ಬೆಂಗಳೂರು; ರಾಜ್ಯದಲ್ಲಿ ಶಿಕ್ಷಕರಿಗೆ ತರಬೇತಿ ಅಥವಾ ನಿರಂತರ ವೃತ್ತಿಪರ ಅಭಿವೃದ್ಧಿ (ಸಿಪಿಡಿ) ಕಾರ್ಯಕ್ರಮಗಳನ್ನು ನೀಡುತ್ತಿದ್ದರೂ, ಸರ್ಕಾರಿ ಶಾಲೆಯ ಶಿಕ್ಷಕರು ತರಬೇತಿಯಲ್ಲಿ ಕಲಿತ ವಿಷಯವನ್ನು ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ ಎಂದು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿ ಗುರುತಿಸಿದೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ಹೆಚ್ಚು ತರಬೇತಿ ಪಡೆದರೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶ ಉತ್ತಮವಾಗಿರುವುದನ್ನು ಇದಕ್ಕೆ ನಿದರ್ಶನವನ್ನಾಗಿ ನೀಡಲಾಗಿದೆ. ಅನೇಕ ತರಬೇತಿಗಳು, ಆಡಳಿತಾತ್ಮಕ ಕರ್ತವ್ಯಗಳ ಒತ್ತಡದಿಂದ ಬೋಧನೆಗೆ ಗಮನಹರಿಸಲು ಶಿಕ್ಷಕರಿಗೆ ಕಷ್ಟವಾಗುತ್ತಿರುವುದು ಮತ್ತು ಶೈಕ್ಷಣಿಕ ವರ್ಷದಲ್ಲಿ ತರಬೇತಿ ನಡೆಸುವುದರಿಂದ ಶೈಕ್ಷಣಿಕ ಅವಧಿ ಕಡಿತಗೊಳ್ಳುವುದು “ತರಬೇತಿ ಫಲಿತಾಂಶʼ ಹಿನ್ನಡೆಗೆ ಕಾರಣ ಎನ್ನುವ ಅಭಿಪ್ರಾಯವನ್ನು ವರದಿ ದಾಖಲಿಸಿದೆ.
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಶಾಲಾ ಮತ್ತು ಸಾಕ್ಷರತಾ ಇಲಾಖೆಯಲ್ಲಿನ “ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2018-19ರಿಂದ 2020-21 ರವರೆಗಿನ ಮೌಲ್ಯಮಾಪನʼ ನಡೆಸಿದ ಮೈಸೂರಿನ ಗ್ರಾಸ್ ರೂಟ್ಸ್‌ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್ (ಜಿಆರ್‌ಎಎಎಂ) 2025ರ ಜುಲೈನಲ್ಲಿ ಸಲ್ಲಿಸಿರುವ ವರದಿಯು ಸಮಗ್ರ ಶಿಕ್ಷಣ ಯೋಜನೆ ಮೇಲೆ ಬೆಳಕು ಚೆಲ್ಲಿದೆ.
ಈ ವರದಿ ಕುರಿತು ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಮೇಲ್ವಿಚಾರಣೆ ಮೌಲ್ಯಮಾಪನ ಪ್ರಾಧಿಕಾರವು ಸಲ್ಲಿಸಿರುವ ವರದಿಯು “ದಿ ಫೈಲ್ʼಗೆ ಲಭ್ಯವಾಗಿದೆ.

ತರಬೇತಿಯಲ್ಲಿ ಭೌತಿಕ ಸಾಧನೆ, ಫಲಿತಾಂಶದಲ್ಲಿ ಹಿನ್ನಡೆ
ನಿಷ್ಟಾ ಶಿಕ್ಷಕರ ತರಬೇತಿಯ ಒಟ್ಟು ಭೌತಿಕ ಸಾಧನೆ ಶೇ 90 ಕ್ಕಿಂತ ಹೆಚ್ಚಿದೆ. 20221-22, 2022-23ರಲ್ಲಿ ನಡೆದ ಎಲ್ಲ ತರಬೇತಿಗಳೂ ಶೇ.90ಕ್ಕಿಂತ ಹೆಚ್ಚು ಗುರಿ ಸಾಧನೆ ಮಾಡಿವೆ. ಯು-ಡೈಸ್ ಪ್ಲಸ್ ದತ್ತಾಂಶದ ಪ್ರಕಾರ ಶೇ.12ರಷ್ಟ ಪ್ರೌಢಶಾಲಾ ಶಿಕ್ಷಕರ ಹೊರತು ಎಲ್ಲ ಶಾಲಾ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಶೇ.79 ರಷ್ಟು ಸರ್ಕಾರಿ, ಅನುದಾನಿತ ಶಾಲಾ ಶಿಕ್ಷಕರು ಕಳೆದ ಐದು ವರ್ಷಗಳಲ್ಲಿ ನಿರಂತರ ವೃತ್ತಿಪರ ಅಭಿವೃದ್ಧಿ (ಸಿಪಿಡಿ) ತರಬೇತಿಯನ್ನೂ ಪಡೆದಿದ್ದಾರೆ. ಆದರೆ, ಈ ತರಬೇತಿ ಪಡೆದ ಖಾಸಗಿ ಶಾಲೆ ಶಿಕ್ಷಕರು ಶೇ.48 ಮಾತ್ರ. ಆದರೆ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆ ಫಲಿತಾಂಶ ಉತ್ತಮವಾಗಿವೆ ಎಂದು ವರದಿ ಹೇಳಿದೆ.
ಸಿಪಿಡಿ ತರಬೇತಿ ಪಡೆದಿರುವ ಶಿಕ್ಷಕರಿಂದ ಕಲಿಕೆ ಫಲಿತಾಂಶ ಋಣಾತ್ಮಕವಾಗಿದೆ. ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳ ಕಲಿಕೆ ಫಲಿತಾಂಶಗಳ ನಡುವಿನ ಸಂಬಂಧವು ದೃಢವಾಗಿಲ್ಲ. ತರಬೇತಿಯಲ್ಲಿ ಕಲಿತ ವಿಷಯವನ್ನು ಶಿಕ್ಷಕರು ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ ಎಂದು ಅಧ್ಯಯನ ವರದಿ ವಿಶ್ಲೇಷಿಸಿದೆ.
ತರಬೇತಿಗಳಲ್ಲಿ ಕಲಿತದ್ದನ್ನು ತರಗತಿಯಲ್ಲಿ ಅನ್ವಯಿಸಲು ಅಥವಾ ಅಭ್ಯಾಸ ಮಾಡಲು ಸಾಧ್ಯವೇ ಎನ್ನುವ ಸಮೀಕ್ಷಕರ ಪ್ರಶ್ನೆಗೆ ಶೇ.72.80 ರಷ್ಟು ಸರ್ಕಾರಿ ಶಾಲೆಗಳ ಶಿಕ್ಷಕರು ಹೇಳಿದ್ದರೇ ಅನುದಾನಿತ ಶಾಲೆ ಶಿಕ್ಷಕರು “ಯಾವಾಗಲೂ ಸಾಧ್ಯವಾಗುತ್ತಿದೆʼʼ ಎಂದು ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಶಾಲೆ ಶಿಕ್ಷಕರ ಪ್ರತಿಕ್ರಿಯೆ ಪ್ರಮಾಣ ಶೇ.74.60 ರಷ್ಟಿದೆ. ಶೇ. 26.82 ರಷ್ಟು ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು ಮತ್ತು ಶೇ.25.40 ಖಾಸಗಿ ಶಾಲೆ ಶಿಕ್ಷಕರ ಅಭಿಪ್ರಾಯ “ಕೆಲವೊಮ್ಮೆ ಸಾಧ್ಯವಾಗುತ್ತಿದೆ,ʼ ಎಂದು ಪ್ರತಿಕ್ರಿಯಿಸಿರುವುದು ವರದಿಯಿಂದ ಗೊತ್ತಾಗಿದೆ.

ತರಬೇತಿ ಕಾರ್ಯಕ್ರಮಗಳಲ್ಲಿನ ವಿಷಯಗಳು ಅರ್ಥಮಾಡಿಕೊಳ್ಳಲು ಸುಲಭ ಎಂದು ಬಹುತೇಕ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರಾದರೂ, ತರಬೇತಿ ವಿಷಯಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಸಹಾಯ ಬೇಕಾಗಬಹುದು ಎಂದೂ ಹೇಳಿದ್ದಾರೆ. ತರಬೇತಿ ಕಾರ್ಯಕ್ರಮಗಳಲ್ಲಿ ನೀಡಲಾಗುವ ವಿಷಯ ಅರ್ಥವಾಗುತ್ತಿದೆಯೇ ಅಥವಾ ಅರ್ಥಮಾಡಿಕೊಳ್ಳಲು ಸುಲಭವಾಗಿದೆಯೇ ಎನ್ನುವ ಪ್ರಶ್ನೆಗೆ ಶೇ.77.78 ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು, ಶೇ.71. 43 ಖಾಸಗಿ ಶಾಲೆ ಶಿಕ್ಷಕರು”ಯಾವಾಗಲೂ ಸುಲಭʼʼ ಎಂದು ಪ್ರತಿಕ್ರಿಯಿಸಿದ್ದಾರೆ. ಶೇ.21.02 ಸರ್ಕಾರಿ, ಅನುದಾನಿತ ಮತ್ತು ಶೇ.26.98 ಖಾಸಗಿ ಶಾಲೆ ಶಿಕ್ಷಕರು “ಕೆಲವೊಮ್ಮೆ ಸುಲಭʼʼ ಎಂದಿದ್ದಾರೆ. ಕ್ರಮವಾಗಿ ಶೇ. 1.15 ಮತ್ತು ಶೇ. 1.59ರಷ್ಟು ಶಿಕ್ಷಕರದ್ದು “ಎಂದಿಗೂ ಸುಲಭವಲ್ಲʼʼ ಎನ್ನುವುದಾಗಿತ್ತು.

ಪುನರಾವರ್ತಿತ ತರಬೇತಿ ಅಗತ್ಯ
ಕಲಿಕೆಯ ಫಲಿತಾಂಶವನ್ನಾಧರಿಸಿ ಪಠ್ಯಪುಸ್ತಕಗಳನ್ನು ಪುನರ್‌ವ್ಯವಸ್ಥೆಗೊಳಿಸುವ ಅಗತ್ಯವಿದೆ ಮತ್ತು ಹಿಂದಿನ ತರಬೇತಿಯ ವಿಷಯಗಳನ್ನು ಪುನರ್‌ಮನನ ಮಾಡಲು ಪುನರಾವರ್ತಿತ ತರಬೇತಿಯ ಅಗತ್ಯವಿದೆ ಎಂದೂ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುಪಾಲು ಶಿಕ್ಷಕರು ಭಾವಿಸಿದ್ದಾರೆ. ಆದರೆ, ಫಲಾನುಭವಿ ಶಾಲೆಗಳ ಶೇ.45 ಶಿಕ್ಷಕರು ಸಹಿತ ಕಡಿಮೆ ಸಂಖ್ಯೆಯ ಶಿಕ್ಷಕರು ಮಾತ್ರ ಭವಿಷ್ಯದ ತರಗತಿ ಉಪಯೋಗಕ್ಕಾಗಿ ಮಾರ್ಗದರ್ಶಕ ಕೈಪಿಡಿಯನ್ನು ಪಡಿದಿದ್ದಾರೆ ಎಂದು ವರದಿಯಲ್ಲಿ ಗುರುತಿಸಲಾಗಿದೆ.
ಈ ಹಿಂದೆ ತರಬೇತಿಗಳಲ್ಲಿ ಕಲಿಸಿದ ವಿಷಯವನ್ನು ಪರಿಷ್ಕರಿಸಲು ಮತ್ತು ಪುನರಾವರ್ತಿಸಲು ಪುನಶ್ಚೇತನ ಕಾರ್ಯಕ್ರಮಗಳ ಅಗತ್ಯದ ಬಗ್ಗೆ ಶಿಕ್ಷಕರ ಗ್ರಹಿಕೆಯನ್ನು ಅರಿಯಲು ನಡೆಸಿದ ಸಮೀಕ್ಷೆಯಲ್ಲಿ ಶೇ 52.49 ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು, ಶೇ.66.67 ಖಾಸಗಿ ಶಾಲೆ ಶಿಕ್ಷಕರು “ಯಾವಾಗಲೂ ಅಗತ್ಯʼʼ ಎನ್ನುವ ಅಭಿಪ್ರಾಯ ದಾಖಲಿಸಿದ್ದಾರೆ. ಶೇ.43.30 ಸರ್ಕಾರಿ, ಅನುದಾನಿತ ಮತ್ತು ಶೇ.30.16, ಖಾಸಗಿ ಶಾಲೆ ಶಿಕ್ಷಕರು “ಕೆಲವೊಮ್ಮೆ ಅಗತ್ಯʼʼ ಎಂದಿದ್ದಾರೆ. ಕ್ರಮವಾಗಿ ಶೇ.4.12 ಮತ್ತು ಶೇ.3.17 ಶಿಕ್ಷಕರು “ಎಂದಿಗೂ ಅಗತ್ಯವಿಲ್ಲʼʼ ಎಂದಿದ್ದಾರೆ.

ಉಪನ್ಯಾಸ, ಪ್ರದರ್ಶನದಂತಹ ಸಾಮಾನ್ಯ ಕ್ರಮಗಳಲ್ಲಿ ತರಬೇತಿ ನೀಡಿದರೆ ಶಿಕ್ಷಕರಲ್ಲಿ ನಿರಾಸಕ್ತಿ ಮೂಡಬಹುದು. ಹಿರಿಯ/ ತಜ್ಞ ಶಿಕ್ಷಕರ ಮಾರ್ಗದರ್ಶನ ಸಹಿತ ಹೊಸ ಬಗೆಯ ತರಬೇತಿಯನ್ನು ಶಿಕ್ಷಕರು ನಿರೀಕ್ಷಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ತರಬೇತಿಯಲ್ಲಿ ಯಾವ ಬಗೆಯ ನವೀನ ವಿಧಾನಗಳನ್ನು ಅಳವಡಿಸಬೇಕು ಎನ್ನುವ ಪ್ರಶ್ನೆಗೆ ಶೇ.62.48 ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು ಮತ್ತು ಶೇ.68.25 ಖಾಸಗಿ ಶಾಲೆ ಶಿಕ್ಷಕರು “ಹಿರಿಯ/ತಜ್ಞ ಶಿಕ್ಷಕರಿಂದ ಮಾರ್ಗದರ್ಶನʼʼ ವ್ಯವಸ್ಥೆ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಇತರೆ ಶಾಲೆಗಳನ್ನು ಕೇಂದ್ರೀಕರಿಸಬೇಕು ಎನ್ನುವುದು ಶೇ.೪೭.೮೯ ಸರ್ಕಾರಿ, ಅನುದಾನಿತ ಮತ್ತು ಶೇ.44.44 ಖಾಸಗಿ ಶಾಲೆ ಶಿಕ್ಷಕರ ಅಭಿಪ್ರಾಯವಾಗಿತ್ತು.

2018-19 ರಿಂದ 2022-23 ರವರೆಗೆ ಫಲಾನುಭವಿ ಶಾಲೆಗಳ (ಸರ್ಕಾರಿ, ಅನುದಾನಿತ) ಶಿಕ್ಷಕರಿಗೆ ಸರಾಸರಿ 5.41 ತರಬೇತಿ ದಿನಗಳು ಮತ್ತು ಫಲಾನುಭವಿಗಳಲ್ಲದ (ಖಾಸಗಿ) ಶಾಲೆಗಳ ಶಿಕ್ಷಕರಿಗೆ 3.18 ತರಬೇತಿ ದಿನಗಳು. ಈ ಅವಧಿಯಲ್ಲಿ ಫಲಾನುಭವಿ ಶಾಲೆಗಳ ಶಿಕ್ಷಕರಿಗೆ ತರಬೇತಿ ದಿನಗಳ ಸಂಖ್ಯೆ ಸತತ ಕಡಿತಗೊಳ್ಳುತ್ತಿದ್ದು, ತರಬೇತಿ ದಿನಗಳ ಸಂಖ್ಯೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ ಎಂದು ವರದಿ ಸಲಹೆ ನೀಡಿದೆ. 2018-19 ರಲ್ಲಿ ಫಲಾನುಭವಿ ಶಾಲೆಗಳ ಶಿಕ್ಷಕರಿಗೆ 5.72 ತರಬೇತಿ ದಿನಗಳು ಲಭಿಸಿದರೆ, 2022-23 ರಲ್ಲಿ ಇದು ಶೇ. 4.82ಕ್ಕೆ ಇಳಿದಿದೆ.
ಕೋವಿಡ್ ಸಮಯದಲ್ಲಿ ಶಾಲೆಯನ್ನು ಮುಚ್ಚಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಿರಲಿಲ್ಲ. ಇದಕ್ಕೆ ಕಾರಣಗಳೇನು ಎಂಬುದನ್ನೂ ಸಹ ಮೌಲ್ಯಮಾಪನ ವರದಿಯಲ್ಲಿ ವಿವರಿಸಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿ ಇಆರ್‌ಟಿ)ಯ ಉಪಕ್ರಮವಾದ ಮತ್ತು ಡಿಜಿಟಲ್‌ತಂತ್ರಜ್ಞಾನದೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಸಹಾಯ ಮಾಡುವ “ದೀಕ್ಷಾ” ತರಬೇತಿಗೆ ಬಹುತೇಕ ಫಲಾನುಭವಿ ಶಾಲೆಗಳ ಶಿಕ್ಷಕರು ಹಾಜರಾಗಿದ್ದು, ಶೇ 96 ಕ್ಕಿಂತ ಹೆಚ್ಚು ಶಿಕ್ಷಕರು 18 ಮಾಡ್ಯೂಲ್‌ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಶಿಕ್ಷಕರ ಸಮೀಕ್ಷೆ ತೋರಿಸುತ್ತದೆ.

ರಿಗ್ರೆಶನ್ ಮಾದರಿಯಲ್ಲಿ ನಡೆಸಿದ ಅಧ್ಯಯನ ಪ್ರಕಾರ, ಶಿಕ್ಷಕರು ತರಬೇತಿಯಲ್ಲಿ ಪಡೆದ ಅನುಭವದಿಂದ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಮೇಲೆ ಗಮನಾರ್ಹ ಧನಾತ್ಮಕ ಪ್ರಭಾವ ಬೀರಿದೆ. ಆನ್‌ಲೈನ್‌ತರಬೇತಿ ವಿಧಾನಕ್ಕಿಂತ ಮುಖಾಮುಖಿ ತರಬೇತಿ ಮಹತ್ವದ ಪರಿಣಾಮ ಬೀರಿದೆ ಎನ್ನುವುದು ಅಧ್ಯಯನದಲ್ಲಿ ದೃಢವಾಗಿದೆ. ಶೇ 83. 52 ಸರ್ಕಾರಿ ,ಅನುದಾನಿತ ಶಾಲೆ ಶಿಕ್ಷಕರು ಮತ್ತು ಶೇ.88.89 ಖಾಸಗಿ ಶಾಲೆ ಶಿಕ್ಷಕರು ಮುಖಾಮುಖಿ ತರಬೇತಿಯನ್ನು ಅತ್ಯಂತ ಸಾಮಾನ್ಯ ವಿಧಾನ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಂತ್ರಿಕ ಮತ್ತು ನೆಟ್‌ವರ್ಕ್‌ಸಮಸ್ಯೆಗಳಿಂದ ಕೆಲವೊಮ್ಮೆ ಆನ್ಲೈನ್‌ತರಬೇತಿ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುತ್ತಿದೆ. ಹೊಸ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಚಟುವಟಿಕೆ ಆಧಾರಿತ ಬೋಧನೆಯನ್ನು ಕಾರ್ಯಗತಗೊಳಿಸಲು ಶಿಕ್ಷಕರಿಗೆ ಬೋಧನಾ ಕಲಿಕಾ ಸಾಮಗ್ರಿಯಲ್ಲಿ (ಟಿಎಲ್‌ಎಂ) ಕೊರತೆಯಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಅನೇಕ ತರಬೇತಿ, ಆಡಳಿತಾತ್ಮಕ ಕರ್ತವ್ಯಗಳಿಂದ ಬೋಧನೆಗೆ ಕಷ್ಟ
ಬಿಇಒ, ಬಿಆರ್‌ಸಿ, ಡಿಡಿಪಿಐಗಳು ಮತ್ತು ಡಯಟ್‌ನ ಅಧಿಕಾರಿಗಳೊಂದಿಗೆ ಅಧ್ಯಯನ ತಂಡ ನಡೆಸಿದ ಸಂದರ್ಶನವು, ಶಿಕ್ಷಕರ ತರಬೇತಿಯನ್ನು ಕಾರ್ಯಗತಗೊಳಿಸುವಲ್ಲಿ ಇರುವ ಸವಾಲುಗಳನ್ನು ಪಟ್ಟಿ ಮಾಡಿದೆ.
ಶಿಕ್ಷಕರು ಹಲವಾರು ತರಬೇತಿಗಳಿಂದ ಬೇಸರಗೊಂಡಿದ್ದಾರೆ ಮತ್ತು ದಣಿದಿದ್ದಾರೆ. ಅನೇಕ ತರಬೇತಿಗಳು, ಆಡಳಿತಾತ್ಮಕ ಕರ್ತವ್ಯಗಳಿಂದಾಗಿ ಮುಖ್ಯ ಬೋಧನೆಯಲ್ಲಿ ಗಮನಹರಿಸಲು ಕಷ್ಟವಾಗುತ್ತಿದೆ. ಶನಿವಾರದಂದು ತರಬೇತಿಗೆ ಹಾಜರಾಗಲು ಇಷ್ಟಪಡುವುದಿಲ್ಲ. ಶಿಕ್ಷಕರ ತರಬೇತಿಗಳನ್ನು ಸುವ್ಯವಸ್ಥಿತಗೊಳಿಸುವ ಮತ್ತು ಅವುಗಳನ್ನು ಸೂಕ್ತವಾಗಿ ನಿಗದಿಪಡಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ.

ಮೂರು ದಿನಗಳಿಗಿಂತ ಹೆಚ್ಚು ತರಬೇತಿಯನ್ನು ನಡೆಸಿದಾಗ, ಇದು ಪಾಠಗಳ ಪ್ರಗತಿ ಮತ್ತು ಪಠ್ಯಕ್ರಮವನ್ನು ಪೂರ್ಣಗೊಳಸಲು ಒತ್ತಡವನ್ನು ಉಂಟುಮಾಡುತ್ತದೆ ಎಂದು ಹಲವು ಮುಖ್ಯಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ ತರಬೇತಿ ನಡೆಸಿದರೆ ಶೈಕ್ಷಣಿಕ ಅವಧಿಗಳನ್ನು ಕಡಿತಗೊಳಿಸುತ್ತದೆ. ಆದ್ದರಿಂದ ರಜೆಯ ಅವಧಿಯಲ್ಲಿ ತರಬೇತಿಗಳನ್ನು ನಿಗದಿಪಡಿಸಬೇಕು ಎನ್ನುವ ಸಲಹೆಯೂ ವ್ಯಕ್ತವಾಗಿದೆ.
ಜಾಗತಿಕ ಮಾನದಂಡಗಳಿಗೆ ಅನ್ವಯಿಸಿ ತರಬೇತಿ
ಶಿಕ್ಷಕರ ತರಬೇತಿಯನ್ನು ಸಿಂಗಪುರ,ಫಿನ್‌ಲ್ಯಾಂಡ್‌ರೀತಿಯಲ್ಲಿ ಜಾಗತಿಕ ಪ್ರಮಾಣಿತ ಮಾನದಂಡಗಳಿಗೆ ಹೊಂದಿಸಿ ಪುನರ್‌ರೂಪಿಸಬೇಕು. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕೌಶಲ್ಯ-ಫಲಿತಾಂಶ ಆಧಾರಿತ ರೂಪರೇಷೆಯೊಂದನ್ನು ರೂಪಿಸಬೇಕು,ಶಿಕ್ಷಕರ ತರಬೇತಿಯಲ್ಲಿ ಕಲಿತದ್ದನ್ನು ಶಿಕ್ಷಕರು ತರಗತಿಯಲ್ಲಿ ಅನ್ವಯಿಸುತ್ತಿರುವುದನ್ನು ಗಮನಿಸಿ, ಅದರ ಮೇಲ್ವಿಚಾರಣೆ ಮತ್ತು ಪ್ರತಿಕ್ರಿಯೆ ವ್ಯವಸ್ಥೆ ಬಲಪಡಿಸಬೇಕು. ಇದಕ್ಕೆ ಡಯಟ್, ಬಿಆರ್‌ಸಿ, ಸಿಆರ್‌ಸಿ ಕೇಂದ್ರಗಳನ್ನು ಬಳಸಬೇಕು ಎನ್ನುವ ಶಿಫಾರಸುಗಳನ್ನು ಮಾಡಲಾಗಿದೆ.
ಅಲ್ಲದೇ ಮೌಲ್ಯಮಾಪನ ನಡೆದ ವರ್ಷದಲ್ಲಿ ಶಿಕ್ಷಕರಿಗೆ ಆ ಒಂದು ವರ್ಷದಲ್ಲಿ ತರಬೇತಿ ಕಾರ್ಯಕ್ರಮಗಳು ನಡೆದಿರಲಿಲ್ಲ. ಇದಕ್ಕೆ ಅನಾರೋಗ್ಯ ಸೇರಿದಂತೆ ಮತ್ತಿತರ ಕಾರಣಗಳನ್ನು ಮುಂದೊಡ್ಡಿದ್ದರು.

ಶಿಕ್ಷಕರ ತರಬೇತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಯೊಬ್ಬರು ,”ತರಬೇತುದಾರರ ಗುಣಮಟ್ಟದ ಮೇಲೆ ತರಬೇತಿಯ ಪರಣಾಮ ಅವಲಂಬಿತವಾಗಿದೆ. ಅಧ್ಯಯನ ಫಲಿತಾಂಶಗಳ ಆಧಾರದ ಮೇಲೆ ಪಠ್ಯವನ್ನು ಪುನರ್ರಚಿಸುವ ಅಗತ್ಯವಿದೆ,ʼʼ ಎಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಕರ ತರಬೇತಿ ಮತ್ತು ಕಲಿಕೆ ಫಲಿತಾಂಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಈಚೆಗೆ ಕೆಲವು ಪ್ರಯೋಗಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದು, ಅವುಗಳನ್ನೂ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ ಶಿಕ್ಷಕರು ಹಾಜರಾಗಲೇಬೇಕಿದ್ದ ತರಬೇತಿಗಳಿಗೆ ನಿಯಮಿತವಾಗಿ ಹಾಜರಾಗಿಲ್ಲ. ಬದಲಿಗೆ ತಪ್ಪಿಸಿಕೊಂಡಿದ್ದಾರೆ. ಇದಕ್ಕೆ ಶಿಕ್ಷಕರು ನೀಡಿದ್ದ ಕಾರಣಗಳನ್ನೂ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಿದೆ.

ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ “ಮರುಸಿಂಚನ”
ಶಿಕ್ಷಕರ ತರಬೇತಿಯಲ್ಲಿ ಬದಲಾವಣೆಯ ಅಗತ್ಯವನ್ನು ಗುರುತಿಸಿರುವ ರಾಜ್ಯಸರ್ಕಾರ, “ಮರುಸಿಂಚನʼʼ ಹೆಸರಿನಲ್ಲಿ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದ್ದು, ಶೈಕ್ಷಣಿಕವಾಗಿ ಹಿಂದುಳಿದ 17 ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಅಧ್ಯಯನ ಫಲಿತಾಂಶ ಆಧಾರಿತ ಬೋಧನೆ ವಿಷಯದಲ್ಲಿ ತರಬೇತಿ ನೀಡಲಾಗುತ್ತಿದೆ.
ಫಲಿತಾಂಶ ಆಧಾರಿತ ಚಟುವಟಿಕೆಗಳನ್ನು ತರಬೇತಿಯ ಪಾಠಗಳಲ್ಲಿ ಸೇರಿಸಲಾಗಿದೆ. ಈ ಮೂಲಕ ಶಿಕ್ಷಕರ ತರಬೇತಿ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಫಲಿತಾಂಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಗಂಭೀರ ಪ್ರಯತ್ನ ನಡೆದಿದೆ. ಕಳೆದ ವರ್ಷದಿಂದ ನಡೆಯುತ್ತಿರುವ ಈ ಯೋಜನೆಯನ್ನು ಮುಂದಿನ ವರ್ಷದಲ್ಲಿ ರಾಜ್ಯಮಟ್ಟಕ್ಕೆ ವಿಸ್ತರಿಸುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.









