ಅನುಭವ ಮಂಟಪ ಕಾಮಗಾರಿ; ದಿ ಫೈಲ್‌ ವರದಿ ಬೆನ್ನಲ್ಲೇ ಸಿಎಂ ಮಧ್ಯ ಪ್ರವೇಶ, 50 ಕೋಟಿ ಬಿಡುಗಡೆಗೆ ಆದೇಶ

ಬೆಂಗಳೂರು;  ಬೀದರ್‍‌ನ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ಪಾವತಿಸಿಲ್ಲ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಕಂಪನಿಗೆ ಬಾಕಿ ಇರಿಸಿಕೊಂಡಿದ್ದ ಮೊತ್ತದ ಪೈಕಿ 50 ಕೋಟಿ ರುಪಾಯಿಗಳನ್ನು  ಗುತ್ತಿಗೆದಾರ ಕಂಪನಿಗೆ  ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

ಶೇಕಡ 63ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಅನುಭವ ಮಂಟಪವನ್ನು 2026ರ ಮೇ ಒಳಗೇ ಉದ್ಘಾಟಿಸಲು ಕಾಂಗ್ರೆಸ್‌ ಸರ್ಕಾರವು  ತುದಿಗಾಲಲ್ಲಿ ನಿಂತಿತ್ತು.  ಆದರೆ  ಗುತ್ತಿಗೆದಾರ ಕಂಪನಿಗೆ ಕಳೆದ 4 ತಿಂಗಳಿನಿಂದ ಹಣವನ್ನೇ ಪಾವತಿಸಿರಲಿಲ್ಲ.  ಗುತ್ತಿಗೆದಾರ ಕಂಪನಿಯಾಗಿರುವ ಶಿರ್ಕೆ ಸಮೂಹಕ್ಕೆ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿತ್ತು.   ಆದರೂ ಕಂದಾಯ ಇಲಾಖೆಯು ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿತ್ತು.

 

ಈ ಬಗ್ಗೆ ಗುತ್ತಿಗೆದಾರ ಕಂಪನಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಭೇಟಿ ಮಾಡಿದ ನಂತರವೂ ಹಣ ಬಿಡುಗಡೆಯಾಗಿರಲಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ  ಕಡತವು ಸಚಿವ ಕೃಷ್ಣ ಬೈರೇಗೌಡ ಅವರ ಲಾಗಿನ್‌ನಲ್ಲೇ ಹಲವು ತಿಂಗಳುಗಳಿಂದ ಇತ್ತು. ಈ ಕುರಿತು ‘ದಿ ಫೈಲ್‌’, 2025ರ ಸೆ.20ರಂದು ಖಚಿತ ಮಾಹಿತಿ ಆಧರಿಸಿ ವರದಿ ಪ್ರಕಟಿಸಿತ್ತು.

 

ವರದಿ ಪ್ರಕಟವಾದ ನಂತರ ಕಂದಾಯ ಇಲಾಖೆಯು ಗುತ್ತಿಗೆದಾರ ಕಂಪನಿಗೆ 2025ರ ಅಕ್ಟೋಬರ್ 9ರಂದು  50 ಕೋಟಿ ರು ಬಿಡುಗಡೆ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೇಳಿದ್ದು 74 ಕೋಟಿ, ಬಿಡುಗಡೆ ಮಾಡಿದ್ದು  50 ಕೋಟಿ

 

ಗುತ್ತಿಗೆದಾರ ಕಂಪನಿಯು ಈಗಾಗಲೇ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಪೈಕಿ ಶೇ. 60 ರಷ್ಟನ್ನು ಪೂರ್ಣಗೊಳಿಸಿದೆ. ಆದರೂ ಕಂದಾಯ ಇಲಾಖೆಯು   74 ಕೋಟಿ ರುಪಾಯಿಯನ್ನು ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ನಿರ್ಮಾಣ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸುವುದಾಗಿ ಕಂಪನಿಯೂ ಹೇಳಿತ್ತು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿತ್ತು. ಆದರೆ ಕಂದಾಯ ಇಲಾಖೆಯು ಕೋರಿಕೆ ಮೊತ್ತದ ಪೈಕಿ 50 ಕೋಟಿ ರು.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇನ್ನು 24 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿದೆ.

 

 

ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಬಸವ ಕಲ್ಯಾಣದಲ್ಲಿ 25 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಕಾಮಗಾರಿಯು ಸ್ಥಗಿತಗೊಳ್ಳುವ ಸಾಧ್ಯತೆಯೂ ಇತ್ತು.  ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಸರಕು ಸಾಮಗ್ರಿಗಳ ಪೂರೈಕೆದಾರರು ‘ಕೈ’ ಎತ್ತಿದ್ದರು.

 

ಪತ್ರದಲ್ಲೇನಿತ್ತು?

 

ಪ್ರತಿಷ್ಠಿತ ಯೋಜನೆಯಾಗಿರುವ ಅನುಭವ ಮಂಟಪ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕಂಪನಿಗೆ ಹಣ ಪಾವತಿಯಲ್ಲಿ ಅಗಾಧವಾಗಿ ವಿಳಂಬವಾಗಿದೆ. ಕಾಮಗಾರಿಯು ಚಾಲ್ತಿಯಲ್ಲಿದ್ದರೂ ಸಹ ಬಿಲ್‌ಗಳನ್ನು ನೀಡಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಹಣ ಪಾವತಿಯಾಗಿಲ್ಲ. 2025ರ ಮಾರ್ಚ್‌ನಲ್ಲಿ ಹಣ ನೀಡಿರುವುದನ್ನು ಬಿಟ್ಟರೇ ಇನ್ನೂ 74 ಕೋಟಿ ರುಪಾಯಿ ಪಾವತಿಸಿಲ್ಲ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.

 

ಅನುಭವ ಮಂಟಪ ಕಾಮಗಾರಿಗೆ 74 ಕೋಟಿ ಬಾಕಿ; ಸಚಿವರಿಂದಲೇ ವಿಳಂಬ, ಕಾಮಗಾರಿ ಸ್ಥಗಿತವಾಗಲಿದೆಯೇ?

 

‘ಕಾಮಗಾರಿ ಬಿಲ್‌ ಪಾವತಿಸಲು ವಿಳಂಬವಾಗಿರುವುದರಿಂದ ಪೂರೈಕೆದಾರರು ಸರಕು ಸಾಮಾಗ್ರಿಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲಿದ್ದಾರೆ. ಸರಬರಾಜುದಾರರಿಗೂ ಹಣ ಪಾವತಿಸಬೇಕಿದೆ. ಇದರಿಂದ ಗುತ್ತಿಗೆದಾರ ಕಂಪನಿ ಮೇಲೆ ಅಪಾರವಾದ ಹೊಣೆಗಾರಿಕೆ ಇದೆ. ಇದು ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ,’ ಎಂದು ಕಂಪನಿಯು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿತ್ತು.

 

ಗುತ್ತಿಗೆದಾರ ಕಂಪನಿಯಾಗಿರುವ ಶಿರ್ಕೆ ಸಮೂಹವು ಈ ಕಾಮಗಾರಿ ಪೂರ್ಣಗೊಳಿಸಲು ವಿವಿಧ ಬ್ಯಾಂಕ್‌ಗಳಿಂದ ಅತ್ಯಧಿಕ ಬಡ್ಡಿ ದರದಲ್ಲಿ ಸಾಲವನ್ನು ಪಡೆದಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಅತ್ಯಧಿಕ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಲಿದೆ. ಈ ಕುರಿತು 2025ರ ಜುಲೈ 7ರಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಅಲ್ಲದೇ 2025ರ ಜುಲೈ 31ಕ್ಕೆ ಬಸವ ಕಲ್ಯಾಣ ಅಭಿವೃದ್ಧಿ ನಿಗಮದ ಆಯುಕ್ತರಿಗೂ ಪತ್ರ ಬರೆದಿತ್ತು.

 

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯ ಪ್ರವೇಶವನ್ನು ಕಂಪನಿಯು ಬಯಸಿರುವುದು ತಿಳಿದು ಬಂದಿದೆ. ಬಾಕಿ ಇರುವ 74 ಕೋಟಿ ರುಪಾಯಿಯನ್ನು ತಕ್ಷಣವೇ ಎಷ್ಟು ಸಾಧ್ಯವೋ ಅಷ್ಟು ಬೇಗ ಪಾವತಿಸಲು ಕ್ರಮಕೈಗೊಳ್ಳಬೇಕು. ಇದು ಸಾಧ್ಯವಾದಲ್ಲಿ ಕಂಪನಿಯ ಮೇಲಿರುವ ಹೊಣೆಗಾರಿಕೆಗಳು ಕಡಿಮೆಯಾಗಲಿವೆ. ಈ ಕ್ರಮ ಕೈಗೊಂಡಿದ್ದೇ ಆದಲ್ಲಿ ಸರಕು ಸಾಮಗ್ರಿ ಪೂರೈಕೆದಾರರಿಗೂ ಹಣ ಪಾವತಿಸಲು ನೆರವಾಗಲಿದೆ. ಮುಂದಿನ ಕಾಮಗಾರಿಯೂ ಪ್ರಗತಿಯಾಗಲಿದೆ ಎಂದು ತಿಳಿಸಿತ್ತು.

 

ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮೋದನೆ

 

ಬಸವ ಕಲ್ಯಾಣದಲ್ಲಿನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಕಂಪನಿಗೆ ಹಣ ಪಾವತಿಸುವ ಸಂಬಂಧ ಕಂದಾಯ ಇಲಾಖೆಯು ಕಡತವನ್ನು (RD/RBA/169/2025) ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಆರ್ಥಿಕ ಇಲಾಖೆಯೂ ಸಹ ಈ ಕಡತವನ್ನು ಪರಿಶೀಲಿಸುತ್ತಲ್ಲದೇ ಹಣ ಬಿಡುಗಡೆ ಮಾಡಲು (FD/953/2023/EXP 7)  ಅನುಮೋದನೆಯನ್ನೂ ನೀಡಿತ್ತು.

 

 

ಆರ್ಥಿಕ ಇಲಾಖೆಯು ಅನುಮೋದನೆ ನೀಡಿದ ಕಡತದ ಚಲನವಹಿಯನ್ನು ‘ದಿ ಫೈಲ್‌’, ಕೂಡ ಹಿಂಬಾಲಿಸಿತು. ಈ ಕಡತವು 2025ರ ಆಗಸ್ಟ್‌ 23ರಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಲಾಗಿನ್‌ನಲ್ಲೇ ಇತ್ತು. ಕಂದಾಯ  ಸಚಿವರ ಲಾಗಿನ್‌ನಿಂದ ಕಡತವು ಕೆಳಗಿನ ಅಧಿಕಾರಿಗಳಿಗೆ ರವಾನಿಸಿರಲಿಲ್ಲ.

 

 

2021 ರಲ್ಲಿ ಯಡಿಯೂರಪ್ಪ ಅವರು ಅಡಿಪಾಯ ಹಾಕಿದ ನಂತರವೂ ನಿರ್ಮಾಣ ವಿಳಂಬವಾಗಿತ್ತು. 2022 ರಲ್ಲಿ ಮತ್ತೆ ಕೆಲಸ ಪ್ರಾರಂಭವಾಗಿತ್ತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ ನಿರ್ಮಾಣದ ಕೇವಲ ಶೇ. 50ರಷ್ಟು ಮಾತ್ರ ಪೂರ್ಣಗೊಂಡಿದೆ. ಪೂರ್ಣಗೊಳ್ಳಲು ತಾತ್ಕಾಲಿಕ ಗಡುವು ಡಿಸೆಂಬರ್ 2025 ಆಗಿದೆ. ಆದರೆ ಯೋಜನೆಯು 2026 ರವರೆಗೆ ವಿಸ್ತರಿಸುವ ನಿರೀಕ್ಷೆಯಿತ್ತು.

 

ಶೇ.63ರಷ್ಟು ಕಾಮಗಾರಿ ಪೂರ್ಣ

 

ಅನುಭವ ಮಂಟಪದ ಕಾಮಗಾರಿ ಶೇ.63ರಷ್ಟು ಪೂರ್ಣಗೊಂಡಿದೆ. ಇದುವರೆಗೆ 271 ಕೋಟಿ ಖರ್ಚಾಗಿದೆ. 2026ರ ಮೇ ಒಳಗೆ ಉದ್ಘಾಟನೆ ಆಗಬೇಕು ಎಂದು ಸಚಿವ ಈಶ್ವರ್‍‌ ಖಂಡ್ರೆ ಅವರು ಹೇಳಿಕೆ ನೀಡಿದ್ದರು. ಹೀಗಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ ಸಿದ್ದರಾಮಯ್ಯ ಸರ್ಕಾರವು 742 ಕೋಟಿಗೆ ಹೆಚ್ಚಿಸಿತ್ತು.

 

ಅನುಭವ ಮಂಟಪದ ಕಾಮಗಾರಿ

 

ಬಸವ ಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಹಿಂದಿನ ಸರ್ಕಾರವು ಒಪ್ಪಿಗೆ ನೀಡಿತ್ತು. ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ‘ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ’ ಸಭೆಯಲ್ಲಿ ಮುಂದಿನ ಮೂರು ವರ್ಷಗಳೊಳಗೆ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿತ್ತು.

 

ಅನುಭವ ಮಂಟಪ ನಿರ್ಮಾಣದ ನೀಲ ನಕ್ಷೆ

 

12ನೇ ಶತಮಾನದಲ್ಲಿ ಶರಣರ ಸಾಮಾಜಿಕ -ಧಾರ್ಮಿಕ ಸುಧಾರಣಾ ಆಂದೋಲನದ ಕೇಂದ್ರಬಿಂದುವಾಗಿದ್ದ ಬಸವ ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆ ದಂಡೆಯ 25 ಎಕರೆ ಪ್ರದೇಶದಲ್ಲಿ ಆಧುನಿಕ ‘ಅನುಭವ ಮಂಟಪ’ ಮರು ನಿರ್ಮಾಣವಾಗಲಿದೆ. ಕಾಮಗಾರಿ ಪ್ರಸ್ತಾಪದ ವರದಿಯನ್ನು ತಜ್ಞರ ಸಮಿತಿಯು ಸಿಎಂ ಸಿದ್ದರಾಮಯ್ಯ ಅವರಿಗೆ ಈಚೆಗಷ್ಟೇ ಸಲ್ಲಿಸಿತ್ತು.

 

ತ್ರಿಪುರಾಂತಕ ಕೆರೆ ದಂಡೆಯಲ್ಲಿ ಮರುನಿರ್ಮಾಣ

 

25 ಎಕರೆ ಪ್ರದೇಶದಲ್ಲಿ ಜಾಗ ಗುರುತು ಮಾಡಿತ್ತು. 600 ಕೋಟಿ ರೂ.ಗಳ ಅಂದಾಜು ವೆಚ್ಚ 100 ಅಡಿ ಸುತ್ತಳತೆಯಲ್ಲಿ ಗೋಪುರ ನಿರ್ಮಾಣವಾಗಲಿದೆ. ಇದು ಜಗತ್ತಿನಲ್ಲೇ ದೊಡ್ಡದಾದ ಲಿಂಗಾಕಾರದ ಗೋಪುರ ಎಂದು ಹೇಳಲಾಗಿದೆ. ನಿರ್ಮಾಣಗೊಳ್ಳುವ ಕಟ್ಟಡದಲ್ಲಿ ಆರು ಅಂತಸ್ತುಗಳು ಇರಲಿವೆ. 1500 ಮಂದಿ ಒಟ್ಟಿಗೇ ಊಟ ಮಾಡುವ ದಾಸೋಹ ಭವನವೂ ಇರಲಿದೆ. ಇದಕ್ಕೆ ಮಹಾಮನೆ ಕ್ಷೇತ್ರ ಎಂದು ಮರುನಾಮಕರಣಕ್ಕೆ ಶಿಫಾರಸು ಮಾಡಲಾಗಿದೆ.

 

ಅನುಭವ ಮಂಟಪ ಕಾಮಗಾರಿ ನಡೆಯುತ್ತಿರುವುದು

 

ಬಸವ ಕಲ್ಯಾಣದಲ್ಲಿ 532 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತ್ತು. ಬಸವೇಶ್ವರರ ಕಾಲದ ವಿಶ್ವದ ಮೊದಲ ಆಧ್ಯಾತ್ಮಿಕ ಸಂಸತ್ತಾದ ಅನುಭವ ಮಂಟಪವನ್ನು ಅವರ ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಗಳನ್ನು ಪ್ರತಿಬಿಂಬಿಸುವಂತೆ ನಿರ್ಮಿಸಲಾಗುತ್ತಿದೆ.

 

 

ಈ ಯೋಜನೆಯನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೊಂಡಿದ್ದು, ಮೂರು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿತ್ತು.

 

ಯೋಜನೆಯ ಉದ್ದೇಶವೇನು?

 

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮಾದರಿಯಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಬಸವೇಶ್ವರರ ಜೀವನ, ತತ್ವಗಳು ಮತ್ತು ಅವರು ಸ್ಥಾಪಿಸಿದ ಸಾಮಾಜಿಕ ಕ್ರಾಂತಿಯನ್ನು ಬಿಂಬಿಸುವುದು. ವಚನಕಾರರು ಮತ್ತು ದಾರ್ಶನಿಕರ ಕುರಿತು ಮಾಹಿತಿ ನೀಡುವ ಕಿರುಚಿತ್ರ ಪ್ರದರ್ಶನಗಳು ಇರಲಿವೆ ಎಂದು ಹೇಳಲಾಗಿತ್ತು.

 

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಈ ಯೋಜನೆಯನ್ನು ಕೈಗೊಂಡಿದೆ. ಈ ಕಾಮಗಾರಿಯನ್ನು ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದರು.

 

2021 ರ ಏಪ್ರಿಲ್‌ನಲ್ಲಿ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಲಿಂಗಾಯತ ಮತಗಳನ್ನು ಕ್ರೋಢೀಕರಿಸುವಲ್ಲಿ ಬೀದರ್‍‌ ಜಿಲ್ಲೆ ಪಾತ್ರ ವಹಿಸಿತ್ತು. ಹೀಗಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಹೊಸ ಅನುಭವ ಮಂಟಪ ಯೋಜನೆಯು 2023 ರ ವಿಧಾನಸಭಾ ಚುನಾವಣೆಯಲ್ಲೂ ಪಾತ್ರ ವಹಿಸುವಂತೆ ಕಾಂಗ್ರೆಸ್‌ ಸರ್ಕಾರವೂ ನೋಡಿಕೊಂಡಿತ್ತು.

 

ಈ ಯೋಜನೆಗೆ 612 ಕೋಟಿ ಪರಿಷ್ಕೃತ ಅಂದಾಜಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 500 ಕೋಟಿ ರು. ವೆಚ್ಚದ ಅನುಭವ ಮಂಟಪ ನಿರ್ಮಾಣ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಶಂಕು ಸ್ಥಾಪನೆ ನೆರವೇರಿಸಿ 7 ತಿಂಗಳಾಗಿದ್ದರೂ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿರಲಿಲ್ಲ.

 

ಎರಡು ವರ್ಷಗಳಲ್ಲಿ ಯೋಜನೆ ಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಕಟ್ಡ ಉದ್ಘಾಟಿಸಲಿದ್ದಾರೆ ಎಂದು ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಆದರೂ ಯೋಜನೆಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಇನ್ನೂ ಸಿದ್ಧಪಡಿಸಿರಲಿಲ್ಲ ಮತ್ತು ಡಿಪಿಆರ್ ಇಲ್ಲದೆ ಕೆಲಸಕ್ಕಾಗಿ ಟೆಂಡರ್‌ಗಳನ್ನು ಕರೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

 

12 ನೇ ಶತಮಾನದ ಸುಧಾರಕ ಬಸವೇಶ್ವರರಿಂದ ಸ್ಥಾಪಿತವಾದ ಅನುಭವ ಮಂಟಪವು ಅತೀಂದ್ರಿಯತೆ, ಆಧ್ಯಾತ್ಮಿಕ ಜಾಗೃತಿ ಮತ್ತು ಧಾರ್ಮಿಕ ಪ್ರವಚನದ ನೆಲೆಯಾಗಿದೆ. ಇದನ್ನು ‘ವಿಶ್ವದ ಮೊದಲ ಸಂಸತ್ತು’ ಎಂದು ಪರಿಗಣಿಸಲಾಗಿದೆ. ಬಸವೇಶ್ವರರ ಬೋಧನೆಗಳನ್ನು ಎತ್ತಿ ತೋರಿಸುವ ಯೋಜನೆಯನ್ನು 2016 ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರವು ಮೊದಲು ಪ್ರಸ್ತಾಪಿಸಿತ್ತು. ಯಡಿಯೂರಪ್ಪ ಅವರು ಶಿಲಾನ್ಯಾಸ ಮಾಡಿದ್ದಾರಾದರೂ ಆರಂಭದ ದಿನಗಳಲ್ಲಿ ಈ ಯೋಜನೆಯು ಪ್ರಗತಿಯಾಗಿರಲಿಲ್ಲ.

Your generous support will help us remain independent and work without fear.

Latest News

Related Posts