ಬೆಂಗಳೂರು; ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿರುವ ಜಾಮಿಯಾ ಮಸ್ಜಿದ್ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್‌ಗೆ ಬಿಡುಗಡೆ ಮಾಡಿದ್ದ 3 ಕೋಟಿ ರು ಮೊತ್ತದ ಅನುದಾನವನ್ನುವನ್ನು ಆಡಳಿತ ಮಂಡಳಿಯು ದುರುಪಯೋಗಪಡಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಟ್ರಸ್ಟ್ ದುರುಪಯೋಗಪಡಿಸಿಕೊಂಡಿರುವ ಅನುದಾನವನ್ನು ಮರು ವಸೂಲಿ ಮಾಡಬೇಕು ಎಂದು ಕಳೆದ ವರ್ಷವೇ ನೋಟೀಸ್ ಜಾರಿಗೊಳಿಸಿತ್ತು. ಆದರೂ ಹಣ ವಸೂಲಿಯಾಗಿಲ್ಲ. ವಿಶೇಷವೆಂದರೇ ದುರುಪಯೋಗಪಡಿಸಿಕೊಂಡಿರುವ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರು ಸನ್ಮಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ದುರುಪಯೋಗವಾಗಿರುವ ಹಣ ವಸೂಲು ಮಾಡುವ ಸಂಬಂಧ ಸರ್ಕಾರವು ಟ್ರಸ್ಟ್‌ಗೆ ಜಾರಿಗೊಳಿಸಿದ್ದ ನೋಟೀಸ್ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಕರಣದ ವಿವರ
ಬೆಂಗಳೂರು ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿರುವ ಜಾಮೀಯಾ ಮಸ್ಜಿದ್ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್ ಸಂಸ್ಥೆಗೆ 2016ರಲ್ಲೇ 3 ಕೋಟಿ ರು ಅನುದಾನ ಮಂಜೂರು (ಸರ್ಕಾರಿ ಆದೇಶ ಸಂಖ್ಯೆ MWD 202 MDS 2016) ಮಾಡಿತ್ತು. ಮಂಜೂರು ಮಾಡಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಟ್ರಸ್ಟ್‌ನ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಬೃಹತ್ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳ ಸ್ಥಾಪನೆಗಾಗಿ 3 ಕೋಟಿ ರು ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಅನುದಾನವನ್ನು ಟ್ರಸ್ಟ್ ದುರ್ಬಳಕೆ ಮಾಡಿಕೊಂಡಿತ್ತು ಎಂಬುದು ನೋಟೀಸ್‌ನಿಂದ ತಿಳಿದು ಬಂದಿದೆ.
ಮಂಜೂರಾಗಿದ್ದ ಅನುದಾನವನ್ನು ಷರತ್ತಿನ ಪ್ರಕಾರ ಬಳಸಿಕೊಳ್ಳದೇ ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿತ್ತು. ಈ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು 2024ರ ಅಕ್ಟೋಬರ್ 28ರಂದೇ ಮುಸ್ಲಿಂ ಚಾರಿಟೇಬಲ್ ಟ್ರಸ್ಟ್‌ಗೆ ಎರಡನೇ ನೋಟೀಸ್ ಕಳಿಸಿತ್ತು. ಆದರೆ ಈ ನೋಟೀಸ್‌ಗೆ ಟ್ರಸ್ಟ್, ಯಾವುದೇ ಉತ್ತರವನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ.

ಹೀಗಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2025ರ ಸೆ.12ರಂದು, ಇಲಾಖೆಯ ನಿರ್ದೇಶಕರಿಗೆ ಮತ್ತೊಂದು ಪತ್ರ ಬರೆದಿರುವುದು ಗೊತ್ತಾಗಿದೆ.
ಸರ್ಕಾರದ ಪತ್ರದಲ್ಲೇನಿದೆ?
ಜಾಮೀಯಾ ಮಸ್ಜಿದ್ ಹಾಗೂ ಮುಸ್ಲಿಂ ಚಾರಿಟೇಬಲ್ ಫೌಂಡ್ ಟ್ರಸ್ಟ್‌ಗೆ ಬೃಹತ್ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿ ಮತ್ತು ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು 3 ಕೋಟಿ ರು ಅನುದಾನ ಮಂಜೂರುಮಾಡಿತ್ತು. ಆದರೆ ಈ ಅನುದಾನವನ್ನು ಟ್ರಸ್ಟ್ ದುರುಪಯೋಗಪಡಿಸಿಕೊಂಡಿದೆ. ಈ ಹಣವನ್ನು ಮರು ವಸೂಲಿ ಮಾಡಬೇಕು. ದುರುಪಯೋಗವಾಗಿರುವ ಹಣವನ್ನು ಮರು ವಸೂಲಿ ಮಾಡುವ ಸಂಬಂಧ ನಿರ್ದೇಶನಾಲಯವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಶಿಫಾರಸ್ಸು, ಕಾರಣ ಮತ್ತು ಅಭಿಪ್ರಾಯವನ್ನು ಸಲ್ಲಿಸಬೇಕು ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪತ್ರದಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

ಇದಕ್ಕೆ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರೂ ಸಹ ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಒಂದೇ ಖಾತೆಯಿಂದ ವೆಚ್ಚ ಭರಿಸದೇ ಇರುವುದು ಹಾಗೂ ನಗದು ಮೂಲಕ ವೆಚ್ಚ ಮಾಡಿದ್ದ ಟ್ರಸ್ಟ್, ಸರ್ಕಾರದ ಆದೇಶವನ್ನು ಉಲ್ಲಂಘಿಸಿತ್ತು. ಹೀಗಾಗಿ ಸಂಸ್ಥೆಗೆ ನಿಯಮಾನುಸಾರ ನೋಟೀಸ್ ನೀಡಿ ನೀಡಿದ್ದ ಅನುದಾನವನ್ನು ಮರು ವಸೂಲು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅನುಪಾಲನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರೂ ಸಹ ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಬಳಕೆ ಪ್ರಮಾಣ ಪತ್ರ ಪಡೆಯದೇ ಮಂಜೂರು
ಜಾಮೀಯಾ ಮಸ್ಜಿದ್‌ಗೆ ನೀಡಿದ್ದ 3 ಕೋಟಿ ರು ಅನುದಾನವನ್ನು ಕಂತಿನ ರೂಪದಲ್ಲಿ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಬಳಕೆ ಮಾಡಿರುವ ಸಂಬಂಧ ಮಸ್ಜಿದ್ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಆದರೆ ಬಳಕೆ ಪ್ರಮಾಣ ಪತ್ರವನ್ನೇ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಇದನ್ನು ಪರಿಶೀಲಿಸಬೇಕಿದ್ದ ವಕ್ಫ್ ಮಂಡಳಿಯ ಅಂದಿನ ಅಧಿಕಾರಿ ಅಕ್ರಮ ಪಾಶ (ಈಗ ಐಎಎಸ್ ಅಧಿಕಾರಿ) ಅವರು ಪರಿಶೀಲಿಸಿರಲಿಲ್ಲ ಮತ್ತು ಬಳಕೆ ಪ್ರಮಾಣ ಪತ್ರಗಳನ್ನೂ ಪಡೆದಿರಲಿಲ್ಲ. ಇದು ಸರ್ಕಾರಿ ಹಣಕಾಸು ನಿಯಮಗಳ ಅಡಿಯಲ್ಲಿನ ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ನೋಟೀಸ್‌ಗಳಿಗೆ ಕಿಮ್ಮತ್ತಿಲ್ಲ
ದುರ್ಬಳಕೆ ಆಗಿರುವ 3 ಕೋಟಿ ರು ಮೊತ್ತವನ್ನು ಮರು ವಸೂಲು ಮಾಡಿಕೊಳ್ಳುವ ಸಂಬಂಧ ಸರ್ಕಾರವು ಜಾಮೀಯಾ ಮಸ್ಜಿದ್‌ಗೆ 2 ಬಾರಿ ನೋಟೀಸ್ ಕಳಿಸಿತ್ತು. 2024ರ ಆಗಸ್ಟ್ 19 ಮತ್ತು 2024ರ ಅಕ್ಟೋಬರ್ 28ರಂದು ನೋಟೀಸ್ ಜಾರಿಗೊಳಿಸಿತ್ತು. ಇದಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರೂ ಸಹ ಅನುಮೋದಿಸಿದ್ದರು. ಆದರೆ ವರ್ಷ ಕಳೆದರೂ ಈ ನೋಟೀಸ್‌ಗೆ ಉತ್ತರವೂ ಬಂದಿಲ್ಲ ಮತ್ತು ದುರ್ಬಳಕೆ ಆಗಿರುವ 3 ಕೋಟಿ ರು ಸರ್ಕಾರಕ್ಕೆ ಜಮೆಯಾಗಿಲ್ಲ.
‘ಸರ್ಕಾರವು 2 ಬಾರಿ ನೋಟೀಸ್ ಜಾರಿಗೊಳಿಸಿದೆ. ನೋಟೀಸ್ ಜಾರಿಗೊಳಿಸಿ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದರೆ ಯಾವುದೇ ವಸೂಲಿಯಾಗಿಲ್ಲ. ಇದು ಆಡಳಿತಾತ್ಮಕ ವೈಫಲ್ಯವಾಗಿದೆ,’ ಎನ್ನುತ್ತಾರೆ ದೂರುದಾರರು.
3 ಕೋಟಿ ರು ವಸೂಲಾತಿ ಬಗ್ಗೆ ಸರ್ಕಾರದ ಸ್ಪಷ್ಟ ಸೂಚನೆಗಳನ್ನು ನೀಡಿದ್ದರೂ ಸಹ ಅಲ್ಪಸಂಖ್ಯಾತರ ನಿರ್ದೇಶನಾಲಯ ಮೌನ ವಹಿಸಿದೆ. ಅಲ್ಲದೇ ಹಣ ವಸೂಲಾತಿ ಬಗ್ಗೆ ನಿಷ್ಕ್ರಿಯತೆಯನ್ನು ಪ್ರದರ್ಶನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
‘ಹಣ ದುರುಪಯೋಗಪಡಿಸಿಕೊಂಡಿರುವ ವ್ಯಕ್ತಿಯನ್ನು ಇತ್ತೀಚೆಗೆ ದಾರುಲ್ ಕುರಾನ್ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನಿಸಿದೆ.. ಇದು ನಿಜಕ್ಕೂ ಆಘಾತಕಾರಿ,’ ಎನ್ನುತ್ತಾರೆ ದೂರುದಾರರು.

ವಸೂಲಾತಿ ಆದೇಶ ತಡೆಹಿಡಿಯಲಾಗಿದೆಯೇ?
ಸರ್ಕಾರವು ಸ್ಪಷ್ಟವಾಗಿ ನೀಡಿದ್ದ ನಿರ್ದೇಶನವನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯವು ಪಾಲಿಸಿಲ್ಲ. ಹಣ ವಸೂಲಾತಿ ಬಗ್ಗೆ ಪತ್ರವನ್ನಾಧರಿಸಿ ಕ್ರಮ ಕೈಗೊಳ್ಳದಂತೆ ನಿರ್ದೇಶನಾಲಯವನ್ನು ತಡೆಹಿಡಿಯಲಾಗಿದೆ ಎಂಬ ಮಾತುಗಳೂ ಸಹ ಕೇಳಿ ಬಂದಿವೆ. ಹಣ ವಸೂಲು ಮಾಡಬೇಕು ಎಂದು ಖುದ್ದು ಸಚಿವರು ನಿರ್ದೇಶನ ನೀಡಿದ್ದರೂ ಸಹ ಹಣ ವಸೂಲು ಮಾಡಿಲ್ಲ ಎಂದಾದ ಮೇಲೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪಾತ್ರದ ಬಗ್ಗೆಯೂ ಸಹ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೇ ಇಲಾಖೆ ಆಡಳಿತ ಬಗ್ಗೆಯೇ ಕಳವಳ ಮೂಡಿಸಿದಂತಾಗಿದೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿಲ್ಲ. ವಿದ್ಯಾರ್ಥಿ ವೇತನವನ್ನು ವಿಳಂಬವಾಗಿ ನೀಡುತ್ತಿದೆ. ಈಗಾಗಲೇ ಆರ್ಥಿಕ ಮುಗ್ಗಟ್ಟಿನಲ್ಲಿರುವ ವಿದ್ಯಾರ್ಥಿಗಳು, ಸಕಾಲದಲ್ಲಿ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿಲ್ಲ. ಈ ಮಧ್ಯೆ ಇಲಾಖೆಯ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿಯೂ ಇಲಾಖೆಯು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
‘ಬಡ ವಿದ್ಯಾರ್ಥಿಗಳು ಸಕಾಲಿಕವಾಗಿ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನೀಡಿದ್ದ 3 ಕೋಟಿ ಹಣವನ್ನು ವಸೂಲಿ ಮಾಡದೇ ಆರೋಪಿತರ ಕೈಯಲ್ಲಿಯೇ ಉಳಿಯುವಂತೆ ಮಾಡಿದೆ. ಇದು ನಿಜಕ್ಕೂ ಸ್ವೀಕಾರ್ಹವಲ್ಲ. ಇದು ಕೇವಲ ಆರ್ಥಿಕ ಕೊರತೆಯಲ್ಲ, ಬದಲಿಗೆ ಅಂಚಿನಲ್ಲಿರುವ ಸಮುದಾಯಗಳ ಶೈಕ್ಷಣಿಕ ಪ್ರಗತಿಗೆ ತೀವ್ರ ಹಿನ್ನಡೆಯಾಗಿದೆ,’ ಎನ್ನುತ್ತಾರೆ ದೂರುದಾರ.
ದುರ್ಬಳಕೆ ದೃಢಪಟ್ಟಿದ್ದರೂ ನಡೆಯದ ತನಿಖೆ
ಜಾಮೀಯಾ ಮಸ್ಜಿದ್ ಮತ್ತು ಮುಸ್ಲಿಂ ಚಾರಿಟೇಬಲ್ ಟ್ರಸ್ಟ್ 3 ಕೋಟಿ ರು ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಸರ್ಕಾರವೇ ದೃಢಪಡಿಸಿದೆ. ಆದರೆ ಇದುವರೆಗೂ ತನಿಖೆಯನ್ನೇ ನಡೆಸಿಲ್ಲ. ಕೇವಲ ಹಣ ವಸೂಲಿಗೆ ಮಾತ್ರ ನೋಟೀಸ್ ಜಾರಿಗೊಳಿಸಿ, ತನಿಖೆಯನ್ನೇ ನಡೆಸದ ಸರ್ಕಾರದ ನಡೆಯೂ ಸಹ ಸಂಶಯಗಳಿಗೆ ಕಾರಣವಾಗಿದೆ.









