ಬೆಂಗಳೂರು; ದೆಹಲಿಯಲ್ಲಿರುವ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಕನ್ನಡ ಅಧ್ಯಯನ ಪೀಠಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಒಡಂಬಡಿಕೆ ಮಾಡಿಕೊಳ್ಳುವ ವಿಚಾರವು ಇನ್ನೂ ಆಮೆಗತಿಯಲ್ಲಿ ಸಾಗಿದೆ.
ಅಲ್ಲದೇ ಜೆಎನ್‌ಯುನಲ್ಲಿ ಇಡುಗಂಟಾಗಿರುವ 5 ಕೋಟಿ ರು.ಗಳಿಂದ ದೊರಕುತ್ತಿರುವ ಬಡ್ಡಿಮೊತ್ತದಲ್ಲಿಯೇ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯವು ನಿಲುವು ತಳೆದಿದೆ.
ಅದೇ ರೀತಿ ಜೆಎನ್‌ಯುನಲ್ಲಿರುವ ಕನ್ನಡ ಅಧ್ಯಯನ ಪೀಠಕ್ಕೆ 10 ಕೋಟಿವರೆಗೆ ಅನುದಾನ ನೀಡುವ ವಿಚಾರವು ಮತ್ತೆ ನೆನೆಗುದಿಗೆ ಬಿದ್ದಂತಾಗಿದೆ.
ಜೆಎನ್‌ಯುನಲ್ಲಿ ಸ್ಥಾಪಿಸಿರುವ ಕನ್ನಡ ಅಧ್ಯಯನ ಪೀಠದ ಸಕ್ರೀಯ ಚಟುವಟಿಕೆಗಳಿಗೆ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ಅನುಕೂಲವಾಗಲು ಜೆಎನ್‌ಯುನೊಂದಿಗೆ 2017ರ ಡಿಸೆಂಬರ್ 18ರಂದೇ ಒಡಂಬಡಿಕೆ ಮಾಡಿಕೊಂಡಿತ್ತು. ಈ ಒಡಂಬಡಿಕೆಯನ್ನು ಪರಿಷ್ಕೃತಗೊಳಿಸುವುದು ಮತ್ತು ಅನುದಾನ ಮೊತ್ತವನ್ನು ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಪ್ರಕ್ರಿಯೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಮತ್ತು ಉನ್ನತ ಶಿಕ್ಷಣ ಇಲಾಖೆ ಮಧ್ಯೆ ನಡೆದಿರುವ ಕಡತದ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಜೆಎನ್‌ಯುದಲ್ಲಿ ಕನ್ನಡ ಭಾಷಾ ಪೀಠದಲ್ಲಿ ಪ್ರಾಚಾರ್ಯರನ್ನು ಆಯ್ಕೆ ಮಾಡುವ ಕುರಿತು 2024ರ ನವೆಂಬರ್ 25ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಜೆಎನ್‌ಯುದಲ್ಲಿರುವ ಕನ್ನಡ ಅಧ್ಯಯನ ಪೀಠಕ್ಕೆ 10 ಕೋಟಿವರೆಗೆ ಅನುದಾನ ನೀಡಬೇಕು ಅಥವಾ ಒಡಂಬಡಿಕೆಯನ್ನು ಪರಿಷ್ಕೃರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು.
ಈ ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಮುಂದುವರೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಕ್ಕೆ 2025ರ ಮಾರ್ಚ್ ಮತ್ತು ಸೆಪ್ಟಂಬರ್ 25ರಂದು ಪತ್ರ ಬರೆದಿದ್ದರು. ಈ ಪತ್ರದ ಮೇಲೆ ಕ್ರಮಕೈಗೊಳ್ಳಬೇಕಿದ್ದ ಸರ್ಕಾರವು, ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಕಾಲಹರಣ ಮಾಡುತ್ತಿರುವುದು ತಿಳಿದು ಬಂದಿದೆ.

ಪರಿಷ್ಕೃತ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯಕ್ಕೆ ಅನುಮತಿ ನೀಡಲು ಉನ್ನತ ಶಿಕ್ಷಣ ಇಲಾಖೆಯವು 2025ರ ನವೆಂಬರ್ 29ರಂದು ಇಲಾಖೆ ಅಧಿಕಾರಿಗಳೊಂದಿಗೆ ಆಂತರಿಕವಾಗಿ ಚರ್ಚಿಸಿರುವುದು ಗೊತ್ತಾಗಿದೆ. ಹೀಗಾಗಿ ಪರಿಷ್ಕೃತ ಒಡಂಬಡಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಆದೇಶವು ಇನ್ನೂ ಹೊರಬಿದ್ದಿಲ್ಲ.
ಬಿಳಿಮಲೆ ಪತ್ರದಲ್ಲೇನಿತ್ತು?
ಕನ್ನಡ ಅಧ್ಯಯನ ಪೀಠಕ್ಕೆ ಬಿಡುಗಡೆ ಮಾಡಿರುವ 5 ಕೋಟಿ ರು.ಗಳಲ್ಲಿ ಒಬ್ಬ ಕನ್ನಡ ಪ್ರಾಧ್ಯಾಪಕನ ವೇತನವನ್ನು ನಿಭಾಯಿಸಲು ಸಾಧ್ಯವಿಲ್ಲ. ಅದು ಸಾಧ್ಯವಾಗುವಂತೆ ಮಾಡಲು ಕರ್ನಾಟಕ ಸರ್ಕಾರವು ಇನ್ನೂ 10 ಕೋಟಿ ರು.ಗಳನ್ನು ಒಂದು ಬಾರಿ ನೀಡುವ ಅನುದಾನವಾಗಿ ನೀಡಬೇಕು. ಅಥವಾ ಈಗಿರುವ 5 ಕೋಟಿ ರು.ಗಳ ಠೇವಣಿಯಿಂದ ಸಿಗುವ ಬಡ್ಡಿಹಣದಲ್ಲಿ ಸಹಾಯಕ ಪ್ರಾಧ್ಯಾಪಕನ ನೇಮಕಾತಿ ಮಾಡಬಹುದು. ಇದಕ್ಕಾಗಿ ಹಿಂದಿನ ಒಡಂಬಡಿಕೆ ಪತ್ರವನ್ನು ಪರಿಷ್ಕರಿಸಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು 2025ರ ಮಾರ್ಚ್ 10ರಂದು ಬರೆದಿದ್ದ ಪತ್ರದಲ್ಲಿ ವಿವರಿಸಿದ್ದರು.

ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ 10 ಕೋಟಿ ರು.ಗಳನ್ನು ಕಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಇರುವ ಹಣದಲ್ಲಿ ಸಹಾಯಕ ಪ್ರಾಧ್ಯಾಪಕನೊಬ್ಬನ ನೇಮಕ ಮಾಡಬಹುದು. ಅದಕ್ಕೆ ಅನುಸಾರವಾಗಿ ಪರಿಷ್ಕೃತ ಒಡಂಬಡಿಕೆ ಮಾಡಿಕೊಳ್ಳಬಹುದು. ಪರಿಷ್ಕೃತ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಕಳಿಸಿಕೊಟ್ಟರೇ ಜೆಎನ್‌ಯುಗೆ ಕಳಿಸಿ ಸಹಿ ಮಾಡಿಸಲಾಗುವುದು ಎಂದು ಬಿಳಿಮಲೆ ಅವರು ಸರ್ಕಾರಕ್ಕೆ ತಿಳಿಸಿದ್ದರು
ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠದ ಸಕ್ರೀಯ ಕಾರ್ಯಚಟುವಟಿಕೆಗಳಿಗೆ, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರನ್ನು ನೇಮಿಸಲು ಈಗಾಗಲೇ ಕನ್ನಡ ಸಂಸ್ಕೃತಿ ಇಲಾಖೆಯು 5 ಕೋಟಿ ರು.ಗಳ ಇಡಗಂಟು ಇಟ್ಟಿದೆ. ಈ ಇಡಗಂಟಿನಿಂದ ದೊರಕುತ್ತಿರುವ ಬಡ್ಡಿ ಮೊತ್ತದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಿಸಿಕೊಳ್ಳಲು ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಅವರು 2025ರ ಸೆ.25ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. . ಬಿಳಿಮಲೆ ಅವರು ಬರೆದಿದ್ದ ಈ ಪತ್ರಗಳು ಸಹ ಸರ್ಕಾರದ ಹಂತದಲ್ಲಿ ಇನ್ನೂ ತೆವಳುತ್ತಲೇ ಇದೆ.

ಈ ಮಧ್ಯೆ ಜೆಎನ್‌ಯುನ ಕನ್ನಡ ಅಧ್ಯಯನ ಪೀಠದ ಉಪ ಹಣಕಾಸು ಅಧಿಕಾರಿ 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆಗಿನ ಅನುದಾನ ಮತ್ತು ವೆಚ್ಚದ ಮಾಹಿತಿಯನ್ನುಒದಗಿಸಿದ್ದರು. ಇದರ ಪ್ರಕಾರ 2024ರ ಎಪ್ರಿಲ್ 1ರಿಂದ 2025 ಮಾರ್ಚ್ 31ರವರೆಗೆ ಅನುದಾನದ ಪ್ರಕಾರ 2024-25ನೇ ಸಾಲಿನಲ್ಲಿ 32,34,806 ರು.ಗಳ ಬಡ್ಡಿಮೊತ್ತ ಸಂಗ್ರಹವಾಗಿದೆ. ಹಾಗೂ ಬೋಧಕ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ಪಾವತಿಸಿರುವ ವೆಚ್ಚದ ಮಾಹಿತಿ ಪ್ರಕಾರ 42,36,185 ರು ವೆಚ್ಚವಾಗಿರುವುದು ಗೊತ್ತಾಗಿದೆ.

ಆದರೆ ಪ್ರಾಧ್ಯಾಪಕರ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಅಗತ್ಯವಿರುವ ಅನುದಾನದ ವಿವರವನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಜೆಎನ್‌ಯುನಲ್ಲಿ ಸ್ಥಾಪಿಸಿರುವ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳಲು ಅನುಕೂಲವಾಗಲು ಪರಿಷ್ಕೃತ ಒಡಂಬಡಿಕೆ ಮಾಡಿಕೊಳ್ಳಲು ಪ್ರಸ್ತಾವಿಸಲಾಗಿತ್ತು.

ಈ ಬೆಳವಣಿಗೆಗಳ ಮಧ್ಯೆಯೇ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯವು ‘ ಜೆಎನ್‌ಯುನಲ್ಲಿ ಇಡುಗಂಟಾಗಿರುವ 5 ಕೋಟಿಗಳಿಗೆ ಪ್ರಸ್ತುತ ದೊರಕುತ್ತಿರುವ ಬಡ್ಡಿ ಮೊತ್ತದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಿಸಿಕೊಳ್ಳಲು ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ,’ ಎಂದು ಸರ್ಕಾರಕ್ಕೆ ತಿಳಿಸಿತ್ತು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಪಟ್ಟ ಸಿಕ್ಕಿದ ಬಳಿಕ 5 ಕೋಟಿ ಬಂದರೆ ತಮಿಳಿಗೆ 48 ಕೋಟಿ ಅನುದಾನ ಬಂದಿದೆ. ದಿಲ್ಲಿಯ 6 ವಿವಿಗಳಲ್ಲಿ ತಮಿಳು ಪೀಠವಿದೆ, ಆದರೆ ಕನ್ನಡ ಪೀಠಕ್ಕೆ ಅನುದಾನ ಸಿಕ್ಕಿಲ್ಲ.

ಆಸಕ್ತ ಕನ್ನಡೇತರರಿಗೆ ಕನ್ನಡ ಕಲಿಕೆ, ಸಂಶೋಧನೆಗೆ ಉತ್ತೇಜನ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನವೇ ಮುಖ್ಯ ಗುರಿ.ಕರ್ನಾಟಕ ಸರಕಾರ ಪೀಠಕ್ಕೆ ವಾರ್ಷಿಕ 43ಲಕ್ಷ ರೂ. ಅನುದಾನ ಐದು ವರ್ಷ ನೀಡಬೇಕಿದ್ದರೂ 3ವರ್ಷವಷ್ಟೇ ನೀಡಿತ್ತು. ಹೀಗಾಗಿ ಒಪ್ಪಂದ ಕೊನೆಗೊಂಡಿತ್ತು. ಮರು ಒಪ್ಪಂದ ಮಾಡಿಕೊಳ್ಳದಿದ್ದರೆ ಪೀಠ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಆತಂಕವೂ ವ್ಯಕ್ತವಾಗಿತ್ತು.
ಡಿಜಿಟಲ್ ಗ್ರಂಥಾಲಯಕ್ಕಾಗಿ ನೀಡಿದ್ದ 5ಕೋಟಿ ರೂ. ಇಡುಗಂಟು ಜತೆಗಿಟ್ಟು ಪೀಠಕ್ಕೆ ಆರ್ಥಿಕ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಡಿಜಿಟಲ್ ಗ್ರಂಥಾಲಯ ಯೋಜನೆಯ ಮೂಲಕ ಕವಿರಾಜ ಮಾರ್ಗ, ವಡ್ಡಾರಾಧನೆ, ರನ್ನನ ಗದಾಯುದ್ಧ ಸೇರಿದಂತೆ ಹಲವು ಪ್ರಕಟಣೆಗಳನ್ನು ಮಾಡಲಾಗಿದೆ, ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದನ್ನು ಸ್ಮರಿಸಬಹುದು.
10 ಕೋಟಿ ರು ಅನುದಾನ ಮತ್ತು ಪರಿಷ್ಕೃತ ಒಡಂಬಡಿಕೆಯಲ್ಲಿನ ವಿಳಂಬದ ಕುರಿತು ‘ದಿ ಫೈಲ್’, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಪ್ರತಿಕ್ರಿಯೆ ಕೋರಿದೆ. ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯನ್ನು ನವೀಕೃತಗೊಳಿಸಲಾಗುವುದು.









