2024-25 ನೇ ಸಾಲಿನಲ್ಲಿ ನಿಗಮಗಳೇ ನಿಷ್ಕ್ರೀಯ; ಗಂಗಾ ಕಲ್ಯಾಣ ಸೇರಿ ಹಲವು ಯೋಜನೆಗಳಿಗೆ ಸಿಗದ ಬಿಡಿಗಾಸು

backward classes welfare department

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಿವಿಧ ನಿಗಮಗಳಲ್ಲಿ, 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ, ಬಹಳ ಕಡಿಮೆ ಪ್ರಮಾಣದ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ನಿಗಮಗಳು ಕೇವಲ ಒಂದೆರಡು ಯೋಜನೆಗಳಲ್ಲಿನ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ಒದಗಿಸಿವೆ.

 

ಉಳಿದ ಯೋಜನೆಗಳ ಫಲಾನುಭವಿಗಳಿಗೆ ಒಂದು ಪೈಸೆಯ ನೆರವನ್ನೂ ನೀಡಲಾಗಿಲ್ಲ. ಯಾವುದೇ ನಿಗಮವೂ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗಕ್ಕಾಗಿ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ ನೀಡುವ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಗಳಿಗೆ ಒಂದೇ ಒಂದು ರು. ಆರ್ಥಿಕ ನೆರವು ನೀಡಿಲ್ಲ.

 

ಈ ಎಲ್ಲ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಮತ್ತು ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ಇದ್ದರೂ ಕೂಡ, ಫಲಾನುಭವಿಗಳಿಗೆ ನೆರವು ಒದಗಿಸುವಲ್ಲಿ ನಿಮಗಳು ವಿಫಲವಾಗಿದ್ದವು.

 

ಆಡಳಿತಾತ್ಮಕ ಮಂಜೂರಾತಿ ದೊರೆತಿರುವ ಫಲಾನುಭವಿಗಳ ಸಂಖ್ಯೆಗೂ ಆರ್ಥಿಕ ನೆರವು ಪಡೆದ ಫಲಾನುಭವಿಗಳ ಸಂಖ್ಯೆಗೂ ಅಜಗಜಾಂತರವಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು ಹನ್ನೊಂದು ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ನಿಗಮಗಳು ಬೆರಳೆಣಿಕಿಯಷ್ಟು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಷ್ಟೇ ಸೀಮಿತವಾಗಿವೆ.

 

ಇದನ್ನು ಬಿಟ್ಟರೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರತಿ ಫಲಾನುಭವಿಗೆ ತಲಾ ಒಂದು ಲಕ್ಷ ರು.ಗಳಂತೆ ಸಾಲ ನೀಡಿವೆ. ಎಲ್ಲ ನಿಗಮಗಳೂ 6-7 ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಬಹುತೇಕ ಯೋಜನೆಗಳ ಫಲಾನುಭವಿಗಳಿಗೆ 2024-25ನೇ ಸಾಲಿನಲ್ಲಿ ನೆರವು  ದೊರೆತಿಲ್ಲ. ಎರಡು ನಿಗಮಗಳು ಫಲಾನುಭವಿಗಳಿಗೆ ನೆರವಾಗುವುದಕ್ಕಿಂತ ಹೆಚ್ಚಾಗಿ ಜಾಹೀರಾತಿಗೆ, ಆಡಳಿತಾತ್ಮಕ ವೆಚ್ಚಗಳಿಗೆ ಹೆಚ್ಚು ಖರ್ಚು ಮಾಡಿವೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು ಒಂಬತ್ತು ನಿಗಮಗಳು 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಒಟ್ಟಾರೆ 20,959 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದವು. 14,027 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ಕೂಡ ದೊರೆತಿತ್ತು. ಆದರೆ ಕೇವಲ 3,292 ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ನೀಡಿವೆ. ಇದಕ್ಕಾಗಿ ಕೇವಲ 46 ಕೋಟಿ 40 ಲಕ್ಷ ರು.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 100 ಕೋಟಿ, ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮಕ್ಕೆ 100 ಕೋಟಿ, ಕರ್ನಾಟಕ ವೀರಶೈವ-ಲಿಂಗಾಯತ ನಿಗಮಕ್ಕೆ 60 ಕೋಟಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 13 ಕೋಟಿ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 5 ಕೋಟಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 8 ಕೋಟಿ ರು.ಗಳನ್ನು ಹಂಚಿಕೆ ಮಾಡಿದ್ದರು.

 

ಡಿಸೆಂಬರ್‌ 8 ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಗಮಗಳಿಗೆ ಸಂಬಂಧಿಸಿದಂತೆ ಕೇಳಲಾಗುವ ಪ್ರಶ್ನೆಗೆ ಉತ್ತರವನ್ನು ನೀಡಲು ಇಲಾಖೆಯು ಈ  ಮಾಹಿತಿಯನ್ನು ಸಿದ್ಧಪಡಿಸಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್‌. ತಂಗಡಗಿ ಅವರು ಈ ಉತ್ತರವನ್ನು ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ತಿಗೆ ಒದಗಿಸಲಿದ್ದಾರೆ.

 

ಇಲಾಖೆ ಸಿದ್ಧಪಡಿಸಿದ ಈ ಉತ್ತರಗಳು ʻದಿ ಫೈಲ್‌ʼಗೆ ಲಭ್ಯವಾಗಿವೆ.

 

ಬಹಳ ಮುಖ್ಯವಾಗಿ, ʻಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮʼ 2024-25ನೇ ಸಾಲಿನಲ್ಲಿ ಜಾಹೀರಾತು, ಮಾಹಿತಿ ಸಂವಹನ, ಗಣಕೀಕರಣ ಮತ್ತು ಸಿಬ್ಬಂದಿ ತರಬೇತಿಗೆ ಎಂದು ಒಂದು ಕೋಟಿ ರು. ಖರ್ಚು ಮಾಡಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಡಿಬಿಸಿಡಿಸಿ) ಆಡಳಿತಾತ್ಮಕ ವೆಚ್ಚವೆಂದು 3 ಕೋಟಿ ರು.ಗಳನ್ನು ಈ ನಿಗಮದ ಖಾತೆಯಿಂದ ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಆಡಳಿತಾತ್ಮಕ ವೆಚ್ಚವೇ 2 ಕೋಟಿ 10 ಲಕ್ಷ ರು.ಗಳಾಗಿವೆ.

 

 

ಈ ನಿಗಮವು ಜಾರಿಯಲ್ಲಿರುವ ಒಟ್ಟು ಏಳು ಯೋಜನೆಗಳಿಗೆ 2,837 ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ಇವರಿಗೆ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ಕೂಡ ದೊರೆತಿತ್ತು. ಆದರೆ ಇದರಲ್ಲಿ ಕೇವಲ 905 ಫಲಾನುಭವಿಗಳಿಗೆ ಒಟ್ಟಾರೆ 15 ಕೋಟಿ 3 ಲಕ್ಷ ರು. ಆರ್ಥಿಕ ನೆರವು ನೀಡಲಾಗಿದೆ. ಇದರಲ್ಲಿ ಶೈಕ್ಷಣಿಕ ಸಾಲವೇ ಅಧಿಕವಾಗಿದ್ದು, 580 ಫಲಾನುಭವಿಗಳಿಗೆ ಒಟ್ಟು 5 ಕೋಟಿ 78 ಲಕ್ಷ ರು. ಶೈಕ್ಷಣಿಕ ಸಾಲ ನೀಡಲಾಗಿದೆ.

 

ಇನ್ನು ಒಂದು ಕೋಟಿ ರು.ಗಳನ್ನು 10 ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಸಾಲವಾಗಿ ನೀಡಲಾಗಿದೆ. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ 315 ಫಲಾನುಭವಿಗಳಿಗೆ 3 ಕೋಟಿ 15 ಲಕ್ಷ ಆರ್ಥಿಕ ನೆರವು ಒದಗಿಸಲಾಗಿದೆ.

 

ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗಕ್ಕಾಗಿ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ ನೀಡುವ ಯೋಜನೆ, ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಯಡಿ ಆಯ್ಕೆಯಾಗಿರುವ 1,334 ಫಲಾನುಭವಿಗಳಿಗೆ ಒಂದೇ ಒಂದು ರು. ಆರ್ಥಿಕ ನೆರವನ್ನೂ 2024-25ನೇ ಸಾಲಿನಲ್ಲಿ ನೀಡಲಾಗಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

 

ವೀರಶೈವ-ಲಿಂಗಾಯತ ನಿಗಮದ್ದು ಇದೇ ಕತೆ

 

ಕರ್ನಾಟಕ ವೀರಶೈವ-ಲಿಂಗಾಯತ ನಿಗಮ ಕೂಡ 2024-25ನೇ ಆರ್ಥಿಕ ಸಾಲಿನಲ್ಲಿ ಜಾಹೀರಾತು, ಮಾಹಿತಿ ಸಂವಹನ, ಗಣಕೀಕರಣ ಮತ್ತು ಸಿಬ್ಬಂದಿ ತರಬೇತಿಗಾಗಿ 60 ಲಕ್ಷ ರು. ಖರ್ಚು ಮಾಡಿದೆ. ಈ ನಿಗಮ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಡಿಬಿಸಿಡಿಸಿ) ಆಡಳಿತಾತ್ಮಕ ವೆಚ್ಚವೆಂದು 3 ಕೋಟಿ ರು.ಗಳನ್ನು ಈ ನಿಗಮದ ಖಾತೆಯಿಂದ ನೀಡಿರುವುದು ಈ ದಾಖಲೆಗಯಿಂದ ಗೊತ್ತಾಗಿದೆ.

 

ನಿಗಮದ ಸಿಬ್ಬಂದಿಗಳ ಆಡಳಿತಾತ್ಮಕ ವೆಚ್ಚವೆಂದು 2 ಕೋಟಿ 60 ಲಕ್ಷ ರು. ಖರ್ಚು ಮಾಡಲಾಗಿದೆ. ಈ ನಿಗಮವು ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 3,214 ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ಇವರಿಗೆ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ಕೂಡ ದೊರೆತಿತ್ತು. ಆದರೆ ಕೇವಲ 989 ಫಲಾನುಭವಿಗಳಿಗೆ ಮಾತ್ರ ಆರ್ಥಿಕ ಸಹಾಯ ನೀಡಲಾಗಿದೆ. ಒಟ್ಟಾರೆ 16 ಕೋಟಿ 19 ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು  ಉತ್ತರದಲ್ಲಿ ತಿಳಿಸಿದ್ದಾರೆ.

 

 

ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ, ಪ್ಯಾರಾಮೆಡಿಕಲ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗಾಗಿ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡುವ ಯೋಜನೆಯಾದ ಬಸವ ಬೆಳಗು (ನವೀಕರಣ) ಯೋಜನೆಯಡಿ 757 ಫಲಾನುಭವಿಗಳಿಗೆ ಒಟ್ಟಾರೆ ಏಳು ಕೋಟಿ 57 ಲಕ್ಷದ 12 ಸಾವಿರ ರು.ಗಳ ಆರ್ಥಿಕ ನೆರವನ್ನು ಒದಗಿಸಲಾಗಿದೆ.

 

ಕಾಯಕ ಕಿರಣ ಯೋಜನೆಯಡಿ 144 ಫಲಾನುಭವಿಗಳಿಗೆ ಕೇವಲ 1 ಕೋಟಿ 44 ಲಕ್ಷ ರು.ಗಳನ್ನು ಒದಗಿಸಲಾಗಿದೆ. ಒಟ್ಟು 3,214 ಫಲಾನುಭವಿಗಳಿಗೆ ಆರ್ಥಿಕ ಸಹಾಯ ಮಾಡಲು 51 ಕೋಟಿ 83 ಲಕ್ಷ ರು.ಗಳಿಗೆ ಆಡಳಿತಾತ್ಮಕ ಮಂಜೂರಾತಿ ಕೂಡ ನೀಡಲಾಗಿತ್ತು. ಆದರೆ ಡಿಬಿಟಿ ಮೂಲಕ 16 ಕೋಟಿ ರು. ಮಾತ್ರ ಫಲಾನುಭವಿಗಳ ಕೈ ಸೇರಿದೆ ಎಂಬುದು ಈ ಉತ್ತರದಿಂದ ಗೊತ್ತಾಗಿದೆ.

 

10,547 ಫಲಾನುಭವಿಗಳಲ್ಲಿ 572 ಮಂದಿಗಷ್ಟೇ ನೆರವು!

 

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 2024-25ನೇ ಸಾಲಿನಲ್ಲಿ ವಿವಿಧ ಒಟ್ಟು ಎಂಟು ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 10,547 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ 5,276 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಇದಕ್ಕಾಗಿ ಒಟ್ಟಾರೆ 24 ಕೋಟಿ 34 ಲಕ್ಷ ರು.ಗಳಿಗೆ ಆಡಳಿತಾತ್ಮಕ ಮಮಜೂರಾತಿ ಕೂಡ ನೀಡಲಾಗಿತ್ತು. ಆದರೆ ಕೇವಲ 572 ಫಲಾನುಭವಿಗಳಿಗೆ 6 ಕೋಟಿ 53 ಲಕ್ಷದ 17 ಸಾವಿರ ರು.ಗಳ ಆರ್ಥಿಕ ನೆರವು ನೀಡಲಾಗಿದೆ ಎಂಬುದು ಈ ಉತ್ತರದಿಂದ ಬಹಿರಂಗಗೊಂಡಿದೆ.

 

 

ಈ ಫಲಾನುಭವಿಗಳಲ್ಲಿ ಅರಿವು ಶೈಕ್ಷಣಿಕ ಸಾಲ (ಉನ್ನತ ಶಿಕ್ಷಣಕ್ಕಾಗಿ ಕಡಿಮೆ ಬಡ್ಡಿದರದ ಸಾಲವನ್ನು ಒದಗಿಸುವ ಯೋಜನೆ ಇದಾಗಿದೆ) ಪಡೆದವರ ಸಂಖ್ಯೆಯೇ ಹೆಚ್ಚು. ಒಟ್ಟು 559 ಫಲಾನುಭವಿಗಳಿಗೆ ಒಟ್ಟಾರೆ 5 ಕೋಟಿ 23 ಲಕ್ಷದ 17 ಸಾವಿರ ರು. ಆರ್ಥಿಕ ನೆರವು ಒದಗಿಸಲಾಗಿದೆ.

 

ಇನ್ನು ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ಸಾಲ ಯೋಜನೆಯಡಿ 13 ಫಲಾನುಭವಿಗಳಿಗೆ 1 ಕೋಟಿ 30 ಲಕ್ಷ ರು. ಆರ್ಥಿಕ ನೆರವನ್ನು ನಿಗಮ ನೀಡಿದೆ. ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ 5,333 ಫಲಾನುಭವಿಗಳನ್ನು ನಿಗಮ ಆಯ್ಕೆ ಮಾಡಿತ್ತು. ಇದರಲ್ಲಿ 2,856 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ಕೂಡ ದೊರೆತಿತ್ತು. ಆದರೆ ಒಂದೇ ಒಂದು ಪೈಸೆ ನೆರವು ನೀಡಲೂ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿರಲಿಲ್ಲ ಎಂದು  ಮಾಹಿತಿ ನೀಡಿರುವುದು  ನಿಗಮದ ನಿರ್ದೇಶಕರು ಉತ್ತರದಿಂದ ಗೊತ್ತಾಗಿದೆ.

 

ನಿಗಮವು 2024-25ನೇ ಸಾಲಿನಲ್ಲಿ ಗಂಗಾಕಲ್ಯಾಣ ವೈಯುಕ್ತಿ ನೀರಾವರಿ ಯೋಜನೆ, ಹೊಸ ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ, ಸ್ವಾವಲಂಬಿ ಸಾರಥಿ ( ನಾಲ್ಕು ಚಕ್ರಗಳ ವಾಹನ) ಯೋಜನೆ, ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ ನೀಡುವ ಯೋಜನೆಯಡಿ ಆಯ್ಕೆಯಾಗಿದ್ದ ಒಬ್ಬರೇ ಒಬ್ಬ ಫಲಾನುಭವಿಗೆ ಕೂಡ ಆರ್ಥಿಕ ನೆರವು ಒದಗಿಸಲಾಗಿಲ್ಲ.

 

12 ಕೋಟಿ ಮಂಜೂರಾತಿ, ಫಲಾನುಭವಿಗಳಿಗೆ ಸಿಕ್ಕಿದ್ದು 86 ಲಕ್ಷ

 

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಕೂಡ ಸಮುದಾಯದ ಜನರಿಗೆ ಆರ್ಥಿಕ ನೆರವು ನೀಡುವಲ್ಲಿ ವಿಫಲವಾಗಿದೆ. ನಿಗಮದಲ್ಲಿ ಜಾರಿಯಲ್ಲಿರುವ ವಿವಿಧ 7 ಯೋಜನೆಗಳಡಿ 861 ಫಲಾನುಭವಿಗಳನ್ನು 2024-25ನೇ ಸಾಲಿನಲ್ಲಿ ಆಯ್ಕೆ ಮಾಡಿತ್ತು. ಇವರಿಗೆ ನೆರವಾಗಲು 12 ಕೋಟಿ 16 ಲಕ್ಷದ 50 ಸಾವಿರ ರು.ಗಳ ಆಡಳಿತಾತ್ಮಕ ಮಂಜೂರಾತಿ ಕೂಡ ನೀಡಲಾಗಿತ್ತು. ಆದರೆ ಇದುವರೆಗೆ ಕೇವಲ 92 ಮಂದಿ ಫಲಾನುಭವಿಗಳಿಗೆ ಒಟ್ಟಾರೆ 86 ಲಕ್ಷ ರು.ಗಳ ಆರ್ಥಿಕ ನೆರವನ್ನು ಒದಗಿಸಲಾಗಿದೆ ಎಂಬುದು ವಿಧಾನ ಪರಿಷತ್ತಿಗೆ ಸಲ್ಲಿಸಲಾಗಿರುವ ಈ ದಾಖಲೆಯಿಂದ ಗೊತ್ತಾಗಿದೆ.

 

 

ನಿಗಮದಲ್ಲಿ ಜಾರಿಯಲ್ಲಿರುವ ಒಟ್ಟು ಎಂಟು ಯೋಜನೆಗಳ ಪೈಕಿ ಕೇವಲ ʻಅರಿವು ಶೈಕ್ಷಣಿಕ ನೇರಸಾಲ ಯೋಜನೆ (ನವೀಕರಣ)ʼ ಯಡಿ ಮಾತ್ರ ಆರ್ಥಿಕ ನೆರವು ಒದಗಿಸಲಾಗಿದೆ. ಬಾಕಿ ಉಳಿದ ಎಲ್ಲಾ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಡಿಬಿಟಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

 

ವಿದೇಶಿ ವ್ಯಾಸಂಗಕ್ಕೆ ನೆರವು ನೀಡುವ ಯೋಜನೆಗೆ ಐದು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತಾದರೂ, 2024-25ನೇ ಸಾಲಿನಲ್ಲಿ ಒಬ್ಬರಿಗೂ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿಲ್ಲ. ಪಂಚವೃತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡುವ ಯೋಜನೆಯಡಿ 125, ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 225, ಹೊಸ ಅರಿವು ಶೈಕ್ಷಣಿಕ ನೇರ ಸಾಲ ಯೋಜನೆಯಡಿ 100, ಗಂಗಾ ಕಲ್ಯಾಣ ಯೋಜನೆಯಡಿ 152, ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳ ಸಹಯೋಗದೊಂದಿಗೆ ನೇರಸಾಲ ನೀಡುವ ಯೋಜನೆಯಡಿ 34, ಸ್ವಾವಲಂಬಿ ಸಾರಥಿ ಯೋಜನೆಯಡಿ 70 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

 

ಅಲೆಮಾರಿಗಳಿಗೆ ಕೊಟ್ಟಿದ್ದು ಕೇವಲ 1.42 ಕೋಟಿ

 

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಕೇವಲ 144 ಫಲಾನುಭವಿಗಳಿಗೆ 1.42 ಕೋಟಿ ರು. ಆರ್ಥಿಕ ನೆರವು ನೀಡಿದೆ. ನಿಗಮದ ಒಟ್ಟು ಏಳು ಯೋಜನೆಗಳಿಗೆ ಸಂಬಂಧಿಸಿದಂತೆ 914 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತಾದರೂ ಕೇವಲ 287 ಮಂದಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಇದರಲ್ಲಿ 144 ಮಂದಿಗೆ ಮಾತ್ರ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ.

 

 

ಸ್ವಯಂ ಉದ್ಯೋಗ ಸಾಲ ಯೋಜನೆಯಡಿ 114 ಮಂದಿಗೆ ತಲಾ ಒಂದು ಲಕ್ಷ ರು. ಆರ್ಥಿಕ ನೆರವಿನಂತೆ ಒಟ್ಟು 114 ಲಕ್ಷ ರು. ನೀಡಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ) ಅಡಿಯಲ್ಲಿ 25 ಮಂದಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತಾದರೂ 30 ಮಂದಿಗೆ ಒಟ್ಟು 28.44 ಲಕ್ಷ ರು. ಆರ್ಥಿಕ ನೆರವು ನೀಡಲಾಗಿದೆ. ಈ ಎರಡು ಯೋಜನೆಗಳನ್ನು  ಹೊರತುಪಡಿಸಿ ಮತ್ತೆ ಯಾವ ಯೋಜನೆಯ ಫಲಾನುಭವಿಗಳಿಗೂ ಆರ್ಥಿಕ ನೆರವು ನೀಡಲಾಗಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿಧಾನಪರಿಷತ್ತಿನಲ್ಲಿ ನೀಡಲು ಸಿದ್ಧಪಡಿಸಲಾಗಿರುವ ಈ ಉತ್ತರದಲ್ಲಿ ತಿಳಿಸಿದ್ದಾರೆ.

 

ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಕತೆಯೂ ಇದೇ ರೀತಿಯಾಗಿದೆ. ಈ ನಿಗಮವು 2024-25ನೇ ಸಾಲಿನಲ್ಲಿ 193 ಫಲಾನುಭವಿಗಳಿಗೆ 1.76 ಕೋಟಿ ರು.ಗಳಷ್ಟೇ ಆರ್ಥಿಕ ನೆರವು ನೀಡಿದೆ. ಈ ನಿಗಮದಲ್ಲಿ ಜಾರಿಯಲ್ಲಿರುವ ಆರು ವಿವಿಧ ಯೋಜನೆಗಳಿಗೆ ಒಟ್ಟು 716 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ 677 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿಯನ್ನೂ ನೀಡಲಾಗಿತ್ತು. ಆದರೆ ಕೊನೆಗೆ ಕೇವಲ 193 ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ಡಿಬಿಟಿ ಮೂಲಕ ಒದಗಿಸಲಾಗಿದೆ.

 

 

ಸ್ವಯಂ ಉದ್ಯೋಗಕ್ಕೆ ಸಾಲ ಮತ್ತು ಸಹಾಯ ಧನ ನೀಡುವ ಯೋಜನೆಯಡಿ 68 ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರು.ಗಳಂತೆ 68 ಲಕ್ಷ ರು. ಆರ್ಥಿಕ ನೆರವು ನೀಡಲಾಗಿದೆ. ಅದೇ ರೀತಿ 123 ಫಲಾನುಭವಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ) ಅಡಿಯಲ್ಲಿ 106.05 ಲಕ್ಷ ರು. ಹಾಗೂ ಹೊಸ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಇಬ್ಬರಿಗೆ 2 ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ.

 

ಸ್ವಯಂ ಉದ್ಯೋಗಕ್ಕೆ ತಲಾ 1 ಲಕ್ಷ

 

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಕೇವಲ 145 ಫಲಾನಭವಿಗಳಿಗೆ 141.76 ಲಕ್ಷ ರು. ಆರ್ಥಿಕ ನೆರವು ಒದಗಿಸಿದೆ. ನಿಮಗವು ಒಟ್ಟು ಏಳು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೇವಲ ಮೂರು ಯೋಜನೆಗಳಡಿ ಆಯ್ಕೆಯಾಗಿರುವ ಫಲಾನುಭವಿಗಳಿಗಷ್ಟೇ ಆರ್ಥಿಕ ನೆರವು ಒದಗಿಸಲಾಗಿದೆ.

 

ಈ ಸಾಲಿನಲ್ಲಿ ಈ ಎಲ್ಲ ಯೋಜನೆಗಳಡಿ 833 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ 285 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಇದಕ್ಕಾಗಿ ಕೇವಲ 45 ಲಕ್ಷ ರು.ಗಳಿಗೆ ಆಡಳಿತಾತ್ಮ ಮಂಜೂರಾತಿ ನೀಡಲಾಗಿತ್ತು. ಆದರೂ 145 ಫಲಾನುಭವಿಗಳಿಗೆ ನಿಗಮವು 141.76 ಲಕ್ಷ ರು. ಆರ್ಥಿಕ ನೆರವು ಒದಗಿಸಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

 

 

145 ಫಲಾನುಭವಿಗಳ ಪೈಕಿ 108 ಮಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ತಲಾ ಒಂದು ಲಕ್ಷ ರು.ಗಳಂತೆ 108 ಲಕ್ಷ ರು.ಗಳನ್ನು ನೀಡಲಾಗಿದೆ. ಅರಿವು ಶೈಕ್ಷಣಿಕ ಸಾಲ (ನವೀಕರ) ಯೋಜನೆಯಡಿ 34 ಫಲಾನುಭವಿಗಳಿಗೆ 30.76 ಲಕ್ಷ ರು. ಹಾಗೂ ಹೊಸ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಮೂವರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರು.ಗಳಂತೆ ಮೂರು ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ.

 

ಕೇವಲ 126 ಫಲಾನುಭವಿಗಳಿಗೆ ನೆರವು

 

ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಕೂಡ ಕೇವಲ 126 ಫಲಾನುಭವಿಗಳಿಗೆ 125.75 ಲಕ್ಷ ರು. ಆರ್ಥಿಕ ನೆರವು ನೀಡಿದೆ. ಈ ನಿಗಮವು ಒಟ್ಟು ಏಳು ಯೋಜನೆಗಳನ್ನು ಹೊಂದಿದ್ದು, ಇದರಲ್ಲಿ ಮೂರು ಯೋಜನೆಗಳಲ್ಲಿನ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವನ್ನು ಒದಗಿಸಲಾಗಿದೆ.

 

ನಿಗಮದ ಏಳು ಯೋಜನೆಗಳಡಿ ಒಟ್ಟು 473 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ 287 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಇವರಲ್ಲಿ 126 ಫಲಾನುಭವಿಗಳು ಮಾತ್ರ ಅರ್ಥಿಕ ನೆರವು ಪಡೆದಿದ್ದಾರೆ.

 

 

ಸ್ವಯಂ ಉದ್ಯೋಗ ಸಾಲ ಯೋಜನೆಯಡಿ 104 ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರು.ಗಳಂತೆ 104 ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ) ಅಡಿಯಲ್ಲಿ 20 ವಿದ್ಯಾರ್ಥಿಗಳಿಗೆ 19.75 ಲಕ್ಷ ರು. ಹಾಗೂ ಕೇವಲ ಇಬ್ಬರಿಗೆ ಹೊಸ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ತಲಾ ಒಂದು ಲಕ್ಷ ರು.ಗಳಂತೆ 2 ಲಕ್ಷ ರು. ಆರ್ಥಿಕ ನೆರವು ನೀಡಲಾಗಿದೆ. ಈ ಶೈಕ್ಷಣಿಕ ಸಾಲ ನೀಡಲು ಒಟ್ಟು 71 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಹತ್ತು ಮಂದಿಗೆ ಸಾಲ ನೀಡಲು ಆರ್ಥಿಕ ಮಂಜೂರಾತಿಯೂ ದೊರೆತಿತ್ತು. ಆದರೆ ಕೇವಲ ಇಬ್ಬರಿಗೆ ಮಾತ್ರ ಸಾಲ ನೀಡಲಾಗಿದೆ. ಈ ಮಾಹಿತಿಯನ್ನು ವಿಧಾನ ಪರಿಷತ್ತಿಗೆ ನೀಡಲಾಗಿರುವ ಉತ್ತರದಲ್ಲಿ ನೀಡಲಾಗಿದೆ.

 

5.37 ಕೋಟಿ ಮಂಜೂರು, ಕೊಟ್ಟಿದ್ದು 1.95 ಕೋಟಿ!

 

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಕೂಡ ಕೇವಲ 126 ಫಲಾನುಭವಿಗಳಿಗೆ 2024-25ನೇ ಸಾಲಿನಲ್ಲಿ ಆರ್ಥಿಕ ನೆರವು ನೀಡಿದೆ. ಒಟ್ಟು 195 ಲಕ್ಷ ರು.ಗಳನ್ನಷ್ಟೇ ಆರ್ಥಿಕ ನೆರವು ನೀಡಲು ಖರ್ಚು ಮಾಡಲಾಗಿದೆ. ನಿಗಮವು ಏಳು ಯೋಜನೆಗಳನ್ನು ಜಾರಿಗೆ ತಂದಿದ್ದು, ಒಟ್ಟು 564 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲಲಿ 303 ಫಲಾನುಭವಿಗಳಿಗಷ್ಟೇ ಆರ್ಥಿಕ ನೆರವು ಒದಗಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಇದಕ್ಕಾಗಿ ಒಟ್ಟಾರೆ 5.37 ಕೋಟಿ ರು.ಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಆದರೆ. ಕೇವಲ 1.95 ಕೋಟಿ ರು.ಗಳನ್ನಷ್ಟೇ ಫಲಾನುಭವಿಗಳಿಗೆ ಡಿಬಿಟಿ ಮಾಡಲಾಗಿದೆ.

 

ನಿಗಮದ ಏಳು ಯೋಜನೆಗಳ ಪೈಕಿ ಮೂರು ಯೋಜನೆಗಳ ಫಲಾನುಭವಿಗಳು ಆರ್ಥಿಕ ನೆರವು ಪಡೆದಿದ್ದಾರೆ. ಇದರಲ್ಲಿ ಶೈಕ್ಷಣಿಕ ಸಾಲ ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ಈ ನಿಗಮದ ವಿಶೇಷ. ಅರಿವು ಶೈಕ್ಷಣಿಕ ನೇರ ಸಾಲ ಯೋಜನೆ (ನವೀನ) ಅಡಿಯಲ್ಲಿ 32 ಫಲಾನುಭವಿಗಳಿಗೆ ಒಟ್ಟು 30. 23 ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ. ಇನ್ನು ಹೊಸ ಅರಿವು ಶೈಕ್ಷಣಿಕ ನೇರ ಸಾಲ ಯೋಜನೆಯಡಿ 61 ಫಲಾನುಭವಿಗಳಿಗೆ 59.87 ಲಕ್ಷ ರು. ಆರ್ಥಿಕ ನೆರವು ಒದಗಿಸಲಾಗಿದೆ.

 

 

ಇದಲ್ಲದೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಒಟ್ಟು 84 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ 81 ಫಲಾನುಭವಿಗಳಿಗೆ ನೆರವು ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು. ಆದರೆ 33 ಫಲಾನುಭವಿಗಳಿಗೆ ಮಾತ್ರ ತಲಾ ಒಂದು ಲಕ್ಷ ರು.ಗಳಂತೆ ಒಟ್ಟು 33 ಲಕ್ಷ ರು. ಸಾಲ ನೀಡಲಾಗಿದೆ ಎಂದು ಈ ಉತ್ತರದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

 

 

ಅಧ್ಯಕ್ಷರೇ ಇಲ್ಲದ ಹಿಂದುಳಿದ ವರ್ಗಗಳ 8 ನಿಗಮಗಳಲ್ಲಿ ಬಾಕಿ ಉಳಿದಿದೆ 72.55 ಕೋಟಿ ಅನುದಾನ

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂ ದು  2 ವರ್ಷವಾದರೂ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿತ್ತು. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts