ಬೆಂಗಳೂರು; ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಸೇವಾ ನಿರತ ಶಿಕ್ಷಕರು ಟಿಇಟಿ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಆದರೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕುರಿತಂತೆ ಸಲ್ಲಿಸಿರುವ ಅಪೀಲುಗಳನ್ನು ತೀರ್ಪಿಗಾಗಿ ಕಾಯ್ದಿರಿಸಿದೆ. ಹೀಗಾಗಿ ಈ ನಿಯಮವು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಶಿಕ್ಷಕರುಗಳಿಗೆ ಅನ್ವಯವಾಗುವುದೇ ಅಥವಾ ಇಲ್ಲವೇ ಎಂಬುದು ಈ ಅಪೀಲುಗಳ ತೀರ್ಪಿನ ಆಧಾರದ ಮೇಲೆ ನಿರ್ಧರಿತವಾಗಲಿದೆ ಎಂದು ಕಾನೂನು ಇಲಾಖೆಯು ಶಾಲಾ ಶಿಕ್ಷಣ ಇಲಾಖೆಗೆ ತನ್ನ ಅಭಿಪ್ರಾಯ ನೀಡಿದೆ.
ಇದೇ ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ಟಿಇಟಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿವಿಧ ಮಗ್ಗುಲುಗಳ ಕುರಿತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದೆ.
ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ (ಇಪಿ 132 ಡಿಪಿಐ 2025 (1907803) ಕೋರಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸಲ್ಲಿಸಿದ್ದ ಕಡತವನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು 2025ರ ಅಕ್ಟೋಬರ್ 4ರಂದು ತನ್ನ ಅಭಿಪ್ರಾಯವನ್ನೂ ನೀಡಿದೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?
ಸಿವಿಲ್ ಅಪೀಲಿಗೆ (ಸಂಖ್ಯೆ 1385/2025) ಗೆ ಸಂಬಂಧಿಸಿದಂತೆ 2025ರ ಸೆ.1ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಭಾಗ (VIII) ನ ಕಂಡಿಕೆ 214ರಿಂದ 219ನ್ನು ಕಾನೂನು ಇಲಾಖೆಯು ಪರಿಶೀಲಿಸಿದೆ. ಇದರ ಪ್ರಕಾರ ಸೇವೆಯಲ್ಲಿರುವ ಶಿಕ್ಷಕರಿಗೆ ಟಿಇಟಿ ಅನ್ವಯವಾಗುವ ಕುರಿತು ವಿವರಿಸಿದೆ. ಇದರ ಪ್ರಕಾರ ಸೇವಾ ನಿರತ ಶಿಕ್ಷಕರು ಟಿಇಟಿ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕುರಿತಂತೆ ಸಲ್ಲಿಸಿರುವ ಅಪೀಲುಗಳನ್ನು ತೀರ್ಪಿಗಾಗಿ ಕಾಯ್ದಿರಿಸಿದೆ. ಹೀಗಾಗಿ ಈ ನಿಯಮವು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಅನ್ವಯವಾಗುವುದೇ ಅಥವಾ ಇಲ್ಲವೇ ಎಂಬುದು ಈ ಅಪೀಲುಗಳ ತೀರ್ಪಿನ ಆಧಾರದ ಮೇಲೆ ನಿರ್ಧರಿತವಾಗಲಿದೆ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅದೇ ರೀತಿ ಟಿಇಟಿ ನಿಯಮದಂತೆ ಸೇವಾ ನಿರತ ಶಿಕ್ಷಕರೆಲ್ಲರೂ ಟಿಇಟಿ ಬರೆಯಬೇಕು. ಟಿಇಟಿ ಪರೀಕ್ಷೆ ಬರೆಯದೇ, ಬರೆದು ಉತ್ತೀರ್ಣರಾಗದೇ ಇರುವ ಶಿಕ್ಷಕರು ಸ್ವಯಂ ನಿವೃತ್ತಿ ಅಥವಾ ಕಡ್ಡಾಯ ನಿವೃತ್ತಿ (ಎಲ್ಲಾ ಸೌಲಭ್ಯಗಳ ಸಹಿತ) ಹೊಂದಬಹುದು. 05 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಶಿಕ್ಷಕರು ಟಿಇಟಿ ಉತ್ತೀರ್ಣರಾಗದೇ ಇದ್ದರೂ ಸೇವೆಯಲ್ಲಿ ಮುಂದುವರೆಯಬಹುದು. ಆದರೂ ಯಾವುದೇ ಬಡ್ತಿಯನ್ನು ಪಡೆಯಲು ಅರ್ಹರಿರುವುದಿಲ್ಲ.
ಪ್ರಸ್ತುತ 2011ರ ಟಿಇಟಿ ನಿಯಮಗಳನ್ನು ಅದಕ್ಕೂ ಮೊದಲು ನೇಮಕಾತಿ ಹೊಂದಿದ ಶಿಕ್ಷಕರುಗಳಿಗೆ ಅನ್ವಯಿಸುವ ಕುರಿತು ತೊಡಕಗಳು ಎದುರಾದಲ್ಲಿ ಅಥವಾ ಈ ಕುರಿತು ಸಾಧಕ ಬಾಧಕಗಳೇನಾದರೂ ಇದ್ದಲ್ಲಿ ಆಡಳಿತ ಇಲಾಖೆಯು ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಕ್ರಮ ವಹಿಸಬಹುದು ಎಂದು ಕಾನೂನು ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.
ಹಾಗೆಯೇ ಈಗಾಗಲೇ ಈ ಆದೇಶಗಳ ಕುರಿತು ಕೇರಳ ರಾಜ್ಯವು ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಕ್ರಮ ವಹಿಸಿದೆ ಎಂದು ತನ್ನ ಅಭಿಪ್ರಾಯದಲ್ಲಿ ಗಮನಸೆಳೆದಿದೆ.
ಈ ಕುರಿತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಚಿವ ಎಚ್ ಕೆ ಪಾಟೀಲ್ ಅವರೂ ಸಹ ಚರ್ಚಿಸಿದ್ದಾರೆ. ಪುನರ್ ಅರ್ಜಿ ಪರಿಶೀಲನಾ ಅರ್ಜಿ ಸಲ್ಲಿಸಲು ಸಚಿವರು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದೆ.

ಕಾನೂನು ಇಲಾಖೆಯ ಅಭಿಪ್ರಾಯದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯು ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಶಿಕ್ಷಕರಾಗಿ ನೇಮಕಗೊಳ್ಳಲು ಮತ್ತು ಸೇವೆಯಲ್ಲಿರುವ ಶಿಕ್ಷಕರು ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಮೇಲ್ಮನವಿ ಸಲ್ಲಿಸಿದವರಲ್ಲಿ ಒಬ್ಬರಾದ ಅಂಜುಮನ್ ಇಶಾತ್-ಎ-ತಲೀಮ್ ಟ್ರಸ್ಟ್ (ಮಾನ್ಯತೆ ಪಡೆದ ಅಲ್ಪಸಂಖ್ಯಾತ ಶಿಕ್ಷಣ ಸಮಾಜ) ಸಹ ಈ ಪ್ರಕರಣದಲ್ಲಿ ಮಹಾರಾಷ್ಟ್ರ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ರಾಜ್ಯವು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಟಿಇಟಿಯನ್ನು ಕಡ್ಡಾಯಗೊಳಿಸಬಹುದೇ ಮತ್ತು ಅದು ಅವರ ಹಕ್ಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಯನ್ನು ಉನ್ನತ ನ್ಯಾಯಾಲಯವು ದೊಡ್ಡ ಪೀಠಕ್ಕೆ ಉಲ್ಲೇಖಿಸಿತ್ತು.
ಆರ್‌ಟಿಇ ಕಾಯ್ದೆಯ ನಿಬಂಧನೆಗಳನ್ನು ಸೆಕ್ಷನ್ 2(ಎನ್ ) ನಲ್ಲಿ ವ್ಯಾಖ್ಯಾನಿಸಲಾದ ಎಲ್ಲಾ ಶಾಲೆಗಳು ಪಾಲಿಸಬೇಕು. ಅಲ್ಪಸಂಖ್ಯಾತರು ಸ್ಥಾಪಿಸಿದ ಮತ್ತು ನಿರ್ವಹಿಸುವ ಶಾಲೆಗಳನ್ನು ಹೊರತುಪಡಿಸಿ, ಧಾರ್ಮಿಕ ಅಥವಾ ಭಾಷಾವಾರು, ಅಂತಹ ಸಮಯದ ಉಲ್ಲೇಖವನ್ನು ನಿರ್ಧರಿಸುವವರೆಗೆ ರೂಪಿಸಲಾದ ಪ್ರಶ್ನೆಗಳಿಗೆ ಉತ್ತರಗಳಿಗೆ ಒಳಪಟ್ಟಿರುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು.
ಈ ತೀರ್ಪುನ್ನು ವಿರೋಧಿಸಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಶಿಕ್ಷಕರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ತೀರ್ಪಿನಿಂದಾಗಿ ಕರ್ನಾಟಕದ 2 ಲಕ್ಷ ಸೇರಿದಂತೆ ದೇಶದ 30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಅಭದ್ರತೆ ಎದುರಿಸುವಂತಾಗಿದೆ.









