ಬೆಂಗಳೂರು; ಹೆಬ್ಭಾಳ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೂ ಸ್ಥಳೀಯ ವಾಹನ ದಟ್ಟಣೆಯನ್ನು ನಿರ್ವಹಿಸಲು 2,215.00 ಕೋಟಿ ರು ಅಂದಾಜು ಮೊತ್ತದ ಮೂರು ಪಥದ ಅವಳಿ ಸುರಂಗ ಮಾರ್ಗ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ಯೋಜನೆಯು, ಬಿಡಿಎ ಮೇಲೆ ಹಠಾತ್ ಆರ್ಥಿಕ ಹೊರೆ ಸೃಷ್ಟಿಸಲಿದೆ. ಕಾಯಿಲೆಗೆ ಚಿಕಿತ್ಸೆ ನೀಡುವ ಬದಲು ರೋಗಲಕ್ಷಣಗಳಿಗೆ ಪ್ರತಿಕ್ರಿಯಿಸುವ ಒಂದು ಶ್ರೇಷ್ಠ ಪ್ರಕರಣವಾಗಿದೆ ಎಂದು ಅರ್ಥಿಕ ಇಲಾಖೆಯು ಅಭಿಪ್ರಾಯಿಸಿದೆ.
ಅಲ್ಲದೇ ಈ ಯೋಜನೆ ಪ್ರಸ್ತಾವನೆಗೆ ಸಮಗ್ರ ಕಾರ್ಯಸಾಧ್ಯತಾ ವರದಿ ಅಥವಾ ಪ್ರತಿಷ್ಠಿತ, ಸ್ವತಂತ್ರ ತಜ್ಞರಿಂದ ಯಾವುದೇ ವಿವರವಾದ ಯೋಜನಾ ವರದಿಯ ಪುರಾವೆಗಳೂ ಇಲ್ಲ. ಈ ಯೋಜನೆಯು ಅತ್ಯಂತ ದುಬಾರಿಯದ್ದಾಗಿದೆ. ಹೀಗಾಗಿ ಈ ಯೋಜನೆಯನ್ನು ಮುಂದೂಡಬೇಕು ಎಂದು ಆರ್ಥಿಕ ಇಲಾಖೆಯು ಸಲಹೆ ನೀಡಿತ್ತು.
ಅಲ್ಲದೇ ಈ ಯೋಜನೆ ಪ್ರಕಾರ ಪ್ರಸ್ತಾಪಿತ ರಸ್ತೆಯನ್ನು ಭೂ ಮಟ್ಟದಲ್ಲಿ ಅಥವಾ ಎತ್ತರಿಸಿದ ರಸ್ತೆಯಾಗಿ ನಿರ್ಮಿಸಲು ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು ಅನುಮತಿ ನೀಡಲು ನಿರಾಕರಿಸಿತ್ತು.
2,215 ಕೋಟಿ ರು ಮೊತ್ತದ ಅಂದಾಜು ಪಟ್ಟಿಗೆ (ವಿಸ್ತೃತ ಯೋಜನಾ ವರದಿ) ಆಡಳಿತಾತ್ಮಕ ಅನುಮೋದನೆ ಕುರಿತಾದ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದೆ. ಹಾಗೆಯೇ ಈ ಪ್ರಸ್ತಾವನೆಯನ್ನು ಒಪ್ಪಬೇಕೇ ಬೇಡವೇ ಎಂಬ ಕುರಿತು ಆಂತರಿಕವಾಗಿ ಚರ್ಚಿಸಿರುವ ಆರ್ಥಿಕ ಇಲಾಖೆಯು ಈ ಯೋಜನೆಯು ಅತ್ಯಂತ ದುಬಾರಿಯದ್ದಾಗಿದೆ ಎಂದು ಸುಳಿವು ನೀಡಿತ್ತು. ಆದರೂ ಸಹ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದೆ.
ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಂಬಂಧದ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಡಬೇಕೆ ಬೇಡವೇ ಎಂಬ ಬಗ್ಗೆ ಪರಿಶೀಲನೆ ಮತ್ತು ಅಂತಿಮ ಆದೇಶಕ್ಕಾಗಿ ಕಡತವನ್ನು ಸಿಎಂಗೆ ಸಲ್ಲಿಸಬಹುದು ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಎಂ ಟಿ ರೇಜು ಅವರು 2025ರ ನವೆಂಬರ್ 12ರಂದೇ ಅಭಿಪ್ರಾಯ ನೀಡಿತ್ತು ಎಂಬುದು ಗೊತ್ತಾಗಿದೆ.
ಈ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯು ಮಾಡಿರುವ ಸಮಗ್ರ ಅವಲೋಕನಗಳಿಗೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಸಮಗ್ರ ದಾಖಲೆ (ಕಡತ ಸಂಖ್ಯೆ; FD/501/EXP9/2025-COMPUTER NUMBER 1857671) ಲಭ್ಯವಾಗಿದೆ.
ಸದ್ಯ ಈ ಕಡತವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ಅವರ ಬಳಿ ಇರುವುದು ತಿಳಿದು ಬಂದಿದೆ.

ಪಟ್ಟಣ ಯೋಜನೆ ಮತ್ತು ವಿನ್ಯಾಸ ಅಭಿವೃದ್ಧಿಪಡಿಸುವ ಪ್ರಾಥಮಿಕ ಕರ್ತವ್ಯ ಹೊಂದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅವಳಿ ಸುರಂಗ ಮಾರ್ಗ ಮತ್ತು ಎಲಿವೇಟೆಡ್ ಕಾರಿಡಾರ್ ಯೋಜನೆಯು ಆಂತರಿಕ ನಿಧಿಗೆ ಬದಲಾವಣೆ ಕಾರಣವಾಗಲಿದೆ. ಅಲ್ಲದೇ ಇದು ಬಿಡಿಎ ಮೇಲೆ ಹಠಾತ್ ಮತ್ತು ಬೃಹತ್ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ ಎಂದು ಎಚ್ಚರಿಸಿತ್ತು ಎಂದು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಯೋಜನೆಯು ಏಕೀಕರಣ ಮತ್ತು ಇದರ ಬಳಕೆಯ ಮಧ್ಯೆ ಹೇಗೆಲ್ಲಾ ಸಂಘರ್ಷಗಳು ಉಂಟಾಗಲಿವೆ, ಆರ್ಥಿಕ ಸುಸ್ಥಿರತೆಗೆ ಹೇಗೆಲ್ಲಾ ಅಪಾಯ ತಂದೊಡ್ಡಲಿದೆ ಎಂದು ಪ್ರಾಥಮಿಕ ಹಂತದಲ್ಲೇ ಹೇಳಿದೆ. ಮತ್ತು ಹಣದ ವರ್ಗಾವಣೆಯಲ್ಲಿನ ಬಿಕ್ಕಟ್ಟುಗಳು, ಈ ಯೋಜನೆಯು ಚಲನಶೀಲವಾಗಿರಲಿದೆಯೇ ಮತ್ತು ಕಾರ್ಯಸಾಧ್ಯತಾ ವರದಿ, ನಿಜಕ್ಕೂ ಈ ಯೋಜನೆಯು ಬೇಡಿಕೆಯಿಂದ ಕೂಡಿದೆಯೇ ಎಂಬ ಕುರಿತು ಆರ್ಥಿಕ ಇಲಾಖೆಯು ವಿವಿಧ ಆಯಾಮಗಳಿಂದ ಚರ್ಚಿಸಿರುವುದು ಗೊತ್ತಾಗಿದೆ.

ಅಲ್ಲದೇ ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದ ಹಲವು ಸ್ಪಷ್ಟೀಕರಣಗಳನ್ನು ಆರ್ಥಿಕ ಇಲಾಖೆಯು ಕೋರಿತ್ತು. ಇದಕ್ಕೆ ಮಾಹಿತಿ ನೀಡಿರುವ ನಗರಾಭಿವೃದ್ಧಿ ಇಲಾಖೆಯು, ಈ ಯೋಜನೆಯನ್ನು ಸಮರ್ಥಿಸಿಕೊಂಡಿದೆ.
10,000 ಕೋಟಿ ಆದಾಯ ಕ್ರೋಢೀಕರಣ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೂರು ಪಥದ ಅವಳಿ ಸುರಂಗ ಮಾರ್ಗ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಬೇಕಾಗುವ ಹಣಕಾಸಿನ ಮೂಲಗಳ ಕುರಿತು ಆರ್ಥಿಕ ಇಲಾಖೆಗೆ ವಿವರಗಳನ್ನು ನೀಡಿತ್ತು. ಬಿಡಿಎ ವ್ಯಾಪ್ತಿಯಲ್ಲಿರುವ ಜಮೀನು, ವಾಸ ಯೋಗ್ಯ ನಿವೇಶನಗಳು ಮತ್ತು ಮೂಲೆ ನಿವೇಶನಗಳನ್ನು ಇ-ಹರಾಜು ಹಾಕಬಹುದು. ಇದು ಸಾಧ್ಯವಾದಲ್ಲಿ 2026ರ ಮಾರ್ಚ್ ಅಂತ್ಯಕ್ಕೆ 4,500 ಕೋಟಿ ರು ಆದಾಯ ಕ್ರೋಢೀಕರಿಸಬಹುದು ಎಂದು ಲೆಕ್ಕಾಚಾರ ಮಾಡಿದೆ.

ಡಾ ಶಿವರಾಮ ಕಾರಂತ ಬಡಾವಣೆಯಲ್ಲಿನ ನಿವೇಶನಗಳಿಗಾಗಿ ಅರ್ಜಿ ಆಹ್ವಾನಿಸಿದಲ್ಲಿ ಆಂತರಿಕ ಠೇವಣಿ ಮೂಲಕ 1,500 ಕೋಟಿ ರು., ಫ್ಲಾಟ್, ವಿಲ್ಲಾ ಮತ್ತು ನಾಗರಿಕ ಸೌಲಭ್ಯಗಳ ನಿವೇಶನಗಳ ಮಾರಾಟದಿಂದ 1,000 ಕೋಟಿ ರು, 38 (ಡಿ) ಅನುಷ್ಟಾನದಿಂದ 3,000 ಕೋಟಿ ಸೇರಿದಂತೆ ಒಟ್ಟಾರೆ 10,000 ಕೋಟಿ ರು ಆದಾಯ ಕ್ರೋಢೀಕರಣ ಮಾಡಬಹುದು ಎಂದು ಅಂದಾಜಿಸಿರುವುದು ತಿಳಿದು ಬಂದಿದೆ.

ಮೂರು ಪಥದ ಅವಳಿ ಸುರಂಗ ಮಾರ್ಗಗಳಿಗೆ 1,490 ಕೋಟಿ ಬೇಕಿದೆ. ಸಣ್ಣ ಸುರಂಗ ನಂತರ ಬ್ಯಾಪಿಸ್ಟ್ ಆಸ್ಪತ್ರೆಯಿಂದ ಮೇಕ್ರಿ ವೃತ್ತದವರಗೆ ವಾಹನ ದಟ್ಟಣೆ ನಿವಾರಿಸಲು ಹೆಚ್ಚುವರಿ ಎಲಿವೇಟೆಡ್ ರಸ್ತೆಗೆ ಅಂದಾಜು 725 ಕೋಟಿ ರು ಬೇಕಾಗಿದೆ. ಈ ಎರಡೂ ಕಾಮಗಾರಿಗಳಿಗೆ ಒಟ್ಟಾರೆ 2,215 ಕೋಟಿ ರು ವೆಚ್ಚವಾಗಲಿದೆ.

ಈ ಕಾಮಗಾರಿಯನ್ನು 24 ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸಿರುವ ಬಿಡಿಎಯು 2027-28ರವರೆಗೆ ಆರ್ಥಿಕ ಸಂಪನ್ಮೂಲಗಳ ವಿವರಗಳನ್ನು ವಿವರಿಸಿತ್ತು.

ಇದರ ಪ್ರಕಾರ 2025-26ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ 275 ಕೋಟಿ ರು ಅನುದಾನ ಬೇಕಿದೆ.

2026-27ರ ಮೊದಲ ತ್ರೈಮಾಸಿಕದಲ್ಲಿ 350 ಕೋಟಿ, 2ನೇ ತ್ರೈಮಾಸಿಕದಲ್ಲಿ 350 ಕೋಟಿ, 3ನೇ ತ್ರೈಮಾಸಿಕದಲ್ಲಿ 260 ಕೋಟಿ, 4ನೇ ತ್ರೈಮಾಸಿಕದಲ್ಲಿ 260 ಕೋಟಿ ರು ಬೇಕಿದೆ.

2027-28ರಲ್ಲಿ ಮೊದಲ ತ್ರೈಮಾಸಿಕದಲ್ಲಿ 260 ಕೋಟಿ, 2ನೇ ತ್ರೈಮಾಸಿಕದಲ್ಲಿ 240 ಕೋಟಿ, ಮೂರನೇ ತ್ರೈಮಾಸಿಕದಲ್ಲಿ 220 ಕೋಟಿ ರು ಸೇರಿದಂತೆ ಒಟ್ಟಾರೆ 2,215 ಕೋಟಿ ರು ಬೇಕಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಭೂ ಸ್ವಾಧೀನಕ್ಕೆ 25 ಕೋಟಿ
ಪ್ರಸ್ತಾಪಿತ ರಸ್ತೆಯು ಸರ್ಕಾರಿ ಜಮೀನಿನಲ್ಲೇ ಹಾದು ಹೋಗಲಿದೆ. ಹೀಗಾಗಿ ಭೂ ಸ್ವಾಧೀನ ಮೊತ್ತವನ್ನು 25 ಕೋಟಿ ರು ಗೆ ಸೀಮಿತಗೊಳಿಸಿದೆ. ಅಲ್ಲದೇ 333 ಕೋಟಿ ರುನಲ್ಲಿ ಶಾಸನಬದ್ಧ ಶುಲ್ಕಗಳು, ಜಿಎಸ್‌ಟಿ ತೆರಿಗೆ ಸೇರಿ 190 ಕೋಟಿ ಇದೆ ಭೂ ಸ್ವಾಧೀನಕ್ಕಾಗಿ ಉಪಯುಕ್ತತೆಗಳ ವರ್ಗಾವಣೆಗಾಗಿ ಒಟ್ಟು 60 ಕೋಟಿ ರು.ಗಳನ್ನು ಕಾಯ್ದಿರಿಸಿದೆ. ಅಲ್ಲದೇ ಪ್ರಸ್ತಾಪಿತ ಪ್ರದೇಶವು ತೆರೆದ ಪ್ರದೇಶವಾಗಿದೆ. ಹೀಗಾಗಿ ಕಾಮಗಾರಿಗಳೂ ಸಹ ಸಣ್ಣ ಪ್ರಮಾಣದಲ್ಲಿರಲಿವೆ. ಇದಕ್ಕಾಘಿ 35 ಕೋಟಿ ರು ಮೊತ್ತ ಎಂದು ಅಂದಾಜಿಸಿದೆ.

ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಯನ್ನು ಸರಿದೂಗಿಸಲು 15.82 ಕೋಟಿ ರು.ಗಳನ್ನು ಅಳವಡಿಸಿಕೊಳ್ಳಲಾಗಿದೆ. ಒಟ್ಟಾರೆ ಯೋಜನಾ ವೆಚ್ಚವು ನಿರ್ಮಾಣ ವೆಚ್ಚ, ತೆರಿಗೆ, ಶಾಸನಬದ್ಧ ಶುಲ್ಕ, ಇಡುಗಂಟುಗಳನ್ನು ಹೊಂದಿದೆ. ಅಲ್ಲದೇ ಚಾಲ್ತಿ ಪದ್ಧತಿಯಂತೆ ಸಮಂಜಸವಾಗಿದೆ. ಈ ಯೋಜನೆಗೆ ಬೇಕಾಗುವ ಹೆಚ್ಚುವರಿ ಮೊತ್ತವನ್ನು ಆಂತರಿಕ ಸಂಪನ್ಮೂಲದಿಂದ ಭರಿಸಿಕೊಳ್ಳಲಾಗುವುದು. ಈ ಯೋಜನೆಯನ್ನು ಕೈಗೊಳ್ಳಲು ಬಿಡಿಎಯು ಆರ್ಥಿಕವಾಗಿ ಸಬಲವಾಗಿದೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

ಬಿಡಿಎಯು ಮಂಡಿಸಿದ್ದ ಈ ಎಲ್ಲಾ ಲೆಕ್ಕಚಾರಗಳನ್ನೂ ಸಮಗ್ರವಾಗಿ ಅವಲೋಕಿಸಿದ ನಂತರವೇ ಆರ್ಥಿಕ ಇಲಾಖೆಯು ಈ ಯೋಜನೆಯು ದುಬಾರಿಯದ್ದಾಗಿದೆ, ಬಿಡಿಎ ಮೇಲೆ ಹಠಾತ್ ಆರ್ಥಿಕ ಹೊರೆ ಸೃಷ್ಟಿಸಲಿದೆ, ಬಿಡಿಎ ಬಡಾವಣೆಗಳಲ್ಲಿನ ಮೂಲ ಸೌಕರ್ಯಗಳಿಗೆ ಹಣಕಾಸಿನ ಕೊರತೆ ಉಂಟಾಗಲಿದೆ, ಕಾಯಿಲೆಗೆ ಚಿಕಿತ್ಸೆ ನೀಡುವ ಬದಲು ರೋಗಲಕ್ಷಣಗಳಿಗೆ ಪ್ರತಿಕ್ರಿಯಿಸುವ ಒಂದು ಶ್ರೇಷ್ಠ ಪ್ರಕರಣವಾಗಿದೆ ಎಂಬ ನಿಲುವು ತಳೆದಿದೆ.

ಅಲ್ಲದೇ ಇದೊಂದು ಹೆಚ್ಚಿನ ಸ್ಥಳಾವಕಾಶ ಅಗತ್ಯವಿರುವ ಯೋಜನೆಯಾಗಿದೆ. ಇದು ಪ್ರೇರಿತ ಬೇಡಿಕೆಯ ಮೂಲಕ ರಸ್ತೆ ದಟ್ಟಣೆಯನ್ನು ವೇಗಗೊಳಿಸುತ್ತದೆ. ಮತ್ತು ಸುಸ್ಥಿರತೆ ಮತ್ತು ಸಮಾನ ಚಲನಶೀಲತೆಯ ತತ್ವಗಳನ್ನು ಸಕ್ರಿಯವಾಗಿ ದುರ್ಬಲಗೊಳಿಸುತ್ತದೆ. ಆದ್ದರಿಂದ, ಪ್ರಸ್ತಾವನೆಯನ್ನು ಮುಂದೂಡಬಹುದು ಎಂದು ಸಲಹೆ ನೀಡಿದೆ.
ಆರ್ಥಿಕ ಹೊರೆಯಷ್ಟೇ ಅಲ್ಲ, ಯೋಜನೆ ನಿಧಿಯೂ ದುರ್ಬಲ
2,215 ಕೋಟಿ ರೂಪಾಯಿ ಮೊತ್ತದ ಈ ಯೋಜನೆಗೆ, ಬಿಡಿಎಯು ತನ್ನ ಅಂತರಿಕ ನಿಧಿಯನ್ನೇ ಬದಲಾವಣೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಇದು ಬಿಡಿಎ ಮೇಲೆ ಹಠಾತ್, ಬೃಹತ್ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ನಿವೇಶನಗಳ ಹರಾಜು, ಖಾಲಿ ನಿವೇಶನಗಳ ಹಂಚಿಕೆಗಾಗಿ ಸಂಗ್ರಹಿಸುವ ಠೇವಣಿ, ಫ್ಲಾಟ್, ವಿಲ್ಲಾಗಳಂತಹ ದೊಡ್ಡ ಪ್ರಮಾಣದ ಆಸ್ತಿಗಳ ಮಾರಾಟದಿಂದ ಬರಬಹುದಾದ ಆದಾಯದ ಮೇಲೆಯೇ ಅವಲಂಬಿತವಾಗಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಕಾನೂನು ಪ್ರಕ್ರಿಯೆಗಳಲ್ಲಿನ ವಿಳಂಬದ ಪರಿಣಾಮವು, ಆದಾಯ ಕ್ರೋಢೀಕರಣದ ಮೇಲೆ ಬೀರಲಿವೆ. ಹೀಗಾಗಿ ಈ ಯೋಜನೆಯ ನಿಧಿಯು ದುರ್ಬಲವಾಗಿರಲಿದೆ ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಅಂದಾಜು ಆನ್-ಟೈಮ್ ಆದಾಯದ ಶೇಕಡಾ 20 ಕ್ಕಿಂತ ಹೆಚ್ಚು (ರೂ. 10,000 ಕೋಟಿಯಲ್ಲಿ 2,215 ಕೋಟಿ) ಬೇರೆಡೆಗೆ ತಿರುಗಿಸಲಿದೆ. ಹೀಗಾಗಿ ಬಿಡಿಎಯು ತನ್ನ ಪ್ರಮುಖ ಅಭಿವೃದ್ಧಿ ಮತ್ತು ಮೂಲಸೌಕರ್ಯ ಆದೇಶಗಳಿಗೆ (ಹೊಸ ವಿನ್ಯಾಸಗಳು, ನೀರು/ಒಳಚರಂಡಿ, ಉದ್ಯಾನವನಗಳು, ಇತ್ಯಾದಿ) ಚಲನಶೀಲ ಯೋಜನೆಗೆ ಹಣಕಾಸು ಒದಗಿಸುವ ಸಾಮರ್ಥ್ಯಕ್ಕೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲಿದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿದೆ.
ಚಲನಶೀಲತೆ ಯೋಜನೆ, ಕಾರ್ಯಸಾಧ್ಯತಾ ವರದಿಗೆ ಪುರಾವೆಗಳೇ ಇಲ್ಲ
ಉತ್ತರ-ದಕ್ಷಿಣ ಸುರಂಗ ಮಾರ್ಗವನ್ನು ಅನುಷ್ಠಾನಗೊಳಿಸುವ ಸಂಸ್ಥೆಯೂ ಆಗಿರುವ ಬಿ-ಸ್ಮೈಲ್, ಡಿಪಿಆರ್ ಅನ್ನು ಸಿದ್ಧಪಡಿಸಿದೆ. ಆದರೂ ಈ ಪ್ರಸ್ತಾವನೆಯಲ್ಲಿ ಸಮಗ್ರ ಕಾರ್ಯಸಾಧ್ಯತಾ ವರದಿ ಅಥವಾ ಪ್ರತಿಷ್ಠಿತ, ಸ್ವತಂತ್ರ ತಜ್ಞರಿಂದ ಬಂದ ವಿವರವಾದ ಯೋಜನಾ ವರದಿಯ ಪುರಾವೆಗಳಿಲ್ಲ. ಇದು ವಿಶಾಲವಾದ ಮಹಾನಗರ ಪ್ರದೇಶದ ಚಲನಶೀಲತಾ ಯೋಜನೆಯೊಳಗೆ ಆಯ್ಕೆಮಾಡಿದ ಪರಿಹಾರವನ್ನು ಸಮರ್ಥಿಸುತ್ತದೆ ಎಂದು ಹೇಳಿದೆ.
ಉತ್ತಮ ಅಭ್ಯಾಸವಲ್ಲ
ಈ ಪ್ರಸ್ತಾವನೆಯು ಸಂಪೂರ್ಣವಾಗಿ ಖಾಸಗಿ ವಾಹನ ಸಂಚಾರದ ಮೇಲೆ ಕೇಂದ್ರೀಕರಿಸಿದೆ. ಮತ್ತು ಹಾಲಿ ನಡೆಯುತ್ತಿರುವ ಮೆಟ್ರೋ ಹಂತ 2 ಬಿ (ವಿಮಾನ ನಿಲ್ದಾಣ ಮಾರ್ಗ), ಉಪನಗರ ರೈಲು ಅಥವಾ ಹೆಚ್ಚಿನ ಸಾಮರ್ಥ್ಯದ ಸಾರ್ವಜನಿಕ ಸಾರಿಗೆಯೊಂದಿಗೆ ಏಕೀಕರಣವನ್ನು ಪ್ರದರ್ಶಿಸುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆ ಬೆಂಬಲಿಸುವ ಮತ್ತು ಖಾಸಗಿ ವಾಹನಗಳ ಮೇಲಿನ ಒಟ್ಟಾರೆ ಅವಲಂಬನೆ ಕಡಿಮೆ ಮಾಡಲು ಉತ್ತಮ ಅಭ್ಯಾಸಗಳಿವೆ. ಆದರೆ ಬಿಡಿಎನ ಈ ಯೋಜನೆಯು ಅಂತರಾಷ್ಟ್ರೀಯ ಮಟ್ಟದ ಅತ್ಯುತ್ತಮ ಅಭ್ಯಾಸಗಳಿಗೆ ಪೂರಕವಾಗಿಲ್ಲ ಎಂದು ವಿವರಿಸಿದೆ.
ಈ ಯೋಜನೆಯು ಹೆಬ್ಬಾಳದಿಂದ ಮೇಖ್ರಿ ವೃತ್ತದ ನಡುವಿನ ದಟ್ಟಣೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ದಟ್ಟಣೆಯನ್ನು ನಿರ್ವಹಿಸಲು ನೀಡಿರುವ ಪ್ರಸ್ತಾವಿತ ಪರಿಹಾರ (ಪಶುವೈದ್ಯಕೀಯ ಕಾಲೇಜಿನ ಬಳಿ ಕೊನೆಗೊಳ್ಳುವ ಸುರಂಗ, ನಂತರ ಮೇಖ್ರಿ ವೃತ್ತಕ್ಕೆ ಹೊಸ ಎಲಿವೇಟೆಡ್ ರಸ್ತೆ) ವಾಹನ ದಟ್ಟಣೆ ಮತ್ತು ಅಡಚಣೆಯನ್ನು ಜಂಕ್ಷನ್‌ಗೆ ಸರಿಸಲಿದೆ. ಹೀಗಾಗಿ ಎತ್ತರದ ರಸ್ತೆ ಮತ್ತು ಇಳಿಜಾರುಗಳು ಮೇಖ್ರಿ ವೃತ್ತದಲ್ಲಿ ಇದು ಕೊನೆಗೊಳ್ಳುತ್ತವೆ ಎಂದು ಹೇಳಿದೆ.
ಇದೊಂದು ಪ್ರೇರಿತ ಬೇಡಿಕೆ
ಸುರಂಗ ಮತ್ತು ಎತ್ತರಿಸಿದ ರಸ್ತೆ ಯೋಜನೆಗಳು, ಸಾರ್ವಜನಿಕ ಸಾರಿಗೆ ಹೂಡಿಕೆ ಇಲ್ಲದೆ, ಬೇಡಿಕೆಯನ್ನು ಹೆಚ್ಚಿಸುತ್ತವೆ. ಅವು ತಾತ್ಕಾಲಿಕವಾಗಿ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಆದರೆ ಸುಧಾರಿತ ವೇಗವು, ಹೆಚ್ಚಿನ ಚಾಲಕರು ಮಾರ್ಗವನ್ನು ಬಳಸಲು ಪ್ರೋತ್ಸಾಹಿಸುತ್ತದೆ, ಇದರಿಂದಾಗಿ ಅಡಚಣೆಯು ಮತ್ತೆ ರೂಪುಗೊಳ್ಳುತ್ತದೆ. ಮತ್ತು ಕೆಲವು ವರ್ಷಗಳಲ್ಲಿ ದಟ್ಟಣೆ ಮತ್ತೆ ಮರುಕಳಿಸುತ್ತದೆ ಎಂದು ವಿವರಿಸಿದೆ.

ಟ್ರಾಫಿಕ್ ಸಿಗ್ನಲ್, ಹೆಬ್ಬಾಳದಲ್ಲಿ ಸುಧಾರಿತ ಫ್ಲೈಓವರ್ ಜಿಯೋ ಜ್ಯಾಮಿಟ್ರಿ ವ್ಯವಸ್ಥೆಗಳು ಅಥವಾ ಮೇಲ್ಮೈಯಲ್ಲಿ ಮೀಸಲಾದ ಹೈ-ಫ್ರೀಕ್ವೆನ್ಸಿ ಬಸ್‌ಗಳ ಕ್ಷಿಪ್ರ ಸಾರಿಗೆ ಲೇನ್‌ಗಳಂತಹ ಉನ್ನತ, ಕಡಿಮೆ-ವೆಚ್ಚದ ಮತ್ತು ಹೆಚ್ಚು ಸುಸ್ಥಿರ ಪರ್ಯಾಯಗಳ ಬಗ್ಗೆ ಯಾವುದೇ ದಾಖಲಿತ ವಿಶ್ಲೇಷಣೆ ಇಲ್ಲವಾಗಿದೆ. ಸುರಂಗ ಮಾರ್ಗಕ್ಕೆ ಈಗಾಗಲೇ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯವು ಒಪ್ಪಿಗೆ ನೀಡಿಲ್ಲ. ಇದು ಯೋಜನೆಯನ್ನು ನಿರ್ಬಂಧಿಸಿದಂತಾಗಿದೆ. ಹೀಗಾಗಿ ಇದು ಸಮರ್ಥನೀಯವಾಗಿಲ್ಲ ಎಂದು ಹೇಳಿದೆ.
ಬಿಡಿಎ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆಯು, ಸುಸ್ಥಿರವಲ್ಲದ ನಗರ ಅಭಿವೃದ್ಧಿಯ ಆಧಾರವಾಗಿರುವ ಮತ್ತು ಕಾಯಿಲೆಗೆ ಚಿಕಿತ್ಸೆ ನೀಡುವ ಬದಲು ರೋಗಲಕ್ಷಣಗಳಿಗೆ ಪ್ರತಿಕ್ರಿಯಿಸುವ ಒಂದು ಶ್ರೇಷ್ಠ ಪ್ರಕರಣವಾಗಿದೆ ಎಂದು ಬಣ್ಣಿಸಿದೆ. ಇದು ದುಬಾರಿ, ಸ್ಥಳಾವಕಾಶ ಅಗತ್ಯವಿರುವ ಯೋಜನೆಯಾಗಿದೆ. ಇದು ಪ್ರೇರಿತ ಬೇಡಿಕೆಯ ಮೂಲಕ ರಸ್ತೆ ದಟ್ಟಣೆಯನ್ನು ವೇಗಗೊಳಿಸುತ್ತದೆ. ಮತ್ತು ಸುಸ್ಥಿರತೆ ಮತ್ತು ಸಮಾನ ಚಲನಶೀಲತೆಯ ತತ್ವಗಳನ್ನು ಸಕ್ರಿಯವಾಗಿ ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.
ಪ್ರಸ್ತಾವನೆ ಮುಂದೂಡಲು ಸಲಹೆ
‘ಆದ್ದರಿಂದ, ಪ್ರಸ್ತಾವನೆಯನ್ನು ಮುಂದೂಡಬಹುದು. ಉತ್ತರ-ದಕ್ಷಿಣ ಸುರಂಗ ಮತ್ತು ಮೆಟ್ರೋ ಮಾರ್ಗ ಕಡಿಮೆಗೊಳಿಸುವ ಆರ್ಥಿಕ ಮತ್ತು ಪರಿಶೀಲನೆಗೆ ಒಳಪಟ್ಟಿರುವ ಸಂದರ್ಭದಲ್ಲಿ ಈ ಯೋಜನೆಯ ಅಗತ್ಯತೆ ಮತ್ತು ಉಪಯುಕ್ತತೆಯನ್ನು ಮೌಲ್ಯೀಕರಿಸುವ ಸಮಗ್ರ ಚಲನಶೀಲತೆ ಯೋಜನೆ (IMP) ಆಧರಿಸಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ಆಡಳಿತ ಇಲಾಖೆಯನ್ನು ಕೇಳಬಹುದು,’ ಎಂದು ಅಭಿಪ್ರಾಯಿಸಿದೆ.

ಹೀಗಾಗಿ ಈ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಡಬೇಕೆ ಬೇಡವೇ ಎಂಬ ಬಗ್ಗೆ ಪರಿಶೀಲನೆ ಮತ್ತು ಅಂತಿಮ ಆದೇಶಕ್ಕಾಗಿ ಕಡತವನ್ನು ಸಿಎಂಗೆ ಸಲ್ಲಿಸಬಹುದು ಎಂದು ಕಡತದಲ್ಲಿ ಹೇಳಿರುವುದು ತಿಳಿದು ಬಂದಿದೆ.









