ಬೆಂಗಳೂರು; ಕರ್ನಾಟಕ ನೀರಾವರಿ ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲೇ ಕಳೆದ 5 ವರ್ಷಗಳ ಹಿಂದೆ ದುರುಪಯೋಗವಾಗಿದ್ದ ಒಟ್ಟಾರೆ 28.35 ಕೋಟಿ ರುಪಾಯಿನಲ್ಲಿ ಕೇವಲ 82 ಲಕ್ಷ ರು ಮಾತ್ರ ವಸೂಲಾಗಿರುವುದು ಇದೀಗ ಬಹಿರಂಗವಾಗಿದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದ ನಾಲ್ಕು ನೀರಾವರಿ ನಿಗಮಗಳಲ್ಲಿ 874 ಕೋಟಿಯಷ್ಟು ಅಕ್ರಮವಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳವು ಪತ್ತೆ ಹಚ್ಚಿತ್ತು. ಈ ಪೈಕಿ ಹಿಪ್ಪರಗಿ ಬ್ಯಾರೇಜ್‌ವೊಂದರಲ್ಲೇ ನಕಲಿ ದಾಖಲೆ ಸೃಷ್ಟಿಸಿ 28.35 ಕೋಟಿ ರು ದುರುಪಯೋಗಪಡಿಸಿಕೊಳ್ಳಲಾಗಿತ್ತು ಎಂದು ವಿಚಕ್ಷಣಾ ದಳವು ಪತ್ತೆ ಹಚ್ಚಿತ್ತು.
ಈ 28.35 ಕೋಟಿ ರು ದುರುಪಯೋಗ ಮೊತ್ತದ ಪೈಕಿ ಗುತ್ತಿಗೆದಾರರೊಬ್ಬರಿಂದ ವಸೂಲು ಮಾಡಿದ್ದು ಕೇವಲ 82 ಲಕ್ಷ ರುಪಾಯಿ ಮಾತ್ರ ಎಂದು ಆರ್‍ಟಿಐ ದಾಖಲೆಗಳಿಂದ ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಂಜುನಾಥ್ ಹಿರೇಚೌಟಿ ಅವರು ಆರ್‍ಟಿಐ ಅಡಿಯಲ್ಲಿ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಕಳೆದ 6 ವರ್ಷಗಳಲ್ಲಿ ದುರುಪಯೋಗವಾಗಿದೆ ಎಂದು ಹೇಳಿರುವ 28.35 ಕೋಟಿ ರು ಪೈಕಿ ಪ್ರಾಥಮಿಕ ತನಿಖಾ ವರದಿಯಲ್ಲಿ 16.61 ಕೋಟಿ ಮಾತ್ರ ಅವ್ಯವಹಾರವಾಗಿದೆ ಎಂದು ಗುರುತಿಸಿತ್ತು. ಡಿ ಕೆ ಶಿವಕುಮಾರ್ ಅವರು ಜಲ ಸಂಪನ್ಮೂಲ ಸಚಿವರಾಗಿ 2 ವರ್ಷ ಪೂರ್ಣಗೊಳಿಸಿದ್ದರೂ ಸಹ ಕೇವಲ 82 ಲಕ್ಷ ಮಾತ್ರ ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ವಸೂಲು ಮಾಡಲು ಬಿಗಿಯಾದ ಕ್ರಮ ವಹಿಸಿಲ್ಲ.
ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಒಟ್ಟಾರೆಯಾಗಿ ದುರುಪಯೋಗಗೊಂಡ ಸರ್ಕಾರದ ಹಣ 28,35,20,786 ರು.ಗಳಾಗಿದ್ದು ಇದರಲ್ಲಿ ಪ್ರಾಥಮಿಕ ತನಿಖಾ ವರದಿಯಲ್ಲಿ 16,61,90,101 ರು. ಗಳ ಅವ್ಯವಹಾರವನ್ನು ಗುರುತಿಸಲಾಗಿದೆ. ಇದಕ್ಕೆ ನಿಗದಮ ಅಧಿಕಾರಿ, ನೌಕರರು ಹಾಗೂ ಗುತ್ತಿಗೆದಾರರು ಜವಾಬ್ದಾರರೆಂದು ತನಿಖಾ ವರದಿಯಲ್ಲಿ ಕಂಡುಬಂದಿರುತ್ತದೆ ಎಂದು ಕರ್ನಾಟಕ ಸರ್ಕಾರದ ನಡವಳಿಗಳಲ್ಲೇ ದಾಖಲಾಗಿತ್ತು.

ಹಿಪ್ಪರಗಿ ಬ್ಯಾರೇಜ್, ತುಂಗಾಭದ್ರಾ ಎಡದಂಡೆ ಕಾಲುವೆ ವಿಭಾಗ, ಕಲ್ಬುರ್ಗಿ ವಲಯ, ಸಿರವಾರ (ಮುನಿರಾಬಾದ್) ಕಚೇರಿಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಸಂಬಂಧ ಈಗಾಗಲೇ 26ಕ್ಕೂ ಹೆಚ್ಚು ಅಧಿಕಾರಿ ನೌಕರರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿತ್ತು.
ಅಲ್ಲದೇ 8 ಮಂದಿ ಅಧಿಕಾರಿ ನೌಕರರು, ಇಬ್ಬರು ಗುತ್ತಿಗೆದಾರರಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದರ ಜೊತೆಗೆ ಇವರುಗಳ ಹಾಗೂ ಇವರ ವಾರಸುದಾರರ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಪರಭಾರೆ ಮಾಡದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು.
ಹಾಗೆಯೇ ನೋಂದಣಿ ಮುದ್ರಾಂಕ ಇಲಾಖೆಗೆ ಹಾಗೂ ಇವರು ಹೊಂದಿರುವ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು.
ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ 2015-16ರಲ್ಲಿ 1.47 ಕೋಟಿ, 2-16-17ರಲ್ಲಿ 3.70 ಕೋಟಿ, 2017-18ರಲ್ಲಿ 6.54 ಕೋಟಿ, 2018-19ರಲ್ಲಿ 1.86 ಕೋಟಿ, 2019-20ರಲ್ಲಿ 5.11 ಕೋಟಿ, 2020-21ರಲ್ಲಿ 9.63 ಕೋಟಿ ರು. ದುರುಪಯೋಗವಾಗಿತ್ತು. ಈ ಪೈಕಿ ಕಳೆದ 2 ವರ್ಷದಲ್ಲಿ 14.75 ಕೋಟಿ ರು. ದುರುಪಯೋಗವಾಗಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

ಪ್ರಾಥಮಿಕ ತನಿಖಾ ತಂಡವು ಎರಡನೇ ಹೆಚ್ಚುವರಿ ವರದಿಯನ್ನೂ ನೀಡಿತ್ತು. ‘ಈ ಪ್ರಕರಣದಲ್ಲಿ ಅಧಿಕ ಮೊತ್ತದ ಹಣ ದುರುಪಯೋಗವಾಗಿರುವುದನ್ನು ಗಮನಿಸಿ ಈ ಕುರಿತು ಧಾರವಾಡದ ಕೇಂದ್ರ ಕಚೇರಿಯಲ್ಲಿ ಕಾಮಗಾರಿಗಳ ಬಿಲ್‌ಗಳ ಪಾವತಿ ವಿಷಯದಲ್ಲಿ ನಿರ್ಲಕ್ಷ್ಯ ಮತ್ತು ಲೋಪವಾಗಿರುವುದನ್ನು ಸ್ಪಷ್ಟವಾಗಿ ಗಮನಿಸಲಾಗಿದೆ, ‘ ಎಂದು ನಡವಳಿಯಲ್ಲಿ ಉಲ್ಲೇಖಿಸಿತ್ತು.
ನಿಯಮಾನುಸಾರ ಯಾವುದೇ ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ ಪಿಡಬ್ಲ್ಯೂಡಿ ನೀತಿ ಸಂಹಿತೆ ಮತ್ತು River Valley Accounting Code, Compaines Act 1956 ಕೆಟಿಪಿಪಿ ಕಾಯ್ದೆ, ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಇನ್ನಿತರೆ ಕಾಯ್ದೆಗಳು, ಸರ್ಕಾರದಿಂದ ಹೊರಡಿಸಿರುವ ಸ್ಥಾಯಿ ಆದೇಶಗಳನ್ವಯ ಕಾರ್ಯನಿರ್ವಹಿಸಬೇಕು. ಆದರೆ ಹಿಪ್ಪರಗಿ ಬ್ಯಾರೇಜ್, ತುಂಗಾಭದ್ರಾ ಎಡದಂಡೆ ಕಾಲುವೆ ವಿಭಾಗ, ಕಲ್ಬುರ್ಗಿ ವಲಯ, ಸಿರವಾರ (ಮುನಿರಾಬಾದ್) ಕಚೇರಿಗಳಲ್ಲಿ ಈ ಯಾವ ನಿಯಮಗಳು, ಆದೇಶಗಳು ಪಾಲನೆಯಾಗಿರಲಿಲ್ಲ.
‘ಆದೇಶದ ಕಂಡಿಕೆ-6ರಲ್ಲಿ ವಿವರಿಸಿರುವ ಕರ್ತವ್ಯ ಲೋಪಗಳು ಹಾಗೂ ಕಾರ್ಯವಿಧಾನದಲ್ಲಿನ ವ್ಯತ್ಯಾಸಗಳು ಈ ಪ್ರಕರಣದಲ್ಲಿಯೂ ಸಹ ಆಗಿರುತ್ತದೆಯಲ್ಲದೇ ಪ್ರಕರಣದಲ್ಲಿ ಅಕ್ರಮವಾಗಿ ಹಣ ಸೆಳೆಯುವ ಸಂದರ್ಭಗಳು ಉಂಟಾಗಿರುವುದು ಕಂಡು ಬಂದಿರುತ್ತದೆ,’ ಎಂದು ನಡವಳಿಯಲ್ಲಿ ವಿವರಿಸಲಾಗಿತ್ತು.
ಹಿಪ್ಪರಗಿ ಬ್ಯಾರೇಜ್ ಯೋಜನೆ ವಿಭಾಗ, ಕಲ್ಬುರ್ಗಿ ವಲಯದ ನೀರಾವರಿ ಯೋಜನೆ ವಿಭಾಗ, ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ, ಸಿರವಾರ (ಮುನಿರಾಬಾದ್ ವಲಯ)ವಿಭಾಗಗಳಲ್ಲಿ ಯಾವುದೇ ಟೆಂಡರ್ ಕರೆಯದೇ ಹಾಗೂ ಯಾವುದೇ ಕಾಮಗಾರಿ ನಿರ್ವಹಿಸದೇ 20 ನಕಲಿ ಬಿಲ್ ಹಾಗೂ ಇತರೆ ಪೂರಕ ದಾಖಲೆ ಸೃಷ್ಟಿಸಿ 11.73 ಕೋಟಿ ರು.ಗಳ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದನ್ನಾಧರಿಸಿ ಐವರು ಅಧಿಕಾರಿ, ನೌಕರರನ್ನು ಅಮಾನತುಗೊಳಿಸಲಾಗಿತ್ತು.
ವಸೂಲಾಗಿದ್ದು ಕೇವಲ 82 ಲಕ್ಷ
ದುರುಪಯೋಗವಾಗಿದೆ ಎಂದು ಹೇಳಲಾಗಿರುವ 28,35,20.786 ರು.ಗಳ ಪೈಕಿ ಬಿ ಜೆ ಬುಡವಿ ಎಂಬ ಗುತ್ತಿಗೆದಾರರು ಡಿ ಡಿ ಮುಖಾಂತರ 82,29,747 ರು.ಗಳನ್ನು ಕರ್ನಾಟಕ ನೀರಾವರಿ ನಿಗಮಕ್ಕೆ 2022ರ ಜನವರಿ 18ರಂದು ಜಮೆ ಮಾಡಿದ್ದರು ಎಂದು ಕರ್ನಾಟಕ ನೀರಾವರಿ ನಿಗಮವು ಮಂಜುನಾಥ್ ಹಿರೇಚೌಟಿ ಅವರಿಗೆ 2025ರ ಜೂನ್ 27ರಂದು ಮಾಹಿತಿ ಒದಗಿಸಿದೆ.

47,68,776 ರು. ಮತ್ತು 34,60,971 ರು. ಸೇರಿ ಒಟ್ಟಾರೆ 82,29,747 ರು.ಗಳನ್ನು ಬೆಳಗಾವಿಯ ಮಹಾದ್ವಾರ್‍ನಲ್ಲಿರುವ ಕೆನರಾ ಬ್ಯಾಂಕ್‌ನ ಶಾಖೆಯಲ್ಲಿ ಜಮೆ ಮಾಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮವು 2022ರ ಫೆ.7ರಂದು ಮುಖ್ಯ ಲೆಕ್ಕಾಧಿಕಾರಿಗಳಿಗೆ ವರದಿ ಮಾಡಿತ್ತು.

ಇದಲ್ಲದೇ ರಾಜ್ಯದ ನಾಲ್ಕು ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ಬೋಗಸ್ ದಾಖಲೆ ಸೃಷ್ಟಿ, ಸಂಬಂಧಪಡದ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಹಣ ಪಾವತಿ, ಕಳಪೆ ಕಾಮಗಾರಿ, ಕಳಪೆ ಸಾಮಾಗ್ರಿ ಬಳಕೆ, ಕಾಮಗಾರಿ ಮಾಡದೇ ಬಿಲ್ ಬರೆದಿರುವುದು, ಅಧಿಕಾರ ದುರುಪಯೋಗ, ಕಾನೂನು ಉಲ್ಲಂಘನೆ, ಅಧಿಕ ಪರಿಹಾರ ಮೊತ್ತದ ಮೇಲೆ ಬಡ್ಡಿ ವಿಧಿಸದಿರುವುದು, ನಕಲಿ ಬಿಲ್, ಪೂರಕ ದಾಖಲೆ ಸೃಷ್ಟಿಸಿ ಕಳೆದ 2 ವರ್ಷಗಳಲ್ಲಿ 874.44 ಕೋಟಿ ರು. ಅಕ್ರಮ, ಅವ್ಯವಹಾರ ನಡೆದಿತ್ತು.
ಕೃಷ್ಣ ಜಲಭಾಗ್ಯ ನಿಗಮ, ಕಾವೇರಿ ನೀರಾವರಿ, ಕರ್ನಾಟಕ ನೀರಾವರಿ, ವಿಶ್ವೇಶ್ವರಯ್ಯ ಜಲ ನಿಗಮಗಳ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಲ್ಲಿ ನಡೆದಿರುವ ಗಂಭೀರ ಸ್ವರೂಪದ ಅಕ್ರಮಗಳ ಕುರಿತು ಜಲಸಂಪನ್ಮೂಲ ಇಲಾಖೆಯು 2020, 2021 ಮತ್ತು 2022ರಲ್ಲಿ ವಿಚಕ್ಷಣಾ ದಳವು ತನಿಖೆ ನಡೆಸಿತ್ತು.
2013-14ನೇ ಸಾಲಿನಿಂದ 2022ರ ಮೇ ತಿಂಗಳವರೆಗೆ ಜಲ ಸಂಪನ್ಮೂಲ ಇಲಾಖೆಯು ಹಲವು ಪ್ರಕರಣಗಳ ಕುರಿತಾದ ತನಿಖೆ ನಡೆಸುವ ಸಂಬಂಧ ವಿಚಕ್ಷಣಾ ದಳಕ್ಕೆ ಹೊರಡಿಸಿದ್ದ ಈ ಎಲ್ಲಾ ಆದೇಶಗಳನ್ನು ‘ದಿ ಫೈಲ್’ ಆರ್‌ಟಿಐ ಮೂಲಕ ಪಡೆದುಕೊಂಡಿತ್ತು.

2021 ಮತ್ತು 2022ರಲ್ಲಿ ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನದಲ್ಲಿ ಒಟ್ಟು ಮೊತ್ತ 800 ಕೋಟಿ ರು.ಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿತ್ತು.
ಕರ್ನಾಟಕ ನೀರಾವರಿ ನಿಗಮದ ಹಿಪ್ಪರಗಿ ಬ್ಯಾರೇಜ್ ಯೋಜನೆ (ಬೆಳಗಾವಿ) ವಿಭಾಗ, ತುಂಗಭದ್ರಾ ಎಡದಂಡೆ ಕಾಲುವೆ (ಮುನಿರಾಬಾದ್ ವಲಯ) ನೀರಾವರಿ ಯೋಜನಾ ವಿಭಾಗ (ಕಲ್ಬುರ್ಗಿ)ಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಒಟ್ಟು 28.35 ಕೋಟಿ ರು. ನಷ್ಟವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯ ಲೆಕ್ಕಾಧಿಕಾರಿ ಅಜಿತ್‌ಕುಮಾರ್ ಹೆಗಡೆ, ಎಸ್ ಎನ್ ವರದರಾಜು ಸೇರಿದಂತೆ ಒಟ್ಟು 16 ಮಂದಿ ಅಧಿಕಾರಿ, ನೌಕರರು ಮತ್ತು ಬಿ ಜೆ ಬುಡವಿ ಸೇರಿದಂತೆ ಒಟ್ಟು 7ಮಂದಿ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಬೇಕು ಎಂದು ಜಲಸಂಪನ್ಮೂಲ ಇಲಾಖೆಯು 2021ರ ಡಿಸೆಂಬರ್ 10ರಂದು ವಿಚಕ್ಷಣಾ ದಳಕ್ಕೆ ವಹಿಸಿ ಆದೇಶಿಸಿತ್ತು.

ಹಿಪ್ಪರಗಿ ಬ್ಯಾರೇಜ್ ನಾಲಾ (ಎಚ್‌ಬಿಸಿ) ವಿಭಾಗದಲ್ಲಿ ಯಾವುದೇ ಟೆಂಡರ್ ಕರೆಯದೇ, ಕಾಮಗಾರಿ ನಿರ್ವಹಿಸದೇ 8 ನಕಲಿ ಬಿಲ್ ಹಾಗೂ ಇತರೆ ಪೂರಕ ದಾಖಲೆ ಸೃಷ್ಟಿಸಿ 16.62 ಕೋಟಿ ರು. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಈ ಪ್ರಕರಣದಲ್ಲಿ ಜಲಸಂಪನ್ಮೂಲ ಇಲಾಖೆಯ 05 ಅಧಿಕಾರಿ ನೌಕರರು ಭಾಗಿಯಾಗಿದ್ದಾರೆ. ಇವರನ್ನು ಅಮಾನತುಗೊಳಿಸಿ 2021ರ ನವೆಂಬರ್ 20ರಂದು ಆದೇಶ ಹೊರಡಿಸಿತ್ತು.

ಅದೇ ರೀತಿ ತುಂಗಾಭದ್ರಾ ಎಡದಂಡೆ ಕಾಲುವೆ ವಿಭಾಗದಲ್ಲಿ 20 ನಕಲಿ/ಕೊಟ್ಟಿ ಬಿಲ್ ಸೃಷ್ಟಿಸಿ 11.73 ಕೋಟಿ ರು. ಮೊತ್ತದ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. 8 ಕಾಮಗಾರಿಗಳ ಬಿಲ್‌ಗಳು, ಎಂ ಬಿ ಪುಸ್ತಕ, ಡಿಬಿಆರ್ ಸಂಖ್ಯೆ, ಕರಾರು/ಟೆಂಡರ್ ಪುಸ್ತಕಗಳನ್ನು ಕಾರ್ಯಪಾಲಕ ಇಂಜಿನಿಯರ್ ಸಲ್ಲಿಸಿರಲಿಲ್ಲ.
ಅಲ್ಲದೆ ಕಡತ, ಅಳತೆ ಪುಸ್ತಕ, ಮುಖ್ಯ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಅವರ ಶಿಫಾರಸ್ಸಿನ ಪತ್ರ, ಕರಾರು, ಟೆಂಡರ್ ಪುಸ್ತಕವನ್ನು ನಿರ್ವಹಿಸದೇ ಸಿಬಿಆರ್ ದಾಖಲಾಗಿತ್ತು. 5 ಕಾಮಗಾರಿಗಳ ಬಿಲ್‌ಗಳಲ್ಲಿ ಗುತ್ತಿಗೆದಾರರ ಸಹಿ ಇರಲಿಲ್ಲ. 8 ಕಾಮಗಾರಿಗಳ ಪೈಕಿ 6 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಗೊಳಿಸಲು ಅವಶ್ಯಕವಾಗಿದ್ದ ಇಂಡೆಂಟ್‌ಗಳನ್ನು ಸಲ್ಲಿಸಿರಲಿಲ್ಲ. ಇನ್ನುಳಿದ 2 ಕಾಮಗಾರಿಗಳಿಗೆ ಇಂಡೆಂಟ್‌ಗಳನ್ನು ಸಲ್ಲಿಸಿದ್ದರೂ ಸಕ್ಷಮ ಪ್ರಾಧಿಕಾರದಿಂದ ಅನುದಾನ ಬಿಡುಗಡೆಯಾಗುವ ಮುನ್ನವೇ ಬಿಲ್ ಪಾವತಿಯಾಗಿತ್ತು. 8 ಕಾಮಗಾರಿಗಳ ಬಿಲ್‌ಗಳಲ್ಲಿ 5 ಬಿಲ್‌ಗಳು ಮಾತ್ರ ಲಭ್ಯವಿತ್ತು. ಇನ್ನು 3 ಬಿಲ್‌ಗಳು ಕಚೇರಿಯಲ್ಲಿ ಲಭ್ಯವಿರಲಿಲ್ಲ.

ಈ ಪ್ರಕರಣದಲ್ಲಿ 16 ಮಂದಿ ಅಧಿಕಾರಿ, ನೌಕರರು ಮತ್ತು 6 ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು 2021ರ ನವೆಂಬರ್ 23ರಂದು ಪ್ರಸ್ತಾವನೆ ಸಲ್ಲಿಸಿದ್ದರು.
‘ಯಾವುದೇ ಟೆಂಡರ್ ಕರೆಯದೇ ಹಾಗೂ ಯಾವುದೇ ಕಾಮಗಾರಿ ನಿರ್ವಹಿಸದೆಯೇ 28 ನಕಲಿ ಬಿಲ್ ಹಾಗೂ ಇತರೆ ಪೂರಕ ದಾಖಲೆಗಳನ್ನು ಸೃಷ್ಟಿಸಿ ಸುಮಾರು 28.35 ಕೋಟಿ ರು. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಇದೇ ರೀತಿಯ ಅಕ್ರಮಗಳು ಕರ್ನಾಟಕ ನೀರಾವರಿ ನಿಗಮದ ಇನ್ನಿತರೆ ವಿಭಾಗೀಯ ಕಚೇರಿಗಳಲ್ಲಿಯೂ ನಡೆದಿರಬಹುದಾದ ಸಾಧ್ಯತೆ ಇದೆ. ಹೀಗಾಗಿ ಈ ನಿಗಮದ ವ್ಯಾಪ್ತಿಯಲ್ಲಿರುವ ಎಲ್ಗಲಾ ವಿಭಾಗ, ಅಧೀನ ಕಚೇರಿಗಳ ವ್ಯಾಪ್ತಿಯಲ್ಲಿ ಜರುಗಿರಬಹುದಾದ ಅವ್ಯವಹಾರದ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ವಿವರವಾದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು,’ ಎಂದು ಆದೇಶದಲ್ಲಿ ವಿವರಿಸಿತ್ತು.

ಅದೇ ರೀತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 59.46 ಕೋಟಿ ರು. ಮೊತ್ತದ ಕಾಮಗಾರಿ ನಿರ್ವಹಿಸಲು ಹೊರಡಿಸಿದ್ದ ಟೆಂಡರ್‌ನಲ್ಲಿಯೂ ಅಕ್ರಮ ನಡೆದಿತ್ತು. ಅರ್ಹತೆ ಇಲ್ಲದಿದ್ದರೂ ಖೊಟ್ಟಿ ದಾಖಲೆ ಸೃಷ್ಟಿಸಿದ್ದ ಗುತ್ತಿಗೆದಾರರಿಗೆ ಟೆಂಡರ್ ನಿರ್ವಹಿಸಲು ಮಂಜೂರು ಮಾಡಲಾಗಿತ್ತು. ಈ ಸಂಬಂಧ ಕಾರ್ಯಪಾಲಕ ಇಂಜಿನಿಯರ್ ರಮೇಶ್ ವಲ್ಯಾಪುರೆ ಎಂಬುವರ ವಿರುದ್ಧ ತನಿಖೆ ನಡೆಸಲು 2022ರ ಏಪ್ರಿಲ್ 4ರಂದೇ ವಿಚಕ್ಷಣಾ ದಳಕ್ಕೆ ವಹಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಶಿರ್ವಾಸೆ ಹೋಬಳಿಯ ಮಲ್ಲಂದೂರು ಅಭಿವೃದ್ಧಿ ಕಾಮಗಾರಿಗೆ ಆಹ್ವಾನಿಸಿದ್ದ 1,00,45,00 ರು.ಮೊತ್ತದ ಟೆಂಡರ್‌ನಲ್ಲಿಯೂ ಅಕ್ರಮ ನಡೆಸಲಾಗಿತ್ತು. ದಾವಣಗೆರೆ ಮೂಲದ ಬಿ ಎಂ ಜಗದೀಶ್ವರಸ್ವಾಮಿ ಎಂಬುವರಿಗೆ ಟೆಂಡರ್ ನಿರ್ವಹಿಸಲು ಅನುಮತಿ ನೀಡಲಾಗಿತ್ತು. ಆದರೆ ಕಾಮಗಾರಿಯನ್ನು ಕರ್ನಾಟಕ ನೀರಾವರಿ ನಿಗಮದಿಂದ ನಿರ್ವಹಿಸದೇ ಇದ್ದರೂ ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರಿಗೆ 1,0045,000 ರು.ಗಳನ್ನು ಪಾವತಿ ಮಾಡಲಾಗಿತ್ತು. ಈ ಸಂಬಂಧ ವಕೀಲ ವಿನಯ್ ಎಂಬುವರು ನೀಡಿದ್ದ ದೂರನ್ನಾಧರಿಸಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಯತೀಶ್‌ಚಂದ್ರ ಮತ್ತು ಇತರೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು 2022ರ ಜೂನ್ 21ರಂದು ವಿಚಕ್ಷಣಾ ದಳಕ್ಕೆ ವಹಿಸಿ ಆದೇಶಿಸಿತ್ತು.
ಕೃಷ್ಣಭಾಗ್ಯ ಜಲನಿಗಮ ವ್ಯಾಪ್ತಿಯಲ್ಲಿ 2019-20ರಲ್ಲಿ ಬಳಕೆಯಾಗದೇ ಉಳಿದಿದ್ದ 401.77 ಕೋಟಿ ಹಾಗೂ 2020-21ನೇ ಸಾಲಿನಲ್ಲಿ ಬಿಡುಗಡೆಯಾದ 384.86 ಕೋಟಿ ರು.ಗಳನ್ನು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಂಬಂಧಪಡದ ಇತರೆ ಕಾಮಗಾರಿಗಳಿಗಾಗಿ ಬಳಕೆ ಮಾಡಲಾಗಿತ್ತು. ಈ ಕಾಮಗಾರಿಗಳನ್ನು ಸ್ವಜಾತಿ ಮತ್ತು ಸಂಬಂಧಿ ಗುತ್ತಿಗೆದಾರರಿಗೆ ನೀಡಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕೃಷ್ಣ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಭಾಕರ್ ಎಂ ಚಿಣಿ ಎಂಬುವರ ವಿರುದ್ಧ ತನಿಖೆ ನಡೆಸಲು 2022ರ ಫೆ.16ರಂದು ವಿಚಕ್ಷಣಾ ದಳಕ್ಕೆ ವಹಿಸಿ ಆದೇಶಿಸಿತ್ತು.

ಕಾವೇರಿ ನೀರಾವರಿ ನಿಗಮದ ನಂ 3, ವಿ ಸಿ ನಾಲಾ ಉಪ ವಿಭಾಗ, ಮದ್ದೂರು, ಮಂಡ್ಯ ಮತ್ತು ಈ ವಿಭಾಗದ ವ್ಯಾಪ್ತಿಯಲ್ಲಿನ ಉಪ ವಿಭಾಗಗಳಲ್ಲಿ ಕಳಪೆ ಕಾಮಗಾರಿ, ಕಳಪೆ ಸಾಮಗ್ರಿಗಳ ಬಳಕೆ, ಕಾಮಗಾರಿ ಮಾಡದೇ ಬಿಲ್ ಬರೆದಿರುವುದು, ಅಧಿಕಾರ ದುರುಪಯೋಗ, ಕಾನೂನು ಉಲ್ಲಂಘನೆ ಆಗಿರುವ ಕುರಿತು ಕೆ ಎಂ ನಾಗೇಶ್ ಎಂಬುವರು ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಲು 2014ರ ಮೇ 23ರಂದು ವಿಚಕ್ಷಣಾ ದಳಕ್ಕೆ ವಹಿಸಿ ಆದೇಶಿಸಿತ್ತು.

ಅದೇ ರೀತಿ ಇದೇ ದೂರುದಾರ ಕಟ್ಟೇಪುರ ಎಡದಂಡೆ, ಬಲದಂಡೆ ಕಾಲುವೆ ನಾಲಾ ಆಧುನೀಕರಣ ಕಾಮಗಾರಿ, ಹಾರಂಗಿ ಬಲದಂಡೆ ನಾಲಾ ವಿಭಾಗ, ಹುಣಸೂರು ವಿಭಾಗದ ಫಿಕ್ಸೆಲ್ ಸರ್ವೇ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಸಲ್ಲಿಸಿದ್ದ ದೂರನ್ನಾಧರಿಸಿ 2015ರ ಜುಲೈ 25ರಂದು ವಿಚಕ್ಷಣಾ ದಳಕ್ಕೆ ವಹಿಸಿತ್ತು.
ಕರ್ನಾಟಕ ನೀರಾವರಿ ನಿಗಮದ (ಧಾರವಾಡ) ಬಿಆರ್‌ಎಲ್‌ಬಿಸಿ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶ, ನಿಯಮಗಳನ್ನು ಪಾಲಿಸದ ಕಾರಣ ಸರ್ಕಾರ ಮತ್ತು ನಿಗಮಕ್ಕೆ ನಷ್ಟವುಂಟಾಗಿತ್ತು. ಈ ಕುರಿತು ನೋಟೀಸ್, ಅರೆ ಸರ್ಕಾರಿ ಪತ್ರ, ಜ್ಞಾಪನ ಪತ್ರಗಳನ್ನು ಬರೆದರೂ ಯಾವುದೇ ಮಾಹಿತಿ ಸಲ್ಲಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಉಪ ವಿಭಾಗದ ಉಗ್ರಾಣ ಶಾಖೆಯಲ್ಲಿನ ವ್ಯವಹಾರ ಮಾಹಿತಿ ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದಾಗಿ ಜಲಸಂಪನ್ಮೂಲ ಇಲಾಖೆಯು 2018ರ ಡಿಸೆಂಬರ್ 3ರಂದು ವಿಚಕ್ಷಣಾ ದಳಕ್ಕೆ ವಹಿಸಿತ್ತು.





