ಶಾಶ್ವತ ಕೃಷಿ ವಲಯ; ಸೇಡು, ಪ್ರತಿಕಾರ, ದುಷ್ಟತನ, ಭೂಗತ ಡಾನ್‌ಗಿಂತಲೂ ಕ್ರೂರವಾಯಿತೇ ಸರ್ಕಾರ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ವಿಸ್ತೀರ್ಣದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಭೂ ಸ್ವಾಧೀನ ವಿರೋಧಿಸಿದ್ದ ರೈತರ ವಿರುದ್ಧ ಸೇಡು ತೀರಿಸಿಕೊಂಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

 

ರೈತರ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದು ಹೇಳುತ್ತಲೇ ಶಾಶ್ವತ ಕೃಷಿ ವಲಯ ಎಂದು ಘೋಷಿಸಿ ಹೊರಡಿಸಿರುವ ಅಧಿಸೂಚನೆ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ದುಷ್ಟತನ ಅಡಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

 

ವಿಶೇಷವೆಂದರೇ ಶಾಶ್ವತ ಕೃಷಿ ವಲಯ ಎಂದು ಅಧಿಸೂಚನೆ ಹೊರಡಿಸಿದ ನಂತರ ಈ ಸಂಬಂಧ ತಜ್ಞರ ಸಮಿತಿ ರಚಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಶಾಶ್ವತ ಕೃಷಿ ವಲಯ ಎಂದು ಅಧಿಸೂಚಿಸುವ ಮುನ್ನವೇ ತಜ್ಞರ ಸಮಿತಿ ರಚಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಆದೇಶದಲ್ಲೇನಿದೆ?

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಕಾಯ್ದೆ 1986ರ ಕಲಂ 28, ಉಪ ಕಲಂ (4) ಅನ್ವಯ ಹೊಡಿಸಿರುವ ಅಂತಿಮ ಅಧಿಸೂಚನೆ ( ಸಂಖ್ಯೆ CI 121 SP1 2021 – 28.06.2024)ರಲ್ಲಿ ಹೊರಡಿಸಿರುವ 439 ಎಕರೆ 32 ಗುಂಟೆ ಮತ್ತು ಅಂತಿಮ ಅಧಿಸೂಚನೆ (ಸಂಖ್ಯೆ CI 121 SP1 2021 – 19.04.2025) ರಲ್ಲಿ 841 ಎಕರೆ 26.12 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಕಾಯ್ದೆ ಕಲಂ 4 ಅನ್ವಯ ಕಲಂ 1(3) 3(1) 28(1) ಪ್ರಾಥಮಿಕ ಅಧಿಸೂಚನೆ ಹಾಗೂ 24(4) ಅಂತಿಮ ಅಧಿಸೂಚನೆಯಿಂದ ಕೈ ಬಿಟ್ಟು ಆದೇಶಿಸಿದೆ.

 

1,777.02 ಎಕರೆ ಭೂಮಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಬಾಕಿ ಪ್ರಾಥಮಿಕ ಅಧಿಸೂಚನೆಯಲ್ಲಿಯೇ ಮುಂದುವರೆದಿರುವ 495 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 4 ಅನ್ವಯ ಕಲಂ 1(3), 3(1) 28(1) ಪ್ರಾಥಮಿಕ ಅಧಿಸೂಚನೆಯಿಂದ ಹೊರತುಪಡಿಸಿದೆ ಎಂದು ಹೇಳಿದೆ.

 

 

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ 1,772 ಎಕರೆ ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ ಶಾಶ್ವತ ಕೃಷಿ ವಲಯವೆಂದು ಘೋಷಿಸಿದೆ. ನಗರಾಭಿವೃದ್ಧಿ ಇಲಾಖೆಯು ಸಂಬಂಧಪಟ್ಟ ಸಮವರ್ತಿತ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

 

ಅಲ್ಲದೇ ‘ಶಾಶ್ವತ ವಿಶೇಷ ಕೃಷಿ ವಲಯದ ರೂಪುರೇಷೆಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚಿಸುವುದು ಮತ್ತು ಪ್ರತ್ಯೇಕವಾಗಿ ರೂಪು ರೇಷೆಗಳನ್ನು ಹೊರಡಿಸುವುದು. ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಅಧಿಸೂಚನೆಗೆ ಒಳಪಟ್ಟ 1,777 ಎಕರೆ ಜಮೀನಿನ ಸರ್ವೆ ನಂಬರ್‍‌ಗಳ ಪಹಣಿ ಕಲಂ 11ರಲ್ಲಿ ಶಾಶ್ವತ ವಿಶೇಷ ಕೃಷಿ ವಲಯವೆಂದು ನಮೂದು ಮಾಡುವುದು ,’ ಎಂದು ಆದೇಶದಲ್ಲಿ ಹೇಳಿದೆ.

 

 

ಹಾಗೆಯೇ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಒಟ್ಟು 1,777 ಎಕರೆ ಪೈಕಿ ಸ್ವಯಂ ಪ್ರೇರಿತರಾಗಿ ಭೂ ಮಾಲೀಕರು ಕೆಐಎಡಿ ಮಂಡಳಿಗೆ ತಮ್ಮ ಜಮೀನುಗಳನ್ನು ನೀಡಲು ಮುಂದೆ ಬಂದಲ್ಲಿ ಅಂತಹ ಜಮೀನುಗಳನ್ನು ಅವಶ್ಯಕೆ ಅನುಸಾರ ಮತ್ತು ನಿಯಮಾನುಸಾರ ಮಂಡಳಿಗೆ ಪಡೆಯುವುದು, ಜಮೀನುಗಳನ್ನು ಭೂ ಮಾಲೀಕರು ಸ್ವಯಂ ಪ್ರೇರಿತವಾಗಿ ಮಂಡಳಿಗೆ ನೀಡಲು 3 ತಿಂಗಳ ಗಡುವನ್ನು ನೀಡುವುದು.

 

 

ಮತ್ತು ಅಂತಹ ಜಮೀನುಗಳಿಗೆ ಭೂ ದರ ನಿರ್ಧರಣೆ ಸಮಿತಿಯು ನಿಯಮಾನುಸಾರ ನಿಗದಿಪಡಿಸುವ ದರವನ್ನು ಭೂ ಮಾಲೀಕರಿಗೆ ನೀಡುವುದು ಎಂದು ಆದೇಶದಲ್ಲಿ ಹೇಳಲಾಗಿದೆ.

 

 

ಸರ್ಕಾರವು ಹೊರಡಿಸಿರುವ ಈ ಆದೇಶದ ಬಗ್ಗೆ ಹಲವು ಸಾಮಾಜಿಕ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಶ್ವತ ಕೃಷಿ ವಲಯ ಎಂದು ಘೋಷಿಸಿರುವ ರಾಜ್ಯ ಸರ್ಕಾರದ ವಿರುದ್ಧ ಲೇಖಕ ಸುರೇಶ್‌ ಕಂಜರ್ಪಣೆ, ಶಿವಸುಂದರ್ ಸೇರಿದಂತೆ ಹಲವರು ಕಿಡಿ ಕಾರಿದ್ದಾರೆ.

 

 

ಅಧಿಕೃತವಾಯಿತೇ ದುಷ್ಟತನ?

 

ಒಂದು ಸರಕಾರ ಎಷ್ಟು ದುಷ್ಟವಾಗಬಹುದು ಎಂಬುದರ ಪುರಾವೆ ಇಲ್ಲಿದೆ. ದೇವನಹಳ್ಳಿ ಚನ್ನರಾಯಪಟ್ಟಣ ದ ರೈತರ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡದ್ದರ ವಿರುದ್ಧ ಅಭೂತಪೂರ್ವ ಹೋರಾಟ ನಡೆದು ಸರಕಾರ ಈ ಭೂಸ್ವಾಧಿನವನ್ನು ಕೈಬಿಡುವುದಾಗಿ ಘೋಷಿಸಿತ್ತಷ್ಟೆ. ಬೆಂಗಳೂರಿನ ಹೊರವಲಯದಲ್ಲಿರುವ ಈ ಚಿನ್ನದಂಥಾ ಭೂಮಿಯನ್ನು ಕೈ ಬಿಡುವ ಇಚ್ಛೆ ಸರಕಾರಕ್ಕೆ ಇರಲೇ ಇಲ್ಲ.

 

 

ಸಿದ್ಧರಾಮಯ್ಯನವರನ್ನು ನಂಬಲು‌ ಮೊದಲೇ ತಯಾರಿದ್ದ ಹಲವರು ಇದು ಸಿನಿಕತನದ್ದು ಎಂದಿದ್ದರು. ಈಗ ಸರಕಾರದ ದುಷ್ಟತನ ಅಧಿಕೃತವಾಗಿದೆ. ಈ ಜಮೀನುಗಳನ್ನು ” ಶಾಶ್ವತ ಕೃಷಿ ವಲಯ” ಎಂದು ಸರಕಾರ ಘೋಷಿಸಲಿದೆ. ಹಾಗೆಯೇ ಈ‌ ಜಮೀನನ್ನು ಸರಕಾರಕ್ಕೆ ನೀಡುವುದಾದರೆ 3 ತಿಂಗಳೊಳಗೆ ನೀಡಬಹುದು. ಇಲ್ಲವಾದರೆ ಈ ಭೂಮಿಯ ಅಂಗೈ ಅಗಲವನ್ನೂ ಮಾರುವಂತಿಲ್ಲ!

 

ಭೂಗತ ಡಾನ್‌ಗಳೂ ಪ್ರಯೋಗಿಸದಿದ್ದ ಬೆದರಿಕೆ ತಂತ್ರವೇ?

 

ಜಗತ್ತಿನ ಎಲ್ಲೂ ಇಂಥಾ ಶಾಶ್ವತ ಕೃಷಿ ವಲಯ ಎಂಬ ಪರಿಕಲ್ಪನೆ ಇಲ್ಲ. ನಮ್ಮ ದೇಶದಲ್ಲಂತೂ ಇಲ್ಲವೇ ಇಲ್ಲ. ಸಾರ್ವಜನಿಕ ಹೂಡಿಕೆಯ ಲಾಭ ಪಡೆಯುವ ಕಾರಣ ನೀರಾವರಿ ಜಮೀನಿನ ಅಚ್ಚುಕಟ್ಟು ಪ್ರದೇಶಕ್ಕೆ ಈ ಬಗೆಯ ನಿರ್ಬಂಧ ಇದೆ. ಈ ಯಾವ ಹೂಡಿಕೆಯ ನೆರವೂ ಇಲ್ಲದ ಮಳೆ ಆಶ್ರಿತ ಕೃಷಿಯ ರೈತರು ಜಮೀನಿನ ಸ್ವಾಯತ್ತತೆ ಉಳಿಸಿಕೊಳ್ಳಬೇಕೆಂದಿರುವುದು ಅಭೂತ ಪೂರ್ವ. ಒತ್ತಡಕ್ಕೆ ಮಣಿದು ಒಂದು ಹೆಜ್ಜೆ ಹಿಂದೆ ಸರಿದ ಸರಕಾರ ಅಪ್ಪಟ ಸೇಡು ಮತ್ತು ಪ್ರತೀಕಾರದ ಧೋರಣೆಯಲ್ಲಿ ಈ ನಿರ್ಣಯ ಮಾಡಿದೆ ಎಂದು ಸುರೇಶ್‌ ಕಂಜರ್ಪಣೆ ಆಪಾದಿಸಿದ್ದಾರೆ.

 

ಈ ನಿರ್ಣಯ ಕೈಗೊಳ್ಳಲು ಕೆಐಎಡಿಬಿ ಮನವಿ ಮಾಡಿದೆ ಎಂಬ ಸಬೂಬು ಬೇರೆ. ಕೃಷಿ ಭೂಮಿಯ ಉಪಯೋಗದ ಸ್ವರೂಪ ಹೇಗಿರಬೇಕೆಂದು ನಿರ್ಣಯಿಸುವ ಅಧಿಕಾರ ಕೆಐಎಡಿಬಿ ಯಾರು ಕೊಟ್ಟರು ಎಂದು ಸುರೇಶ್‌ ಕಂಜರ್ಪಣೆ ಪ್ರಶ್ನಿಸಿದ್ದಾರೆ.

 

 

ಭೂಮಿಯನ್ನು ಕಾಲಾನುಕ್ರಮದಲ್ಲಿ ಅಗತ್ಯವಿದ್ದರೆ ಮಾರುಕಟ್ಟೆ ದರಕ್ಕೆ ಮಾರುವ ರೈತನ ಸ್ವಾಯತ್ತತೆಯನ್ನು ಸರಕಾರ ಈ ಪ್ರಕರಣದಲ್ಲಿ ಒರೆಸಿ ಹಾಕಿದೆ. ಒಂದೋ ತನಗೆ ಕೊಡಬೇಕು, ಇಲ್ಲಾ ಯಾರಿಗೂ ಕೊಡುವಂತಿಲ್ಲ ಎಂಬ ರಾಕ್ಷಸೀ ನಿಲುವನ್ನು ಸರಕಾರ ತಳೆದಿದೆ. ಭಾರತದ ಯಾವ ಸರಕಾರಗಳೂ ಇಂಥಾ ನಿಲುವು ತೆಗೆದುಕೊಂಡಿರಲಿಲ್ಲ ಎಂದೂ ಅಭಿಪ್ರಾಯಿಸಿದ್ದಾರೆ.

 

ಭೂ ಸ್ವಾಧೀನ ವಿರೋಧಿಸಿ ನಡೆದಿದ್ದ ಪ್ರತಿಭಟನೆ- ಫೋಟೋ ಕೃಪೆ- ದಿ ನ್ಯೂಸ್ ಮಿನಿಟ್

 

ಈಗ ಈ ಸರಕಾರ ಗಾಡ್ ಫಾದರ್ ನ ಭೂಗತ ಡಾನ್ ನ ಮಾತುಗಳನ್ನು ಅವನಿಗಿಂತಲೂ ಕ್ರೂರವಾಗಿ ಬಳಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

 

ರೈತರ ಮೇಲೆ ಸೇಡು ತೀರಿಸಿಕೊಂಡಿತೇ?

 

ದೇವನಹಳ್ಳಿ ರೈತರ ಭೂ ಸ್ವಾಧೀನವನ್ನು ಕೈಬಿಡಲು ಸರಳ ಡಿ ನೋಟಿಫಿಕೇಷನ್‌ ಮಾಡದೇ ಮಾಡದೇ ಹೋರಾಟ ನಿರತ ರೈತರ ಮೇಲೆ ಸೇಡು ತೀರಿಸಿಕೊಳ್ಳುವಂತಿದೆ ಎಂದು ಚಿಂತಕ ಶಿವಸುಂದರ್‍‌ ಅವರು ಹೇಳಿದ್ದಾರೆ.

 

“ಶಾಶ್ವತ ಕೃಷಿ ವಲಯ”, ಎಂಬ ಈವರೆಗೆ ಯಾವುದೇ ನಗರಾಭಿವೃದ್ಧಿ ಕಾನೂನಿನಲ್ಲಿ ಇಲ್ಲದ ಹೊಸ ಗುಮ್ಮಾ ಹಾಗೂ “ಭೂಮಿ ಮಾರುವರು ಮೂರು ತಿಂಗಳೊಳಗೆ ಮಾರಿಬಿಡಬೇಕು” ಎಂಬ ಬೆದರಿಕೆ ಹಾಗೂ ಒಡೆದಾಳುವ ಕುತಂತ್ರ ಶರತ್ತುಗಳನ್ನು ಒಡ್ಡಿದೆ.

 

‘ಸಿದ್ದು ಸರ್ಕಾರದ ಈ ಕುತಂತ್ರಿ ಹಾಗೂ ರೈತರ ಬೆನ್ನಿಗಿರಿದ ರೈತ ದ್ರೋಹವನ್ನು ಬಹಿರಂಗವಾಗಿ ಖಂಡಿಸಬೇಕಿರುವುದು ಹಾಗೂ ಕಾಂಗ್ರೆಸ್ ಸರ್ಕಾರದ ವರ್ಗ ಹಿತಆಸಕ್ತಿಯನ್ನು ಅರಿಯುವುದು ಮತ್ತು ಮುರಿಯುವುದು ಈಗ ಒಂದು ಜನಪರ ಕರ್ತವ್ಯ ಹಾಗೂ ಹೊಣೆಗಾರಿಕೆಯೂ ಆಗಿದೆಯಲ್ಲವೇ,’ ಎಂದು ಪ್ರಶ್ನಿಸಿದ್ದಾರೆ.

 

 

ಭೂಮಿಯನ್ನು ಕಾಲಾನುಕ್ರಮದಲ್ಲಿ ಅಗತ್ಯವಿದ್ದರೆ ಮಾರುಕಟ್ಟೆ ದರಕ್ಕೆ ಮಾರುವ ರೈತನ ಸ್ವಾಯತ್ತತೆಯನ್ನು ಸರಕಾರ ಈ ಪ್ರಕರಣದಲ್ಲಿ ಒರೆಸಿ ಹಾಕಿದೆ.ಒಂದೋ ತನಗೆ ಕೊಡಬೇಕು, ಇಲ್ಲಾ ಯಾರಿಗೂ ಕೊಡುವಂತಿಲ್ಲ ಎಂಬ ರಾಕ್ಷಸೀ ನಿಲುವನ್ನು ಸರಕಾರ ತಳೆದಿದೆ. ಭಾರತದ ಯಾವ ಸರಕಾರಗಳೂ ಇಂಥಾ ನಿಲುವು ತೆಗೆದುಕೊಂಡಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

 

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ನಿಯೋಗಕ್ಕೆ  ಭರವಸೆ ನೀಡಿದ್ದರು.

 

ರೈತರ ನಿಯೋಗದಿಂದ ಚರ್ಚೆ ಮಾಡಿದ್ದ ಸಿದ್ದರಾಮಯ್ಯ

 

ಅಲ್ಲದೇ ಈ ಕುರಿತು ಟ್ವೀಟ್‌ ಕೂಡ ಮಾಡಿದ್ದರು.

 

 

ಭರವಸೆ ನೀಡಿ ತಿಂಗಳಾದ ನಂತರವೂ ಅಧಿಕೃತ ಆದೇಶವೇ ಹೊರಡಿಸಿರಲಿಲ್ಲ. ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಪಡೆದು ವರದಿ ಪ್ರಕಟಿಸಿತ್ತು.

 

ದೇವನಹಳ್ಳಿ; ಇನ್ನೂ ರದ್ದಾಗಿಲ್ಲ ಭೂ ಸ್ವಾಧೀನ ಅಂತಿಮ ಅಧಿಸೂಚನೆ, ತಿಂಗಳಾದರೂ ಹೊರಬಿದ್ದಿಲ್ಲ ಪರಿಷ್ಕೃತ ಆದೇಶ

 

ದಿ ಫೈಲ್‌ ವರದಿ ಪ್ರಕಟಿಸಿದ ನಂತರ ರೈತ ಹೋರಾಟಗಾರರು ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

 

ದೇವನಹಳ್ಳಿ: ರದ್ದಾಗದ ಭೂ ಸ್ವಾಧೀನ ಅಧಿಸೂಚನೆ, ದಿ ಫೈಲ್‌ ವರದಿ ಬೆನ್ನಲ್ಲೇ ಮತ್ತೆ ಹೋರಾಟದ ಮಾತು

 

ರೈತರು ಮತ್ತೊಮ್ಮೆ ಹೋರಾಟಕ್ಕಿಳಿಯುವ ಮುನ್ನವೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೇ ಜಮೀನುಗಳನ್ನು ಶಾಶ್ವತ ಕೃಷಿ ವಲಯವೆಂದು ಅಧಿಸೂಚನೆ ಹೊರಡಿಸಿದೆ.

Your generous support will help us remain independent and work without fear.

Latest News

Related Posts