ಬೆಂಗಳೂರು; ವಿಟಮಿನ್ ಸಿ (ಜಗಿಯುವ) ಮಾತ್ರೆ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಕುರಿತು ತನಿಖೆ ನಡೆಸಬೇಕಿದ್ದ ಸರ್ಕಾರವು ಇದೀಗ ಮಾತ್ರೆಗಳ ಖರೀದಿ ಪ್ರಮಾಣವನ್ನೇ ಕಡಿಮೆಗೊಳಿಸಿದೆ. ಅಲ್ಲದೇ ಹೊಸದಾಗಿ ಖರೀದಿ ಆದೇಶವನ್ನು ಹೊರಡಿಸಿದೆ. ಈ ಆದೇಶದಲ್ಲಿ ನಮೂದಿಸಿರುವ ದರವೂ ಸಹ ದುಪ್ಪಟ್ಟಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿಯಷ್ಟು ನಷ್ಟ ಸಂಭವಿಸಿದೆ.
ಅಲ್ಲದೇ ಖಾಸಗಿ ಕಂಪನಿಯಾಗಿರುವ ಬಜಾಜ್ ಹೆಲ್ತ್ ಕೇರ್‍ಗೆ ಜಿಎಸ್‌ಟಿಯಲ್ಲಿಯೂ ಲಾಭ ಮಾಡಿಕೊಟ್ಟಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
2024ರಲ್ಲಿಯೇ 44 ಕೋಟಿ ರು ವೆಚ್ಚದಲ್ಲಿ ವಿಟಮಿನ್ ಸಿ (ಜಗಿಯುವ) ಮಾತ್ರೆಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಲು ಮುಂದಾಗಿತ್ತು. ಇದರಿಂದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ ಆರ್ಥಿಕ ನಷ್ಟವಾಗಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ದೂರು ಸಲ್ಲಿಕೆಯಾದ ನಂತರ ಸಚಿವ ದಿನೇಶ್ ಗುಂಡೂರಾವ್ ಅವರು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದರು. ಈ ಸೂಚನೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಪತ್ರವನ್ನೂ ಬರೆದಿದ್ದರು.
ಆದರೆ ಈ ದೂರಿನ ಕುರಿತು ಏನು ಕ್ರಮಕೈಗೊಳ್ಳಲಾಗಿದೆ ಎಂಬ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿಲ್ಲ.
ವಿಶೇಷವೆಂದರೇ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಒಂದು ವರ್ಷದ ಬಳಿಕ ವಿಟಮಿನ್ ಸಿ ಮಾತ್ರೆಗಳನ್ನು ಖರೀದಿಸಲು ಹೆಚ್ಚಿನ ದರವನ್ನು ನಮೂದಿಸಿದ್ದ ಕಂಪನಿಗೇ ನೋಟಿಫಿಕೇಷನ್ ಅವಾರ್ಡ್ ಮಾಡಿದೆ. ಹಿಂದಿನ ವರ್ಷ ಕೇಳಿ ಬಂದಿದ್ದ ಆರೋಪ ಮತ್ತು ಸಲ್ಲಿಕೆಯಾಗಿದ್ದ ದೂರನ್ನು ಬದಿಗೊತ್ತಿದಂತಿರುವ ನಿಗಮವು, ವಿಟಮಿನ್ ಸಿ ಮಾತ್ರೆಗಳ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ತಂತ್ರಗಾರಿಕೆ ಮಾಡಿದೆ. ಅಲ್ಲದೇ ದರದಲ್ಲಿಯೂ ತುಸು ಇಳಿಕೆ ಮಾಡಿ ಚಾಲಾಕಿತನ ಪ್ರದರ್ಶಿಸಿದೆ. ನಿಗಮವು ಇಳಿಕೆ ಮಾಡಿರುವ ದರವೂ ಸಹ ವಾಸ್ತವ ದರಕ್ಕಿಂತಲೂ ಮತ್ತೆ ದುಪ್ಪಟ್ಟಾಗಿದೆ ಎಂಬ ಆರೋಪವು ಕೇಳಿ ಬಂದಿದೆ.
ಬಜಾಜ್ ಹೆಲ್ತ್ ಕೇರ್ ಕಂಪನಿಯು 2024ರಲ್ಲಿ ಪ್ರತಿ ಯೂನಿಟ್‌ಗೆ 69 ರು. ದರ ನಮೂದಿಸಿತ್ತು. ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ಭಾಗವಹಿಸಿದ್ದ ಟೆಂಡರ್‌ನಲ್ಲೂ ಇದೇ ಕಂಪನಿಯು ವಿಟಮಿನ್ ಸಿ ಪ್ರತಿ ಮಾತ್ರೆಗೆ 43 ಪೈಸೆಯಂತೆ 100 ಮಾತ್ರೆಗಳ ಘಟಕವೊಂದಕ್ಕೆ 42.56 ರು.ಗಳನ್ನು (ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ) ದರ ನಮೂದಿಸಿತ್ತು. ಇದರ ಒಟ್ಟಾರೆ ವೆಚ್ಚ 44 ಕೋಟಿ ರು ಆಗಲಿತ್ತು.
ಆದರೀಗ ಇದೇ ಬಜಾಜ್ ಹೆಲ್ತ್ ಕೇರ್ ಕಂಪನಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 61.55 ರು ದರದಲ್ಲಿ ನೋಟಿಫಿಕೇಷನ್ ಅವಾರ್ಡ್ ಮಾಡಿದೆ. ಕಳೆದ ವರ್ಷದಲ್ಲಿ ನಮೂದಿಸಿದ್ದ ದರಕ್ಕೆ ಹೋಲಿಸಿದರೆ 8 ರುಪಾಯಿ ಕಡಿಮೆ ಮಾಡಿದೆ. ಅಲ್ಲದೇ 100 ಮಾತ್ರೆಗಳ ಒಂದು ಪೊಟ್ಟಣದಂತೆ ಒಟ್ಟಾರೆ 31, 37,220 ಪೊಟ್ಟಣಗಳನ್ನು ಖರೀದಿಸಲು 2025ರ ಅಕ್ಟೋಬರ್ 31ರಂದು ನೋಟಿಫಿಕೇಷನ್ ಅವಾರ್ಡ್ ಮಾಡಿರುವುದು ತಿಳಿದು ಬಂದಿದೆ.

2025ರ ಅಕ್ಟೋಬರ್ 31ರಂದು ಹೊರಡಿಸಿರುವ ನೋಟಿಫಿಕೇಷನ್ ಅವಾರ್ಡ್ ಪ್ರಕಾರ ಖರೀದಿ ಮೊತ್ತ 19 ಕೋಟಿ ಆಗಲಿದೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ನೆರೆಯ ರಾಜ್ಯಗಳು ಖರೀದಿಸಿರುವ ಮೊತ್ತಕ್ಕೆ ಹೋಲಿಸಿದರೆ ರಾಜ್ಯದ ಬೊಕ್ಕಸಕ್ಕೆ ಅಂದಾಜು 17.69 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು. ಈಗ 2025ರ ಅಕ್ಟೋಬರ್ 31ರಂದು ಹೊರಡಿಸಿರುವ ನೋಟಿಫಿಕೇಷನ್ ಅವಾರ್ಡ್‌ನಲ್ಲಿನ ದರದ ಪ್ರಕಾರ ಅಂದಾಜು 7 ಕೋಟಿಯಷ್ಟು ನಷ್ಟವಾಗಲಿದೆ ಎಂದು ಗೊತ್ತಾಗಿದೆ.

ಅಂದರೇ ಖರೀದಿ ಪ್ರಮಾಣವನ್ನು ಇಳಿಕೆ ಮಾಡಿ, ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿದಂತಾಗಿದೆಯೇ ವಿನಃ, ಮಾರುಕಟ್ಟೆಯಲ್ಲಿನ ನೈಜ ಬೆಲೆಯನ್ನು ಪರಿಗಣಿಸದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಿಗಮದ ಈ ಚಾಲಾಕಿ ನಡೆಯು, ಕಂಪನಿಗೇ ಹೆಚ್ಚು ಲಾಭ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ಬೊಕ್ಕಸಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಿದಂತಾಗಿಲ್ಲ ಎಂಬುದು ಸಹ ಕಂಡು ಬಂದಿದೆ.
ಹಾಗೆಯೆ ಜಿಎಸ್‌ಟಿಯಲ್ಲಿಯೂ ಈ ಕಂಪನಿಗೆ ಲಾಭ ಮಾಡಿಕೊಟ್ಟಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಔಷಧ ಉತ್ಪನ್ನಗಳಿಗೆ ಮೊದಲು ಜಿಎಸ್‌ಟಿ ದರ ಶೇ. 12ರಷ್ಟಿತ್ತು. ಈಗ ಶೇ. 12ರ ಸ್ಲಾಬ್ ಇಲ್ಲ. ಬದಲಿಗೆ ಶೇ. 5ರಷ್ಟಿದೆ. ಆದರೆ ಶೇ. 5ರ ಜಿಎಸ್‌ಟಿ ಬದಲಿಗೆ ಶೇ. 12ರ ದರವನ್ನೇ ಅನ್ವಯಿಸಿದೆ. ಇದರಿಂದಾಗಿ ಕಂಪನಿಗೆ ಲಾಭವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸಿಂಗಲ್ ಟೆಂಡರ್
2024ರಲ್ಲಿ ವಿಟಮಿನ್ ಸಿ ಮಾತ್ರೆ ಖರೀದಿಸಲು ಕರೆದಿದ್ದ ಟೆಂಡರ್ ಕೂಡ ಸಿಂಗಲ್ ಟೆಂಡರ್ ಆಗಿತ್ತು. ಅಲ್ಲದೇ ಹಲವು ಲೋಪಗಳಿಂದ ಕೂಡಿತ್ತು. ಆದರೆ ಸಿಂಗಲ್ ಟೆಂಡರ್‍ನ್ನು ರದ್ದುಗೊಳಿಸಿರಲಿಲ್ಲ. ಬದಲಿಗೆ ಇದೇ ಟೆಂಡರ್‍ನ್ನು ಅಂತಿಮಗೊಳಿಸಲು ಅಧಿಕಾರಿವರ್ಗವೇ ಹುನ್ನಾರ ನಡೆಸಿತ್ತು.
ಈ ಕುರಿತು ವಕೀಲ ಪ್ರಶಾಂತ್ ಮೆಥಾಲ್ ಎಂಬುವರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ 2024ರ ಜುಲೈ 17ರಂದು ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ 2024ರ ಜುಲೈ 24ರಂದು ನಿರ್ದೇಶಿಸಿದ್ದರು. ಈ ನಿರ್ದೇಶನದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಆಯುಕ್ತರಿಗೆ 2024ರ ಆಗಸ್ಟ್ 12ರಂದು ಪತ್ರವೊಂದನ್ನು ಬರೆದಿದ್ದರು. ಆದರೆ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಇಲ್ಲ.

ಪ್ರಕರಣದ ಹಿನ್ನೆಲೆ
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಿಮಿನ್ ಸಿ (ಜಗಿಯುವ) ಮಾತ್ರೆಗಳನ್ನು 44.00 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ನಿರ್ದಿಷ್ಟ ಕಂಪನಿಗೇ ಅವಕಾಶ ಕಲ್ಪಿಸಲು ಮರು ಟೆಂಡರ್ ಕರೆಯದೇ ಸಿಂಗಲ್ ಟೆಂಡರ್ ನಡೆಸಿತ್ತು.
ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಗಷ್ಟೇ ಸರಿ ಹೊಂದುವಂತೆ ಟೆಂಡರ್ ಷರತ್ತುಗಳನ್ನು ರೂಪಿಸಲಾಗಿತ್ತು. ಈ ಟೆಂಡರ್‌ನಲ್ಲಿ ಅಂದಾಜು ಬೆಲೆಯನ್ನು ಹೆಚ್ಚಿಸುವ ಮೂಲಕ ದರವನ್ನೂ ಹೆಚ್ಚಳಗೊಳಿಸಿತ್ತು. ಅಲ್ಲದೇ ಈ ಕಂಪನಿಯು ನಮೂದಿಸಿರುವ ದರವನ್ನು ಕೆಎಸ್‌ಎಂಎಸ್‌ಸಿಎಲ್, ನೆರೆರಾಜ್ಯಗಳ ದರದೊಂದಿಗೆ ಹೋಲಿಸಿರಲಿಲ್ಲ. ದರಗಳ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರನ್ನೂ ನಿಗಮದ ಅಧಿಕಾರಿಗಳು ಕತ್ತಲಲ್ಲಿ ಇರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳು/ ಸರಬರಾಜು ಸಂಸ್ಥೆಗಳು ಔಷಧ ಉತ್ಪನ್ನಗಳ ಮಾದರಿಗಳನ್ನು ಸಲ್ಲಿಸುವ ಷರತ್ತನ್ನು ತೆಗೆದು ಹಾಕಿರುವ ಕಾರಣ ವಿಟಮಿನ್ ಸಿ ಮಾತ್ರೆಗಳನ್ನು ಬಿಡ್‌ದಾರರಿಂದ ಮಾದರಿಯನ್ನೂ ಸಹ ತೆಗೆದುಕೊಂಡಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆಯು ನಿರ್ದಿಷ್ಟ ಕಂಪನಿ/ಸರಬರಾಜು ಸಂಸ್ಥೆಯ ಜತೆ ಪೂರ್ವ ನಿರ್ಧರಿತ ಒಪ್ಪಂದ ಮಾಡಿಕೊಂಡಿತ್ತು.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ವಿಟಮಿನ್ ಸಿ ಜಗಿಯಬಹುದಾದ (500 ಮಿ ಗ್ರಾಂ) 66,90,68,400 ಪ್ರಮಾಣದಲ್ಲಿ ಮಾತ್ರೆಗಳನ್ನು ಖರೀದಿಸಲು 2024ರ ಜನವರಿ 12ರಂದು ಟೆಂಡರ್ ಆಹ್ವಾನಿಸಿತ್ತು.

ನಂತರ ಟೆಂಡರ್ ಅವಧಿಯನ್ನು 5 ಬಾರಿ ವಿಸ್ತರಿಸಲಾಗಿತ್ತು. ಬಜಾಜ್ ಹೆಲ್ತ್ ಕೇರ್ ಹೊರತುಪಡಿಸಿ ಬೇರೆ ಯಾವ ಕಂಪನಿಗಳು ಭಾಗವಹಿಸಿರಲಿಲ್ಲ.

ಇಂತಹ ಸಂದರ್ಭದಲ್ಲಿ ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಿ ಮರು ಟೆಂಡರ್ ಕರೆಯಬೇಕಾಗಿತ್ತು. ಆದರೆ ನಿಗಮವು ಈ ಪ್ರಕ್ರಿಯೆಯನ್ನು ಮಾಡಿಲ್ಲ. ಹೀಗಾಗಿ ಸಿಂಗಲ್ ಟೆಂಡರ್ ಆಗಿತ್ತು.
ವಿಟಮಿನ್ ಸಿ ಮಾತ್ರೆ ಖರೀದಿಗೆ ಸಿಂಗಲ್ ಟೆಂಡರ್; ದುಪ್ಪಟ್ಟು ದರ, ಬಹು ಕೋಟಿ ನಷ್ಟ?
ಬಜಾಜ್ ಹೆಲ್ತ್ ಕೇರ್ ಕಂಪನಿಯು ಪ್ರತಿ ಯೂನಿಟ್‌ಗೆ 69 ರು.ನಂತೆ ಅಂದಾಜು ದರವನ್ನು ನಮೂದಿಸಿದೆ. ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ಭಾಗವಹಿಸಿದ್ದ ಟೆಂಡರ್‌ನಲ್ಲೂ ಇದೇ ಕಂಪನಿಯು ವಿಟಮಿನ್ ಸಿ ಪ್ರತಿ ಮಾತ್ರೆಗೆ 43 ಪೈಸೆಯಂತೆ 100 ಮಾತ್ರೆಗಳ ಘಟಕವೊಂದಕ್ಕೆ 42.56 ರು.ಗಳನ್ನು (ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ) ದರ ನಮೂದಿಸಿತ್ತು.
ಇದರ ಪ್ರಕಾರ ಕರ್ನಾಟಕದಲ್ಲಿ ಈ ಕಂಪನಿಯು ನಮೂದಿಸಿರುವ ದರವನ್ನು ಕೇರಳದಲ್ಲಿ ನಮೂದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 26.44 ರು ವ್ಯತ್ಯಾಸವಿದೆ. ಇದು ರಾಜ್ಯದ ಬೊಕ್ಕಸಕ್ಕೆ ಅಂದಾಜು 17.69 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

ಇನ್ನು ಇದೇ ವಿಟಮಿನ್ ಸಿ ಮಾತ್ರೆ (500 ಮಿ ಗ್ರಾಂ)ಗಳಿಗೆ ಉತ್ತರ ಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿರುವ ದರಗಳೊಂದಿಗೆ ಹೋಲಿಸಿ ನೋಡಿದರೂ ಅಪಾರ ಪ್ರಮಾಣದಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಸಾಧ್ಯತೆಗಳೇ ಹೆಚ್ಚಿದ್ದವು.
ಉತ್ತರ ಪ್ರದೇಶದಲ್ಲಿ ಇದೇ ಮಾತ್ರೆಗೆ 29 ಪೈಸೆ ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್ ಗೆ 40.00 ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ ರಾಜ್ಯದ ಬೊಕ್ಕಸಕ್ಕೆ ಅಂದಾಜು 26.76 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

ರಾಜಸ್ಥಾನದಲ್ಲಿ ಇದೇ ಮಾತ್ರೆಯ ದರವು ಪ್ರತಿ ಯೂನಿಟ್‌ಗೆ 41.93 ರು.ನಷ್ಟಿದೆ. ಕರ್ನಾಟಕದಲ್ಲಿ ಅನುಮೋದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 27.03 ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ 18.11 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

ಒರಿಸ್ಸಾದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 39 ರು ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್‌ಗೆ 30 ರೂ.ಗಳಷ್ಟು ಕಡಿಮೆಯಾಗಿತ್ತು. ಇದರ ಪ್ರಕಾರ ಬೊಕ್ಕಸಕ್ಕೆ 20.07 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 47 ರು. ಇದೆ. ಈ ದರವು ಕರ್ನಾಟಕದ ದರಕ್ಕೆ ಹೋಲಿಸಿದರೆ 20 ರು ಕಡಿಮೆಯಾಗಿದೆ. ಇದರ ಪ್ರಕಾರ 14.71 ಕೋಟಿ ರು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ.

ವಿಶೇಷವೆಂದರೇ ವಿಟಮಿನ್ ಸಿ 500 ಮಿ. ಗ್ರಾಂ ಮಾತ್ರೆಯನ್ನೂ ಒಳಗೊಂಡಂತೆ ಇನ್ನಿತರೆ ಔಷಧ ಸಾಮಗ್ರಿಗಳ ಖರೀದಿಗೆ 2023ರ ಮೇ 25ರಂದು ನಿಗಮವು ಟೆಂಡರ್ ಕರೆದಿತ್ತು. ಆ ವೇಳೆಯಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ ಅಂದಾಜು 52.25 ರು.ಗಳನ್ನು ನಿಗದಿಪಡಿಸಿತ್ತು. 8 ತಿಂಗಳ ನಂತರ ಮತ್ತೊಮ್ಮೆ ಕರೆದಿದ್ದ ಟೆಂಡರ್‌ನಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ 67.00 ರು.ಗಳನ್ನು ನಮೂದಿಸಿತ್ತು. ಈ ಅವಧಿಯಲ್ಲಿ 14.75 ರು. ವ್ಯತ್ಯಾಸವಿತ್ತು.
ಇನ್ನು ಬಿಡ್‌ದಾರರು ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ಮತ್ತು ಆನ್‌ಲೈನ್ ಮೂಲಕ ಪಾವತಿಸಬಹುದು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಈ ಟೆಂಡರ್ ಪ್ರಕ್ರಿಯೆಯಲ್ಲಿ ಆನ್‌ಲೈನ್ ವ್ಯವಸ್ಥೆಗಷ್ಟೇ ಅವಕಾಶ ಕಲ್ಪಿಸಿ ಬ್ಯಾಂಕ್ ಗ್ಯಾರಂಟಿ ಅವಕಾಶ ನೀಡಿಲ್ಲ. ಇದರಿಂದ ಸ್ಪರ್ಧಾತ್ಮಕತೆಗೆ ಅವಕಾಶವಿಲ್ಲದಂತಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’, ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತಿಕ್ರಿಯೆ ಕೋರಿ 2025ರ ಡಿಸೆಂಬರ್ 1ರಂದು ಇ-ಮೈಲ್ ಮೂಲಕ ಕೋರಿಕೆ ಸಲ್ಲಿಸಿದೆ. ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯನ್ನು ನವೀಕೃತಗೊಳಿಸಲಾಗುವುದು.









