3.75 ಕೋಟಿ ನಷ್ಟ; 12 ಅಧಿಕಾರಿಗಳ ವಿರುದ್ಧ ಸಾಬೀತಾಗದ ಆರೋಪ, ದೋಷಮುಕ್ತಗೊಳಿಸಿದ ಸರ್ಕಾರ

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 3.75 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿರುವುದನ್ನು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿದ್ದ ವರದಿಯನ್ನೇ ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಈ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸಿದ್ದ ಒಟ್ಟು 12 ಮಂದಿ ಹಿರಿಯ ಆರೋಗ್ಯ ಪರಿವೀಕ್ಷಕರನ್ನು ದೋಷಮುಕ್ತಗೊಳಿಸಿದೆ.

 

ಹಿಂದಿನ ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ಕಚೇರಿ ವ್ಯಾಪ್ತಿಯಲ್ಲಿ ಶುಲ್ಕ ಸಂಗ್ರಹದಲ್ಲಿ ಒಟ್ಟಾರೆಯಾಗಿ 3.75 ಕೋಟಿ ರು ಆರ್ಥಿಕ ನಷ್ಟವುಂಟಾಗಿತ್ತು. ಈ ಪ್ರಕರಣವನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ವರದಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮ ಜರುಗಿಸಬೇಕಿದ್ದ ನಗರಾಭಿವೃದ್ಧಿ ಇಲಾಖೆಯು, ಪ್ರಕರಣದ 12 ಮಂದಿ ಆರೋಪಿತ ಅಧಿಕಾರಿಗಳನ್ನು ಖುಲಾಸೆ ಮಾಡಿದೆ.

 

ಆಪಾದಿತ ಅಧಿಕಾರಿಗಳನ್ನು ದೋಷಮುಕ್ತಗೊಳಿಸುವ ಕುರಿತು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಚರ್ಚಿಸಿದ್ದರು ಎಂದು ಗೊತ್ತಾಗಿದೆ.

 

ಆರೋಪಿತ 12 ಮಂದಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿಎಜಿ ನೀಡಿದ್ದ ವರದಿಯಲ್ಲೇನಿತ್ತು?

 

ಗ್ರೇಟರ್‍‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಹಿಂದಿನ ಬಿಬಿಎಂಪಿ) ಆರೋಗ್ಯ ವೈದ್ಯಾಧಿಕಾರಿಗಳು ಬೊಮ್ಮನಹಳ್ಳಿ ಕಚೇರಿಯಲ್ಲಿ 3.75 ಕೋಟಿ ರು ನಷ್ಟ ಉಂಟು ಮಾಡಿದ್ದರು. ಈ ಪ್ರಕರಣದಲ್ಲಿ ಗ್ರೂಫ್‌ ಎ ಮತ್ತು ಸಿ ವೃಂದದ ಅಧಿಕಾರಿಗಳ ಪಟ್ಟಿಯನ್ನೂ ಸರ್ಕಾರಕ್ಕೆ ಸಿಎಜಿಯು ಒದಗಿಸಿತ್ತು. ಈ ನೌಕರರು ವಾಣಿಜ್ಯ ಪರವಾನಿಗೆ ನೀಡಲು ಸ್ವೀಕೃತವಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಪಾವತಿಸಿದ್ದ ಡಿ ಡಿ ಗಳನ್ನು ಬಿಬಿಎಂಪಿ ಖಾತೆಗೆ ಜಮೆ ಮಾಡಿರಲಿಲ್ಲ. ಹೀಗಾಗಿ 3.75 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿತ್ತು ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿತ್ತು.

 

 

ಈ ಪ್ರಕರಣವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ ಪಾಲಾಕ್ಷಪ್ಪ ಅವರು ವಿಚಾರಣೆ ನಡೆಸಿದ್ದರು. 2025ರ ಏಪ್ರಿಲ್‌ 5ರಂದು ವಿಚಾರಣೆ ವರದಿ ಸಲ್ಲಿಸಿದ್ದರು. ಈ ವಿಚಾರಣೆ ವರದಿ ಆಧರಿಸಿ  ಬಿಬಿಎಂಪಿಯು 13 ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿತ್ತು.

 

‘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಅವರು ನೀಡಿದ್ದ ವರದಿ ಅನ್ವಯ ಬೊಮ್ಮನಹಳ್ಳಿ ಕಚೇರಿ ವ್ಯಾಪ್ತಿಯ ಶುಲ್ಕ ಸಂಗ್ರಹದಲ್ಲಿ ಬಿಬಿಎಂಪಿಗೆ ಒಟ್ಟಾರೆ 3.75 ಕೋಟಿ ಆರ್ಥಿಕ ನಷ್ಟವನ್ನು ಉಂಟು ಮಾಡಿರುವುದು ಕಂಡು ಬಂದಿದೆ. ಜವಾಬ್ದಾರಿಯುತ ನೌಕರರಾಗಿ 1966ರ ಕರ್ನಾಟಕ ಸರ್ಕಾರಿ ನೌಕರರ (ನಡತೆ) ನಿಯಮಾವಳಿಗಳ ನಿಯಮ 3 (iii) ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದರಿಮದ 1957ರ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿಗಳ ನಿಯಮ 11ರ ಅಡಿ ಇಲಾಖೆ ತಿಳಿವಳಿಕೆ ಪತ್ರವನ್ನು ಬಿಬಿಎಂಪಿಯು ಹೊರಡಿಸಿತ್ತು.

 

ಆರೋಪಿತ ಅಧಿಕಾರಿಗಳ ಪಟ್ಟಿ

 

ಬಿಬಿಎಂಪಿಗೆ 3.75 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿರುವ ಪ್ರಕರಣದಲ್ಲಿ ಗ್ರೂಪ್‌ ಎ ವೃಂದದ ಆರೋಗ್ಯ ವೈದ್ಯಾಧಿಕಾರಿ ಡಾ ಹೆಚ್‌ ಜಿ ಸುರೇಶ್‌, ಹಿರಿಯ ಆರೋಗ್ಯ ಪರಿವೀಕ್ಷಕರಾಗಿದ್ದ ಬಸವಯ್ಯ, ರಮೇಶ್‌ ಚಿಮ್ಮಲಗಿ, ಸಿ ರಾಮಚಂದ್ರ, ಗಂಗಾಧರಸ್ವಾಮಿ, ಮಂಜುನಾಥ್‌ ಎಂ, ಕೆ ಶಿವಲಿಂಗಯ್ಯ, ಬಿ ವೆಂಕಟೇಶ್‌ (ನಿವೃತ್ತ), ರೂಪ ಜಿ, ಸುಮನ್ ಡಿ, ಮಹೇಶ್‌ ಕುಮಾರ್ ಎಸ್‌, ದಿವಾಕರ್‍‌ ಇವರ ವಿರುದ್ದ ತಿಳಿವಳಿಕೆ ಪತ್ರ  ಜಾರಿಗೊಳಿಸಿತ್ತು.

 

 

ಈ ತಿಳಿವಳಿಕೆ ಪತ್ರದಲ್ಲಿ ಹೊರಿಸಿದ್ದ ಆರೋಪಗಳನ್ನು ಆಪಾದಿತ ಅಧಿಕಾರಿಗಳು ತಳ್ಳಿ ಹಾಕಿದ್ದರು. ಅಲ್ಲದೇ ತಮ್ಮ ವಿರುದ್ಧದ ದೋಷಾರೋಪಣೆಗಳನ್ನು ಕೈಬಿಡಬೇಕು ಎಂದು ಕೋರಿದ್ದರು.

 

‘ಬಿಬಿಎಂಪಿಯು ಹೊರಡಿಸಿದ್ದ ತಿಳಿವಳಿಕೆ ಪತ್ರಗಳಿಗೆ 12 ಅಧಿಕಾರಿಗಳು ಲಿಖಿತ ಸಮಜಾಯಿಷಿ ನೀಡಿದ್ದಾರೆ. ಆರೋಪವನ್ನು ಅಲ್ಲಗಳೆದಿದ್ದಾರೆ. ವಾಣಿಜ್ಯ ಪರವಾನಿಗೆಗಳನ್ನು ನೀಡಲು ಸ್ವೀಕೃತವಾದ ಅರ್ಜಿಗಳ ಸಂಬಂಧದಲ್ಲಿ ಡಿ ಡಿ ಗಳನ್ನು ಬಿಬಿಎಂಪಿಗೆ ಜಮೆ ಮಾಡುವ ಕಾರ್ಯ ಹಂಚಿಕೆ ನಮ್ಮಗಳ ಕಾರ್ಯ ವ್ಯಾಪ್ತಿಯಲ್ಲಿಲ್ಲ. ಆದ್ದರಿಂದ ಈ ಪ್ರಕರಣದಿಂದ ನಮ್ಮನ್ನು ಕೈಬಿಡಬೇಕು,’ ಎಂದು ಕೋರಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಈ ಲಿಖಿತ ಸಮಜಾಯಿಷಿಗಳನ್ನು ಪರಿಶೀಲಿಸಿದ್ದ ನಗರಾಭಿವೃದ್ಧಿ ಇಲಾಖೆಯು ಈ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲು 2024ರ ಜುಲೈ 30ರಂದು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ ಪಾಲಾಕ್ಷಪ್ಪ ಅವರ ನೇತೃತ್ವದಲ್ಲಿ ಇಲಾಖೆ ವಿಚಾರಣೆ ನಡೆಸಲು ಆದೇಶ  ಹೊರಡಿಸಿತ್ತು.

 

ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ ಪಾಲಾಕ್ಷಪ್ಪ ಅವರು ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದರು. ಈ ಸಂಬಂಧ 2025ರ ಏಪ್ರಿಲ್‌ 5ರಂದು ವರದಿ ನೀಡಿದ್ದರು. ಪ್ರಕರಣದಲ್ಲಿನ ಒಂದನೇ ಆರೋಪಿಯಾದ ಆರೋಗ್ಯ ವೈದ್ಯಾಧಿಕಾರಿ ಡಾ ಹೆಚ್‌ ಜಿ ಸುರೇಶ್‌ ಅವರು ಬೊಮ್ಮನಹಳ್ಳಿ ವಲಯದಲ್ಲಿ ವಾಣಿಜ್ಯ ಪರವಾನಗಿ ಶುಲ್ಕವನ್ನು ನಿಯಮಾನುಸಾರ ಬಿಬಿಎಂಪಿ ಖಾತೆಗೆ ಜಮೆ ಮಾಡದೇ ಪಾಲಿಕೆಗೆ 67,37,670 ರು.ಗಳ ಆರ್ಥಿಕ ನಷ್ಟಕ್ಕೆ ಕಾರಣರು ಎಂದು ವಿಚಾರಣಾಧಿಕಾರಿಯಾಗಿದ್ದ ಕೆ ಪಾಲಾಕ್ಷಪ್ಪ ಅವರು  ನಿರ್ಣಯಿಸಿದ್ದರು. ಅಲ್ಲದೇ ಉಳಿದ ಆರೋಪಿತರು ಇದಕ್ಕೆ ಕಾರಣರಲ್ಲ ಎಂದು ವರದಿ ನೀಡಿದ್ದರು.

 

 

ಈ ವರದಿಯನ್ನು ಒಪ್ಪಿಕೊಂಡಿರುವ  ನಗರಾಭಿವೃದ್ಧಿ ಇಲಾಖೆಯು 12 ನೌಕರರ ಮೇಲಿನ ಆರೋಪಗಳು ಸಾಬೀತಾಗದ ಕಾರಣ, ಈ ಎಲ್ಲಾ ಅಧಿಕಾರಿಗಳನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೂ ಸಹ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts