ಆರ್ಥಿಕ ಹೊರೆ, ತೆರವಾಗದ ತಡೆಯಾಜ್ಞೆ; ಕಾಲ್ಪನಿಕ ವೇತನ ಬಡ್ತಿ ಮರೀಚಿಕೆ, ಖಾಸಗಿ ಶಿಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ

ಬೆಂಗಳೂರು; ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕಾಲ್ಪನಿಕ ವೇತನ ನಿಗದಿಪಡಿಸುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

 

ಅನುದಾನರಹಿತ ಸೇವೆ ಪರಿಗಣಿಸಿ ವೇತನ ಬಡ್ತಿ ಮತ್ತು ಪಿಂಚಣಿ ಸೇವಾ ಸೌಲಭ್ಯ (ಕಾಲ್ಪನಿಕ ವೇತನ)ನೀಡುವ ಸಂಬಂಧ ವಿಧಾನಪರಿಷತ್‌ನ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿದ್ದ ಸದನ ಸಮಿತಿ ವರದಿ ಸಲ್ಲಿಕೆಯಾಗಿ ನಾಲ್ಕೈದು ವರ್ಷಗಳಾದರೂ ಈಗಿನ ಕಾಂಗ್ರೆಸ್‌  ಸರ್ಕಾರವು ಸಹ  ನಿರ್ದಿಷ್ಟ ನಿಲುವು ತಳೆಯುವಲ್ಲಿ ವಿಫಲವಾಗಿದೆ.

 

ಕಾಲ್ಪನಿಕ ವೇತನ ನಿಗದಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡಿರುವ ಸರ್ಕಾರವು, ಹಲವು ಪ್ರಕರಣಗಳಲ್ಲಿ ಉಚ್ಛ  ನ್ಯಾಯಾಲಯವು ನೀಡಿರುವ ತೀರ್ಪುಗಳನ್ನು ಪಾಲಿಸಿದಲ್ಲಿ ಬೊಕ್ಕಸಕ್ಕೆ ಬಹುದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂಬ ಕಾರಣವನ್ನು ಮತ್ತೊಮ್ಮೆ  ಮುಂದೊಡ್ಡಲಿದೆ.

 

ಹಾಗೆಯೇ  ಈ ಪ್ರಕರಣಗಳಲ್ಲಿನ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಪ್ರಯತ್ನಗಳನ್ನೇ ಮಾಡುತ್ತಿಲ್ಲ. ಹೀಗಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಮತ್ತೆ ಸರಣಿ ಹೋರಾಟಕ್ಕಿಳಿಯುವ ಸಾಧ್ಯತೆಗಳೂ ಇವೆ.

 

ಈ ಕುರಿತು ಇದೇ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು  ಉತ್ತರ ನೀಡಲು ಸಜ್ಜಾಗಿದ್ದಾರೆ.

 

‘ತಡೆಯಾಜ್ಞೆಯು ಪ್ರಸ್ತುತ ಜಾರಿಯಲ್ಲಿದೆ. ಹೀಗಾಗಿ ಈ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ,’ ಎಂಬ  ಉತ್ತರವನ್ನು ಸಿದ್ಧಪಡಿಸಿರುವುದು ಗೊತ್ತಾಗಿದೆ.

 

ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಕುರಿತು ಶಾಸಕ ಐಹೊಳೆ ಮಹಾಲಿಂಗಪ್ಪ ಅವರು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ನಿರ್ದೇಶಕರ ಹಂತದಲ್ಲಿ ಉತ್ತರವೂ ಸಿದ್ಧಗೊಂಡಿದೆ.

 

ಇಲಾಖೆ ನಿರ್ದೇಶಕರ ಉತ್ತರದಲ್ಲೇನಿರಲಿದೆ?

 

ಕರ್ನಾಟಕ ಶಿಕ್ಷಣ ಕಾಯ್ದೆ 1983 ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳ ನಿಯಮಗಳ ಪ್ರಕಾರ ಆಡಳಿತ ಮಂಡಳಿ ಮಾಡಿಕೊಂಡಿರುವ ನೇಮಕಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ದಿನಾಂಕದಿಂದ ವೇತನ ಭತ್ಯೆಗಳನ್ನು ನೀಡಲಾಗುತ್ತಿದೆ. ಈ ನಿಯಮಗಳ ಅನ್ವಯ ಅನುದಾನ ರಹಿತ ಅವಧಿಗೆ ಸಲ್ಲಿಸಿದ ಸೇವಾವಧಿಗೆ ವೇತನ ಸೌಲಭ್ಯಗಳನ್ನು ನೀಡಲು ಅವಕಾಶವಿರುವುದಿಲ್ಲ ಎಂಬ ಉತ್ತರವನ್ನು ಸಿದ್ಧಪಡಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಖಾಸಗಿ ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ ಅನುದಾನ ರಹಿತವಾಗಿ ನೇಮಕಗೊಂಡು ವೇತನ ಅನುದಾನಕ್ಕೆ ಒಳಪಡುವರೆಗಿನ ಅನುದಾನ ರಹಿತ ಅವಧಿಗೆ ರಾಜ್ಯದ ಯಾವುದೇ ಜಿಲ್ಲೆಯ ನೌಕರರಿಗೆ ಕಾಲ್ಪನಿಕ ವೇತನವನ್ನು ನಿಗದಿಪಡಿಸಿಲ್ಲ. ಇದನ್ನು ಪ್ರಶ್ನಿಸಿ ಹಲವಾರು ರಿಟ್‌ ಅರ್ಜಿಗಳು ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿವೆ. ಈ ರಿಟ್‌ ಅರ್ಜಿಗಳನ್ನು ವಿಚಾರಣೆ ನಡೆಸಿ ಹಲವು ಪ್ರಕರಣಗಳಲ್ಲಿ ಪುರಸ್ಕರಿಸಬೇಕು ಎಂದು ಆದೇಶ ನೀಡಿದೆ. ಆದರೆ ಈ ತೀರ್ಪುಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ ಬೊಕ್ಕಸಕ್ಕೆ ಬಹುದೊಡ್ಡ ಆರ್ಥಿಕ ಹೊರೆ ಆಗಲಿದೆ ಎಂಬ ಹಿಂದಿನ ಸಾಲುಗಳಲ್ಲಿ ನೀಡಿದ್ದ ಉತ್ತರವನ್ನೇ ಪುನರುಚ್ಚರಿಸಲಿದೆ.

 

ಉಚ್ಛ ನ್ಯಾಯಾಲಯದ ಧಾರವಾಡ ಪೀಠವು ನೀಡಿರುವ ತೀರ್ಪುನ್ನು ಉಲ್ಲೇಖಿಸಲಿರುವ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ನಿರ್ದೇಶಕರು, ರಿಟ್‌ ಅಪೀಲು ಪ್ರಕರಣದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಅಂತಿಮ ತೀರ್ಪು ಬಂದ ನಂತರ ಮುಂದಿನ ಕ್ರಮ ವಹಿಸಬಹುದು ಎಂದು ಸಚಿವರಿಗೆ ಸಲಹೆ ನೀಡಿರುವುದು ತಿಳಿದು ಬಂದಿದೆ.

 

ಅದೇ ರೀತಿ ‘ಕಾಲ್ಪನಿಕ ವೇತನ ನಿಗದಿ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಾದ ರಿಟ್‌ ಅರ್ಜಿಗಳ ತೀರ್ಪುಗಳ ವಿರುದ್ಧ ಇಲಾಖೆ ವತಿಯಿಂದ ರಿಟ್‌ ಅಪೀಲು ಸಲ್ಲಿಸಿ ಈ ರಿಟ್‌ ಅಪೀಲುಗಳನ್ನು ಮೂಲ ರಿಟ್‌ ಅಪೀಲು (2476/2015)ಕ್ಕೆ ಜೋಡಣೆಗೊಳಿಸಿದೆ. ಈ ಮೂಲ ರಿಟ್‌ ಅಪೀಲು ಪ್ರಕರಣವುಉ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ಕಾಲ್ಪನಿಕ ವೇತನ ಬಡ್ತಿ ಸೌಲಭ್ಯ ನೀಡಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಣಯಿಸಬೇಕಿದೆ. ಮತ್ತು ಕಾಲ್ಪನಿಕ ವೇತನ ನಿಗದಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಸರ್ಕಾರದ ಹಂತದಲ್ಲಿ ಉತ್ತರಿಸಬೇಕಿದೆ,’ ಎಂದು ಇಲಾಖೆಯ ಪ್ರೌಢಶಿಕ್ಷಣ ವಿಭಾಗದ ನಿರ್ದೇಶಕರು ತಿಳಿಸಿರುವುದು ಗೊತ್ತಾಗಿದೆ.

 

ಈ ಉತ್ತರದ ಕುರಿತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ. ಕಾಲ್ಪನಿಕ ವೇತನ ಬಡ್ತಿ ಸೌಲಭ್ಯ ಒದಗಿಸುವ ಸಂಬಂಧ ತಡೆಯಾಜ್ಞೆಯು ಜಾರಿಯಲ್ಲಿರುವ ಕಾರಣ, ನ್ಯಾಯಾಲಯದಲ್ಲಿ ಬಾಕಿ ಇದೆ ಎಂಬ ಉತ್ತರವನ್ನು ನೀಡಲು ತೀರ್ಮಾನ ಕೈಗೊಂಡಿರುವುದು ತಿಳಿದು ಬಂದಿದೆ. ಈ ಉತ್ತರವನ್ನು ಸಚಿವ ಮಧು ಬಂಗಾರಪ್ಪ ಅವರು ಸಹ 2025ರ ನವೆಂಬರ್‍‌ 12ರಂದೇ  ಅನುಮೋದಿಸಿರುವುದು ಗೊತ್ತಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರದ ನಿಲುವೇನಾಗಿತ್ತು?

 

ಪದವೀಧರ ಕ್ಷೇತ್ರದ ಸದಸ್ಯ ಡಾ ಚಂದ್ರಶೇಖರ್ ಬಿ ಪಾಟೀಲ್‌ ಅವರೂ ಸಹ ಈ ಸಂಬಂಧ  ಪ್ರಶ್ನೆ ಕೇಳಿದ್ದರು.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹಿಂದಿನ  ಸಚಿವ ಬಿ ಸಿ ನಾಗೇಶ್‌ ಅವರು 2021ರ ಸೆ.13ರಂದು ಉತ್ತರ  ನೀಡಿದ್ದರು. ಹಿಂದಿನ ಸಚಿವರು ನೀಡಿದ್ದ  ಉತ್ತರವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನಿರಾಶೆಯಲ್ಲಿ ಮುಳುಗಿಸಿತ್ತು.

 

 

ಸಮಿತಿಯ ವರದಿ ಮತ್ತು ಇಲಾಖೆಗಳಲ್ಲಿನ ವಾಸ್ತವ ಅಂಕಿ ಅಂಶಗಳನ್ನು ಪರಿಶೀಲಿಸಲಾಗಿ ಹಾಲಿ ನೀಡಲಾಗುತ್ತಿರುವ ವೇತನಕ್ಕೆ ಅನುದಾನ ರಹಿತ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು ವೇತನವನ್ನು ಪರಿಷ್ಕರಿಸಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕವಾಗಿ 359.87 ಕೋಟಿ ರು. ಅನುದಾನ ಬೇಕಾಗಲಿದೆ. ಆದರೆ ಅವರಿಗೆ ಹಿಂಬಾಕಿ ಮತ್ತು ಪಿಂಚಣಿಗಾಗಿ ತಗುಲುವ ಅಂದಾಜು ವೆಚ್ಚವು ಪ್ರಸ್ತಾಪಿತ 359.87 ಕೋಟಿ ರು.ನಲ್ಲಿ ಒಳಗೊಂಡಿಲ್ಲ ಎಂದು ಹಿಂದಿನ ಬಿಜೆಪಿ  ಸರ್ಕಾರವು ತಿಳಿಸಿತ್ತು.

 

ಅಲ್ಲದೆ 359.87 ಕೋಟಿ ರು. ಒಂದು ವರ್ಷಕ್ಕೆ ಬೇಕಾದ ಹೆಚ್ಚುವರಿ ಮೊತ್ತವಾಗುತ್ತದೆ. ಈ ಅನುಕೂಲ ಪಡೆಯುವ ಸಿಬ್ಬಂದಿ ಪೂರ್ಣ ಸೇವಾವಧಿಯಲ್ಲಿ ಪಡೆಯುವ ಮೊತ್ತದ ಒಟ್ಟು ಮೊತ್ತದ ಲೆಕ್ಕಾಚಾರ ಇಲಾಖೆಗಳಲ್ಲಿ ಇನ್ನೂ ಆಗಿಲ್ಲ. ಹಾಗೆಯೇ ನಿವೃತ್ತಿ , ಸೌಲಭ್ಯಗಳ ಒಟ್ಟಾರೆ ಆರ್ಥಿಕ ಹೊರೆ ಸಹ ಲೆಕ್ಕ ಹಾಕಿರುವುದಿಲ್ಲ. ಈ ಎರಡೂ ಮೊತ್ತಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅನುದಾನರಹಿತ ಸೇವಾವಧಿ ಸಂಬಂಧ ನೀಡಬೇಕಾದ ವೇತನ ಬಾಕಿ ಮೊತ್ತ 3, 083.54 ಕೋಟಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ‘ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವಲ್ಲಿ ನಿರ್ದಿಷ್ಟ ನಿಲುವನ್ನು ತಳೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ,’ ಎಂದು ಬಿ ಸಿ ನಾಗೇಶ್‌ ಅವರು ಉತ್ತರದಲ್ಲಿ ತಿಳಿಸಿದ್ದರು.

 

 

ಹೊರಟ್ಟಿ ವರದಿ ಶಿಫಾರಸ್ಸುಗಳೇನಿದ್ದವು?

 

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುದಾನಿತ ಸಿಬ್ಬಂದಿಯವರಿಗೆ ಕಾಲ್ಪನಿಕ ವೇತನ ನಿಗದಿ ಮಾಡಿ ವೇತನವನ್ನು ಪುನರ್‌ ನಿಗದಿಪಡಿಸಿ ವೇತನ ಸೌಲಭ್ಯವನ್ನು ಹಾಗೂ ಪಿಂಚಣಿ, ಗ್ರಾಚ್ಯುಟಿ ಸೌಲಭ್ಯ ನೀಡುವುದು. ಅನುದಾನಿತ ರಹಿತ ಅವಧಿಯನ್ನು ಪರಿಗಣಿಸಿ ಪದನ್ನೋತಿ ಕಾಲಮಿತಿ ಹಾಗೂ ಪ್ಲೇಸ್‌ಮೆಂಟ್‌ ಸೌಲಭ್ಯ ನೀಡುವುದು. ಕಾಲ್ಪನಿ ವೇತನ ನಿಗದಿಪಡಿಸಿದ ನಂತರ ಯಾವುದೇ ನೌಕರರು ಹಿಂದಿನ ಯಾವುದೇ ಬಾಕಿಯನ್ನು ಕೇಳುವಂತಿಲ್ಲ.

 

 

ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆ ಹೂಡಿರುವವರು ತಮ್ಮ ಪ್ರಕರಣಗಳನ್ನು ವಾಪಸ್‌ ಪಡೆದಲ್ಲಿ ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ ಎಂಬ ಅಂಶವನ್ನು ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸುವುದು. ಈಗಾಗಲೇ ಈ ಸೌಲಭ್ಯವನ್ನು ಪಡೆಯುತ್ತಿರುವವರಿಗೆ ಯಥಾವತ್ತಾಗಿ ಮುಂದುವರೆಸುವುದು ಹಾಗೂ ಈಗಾಗಲೇ ಆರ್ಥಿಕ ಸೌಲಭ್ಯಗಳನ್ನು ಪಡೆದು ನಿವೃತ್ತಿ ಆಗಿರುವ ಮತ್ತು ಆಗಲಿರುವ ನೌಕರರಿಗೆ ಯಾವುದೇ ರೀತಿಯಿ ಆರ್ಥಿಕ ಕಡಿತವನ್ನು ಮಾಡಬಾರದು.

 

ನಿವೃತ್ತಿ ವೇತನ ನಿಗದಿಪಡಿಸುವಾಗ ಅನುದಾನ ರಹಿತ ಅವಧಿಯನ್ನು ಕಡಿತಗೊಳಿಸಿ ಪುನರ್‌ ನಿಗದಿಪಡಿಸಬಾರದು. ನಿವೃತ್ತರಾಗುತ್ತಿರುವವರಿಗೆ ನಿವೃತ್ತಿ ಉಪಧನವನ್ನು ಕಡಿತಗೊಳಸದಂತೆ ಸರ್ಕಾರಿ ಆದೇಶ ಹೊರಡಿಸುವುದು.

 

ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು 395ಕೋಟಿ ರು. ಅವಶ್ಯಕತೆ ಇದೆ ಎಂದು ವಿಧಾನಪರಿಷತ್‌ನ ವಿಶೇಷ ಸದನ ಸಮಿತಿ 2018ರಂದು ಶಿಫಾರಸ್ಸು ಮಾಡಿತ್ತು. ವಾಸ್ತವ ಅಂಶಗಳನ್ನು ಪರಾಮರ್ಶಿಸಿ ವರದಿ ನೀಡಲಾಗಿದ್ದು 395 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಇದರಿಂದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25 ಸಾವಿರ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಹೊರಟ್ಟಿ ಅವರು ಹೇಳಿದ್ದರು.

 

ಕಾಲ್ಪನಿಕ ವೇತನ ಮಂಜೂರಾತಿ ಕುರಿತ ಬಸವರಾಜ ಹೊರಟ್ಟಿ ವರದಿ ಜಾರಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನ ನಿಗದಿ ಮಾಡುವಂತೆ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts