ಬೆಂಗಳೂರು; ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂದರ್ಶನ ಮಾಡಿ ರೀಲ್ಸ್ ಮುಖಾಂತರ ಪ್ರಚಾರ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು 94.90 ಲಕ್ಷ ರು ಖರ್ಚು ಮಾಡಿದೆ. ಅಲ್ಲದೇ ರೀಲ್ಸ್ ಮಾಡುವುದರಲ್ಲಿ ಹಲವು ಕಂಪನಿಗಳು ಇದ್ದರೂ ಸಹ ಐಡಿಯಾ ಲ್ಯಾಬ್ ಗೆ ನೇರವಾಗಿ 4 (ಜಿ) ವಿನಾಯಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ 35 ಕೋಟಿಗೂ ಹೆಚ್ಚು ಖರ್ಚು ಮಾಡಿರುವ ಸರ್ಕಾರವು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂದರ್ಶನಗಳ ರೀಲ್ಸ್‌ಗಳಿಗೆ 94 ಲಕ್ಷ ಖರ್ಚು ಮಾಡಿರುವುದು ಮುನ್ನೆಲೆಗೆ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’, ಆರ್‍ಟಿಐ ಅಡಿಯಲ್ಲಿ ಕಡತವನ್ನು ಪಡೆದುಕೊಂಡಿದೆ.
20 ಸಕೆಂಡ್‌ನಿಂದ 60 ಸೆಕೆಂಡ್ ಅವಧಿಗೆ ತಿಂಗಳಿಗೆ 60 ರೀಲ್ಸ್ ವಿಡಿಯೋ ತುಣುಕುಗಳನ್ನು ನಿರ್ಮಾಣ ಮಾಡಲು ಟೆಂಡರ್ ಆಹ್ವಾನಿಸಿಲ್ಲ. ಮತ್ತು ಟೆಂಡರ್ ಆಹ್ವಾನಿಸಲು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್ ಅವರೂ ಸಹ ಒಲವು ತೋರಿಲ್ಲ. ಬದಲಿಗೆ ಇದೊಂದು ಸೃಜನಾತ್ಮಕ ಕೆಲಸ. ಹೀಗಾಗಿ ಟೆಂಡರ್ ಕರೆಯುವುದು ಕಷ್ಟಕರ. ಹೀಗಾಗಿ 4 ಜಿ ವಿನಾಯಿತಿಯನ್ನು ಕೊಡಬಹುದು ಎಂದು ಕಡತದಲ್ಲಿ ಒಕ್ಕಣೆ ಹಾಕಿರುವುದು ತಿಳಿದು ಬಂದಿದೆ.
ಗ್ಯಾರಂಟಿ ರೀಲ್ಸ್ ಮಾಡಿಕೊಡಲು ಐಡಿಯಾ ಲ್ಯಾಬ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

ಈ ಪ್ರಸ್ತಾವ ಆಧರಿಸಿ 4 ಜಿ ವಿನಾಯಿತಿಯನ್ನೂ ಇಲಾಖೆ ಕೋರಿತ್ತು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

ಪ್ರಸ್ತಾವಿತ ಸೇವೆಯನ್ನು ಐಡಿಯಾ ಲ್ಯಾಬ್ ಇವರಿಂದಲೇ ಏಕೆ ಪಡೆಯಲು ಉದ್ದೇಶಿಸಲಾಗಿದೆ, ಇಂತಹ ಸೇವೆಯನ್ನು ಒದಗಿಸಲು ಯಾವುದೇ ಸಂಸ್ಥೆಗಳು ಲಭ್ಯವಿಲ್ಲವೇ, ಪ್ರಸ್ತಾಪಿತ 94.40 ಲಕ್ಷ ರು.ಗಳ ವೆಚ್ಚವು ಸಮಂಜಸವಾಗಿದೆ ಎಂಬುದನ್ನು ಹೇಗೆ ದೃಢಪಡಿಸಿಕೊಳ್ಳಲಾಗಿದೆ, ಟೆಂಡರ್ ಪ್ರಕ್ರಿಯೆ ಮೂಲಕ ಪ್ರಸ್ತಾವಿತ ಸೇವೆಯನ್ನು ಪಡೆಯಲು ಇರುವ ತೊಂದರೆಗಳೇನು, ಪ್ರಸ್ತಾಪಿತ 4 ಜಿ ವಿನಾಯಿತಿಯಿಂದ ಆಗುವಂತಹ ಪ್ರಯೋಜನೆಗಳಾದರೂ ಏನು ಎಂದು ಆರ್ಥಿಕ ಇಲಾಖೆಯು, ಸ್ಷಷ್ಪತೆ ಬಯಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ವಿಶೇಷವೆಂದರೇ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ತಮ್ಮ ಹಂತದಲ್ಲೇ ಶಿಫಾರಸ್ಸು ಮಾಡಿದ್ದರು. ಇದೊಂದು ಸೃಜನಾತ್ಮಕ ಕೆಲಸ. ಹೀಗಾಗಿ ಟೆಂಡರ್ ಕರೆಯಲು ಕಷ್ಟಕರವಾಗಬಹುದು. ಹೀಗಾಗಿ 4 ಜಿ ವಿನಾಯಿತಿಯನ್ನು ನೀಡಬಹುದು ಎಂದು ಷರಾ ಬರೆದಿದ್ದರು. ಅಲ್ಲದೇ ಮುಖ್ಯಮಂತ್ರಿಗಳು ಇದನ್ನು ಅನುಮೋದಿಸಬಹುದು ಎಂದು ಅಭಿಪ್ರಾಯಿಸಿದ್ದರು. ಅತೀಕ್ ಅವರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದನ್ನು ಅನುಮೋದಿಸಿದ್ದರು.
ವಾಸ್ತವದಲ್ಲಿ ಈ ಕಾರ್ಯಕ್ಕೆ ಕ್ರಿಯಾ ಯೋಜನೆಯಲ್ಲಿ ಯಾವುದೇ ಅನುದಾನವೇ ಇರಲಿಲ್ಲ.

ಬದಲಿಗೆ 2023-24ನೇ ಸಾಲಿನ ಆಯವ್ಯಯ (ಲೆಕ್ಕ ಶೀರ್ಷಿಕೆ; 2220-60-106-0-05) ಅಡಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ, ಮಾಹಿತಿ ಮತ್ತು ಸಂವಹನ ಅಡಿಯಲ್ಲಿ ಒಟ್ಟು 5000 ಲಕ್ಷ ರು ಅನುದಾನ ಒದಗಿಸಿತ್ತು. ಈ ಅನುದಾನದಿಂದಲೇ ಗ್ಯಾರಂಟಿ ರೀಲ್ಸ್ ನಿರ್ಮಾಣಕ್ಕೆ 1 ಕೋಟಿ ರು ಭರಿಸಬಹುದು ಎಂದು ಇಲಾಖೆಯು ಸಮರ್ಥಿಸಿಕೊಂಡಿತ್ತು.

ತಿಂಗಳಿಗೆ 60 ರೀಲ್ಸ್
ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವದ ಪ್ರಕಾರ ಐಡಿಯಾ ಲ್ಯಾಬ್ ಕಂಪನಿಯು ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಂದರ್ಶನವನ್ನು ಮಾಡಲಿದೆ. ಈ ಕಂಪನಿಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ತಾಂತ್ರಿಕ ಸಿಬ್ಬಂದಿ ಹೊಂದಿದೆ. ತಿಂಗಳಿಗೆ 60 ಸೆಕೆಂಡ್ ಅವಧಿಯ 60 ರೀಲ್ಸ್‌ಗಳನ್ನು ನಿರ್ಮಾಣ ಮಾಡಿಕೊಡಲಿದೆ. ತಿಂಗಳಿಗೆ 11.80 ಲಕ್ಷ ರು ಆಗಲಿದೆ. ಒಟ್ಟು 8 ತಿಂಗಳ ಅವಧಿಗೆ 94.40 ಲಕ್ಷ ರು ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು.
ಈ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು. ಈ ಕಡತದಲ್ಲಿ -ಸರ್ಕಾರದ 5 ಖಾತರಿಗಳು ಮತ್ತು ಸಕಾರ್ಶರದ ಮುಂದಿನ ಯೋಜನೆಗಳಿಗೆ ಸಂಬಂಧಿಸಿದ ಉಪ ಕ್ರಮಗಳಿಗೆ ಪ್ರಚಾರ ಪ್ರಸ್ತಾವನೆಯನ್ನು ಸಾಮಾಜಿಕ ಮಾಧ್ಯಮ ಮತ್ತು ಟಿ ವಿ ಫ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲು ವಿಡಿಯೋ ಕ್ರಿಯೇಟಿವ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು 94.40 ಲಕ್ಷ ರು. ವೆಚ್ಚದಲ್ಲಿ ಐಡಿಯಾ ಲ್ಯಾಬ್ ಸೇವೆಗಳನ್ನು ನೇಮಿಸಿಕೊಳ್ಳಲು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಗೆ 4 ಜಿ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರು ಅನುಮೋದಿಸಬಹುದು ಎಂದು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್ ಅವರು ಶಿಫಾರಸ್ಸು ಮಾಡಿದ್ದರು.
ಈ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅನುಮೋದಿಸಿದ್ದರು.

ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಏದುಸಿರು ಬಿಟ್ಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಇದಕ್ಕಾಗಿ 60 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸಾಲ ಮಾಡಿತ್ತು. ಇದನ್ನು ಸಿಎಜಿಯು ಬಲವಾಗಿ ಆಕ್ಷೇಪಿಸಿದ್ದನ್ನು ಸ್ಮರಿಸಬಹುದು.





