ಬೆಂಗಳೂರು; ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಗಳ ನಿರ್ಮಾಣದ ಪ್ರತೀ ಕಾಮಗಾರಿಗಳ ದರದಲ್ಲಿ 2 ಕೋಟಿ ರು ವ್ಯತ್ಯಾಸವಿರುವುದು ಇದೀಗ ಬಹಿರಂಗವಾಗಿದೆ.
2024-25ನೇ ಸಾಲಿನಲ್ಲಿ ಸಲ್ಲಿಸಿದ್ದ ಕಾಮಗಾರಿ ದರಕ್ಕೂ ಮತ್ತು 2025-26ನೇ ಸಾಲಿನಲ್ಲಿ ಸಲ್ಲಿಸಿರುವ ಪ್ರತಿ ವಸತಿ ನಿಲಯ ನಿರ್ಮಾಣ ದರದ ಮಧ್ಯೆ ವ್ಯತ್ಯಾಸವಿದೆ. ಕಾಮಗಾರಿಗಳ ದರವನ್ನು ಏರಿಕೆ ಮಾಡಿರುವುದರ ಹಿಂದೆ ಕೋಟ್ಯಂತರ ರುಪಾಯಿ ಲಪಟಾಯಿಸುವ ಹುನ್ನಾರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬಜೆಟ್ ಪ್ಯಾರಾ ಮತ್ತು ರಾಜ್ಯ ವಲಯ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕೈಗೆತ್ತಿಕೊಂಡಿರುವ 34 ವಸತಿ ನಿಲಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಂಡಳಿಯ ಕಾರ್ಯದರ್ಶಿಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
2025ರ ಅಕ್ಟೋಬರ್ 8ರಂದು ಬರೆದಿರುವ ಈ ಪತ್ರದಲ್ಲಿ , ವಸತಿ ನಿಲಯಗಳ ನಿರ್ಮಾಣ ದರದ ವ್ಯತ್ಯಾಸದ ಬಗ್ಗೆ ಉಲ್ಲೇಖವಾಗಿದೆ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಅಲ್ಲದೇ 2025-26ನೇ ಸಾಲಿನ ಈ ಯೋಜನೆಗೆ ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಸಾಮಾನ್ಯ ಉಪಯೋಜನೆ ಅಡಿಯಲ್ಲಿ 75 ಕೋಟಿ ರು ಮೊತ್ತಕ್ಕೆ ಅನುದಾನ ನಿಗದಿಪಡಿಸಿದೆ. ಆದರೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಹಾಗೆಯೇ ಈಗಾಗಲೇ ಬಿಡುಗಡೆ ಮಾಡಿದ ಅನುದಾನಕ್ಕೆ ಹಣ ಬಳಕೆ ಪ್ರಮಾಣಪತ್ರ, 3ನೇ ತಂಡದ ವರದಿ ಹಾಗೂ ಬಿಡುಗಡೆ ಮಾಡಿದ ಅನುದಾನದ ಎದುರಾಗಿ ಆರ್ಜಿತವಾದ ಬಡ್ಡಿ ಹಣವನ್ನು ಮಂಡಳಿಗೆ ಹಿಂದಿರುಗಿಸಿದ ಕುರಿತು ಮಂಡಳಿಗೆ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಬಾಕಿ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಸಹಯೋಗದೊಂದಿಗೆ 34 ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಒಟ್ಟಾರೆ 156 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿತ್ತು. ಈ ಕಾಮಗಾರಿಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ ಅದೇಶಿಸಿತ್ತು.
ಅಲ್ಲದೇ 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬಜೆಟ್ ಪ್ಯಾರಾ ಮತ್ತು ರಾಜ್ಯ ವಲಯಕ್ಕೆ ನಿಗದಿಪಡಿಸಿದ ಅನುದಾನದಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮತ್ತು ಸಾಮಾನ್ಯ ಉಪಯೋಜನೆ ಅಡಿಯಲ್ಲಿಯೂ ಅನುದಾನ ಒದಗಿಸಿಕೊಂಡಿತ್ತು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ 26 ಹೊಸ ವಸತಿ ನಿಲಯಗಳ ನಿರ್ಮಾಣ ಕಾಮಗಾರಿಗಳಿಗೆ ಮಂಡಳಿಯ ವಂತಿಕೆ 61 ಕೋಟಿ ರು ಮೊತ್ತಕ್ಕೆ ಮಂಜೂರಾತಿ ನೀಡಿತ್ತು. ಈ ಪೈಕಿ 48.80 ಕೋಟಿ ರು ಬಿಡುಗಡೆ ಮಾಡಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.

2023-24ನೇ ಸಾಲಿನ ಪ್ರಾದೇಶಿಕ ನಿಧಿಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಮತ್ತು ಸಾಮಾನ್ಯ ಉಪ ಯೋಜನೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ 8 ಹೊಸ ವಸತಿ ನಿಲಯಗಳ ನಿರ್ಮಾಣ ಕಾಮಗಾರಿಗಳಿಗೆ ಮುಂದಾಗಿತ್ತು. ಇದಕ್ಕಾಗಿ ಮಂಡಳಿಯ ವಂತಿಕೆ 14 ಕೋಟಿ ರು ಮೊತ್ತಕ್ಕೆ ಮಂಜೂರಾತಿ ನೀಡಿತ್ತು. ಈ ಕಾಮಗಾರಿಯ ಅನುಷ್ಠಾನಕ್ಕಾಗಿ ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 11.20 ಕೋಟಿ ರು ಬಿಡುಗಡೆ ಮಾಡಲಾಗಿತ್ತು.

2025-26ನೇ ಸಾಲಿನ ಈ ಯೋಜನೆಗೆ ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಸಾಮಾನ್ಯ ಉಪಯೋಜನೆ ಅಡಿಯಲ್ಲಿ 75 ಕೋಟಿ ರು ಮೊತ್ತಕ್ಕೆ ಅನುದಾನ ನಿಗದಿಪಡಿಸಿದೆ. ಆದರೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.

ಆಡಳಿತ ಮಂಡಳಿ ನಿಯಮಗಳ ಪ್ರಕಾರ ಡಿಪಾಸಿಟ್ ಕಾಂಟ್ರಿಬ್ಯೂಷನ್ ಆಧಾರದ ಮೇಲೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಆದರೆ ಈ ಕಾಮಗಾರಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಿದ ಅಂದಾಜು ಪಟ್ಟಿಗಳನ್ನು ಒದಗಿಸಿಲ್ಲ. ಅಲ್ಲದೇ ಈಗಾಗಲೇ ಬಿಡುಗಡೆ ಮಾಡಿದ ಅನುದಾನಕ್ಕೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. 3ನೇ ತಂಡದ ವರದಿ ಹಾಗೂ ಬಿಡುಗಡೆ ಮಾಡಿದ ಅನುದಾನದಿಂದ ಆರ್ಜಿತವಾದ ಬಡ್ಡಿ ಹಣವನ್ನು ಮಂಡಳಿಗೆ ಹಿಂದಿರುಗಿಸಿರುವ ಕುರಿತು ವರದಿಯನ್ನು ಮಂಡಳಿಗೆ ಸಲ್ಲಿಸಿಲ್ಲ. ಈ ಕಾಮಗಾರಿಯ ಹಂತವಾರು ವರದಿಯನ್ನು ಮಂಡಳಿ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಿಲ್ಲ. ಹೀಗಾಗಿ ಬಾಕಿ ಅನುದಾನ ಬಿಡುಗಡೆಯಾಗಿಲ್ಲ.
2024-25 ಮತ್ತು 2025-26ನೇ ಸಾಲಿನ ಬಜೆಟ್ ಪ್ಯಾರಾ ಕಾಮಗಾರಿಗಳ ಪರಿಶೀಲನಾ ಸಭೆಯ ನಡವಳಿಗಳ ಅನುಪಾಲನಾ ವರದಿಯನ್ನು ಮಂಡಳಿಗೆ ಸಲ್ಲಿಸಲು ಕೋರಿತ್ತು. ಆದರೆ ಇದುವರೆಗೂ ಅನುಪಾಲನಾ ವರದಿ ಸಲ್ಲಿಕೆಯಾಗಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಮಧ್ಯೆ 2025-26ನೇ ಸಾಲಿನಲ್ಲಿ ವಸತಿ ಗೃಹಗಳ ಕಟ್ಟಡಗಳ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆಯಿಂದ 75 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 75 ಕೋಟಿ ಸೇರಿ 150 ಕೋಟಿ ರು ಅನುದಾನ ನಿಗದಿಪಡಿಸಿದೆ. ವಸತಿ ಗೃಹ ಕಟ್ಟಡಗಳು ಸಿವಿಲ್ ಸ್ವರೂಪದ ಕಾಮಗಾರಿಗಳಾಗಿವೆ. ಈ ಕಾಮಗಾರಿಗಳು ಪೂರ್ಣಗೊಳ್ಳಲು ಕಾಲಾವಕಾಶ ಬೇಕಿದೆ.

ಹೀಗಾಗಿ 2026-27ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 75 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ 75 ಕೋಟಿ ಸೇರಿ ಒಟ್ಟು 150 ಕೊಟಿ ರು ಅನುದಾನ ಒದಗಿಸಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಒಟ್ಟಿಗೆ 300 ಕೋಟಿ ರು ವೆಚ್ಚದಲ್ಲಿ ವಸತಿಗೃಹಗಳನ್ನು ನಿರ್ಮಿಸಲು ಟೆಂಡರ್ ಕರೆಯಲು ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಗೊತ್ತಾಗಿದೆ.
ಇದಲ್ಲದೇ ಹಿಂದುಳಿದ ವರ್ಗಗಳ 54 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ 258 ಕೊಟಿ, ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳಿಗಾಗಿ 100 ಕೋಟಿ ಹಾಗೂ 21 ತಾಲೂಕುಗಳಲ್ಲಿ ದೇವರಾಜ ಅರಸು ಭವನ ನಿರ್ಮಾಣಕ್ಕೆ 42 ಕೋಟಿ ಒಟ್ಟು 400 ಕೊಟಿ ರು.ಗಳ ಅನುದಾನವಿದೆ. ಈ ಪೈಕಿ ಶೇ. 50ರಷ್ಟು ಅಂದರೇ 200 ಕೋಟಿ ರು.ಗಳ ಅನುದಾನದಲ್ಲಿ 2025-26ನೇ ಸಾಲಿಗೆ 100 ಕೋಟಿ ರು.ಗಳನ್ನು 2026-27ನೇ ಸಾಲಿಗೆ 100 ಕೋಟಿ ರು.ಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆ ಮಾಡಲು ತಾತ್ವಿಕ ಸಹಮತಿ ಕೋರಿ ಕೋರಿರುವುದು ಗೊತ್ತಾಗಿದೆ.
ಅಲ್ಲದೇ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು 2025-26ನೇ ಸಾಲಿನ ಆಯವ್ಯಯದಲ್ಲಿ 50 ಕೋಟಿ ಒದಗಿಸಿದೆ. ಈ ಮೊತ್ತದ ಪೈಕಿ 15 ಕೋಟಿ ರು.ಗಳನ್ನು ಕೆಕೆಆರ್‍ಡಿಬಿ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳಾದ ಟೂ ಟೈಯರ್ ಕಾಟ್,ಹಾಸಿಗೆಗಳನ್ನು ಸರಬರಾಜು ಮಾಡಲು ಉದ್ದೇಶಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಗದಿಪಡಿಸಿಕೊಂಡಿರುವ 15 ಕೋಟಿ ರು.ಗ ಜೊತೆಗೆ ಕೆಕೆಆರ್‍ಡಿಬಿಯಿಂದ ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳಿಗಾಗಿ 15 ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.
ಇಲಾಖೆ ವಂತಿಕೆ ಅನುದಾನ ವಿವರಗಳು, ಮಂಡಳಿಯಿಂದ ಬಿಡುಗಡೆ ಮಾಡದ ಅನುದಾನಕ್ಕೆ ಮೊದಲು ವೆಚ್ಚ ಭರಿಸಿ ನಂತರ ಇಲಾಖೆಯ ಅನುದಾನಕ್ಕೆ ವೆಚ್ಚ ಭರಿಸುವುದು, ನಿಗದಿಪಡಿಸಿದ ಅನುದಾನಕ್ಕೆ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ದೃಢೀಕರಣ ಪತ್ರ ಪಡೆಯುವುದು, ಈ ಯೋಜನೆಯ ಒಟ್ಟು ಅಂದಾಜು ಮೊತ್ತಕ್ಕೆ ಇಲಾಖೆಯಿಂದ ಅಗತ್ಯ ಅನುಮೋದನೆ ಪಡೆಯುವುದು, ಅಂದಾಜು ಪಟ್ಟಿಗಳು, ಆಡಳಿತಾತ್ಮಕ ಆದೇಶದೊಂದಿಗೆ ಅನುದಾನ ಬಿಡುಗಡೆಗಾಗಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.

2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬಜೆಟ್ ಪ್ಯಾರಾ ಮತ್ತು ರಾಜ್ಯ ವಲಯ ಯೋಜನೆಯಡಿಲ್ಲಿ ಮಂಜೂರಾತಿ ನೀಡಿದ ಮೆಟ್ರಿಕ್ ನಂತರದ ವಸತಿ ನಿಲಯ ಕಾಮಗಾರಿಯ ದರ ಘಟಕ ವೆಚ್ಚವು 5 ಕೋಟಿ ಇದೆ. ಆದರೆ 2025-26ನೇ ಸಾಲಿನಲ್ಲಿ ಪ್ರಸ್ತಾಪಿಸಿರುವ ಮೆಟ್ರಿಕ್ ನಂತರದ ವಸತಿ ನಿಲಯ ಕಾಮಗಾರಿ ದರವು 7 ಕೋಟಿ ಇದೆ ಎಂದು ಸಲ್ಲಿಸಿದೆ. ಅಂದರೆ ಪ್ರತಿ ವಸತಿ ನಿಲಯ ನಿರ್ಮಾಣ ದರದಲ್ಲಿ 2 ಕೋಟಿ ರು ಮೊತ್ತದ ವ್ಯತ್ಯಾಸವಿದೆ ಎಂದು ಪತ್ರದಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

ಈಗಾಗಲೇ 2025-26ನೇ ಸಾಲಿನ ಆಯವ್ಯಯದಲ್ಲಿ 50 ಕೋಟಿ ಒದಗಿಸಿದೆ. ಕೆಕೆಆರ್‍ಡಿಬಿ ವತಿಯಿಂದ ವಿದ್ಯಾರ್ಥಿನಿಲಯಗಳ ಮೂಲಭೂತ ಸೌಕರ್ಯಗಳಿಗಾಗಿ 15 ಕೋಟಿ ಅನುದಾನ ಒದಗಿಸಲು ಕೋರಿತ್ತು. ಆದರೆ ಅದಕ್ಕಾಗಿ ಮಂಡಳಿಯಿಂದ ಯಾವುದೇ ಅನುದಾನವನ್ನು ನಿಗದಿಪಡಿಸಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯ ಗಮನಸೆಳೆದಿರುವುದು ಗೊತ್ತಾಗಿದೆ.





