ಬೆಂಗಳೂರು; ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಭಾಗವಾಗಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ 7,000 ಕೋಟಿ ರು.ಗಳಷ್ಟು ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಏದುಸಿರು ಬಿಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೂರು ಪಥದ ಅವಳಿ ಸುರಂಗ ಮಾರ್ಗಕ್ಕೆ 2,215 ಕೋಟಿ ರುಗಳನ್ನು ಆಂತರಿಕ ಸಂಪನ್ಮೂಲದಿಂದ ಸಂಗ್ರಹಿಸಲಿದೆ ಎಂದು ಸಮರ್ಥಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಯೋಜನೆಗೆ ಶೇ.25ರಷ್ಟು ಅಂದರೇ 7,000 ಕೋಟಿಗಳನ್ನು ಒದಗಿಸುವಷ್ಟರ ಮಟ್ಟಿಗೆ ಬಿಡಿಎನಲ್ಲಿ ಆರ್ಥಿಕ ಸಂಪನ್ಮೂಲವಿಲ್ಲ. ಈ ಸಂಬಂಧ 2024ರ ಆಗಸ್ಟ್ 16ರಂದೇ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಬಿಡಿಎನ ಆರ್ಥಿಕ ಪರಿಸ್ಥಿತಿಯೇ ಶೋಚನೀಯವಾಗಿರುವಾಗ ಮೂರು ಪಥದ ಅವಳಿ ಸುರಂಗ ಮಾರ್ಗಕ್ಕೆ 2,215 ಕೋಟಿ ರುಗಳನ್ನು ಆಂತರಿಕ ಸಂಪನ್ಮೂಲದಿಂದ ಸಂಗ್ರಹಿಸಲಿದೆ ಎಂದು ಮಂಡಿಸಿರುವ ವಾದವು ಸಮರ್ಥನೀಯವಾಗಿಲ್ಲ ಎಂದು ಬಿಡಿಎ ಅಧಿಕಾರಿಗಳ ವಲಯದಿಂದಲೇ ಮಾತುಗಳು ಕೇಳಿ ಬಂದಿವೆ.
ಈ ಯೋಜನೆ ಸಂಬಂಧ ಅವಲೋಕಿಸಿದ್ದ ಆರ್ಥಿಕ ಇಲಾಖೆಯು 2024ರ ಸೆ.3ರಂದು ಬರೆದಿತ್ತು. ‘ಈ ಯೋಜನೆಗೆ ಶೇ.25ರಷ್ಟು ಅಂದರೇ 7,000 ಕೋಟಿಗಳನ್ನು ಒದಗಿಸುವಷ್ಟರ ಮಟ್ಟಿಗೆ ಬಿಡಿಎನಲ್ಲಿ ಆರ್ಥಿಕ ಸಂಪನ್ಮೂಲವಿಲ್ಲ,’ ಎಂದು 2024ರ ಆಗಸ್ಟ್ 16ರಂದೇ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಬಿಡಿಎ ಆಯುಕ್ತರು ಸ್ವತಃ ಆರ್ಥಿಕ ಸಂಪನ್ಮೂಲವಿಲ್ಲ ಎಂದು ಒಂದ ವರ್ಷದ ಹಿಂದೆಯೇ ವಿವರಿಸಿದ್ದರು. ಆದರೀಗ ಬಿಡಿಎನ ಆಯುಕ್ತರು, ಮೂರು ಪಥದ ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಡಿಎಯು ಆರ್ಥಿಕವಾಗಿ ಸಬಲವಾಗಿದೆ ಎಂದು ವಾದ ಮಂಡಿಸಿದ್ದಾರೆ. ಒಂದೇ ವರ್ಷದಲ್ಲಿ ಬಿಡಿಎ ಹೇಗೆ ಆರ್ಥಿಕವಾಗಿ ಸಬಲವಾಯಿತು ಎಂಬ ಪ್ರಶ್ನೆಗಳೂ ಸಹ ಕೇಳಿ ಬಂದಿವೆ.
ಬಿಡಿಎಯು ಆರ್ಥಿಕ ಸಬಲವಾಗಿದೆಯೇ?
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಬೆಂಗಳೂರು ಸರ್ವತೋಮುಖ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಶಾಸನಾತ್ಮಕವಾಗಿ ಅಧಿಕಾರ ಹೊಂದಿರುತ್ತದೆ. ಅಲ್ಲದೆ ಸರ್ಕಾರವು ವಹಿಸುವ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕಾರ್ಯಗತಗೊಳಿಸಲು ಅಧಿಕಾರ ಹೊಂದಿದೆ.
ಈ ನಿಟ್ಟಿನಲ್ಲಿ ಪ್ರಾಧಿಕಾರವು ಬೆಂಗಳೂರಿನ ಹೊರ ವರ್ತುಲ ರಸ್ತೆ ನಿರ್ಮಿಸಿರುವುದನ್ನು ಉಲ್ಲೇಖಿಸಬಹುದಾಗಿದೆ. ಪ್ರಸ್ತುತ ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿರ್ವಹಣೆಗಾಗಿ ಹೆಚ್ಚುವರಿ ಪಥಗಳನ್ನು ಅಳವಡಿಸುವ ಯೋಜನೆ ಕೈಗೊಂಡಿದೆ. ಬಿಬಿಸಿ (ಪಿಆರ್ ಆರ್ ಆರ್ 1, ಪಿಆರ್‍ಆರ್ 2 ) ಬಡಾವಣೆಗಳ ಅಭಿವೃದ್ದಿ, ವಸತಿ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
ಪ್ರಾಧಿಕಾರದ ಲಭ್ಯವಿರುವ ಒಟ್ಟಾರೆ ಆದಾಯದಿಂದ ಈ ಯೋಜನೆಯನ್ನು ಕೈಗೊಳ್ಳಲು ಅರ್ಥಿಕವಾಗಿ ಸಬಲವಾಗಿದೆ ಎಂದು ಬಿಡಿಎಯು ಆರ್ಥಿಕ ಇಲಾಖೆ ಮುಂದೆ ಪ್ರತಿಪಾದಿಸಿತ್ತು.

ಆದರೆ ಇದೇ ಬಿಡಿಯು ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆ ಭಾಗ 1 ಯೋಜನೆಗೆ ಭೂ ಸ್ವಾಧೀನ, ನಿರ್ಮಾಣ ಹಾಗೂ ನಿರ್ವಹಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ಕ್ರೋಢೀಕರಿಸಿ ಯೋಜನೆ ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆಗೆ ಸ್ಪಷ್ಟ ವಿವರಗಳನ್ನೇ ನೀಡಿರಲಿಲ್ಲ.

ಈ ಯೋಜನೆಗೆ ಶೇ.25ರಷ್ಟು ಅಂದರೇ 7,000 ಕೋಟಿಗಳನ್ನು ಒದಗಿಸುವಷ್ಟರ ಮಟ್ಟಿಗೆ ಬಿಡಿಎನಲ್ಲಿ ಆರ್ಥಿಕ ಸಂಪನ್ಮೂಲವಿಲ್ಲ. ಈ ಸಂಬಂಧ 2024ರ ಆಗಸ್ಟ್ 16ರಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಯೋಜನೆಗೆ ಅವಶ್ಯಕವಿರುವ 2,560 ಎಕರೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಬೇಕಿದೆ. ಪರಿಹಾರ ರೂಪದಲ್ಲಿ 27,000 ಕೋಟಿ ರು. ವೆಚ್ಚ ಮಾಡಬೇಕಿದೆ. ಇಷ್ಟೊಂದು ಅಗಾಧ ಪ್ರಮಾಣದ ಮೊತ್ತವನ್ನು ಭರಿಸಲು ಸದ್ಯದ ಅರ್ಥಿಕ ಪರಿಸ್ಥಿತಿಯಲ್ಲಿ ಆಗದು ಎಂದು ಬಿಡಿಎ ಕೈಚೆಲ್ಲಿತ್ತು.

ಈ ಯೋಜನೆಯನ್ನು ಜಾರಿಗೊಳಿಸಲೇಬೇಕಾದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನನ್ನೇ ಸಾಲ ನೀಡುವ ಹಣಕಾಸು ಸಂಸ್ಥೆಗೆ ಒತ್ತೆ ಇರಿಸಬೇಕಾಗುತ್ತದೆ ಎಂದೂ ಪತ್ರದಲ್ಲಿ ವಿವರಿಸಿತ್ತು.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಕಾಮಗಾರಿ ನಡೆಸಲು ಬಿಡಿಎಯು ಸರ್ಕಾರದ ಮುಂದೆ 2 ಆಯ್ಕೆಗಳನ್ನು ಇರಿಸಿತ್ತು.
ಆಯ್ಕೆ-1ರಲ್ಲೇನಿದೆ?
ಯೋಜನೆಗೆ ಅವಶ್ಯಕವಿರುವ 2,560 ಎಕರೆ 26.75 ಗುಂಟೆ ಪ್ರದೇಶದ ಭೂ ಸ್ವಾಧೀನಕ್ಕೆ 21,000 ಕೋಟಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ 6,000 ಕೋಟಿ ರು ಸೇರಿ ಒಟ್ಟಾರೆ 27,000 ಕೋಟಿ ರು. ವೆಚ್ಚವಾಗಲಿದೆ. ಈ ಅಂದಾಜು ಮೊತ್ತವನ್ನು ರಾಜ್ಯ ಸರ್ಕಾರವು ಅನುದಾನದ ರೂಪದಲ್ಲಿ ಒದಗಿಸಬೇಕು. ಹಾಗೂ ರಸ್ತೆ ನಿರ್ವಹಣೆ ಕಾಮಗಾರಿಯನ್ನು ಬಿಡಿಎಯು ಭರಿಸಿ ಕಾರ್ಯಗತಗೊಳಿಸಬೇಕು ಎಂದು ಮೊದಲ ಅಯ್ಕೆಯನ್ನು ಮುಂದಿಟ್ಟಿತ್ತು.

ಆಯ್ಕೆ-2ರಲ್ಲೇನಿತ್ತು?
ಯೋಜನೆಗೆ ಅವಶ್ಯಕವಿರುವ 2,560 ಎಕರೆ ಪ್ರದೇಶ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ತಗಲುವ ಅಂದಾಜು 27,000 ಕೋಟಿ ರು ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸು ಸಂಸ್ಥೆಯಿಂದ ಅಥವಾ ಸರ್ಕಾರಿ ಬ್ಯಾಂಕ್ ಇನ್ನಿತರೆ ಆರ್ಥಿಕ ಸಂಸ್ಥೆಗಳಿಂದ ಸಾಲದ ರೂಪವಾಗಿ ಹಣಕಾಸು ನೆರವು ಪಡೆಯಬಹುದು ಎಂದು ವಿವರಿಸಿತ್ತು.
ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಯೋಜನಾ ಮೊತ್ತದ ಶೇ. 75ರಷ್ಟು ಮಾತ್ರ ಮಂಜೂರು ಮಾಡಲಿದೆ. ಉಳಿದ ಶೇ. 25ರಷ್ಟು ಮೊತ್ತವನ್ನು ಭರಿಸಲು ಪ್ರಾಧಿಕಾರದಲ್ಲಿ ಸಂಪನ್ಮೂಲ ಕೊರತೆ ಇದೆ. ಹೀಗಾಗಿ ಪ್ರಾಧಿಕಾರಕ್ಕೆ ಸರ್ಕಾರವೇ ಅನುದಾನ ನೀಡಬೇಕು. ಹಣಕಾಸು ಸಂಸ್ಥೆಗಳಿಗೆ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದಿಂದ ಗ್ಯಾರಂಟಿ ನೀಡಬೇಕು.
ಸಾಲದ ಬಡ್ಡಿ ಮೊತ್ತಕ್ಕೆ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಅಳವಡಿಸಿ ಬಡ್ಡಿ ಪಾವತಿಸಲು ಅವಕಾಶ ಕಲ್ಪಿಸಬೇಕು. ಅದೇ ರೀತಿ ರಸ್ತೆ ನಿರ್ವಹಣೆ ಕಾಮಗಾರಿಯನ್ನು ಬಿಡಿಎ ಭರಿಸಿ ಕಾರ್ಯಗತಗೊಳಿಸಬೇಕು ಎಂದು ಪ್ರಸ್ತಾಪಿಸಿತ್ತು.

ಈ ಸಂಬಂಧ ಬಿಡಿಎಯು ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಹುಡ್ಕೋ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿತ್ತು.
ಈ ಚರ್ಚೆ ಸಮಯದಲ್ಲಿ ‘ ಯೋಜನಾ ವೆಚ್ಚದ ಶೇ.75ರಷ್ಟು ಮೊತ್ತವನ್ನು ಮಾತ್ರ ಸಾಲದ ರೂಪದಲ್ಲಿ ಒದಗಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಉಳಿಕೆ ಶೇ.25ರಷ್ಟನ್ನು ಅಂದರೆ ಅಂದಾಜು 7,000 ಕೋಟಿ ರು.ಗಳನ್ನು ಪ್ರಾಧಿಕಾರವು ಸ್ವಂತ ಬಂಡವಾಳದಿಂದ ಒದಗಿಸಬೇಕು. ಆದರೆ ಶೇ. 25ರಷ್ಟು ಬಂಡವಾಳವನ್ನು ಅಂದರೆ 7,000 ಕೋಟಿ ಒದಗಿಸಲು ಪ್ರಾಧಿಕಾರದಲ್ಲಿ ಯಾವುದೇ ಅರ್ಥಿಕ ಸಂಪನ್ಮೂಲವಿಲ್ಲ. ಆದ್ದರಿಂದ 7,000 ಕೋಟಿ ರು.ಗಳ ಬಂಡವಾಳವನ್ನು ಸರ್ಕಾರದಿಂದಲೇ ಅನುದಾನ ಒದಗಿಸಬೇಕು,’ ಎಂದು ಕೋರಿತ್ತು.
ಅದೇ ರೀತಿ ಈ ಯೋಜನೆಗಾಗಿ ಪ್ರಾಧಿಕಾರವು ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಸಾಲ ನೀಡುವ ಹಣಕಾಸು ಸಂಸ್ಥೆಗೆ ಒತ್ತೆ ಇಡಬೇಕಾಗುತ್ತದೆ. ಹೀಗೆ ಒತ್ತೆ ಇಡಬೇಕಾಗಿರುವ ಪ್ರಕ್ರಿಯೆಗೆ ವಿಧಿಸುವ ಮುದ್ರಾಂಕ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ವಿವರಿಸಿತ್ತು.









