ಬೆಂಗಳೂರು; ರಾಮನಗರದ ಅರ್ಚಕರ ಹಳ್ಳಿಯಲ್ಲಿ ಉದ್ದೇಶಿತ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಟ್ಟಡ, ಕ್ಯಾಂಪಸ್ ಮತ್ತು ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಸಲಹೆ, ಶಿಫಾರಸ್ಸನ್ನು ಬದಿಗೊತ್ತಿ 400 ಕೋಟಿ ರು.ಗಳನ್ನು ವರ್ಗಾವಣೆ ಮಾಡಿರುವುದನ್ನು ರಾಜ್ಯ ಲೆಕ್ಕಪತ್ರ ಲೆಕ್ಕ ಪರಿಶೋಧನೆ ಇಲಾಖೆಯು ತೀವ್ರವಾಗಿ ಆಕ್ಷೇಪಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿರುವ ಇಲಾಖೆಯು, 400 ಕೋಟಿ ರು ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ ಎಂದು ಅಭಿಪ್ರಾಯಿಸಿದೆ.
ಈ ವರದಿ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ ಈ ವರದಿ ಆಧರಿಸಿ ಇನ್ನೂ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.
ಈ ಲೆಕ್ಕ ಪರಿಶೋಧನೆಯ ಸಮಗ್ರ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಸರ್ಕಾರ, ವಿವಿ ಉದ್ದೇಶಕ್ಕೆ ವಿರುದ್ಧವಾದ ನಡೆ
15 ಎಕರೆ 16 ಗುಂಟೆ ಜಮೀನಿನ ಬಗ್ಗೆ ಭೂ ಮಾಲೀಕರು ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಅದು ಇತ್ಯರ್ಥವಾಗದೇ ಬಾಕಿ ಉಳಿದಿದೆ. ಹೀಗಾಗಿ ಉಳಿದ ಜಾಗ 15 ಎಕರೆ 16ಗುಂಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡುವವರೆಗೂ ಟೆಂಡರ್ ಆಹ್ವಾನಿಸಬಾರದು ಎಂದು ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ಅಭಿಪ್ರಾಯ ನೀಡಿತ್ತು.
ಆದರೂ ಸಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡಿದ್ದರು. ಇದು ಸರ್ಕಾರದ ಹಾಗೂ ವಿಶ್ವವಿದ್ಯಾಲಯದ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ಸರ್ಕಾರಿ ಲೆಕ್ಕ ಪರಿಶೋಧಕರು ಬಲವಾಗಿ ಆಕ್ಷೇಪಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಫಲಪ್ರದವಲ್ಲದ ವೆಚ್ಚ
ಅಲ್ಲದೇ ಈ ರೀತಿಯ ವೆಚ್ಚವು ಫಲಪ್ರದವಲ್ಲದ ವೆಚ್ಚವಾಗಿರುತ್ತದೆ. ಈ ರೀತಿಯ ನಡೆಯಿಂದ ಈ ಕಾಮಗಾರಿ ನಿರ್ಮಾಣ ವೆಚ್ಚವು ಹೆಚ್ಚುವರಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಲೆಕ್ಕ ಪರಿಶೋಧನೆ ವರದಿಯು ಎಚ್ಚರಿಸಿದೆ.
ಹಾಗೆಯೇ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಈ ರೀತಿಯ ತಪ್ಪು ನಿರ್ಣಯಗಳಿಂದ ದೂರ ದೃಷ್ಟಿಯಿಲ್ಲದೇ ನಿರ್ಣಯ ಕೈಗೊಳ್ಳದೇ ಇರುವುದರಿಂದ ಈ ಕಾಮಗಾರಿಯ ಪ್ರಗತಿಯು ನಿಗದಿತ ಪ್ರಕಾರ ಗುರಿ ಸಾಧಿಸುವುದಿಲ್ಲ. ಹೀಗಾಗಿ ಈ ಕಾಮಗಾರಿಯು ಯಾವುದೇ ಪ್ರಗತಿ ಕಾಣುವುದಿಲ್ಲ.
‘ಆದ್ದರಿಂದ ಈ ಬಗ್ಗೆ ವಿಶ್ವವಿದ್ಯಾಲಯವು ಈ ರೀತಿಯ ನಿಧಿ ವರ್ಗಾವಣೆ ಮಾಡುವ ಮೊದಲು ಆರ್ಥಿಕ ಶಿಸ್ತು ಪಾಲಿಸಿ, ಫಲಪ್ರದ ವೆಚ್ಚವಾಗುವ ರೀತಿಯಲ್ಲಿ ಆರ್ಥಿಕ ಠೇವಣಿ ಇಡಬೇಕಾಗುತ್ತದೆ. ಇದರಿಂದ ಒಟ್ಟಾರೆ 400 ಕೋಟಿ ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧನೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಪ್ರಕರಣದ ವಿವರ
ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್ ಹಾಗೂ ಕಾಲೇಜು ನಿರ್ಮಾಣಕ್ಕಾಗಿ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಪೈಕಿ ಒಟ್ಟಾರೆ 216 ಎಕರೆ 24 ಗುಂಟೆ ಜಮೀನನ್ನು ಕರ್ನಾಟಕ ಸರ್ಕಾರವು ನೀಡಿತ್ತು.
ಈ ಸಂಬಂಧ 2007ರ ಆಗಸ್ಟ್ 18ರಂದೇ ಅಧಿಸೂಚನೆ ಹೊರಡಿಸಿತ್ತು. ಈ ಜಮೀನಿನ ಪೈಕಿ 71 ಎಕರೆ 15 ಗುಂಟೆ ವಿಸ್ತೀರ್ಣದ ಜಮೀನನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಿತ್ತು. ಉಳಿದ 145 ಎಕರೆ -09 ಗುಂಟೆ ಜಮೀನನ್ನು ವೈದ್ಯಕೀಯ ಕಾಲೇಜು, ದಂತ ಕಾಲೇಜು, ನರ್ಸಿಂಗ್, ಫಾರ್ಮಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಹಸ್ತಾಂತರ ಮಾಡಲಾಗಿತ್ತು.
ಈ ಜಮೀನಿನಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ 333.77 ಲಕ್ಷ ರು ಅಂದಾಜು ಮೊತ್ತವನ್ನು ನಾಗಾರ್ಜುನ ಕನ್ಸ್‌ಟ್ರಕ್ಷನ್ಸ್ ಲಿಮಿಟೆಡ್‌ಗೆ 2007-08ರಂದೇ ಟೆಂಡರ್ ಆಧಾರದ ಮೇಲೆ ಕಾರ್ಯಾದೇಶ ನೀಡಿತ್ತು. ಈ ಮಧ್ಯೆ ವಿಶ್ವವಿದ್ಯಾಲಯಕ್ಕೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿಗೆ ಸಂಬಂಧಿಸಿದಂತೆ ಭೂ ಮಾಲೀಕರುಗಳು ಉಚ್ಚನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿದ್ದರು. ಹೀಗಾಗಿ ಈ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಅಲ್ಲದೇ ಕಾಮಗಾರಿಯ ಮಾರ್ಪಾಡಿತ ಅಂದಾಜು ಪಟ್ಟಿ ಪ್ರಕಾರ 580.00 ಕೋಟಿ ರು ಮೊತ್ತವಾಗಿತ್ತು. ನಂತರ ಈ ಮೊತ್ತವನ್ನು 468.41 ಕೋಟಿ ಹಾಗೂ ಹೆಚ್ಚುವರಿ ಕಾಮಗಾರಿಗಳಿಗಾಗಿ 111.59 ಕೋಟಿ ರು.ಗಳಿಗೆ ಪರಿಷ್ಕೃತಗೊಳಿಸಲಾಗಿತ್ತು. 2016ರ ಮೇ 17ರಂದೇ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಅಲ್ಲದೇ ಈ ಜಮೀನಿನ ದಾವೆಗಳು 11 ವರ್ಷಗಳಿಂದ ನಡೆಯುತ್ತಿದ್ದ ಕಾರಣ ನಾಗಾರ್ಜುನ ಕನ್ಸ್‌ಟ್ರಕ್ಷನ್ಸ್ ಲಿಮಿಟೆಡ್‌ಗೆ ನೀಡಿದ್ದ ಕಾಮಗಾರಿ ಆದೇಶವನ್ನು 2019ರ ಫೆ.28ರಂದು ರದ್ದುಪಡಿಸಿತ್ತು.
ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತಾತ್ಮಕ ಕಟ್ಟಡ ಮತ್ತು ವೈದ್ಯಕೀಯ ಕಾಲೇಜು ಒಳಗೊಂಡಂತೆ ಇತರೆ ಸೌಲಭ್ಯಗಳನ್ನುಒದಗಿಸುವ ಅಂಶಗಳಿಗೆ ಅಂದಾಜು ಪಟ್ಟಿ ಅವಕಾಶ ಕಲ್ಪಿಸಲಾಗಿತ್ತು. ಕಟ್ಟಡ ಕಾಮಗಾರಿಗಳ ಅಂದಾಜು ಪಟ್ಟಿಯನ್ನು 2021-22ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಚಾಲ್ತಿಯಲ್ಲಿರುವ ದರ ಪಟ್ಟಿಯಂತೆ 600 ಕೋಟಿಗಳಿಗೆ ಅಂದಾಜು ಪಟ್ಟಿ ತಯಾರಿಸಿತ್ತು. ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ಕೋರಿತ್ತು.
ಹಾಗೆಯೇ ಅಂದಾಜು ಮೊತ್ತ ರೂ. 600.00 ಕೋಟಿಗಳ ಯೋಜನಾ ವರದಿಯನ್ನು ತಯಾರಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜನಿಯರಿಂಗ್ ಘಟಕದ ಮುಖ್ಯ ಇಂಜಿನಿಯರ್ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಸರ್ಕಾರವು 2023ರ ಫೆ.2ರಂದು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಅನುಮೋದನೆಯ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಇಂಜಿನಿಯರ್ ಅವರು 300.00 ಕೋಟಿಯನ್ನು ಬಿಡುಗಡೆ ಮಾಡಬೇಕು ಎಂದು ಪತ್ರ ( ಸಂಖ್ಯೆ: ಆಕುಕ/ಸಂ.ವ/ಮು.ಇಂ/ಶಾಂಗ-1/22-23/0156 ದಿನಾಂಕ 02/02/23 ) ರಂದು ಪತ್ರ ಬರೆದಿದ್ದರು.
ಈ ಸಂಬಂಧ ಇದೇ ವಿಷಯದ ಬಗ್ಗೆ 2023ರ ಫೆ.13ರಂದು ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿಯೂ ಅನುಮೋದನೆ ನೀಡಲಾಗಿತ್ತು. ಇದರ ಆಧಾರದ ಮೇಲೆ 300 ಕೋಟಿ ರು ಗ.ಳನ್ನು ಚೆಕ್ ಮೂಲಕ (ಸಂಖ್ಯೆ 67230, 672302,672303, 672304) ಮೂಲಕ ಕ್ರಮವಾಗಿ 100 ಕೋಟಿ, 100 ಕೋಟಿ, 400 ಕೋಟಿ ಬಿಡುಗಡೆ ಮಾಡಿತ್ತು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಭೀಮನಕುಪ್ಪೆ ಗ್ರಾಮದ ಸರ್ವೆ ಸಂಖ್ಯೆ 73 ರಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ರೋಗ ನಿಯಂತ್ರಣ ಕೇಂದ್ರ ನಿರ್ಮಾಣ ಕಾಮಗಾರಿಗಾಗಿ ಅಂದಾಜು ರೂ. 100.00 ಕೋಟಿ ಬಿಡುಗಡೆಯಾಗಿತ್ತು. ಇದರಿಂದಾಗಿ ಒಟ್ಟಾರೆ ರೂ. 400.00 ಕೋಟಿಯನ್ನು ಮುಖ್ಯ ಅಭಿಯಂತರರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಿಡುಗಡೆ ಮಾಡಿದ್ದರು.
ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜು ಮತ್ತಿತರ ಸೌಲಭ್ಯಗಳಿಗಾಗಿ ಕಾಮಗಾರಿ ಅಂದಾಜು ಪಟ್ಟಿ ಮತ್ತು ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯಿಂದ ಪರಿಶೀಲಿಸಲಾಗಿತ್ತು.

ಸದರಿ ಶಿಫಾರಸ್ಸಿನ ಪುಟ ಸಂಖ್ಯೆ: 5 ರಲ್ಲಿ common finding on the estimate – It is Observed from the administrative approval G.O that out of 71 acres 15 guntas of land required for RGUHS campus. Only 55 acres 39 guntas are handed over & balance 15 acres 16 guntas land yet to be handed over Since the project could not be started due to land litigation & court cases from the year 2007, The department should ensure that the entire land required for this work along with the balance land of 15 acres 16 guntas is handed over to RGUHS & to the Directorate of medical education positively before floating the tender & the tender should not be invited till the land is obtained free of Iltigation & court cases ಎಂದು ಅಭಿಪ್ರಾಯ ನೀಡಿತ್ತು.
ಅಭಿಪ್ರಾಯ ಬದಿಗೊತ್ತಿ 470 ಕೋಟಿ ರು ಮೊತ್ತಕ್ಕೆ ಕಾರ್ಯಾದೇಶ
ಆದರೆ ಈ ಅಭಿಪ್ರಾಯವನ್ನು ಪರಿಗಣಿಸದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ಸ್ಟಾರ್ ಇನ್‌ಫ್ರಾಟೆರ್ , ಬೆಂಗಳೂರು ರವರಿಗೆ ಕಚೇರಿಯ ಗುತ್ತಿಗೆ ಕರಾರು ಸಂಖ್ಯೆ 343/22-23, ದಿನಾಂಕ 2023ರ ಮಾರ್ಚ್ 27ರಂದು 470,52,08,254 ರು.ಗಳಿಗೆ ಕಾರ್ಯಾದೇಶ ನೀಡಿದ್ದರು.
ಅಲ್ಲದೇ ಈ ಇಲಾಖೆಯ ಮುಖ್ಯ ಇಂಜಿನಿಯರ್ (ಪತ್ರ ಸಂಖ್ಯೆ (ಆಕುಕ/ಇಂಘ/ಮುಂ.ಇಂ/ತಾಂಸ-3/ಸಇಂ-6/23-24/648/ 2023-24) ಜುಲೈ 25ರಂದು ಬರೆದಿದ್ದ ಪತ್ರದಲ್ಲಿ ಗುತ್ತಿಗೆದಾರರಿಂದ ಸ್ಟಾರ್ ಇನ್‌ಫ್ರಾಟೆರ್ ಇವರು 2023ರ ಮಾರ್ಚ್ 28ರಂದು ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ಸ್ಥಳದ ಸುಮಾರು 200 ಎಕರೆ ಪ್ರದೇಶದಲ್ಲಿ ಗಿಡಗಂಟೆ ತೆಗೆಯುವುದು, ಉಬ್ಬು, ತಗ್ಗು ಪ್ರದೇಶಗಳನ್ನು ಸಮತಟ್ಟು ಮಾಡುವುದು ಮುಂತಾದ ಪ್ರಾಥಮಿಕ ಕೆಲಸಗಳನ್ನು ನಿರ್ವಹಿಸಿರುತ್ತಾರೆ ಎಂದು ತಿಳಿಸಿದ್ದರು.
ಆದರೆ ಕಾಂಪೌಂಡ್ ಗೋಡೆ, ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಅಡಿಪಾಯದಲ್ಲಿ ಮಣ್ಣಿನ ಅಗೆತದ ಕೆಲಸವನ್ನು ಯಂತ್ರೋಪಕರಣಗಳ ಸಹಾಯದಿಂದ ಪ್ರಾರಂಭಿಸಲಾಗಿದೆ. ಆದರೆ ಭೂ ಮಾಲೀಕರು ಭೂ ಪರಿಹಾರ ನೀಡಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲವೆಂದು ತಿಳಿಸಿ ತಕರಾರು ಎತ್ತಿದ್ದರು. ನ್ಯಾಯಾಲಯದ ಆದೇಶದಂತೆ ಭೂ ಪರಿಹಾರ ನೀಡುವವರೆಗೂ ನಮ್ಮ ಜಮೀನುಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಕಾಮಗಾರಿ ನಿಲ್ಲಿಸಿರುತ್ತಾರೆ ಎಂದು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದರು.

ಈ ಮಧ್ಯೆಯೂ 2023ರ ಮಾರ್ಚ್ 28ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಗುತ್ತಿಗೆ ಕರಾರಿನ ಅನ್ವಯ ಇದುವರೆಗೆ ಶೇ.10ರಷ್ಟು ಕಾಮಗಾರಿಯನ್ನು ಅಂದರೇ 50 ಕೋಟಿಗಳ ಅರ್ಥಿಕ ಪ್ರಗತಿ ನೀಡಬೇಕಾಗಿತ್ತು. ಆದರೆ ಕಾಮಗಾರಿಯಲ್ಲಿ ಇದುವರೆಗೂ ಯಾವುದೇ ರೀತಿಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿರುವುದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕಾಮಗಾರಿಯ್ನು ಪೂರ್ತಿಗೊಳಿಸಲು ಗುತ್ತಿಗೆದಾರರಿಗೆ ಗುತ್ತಿಗೆ ಕರಾರಿನಲ್ಲಿ ನಿಗದಿಪಡಿಸಿರುವ 36 ತಿಂಗಳುಗಳ ಅವಧಿಗಿಂತ ಹೆಚ್ಚಿನ ಕಾಲಾವಕಾಶ ನೀಡಬೇಕಾಗಿರುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ಕಾಮಗಾರಿಯ ನಿರ್ಮಾಣ ವೆಚ್ಚದಲ್ಲೂ ಸಹ ಹೆಚ್ಚುವರಿಯಾಗುವ ಸಂಭವವಿರುತ್ತದೆ ಎಂದು ಹೇಳಲಾಗಿತ್ತು. ಕಾಮಗಾರಿಯ ಸ್ಥಳದ ಜಮೀನನ್ನು ಭೌತಿಕವಾಗಿ ಹಸ್ತಾಂತರ ಮಾಡಿ ನಂತರ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದ್ದರು.
‘ವಿಶ್ವವಿದ್ಯಾಲಯವು ಈ ರೀತಿಯ ನಿಧಿ ವರ್ಗಾವಣೆ ಮಾಡುವ ಮೊದಲು ಆರ್ಥಿಕ ಶಿಸ್ತು ಪಾಲಿಸಬೇಕಿತ್ತು. ಫಲಪ್ರದ ವೆಚ್ಚವಾಗುವ ರೀತಿಯಲ್ಲಿ ಆರ್ಥಿಕ ಠೇವಣಿ ಇಡಬೇಕಾಗಿತ್ತು. ಆದರೆ ಒಟ್ಟಾರೆ 400 ಕೋಟಿ ರು.ಗಳನ್ನು ಫಲಪ್ರದವಲ್ಲದೇ ವರ್ಗಾವಣೆ ಮಾಡಲಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧನೆಯು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.









