ಬೆಂಗಳೂರು; ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ವ್ಯಾಸಂಗದ ವೇಳೆ ವಿದ್ಯಾರ್ಥಿಗಳು ಪಡೆಯುವ ಕೋರ್ಸ್ ತರಬೇತಿ ಹಾಗೂ ನಂತರ ಅವರಿಗೆ ಲಭ್ಯವಾಗುವ ಉದ್ಯೋಗಗಳು ಒಂದಕ್ಕೊಂದು ಪೂರಕವಾಗಿರುವ ಪ್ರಮಾಣ ಶೇಕಡಾ 50ಕ್ಕಿಂತ ಕಡಿಮೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿರುವ ಅಧ್ಯಯನವು ಬಹಿರಂಗಪಡಿಸಿದೆ.
ರಾಜ್ಯದಲ್ಲಿ ಐಟಿಐ ಪದವೀಧರರಿಗೆ ನೀಡಿದ ವೃತ್ತಿಪರ ತಾಂತ್ರಿಕ ಶಿಕ್ಷಣ ಮತ್ತು ತರಬೇತಿಯು ಉದ್ಯೋಗದ ಮೇಲೆ ಬೀರಿದ ಪರಿಣಾಮಗಳ ಕುರಿತ ಟ್ರೇಸರ್ ಅಧ್ಯಯನ ವರದಿಯನ್ನು ಮೌಲ್ಯಮಾಪನ ಪ್ರಾಧಿಕಾರವು 2025ರ ಜುಲೈನಲ್ಲಿ ಸಲ್ಲಿಸಿದೆ.
ಕೌಶಲಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳೊಂದಿಗೆ ವರದಿಯಲ್ಲಿನ ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ವರದಿಯ ಪ್ರಕಾರ ಕೋರ್ಸ್ ತರಬೇತಿ ಹಾಗೂ ಉದ್ಯೋಗದ ಪ್ರಸ್ತುತತೆಯು ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ಅಧಿಕವಾಗಿದೆ. ಇದು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 73.33%ರಷ್ಟಿದೆ. ಆದರೆ, ರಾಜ್ಯದಲ್ಲಿನ ಒಟ್ಟಾರೆ ತರಬೇತಿ ಪ್ರಸ್ತುತತೆಯ ಪ್ರಮಾಣವು ಶೇಕಡಾ 50ಕ್ಕಿಂತಲೂ ಕಡಿಮೆ ಇರುವುದು ಕೋರ್ಸ್-ತರಬೇತಿಯನ್ನು ಪರಿಷ್ಕರಿಸಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ ಎಂದು ಅಧ್ಯಯನ ನಡೆಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಉದ್ಯೋಗಾಕಾಂಕ್ಷಿಗಳು ಸಾಫ್ಟ್ ವೇರ್ ಕೌಶಲಗಳನ್ನು ಹೊಂದಿರಬೇಕೆಂಬುದು ಉದ್ದಿಮೆಗಳ ನಿರೀಕ್ಷೆಯಾಗಿರುತ್ತದೆ. ಆದರೆ, ಐಟಿಐ ನಲ್ಲಿ ಕಲಿತ ಶೇಕಡಾ 52ರಷ್ಟು ಅಭ್ಯರ್ಥಿಗಳು ತಮಗೆ ಸಾಫ್ಟ್ ವೇರ್/ಕೌಶಲ್ಯದ ಬಗ್ಗೆ ಅಷ್ಟಾಗಿ ಏನೂ ಜ್ಞಾನವಿರಲಿಲ್ಲ ಎಂದಿದ್ದಾರೆ. ಈ ಅಂಶವು ಅಭ್ಯರ್ಥಿಗಳ ಉದ್ಯೋಗಾವಕಾಶ ಸಾಧ್ಯತೆಯನ್ನು ಮಸುಕಾಗಿಸುತ್ತದೆ ಎಂಬುದು ಮೌಲ್ಯಮಾಪದ ಅಧ್ಯಯನದಿಂದ ಕಂಡುಬಂದಿದೆ.
ಐಟಿಐ ನಂತರ ಉದ್ಯೋಗ ಪಡೆದವರಲ್ಲಿ ಶೇಕಡಾ 57.56%ರಷ್ಟು ಅಭ್ಯರ್ಥಿಗಳು ಕೋರ್ಸ್ ಮುಗಿಸಿದ ಮೂರು ತಿಂಗಳೊಳಗೆ ಮೊದಲ ಉದ್ಯೋಗ ಪಡೆದಿದ್ದಾರೆ. ಹೀಗೆ, ಮೂರು ತಿಂಗಳೊಳಗೆ ಉದ್ಯೋಗ ಪಡೆದವರ ಪ್ರಮಾಣವು ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲಿ ಜಾಸ್ತಿ ಇದೆ.
ಹುಬ್ಬಳ್ಳಿ ವಿಭಾಗದಲ್ಲಿ ಶೇಕಡಾ 21.36ರಷ್ಟು ಅಭ್ಯರ್ಥಿಗಳು ಹಾಗೂ ಕಲಬುರಗಿ ವಿಭಾಗದಲ್ಲಿ ಶೇಕಡಾ 16.29ರಷ್ಟು ಅಭ್ಯರ್ಥಿಗಳು ಕೋರ್ಸ್ ನಂತರದ 6ರಿಂದ 12 ತಿಂಗಳ ಅವಧಿಯಲ್ಲಿ ಉದ್ಯೋಗಸ್ಥರಾಗಿದ್ದಾರೆ. ಉದ್ಯೋಗಕ್ಕಾಗಿ ಒಂದೂವರೆಯಿಂದ ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಕಾಯಬೇಕಾದವರ ಸಂಖ್ಯೆ ಶೇಕಡಾ 3ಕ್ಕಿಂತ ಕಡಿಮೆ ಇದೆ. ಅದೇ ರೀತಿ ಕಂಪನಿ ಮೂಲಕ ನೇರ ಆಯ್ಕೆಯಾದ ಉದ್ಯೋಗಿಗಳ ಸಂಖ್ಯೆಯೂ ಸಮಾಧಾನಕರವಾಗಿಲ್ಲ ಎಂಬುದು ಅಧ್ಯಯನ ವರದಿಯಲ್ಲಿ ದಾಖಲಾಗಿದೆ.

ತಾತ್ಕಾಲಿಕ ಸಂಬಳದ ಉದ್ಯೋಗ
ಐಟಿಐ ತರಬೇತಿ ನಂತರ ಶೇಕಡಾ 32.53ರಷ್ಟು ಪುರುಷ ಅಭ್ಯರ್ಥಿಗಳು ತಾತ್ಕಾಲಿಕ ಸಂಬಳದ ಉದ್ಯೋಗದಲ್ಲಿದ್ದರೆ, ಗ್ರಾಮೀಣ ಪ್ರದೇಶದ 11..46%ರಷ್ಟು ಹಾಗೂ ನಗರ ಪ್ರದೇಶದ 9.84ರಷ್ಟು ಐಟಿಐ ಕೋರ್ಸ್ ಮುಗಿದ ನಂತರ ಸ್ವಉದ್ಯೋಗ ನಿರತರಾಗಿರುವುದು ಕಂಡುಬಂದಿದೆ.

ಗ್ರಾಮೀಣ ವ್ಯಾಪ್ತಿಯಲ್ಲಿ ಐಟಿಐ ಮುಗಿಸಿ ಸ್ವಉದ್ಯೋಗದಲ್ಲಿ ತೊಡಗಿರುವವರ ಮಾಸಿಕ ಸರಾಸರಿ ಸಂಪಾದನೆ ರೂ 22,133.81 ಆಗಿದ್ದರೆ, ನಗರ ವ್ಯಾಪ್ತಿಯ ಲ್ಲಿ ಐಟಿಐ ಮುಗಿಸಿದ ಅಭ್ಯರ್ಥಿಗಳ ಮಾಸಿಕ ಸರಾಸರಿ ಆದಾಯ ರೂ 18,588 ಆಗಿದೆ ಎಂಬ ಅಂಶವನ್ನು ತಜ್ಞರು ದಾಖಲಿಸಿದ್ದಾರೆ.

ನಿರುದ್ಯೋಗಿಗಳಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಮದುವೆ, ದೂರ ಸ್ಥಳಕ್ಕೆ ಕಳಿಸಲು ಪೋಷಕರು ಅನುಮತಿಸದಿರುವುದು ಇದಕ್ಕೆ ಮುಖ್ಯ ಕಾರಣಗಳಾಗಿವೆ ಎಂಬ ಬಗ್ಗೆ ತಜ್ಞರು ಗಮನಸೆಳೆದಿದ್ದಾರೆ.
ಕೋವಿಡ್ ವೇಳೆ ನಿರುದ್ಯೋಗ ಬವಣೆ
ಕೋವಿಡ್ ಸಾಂಕ್ರಾಮಿಕ ಸಂದರ್ಭವು ಐಟಿಐ ಮುಗಿಸಿದ್ದ ಉದ್ಯೋಗಕಾಂಕ್ಷಿಗಳಿಗೆ ಕಠಿಣ ಸಮಯವಾಗಿತ್ತು. ಮೂಲಸೌಕರ್ಯ ವ್ಯವಸ್ಥೆಯಲ್ಲಿ ಹಿಂದುಳಿದಿರುವ ಕಲಬುರಗಿ ವಿಭಾಗದಲ್ಲಿ ಕೋವಿಡ್ ನಂತರದ ಸನ್ನಿವೇಶದಲ್ಲಿ ಶೇಕಡಾ 60ರಷ್ಟು ಅಭ್ಯರ್ಥಿಗಳು ನಿರುದ್ಯೋಗದ ಬವಣೆಗೆ ಗುರಿಯಾಗಿದ್ದರು. ಈ ಪೈಕಿ, ಪುರುಷ ಅಭ್ಯರ್ಥಿಗಳ ಪ್ರಮಾಣ ಶೇಕಡಾ 46ರಷ್ಟಿದ್ದರೆ, ಮಹಿಳಾ ಅಭ್ಯರ್ಥಿಗಳ ಪ್ರಮಾಣ ಗಣನೀಯವಾಗಿ ಅಧಿಕವಿತ್ತು ಎಂಬುದನ್ನು ವರದಿ ದಾಖಲಿಸಿದೆ.
ಉನ್ನತ ವ್ಯಾಸಂಗ
ಐಟಿಐ ಪೂರ್ಣಗೊಳಿಸಿದ ನಂತರ ಮುಂದಿನ ಹಂತದ ವ್ಯಾಸಂಗಕ್ಕೆ (ಪದವಿ ಅಥವಾ ಡಿಪ್ಲೊಮಾ) ಹೋಗುವವರ ಬಗ್ಗೆಯೂ ಅಧ್ಯಯನವು ಗಮನಹರಿಸಿದೆ. ಆ ಪ್ರಕಾರ, ಗ್ರಾಮೀಣ ಪ್ರದೇಶದ 15.44% ಅಭ್ಯರ್ಥಿಗಳು, ನಗರ ಪ್ರದೇಶದಲ್ಲಿ ಐಟಿಐ ಓದಿದ 18.48% ಅಭ್ಯರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೋಗಿರುವುದು ಕಂಡುಬಂದಿದೆ. ಕಲಬುರಗಿ ವಿಭಾಗದ ಪ್ರಾಜೆಕ್ಟ್ ಐಟಿಐ ಗಳಿಂದ ತೇರ್ಗಡೆಯಾದವರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗಿರುವುದು ಗಮನಾರ್ಹ ಅಂಶವಾಗಿದೆ.

ಶಿಷ್ಯವೃತ್ತಿ
ಉದ್ಯೋಗಕ್ಕೆ ಸೇರುವ ಮೊದಲು/ಕೆಲಸದ ಸಮಯದಲ್ಲಿ/ ನಂತರ ಶಿಷ್ಯವೃತ್ತಿ ಪಡೆದ ಅಭ್ಯರ್ಥಿಗಳ ಸಂಖ್ಯೆ ಶೇಕಡಾ 18.45ರಷ್ಟು ಮಾತ್ರ. ಇವರಲ್ಲಿ ಶೇಕಡಾ 80ರಷ್ಟು ವಿದ್ಯಾರ್ಥಿಗಳಿಗೆ ಮಾಸಿಕ ರೂ 10,000ಕ್ಕಿಂತ ಹೆಚ್ಚು ಶಿಷ್ಯವೇತನ ನೀಡಲಾಗಿದೆ ಎಂಬುದು ವರದಿಯಲ್ಲಿ ವ್ಯಕ್ತವಾಗಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ಡಯಟ್) ಲಭ್ಯವಾಗಿಸಿದ ಅಂಕಿಅಂಶಗಳ ಪ್ರಕಾರ, 2020-21ರಲ್ಲಿ ಉತ್ತೀರ್ಣರಾದವರ ಪೈಕಿ 6658 ವಿದ್ಯಾರ್ಥಿಗಳು ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿವಿಧ ಟ್ರೇಡ್/ಕೋರ್ಸ್ ಗಳ ಶಿಷ್ಯವೃತ್ತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಉದ್ಯೋಗ ನಿಯೋಜನೆ ಕೋಶದ ಕೊರತೆ
ತಾವು ತರಬೇತಿ ಪಡೆದ ಐಟಿಐ ಕಾಲೇಜಿನಲ್ಲಿ ಉದ್ಯೋಗ ನಿಯೋಜನೆ ಕೋಶದ ಸೌಲಭ್ಯವಿತ್ತು ಎಂದವರ ಸಂಖ್ಯೆ ಶೇಕಡಾ 35ಕ್ಕಿಂತ ಕಡಿಮೆ. ಬೆಂಗಳೂರು ಮತ್ತು ಮೈಸೂರು ವಿಭಾಗದ ಯೋಜನಾ ಐಟಿಐಗಳು ಹುಬ್ಬಳ್ಳಿ, ಕಲಬುರಗಿ ವಿಭಾಗಗಳಿಗಿಂತ ಹೆಚ್ಚು ಉದ್ಯೋಗಕೋಶಗಳನ್ನು ಹೊಂದಿರುವುದು ಕಂಡುಬಂದಿದೆ. ಉದ್ಯೋಗ ನಿಯೋಜನೆ ಕೋಶದ ಮೂಲಕ ಮೊದಲ ಉದ್ಯೋಗ ಪಡೆದ ಅಭ್ಯರ್ಥಿಗಳ ಪ್ರಮಾಣ ಶೇಕಡಾ 6.96 ಮಾತ್ರ ಆಗಿದೆ.

ಶೇಕಡಾ 49ರಷ್ಟು ಅಭ್ಯರ್ಥಿಗಳು ಸ್ನೇಹಿತರು, ವೈಯಕ್ತಿಕ ಸಂಪರ್ಕ ಇತ್ಯಾದಿಗಳ ಮೂಲಕ ಉದ್ಯೋಗ ಪಡೆದಿದ್ದಾರೆ. ಶೇಕಡಾ 33ರಷ್ಟು ಅಭ್ಯರ್ಥಿಗಳು ಪೋಷಕರು, ಸಂಬಂಧಿಕರು ಹೀಗೆ ಕುಟುಂಬ ಸಂಪರ್ಕದಿಂದ ಕಂಡುಕೊಂಡಿದ್ದಾರೆ.
ಕಾಲೇಜುಗಳ ಉದ್ಯೋಗಕೋಶ ನೀಡುವ ಉದ್ಯೋಗ ಪ್ರಸ್ತಾಪಗಳನ್ನು ಅಭ್ಯರ್ಥಿಗಳು ವಿವಿಧ ಕಾರಣಗಳಿಗಾಗಿ ಅಭ್ಯರ್ಥಿಗಳು ತಿರಸ್ಕರಿಸುತ್ತಾರೆ. ಉದ್ಯೋಗ ಸ್ಥಳದಲ್ಲಿ ಸುಲಭ ದರದಲ್ಲಿ ಆಹಾರ ಹಾಗೂ ವಸತಿಯ ಅಲಭ್ಯತೆ, ಪ್ರಸ್ತಾಪಿತ ಉದ್ಯೋಗವು ತಮ್ಮ ವಾಸ ಸ್ಥಳದಿಂದ ಸಾಕಷ್ಟು ದೂರದಲ್ಲಿರುವುದು, ಅಭ್ಯರ್ಥಿಗಳು ಸರ್ಕಾರಿ ನೌಕರಿಗೆ ಸೇರಲು ಬಯಸುವುದು, ಹೆಸರಾಂತ ಕಂಪನಿಗಳನ್ನು ಮಾತ್ರ ಬಯಸುವುದು, ಹೊಸ ಉದ್ಯೋಗದಾತರ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಿದ್ದಾರೆ.

ಕೆಲಸದ ಸ್ಥಳವು ದೂರವಿದ್ದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯಂತಹ ಕಾರಣದಿಂದಾಗಿ ಪೋಷಕರ ಅಸಮ್ಮತಿ, ಉದ್ಯೋಗ ಸ್ಥಳಗಳ ಅಹಿತಕರ ಹವಾಮಾನ, ಕಡಿಮೆ ಸಂಬಳ, ಕಂಪನಿಗಳು ಕಾಯಂ ಉದ್ಯೋಗ ನೀಡದಿರುವುದು, ಯಾವುದೇ ಸೌಲಭ್ಯ ಹಾಗೂ ಪ್ರೋತ್ಸಾಹಗಳಿಲ್ಲದ ಗುತ್ತಿಗೆ- ಆಧಾರಿತ ಉದ್ಯೋಗಗಳು ಅಭ್ಯರ್ಥಿಗಳು ಉದ್ಯೋಗ ಪ್ರಸ್ತಾಪಗಳನ್ನು ನಿರಾಕರಿಸಲು ಮುಖ್ಯ ಕಾರಣಗಳೆಂದು ವಿವರಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳಿಂದ ನಿರಾಕರಣೆ
ಐಟಿಐ ಮಹಿಳಾಯೇತರ ಕ್ಷೇತ್ರವೆಂಬ ಗ್ರಹಿಕೆ, ಸಮಾಜದಲ್ಲಿನ ಲಿಂಗಾಧಾರಿತ ಮನೋಧೋರಣೆಗಳ ಜೊತೆಗೆ ಪೋಷಕರು ಸಹ ಇದೇ ಅಭಿಪ್ರಾಯ ಹೊಂದಿರುವುದು, ಉದ್ಯೋಗ ಸ್ಥಳವು ದೂರದಲ್ಲಿರುವುದು, ರಾತ್ರಿ ಪಾಳಿಯ ಕೆಲಸಕ್ಕೆ ಅನುಮತಿಸಲು ಪೋಷಕರ ನಿರಾಕರಣೆ, ರಾತ್ರಿ ಪಾಳಿಯಲ್ಲಿ ಕಾರ್ಖಾನೆಯಿಂದ ಮನೆಗೆ ಕ್ಯಾಬ್ ಸೌಲಭ್ಯ ಇಲ್ಲದಿರುವುದು ಮಹಿಳಾ ಅಭ್ಯರ್ಥಿಗಳು ಉದ್ಯೋಗ ಪ್ರಸ್ತಾಪಗಳನ್ನು ನಿರಾಕರಿಸಲು ಕಾರಣಗಳೆಂಬುದು ತಿಳಿದುಬಂದಿದೆ.
ಗ್ರಾಮೀಣ ಪ್ರದೇಶದ ಐಟಿಐ ಕಾಲೇಜುಗಳಲ್ಲಿ ನಡೆಸಿದ ಸಂದರ್ಶನಗಳ ಸಂಖ್ಯೆ ಸರಾಸರಿ 2.74 ಆಗಿದ್ದರೆ, ನಗರ ಪ್ರದೇಶಗಳಲ್ಲಿ ಇದು 2.71 ಆಗಿದೆ. ಮೈಸೂರು ವಿಭಾಗದಲ್ಲಿ ಹೆಚ್ಚು, ಅಂದರೆ, ಇದು ಸರಾಸರಿ 3.19 ಇದ್ದರೆ, ಕುಲಬರಗಿ ವಿಭಾಗದಲ್ಲಿ ಸರಾಸರಿ 2.77 ಆಗಿದೆ.





