಾಗಿದ್ದರು. ಕರ್ನಾಟಕ ರಾಜ್ಯ ಸರ್ಕಾರವು ಕೆಂಪೇಗೌಡ ಪ್ರಶಸ್ತಿ, ಕಾಯಕರತ್ನ ಪ್ರಶಸ್ತಿ, ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿರುವುದು ಗೊತ್ತಾಗಿದೆ. ಅಲ್ಲದೇ ಬ್ರುಸೆಲ್ಸ್‌ನ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿಮಾತನಾಡಿದ ದೇಶದ ಮೊದಲ ಕನ್ನಡದ ಯುವ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಹಾಗೆಯೇ ರಜತ್ ವೆಂಕಟೇಶ್ ಅವರು ಅಕರ್ ಮ್ಯಾಕ್ಸ್ ಪ್ರೈವೈಟ್ ಲಿಮಿಟೆಡ್ ಮಾತ್ರವಲ್ಲದೇ ಅಕರ್ ಸ್ವಿಫ್ಟ್ ಗ್ಲೋಬಲ್ ಪ್ರೈವೈಟ್ ಲಿಮಿಟೆಡ್, ಅಕರ್ ಮ್ಯಾಕ್ಸ್ ಟೆಕ್ ಪ್ರೈವೈಟ್ ಲಿಮಿಟೆಡ್, ಆರ್ ವಿ ಜಿ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್, ಇನ್‌ಫ್ಲುಯೆನ್ಸಿಫಿ ಪ್ರೈವೈಟ್ ಲಿಮಿಟೆಡ್, ರಾಹಾ ಗ್ಲೋಬಬಲ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್‌ನಲ್ಲೂ ನಿರ್ದೇಶಕರಾಗಿದ್ದಾರೆ.
ಇನ್‌ಫ್ಲುಯೆನ್ಸಿಫಿ ಪ್ರೈವೈಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದ ಆಪ್‌ಗಳನ್ನು ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ್ದರು.

ಅದೇ ರೀತಿ ಸ್ನೇಹಾ ರಾಕೇಶ್ ಅವರು ಆರ್‍ಎಇಡಿಐಎಎಲ್ ಟೆಕ್ನಾಲಜೀಸ್ ಪ್ರೈ ಲಿ., ಏಕವ್ಯ ಟೆಕ್ ಪ್ರೈವೈಟ್ ಲಿಮಿಟೆಡ್, ಸಮಗ್ರಾಭಿವೃದ್ಧಿ ಪ್ರೈವೈಟ್ ಲಿಮಿಟೆಡ್, ಅಕರ್ ಮ್ಯಾಕ್ಸ್ ಕೊನೆಕ್ಟೋಪ್ರೋ ಪ್ರೈವೈಟ್ ಲಿಮಿಟೆಡ್‌ನಲ್ಲೂ ನಿರ್ದೇಶಕರಾಗಿದ್ದಾರೆ ಎಂದು ಗೊತ್ತಾಗಿದೆ.
‘ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳ ಪಾತ್ರವನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುವುದು. ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,’ ಎಂದು ಪೊಲೀಸರು ತಿಳಿಸಿದ್ದಾರೆ.










