ಬೆಂಗಳೂರು; ರಾಜ್ಯ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಕ್ಷೇತ್ರಗಳ ಮೀಸಲಾತಿಯನ್ನು ನಿಗದಿಪಡಿಸುವ ಸಿದ್ಧತೆಯಲ್ಲಿರುವ ಹೊತ್ತಿನಲ್ಲಿಯೇ ಗ್ರಾಮಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಈಗಾಗಲೇ ಹೊರಡಿಸಿರುವ ಅಧಿಸೂಚನೆಗಳನ್ನು ಹಿಂಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆಯು ಪ್ರಸ್ತಾವ ಸಲ್ಲಿಸಿದೆ.
ಈ ಪ್ರಸ್ತಾವದ ಪ್ರಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಗಡಿ ನಿರ್ಣಯ ಮಾಡಬೇಕಾದ ಸ್ಥಿತಿ ಎದುರಾಗಿದೆ. ಕ್ಷೇತ್ರಗಳ ಗಡಿ ನಿರ್ಣಯವನ್ನು ನಿಗದಿಪಡಿಸಲು ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗದ ಕದ ತಟ್ಟಲು ಮುಂದಾಗಿದೆ. ಅಲ್ಲದೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿನ ಜನಸಂಖ್ಯೆಯಲ್ಲಿಯೂ ವ್ಯತ್ಯಾಸವಾಗಲಿದೆ. ಹೀಗಾಗಿ ಈಗಾಗಲೇ ಸರ್ಕಾರವು ಅಧಿಸೂಚಿಸಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪರಿಷ್ಕರಣೆಯೂ ಅವಶ್ಯಕವಾಗಿದೆ
ಈ ಸಂಬಂಧ ‘ದಿ ಫೈಲ್’ಗೆ, ಕಡತವು (RDPR/133/GPS/2025- COMPUTER NUMBER 1905286) ಲಭ್ಯವಾಗಿದೆ.
ಈ ಬೆಳವಣಿಗೆಯು ರಾಜ್ಯ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಚುನಾವಣೆ ಪ್ರಕ್ರಿಯೆಗಳೂ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳೂ ಕಂಡುಬಂದಿವೆ.
ಅಲ್ಲದೇ ವಿವಿಧೆಡೆ ಗ್ರಾಮ ಪಂಚಾಯ್ತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತನೆ ಮಾಡಿ ಅಧಿಸೂಚನೆ ಹೊರಡಿಸುವ ಮುನ್ನ ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗದೊಂದಿಗೆ ಚರ್ಚಿಸಿರಲೇ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ಪರಿಷ್ಕರಣೆಗೆ ಮುಂದಡಿಯಿಟ್ಟಿದೆ. ಈ ಹೊತ್ತಿನಲ್ಲೇ ಕ್ಷೇತ್ರಗಳ ಗಡಿ ನಿರ್ಣಯದ ಕುರಿತೂ ಪ್ರಸ್ತಾಪವಾಗಿದೆ. ಕ್ಷೇತ್ರಗಳ ಗಡಿ ನಿರ್ಣಯ ಮಾಡಲು ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗವನ್ನು ಕೋರಬೇಕಿರುವ ಕಾರಣ ಅಧಿಸೂಚನೆಗಳನ್ನು ಹಿಂಪಡೆಯಬೇಕಿದೆ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಅನುಮೋದನೆಯನ್ನು ಕೋರಬೇಕು ಎಂದು ಇಲಾಖೆಯು ನಿರ್ಧರಿಸಿರುವುದು ಕಡತದ ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ (ಸಂಖ್ಯೆ 534/2024 c/w 1151/2023, 1152/2023) ರ ವಿಚಾರಣೆ ನಡೆದಿತ್ತು. ಈ ವಿಚಾರಣೆ ನಂತರ ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತನೆ ಮಾಡಿದ್ದ ಸರ್ಕಾರವು 2025ರ ಸೆ.3ರಂದು ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಚುನಾವಣೆ ಕ್ಷೇತ್ರಗಳ ಚುನಾಯಿತ ಕ್ಷೇತ್ರಗಳ ಮೀಸಲಾತಿಯನ್ನು 2025ರ ಡಿಸೆಂಬರ್12ರೊಳಗೆ ಪುನರ್ ನಿಗದಿಗೊಳಿಸಬೇಕಿದೆ.

ಈಗಾಗಲೇ ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕಕು ಪಂಚಾಯ್ತಿಗಳ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣೆ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯಿಸಿದೆ. ಈ ಸಂಬಂಧ 2023ರ ಡಿಸೆಂಬರ್ 16ರಂದೇ ಅಧಿಸೂಚನೆಯನ್ನೂ ಹೊರಡಿಸಿದೆ. ಇದಾದ ನಂತರ ಪ್ರಾದೇಶಿಕ ಚುನಾವಣೆ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯಿಸಿ ಅಧಿಸೂಚಿಸಿದ ನಂತರ ನಗರಾಭಿವೃದ್ಧಿ ಇಲಾಖೆಯಕೂ ಸಹ ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತನೆ ಮಾಡಿ ಅಧಿಸೂಚನೆ ಹೊರಡಿಸಿತ್ತು.
ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆ ಆಗಿರುವ ಗ್ರಾಮಗಳನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಕ್ಷೇತ್ರಗಳಿಂದ ಕೈಬಿಡಬೇಕಿದೆ. ಅಲ್ಲದೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿನ ಜನಸಂಖ್ಯೆಯಲ್ಲಿಯೂ ವ್ಯತ್ಯಾಸವಾಗಲಿದೆ. ಹೀಗಾಗಿ ಈಗಾಗಲೇ ಸರ್ಕಾರವು ಅಧಿಸೂಚಿಸಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪರಿಷ್ಕರಣೆಯೂ ಅವಶ್ಯಕವಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಎಲ್ಲೆಲ್ಲಿ ವ್ಯತ್ಯಾಸವಾಗಲಿದೆ?
ಬೀದರ್ ಜಿಲ್ಲೆಯ 4 ಜಿಲ್ಲಾ ಪಂಚಾಯ್ತಿ ಮತ್ತು 6 ತಾಲೂಕು ಪಂಚಾಯ್ತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿತ್ತು. ಈ ಸಂಬಂಧ 2025ರ ಏಪ್ರಿಲ್ 15ರಂದೇ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ಈ ಭಾಗದಲ್ಲಿನ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯ ಚುನಾವಣೆ ಕ್ಷೇತ್ರಗಳಲ್ಲಿನ ಜನಸಂಖ್ಯೆ ಮತ್ತು ವ್ಯಾಪ್ತಿಯಲ್ಲಿ ವ್ಯತ್ಯಾಸವಾಗಲಿದೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿನ ಜನಸಂಖ್ಯೆ ಮತ್ತು ಮತ ಕ್ಷೇತ್ರಗಳಲ್ಲಿಯೂ ವ್ಯತ್ಯಾಸವಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಹೆಬಳೆ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಹಾಗೂ ಹೆಬಳೆ ತಾಲೂಕು ಪಂಚಾಯ್ತಿ ಕ್ಷೇತ್ರದ ಜನಸಂಖ್ಯೆ ಹಾಗೂ ವ್ಯಾಪ್ತಿಯಲ್ಲಿ ವ್ಯತ್ಯಾಸವಾಗಲಿದೆ.
ಕೊಪ್ಪಳ ಜಿಲ್ಲೆಯ ಹನುಮಸಾಗರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ, ಹಾಸನ ಜಿಲ್ಲೆಯ ಹಾಸನ ತಾಲೂಕಿನ ಜಿಪಂ, ತಾಪಂ, ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲೂಕಿನ ಜಿಪಂ ಮತ್ತು ತಾಪಂನ ಕ್ಷೇತ್ರದಲ್ಲಿನ ಜನಸಂಖ್ಯೆ ಹಾಗೂ ಮತಕ್ಷೇತ್ರದಲ್ಲಿನ ವ್ಯಾಪ್ತಿಯಲ್ಲಿ ವ್ಯತ್ಯಾಸವಾಗಲಿದೆ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಮದ್ದೂರು, ಪೊನ್ನಂಪೇಟೆ, ಹಾಸನ, ಅರಸೀಕೆರೆ, ಬೆಳಗಾವಿ ತಾಲೂಕು, ಬೀದರ್ ತಾಲೂಕು, ಕುಷ್ಟಗಿ ತಾಲೂಕು ಮತ್ತು ಭಟ್ಕಳ ತಾಲೂಕಗಳ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣೆ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯದ ಅಧಿಸೂಚನೆಯನ್ನು ಹಿಂಪಡೆಯಬೇಕಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಜಿಲ್ಲೆ ಮತ್ತು ತಾಲೂಕುಗಳಲ್ಲಿನ ಕೆಲವು ಗ್ರಾಮ ಪಂಚಾಯ್ತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆ ಆಗಿರುವ ಕಾರಣ ಪುನಃ ಈ ಜಿಲ್ಲೆ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಸೀಮಾ/ ಗಡಿಗಳನ್ನು ಹೊಸದಾಗಿ ನಿರ್ಣಯಿಸಬೇಕಿದೆ. ಈ ಕುರಿತು ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗವನ್ನು ಕೋರಲು ಮುಂದಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ಮುಚ್ಚಳಿಕೆ ಕೊಟ್ಟಿತ್ತು.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಮೇ ಅಂತ್ಯದಲ್ಲಿ ಒದಗಿಸಲಾಗುವುದು. ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಲಾಗುತ್ತದೆ. ಮೇ ತಿಂಗಳಿನಲ್ಲಿ ಮೀಸಲಾತಿ ಒದಗಿಸುತ್ತೇವೆ. ಜೂನ್, ಜುಲೈ ಅಥವಾ ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು ಎಂದು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಹೈಕೋರ್ಟ್‌ಗೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ಸರ್ಕಾರವು ವಾಗ್ದಾನಕ್ಕೆ ತಕ್ಕಂತೆ ನಡೆದುಕೊಳ್ಳದೇ ಇದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಮುಂದುವರೆಸುವ ಸ್ವಾತಂತ್ರವನ್ನು ಆಯೋಗಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದರು. ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ಸರ್ಕಾರವು 2023ರ ಡಿಸೆಂಬರ್ 19ರಂದೇ ಹೈಕೋರ್ಟ್ ಗೆ ಭರವಸೆ ನೀಡಿತ್ತು. ಆದರೆ ಪಾಲನೆ ಮಾಡಿಲ್ಲ ಎಂದು ರಾಜ್ಯ ಚುನಾವಣೆ ಆಯೋಗವು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಸಲ್ಲಿಸಿತ್ತು.
ಅಲ್ಲದೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸುವುದಕ್ಕೆ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ನಿಗದಿಪಡಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರಕ್ಎಕ 2020ರ ಡಿಸೆಂಬರ್‍ನಲ್ಲಿಯೇ 5 ಲಕ್ಷ ದಂಡ ವಿಧಿಸಿತ್ತು.
2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಗಳಿಗೆ ಚುನಾವಣೆ ನಡೆಸಲು ಆಯೋಗವು ಸಿದ್ಧತೆ ನಡೆಸಿತ್ತು. ಇದಕ್ಕಾಗಿ ಕ್ಷೆತ್ರತ ಪುನರ್ ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ ಸರ್ಕಾರವು ಏಕಾಏಕೀ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣೆ ಆಯೋಗದಿಂದ ಕಿತ್ತುಕೊಂಡಿತ್ತು. ಇದಕ್ಕಾಗಿ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿ ಅದಕ್ಕೆ ಹೊಣೆ ವಹಿಸಿತ್ತು. ಚುನಾವಣೆ ಆಯೋಗವು ಈಕ್ರಮವನ್ನು ಪ್ರಶ್ನಿಸಿತ್ತು.
ಈ ಮಧ್ಯೆ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರವು ನಿಗದಿತ ಅವಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದೆ. ಅಲ್ಲದೇ ನಗರ ಸ್ಥಳೀಐ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯ7ಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪಾಲಿಸುವಲ್ಲಿಯೂ ಸರ್ಕಾರವು ವಿಫಲವಾಗಿದೆ ಎಂದು 2023ರಲ್ಲಿ ಅರ್ಜಿ ಸಲ್ಲಿಸಿತ್ತು.
ರಾಜ್ಯದಲ್ಲಿ ಒಟ್ಟು 31 ಜಿಲ್ಲಾ ಪಂಚಾಯಿತಿ, 239 ತಾಲೂಕು ಪಂಚಾಯಿತಿಗಳಿವೆ. ವಿಜಯನಗರ ಜಿಲ್ಲೆ ರಚನೆಯಾದ ಮೇಲೆ 30 ಇದ್ದ ಜಿಲ್ಲಾ ಪಂಚಾಯಿತಿಗಳ ಸಂಖ್ಯೆ 31ಕ್ಕೆ ಏರಿತ್ತು. ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಅತೀ ಹೆಚ್ಚು ಎಂದರೆ 91 ಕ್ಷೇತ್ರಗಳಿವೆ. ತುಮಕೂರಲ್ಲಿ 57, ಉತ್ತರ ಕನ್ನಡದಲ್ಲಿ 54, ಕಲಬುರಗಿಯಲ್ಲಿ 48 ಕ್ಷೇತ್ರಗಳಿವೆ. ಕೊಡಗು ಮತ್ತು ಗದಗ ಜಿಲ್ಲಾ ಪಂಚಾಯಿತಿಯಲ್ಲಿ ತಲಾ 25 ಕ್ಷೇತ್ರಗಳಿದ್ದು, ರಾಜ್ಯದಲ್ಲಿಯೇ ಕಡಿಮೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಗಳಾಗಿವೆ.
2016ರಲ್ಲಿ ಕೊನೆ ಚುನಾವಣೆ
ಕರ್ನಾಟಕದಲ್ಲಿ ಕೊನೆ ಬಾರಿ ಅಂದರೇ 2016ರಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿತ್ತು . ಆಗ 30 ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ 10, ಬಿಜೆಪಿ 7, ಜೆಡಿಎಸ್ 2 ಅನ್ನು ವಶಪಡಿಸಿಕೊಂಡಿತ್ತು. 11 ಜಿಲ್ಲಾ ಪಂಚಾಯಿತಿಗಳಲ್ಲಿ ಅತಂತ್ರ ಫಲಿತಾಂಶ ನಿರ್ಮಾಣ ಆಗಿತ್ತು. ಐದು ವರ್ಷದ ಬಳಿಕ 2021ರಲ್ಲಿ ಮತ್ತೆ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದು ನಾಲ್ಕು ವರ್ಷಗಳಿಗೂ ಮೀರಿದ್ದರೂ ಚುನಾವಣೆ ನಡೆದಿರಲಿಲ್ಲ.
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಗೊಂದಲವೇ ಇದಕ್ಕೆ ಮೂಲ ಕಾರಣ. ಈ ಪ್ರಕ್ರಿಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಸರ್ಕಾರಗಳು ಮುಂದೂಡತ್ತಲೇ ಬಂದಿವೆ. 2021 ರಿಂದ 2023ರವರೆಗೆ ಬಿಜೆಪಿ ಸರ್ಕಾರ ಇದ್ದರೆ, ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಪೂರ್ಣಗೊಳಿಸಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಸಾರಥಿಗಳು ಸಿಕ್ಕಿರಲಿಲ್ಲ. ಒಂದು ರೀತಿ ದಿಕ್ಕಿಲ್ಲದ ದೆಸೆಯಿಲ್ಲದಂತಾಗಿತ್ತು.
2021ರಲ್ಲಿ ಜಾರಿಗೆ ತಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆಯು ಈ ವಿಳಂಬಕ್ಕೆ ಮತ್ತಷ್ಟು ಇಂಬು ನೀಡಿದ್ದನ್ನು ಸ್ಮರಿಸಬಹುದು.
 
								 
								 
											





