ಬೆಂಗಳೂರು; 2025-26ನೇ ಸಾಲಿನಲ್ಲಿ ಒಟ್ಟು ಬಿಡುಗಡೆಯಾಗಿದ್ದ 1,81,689 ಕೋಟಿ ರು ಅನುದಾನ ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೆ ಬಿದ್ದಿದೆ. ಒಟ್ಟಾರೆ ಅನುದಾನಕ್ಕೆ ನವೆಂಬರ್ 15ರ ಹೊತ್ತಿಗೆ ಕೇವಲ ಶೇ. 42.04ರಷ್ಟು ಮಾತ್ರ ಪ್ರಗತಿ ಆಗಿದೆ. ಅಲ್ಲದೇ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ 2025-26ನೇ ಸಾಲಿಗೆ ಶೇ. 38.39ರಷ್ಟು ಮಾತ್ರ ಬಿಡುಗಡೆಯಾಗಿದೆ.
2026-27ನೇ ಸಾಲಿನ ಆಯವ್ಯಯದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿರುವ ಹೊತ್ತಿನಲ್ಲೇ 2025-26ನೇ ಸಾಲಿನ ಆಯವ್ಯಯ ಮತ್ತು ಇಲಾಖೆಗಳ ಖರ್ಚು ವೆಚ್ಚದ ಮಾಹಿತಿಯು ಮುನ್ನೆಲೆಗೆ ಬಂದಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ನವೆಂಬರ್ 20ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯದ ಖರ್ಚುವೆಚ್ಚಗಳ ಕುರಿತು ಚರ್ಚೆಯಾಗಿದೆ.
ಈ ಸಭೆಯ ನಡವಳಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಕಳೆದ ಸಾಲಿನಲ್ಲಿ ಇದೇ ಅವಧಿಗೆ 1,58,237 ಕೋಟಿ ರು ವೆಚ್ಚವಾಗಿತ್ತು. 2025-26ನೇ ಸಾಲಿನ ನವೆಂಬರ್ 15ರ ಹೊತ್ತಿಗೆ 1,48,722 ಕೋಟಿ ರು ವೆಚ್ಚವಾಗಿದೆ. ಪ್ರಸ್ತುತ ಸಾಲಿನಲ್ಲಿ ಹಿಂದಿನ ಸಾಲಿಗಿಂತಲೂ ಕಡಿಮೆ ವೆಚ್ಚವಾಗಿದೆ. ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನ ಬಿಡುಗಡೆಯಲ್ಲಿಯೂ ಕಡಿಮೆ ಪ್ರಗತಿ ಸಾಧಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಅದೇ ರೀತಿ ವೇತನೇತರ ವೆಚ್ಚದಲ್ಲಿಯೂ ಇಲಾಖೆಗಳಲ್ಲಿ 18,383.42 ಕೋಟಿ ರು ವೆಚ್ಚವಾಗದೇ ಬಾಕಿ ಉಳಿಸಿಕೊಂಡಿದೆ. ಈ ಪೈಕಿ 5 ಇಲಾಖೆಗಳಲ್ಲಿ ಒಟ್ಟಾರೆ 7,042.49 ಕೋಟಿ ರು ವೇತನೇತರ ವಿಭಾಗದಲ್ಲಿ ಖರ್ಚಾಗಿಲ್ಲ.
2025-26ನೇ ಸಾಲಿನಲ್ಲಿ ಒಟ್ಟು 3,52,000 ಕೋಟಿ ರು. ಅನುದಾನ ಕಲ್ಪಿಸಲಾಗಿತ್ತು. ಇದರಲ್ಲಿ ಆಯವ್ಯಯ ಅಂದಾಜು 3,42,939 ಕೋಟಿ ಮತ್ತು ಪ್ರಾರಂಭಿಕ ಶಿಲ್ಕು 10,799 ಕೋಟಿ ರು ಸೇರಿತ್ತು. ಈ ಅನುದಾನದ ಪೈಕಿ 2025ರ ನವೆಂಬರ್ 15ರ ಅಂತ್ಯಕ್ಕೆ 1,81,689 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 1,48,722 ಕೋಟಿ ರು ಖರ್ಚಾಗಿದೆ.

ಇದು ಒಟ್ಟಾರೆ ಅನುದಾನಕ್ಕೆ ಶೇ.42.04ರಷ್ಟು ಮತ್ತು ಲಭ್ಯ ಅನುದಾನಕ್ಕೆ ಶೆ. 77.26ರಷ್ಟು ಪ್ರಗತಿಯಾಗಿದೆ ಎಂದು ಸಭೆಯ ನಡವಳಿಯಲ್ಲಿ ಹೇಳಲಾಗಿದೆ.
ಯೋಜನಾ ಇಲಾಖೆಯ ವ್ಯಾಪ್ತಿಯಲ್ಲಿ 371 ಜೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟಾರೆ 3,090 ಕೋಟಿ ರು ಇದೆ. ಈ ಪೈಕಿ 615 ಕೋಟಿ ರು ಮಾತ್ರ ಖರ್ಚಾಗಿದೆ. ಶಾಸಕರ ಕ್ಷೇತ್ರಾಭಿವೃದ್ದಿ ನಿಧಿ ಯೋಜನೆಯಡಿ 1,047 ಕೋಟಿ ಇರುವುದು ಗೊತ್ತಾಗಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ವೇತನೇತರ ಕಾರ್ಯಕ್ರಮಗಳಲ್ಲಿ ಅನುದಾನವು ವೆಚ್ಚವಾಗಿಲ್ಲ. ವೇತನೇತರ ವೆಚ್ಚಗಳಲ್ಲಿ 18,383.42 ಕೋಟಿ ರು ಇನ್ನೂ ವೆಚ್ಚವಾಗಿಯೇ ಇಲ್ಲ. ಬಿಲ್‌ಗಳನ್ನೂ ಸಹ ಪಾವತಿಸಿಲ್ಲ. ಕಂದಾಯ ವಿಪತ್ತು ನಿರ್ವಹಣೆಯಲ್ಲಿ 3,250.80 ಕೋಟಿ ವೆಚ್ಚವಾಗದೇ ಬಾಕಿ ಇರುವುದು ತಿಳಿದು ಬಂದಿದೆ.

ಹಾಗೆಯೇ ಯೋಜನೆ ಇಲಾಖೆಯಲ್ಲಿ 2,847.36 ಕೋಟಿ ರು, ಆರೋಗ್ಯ ಇಲಾಖೆಯಲ್ಲಿ ವೆಚ್ಚದಲ್ಲಿ 1,077.40 ಕೋಟಿ ರು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವೇತನೇತರ 1,465.64 ಕೋಟಿ ರು, ಪೌರಾಡಳಿತ ನಿರ್ದೇಶನಾಲಯದಲ್ಲಿ 1,652.09 ಕೋಟಿ ರು ಖರ್ಚಾಗಿಲ್ಲ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಕೋಟಿಯಷ್ಟು ಬಿಲ್‌ಗಳು ಪಾವತಿಗೆ ಬಾಕಿ ಇದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಮುಂದಿನ ತಿಂಗಳು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ನಂತರ ಹಣ ಬಿಡುಗಡೆಯಾಗಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
2025-26ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂಗತೆ 417 ಕಂಡಿಕೆಗಳ ಪೈಕಿ 5 ಕಂಡಿಕೆಗಳಲ್ಲಿ ಆರ್ಥಿಕ ಇಲಾಖೆಗೆ ಸ್ಪಷ್ಟೀಕರಣ ನೀಡಬೇಕಿದೆ.
2024-25ನೇ ಸಾಲಿನಲ್ಲಿ ಒಟ್ಟಾರೆ 2,98,212.21 ಕೋಟಿ ರು ಅನುದಾನ ಕಲ್ಪಿಸಲಾಗಿತ್ತು. ಈ ಪೈಕಿ ನವೆಂಬರ್ ಹೊತ್ತಿಗೆ 1,81,775 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಶೇ.43.17ರಷ್ಟು ಬಿಡುಗಡೆಯಾಗಿತ್ತು. ಆದರೆ 2025-26ನೇ ಸಾಲಿನ ನವೆಂಬರ್ 15ರ ಹೊತ್ತಿಗೆ ಕೇವಲ ಶೇ. 38.39ರಷ್ಟು ಮಾತ್ರ ಬಿಡುಗಡೆಯಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದಂತೆ ಇನ್ನೂ ಆರ್ಥಿಕ ಇಲಾಖೆಗೆ ಪ್ರಸ್ತಾವಗಳನ್ನು ಸಲ್ಲಿಸಿಲ್ಲ. ಅಲ್ಲದೇ ಸಲ್ಲಿಕೆಯಾಗಿರುವ ಹಲವು ಪ್ರಸ್ತಾವಗಳಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿಲ್ಲ.

ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ ಆಧಾರಿತ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಮುಂದಿನ 5 ವರ್ಷಗಳಲ್ಲಿ 50 ಕೋಟಿ ರು ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಕೋರಿರುವ ಸ್ಪಷ್ಟೀಕರಣವನ್ನು ಇನ್ನೂ ಸಲ್ಲಿಸಿಲ್ಲ.
ಅದೇ ರೀತಿ ಕರ್ನಾಟಕದಲ್ಲಿ ಸಂವೇದಕಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಕೌಶಲ್ಯ, ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕೈಗಾರಿಕೆಗಳ ಮತ್ತು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಸೆನ್ಸ್‌ರ್ ಟೆಕ್ ಇನ್ನೋವೇಷನ್ ಹಬ್‌ನ್ನು ಒಟ್ಟಾರೆ 99 ಕೋಟಿ ರು ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಈ ಸಂಬಂಧದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಕೋರಿರುವ ಅಂಶಗಳಿಗೆ ಸ್ಪಷ್ಟೀಕರಣವನ್ನು ಒದಗಿಸಿಲ್ಲ.
ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್ ಅಂಡ್ ಪ್ಲೇ ಸೌಲಭ್ಯಗಳನ್ನು ಕಿಯೋನಿಕ್ಸ್ ಮೂಲಕ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದೇ ರೀತಿ ಕಲ್ಬುರ್ಗಿಯಲ್ಲಿ ಅಗ್ರಿ ಟೆಕ್ ವೇಗವರ್ಧಕವನ್ನು ಸ್ಥಾಪಿಸಲು ಉದ್ದೇಶಿಸಿತ್ತು. ಆದರೆ ಈ ಸಂಬಂಧಿತ ಪ್ರಸ್ತಾವಗಳಿಗೂ ಆರ್ಥಿಕ ಇಲಾಖೆ ಕೋರಿದ್ದ ಸ್ಪಷ್ಟೀಕರಣವನ್ನು ನೀಡಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಹಾಗೆಯೇ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬೆಳಗಾವಿ ನಗರದಲ್ಲಿ 55 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ, ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರು ವೆಚ್ಚದಲ್ಲಿ ಸಮುದ್ರ ಕೊರತೆ ತಗ್ಗಿಸುವುದು, ರೋಣ ತಾಲೂಕಿನ ಕೋಟುಮಚಗಿ ಗ್ರಾಮದಿಂದ ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಮೂಲಕ 60 ಕೋಟಿ ವೆಚ್ಚದಲ್ಲಿ ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ಕಾರ್ಯಕ್ರಮಗಳಿಗೂ ಆರ್ಥಿಕ ಇಲಾಖೆಯು ಕೋರಿದ್ದ ಸ್ಪಷ್ಟೀಕರಣವನ್ನು ಇಲಾಖೆಯು ನೀಡಿಲ್ಲ.
ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕೈಗಾರಿಕೆ, ನಿವೇಶನ, ಜಮೀನುಗಳನ್ನು ಮಂಜೂರು ಮಾಡವಾಗ ಪ್ರತಿ ಕೈಗಾರಿಕೆ ಪ್ರದೇಶಧ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 1, ಪ್ರವರ್ಗ 2 ಎ ಮತ್ತು 2 ಬಿ ಸಮುದಾಯಗಳಿಗೆ ಶೇ. 20ರಷ್ಟು ಭೂಮಿ ಮೀಸಲಿರಿಸಲಾಗುವುದು ಎಂದು ಘೋಷಿಸಲಾಗಿತ್ತು. ಅಲ್ಲದೇ ನಿವೇಶನದ ಪ್ರಾರಂಭಿಕ ಠೇವಣಿ ಭರಿಸಿದ ನಂತರ ಬಾಕಿ ಹಣ ಪಾವತಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯು ಸ್ಪಷ್ಟೀಕರಣ ಕೋರಿ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ಕಡತ ಹಿಂದಿರಿಗಿಸಿದೆ.
ಅದೇ ರೀತಿ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಕೆಕೆಆರ್‍ಡಿಬಿ ಸಹಯೋಗದಿಂದ ಗ್ರಾಮೀಣ ಉಗ್ರಾಣಗಳನ್ನು 60 ಕೋಟಿ ರು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದರು. ಈ ಯೋಜನೆಗೂ ಸ್ಪಷ್ಟೀಕರಣ ಕೋರಿರುವ ಆರ್ಥಿಕ ಇಲಾಖೆಯು ಕಡತವನ್ನು ವಾಪಸ್ ಕಳಿಸಿರುವುದು ಗೊತ್ತಾಗಿದೆ.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬೆಂಗಳೂರು ನಗರದಲ್ಲಿರುವ 3,000 ಕೊಳಚೆ ನೀರು ಸಂಸ್ಕರಣೆ ಘಟಕಗಳ ಕಾರ್ಯಾಚರಣೆ ಮೇಲುಸ್ತುವಾರಿಯನ್ನು ತಂತ್ರಾಂಶದ ಮೂಲಕ ನಿರ್ವಹಿಸಿ ಸಾರ್ವಜನಿಕರಿಗೆ ದೈನಂದಿನ ಮಾಹಿತಿ ಲಭ್ಯಪಡಿಸಲಾಗುವುದು ಎಂದು ಹೇಳಿತ್ತು. ಈ ಘೋಷಣೆಯೂ ತೆವಳುತ್ತಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಿ ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದ ನೂತನ ಜವಳಿ ನೀತಿ 2025-30ನ್ನು ರೂಪಿಸುವ ಸಂಬಂಧ ಆರ್ಥಿಕ ಇಲಾಖೆಯು ಸ್ಪಷ್ಟೀಕರಣ ಕೋರಿ ಕಡತ ವಾಪಸ್ ಕಳಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಯೂ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಮತ್ತು ಚಿತ್ರದುರ್ಗದಲ್ಲಿ ಸುಸಜ್ಜಿತ ಟ್ರಾಮಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಸಂಬಂಧವೂ ಆರ್ಥಿಕ ಇಲಾಖೆಯು ಸ್ಪಷ್ಟೀಕರಣ ಕೋರಿ ಕಡತ ವಾಪಸ್ ಮಾಡಿದೆ.

ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ 39 ಸೇತುವೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ 1,000 ಕೋಟಿ ರು ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಹೇಳಿತ್ತು. ಆರ್ಥಿಕ ಇಲಾಖೆಯು ಈ ಕುರಿತು ಸ್ಪಷ್ಟನೆ ಬಯಸಿ, ಕಡತವನ್ನು ಹಿಂದಿರುಗಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಮತ್ತು ಇಲಾಖೆಯಲ್ಲಿ ಇನ್ನೂ ಖಾಲಿಯಿರುವ ಶಿಕ್ಷಕರ ಹುದ್ದೆಯನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಘೋಷಿಸಿತ್ತು. ಆದರೆ ಈ ಸಂಬಂಧ ಪ್ರಸ್ತಾವವೇ ಸಲ್ಲಿಕೆಯಾಗಿಲ್ಲ.
ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್ ಅಭಿವೃದ್ಧಿಪಡಿಸುವುದು, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ಸ್ಥಾಪಿಸಲಾಗುವುದು ಎಂದು ಹೇಳಿತ್ತು. ಆದರೆ ಈ ಸಂಬಂಧವೂ ಪ್ರಸ್ತಾವವು ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿಲ್ಲ ಎಂದು ಗೊತ್ತಾಗಿದೆ.









