ಬೆಂಗಳೂರು; ದಾವೋಸ್‌ನಲ್ಲಿ 2026ರಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂಧನ ವಲಯದಲ್ಲಿ ಹೂಡಿಕೆಗೆ ಆಕರ್ಷಿಸಲು ಸಚಿವ ಕೆ ಜೆ ಜಾರ್ಜ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ನಿಯೋಗ ತೆರಳಲು ಸರ್ಕಾರವು ಅನುಮತಿ ನೀಡಿದೆ.
ಈ ಕುರಿತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2025ರ ಡಿಸೆಂಬರ್ 1ರಂದೇ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ 2024ರ ಜನವರಿಯಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗಕ್ಕೆ 12 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು.
2025ರಲ್ಲಿ ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆಯ ಶೃಂಗ ಸಭೆಯಲ್ಲಿ ಕರ್ನಾಟಕ ಸರ್ಕಾರವು ಗೈರು ಹಾಜರಾಗಿತ್ತು. ಇದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೂಡಿಕೆಗಳಿಗಿಂತ ಆಂತರಿಕ ಅಧಿಕಾರ ಹೋರಾಟಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದೂ ಬಿಜೆಪಿಯು ಆರೋಪಿಸಿತ್ತು.
ಈ ಬೆಳವಣಿಗೆಗಳ ನಡುವೆ 2026ರಲ್ಲಿ ದಾವೋಸ್‌ನಲ್ಲಿ 2026ರ ಜನವರಿ 19ರಿಂದ 23ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಗೆ ಇಂಧನ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಸರ್ಕಾರವು ಅನುಮತಿ ನೀಡಿ ಹೊರಡಿಸಿದೆ.

ಸಚಿವ ಕೆ ಜೆ ಜಾರ್ಜ್ ಅವರ ನೇತೃತ್ವದಲ್ಲಿ ಕೆಆರ್‍ಇಡಿಎಲ್ ಅಧ್ಯಕ್ಷ ಟಿ ಡಿ ರಾಜೇಗೌಡ, ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಕೆಆರ್‍ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ ಪಿ ರುದ್ರಪ್ಪಯ್ಯ ಅವರು ನಿಯೋಗದಲ್ಲಿ ಇರಲಿದ್ದಾರೆ. ಈ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವುದು ಪತ್ರದಿಂದ ಗೊತ್ತಾಗಿದೆ.

ಖರ್ಚೆಷ್ಟು?
ಸಚಿವ ಕೆ ಜೆ ಜಾರ್ಜ್ ಅವರ ನಿಯೋಗಕ್ಕೆ ಒಟ್ಟಾರೆ 1.44 ಕೋಟಿಯಷ್ಟು ಖರ್ಚಾಗಲಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಅಂದಾಜಿಸಿದೆ. ಈ ಅಂದಾಜಿನ ಪಟ್ಟಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ವಿಮಾನ ಪ್ರಯಾಣಕ್ಕೆ 54.00 ಲಕ್ಷ, ವಾಸ್ತವ್ಯಕ್ಕೆ 20 ಲಕ್ಷ, ಸ್ಥಳೀಯ ಸಾರಿಗೆ 20 ಲಕ್ಷ, ಊಟೋಪಚಾರಕ್ಕೆ 10 ಲಕ್ಷ, ಸಭೆಗಳಿಗೆ ಪ್ರಸ್ತುತಪಡಿಸಲು ಬೇಕಾದ ಸಾಮಗ್ರಿಗಳು, ಪ್ರಸ್ತುತಿಗಗಳಿಗೆ 27 ಲಕ್ಷ, ಪ್ರಚಾರ, ಮಾಧ್ಯಮ ಸಂಯೋಜನೆಗೆ 10 ಲಕ್ಷ, ಕರ್ನಾಟಕ ಸರ್ಕಾರದ ನಿಯೋಗದದಲ್ಲಿರುವವರಿಗೆ ದಿನ ಭತ್ಯೆ 3 ಲಕ್ಷ ರು ವೆಚ್ಚವಾಗಲಿದೆ ಎಂದು ಅಂದಾಜಿಸಿರುವುದು ಗೊತ್ತಾಗಿದೆ.

2024 ಮತ್ತು 2025ರಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಿತ್ತು. ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿತ್ತು.
ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಒಟ್ಟು 13 ಕಂಪನಿಗಳು ಆಸಕ್ತಿ ತೋರಿದ್ದವು. ಈ ಕಂಪನಿಗಳು ಒಟ್ಟು 3,42,925 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದ್ದವು. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ನವೀರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರಿಗೆ ಇಂಧನ ಸಚಿವ ಕೆಜೆ ಜಾರ್ಜ್ ಒಪ್ಪಂದ ಪತ್ರ ನೀಡಿದ್ದರು.
ಕರ್ನಾಟಕದ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ವಲಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೀರೊ ಫ್ಯೂಚರ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್(ಎಚ್‍ಎಫ್‍ಇಪಿಎಲ್) ಕಂಪೆನಿಯು ಕರ್ನಾಟಕ ಸರಕಾರದ ಜೊತೆಗೆ 11 ಸಾವಿರ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದಕ್ಕೆ(ಎಂಒಯು) ಸಹಿ ಹಾಕಿತ್ತು.
ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆ ಅಂಗವಾಗಿ ಲಂಡನ್‍ನಲ್ಲಿ ನಡೆಯುತ್ತಿರುವ ಅಂತರ್‌ರಾಷ್ಟ್ರೀಯ ರೋಡ್ ಶೋನಲ್ಲಿ ಈ ಒಪ್ಪಂದ ಕಾರ್ಯಗತಗೊಂಡಿದ್ದವು.
ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಯೋಜನೆಗಳಿಗೆ 11 ಸಾವಿರ ಕೋಟಿ ರೂ. ಬಳಕೆ ಆಗಲಿದೆ. ಎಚ್‍ಎಫ್‍ಇಪಿಎಲ್-ನ ಈ ಪ್ರಸ್ತಾವಿತ ಯೋಜನೆಗಳು ರಾಜ್ಯದಲ್ಲಿ 2025-26ರಿಂದ ಕಾರ್ಯಾರಂಭಗೊಳ್ಳಲಿವೆ. ಮುಂದಿನ 2ರಿಂದ 3 ವರ್ಷಗಳಲ್ಲಿ ಈ ಮೊತ್ತದ ಹೂಡಿಕೆ ಆಗಲಿದೆ. ಈ ಒಪ್ಪಂದದ ಫಲವಾಗಿ ಕರ್ನಾಟಕದಲ್ಲಿ ಸುಮಾರು 3,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಎಂ ಬಿ ಪಾಟೀಲ್ ತಿಳಿಸಿದ್ದರು.
ರಾಜ್ಯ ಇಂಧನ ವಲಯದಲ್ಲಿ ಹೂಡಿಕೆಗಾಗಿ ಭಾರತವು ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಪ್ರೋತ್ಸಾಹಿಸುತ್ತಿದೆ. ವಿಶೇಷವಾಗಿ ಸೌರ, ಪವನ ಮತ್ತು ಜಲವಿದ್ಯುತ್‌ಗಳಲ್ಲಿ ದೊಡ್ಡ ಅವಕಾಶಗಳಿವೆ, ಸರ್ಕಾರವು ‘RE-INVEST’ ನಂತಹ ಕಾರ್ಯಕ್ರಮಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಉದಾಹರಣೆಗೆ, ಕರ್ನಾಟಕದ ‘ಇನ್ವೆಸ್ಟ್ ಕರ್ನಾಟಕ 2025’ ನಲ್ಲಿ ನವೀಕರಿಸಬಹುದಾದ ಇಂಧನಕ್ಕಾಗಿ ₹3.43 ಲಕ್ಷ ಕೋಟಿ ಹೂಡಿಕೆ ಒಪ್ಪಂದಗಳು ನಡೆದಿದ್ದವು.
ಇಂಧನ ವಲಯದಲ್ಲಿ ಹೂಡಿಕೆ ಅವಕಾಶಗಳೆಷ್ಟಿವೆ?
ನವೀಕರಿಸಬಹುದಾದ ಇಂಧನ ವಲಯದಲ್ಲಿ ಸೌರ ಪಾರ್ಕ್‌ಗಳು, ಪಂಪ್ಡ್ ಸ್ಟೋರೇಜ್ ಮತ್ತು ಇತರ ನವೀಕರಿಸಬಹುದಾದ ಯೋಜನೆಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಅವಕಾಶಗಳಿವೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ (ಸೌರ ಫಲಕ ಅಳವಡಿಕೆ) ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನವು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆದಿವೆ.
ಸೌರ ಶಕ್ತಿ ಉತ್ಪಾದಿಸುವ ನಿಟ್ಟಿನಲ್ಲಿ ಸೌರ ಪಾರ್ಕ್‌ಗಳು, ಜಲವಿದ್ಯುತ್ ಮತ್ತು ಪಂಪ್ಡ್ ಸ್ಟೋರೇಜ್, ದೊಡ್ಡ ಜಲವಿದ್ಯುತ್ ಮತ್ತು ಶೇಖರಣಾ ಯೋಜನೆಗಳು, ರಾಷ್ಟ್ರೀಯ ಗ್ರಿಡ್‌ಗೆ ಸಂಪರ್ಕ ಕಲ್ಪಿಸುವ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶಗಳಿವೆ.
2023ರ ವೇಳೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಕರ್ನಾಟಕ ಸರ್ಕಾರವು ನಿರೀಕ್ಷಿಸಿತ್ತು. , ಉತ್ಪಾದಿಸಿದ ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಮೆಗಾವ್ಯಾಟ್ ಘಟಕವನ್ನು ಸ್ಥಾಪಿಸಲು ಇಂಧನ ಇಲಾಖೆ ಯೋಜಿಸಿತ್ತು.
ಶರಾವತಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಘಟಕವನ್ನು ಸ್ಥಾಪಿಸುವತ್ತ ಸರ್ಕಾರ ಕೆಲಸ ಮಾಡುತ್ತಿದೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
2024ರಲ್ಲಿ ನಡೆದಿದ್ದ ‘ವಿಶ್ವ ಆರ್ಥಿಕ ವೇದಿಕೆ’ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ನೇತೃತ್ವದ ನಿಯೋಗವು ವಿವಿಧ ಕಂಪನಿಗಳೊಂದಿಗೆ 22,000 ಕೋಟಿ ರೂ. ಹೂಡಿಕೆ ಪ್ರಸ್ತಾವನೆ ಸಂಬಂಧ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿತ್ತು. ಈ ಪೈಕಿ ಎಷ್ಟು ಒಡಂಬಡಿಕೆಗಳು ಚಾಲ್ತಿಗೆ ಬಂದಿವೆ ಎಂಬ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.
ಈ ಯೋಜನೆಗಳಲ್ಲಿ ವೆಬ್ ವರ್ಕ್ಸ್ ಕಂಪನಿಯು ಬೆಂಗಳೂರಿನಲ್ಲಿ ಸ್ಥಾಪಿಸಲಿರುವ 100 ಮೆಗಾವ್ಯಾಟ್ ಸಾಮರ್ಥ್ಯದ, 20,000 ಕೋಟಿ ರೂ. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆ ಕೂಡ ಸೇರಿತ್ತು. ಇದಲ್ಲದೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ಬೇಸ್, ಟಕೇಡಾ ಫಾರ್ಮಾ, ಬಿಎಲ್ ಆಗ್ರೋ ಇತ್ಯಾದಿ ಕಂಪನಿಗಳೊಂದಿಗೆ 2,000 ಕೋಟಿ ರೂ. ಮೌಲ್ಯದ ಹೂಡಿಕೆ ಸಂಬಂಧ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಿತ್ತು.
ಜಾನ್ಸನ್ & ಜಾನ್ಸನ್‌ನಂತಹ ಕಂಪನಿಗಳೊಂದಿಗೆ ಗ್ಲೋಬಲ್ ಸರ್ವಿಸ್ ಸೆಂಟರ್ ಸ್ಥಾಪಿಸುವ ಮಾತುಕತೆಗಳು ನಡೆದಿದ್ದವು ಮತ್ತು ಇತ್ತೀಚೆಗೆ (2025) ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ಇತರ ರಾಜ್ಯಗಳೊಂದಿಗೆ ಕರ್ನಾಟಕವೂ ಜಂಟಿ ಪೆವಿಲಿಯನ್ ಹಂಚಿಕೊಂಡಿತ್ತು. ಈ ಸಭೆಗಳು ತಂತ್ರಜ್ಞಾನ, ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಚರ್ಚಿಸಿದ್ದವು.
ದಾವೋಸ್ ವೆಚ್ಚಕ್ಕೆ ಆಕ್ಷೇಪಗಳು
ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಆಗಮಿಸುವ ಸರ್ಕಾರಗಳು ಮತ್ತು ಪ್ರತಿನಿಧಿಗಳ ವೆಚ್ಚವು ಲಕ್ಷಾಂತರ ರೂಪಾಯಿಗಳಿಂದ ಕೋಟಿಗಳವರೆಗೆ ವೆಚ್ಚವಾಗಲಿದೆ. ಇದರಲ್ಲಿ ವಿಮಾನ ಬಾಡಿಗೆ (ಚಾರ್ಟರ್ಡ್), ವಸತಿ, ಪಾರ್ಟಿಗಳು ಮತ್ತು ಇತರೆ ಕಾರ್ಯಗಳ ವೆಚ್ಚಗಳು ಸೇರಿವೆ. ಮಹಾರಾಷ್ಟ್ರದ 2023ರ ನಿಯೋಗವು 32 ಕೋಟಿಗಳಿಗಿಂತ ಹೆಚ್ಚು ಖರ್ಚು ಮಾಡಿತ್ತು. ಈ ವೆಚ್ಚಗಳು ನಿಯೋಗದ ಗಾತ್ರ, ಸೌಲಭ್ಯಗಳು, ಮತ್ತು ಸರ್ಕಾರದ ಆರ್ಥಿಕ ನೀತಿಗಳನ್ನು ಅವಲಂಬಿಸಿರುತ್ತದೆ. ಆದರೆ ಇವುಗಳಲ್ಲಿ ತೆರಿಗೆದಾರರ ಹಣ ಬಳಕೆ ಮಾಡುತ್ತಿರುವ ಬಗ್ಗೆಯೂ ಅನೇಕ ಪ್ರಶ್ನೆಗಳು ಕೇಳಿ ಬಂದಿದ್ದವು.
ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಂತಹ ಹಿರಿಯ ಅಧಿಕಾರಿಗಳು ದಾವೋಸ್‌ಗೆ ತೆರಳಲು ವಿಮಾನವನ್ನು ಚಾರ್ಟರ್ ಮಾಡಿದ್ದಾಗ 1.89 ಕೋಟಿ ವೆಚ್ಚವಾಗಿತ್ತು. ನಿಯೋಗದ ಸದಸ್ಯರ ವಸತಿ, ವಿಮಾನದ ವರ್ಗದ ನವೀಕರಣಗಳು ಮತ್ತು ಆತಿಥ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಉದಾಹರಣೆಗೆ, 150 ಜನರ ಭೋಜನ”ಕ್ಕೆ 1.92 ಕೋಟಿ ಖರ್ಚಾಗಿತ್ತು. ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿ ಶುಲ್ಕಗಳು, ಪೆವಿಲಿಯನ್ ನಿರ್ವಹಣೆ (₹50 ಲಕ್ಷಗಳವರೆಗೆ) ಮತ್ತು ಲಾಬಿಗಾಗಿ ಹಣವನ್ನು ವ್ಯಯಿಸಲಾಗುತ್ತದೆ.
ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳ ದಾವೋಸ್ ಭೇಟಿಗೆ ₹54.63 ಲಕ್ಷ ರೂ ಅಧಿಕ ಮೊತ್ತ ಖರ್ಚಾಗುತ್ತದೆ. ದಾವೋಸ್ ಸಮ್ಮೇಳನಕ್ಕೆ ಹಾಜರಾಗುವುದು ಸರ್ಕಾರಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಇದು ತೆರಿಗೆದಾರರ ಹಣದ ಬಳಕೆಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಹುಟ್ಟುಹಾಕಿದೆ.









