ಶಿಕ್ಷಕರ ನೇಮಕದಲ್ಲಿ ವಿಳಂಬ: ಮಕ್ಕಳ ಓದುವ ಸಾಮರ್ಥ್ಯ ಕುಸಿತ, ವಿಕಲ ಚೇತನ ಮಕ್ಕಳಿಗೆ ತರಬೇತಿ ಪಡೆದ ಶಿಕ್ಷಕರಿಲ್ಲ

ಬೆಂಗಳೂರು; ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ (ಪಿಟಿಆರ್)ವು ನಿಗದಿತ ಮಾನದಂಡಗಳಿಗಿಂತ ಉತ್ತಮವಾಗಿದ್ದರೂ,  ಮಂಜೂರಾದ ಮತ್ತು ಭರ್ತಿಯಾದ ಶಿಕ್ಷಕರ ಹುದ್ದೆಗಳ ನಡುವಿನ ಅಂತರ ಶೇ.22 ರಷ್ಟಿದೆ. ನೇಮಕಾತಿ ವಿಳಂಬ ಮತ್ತಿತರ ಕಾರಣಗಳು ಮಕ್ಕಳ ಓದುವ ಸಾಮರ್ಥ್ಯ ಕುಸಿಯುವಂತೆ ಮಾಡಿವೆ ಎನ್ನುವುದನ್ನು  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನವು ದೃಢಪಡಿಸಿದೆ.

 

ಶಾಲಾ ಮತ್ತು ಸಾಕ್ಷರತಾ ಇಲಾಖೆಯಲ್ಲಿನ “ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2018-19 ರಿಂದ 2020-21 ರ ವರೆಗಿನ ಮೌಲ್ಯಮಾಪನʼ ನಡೆಸಿರುವ  ಮೈಸೂರಿನ ಗ್ರಾಸ್‌ ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ ಮೆಂಟ್‌ (ಜಿಆರ್‌ ಎಎಎಂ) ಕಳೆದ ಜುಲೈನಲ್ಲಿ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ  ಅಧ್ಯಯನ ವರದಿಯು ಸಮಗ್ರ ಶಿಕ್ಷಣ ಅನುಷ್ಠಾನದ ಕುರಿತು ಬೆಳಕು ಚೆಲ್ಲಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶ ಉತ್ತಮಗೊಳಿಸುವಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಒರೆಗೆ ಹಚ್ಚುತ್ತಲೇ, ಶಿಕ್ಷಣ ಕ್ಷೇತ್ರದ ಎದುರಿರುವ ವಾಸ್ತವ ಸವಾಲುಗಳನ್ನು ತೆರೆದಿಟ್ಟಿದೆ. ವರದಿ ಸ್ವೀಕರಿಸಿರುವ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ನೇಮಕ ಸಹಿತ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

 

ಆರ್‌ಟಿಇ ಮಾನದಂಡಗಳ ಪ್ರಕಾರ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು (ಪಿಟಿಆರ್)‌ ಪ್ರಾಥಮಿಕ ಶಾಲಾ ಮಟ್ಟಕ್ಕೆ 30;1 ಮತ್ತು ಹಿರಿಯ ಪ್ರಾಥಮಿಕ ಹಂತಕ್ಕೆ 35.1 ರಲ್ಲಿ ಕಾಯ್ದುಕೊಳ್ಳಬೇಕು. ಕರ್ನಾಟಕದ ಪಿಟಿಆರ್‌ ಮತ್ತು ಪ್ರತಿ ಶಾಲೆಗೆ ಶಿಕ್ಷಕರ ಲಭ್ಯತೆಯು ರಾಷ್ಟ್ರ ಮಟ್ಟದ ಅಂಕಿ ಅಂಶಗಳಿಗೆ ಹೊಂದಿಕೆಯಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನುಪಾತವು‌ ನಿಗದಿತ ಮಾನದಂಡಗಳಿಗಿಂತ ಉತ್ತಮವಾಗಿದೆ (ತಲಾ 28.1 ) ಎನ್ನುವುದನ್ನು ಅಧ್ಯಯನ ವರದಿ ಹೇಳಿದೆ.

 

 

 

ಯೂ ಡೈಸ್‌ ಪ್ಲಸ್‌ ದತ್ತಾಂಶದ ಪ್ರಕಾರ 2021-22 ರಲ್ಲಿ ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಹಂತಕ್ಕೆ ಪಿಟಿಆರ್‌ 23.1 ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಕ್ಕೆ ತಲಾ 18;1 ಉನ್ನತ ಮಾಧ್ಯಮಿಕ ಹಂತಕ್ಕೆ 28;1 ಆಗಿದೆ. ಆದರೆ, ಶಿಕ್ಷಣ ವಾರ್ಷಿಕ ಸ್ಥಿತಿ ವರದಿ (ಎಎಸ್‌ ಇಆರ್-‌2022) ಪ್ರಕಾರ ತಳಮಟ್ಟದ ವಾಸ್ತವ ಬೇರೆಯೇ ಇದೆ. ಎಎಸ್ಇಆರ್ ತಂಡವು ಆರ್ ಟಿ ಇ ನಿಯಮಾನುಸಾರ ವಿದ್ಯಾರ್ಥಿ- ಶಿಕ್ಷಕ ಅನುಪಾತ (ಪಿಟಿಆರ್)‌ ಪಾಲನೆಯ ಸ್ಥಿತಿಯನ್ನು ಅರಿಯಲು 2018 ರಲ್ಲಿ 842 ಮತ್ತು 2022 ರಲ್ಲಿ 812 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.

 

ಮೊದಲ ಭೇಟಿಯಲ್ಲಿ ಶೇ. 79. 4 ಶಾಲೆಗಳಲ್ಲಿ ಪಿಟಿಆರ್‌ ಪಾಲನೆ ಕಂಡ ಬಂದರೆ, ಎರಡನೆ ಬಾರಿಗೆ ಅದು ಶೇ. 71. 6ಕ್ಕೆ ಇಳಿಕೆಯಾಗಿತ್ತು. “ ಈ ಫಲಿತಾಂಶವು ಶಾಲಾ ಮಟ್ಟದ ಶಿಕ್ಷಕರ ಲಭ್ಯತೆ ಕುರಿತಂತೆ ತಳಮಟ್ಟದ ವಾಸ್ತವಗಳನ್ನು ತೋರಿಸುತ್ತದೆ. ಈ ಸಮಸ್ಯೆಗೆ ಇನ್ನೂ ಸೂಕ್ತ ಪರಿಹಾರದ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ,ʼʼ ಎಂದು ವರದಿ ಅಭಿಪ್ರಾಯಪಟ್ಟಿದೆ.

 

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮ ನಿಗದಿಪಡಿಸಿದ ಸುಧಾರಣೆಗಳಲ್ಲಿ ಶಿಕ್ಷಕರ ಒದಗಿಸುವಿಕೆ ಪ್ರಮುಖವಾದುದು. ಉಪಕ್ರಮಗಳ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗೆ ಕನಿಷ್ಠ ಇಬ್ಬರು, ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ವರು ಶಿಕ್ಷಕರು ಇರಬೇಕು ಎನ್ನುವುದು ರಾಜ್ಯಮಟ್ಟದ ಅಧಿಕಾರಿಯೊಬ್ಬರ ಹೇಳಿಕೆ. ಆದರೆ, ಶಿಕ್ಷಣ ಇಲಾಖೆ ನೀಡಿದ ಶಾಲಾ ಶಿಕ್ಷಕರ ಲಭ್ಯತೆಯ ಅಂಕಿಅಂಶಗಳು ಮಂಜೂರಾದ ಶಿಕ್ಷಕರ ಹುದ್ದೆಗಳು ಮತ್ತು ಭರ್ತಿ ಮಾಡುವಲ್ಲಿನ ಅಂತರವನ್ನು (ಶೇ.22 ರಷ್ಟು) ಎತ್ತಿ ತೋರಿಸಿವೆ.

 

 

ಕೋವಿಡ್‌ 19 ರ ಕಾರಣದಿಂದಾಗಿ 2019-22 ರವರೆಗೆ ಅನುಮೋದಿತ ಹುದ್ದೆಗಳ ಸಂಖ್ಯೆ ಸ್ಥಿರವಾಗಿಯೇ ಉಳಿದಿದೆ. 2023-24ರಲ್ಲಿ 44, 341 ಮಂಜೂರಾದ ಶಿಕ್ಷಕ ಹುದ್ದೆಗಳಿದ್ದು, 34, 154 ಹುದ್ದೆಗಳಷ್ಟೆ ಭರ್ತಿಯಾಗಿದ್ದವು. ಖಾಲಿ ಹುದ್ದೆಗಳ ಸಂಖ್ಯೆ ಶೇ.23 ರಷ್ಟು (10, 182 ).

 

“ಶಿಕ್ಷಕರ ನಿವೃತ್ತಿ, ಸೇವಾವಧಿಯಲ್ಲಿ ಮರಣ, ವರ್ಗಾವಣೆ ಮತ್ತಿತರ ಕಾರಣಗಳಿಂದ ಖಾಲಿ ಹುದ್ದೆಗಳು ಸಾಕಷ್ಟಿವೆ. ಶಿಕ್ಷಕರ ನೇಮಕ ಪ್ರಕ್ರಿಯೆ ವರ್ಷಕ್ಕೊಮ್ಮೆ ನಡೆಯುವುದು, ಹಣಕಾಸಿನ ಸಂಪನ್ಮೂಲಗಳ ಕೊರತೆಯಿಂದಾಗಿ ನೇಮಕಾತಿಯ ವಿಳಂಬ, ಗುಣಮಟ್ಟದ ಅಭ್ಯರ್ಥಿಗಳ ಅಲಭ್ಯತೆ ಕೂಡ ಇದಕ್ಕೆ ಕಾರಣ,ʼʼಎನ್ನುವ ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಅಭಿಪ್ರಾಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಅಧ್ಯಯನದ ಭಾಗವಾಗಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ (ಫಲಾನುಭವಿ ಶಾಲೆಗಳು) ಸಮೀಕ್ಷೆ ನಡೆಸಿದ್ದು, ಶೇ.66.36 ಶಾಲೆಗಳ ಶಿಕ್ಷಕರು ತಮ್ಮ ಶಾಲೆಯಲ್ಲಿ ವಿವಿಧ ವಿಷಯಗಳನ್ನು ಕಲಿಸಲು ಸಾಕಷ್ಟು ಶಿಕ್ಷಕರು ಲಭ್ಯರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೇ ಒಂದರಷ್ಟು ಫಲಾನುಭವಿ ಶಾಲೆಗಳಲ್ಲಿ ಅಂತಹ ಶಿಕ್ಷಕರ ಲಭ್ಯತೆ ಇಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯ ಎಂದು ಹೇಳಿರುವ ವರದಿಯು, ಆಯ್ದ ತಾಲೂಕುವಾರು ಖಾಲಿ ಹುದ್ದೆಗಳ ಪ್ರಮಾಣ, ಶಿಕ್ಷಕರ ಅಲಭ್ಯತೆಯಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲಾಗಿರುವ ಪರಿಣಾಮವನ್ನು ವಿಶ್ಲೇಷಣೆಗೆ ಒಡ್ಡಿದೆ.

 

 

ಸುರಪುರ (ಶೇ.42.20 ), ಶಹಾಪುರ (ಶೇ.45.94 ), ಹೊಳೆನರಸೀಪುರ (ಶೇ.41. 95), ಪಾವಗಡ (41.83), ಯಾದಗಿರಿ(36.84), ಸೇಡಮ್‌ (ಶೇ.33.68), ಗೋಕಾಕ್‌ (ಶೇ.33.39 ), ಬೆಂಗಳೂರು ಪೂರ್ವ (ಶೇ.31.60) ತಾಲೂಕುಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿದೆ. ಬೆಂಗಳೂರು ಉತ್ತರ (ಶೇ.69.45 ), ಯಾದಗಿರಿ, ಬಸವಕಲ್ಯಾಣ ಮತ್ತು ಬೆಂಗಳೂರು ದಕ್ಷಿಣ ತಾಲೂಕುಗಳು ಕಲಿಕಾ ಫಲಿತಾಂಶದಲ್ಲಿ ಶೇ.75ಕ್ಕಿಂತ ಕಡಿಮೆ ಅಂಕವನ್ನು ಹೊಂದಿವೆ.

 

ರಾಜ್ಯದಲ್ಲಿ ಹದಗೆಡುತ್ತಿರುವ ಕಲಿಕೆಯ ಫಲಿತಾಂಶಗಳು

 

ಎಎಸ್‌ಇಆರ್‌ -2022 ರ ವರದಿ ಕೂಡ ರಾಜ್ಯದ ಕಲಿಕೆಯ ಫಲಿತಾಂಶಗಳು ಹದಗೆಡುತ್ತಿರುವ ಬಗ್ಗೆ ಗಮನ ಸೆಳೆದಿದೆ. 2022 ರಲ್ಲಿ, ಸರ್ಕಾರಿ ಶಾಲೆಗಳ ೩ನೇ ತರಗತಿಯ ಶೇ 19.4 ರಷ್ಟು ಮಕ್ಕಳು ಮಾತ್ರ 2ನೇ ತರಗತಿಯ ಪಠ್ಯವನ್ನು ಓದಬಲ್ಲರು. 2018-2022 ರ ನಡುವೆ, 5ನೇ ತರಗತಿಯ ಮಗುವು 2ನೇ ತರಗತಿಯ ಪಠ್ಯವನ್ನು ಓದುವ ಸಾಮರ್ಥ್ಯವು ಶೇ. 10 ರಷ್ಟು ಕುಸಿದಿದೆ. 2022 ರ ಅಂಕಿಅಂಶಗಳ ಪ್ರಕಾರ, ಶೇ. 19.6 ರಷ್ಟು 2ನೇ ತರಗತಿ ಮಕ್ಕಳು ಮಾತ್ರ ವ್ಯವಕಲನ ಮಾಡಲು ಸಮರ್ಥರಾಗಿದ್ದಾರೆ. ಆದರೆ, ರಾಷ್ಟ್ರೀಯ ಸಾಧನೆ ಸಮೀಕ್ಷೆ (ಎನ್‌ ಎಎಸ್)ಯು ರಾಜ್ಯದ ಕಲಿಕೆಯ ಫಲಿತಾಂಶಗಳ ಬಗ್ಗೆ ಹೆಚ್ಚು ಧನಾತ್ಮಕ ಚಿತ್ರಣವನ್ನು ತೋರಿಸುತ್ತದೆ. ಎನ್‌ಎಎಸ್‌ ದತ್ತಾಂಶದ ಪ್ರಕಾರ ಹುಡುಗರಿಗಿಂತ ಹುಡುಗಿಯರು ಉತ್ತಮ ಸಾಧನೆ ಮಾಡಿದ್ದಾರೆ.

 

8 ನೇ ತರಗತಿಯ ವಿದ್ಯಾರ್ಥಿಗಳ ಭಾಷಾ ವಿಷಯದ ಕಲಿಕೆಯ‌ ಫಲಿತಾಂಶಕ್ಕೆ ಹೋಲಿಸಿದರೆ ಸಮಾಜ ವಿಜ್ಞಾನ, ವಿಜ್ಞಾನ,ಗಣಿತದಲ್ಲಿ ಕಡಿಮೆ ಫಲಿತಾಂಶ ಪಡೆಯುತ್ತಿರುವುದನ್ನು ಈ‌ ದತ್ತಾಂಶ ಎತ್ತಿ ತೋರಿಸಿದೆ.

 

ವಿಜ್ಞಾನ ಮತ್ತು ಗಣಿತದಂತಹ ಕಡಿಮೆ ಕಲಿಕೆ ಫಲಿತಾಂಶಗಳಿರುವ ವಿಷಯಗಳಿಗೆ ವಸತಿ ಮತ್ತು ವಸತಿ ರಹಿತ, ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಮಧ್ಯೆ ಸಂಪನ್ಮೂಲ ಶಿಕ್ಷಕರ ಹಂಚಿಕೆ ವ್ಯವಸ್ಥೆ ರೂಪಿಸಬೇಕು, ಕಲಿಕೆಯ ವಿಷಯಗಳನ್ನು (ವಿಜ್ಞಾನ,ಭಾಷೆ ಇತ್ಯಾದಿ) ಕಲೆ,ಸಂಗೀತ, ನೃತ್ಯ, ನಾಟಕ, ಕ್ರೀಡೆಗಳೊಂದಿಗೆ ಸಂಯೋಜಿಸಿ ತರಗತಿಗಳನ್ನು ಹೆಚ್ಚು ಆಕರ್ಷಕವಾಗಿಸುವ ವಿಧಾನವನ್ನು ವ್ಯಾಪಕವಾಗಿ ಅನುಸರಿಸಬೇಕು ಎಂದು ಹೇಳಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಇರುವೆಡೆ ಉತ್ತಮ ಶಿಕ್ಷಕರನ್ನು ನಿಯೋಜಿಸಲು ಪ್ರೋತ್ಸಾಹ ನೀಡುವ ಉತ್ತೇಜನ ಯೋಜನೆಗಳು ಜಾರಿಯಾಗಬೇಕು ಎಂಬಿತ್ಯಾದಿ ಶಿಫಾರಸುಗಳನ್ನು ಅಧ್ಯಯನ ತಂಡ ಮಾಡಿದೆ.

 

ಕೋವಿಡ್‌ ಸಾಂಕ್ರಾಮಿಕ ಕಾಲದಲ್ಲಿ ಕಲಿಕೆಗೆ ತೊಡಕು

 

ಕೋವಿಡ್‌ ಸಾಂಕ್ರಾಮಿಕ ರೋಗದ ಕಾಲದಲ್ಲಿ ಶಾಲೆಗಳ ಮುಚ್ಚುವಿಕೆಯು ಮಕ್ಕಳ ಕಲಿಕೆಯಲ್ಲಿ ಅಡಚಣೆಯಾದ ಬಗ್ಗೆಯೂ ಅಧ್ಯಯನ ತಂಡ ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಅನುಭವ-ಅಭಿಪ್ರಾಯಗಳನ್ನು ಸಂಗ್ರಹಿಸಿದೆ.

 

ಕೋವಿಡ್‌ ಕಾಲದಲ್ಲಿ ಶಾಲೆ ಮುಚ್ಚಿದಾಗ ಕಲಿಯಲು ಸುಲಭವಾಗಿತ್ತೇ ಎನ್ನುವ ಪ್ರಶ್ನೆಗೆ “ಕೆಲವೊಮ್ಮೆ ಸುಲಭವಾಗಿತ್ತುʼ ಎಂದು ಶೇ.58.45 ಸರ್ಕಾರಿ, ಅನುದಾನಿತ ಶಾಲೆ (ಫಲಾನುಭವಿ) ಮಕ್ಕಳು, ಶೇ.೪೮ ಖಾಸಗಿ ಶಾಲೆ (ಫಲಾನುಭವಿಯೇತರ) ಮಕ್ಕಳು ಪ್ರತಿಕ್ರಿಯಿಸಿದ್ದಾರೆ. ಶೇ.28.26 ಫಲಾನುಭವಿ ಮತ್ತು ಶೇ.39.64 ಫಲಾನುಭವಿಯೇತರ ಮಕ್ಕಳ ಪ್ರತಿಕ್ರಿಯೆ “ಯಾವಾಗಲೂ ಸುಲಭವಾಗಿತ್ತುʼ ಎನ್ನುವುದಾಗಿತ್ತು.

 

ಎಂದಿಗೂ ಸುಲಭವಾಗಿರಲಿಲ್ಲ ಎಂದು ಶೇ 13.29 ಫಲಾನುಭವಿ, ಶೇ.12.36 ಫಲಾನುಭವಿಯೇತರ ಶಾಲಾ ಮಕ್ಕಳು ಹೇಳಿದ್ದಾರೆ. ಆನ್‌ ಲೈನ್‌ ಪಾಠ ಅನುಸರಿಸುವುದು ಕಷ್ಟವಾಗಿತ್ತು, ಶಿಕ್ಷಕರ ಜೊತೆ ಅನುಮಾನಗಳನ್ನು ಪರಿಹರಿಸಿಕೊಳ್ಳುವುದು ಸಾಧ್ಯವಿರಲಿಲ್ಲ, ಗ್ಯಾಜೆಟ್‌ ಗಳ ಕೊರತೆ, ನೆಟ್‌ ವರ್ಕ್‌ ಸಮಸ್ಯೆ ಮುಂತಾದವು ಕಲಿಕೆಯ ಹಿನ್ನಡೆಗೆ ವಿದ್ಯಾರ್ಥಿಗಳು ಕಾರಣಗಳನ್ನು ಮುಂದೊಡ್ಡಿದ್ದಾರೆ.

 

ಕೋವಿಡ್‌ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ದೊಡ್ಡ ನಷ್ಟವಾಗಿತ್ತು ಎಂದು ಶೇ.42.73 ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು, ಶೇ.48.39 ಖಾಸಗಿ ಶಾಲೆ ಶಿಕ್ಷಕರು ಗ್ರಹಿಸಿದ್ದಾರೆ. ಪೋಷಕರು ಮತ್ತು ಸಮುದಾಯ ಸದಸ್ಯರ ಜೊತೆ ಅಧ್ಯಯನ ತಂಡ ನಡೆಸಿದ ಗುಂಪು ಚರ್ಚೆಯು ಸಾಂಕ್ರಾಮಿಕ ಸಂದರ್ಭದಲ್ಲಿ ಎದುರಿಸಿದ ಕಲಿಕೆಯ ಹಲವು ಸವಾಲುಗಳನ್ನು ಅನಾವರಣಗೊಳಿಸಿದೆ

 

 

ಕೋವಿಡ್‌ ಸಮಯದಲ್ಲಿ ನೀಡಿದ ಆನ್ಲೈನ್‌ ತರಗತಿಗಳು, ಪಾಳಿ ಶಾಲೆಗಳು, ದೂರದರ್ಶನ ಚಾನೆಲ್‌ ಗಳ ಮೂಲಕ ನೀಡಿದ ಶಿಕ್ಷಣ ಮುಂತಾದ ಉಪಕ್ರಮಗಳು “ನೈಜ ಶಿಕ್ಷಣʼ ಅಲ್ಲ, ಹಳ್ಳಿಗಳ ʼಕೆನೆಪದರʼದ ಮಕ್ಕಳು ಮಾತ್ರ ಆನ್ಲೈನ್‌ ಶಿಕ್ಷಣದ ಪ್ರಯೋಜನ ಪಡೆದಿದ್ದಾರೆ, ಶಾಲೆಗಳು ಪುನಾರಂಭವಾದ ನಂತರ ಪಠ್ಯಕ್ರಮದ ಕಡಿತವು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿತು, ಶಾಲೆ ಮುಚ್ಚಿದ್ದರಿಂದ ಮಧ್ಯಾಹ್ನದ ಊಟ, ಹಾಲು,ಮೊಟ್ಟೆ, ಬಾಳೆ ಹಣ್ಣು ಇತ್ಯಾದಿಗಳ ಲಭ್ಯತೆಯ ಕೊರತೆಯಿಂದಾಗಿ ಮಕ್ಕಳ ಪೌಷ್ಠಿಕತೆ ಮೇಲೆ ಪರಿಣಾಮ ಬೀರಿತು, ಸಾಂಕ್ರಾಮಿಕವು ಕೆಲವು ಮಕ್ಕಳಲ್ಲಿ ಮೊಬೈಲ್‌ ಫೋನ್‌ ಚಟದಂತಹ ಕೆಟ್ಟ ಅಭ್ಯಾಸಗಳನ್ನು ಬೆಳೆಸಿದೆ ಎಂದು ಮೌಲ್ಯಮಾಪನ ವೇಳೆ ಕಂಡು ಬಂದಿದೆ.

 

 

ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಾಂಕ್ರಾಮಿಕ ಪ್ರೇರಿತ ಅಂತರವನ್ನು ಸ್ವಲ್ಪ ಮಟ್ಟಿಗೆ ಸರಿಪಡಿಸಲು “ಕಲಿಕಾ ಚೇತರಿಕೆʼʼ ಕಾರ್ಯಕ್ರಮಗಳು ಸಹಾಯ ಮಾಡಿವೆ ಎಂದು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಬಹುಪಾಲು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. “ಮಧ್ಯಾಹ್ನ ಬಿಸಿಯೂಟವನ್ನು ರಜಾ ದಿನಗಳಲ್ಲಿಯೂ ಮಕ್ಕಳಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳ ರಕ್ಷಣಾ ನೀತಿಯನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಮಾನವಾಗಿ ಜಾರಿಗೆ ತರಬೇಕು,ʼʼಎನ್ನುವ ಶಿಫಾರಸು ಮಾಡಲಾಗಿದೆ.

 

ವಿಕಲ ಚೇತನ ಮಕ್ಕಳಿಗೆ ತರಬೇತಿ ಪಡೆದ ಶಿಕ್ಷಕರಿಲ್ಲ

 

ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣವು ಸಮಗ್ರ ಶಿಕ್ಷಣದ ಪ್ರಮುಖ ಅಂಶ. ಆದರೆ, ವಿಕಲಚೇತನ ಮಕ್ಕಳಿಗೆ/ ಸಿಡಬ್ಲ್ಯೂಎಸ್‌ ಎನ್‌ ಗೆ ಬೋಧನೆ ಮಾಡವುದಕ್ಕೆ ಯಾವುದೇ ಸೂಕ್ತ ತರಬೇತಿ ಪಡೆದ ಶಿಕ್ಷಕರು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಅಧ್ಯಯನ ವರದಿ ಕಳವಳ ವ್ಯಕ್ತಪಡಿಸಿದೆ.

 

 

ವಿಕಲಚೇತನ ಮಕ್ಕಳಿಗೆ- ಸಿಡಬ್ಲ್ಯೂಎಸ್‌ಎನ್‌ ಬೋಧನೆಗಾಗಿ ಸೇವಾ ತರಬೇತಿ ಪಡೆಯಲಾಗಿದೆಯೇ ಎನ್ನುವ ಪ್ರಶ್ನೆಗೆ ಶೇ.72.80 ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು, ಶೇ82.30 ಖಾಸಗಿ ಶಾಲೆ ಶಿಕ್ಷಕರು “ಇಲ್ಲʼ ಎನ್ನುವ ಉತ್ತರ ನೀಡಿದ್ದಾರೆ. ಮಾತ್ರವಲ್ಲ, ಶೇ.30ರಷ್ಟು ಶಾಲೆಗಳಲ್ಲಿ “ಇಳಿಜಾರು” ದಾರಿಯ ವ್ಯವಸ್ಥೆ ಇಲ್ಲ.

 

ಐದನೆ ಒಂದು ಭಾಗಕ್ಕಿಂತ ಕಡಿಮೆ ಶಾಲೆಗಳು ವಿಶೇಷ ಚೇತನ ಮಕ್ಕಳ ಸ್ನೇಹಿ ಶೌಚಾಲಯಗಳನ್ನು ಹೊಂದಿವೆ. ವಿಶೇಷ ಚೇತನ ಮಕ್ಕಳು ಸಹಿತ ಶಾಲಾ ಪರಿಸರವನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಶಾಲೆಗಳಲ್ಲಿ ವಿಶೇಷ ಚೇತನ ಮಕ್ಕಳ ಸ್ನೇಹಿ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸಬೇಕಾದ ಅತ್ಯವಶ್ಯಕತೆ ಇದೆ ಎಂದು ವರದಿ ಹೇಳಿದೆ. ಎಲ್ಲ ಶಿಕ್ಷಕರಿಗೂ ವಿಶೇಷ ಅಗತ್ಯವಿರುವ ಮಕ್ಕಳಿಗೆ (ಸಿಡಬ್ಲ್ಯು ಎಸ್‌ ಎನ್‌) ಬೋಧನೆ ಮತ್ತು ಬೆಂಬಲ ನೀಡುವ ಕುರಿತು ತರಬೇತಿ ನೀಡಬೇಕು ಎಂದೂ ಶಿಫಾರಸು ಮಾಡಿದೆ.

 

ಐಟಿ ಮೂಲಸೌಕರ್ಯ ಕೊರತೆಯ ಸವಾಲು

 

ಹೆಚ್ಚಿನ ಶಾಲೆಗಳಲ್ಲಿ ಐಟಿ ಮೂಲಸೌಕರ್ಯಗಳ ಲಭ್ಯತೆಯಲ್ಲಿ ಅಂತರ ಮತ್ತು ಬಳಕೆಯಲ್ಲಿ ಅನೇಕ ಸವಾಲುಗಳು ಕಂಡುಬಂದಿವೆ. ಸರ್ಕಾರಿ, ಅನುದಾನಿತ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಅನುದಾನರಹಿತ ಶಾಲೆಗಳು ಡೆಸ್ಕ್‌ ಟಾಪ್‌, ಲ್ಯಾಪ್‌ ಟಾಪ್‌,ಪ್ರೊಜೆಕ್ಟರ್‌, ಸಮಗ್ರ ಬೋಧನಾ ಕಲಿಕಾ ಸಾಧನ, ಸ್ಮಾರ್ಟ್‌ ಕ್ಲಾಸ್‌ ನಂತಹ ಮೂಲ ಸೌಕರ್ಯಗಳನ್ನು ಹೊಂದಿವೆ.

 

 

2021-22 ರಲ್ಲಿ ಕೇವಲ ಶೇ 14.5 ಸರ್ಕಾರಿ ಶಾಲೆಗಳು ಕ್ರಿಯಾತ್ಮಕ ಪ್ರೊಜೆಕ್ಟರ್ ಗಳನ್ನು ಹೊಂದಿದ್ದವು.‌ ತಂತ್ರಜ್ಞಾನ ಸಹಾಯಕ ಕಲಿಕೆ ಕಾರ್ಯಕ್ರಮ (ಟ್ಯಾಲ್ಪ್)ವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಬಳಕೆಯ ಕಲಿಕೆಯಲ್ಲಿ ಶಿಕ್ಷಕರಿಗೆ ಸಹಾಯ ಮಾಡುತ್ತಿದೆ. ಆದಾಗ್ಯೂ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು “ದೀಕ್ಷಾ” ಮತ್ತು ಇತರ ಆನ್ಲೈನ್‌ ಸಂಪನ್ಮೂಲಗಳನ್ನು ಬೋಧನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ.

 

 

ತಾಂತ್ರಿಕ ಅಡಚಣೆಗಳು, ಉಪಕರಣಗಳ ಪುನರಾವರ್ತಿತ ವೈಫಲ್ಯಗಳು, ಇಂಟರ್ನೆಟ್‌ ಸಮಸ್ಯೆ, ಐಸಿಟಿ ಮೂಲ ಸೌಕರ್ಯದ ಕೊರತೆ, ವಿದ್ಯುತ್‌ ವ್ಯತ್ಯಯ, ತಾಂತ್ರಿಕ ಬೆಂಬಲದ ಕೊರತೆ ಮುಂತಾದ ಸಮಸ್ಯೆಗಳನ್ನು ಗ್ರಾಮೀಣ ಶಾಲೆಗಳು ಎದುರಿಸುತ್ತಿವೆ.

 

ತರಬೇತಿ ಪಡೆದ ನಂತರವೂ ಕೆಲವು ಹಿರಿಯ ಶಿಕ್ಷಕರು ತರಗತಿಗಳಲ್ಲಿ ಮಾಹಿತಿ- ಸಂವಹನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ಶಿಕ್ಷಕರು ಆಸಕ್ತಿ ಮತ್ತು ಜ್ಞಾನದ ಕೊರತೆಯಿಂದ ಹೊಸ ಬೋಧನಾ ವಿಧಾನಗಳನ್ನು ಅಳವಡಿಸುವಲ್ಲಿ ಎಡವುತ್ತಾರೆ.

 

ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಅನ್ಯ ಜವಾಬ್ದಾರಿಗಳು ಹೆಚ್ಚಿವೆ.  ತರಬೇತಿ ಪಡೆದ ಶಿಕ್ಷಕರು ಮಾನಸಿಕ ಒತ್ತಡದಲ್ಲಿದ್ದಾರೆ.  ತರಬೇತಿಯ ಫಲಿತಾಂಶಗಳನ್ನು ತರಗತಿಗಳಲ್ಲಿ ಅಳವಡಿಸಲು ಹೆಣಗಾಡುತ್ತಿದ್ದಾರೆ. ಆದ್ದರಿಂದ ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬ ಐಸಿಟಿ ತರಬೇತಿ ಪಡೆದ ಶಿಕ್ಷಕರನ್ನು ಹೊಂದಿರಬೇಕಾದ ಅಗತ್ಯವಿದೆ ಎನ್ನುವ ಅಧಿಕಾರಿಗಳ ಸಲಹೆಯನ್ನು ವರದಿ ಪ್ರಸ್ತಾಪಿಸಿದೆ.

 

ಎಲ್ಲ ಶಾಲೆಗಳಲ್ಲಿ ಐಸಿಟಿ ಕ್ಲಬ್‌ ಗಳನ್ನು ಅಭಿವೃದ್ಧಿಪಡಿಸಬೇಕು. ಕಾಯಂ ಶಿಕ್ಷಕರ ನೇಮಕ ಆಗುವವರೆಗೆ ತಾತ್ಕಾಲಿಕ/ ಅರೆಕಾಲಿಕ ಕಂಪ್ಯೂಟರ್‌ ಶಿಕ್ಷಕರನ್ನು ನೇಮಿಸಬಹುದು ಎಂದೂ ಶಿಫಾರಸು ಮಾಡಿದೆ.

 

 

21ನೇ ಶತಮಾನದ ಕೌಶಲ್ಯಗಳ ತರಬೇತಿ ಅವಶ್ಯ

 

ಸರ್ಕಾರಿ, ಅನುದಾನಿತ ಶಾಲೆಗಳ ಶೇ. ೪೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಜೀವನ ಕೌಶಲ್ಯ‌ ಅಥವಾ 21ನೇ ಶತಮಾನದ ಕೌಶಲ್ಯಗಳ ತರಬೇತಿ ಪಡೆದಿಲ್ಲ. ಇಂಥ ತರಬೇತಿ ಪಡೆದ ಶೇ.99 ಸರ್ಕಾರಿ, ಶೇ.97ರಷ್ಟು   ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಇಂಥ ತರಬೇತಿ ಉಪಯುಕ್ತವೆಂದು ಹೇಳಿದ್ದಾರೆ. ಹೊಸ ಕೌಶಲ್ಯಗಳ ಬಗ್ಗೆ ಸರ್ಕಾರಿ ಶಾಲೆ ಶೇ.71 ರಷ್ಟು ಶಿಕ್ಷಕರಿಗೆ ಅರಿವಿದೆ. ಆದರೂ, ಇವರಿಗಿಂತ ಖಾಸಗಿ ಶಾಲೆಯ ಶಿಕ್ಷಕರು ಡಿಜಿಟಲ್ ಸಾಕ್ಷರತೆ, ಹಣಕಾಸು ಜ್ಞಾನ ಮುಂತಾದ ವಿಷಯಗಳನ್ನು ಬೋಧಿಸುವಲ್ಲಿ ಹೆಚ್ಚು ತಜ್ಞತೆ ಹೊಂದಿದ್ದಾರೆ ಎಂದು ವರದಿ ಗಮನಿಸಿದೆ.

 

ಆತ್ಮವಿಶ್ವಾಸ‌ ಮಕ್ಕಳ ಸಮಗ್ರ ಅಭಿವೃದ್ಧಿಗೆ ಬಹು ಮುಖ್ಯ. ಜೀವನ ಕೌಶಲ್ಯ ತರಬೇತಿಯು ಇಂಥ ಆತ್ಮವಿಶ್ವಾಸ ಬೆಳೆಸಲು ಸಹಾಯಕ. ಆದ್ದರಿಂದ ಮಕ್ಕಳಲ್ಲಿ ಸಾಮಾಜಿಕ-ಭಾವನಾತ್ಮಕ ಕೌಶಲ್ಯಗಳನ್ನು ಬೆಳೆಸಲು ಅನುಭವಾಧಾರಿತ ಕಲಿಕೆಯ ಅಂಶವಿರುವ ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಲೈಫ್‌ ಸ್ಕಿಲ್‌ ತರಗತಿಗಳನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಾಗಿದೆ.

 

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಲ್ಲಿ ನಿಗದಿಪಡಿಸಿದ ಉದ್ದೇಶಗಳ ಈಡೇರಿಕೆ ಹಾಗೂ ಅನುಷ್ಠಾನದ ಕುರಿತ ಪ್ರತಿಕ್ರಿಯೆ ಮತ್ತು ಸವಾಲುಗಳನ್ನು ಅರಿಯುವ ಗುರಿಯೊಂದಿಗೆ ನಡೆದ ಈ ಅಧ್ಯಯನವು, ಶಿಕ್ಷಣ ಹಕ್ಕು ಕಾಯಿದೆ (ಆರ್‌ ಟಿ ಇ‌ -2009)ಯ ಸಫಲತೆಯನ್ನು ವಿಶೇಷವಾಗಿ ಶಾಲಾ ಕಲಿಕೆಯ ಅವಕಾಶಗಳು, ಶಾಲೆಯಲ್ಲಿ ದಾಖಲಾತಿಯ ಮುಂದುವರಿಕೆ ಮತ್ತು ಕುಟುಂಬದ ಆರ್ಥಿಕ ಸುಸ್ಥಿರತೆಯ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಮೌಲ್ಯಮಾಪನ ನಡೆಸಿದೆ.

Your generous support will help us remain independent and work without fear.

Latest News

Related Posts