ಬೆಂಗಳೂರು; ತೆಲಂಗಾಣ ಮತ್ತು ಮುಂಬೈ ಮೂಲದ ಕಂಪನಿಗಳ ಮೇಲ್ಮನವಿ ಆಧರಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ ಮತ್ತು ಎಂಎಸ್ಎಂಇ) ಯ ಪುನರ್ ಪರಿಶೀಲನಾ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪಾಲಿಸುತ್ತಿಲ್ಲ. ಹೀಗಾಗಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಹಾಗೂ ಬೀಳಗಿ ಕ್ಷೇತ್ರದ ಶಾಸಕರೂ ಆಗಿರುವ ಜೆ ಟಿ ಪಾಟೀಲ್ ಅವರು ಕಂಪನಿಗಳ ಪರವಾಗಿ ಸರ್ಕಾರದ ಕದ ತಟ್ಟಿದ್ದಾರೆ.
ಶಕ್ತಿ ಮತ್ತು ರಿಷಿಕಾ ಕೆಮಿಕಲ್ಸ್ ಕಂಪನಿಯ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಪುನರ್ ಪರಿಶೀಲನಾ ಪ್ರಾಧಿಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಹಟ್ಟಿ ಚಿನ್ನದ ಗಣಿ ಕಂಪನಿಯ ಟೆಂಡರ್ ಪರಿಶೀಲನಾ ಸಮಿತಿಯ ಆದೇಶವನ್ನು ರದ್ದುಗೊಳಿಸಿದ್ದರು. ಹಾಗೆಯೇ ಈ ಕಂಪನಿಗಳ ಆರ್ಥಿಕ ಬಿಡ್‌ನ್ನೂ ತೆರೆಯಲು ಆದೇಶಿಸಿದ್ದರು. ಆದರೀಗ ಈ ಆದೇಶವನ್ನು ಹೆಚ್‌ಜಿಎಂಎಲ್ ಪಾಲಿಸುತ್ತಿಲ್ಲ.
ಹೀಗಾಗಿ ಕಂಪನಿ ಅಧ್ಯಕ್ಷ ಜೆ ಟಿ ಪಾಟೀಲ್ ಅವರು, ಪುನರ್ ಪರಿಶೀಲನಾ ಪ್ರಾಧಿಕಾರದ ಮಧ್ಯ ಪ್ರವೇಶ ಬಯಸಿದ್ದಾರೆ. ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ 2025ರ ನವೆಂಬರ್ 22ರಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಜೆ ಟಿ ಪಾಟೀಲ್ ಪತ್ರದಲ್ಲೇನಿದೆ?
ಮುಂಬೈ ವಿಳಾಸದ ಶಕ್ತಿ ಫೋರ್ಜ್ ಇಂಡಿಯಾ ಮತ್ತು ತೆಲಂಗಾಣ ಮೂಲದ ರಿಶಿಕಾ ಕೆಮಿಕಲ್ಸ್ ನ್ನು ಹಟ್ಟಿ ಚಿನ್ನದ ಗಣಿ ಕಂಪನಿಯು ತಾಂತ್ರಿಕವಾಗಿ ಅನರ್ಹಗೊಳಿಸಿ ಆದೇಶಿಸಿತ್ತು. ಇದನ್ನು ಪುನರ್ ಪರಿಶೀಲನಾ ಪ್ರಾಧಿಕಾರವು ರದ್ದುಗೊಳಿಸಿತ್ತು. ಆದರೆ ಹಟ್ಟಿ ಚಿನ್ನದ ಗಣಿ ಕಂಪನಿಯು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ. ಅಲ್ಲದೇ ಈ ಆದೇಶವನ್ನು ಪಾಲಿಸಲು ಇಚ್ಛಿಸುತ್ತಿಲ್ಲ. ಈ ಕುರಿತು ಈಗಾಗಲೇ ಪತ್ರವನ್ನು ಬರೆಯಲಾಗಿದೆ. ಆದರೂ ಪ್ರಾಧಿಕಾರದ ಆದೇಶ ಪಾಲನೆಯಾಗುತ್ತಿಲ್ಲ. ಹೀಗಾಗಿ ಪ್ರಾಧಿಕಾರವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಮತ್ತು ಅರ್ಹರಿಗೆ ತಕ್ಷಣ ಮತ್ತು ಯಾವುದೇ ವಿಳಂಬವಿಲ್ಲದೇ ನ್ಯಾಯ ಒದಗಿಸಬೇಕು ಎಂದು ಕಂಪನಿಯ ಅಧ್ಯಕ್ಷ ಜೆ ಟಿ ಪಾಟೀಲ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

ನಿಗಮದ ಅಧ್ಯಕ್ಷ ಜೆ ಟಿ ಪಾಟೀಲ್ ಅವರು 2025ರ ನವೆಂಬರ್‍ಗೂ ಮುನ್ನವೂ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಗೆ 2025ರ ಅಕ್ಟೋಬರ್ 24ರಂದು ಪತ್ರ ಬರೆದಿದ್ದರು. ಬಿಡ್‌ದಾರರು 4 ವರ್ಷಗಳಿಂದಲೂ ಅಧಿಕೃತ ಡೀಲರ್, ಪ್ರತಿನಿಧಿ ಮೂಲಕ ಫೋರ್ಜ್ಡ್ ಸ್ಟೀಲ್ ಗ್ರೈಂಡಿಂಗ್ ಬಾಲ್ಸ್‌ಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಗೆ ಸರಬರಾಜು ಮಾಡಿದ್ದಾರೆ. ಆದರೆ ನಿಗಮವು ತಪ್ಪಾಗಿ ಅವರನ್ನು ತಾಂತ್ರಿಕವಾಗಿ ಅನರ್ಹಗೊಳಿಸಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ನಿಗಮದ ಅಧ್ಯಕ್ಷ ಜೆ ಟಿ ಪಾಟೀಲ್ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

ಪ್ರಕರಣದ ವಿವರ
ಶಕ್ತಿ ಫೋರ್ಜ್ಡ್ ಇಂಡಿಯಾ ಮತ್ತು ರಿಶಿಕಾ ಕೆಮಿಕಲ್ಸ್ ಕಂಪನಿಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಮೌಲ್ಯಮಾಪನ ವರದಿ ಪ್ರಕಾರ ಟೆಂಡರ್ (ಟೆಂಡರ್ ಸಂಖ್ಯೆ HGML/2024-25/IND0313 65, HGML/2024-25/IND0314 125 ) ನಲ್ಲಿ ಅನರ್ಹಗೊಳಿಸಿದ್ದರು. ಇದನ್ನು ಈ ಎರಡೂ ಕಂಪನಿಗಳು ಪ್ರಶ್ನಿಸಿದ್ದವು.

ಈ ಅರ್ಜಿಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪರಿಶೀಲಿಸಿತ್ತು. ಬಿಡ್‌ದಾರರ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕ ಮೌಲ್ಯಮಾಪನವನ್ನೇ ಮರು ಪರಿಶೀಲಿಸಬೇಕು ಎಂದು ಪುನರ್ ಪರಿಶೀಲನಾ ಪ್ರಾಧಿಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ನಿರ್ದೇಶಿಸಿದ್ದರು.
ಕರ್ನಾಟಕ ಪಾರದರ್ಶಕತೆ ಸಾರ್ವಜನಿಕ ಸಂಗ್ರಹಣೆ ಕಾಯಿದೆ, 1999 ಮತ್ತು ಒಟ್ಟಾರೆ ಆಡಳಿತಾತ್ಮಕ ವಿವೇಚನೆಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯು ನಡೆಯಬೇಕು. ಈ ಸಂಬಂಧ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರ ಕಂಪನಿಗಳ ಕೋರಿಕೆಗೆ ಇಲಾಖೆಯು ಅತ್ಯಂತ ಮುತುವರ್ಜಿ ವಹಿಸಿತ್ತು.
ಮೇಲ್ಮನವಿದಾರರಿಗೆ ಸಂಬಂಧಿಸಿದಂತೆ ಅವಲೋಕನಗಳಿವು
ಡೀಲರ್ ಶಿಪ್ ಪ್ರಮಾಣ ಪತ್ರ ಮತ್ತು ಅನುಭವ ದಾಖಲಾತಿ ಸೇರಿದಂತೆ ಇನ್ನಿತರೆ ಕೆಲವು ದಾಖಲೆಗಳ ಸ್ವರೂಪ ಮತ್ತು ಸಿಂಧುತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಟೆಂಡರ್ ಪರಿಶೀಲನಾ ಸಮಿತಿಯು ಉಲ್ಲೇಖಿಸಿತ್ತು. ಇದನ್ನಾಧರಿಸಿ ಈ ಎರಡೂ ಕಂಪನಿಗಳು ತಾಂತ್ರಿಕವಾಗಿ ಅರ್ಹವಾಗಿಲ್ಲ ಎಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ತೀರ್ಮಾನವನ್ನೂ ಸಹ ಪ್ರಾಧಿಕಾರವು ಗಮನಿಸಿತ್ತು.
ಕಂಪನಿಗಳ ಈ ಹಿಂದಿನ ಕಾರ್ಯಕ್ಷಮತೆ ಮತ್ತು ಪೂರೈಕೆಯ ಸ್ಥಿರತೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಪರಿಶೀಲಿಸಿದೆ. ಈ ಹಿಂದೆ ಇದೇ ಕಂಪನಿಗಳು 65 ಎಂಎಂ ಮತ್ತು 125 ಎಂಎಂ ಫೋರ್ಜ್ಡ್ ಮೀಡಿಯಾ ಬಾಲ್ಸ್‌ಗಳನ್ನುಎಚ್‌ಜಿಎಂಎಲ್‌ಗೆ ಮೊದಲೇ ಪೂರೈಸಿದೆ ಎಂದು ಗಮನಿಸಿದೆ. ಬಿಡ್‌ದಾರರ ಪ್ರಾಯೋಗಿಕ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಣಯಿಸುವಾಗ ಸಹಜವಾಗಿಯೇ ಪ್ರಸ್ತುತತೆ ಹೊಂದಿದೆ ಎಂದು ಉಲ್ಲೇಖಿಸಿತ್ತು.

ಬಾವೋಜಿ ಯಿಲಿಟ್ ಫೋರ್ಜ್ ಕಂಪನಿ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಒದಗಿಸಿರುವ ದಾಖಲಾತಿಗಳು ಮತ್ತು ಸಾಂಸ್ಥಿಕತೆ, ಕಾರ್ಯಾಚರಣೆಯ ಸಾಮರ್ಥ್ಯದಲ್ಲಿ ನಿರಂತರತೆ ಇದೆ. ವಿವರಣಾತ್ಮಕ ವ್ಯತ್ಯಾಸಗಳು ಸಹ ಅಸ್ತಿತ್ವದಲ್ಲಿವೆ. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಪುನರ್ ಪರಿಶೀಲನಾ ಪ್ರಾಧಿಕಾರವು ಹೇಳಿತ್ತು.
ತಾಂತ್ರಿಕ ಸಾಮರ್ಥ್ಯವನ್ನು ನಿರ್ಣಯಿಸುವಾಗ ಟೆಂಡರ್ ಪರಿಶೀಲನಾ ಸಮಿತಿಯು ನಡೆಸಿದ್ದ ವಿಧಾನವು ಪರಿಪೂರ್ಣವಾಗಿರಲಿಲ್ಲ ಎಂದು ಪ್ರಾಧಿಕಾರವು ಅಭಿಪ್ರಾಯಿಸಿತ್ತು.
ರಿಷಿಕಾ ಕೆಮಿಕಲ್ಸ್‌ಗೆ ಸಂಬಂಧಿಸಿದಂತೆ ಅವಲೋಕನವೇನು?
ರಿಷಿಕಾ ಕೆಮಿಕಲ್ಸ್ ತನ್ನ ಪೂರ್ವ ಅನುಭವಕ್ಕೆ ಪೂರಕವಾಗಿ ಸಲ್ಲಿಸಲಾದ ಕೆಲವು ದಾಖಲೆಗಳ ದೃಢೀಕರಣದ ಬಗ್ಗೆ ಟೆಂಡರ್ ಪರಿಶೀಲನಾ ಸಮಿತಿಯು ಹಲವು ಪ್ರಶ್ನೆಗಳನ್ನು ಎತ್ತಿತ್ತು. ಹೀಗಾಗಿ ಈ ಕಂಪನಿಯನ್ನು ತಾಂತ್ರಿಕವಾಗಿ ಅನರ್ಹ ಎಂದು ವರ್ಗೀಕರಿಸಲಾಗಿದೆ. ಸಮಿತಿಯ ಈ ನಿರ್ಧಾರವನ್ನು ಪ್ರಾಧಿಕಾರವು ಗಮನಿಸಿದೆ. ಹೀಗಾಗಿ ಅಂತಹ ವಿಷಯಗಳ ಬಗ್ಗೆ ಯಾವುದೇ ನಿರ್ಣಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸದೇ ಟೆಂಡರ್‍ನ ಸ್ವರೂಪಕ್ಕೆ ಕಠಿಣ ಮತ್ತು ದಾಖಲೆಗಳ ಪರಿಶೀಲನೆ ಪ್ರಾಮುಖ್ಯತೆ ಕುರಿತು ಈ ಪ್ರಾಧಿಕಾರವು ಒತ್ತಿ ಹೇಳಿತ್ತು.

ಕಾರ್ಯಾಚರಣೆಯ ನಿರ್ದೇಶನಗಳೇನು?
ಕರ್ನಾಟಕ ಪಾರದರ್ಶಕತೆ ಸಾರ್ವಜನಿಕ ಸಂಗ್ರಹಣೆ ಕಾಯಿದೆ, 1999 ರ ಸೆಕ್ಷನ್ 15 ರ ಅಡಿಯಲ್ಲಿ ನೀಡಲಾದ ಅಧಿಕಾರ ಮತ್ತು ಈ ಪ್ರಾಧಿಕಾರವು ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿದೆ. ಟೆಂಡರ್ ಸ್ವೀಕರಿಸುವ ಪ್ರಾಧಿಕಾರವು ಸ್ವತಂತ್ರವಾಗಿ ಅಗತ್ಯವೆಂದು ಪರಿಗಣಿಸಬಹುದಾದ ಯಾವುದೇ ಮುಂದಿನ ನಿರ್ಧಾರಗಳಿಗೆ ಪೂರ್ವಾಗ್ರಹವಿಲ್ಲದೆ ನಿರ್ದೇಶನಗಳನ್ನು ನೀಡಿದೆ ಎಂದು ಪ್ರಾಧಿಕಾರವು ಹೇಳಿತ್ತು.
ಇದರ ಪ್ರಕಾರ ಶಕ್ತಿ ಪೋರ್ಜ್ ಇಂಡಿಯಾ ಮತ್ತು ರಿಷಿಕಾ ಕೆಮಿಕಲ್ಸ್‌ನ್ನು ತಾಂತ್ರಿಕವಾಗಿ ಅನರ್ಹ ಎಂದು ಘೋಷಿಸಿದ್ದ ಟೆಂಡರ್ ಪರಿಶೀಲನಾ ಸಮಿತಿಯ (ದಾಖಲೆ ಸಂಖ್ಯೆ 7) ತೀರ್ಮಾನವನ್ನು ರದ್ದುಗೊಳಿಸಿದೆ. ಅಲ್ಲದೇ ಹಟ್ಟಿ ಚಿನ್ನದ ಗಣಿ ಕಂಪನಿಯು ಸೂಕ್ತವೆಂದು ಪರಿಗಣಿಸಬಹುದಾದ ಮತ್ತು ಅನ್ವಯಿಸಬಹುದಾದ ಎಲ್ಲಾ ಪ್ರಕ್ರಿಯೆಗಳು ಹಾಗೂ ಭವಿಷ್ಯದ ಪರಿಶೀಲನೆಗಳಿಗೆ ಒಳಪಟ್ಟು ಈ ಕಂಪನಿಗಳು ತಾಂತ್ರಿಕ ಅರ್ಹತೆಯ ಮಿತಿಯನ್ನು ಪೂರೈಸಿದೆ ಎಂದು ಪರಿಗಣಿಸಲಾಗುತ್ತದೆ.
ಅಲ್ಲದೇ ತಾಂತ್ರಿಕವಾಗಿ ಅರ್ಹರೆಂದು ಪರಿಗಣಿಸಲಾದ ಬಿಡ್‌ದಾರರಿಗೆ ಅನ್ವಯವಾಗುವ ಕಾರ್ಯವಿಧಾನಗಳಿಗೆ ಅನುಗುಣವಾಗಿ ಶಕ್ತಿ ಪೋರ್ಜ್ ಇಂಡಿಯಾ ಮತ್ತು ರಿಷಿಕಾ ಕೆಮಿಕಲ್ಸ್ ಸಲ್ಲಿಸಿದ್ದ ಆರ್ಥಿಕ ಬಿಡ್‌ನ್ನು ತೆರೆಯಬೇಕು. ಮತ್ತು ಮೌಲ್ಯಮಾಪನ ಮಾಡಬೇಕು ಎಂದು ಪ್ರಾಧಿಕಾರವು ಹಟ್ಟಿ ಚಿನ್ನದ ಗಣಿಗೆ ನಿರ್ದೇಶಿಸಿತ್ತು.
ದಾಖಲೆಗಳ ದೃಢೀಕರಣದ ಕುರಿತು ಮುಚ್ಚಳಿಕೆ
ಶಕ್ತಿ ಫೋರ್ಜ್ಡ್ ಇಂಡಿಯಾ ಮತ್ತು ರಿಷಿಕಾ ಕೆಮಿಕಲ್ಸ್ ಸೇರಿದಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್‌ದಾರರು ಯಾವುದೇ ತಪ್ಪಾದ, ನಕಲಿ ಅಥವಾ ದಾರಿತಪ್ಪಿಸುವ ದಾಖಲೆಯನ್ನು ಒದಗಿಸಿಲ್ಲ ಎಂದು ದೃಢೀಕರಿಸುವ ದೃಢೀಕೃತ ಮುಚ್ಚಳಿಕೆಯನ್ನು ಒದಗಿಸಬೇಕು ಎಂದು ಪ್ರಾಧಿಕಾರವು ತನ್ನ ಆದೇಶದಲ್ಲಿ ಸೂಚಿಸಿತ್ತು.
ತಪ್ಪಾದ ಮಾಹಿತಿಯನ್ನು ನೀಡಿದ್ದರೇ ಟೆಂಡರ್ ಷರತ್ತುಗಳ ಪ್ರಕಾರ ಕ್ರಮ ಕೈಗೊಳ್ಳಬಹುದು. ಇದರಲ್ಲಿ ಇಎಂಡಿ/ಭದ್ರತಾ ಠೇವಣಿ ಮುಟ್ಟುಗೋಲು ಮತ್ತು ಒಪ್ಪಂದದ ಮುಕ್ತಾಯವೂ ಸಹ ಸೇರಿರುತ್ತವೆ.
ಭವಿಷ್ಯದ ಟೆಂಡರ್‌ಗಳಲ್ಲಿ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಸಮಗ್ರ ಮತ್ತು ಸೂಕ್ತವಾಗಿ ಮಾಪನಾಂಕ ನಿರ್ಣಯಿಸಿದ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಟೆಂಡರ್ ಪರಿಶೀಲನಾ ಸಮಿತಿಯ ಪ್ರಾಧಿಕಾರಕ್ಕೆ ಪುನರ್ ಪರಿಶೀಲನಾ ಪ್ರಾಧಿಕಾರವು ನಿರ್ದೇಶಿಸಿತ್ತು.

ಈ ಆದೇಶದಲ್ಲಿ ಯಾವುದೂ ಕಾರ್ಯವಿಧಾನದ ನ್ಯಾಯಸಮ್ಮತತೆ ಮತ್ತು ಆಡಳಿತಾತ್ಮಕ ಶ್ರದ್ಧೆಯ ಹಿತಾಸಕ್ತಿಯಲ್ಲಿ ಸ್ಪಷ್ಟೀಕರಣಗಳನ್ನು ಪಡೆಯಲು, ಪರಿಶೀಲನೆಗಳನ್ನು ಕೈಗೊಳ್ಳಲು ಅಥವಾ ಅಗತ್ಯವೆಂದು ಪರಿಗಣಿಸುವ ಯಾವುದೇ ಹೆಚ್ಚುವರಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಸಂಬಂಧ ಹಟ್ಟಿ ಚಿನ್ನ ಗಣಿ ಕಂಪನಿಯನ್ನು ಈ ಪ್ರಾಧಿಕಾರವು ತಡೆಯುವುದಿಲ್ಲ ಎಂದು ಹೇಳಿತ್ತು.









