ಬೆಂಗಳೂರು; ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಎರಡು ಕೋಮುಗಳ ನಡುವೆ ನಡೆದಿದ್ದ ಸಂಘರ್ಷ ವೇಳೆಯಲ್ಲಿ ಮುಸ್ಲಿಂ ಮತ್ತು ಇತರೆ ಜನಾಂಗಕ್ಕೆ ಸೇರಿದವರಿಗೆ ಆಗಿರುವ ಆರ್ಥಿಕ ನಷ್ಟದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ನೀಡಿರುವ ನಷ್ಟದ ಮೊತ್ತದ ಮಧ್ಯೆ ವ್ಯತ್ಯಾಸವಿರುವುದು ಕಂಡು ಬಂದಿದೆ.
2024-25 ಮತ್ತು 2025-26ರ ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಮತ್ತು ಈ ವೇಳೆ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಇದೇ ಡಿಸೆಂಬರ್‍ನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಉತ್ತರಿಸಲಿದೆ.
ಗೃಹ ಇಲಾಖೆಯು ನೀಡಿರುವ ಉತ್ತರದಲ್ಲಿ ನಾಗಮಂಗಲದಲ್ಲಿ 2024 ಮತ್ತು 2025ರಲ್ಲಿ ಸಂಭವಿಸಿದ್ದ ಕೋಮು ಸಂಘರ್ಷದಲ್ಲಿ ಕಟ್ಟಡ ಮತ್ತು ಅಂಗಡಿ ಮುಂಗಟ್ಟುಗಳಿಗೆ ಆಗಿರುವ ಆರ್ಥಿಕ ನಷ್ಟದ ಮಾಹಿತಿಯೂ ಇದೆ.
ಗೃಹ ಇಲಾಖೆಯು ಸಿದ್ಧಪಡಿಸಿರುವ ಈ ಉತ್ತರದ ಮಾಹಿತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೋಮು ಹಿಂಸೆ ನಿಗ್ರಹ ಪಡೆಯನ್ನು ಮಂಡ್ಯ ಜಿಲ್ಲೆಯಲ್ಲಿಯೂ ಸ್ಥಾಪಿಸಲಾಗುತ್ತದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತಿತರ ಕಡೆಯಲ್ಲಿ ನಡೆದಿದ್ದ ಕೋಮು ಸಂಘರ್ಷಗಳಿಂದಾಗಿ ಸಂಭವಿಸಿರುವ ಆರ್ಥಿಕ ನಷ್ಟದ ಮಾಹಿತಿಯು ಮುನ್ನೆಲೆಗೆ ಬಂದಿದೆ.
ಈ ಘಟನೆ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರತ್ಯೇಕವಾಗಿ ವರದಿ ಸಲ್ಲಿಸಿವೆ. ಈ ವರದಿಗಳಲ್ಲಿ ನಮೂದಿಸಿರುವ ಆರ್ಥಿಕ ನಷ್ಟದ ಅಂಕಿ ಸಂಖ್ಯೆಗಳು ಏಕರೂಪವಾಗಿಲ್ಲ. ಬದಲಿಗೆ ವ್ಯತ್ಯಾಸಗಳು ಕಂಡು ಬಂದಿವೆ.
ಅಲ್ಪಸಂಖ್ಯಾತರ ಆಯೋಗದ ವರದಿಯಲ್ಲೇನಿದೆ?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 2024ರ ಸೆ.11ರಂದು ಗಣಪತಿ ವಿಸರ್ಜನೆ ವೇಳೆಯಲ್ಲಿ ಉಂಟಾದ ಎರಡು ಕೋಮುಗಳ ಸಂಘರ್ಷದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ವೀಕ್ಷಿಸಿ ಕಟ್ಟಡ, ಮುಂಗಟ್ಟುಗಳಿಗೆ ಆಗಿರುವ ಹಾನಿಯ ಮೊತ್ತವನ್ನು ಅಂದಾಜಿಸಿತ್ತು.
ಆಯೋಗದ ವರದಿ ಪ್ರಕಾರ ಮುಸ್ಲಿಂ ಜನಾಂಗದ 71 ಮಂದಿಗೆ ಸೇರಿದ ಕಟ್ಟಡ, ಅಂಗಡಿ ಮುಂಗಟ್ಟುಗಳಿಗೆ ಅಂದಾಜು 3,26,43,000 ರು. ಆರ್ಥಿಕ ನಷ್ಟವಾಗಿದೆ. ಇತರೆ ಜನಾಂಗಕ್ಕೆ ಸೇರಿದ 13 ಮಂದಿಗೆ 20,40,000 ರು ನಷ್ಟವಾಗಿದೆ.
ಮಂಡ್ಯ ಜಿಲ್ಲಾಧಿಕಾರಿ ವರದಿಯಲ್ಲೇನಿದೆ?
ಮಂಡ್ಯ ಜಿಲ್ಲಾಧಿಕಾರಿಗಳು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ನಷ್ಟವನ್ನು ಅಂದಾಜಿಸಿದ್ದರು. ಜಿಲ್ಲಾಧಿಕಾರಿಗಳ ಪ್ರಕಾರ ನಾಗಮಂಗಲದಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಒಟ್ಟಾರೆ 2,66,30,000 ರು.ನಷ್ಟು ಆರ್ಥಿಕ ನಷ್ಟವಾಗಿದೆ.
ಮುಸ್ಲಿಂ ಜನಾಂಗದ 24 ಮಂದಿಗೆ ಸೇರಿದ ಕಟ್ಟಡಗಳಿಗೆ 1,38,90,000 ರು, ಸಾಮಗ್ರಿಗಳಿಗೆ 57,00,000 ರು ಸೇರಿ ಒಟ್ಟಾರೆ 1,95,90,000 ರು., ಇತರೆ ಜನಾಂಗದ 13 ಮಂದಿಗೆ ಸೇರಿದ ಕಟ್ಟಡಗಳಿಗೆ 8,65,000 ರು., ಸಾಮಗ್ರಿಗಳಿಗೆ 61,75,000 ರು ಸೇರಿ ಒಟ್ಟಾರೆ 70,40,000 ರು ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ.

ಒಟ್ಟಾರೆ ಮುಸ್ಲಿಂ ಮತ್ತು ಇತರೆ ಜನಾಂಗದ ಕಟ್ಟಡಗಳಿಗೆ 1,47,55,000 ರು., ಸಾಮಗ್ರಿಗಳಿಗೆ 1,18,75,000 ರು ಸೇರಿ ಒಟ್ಟಾರೆ 2,66,30,000 ರು.ನಷ್ಟು ನಷ್ಟವಾಗಿದೆ ಎಂದು ವರದಿಯಿಂದ ಗೊತ್ತಾಗಿದೆ.
ವಿಶ್ವನಾಥ್ ಪ್ರಶ್ನೆಯಲ್ಲೇನಿದೆ?
2024-25 ಮತ್ತು 2025-26ರ ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಪ್ರತ್ಯೇಕವಾಗಿ ಪ್ರತಿಯೊಂದು ಗಲಭೆಗಳಿಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ/ಜಿಲ್ಲಾ ಪೊಲೀಸರ/ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳ ಕರ್ತವ್ಯಲೋಪ/ ನಿರ್ಲಕ್ಷ್ಯತೆಯಿಂದ ಸರ್ಕಾರಕ್ಕೆ/ಸಾರ್ವಜನಿಕರಿಗೆ/ಪ್ರತಿ ವ್ಯಕ್ತಿಗೆ/ಪ್ರತಿ ಕುಟುಂಬಕ್ಕೆ ಉಂಟಾದ ಆರ್ಥಿಕ ನಷ್ಟ ಎಷ್ಟು, ಈ ಎರಡು ವರ್ಷಗಳ ಕೋಮು ಗಲಭೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯತೆ/ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆ ಹಾಗೂ ಪೊಲೀಸ್ ಠಾಣೆ/ವಿಭಾಗವಾರು/ಘಟಕವಾರು ಪ್ರತ್ಯೇಕವಾಗಿ ದಾಖಲೆಗಳೊಂದಿಗೆ ವರದಿ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಈ ಘಟನೆಗಳ ಬಗ್ಗೆ ಕೈಗೊಳ್ಳಲಾದ ತನಿಖೆಗಳ ವರದಿಗಳ ಬಗ್ಗೆ ನಿರ್ಲಕ್ಷ್ಯತೆ ತೋರಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಕೈಗೊಂಡ ಕ್ರಮದ ಬಗ್ಗೆ ಪ್ರತ್ಯೇಕವಾಗಿ ವರದಿ ನೀಡಬೇಕು. ಹಾಗೂ ಈ ಘಟನೆಗಳ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಅಲ್ಪ ಸಂಖ್ಯಾತರ ಆಯೋಗವು ತನಿಖೆ ಕೈಗೊಂಡಿದ್ದಲ್ಲಿ ಸದರಿ ತನಿಖಾ ಸಂಸ್ಥೆಗಳಿಂದ ನಡೆಸಿದ ನಡೆಸಿ ಸಲ್ಲಿಸಿದ ವರದಿಯನ್ವಯ ಸರ್ಕಾರಕ್ಕೆ/ಪ್ರತಿ ವ್ಯಕ್ತಿಗೆ ಸರ್ಕಾರಿ ಸಂಸ್ಥೆಗೆ/ಖಾಸಗಿ ಸಂಸ್ಥೆಗಳಿಗೆ ಉಂಟಾದ ಆರ್ಥಿಕ ನಷ್ಟ ಎಷ್ಟು ಎಂದು ಪ್ರಶ್ನಿಸಿರುವುದು ತಿಳಿದು ಬಂದಿದೆ .

ಈ ಗಲಭೆಗಳ ಬಗ್ಗೆ ಕರ್ತವ್ಯ ಲೋಪ ನಿರ್ಲಕ್ಷ್ಯತೆ ಎಸಗಿದ ಅಧಿಕಾರಿಗಳ ವಿರುದ್ಧ ಅಪರಾಧ ಮೊಕದ್ದೊಮೆ ಹೂಡಲಾಗಿದೆಯೇ, ಅಪರಾಧ ಮೊಕೊದ್ದಮೆ ದಾಖಲಿಸದಿದ್ದಲ್ಲಿ ದಾಖಲಿಸದಿರಲು ಕಾರಣವೇನು, ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನಷ್ಟವು ಸರ್ಕಾರಕ್ಕೆ/ಬಡಜನರಿಗೆ/ಸಂಸ್ಥೆಗಳಿಗೆ ಇತರೆ ವ್ಯಾಪಾರಸ್ಥರಿಗೆ ಉಂಟಾಗಿರುವ ನಷ್ಟವನ್ನು ಗಲಭೆ/ಘಟನೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತೆ ತೋರಿದ ಪೊಲೀಸ್ ಅಧಿಕಾರಿಗಳಿಂದ ಉಂಟಾದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಹಿತಿಯನ್ನು ಕೋರಿರುವುದು ಗೊತ್ತಾಗಿದೆ.
ಈ ಆರ್ಥಿಕ ನಷ್ಟವನ್ನು ಗಲಭೆ ನಿಯಂತ್ರಿಸಲು ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳಿಂದ ವಸೂಲಿ ಮಾಡದಿರಲು ಕಾರಣವೇನು, ಇದುವರೆಗೂ ಕ್ರಮ ಕೈಗೊಳ್ಳದಿದ್ದಲ್ಲಿ ಈಗಲಾದರೂ ಸರ್ಕಾರಕ್ಕೆ ಸಾರ್ವಜನಿಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಗಲಭೆ ನಿಯಂತ್ರಿಸಲು ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ವರದಿ ನೀಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.
ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಇಡೀ ಪಟ್ಟಣ ಪ್ರಕ್ಷುಬ್ಧವಾಗಿತ್ತು.
ಪಟ್ಟಣದ ಬದರಿಕೊಪ್ಪಲಿನ ಗಣಪತಿ ಉತ್ಸವ ಮೆರವಣಿಗೆಯಲ್ಲಿ ಮೈಸೂರು ರಸ್ತೆಗೆ ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಗಣಪತಿ ಉತ್ಸವದ ಮೆರವಣಿಗೆ ಯಲ್ಲಿದ್ದ ಹುಡುಗರ ಮೇಲೆ ಕಲ್ಲು ತೂರಿದ್ದರು ಎನ್ನಲಾಗಿತ್ತು. ಇದೇ ಘಟನೆಗೆ ಮೂಲ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ತಾರಕ್ಕೇರಿತ್ತು. ಈ ವೇಳೆ ಎರಡು ಗುಂಪುಗಳನ್ನು ಚದುರಿಸಲು ಪೊಲೀಸ್ರು ಲಾಠಿ ಪ್ರಹಾರ ನಡೆಸಿದ್ದರು.
ಕಲ್ಲು ತೂರಾಟ
ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದ ಕಾರಣ ಗಲಾಟೆಯನ್ನು ಹತೋಟಿಗೆ ತರಲು ವಿಫಲರಾಗಿದ್ದರು. ಮಂಡ್ಯ ಸರ್ಕಲ್ ಮತ್ತು ಟಿ ಮರಿಯಪ್ಪ ಸರ್ಕಲ್ ಗಳಲ್ಲಿ ಕಲ್ಲು ತೂರಾಟ ನಡೆದಿದ್ದವು. ಇದರಿಂದಾಗಿ ಜನಸಾಮಾನ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿಹೋಗಿದ್ದರು.

ಎರಡು ಗುಂಪುಗಳು ಪೊಲೀಸರಿಗೂ ಹೆದರದೇ ರಾತ್ರಿ ಒಂಬತ್ತು ಗಂಟೆಯಾದರೂ ಪರಸ್ಪರ ಕೂಗಾಟ ನಡೆಸುತ್ತಿದ್ದರು. ಒಂದೆಡೆ ಮುಸ್ಲಿಂ ಯುವಕರಿದ್ದರೇ. ಇನ್ನೊಂದೆಡೆ ಹಿಂದೂ ಯುವಕರ ತಂಡ ಚೀರಾಟ, ಕಲ್ಲು ತೋರಾಟ ನಡೆಸಿದವು. ಇದರಿಂದಾಗಿ ಇಡೀ ಪಟ್ಟಣ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ ವಾತಾವರಣ ಸೃಷ್ಟಿಯಾಗಿತ್ತು.
ಬದರಿಕೊಪ್ಪಲಿನ ಯುವಕರು ಗಣಪತಿಯನ್ನು ಪೊಲೀಸ್ ಠಾಣೆ ಮತ್ತು ಟಿ.ಮರಿಯಪ್ಪ ಸರ್ಕಲ್ ನಲ್ಲಿ ನಿಲ್ಲಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಪೊಲೀಸರು ಎರಡು ಗುಂಪುಗಳನ್ನು ಚದುರಿಸಲು ಹಲವು ಭಾರಿ ಲಾಠಿ ಪ್ರಹಾರ ನಡೆಸಿದ್ದರು. ರಾತ್ರಿ ಒಂಬತ್ತು ಗಂಟೆಯಾದರೂ ಎರಡು ಗುಂಪುಗಳ ಘರ್ಷಣೆಯನ್ನು ತಡೆಯುವಲ್ಲಿ ಪೊಲೀಸರು ಹರಸಾಹಸ ನಡೆಸಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.
ಘಟನೆ ಸ್ಥಳಕ್ಕೆ ಹೆಚ್ಚಿನ ಪೊಲೀಸರು ಹಾಗೂ ಮೇಲಾಧಿಕಾರಿಗಳು ಆಗಮಿಸಿದ್ದರೂ ಸಹ ಗಲಾಟೆ ಹತೋಟಿಗೆ ಬಂದಿರಲಿಲ್ಲ.









