200 ಕೋಟಿ ಮೊತ್ತದ ಕಾಮಗಾರಿ; ಬಾರದ ಅನುದಾನ, ಮಂಡಳಿಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆಯೇ?

ಬೆಂಗಳೂರು; ನಗರ ಸ್ಥಳೀಯ ಸಂಸ್ಥೆಗಳ ಪರವಾಗಿ ಅಮೃತ ನಗರೋತ್ಥಾನ ಯೋಜನೆ (ಹಂತ 4) ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಯಾವುದೇ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

 

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಕಾರಣ ಮಂಡಳಿಯ ಅರ್ಥಿಕ ಪರಿಸ್ಥಿತಿಯೂ ಹದಗೆಡಲಿದೆ.

 

ಅಂದ ಹಾಗೇ ಇದು ಪ್ರತಿಪಕ್ಷ ಬಿಜೆಪಿಯ ಆರೋಪವಲ್ಲ. ದಲಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರೇ ಖುದ್ದಾಗಿ ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿಯಲ್ಲಿ ವಸ್ತುಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

 

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2025ರ ಸೆ.11ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯ ಸರ್ಕಾರದ ಹಲವು ನಿಗಮ, ಮಂಡಳಿಗಳಿಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುದಾನವನ್ನು ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ. ಅನುದಾನ ಬಿಡುಗಡೆಯಾಗದ ಕಾರಣ, ಬಹುತೇಕ ನಿಗಮ ಮಂಡಳಿಗಳ ಯೋಜನೆಗಳು, ಮತ್ತು ಕೈಗೆತ್ತಿಕೊಂಡಿರುವ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.

 

ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಮಂಡಳಿಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದರೂ ಸಹ ಆರ್ಥಿಕ ಇಲಾಖೆಯು ಅನುದಾನವನ್ನು ಬಿಡುಗಡೆ ಮಾಡಿಲ್ಲ. ಅನುದಾನ ಬಿಡುಗಡೆ ಮಾಡದಿರಲು ರಾಜ್ಯದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿಲ್ಲ ಎನ್ನುವುದೇ ಮೂಲ ಕಾರಣ.

 

ರಾಜ್ಯದ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿಲ್ಲ ಎಂಬ ಆರೋಪಗಳ ನಡುವೆಯೇ ಸಚಿವ ಬೈರತಿ ಸುರೇಶ್‌ ಅವರು ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯ ಆರ್ಥಿಕ ಪರಿಸ್ಥಿತಿಯು ಹದಗೆಡುವ ಸಂಭವವಿದೆ ಎಂದು ಬರೆದಿರುವ ಟಿಪ್ಪಣಿಯು, ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವನ್ನು ನೀಡಿದಂತಾಗಿದೆ.

 

ಅಲ್ಲದೇ ದಕ್ಷಿಣ ಕನ್ನಡದ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಫಲಾನುಭವಿ ಎಂ ಬಾಲಕೃಷ್ಣ ನಾಯಕ್‌ ಎಂಬುವರು ಅಮೃತ್‌ ನಗರೋತ್ಥಾನ ಯೋಜನೆ ಹಂತ 4ರಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ಹಾಗೂ ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸಚಿವ ಬೈರತಿ ಸುರೇಶ್‌ ಅವರ ಟಿಪ್ಪಣಿಯೂ ಮುನ್ನೆಲೆಗೆ ಬಂದಿದೆ.

 

ಸಚಿವರ ಟಪ್ಪಣಿಯಲ್ಲೇನಿದೆ?

 

ಪೌರಾಡಳಿತ ನಿರ್ದೇಶನಾಲಯದಲ್ಲಿ ಅಮೃತ ನಗರೋತ್ಥಾನ ಯೋಜನೆ ಹಂತ 4ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿಯಿಮದ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರೆ ಸದರಿ ಕಾಮಗಾರಿಗಳಿಗೆ ಯಾವುದೇ ಅನುದಾನವನ್ನು ಬಿಡುಗಡೆಗೊಳಿಸಿರುವುದಿಲ್ಲ. ಸುಮಾರು 200 ಕೋಟಿ ರು ಮೊತ್ತದ ಕಾಮಗಾರಿಗಳನ್ನು ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.  ಈ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಮಂಡಳಿಯ ಆರ್ಥಿಕ ಪರಿಸ್ಥಿತಿ ಹದಗೆಡುವ ಸಂಭವವಿರುತ್ತದೆ.

 

 

ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ  ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಬೇಕಾಗಿರುವ ಅನುದಾನವನ್ನು ನೀಡಲು ಆಡಳಿತ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಸಚಿವ ಬೈರತಿ ಸುರೇಶ್ ಅವರು ಕೋರಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಏನಿದು ಅಮೃತ್‌ ನಗರೋತ್ಥಾನ ಯೋಜನೆ?

 

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯುತಿಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯನ್ನು ಜಾರಿಗೊಳಿಸಿದೆ. ವಿಶೇಷವೆಂದರೇ ಅಮೃತ್‌ ನಗರೋತ್ಥಾನ 2.0 ಹಂತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೂ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಿಲ್ಲ.

 

ಕರ್ನಾಟಕದ ಒಟ್ಟದು ಜನಸಂಖ್ಯೆ 61.13 ದಶಲಕ್ಷ (2011ರ ಜನಗಣತಿಯ ಪ್ರಕಾರ) ಸುಮಾರು 23.6 ದಶಲಕ್ಷ ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ. 38.57 ಜನಸಂಖ್ಯೆಯ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ತೀವ್ರ ವೇಗದ ನಗರೀಕರಣ ಎಲ್ಲಾ ನಗರಗಳು, ಪಟ್ಟಣಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಉಂಟು ಮಾಡಿದೆ.

 

 

ಮೂಲಭೂತ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಮೇಲೆ ಕೇಂದ್ರೀಕರಿಸಲು ರಾಜ್ಯ ಸರ್ಕಾರವು ಈ ಪಟ್ಟಣಗಳಲ್ಲಿ ಪೌರ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿಸ್ತರಿಸುವುದು ಈ ಅಮೃತ್‌ ನಗರೋತ್ಥಾನ ಯೋಜನೆಯ ಉದ್ದೇಶವಾಗಿದೆ.

 

ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಮೇಲ್ದರ್ಜೆ ಮತ್ತು ನಾಗರಿಕ ಸೇವೆಗಳನ್ನು ತಲುಪಿಸುವ ಬಗ್ಗೆ ಸುಧಾರಣೆಗಳನ್ನು ತರುವ ಉದ್ದೇಶದಿಂದಾಗಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಮೊದಲನೇ, ಎರಡನೇ ಹಂತದ ಯೋಜನೆಗಳನ್ನು ಮತ್ತು ನಗರೋತ್ಥಾನ (ಮುನಿಸಿಪಾಲಿಟಿಇ) 3 ಯೋಜನೆಯನ್ನು 2009-10, 2012-13 ಮತ್ತು 2016-17ನೇ ಸಾಲಿನಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು.

 

ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಮಾದರಿಯಂತೆ ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ದಿ ಪಡಿಸಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ (ಹಂತ 4)ನ್ನು ಜಾರಿಗೊಳಿಸಿತ್ತು. ಹಾಲಿ ಇರುವ ನಗರ ಸ್ಥಳೀಯ ಸಂಸ್ಥೆಗಳು, ಮೇಲ್ದರ್ಜೆಗೇರಿಸಿರುವ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಹೊಸದಾಗಿ ಸೃಜಿಸಲಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೆತ್ತಿಕೊಳ್ಳಲು 3,885 ಕೋಟಿ ರು ಗಳ ಪ್ರಸ್ತಾವನೆಯನ್ನು ಮಂಡಿಸಿತ್ತು.

 

ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದ ಹಿಂದಿನ ಬಿಜೆಪಿ ಸರ್ಕಾರವು 2022ರ ಜನವರಿ 14ರಂದೇ ಆದೇಶ ಹೊರಡಿಸಿತ್ತು.

 

 

 

ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು ಗ್ರೇಡ್‌ 1 ನಗರಸಭೆಗಳು (23) ಅಮೃತ ನಗರೋತ್ಥಾನ ಮುನಿಸಿಪಾಲಿಟಿ ಯೋಜನೆಗೆ 920.00 ಕೋಟಿ, ಇನ್ನುಳಿದ 38 ಎಲ್ಲಾ ನಗರಸಭೆಗಳು 1,1140 ಕೋಟಿ, ಪುರಸಭೆಗಳು 1,240 ಕೋಟಿ, 117 ಪಟ್ಟಣ ಪಂಚಾಯ್ತಿಗಳಿಗೆ 585 ಕೋಟಿ ಸೇರಿ ಒಟ್ಟಾರೆ 3,885 ಕೋಟಿ ರು.ಗಳನ್ನು ಒದಗಿಸಿತ್ತು.

 

 

ನಗರ ಸ್ಥಳೀಯ ಸಂಸ್ಥೆಗಳ ಪರವಾಗಿ ರಾಜ್ಯ ಸರ್ಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳ ಪಾಲು ಶೆ. 5ರಿಂದ ಶೇ.15ರಷ್ಟಿದೆ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಪಾಲನ್ನು ಹಲವು ವರ್ಷಗಳಿಂದ ನೀಡಿಲ್ಲ.

 

ಹೀಗಾಗಿ ಈ ಯೋಜನೆಗಳ ಪ್ರಗತಿಯು ಕುಂಠಿತವಾಗಿತ್ತು. ಹೀಗಾಗಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ (ಹಂತ 4) ರಲ್ಲಿ ಒದಗಿಸಿರುವ ಅನುದಾನದಲ್ಲಿ ಮೊದಲನೆಯ ಪ್ರಾಶಸ್ತ್ಯವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಂಡಿರುವ ಯೋಜನೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವಂತಿಕೆ ಇದ್ದಲ್ಲಿ ಅದಕ್ಕೆ ಕಡ್ಢಾಯವಾಗಿ ಮೀಸಲಿಡಬೇಕು ಎಂದು 2022ರಲ್ಲೇ ಆದೇಶ ಹೊರಡಿಸಿತ್ತು.

 

ಒಟ್ಟು ಹಂಚಿಕೆಯಾಗಿರುವ 3,885 ಕೋಟಿ ರು.ಗಳಲ್ಲಿ ಸರ್ಕಾರವು ಶೇ. 60ರಷ್ಟು ಹಂಚಿಕೆಯನ್ನು ಅನುದಾನದ ರೂಪದಲ್ಲಿ ಮತ್ತು ಉಳಿದ ಶೇ. 40ರಷ್ಟು ಹಂಚಿಕೆಯನ್ನು ಕೆಯುಐಡಿಎಫ್‌ಸಿ ಕರ್ನಾಟಕ ವಾಟರ್ ಅಂಡ್‌ ಸ್ಯಾನಿಟೇಷನ್‌ ಪೂಲ್ಡ್‌ ಫಂಡ್‌ನ ಟ್ರಸ್ಟ್‌ ವತಿಯಿಂದ ಸಾಲದ ಮುಖಾಂತರ ಭರಿಸಿ 2022-23ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಿತ್ತು.

 

ಒಟ್ಟು 23 ನಗರಸಭೆಗಳಿಗೆ ತಲಾ 40 ಕೋಟಿ, ಇನ್ನುಳಿದ 38 ನಗರಸಭೆಗಳಿಗೆ ತಲಾ 30 ಕೋಟಿ, 124 ಪುರಸಭೆಗಳಿಗೆ ತಲಾ 10 ಕೋಟಿ, 117 ಪಟ್ಟಣ ಪಂಚಾಯ್ತಿಗಳಿಗೆ ತಲಾ 5 ಕೋಟಿ ರು ಗಳನ್ನು ಮಂಜೂರು ಮಾಡಿತ್ತು.

 

 

ರಾಜಧಾನಿಯ ಅಭಿವೃದ್ಧಿಗಾಗಿ ಈ ಹಿಂದಿನ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಒದಗಿಸಿದ್ದ 8149.27 ಕೋಟಿ ರೂ. ಪೈಕಿ 485.06 ಕೋಟಿ ವೆಚ್ಚದ ಕಾಮಗಾರಿಗಳನ್ನು ಈಗಿನ ಕಾಂಗ್ರೆಸ್‌ ಸರಕಾರವು ಕೈಬಿಟ್ಟಿತ್ತು. ಈ ಮೊತ್ತವನ್ನು ಕೇವಲ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗಷ್ಟೇ ಹಂಚಿಕೆ ಮಾಡಿ ಆದೇಶಿಸಿತ್ತು.

 

 

 

ಅಮೃತ್‌ 2.0 ಯೋಜನೆಯಡಿಯಲ್ಲಿ ರಾಜ್ಯದ ಒಟ್ಟು 227 ಸಂಖ್ಯೆ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 9,162 ಕೋಟಿ ರುಗಳಿಗೆ 216 ಸಂಖ್ಯೆಯ ಅಂದಾಜನ್ನು ಸಿದ್ಧಪಡಿಸಲಾಗಿದೆ. 2023ರ ಮೇ 20ರರಿಂದ ಇದುವರೆಗೆ 6,227 ಕೋಟಿ ರು.ಗಳ ಅಂದಾಜು ಮೊತ್ತಕ್ಕೆ 140 ಸಂಖ್ಯೆಯ ಯೋಜನಾ ವರದಿಗಳಿಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿತ್ತು.

 

 

ಅಮೃತ್ 2 ಯೋಜನೆಯಡಿಯಲ್ಲಿ ಈವರೆಗೆ 209 ಸಂಖ್ಯೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು 8,325.00 ಕೋಟಿ ರು.ಗಳಿಗೆ ಆದೇಶ ನೀಡಲಾಗಿದೆ. 2023ರ ಮೇ 20ರಿಂದ 183 ಸಂಖ್ಯೆಯ 7,450.80 ಕೋಟಿ ರು ಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಈವರೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಒಟ್ಟು 2,169.25 ಕೋಟಿ ರು.ಗಳನ್ನು ಪಾವತಿಸಿತ್ತು.

 

ಲೋಕಾಯುಕ್ತಕ್ಕೆ ದೂರು

 

ಮನೆ ದುರಸ್ತಿ, ಶೌಚಾಲಯ ನಿರ್ಮಾಣ, ಸ್ವ ಉದ್ಯೋಗ ಮಾಡಿಕೊಂಡ ನಗರ ಸ್ಥಳೀಯಾಡಳಿತ ಸಂಸ್ಥೆಯ ವ್ಯಾಪ್ತಿಯ ಫಲಾನುಭವಿಗಳಿಗೆ ಎರಡು ವರ್ಷಗಳಾದರೂ ಸರ್ಕಾರದ ಅನುದಾನ ಬಾರದೇ ಈಗ ಸಾಲ ಮರುಪಾವತಿಸಲು ಪರದಾಡಬೇಕಾದ ಸ್ಥಿತಿ ಇದೆ. ಸಹಾಯ ಧನ ಆದೇಶ ಪಡೆದ ಪತ್ರ ಪಡೆದ ಮೂಡಬಿದಿರೆ ಪುರಸಭೆ ವ್ಯಾಪ್ತಿಯ ಫಲಾನುಭವಿಯೊಬ್ಬರು ಲೋಕಾಯಕ್ತದ ಮೊರೆ ಹೊಕ್ಕಿದ್ದರು.

 

ನಗರ ಸ್ಥಳಿಯಾಡಳಿತ ಸಂಸ್ಥೆಗಳು 2023ರ ಪ್ರಾರಂಭದಲ್ಲೇ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಕ್ರಿಯಾ ಯೋಜನೆಯಲ್ಲಿ ಅನುದಾನ ಮೀಸಲಿರಿಸಿತ್ತು. ಇದಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಅನುಮೋದನೆ ಪಡೆದು ಅರ್ಹ ಫಲಾನುಭವಳಿಗೆ ಸಹಾಯದ ಮಂಜೂರಾತಿ, ಕಾಮಗಾರಿ ಆದೇಶ ನೀಡಿತ್ತು. ಆದರೆ ಆದೇಶ ಪಡೆದ ಬಹುತೇಕ ಮಂದಿಗೆ ಬಿಡಿಗಾಸು ಕೂಡ ಬಂದಿಲ್ಲ ಎಂದು ದೂರಿದ್ದರು.

 

ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳಿಯಾಡಳಿತ ಸಂಸ್ಥೆಗಳಾದ ಪುತ್ತೂರು, ಉಳ್ಳಲಾಲ, ನಗರಶಬೆ, ಬಂಟ್ವಾಳ, ಮೂಡುಬಬಿದರೆ, ಸೋಮೇಶ್ವರ ಪುರರ್ಸಬೆ, ಮೂಲ್ಕಿ, ಕೋಟೆಕಾರರು, ಸುಳ್ಯ, ಬೆಳ್ತಂಗಡಿ, ವಿಟ್ಲ ಕಡಬ, ಬಜ್ಬೆ, ಕಿನ್ನಿಗೋಳಿ, ಪಟ್ಟಣ ಪಂಚಾಯ್ತಿ ವಯಾಪ್ತಿಯ ಸಾವಿರದಷ್ಟು ಫಲಾನುಭವಿಗಳಿಗೆ 2.70 ಕೋಟಿ ರು ಬರಬೇಕಿದೆ. 2024ರ ಜನವರಿ ಅಂತ್ಯವೆದವರೆಗೆ 70 ಸಾವಿರ ಬಂದಿದೆ. ಉಳಿದಂತೆ 2 ಕೋಟಿ ರು.ಗಳನ್ನು ಅನುದಾನ ಇನ್ನೂ ಕೂಡ ಬಂದಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.

 

ಉಡುಪಿ ಜಿಲ್ಲೆಯಲ್ಲಿ ದೊಡ್ಡ ಮೊತ್ತವೇ ಬರಬೇಕಿದೆ. ಉಡುಪಿ ನಗರಶಬೆಗೆ 6 ಕೋಟಿ ರು., ಕಾರ್ಕಳ, ಕುಂದಾಪುರ ಹಾಗೂ ಕಾಪು ಪುರಸಭೆಗೆ 1.5 ಕೋಟಿ, ಸಾಲಿಗ್ರಾಮ ಬೈಂದೂರು ಪಟ್ಟಣ ಪಂಚಾಯ್ತಿಗಳಿಗೆ ತಲಾ 76 ಲಕ್ಷ ಸೇಇ ಒಟ್ಟಾರೆ 12.19 ಕೋಟಿ ರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದನ್ನು ಸ್ಮರಿಸಬಹುದು.

 

ಮುಖ್ಯಮಂತ್ರಿ ನವ ನಗರೋತ್ಥಾನ ಕ್ರಿಯಾ ಯೋಜನೆಗೆ 15 ತಿಂಗಳ ಹಿಂದೆಯೇ ಅನುಮೋದನೆ ದೊರೆತಿದ್ದರೂ ನಗರಾಭಿವೃದ್ಧಿ ಇಲಾಖೆಯು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಅನುದಾನಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ವಿಕಾಸಸೌಧ ಮತ್ತು ವಿಧಾನಸೌಧ ಮೆಟ್ಟಿಲು ಹತ್ತಿ ಬಸವಳಿದು ಹೋಗಿದ್ದರು.

 

ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ಮಾಡುವಲ್ಲಿ ನಗರಾಭಿವೃದ್ಧಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ಸಂಬಂಧ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಶಾಸಕರು ಮನವಿ, ದೂರುಗಳನ್ನು ಸಲ್ಲಿಸಿದ್ದರು.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಹಲವು ಕ್ಷೇತ್ರಗಳಿಗೆ ಅನುದಾನದ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿರುವ ಅನುದಾನವನ್ನು ಕಾಂಗ್ರೆಸ್‌ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿರಲಿಲ್ಲ.
ಈ ಸಂಬಂಧ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್‌ ಮುನಿರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024ರ ಮೇ 8ರಂದೇ ಪತ್ರ ಬರೆದಿದ್ದರು.

 

ಪತ್ರದಲ್ಲೇನಿತ್ತು?

 

ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ 8 ವಾರ್ಡ್‌ಗಳ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. ಸರ್ಕಾರದ ಆದೇಶದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಲ್ಲಿ 110 ಕೋಟಿ ರು. ಅಂದಾಜು ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿತ್ತು.

 

110 ಕೋಟಿ ರು ಅನುದಾನದ ಪೈಕಿ ಈಗಾಗಲೇ ಬೃಹತ್‌ ರಸ್ತೆ ವಿಭಾಗದ ವತಿಇಂದ ಚೊಕ್ಕಸಂದ್ರ ವಾರ್ಡ್‌ ನಂ 39ರಲ್ಲಿ 20 ಕೋಟಿ ರು.ಗಳ ಕಾಮಗಾರಿಗಳಿಗೆ ಕಾರ್ಯಾದೇಶವಾಗಿದ್ದು ಕೆಲಸ ಪ್ರಗತಿಯಲ್ಲಿದೆ. ಇತ್ತೀಚೆಗೆ ಉಳಿದ 90 ಕೋಟಿ ರು.ಗಳ ಅನುದಾನದ ಪೈಕಿ 12 ಕೋಟಿ ರು.ಗಳ ಅನುದಾನದ ಪ್ರಸ್ತಾವನೆಗೆ ಮಂಜೂರಾತಿಯಾಗಿರುವುದು ಪತ್ರದಿಂದ ತಿಳಿದು ಬಂದಿತ್ತು.

 

ಉಳಿಕೆ 78 ಕೋಟಿ ರು. ಅನುದಾನಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2023ರ ಜನವರಿ 12ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು.

 

 

 

 

ಒಟ್ಟು 5 ಪ್ರಸ್ತಾವನೆಗಳಿಗೆ ಸುಮಾರು 15 ತಿಂಗಳು ಕಳೆದರೂ ಸಹ ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ದೊರೆತಿರುವುದಿಲ್ಲ. ಸರ್ಕಾರವು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರೂ ಸಹ ಇದುವರೆಗೂ ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆಗೆ ಅನುಮೋದನೆ ನೀಡದೇ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.

 

‘ಈ ಪ್ರಸ್ತಾವನೆಗಳಿಗೆ ತುರ್ತಾಗಿ ಅನುಮೋದನೆ ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ ಎಂದು ದಾಸರಹಳ್ಳಿ ಶಾಸಕ ಎಸ್‌ ಮುನಿರಾಜು ಅವರು 2024ರ ಮೇ 28ರಂದೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

 

 

 

 

 

ಅಕ್ಟೋಬರ್ 2021 ರಲ್ಲಿ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಬಿಜೆಪಿ ಸರ್ಕಾರವು ಬೆಂಗಳೂರಿಗೆ ಅಮೃತ್ ನಗರೋತ್ಥಾನ ಯೋಜನೆಯಡಿ ರೂ.6,000 ಕೋಟಿ ಅನುದಾನವನ್ನು ಘೋಷಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ರಸ್ತೆ ಮೂಲಸೌಕರ್ಯ, ಕೆರೆಗಳು, ಮಳೆನೀರು ಚರಂಡಿಗಳು, ಆಸ್ಪತ್ರೆಗಳು ಮುಂತಾದ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು.

 

ಅಮೃತ್‌ ನಗರೋತ್ಥಾನ ಯೋಜನೆಯಡಿ 2,146 ಕಿ.ಮೀ ರಸ್ತೆಗಳ ಅಭಿವೃದ್ಧಿ (ಒಳಚರಂಡಿ ಸೇರಿದಂತೆ), 67 ಕೆರೆಗಳು ಮತ್ತು 11 ಹೊಸ ಉದ್ಯಾನಗಳ ಅಭಿವೃದ್ಧಿ, ಅಸ್ತಿತ್ವದಲ್ಲಿರುವ 15 ಉದ್ಯಾನವನಗಳ ನವೀಕರಣ, 42 ಹೊಸ ಶಾಲಾ ಕಟ್ಟಡಗಳು ಮತ್ತು ಅಸ್ತಿತ್ವದಲ್ಲಿರುವ 26 ಶಾಲೆಗಳ ನವೀಕರಣ, ನಿರ್ಮಾಣ 40 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 84 ಹಳೆಯ ಪ್ರಾಥಮಿಕ ಕೇಂದ್ರಗಳ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

 

2022-23ರಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಹೊಸ ಶಾಲಾ ಕಟ್ಟಡಗಳ ನಿರ್ಮಾಣದ ರೂಪದಲ್ಲಿ ಬಿಬಿಎಂಪಿ ಶಾಲೆಗಳ ನವೀಕರಣವನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿಯ ಬಜೆಟ್‌ನಲ್ಲಿ ಉಲ್ಲೇಖಿಸಿತ್ತು. ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲು ಕಟ್ಟಡಗಳನ್ನು ಖಚಿತಪಡಿಸಿಕೊಳ್ಳಲು ಬಳಸಲಾಗಿತ್ತು.

 

ಬೆಂಗಳೂರು ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವುದು ಸೇರಿದಂತೆ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಘೋಷಿಸಿದ್ದ ಮುಂದುವರೆದ ಯೋಜನೆಗಳು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

 

ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 6,000 ಕೋಟಿ ರು. ವೆಚ್ಚದಲ್ಲಿ ಅಮೃತ್‌ ನಗರೋತ್ಥಾನ ಯೋಜನೆ ಭಾಗವಾಗಿ ರಸ್ತೆ ಅಭಿವೃದ್ಧಿ, ಗ್ರೇಡ್‌ ಸೆಪರೇಟರ್‌, ಕೆರೆ ಅಭಿವೃದ್ಧಿ, ಬೃಹತ್‌ ನೀರುಗಾಲುವೆ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿ ಚಟುವಟಿಕೆ, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ಕೊಳಚೆಪ್ರದೇಶ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಿಂದಿನ ಬಜೆಟ್‌ನಲ್ಲಿ ಹೊಸ ಯೋಜನೆ ಎಂದು ಘೋಷಿಸಿತ್ತು.

 

ಆದರೀಗ ಬಿಬಿಎಂಪಿಯಿಂದ ಇನ್ನೂ ಟೆಂಡರ್‌ಗಳನ್ನು ಆಹ್ವಾನಿಸುವ ಹಂತದಲ್ಲೇ ಇದೆ. ಎಲ್ಲಾ ವಿಧಾನಸಭಾ ಕ್ಷೇತ್ರವಾರು ಟೆಂಡರ್‌ಗಳನ್ನು ಆಹ್ವಾನಿಸುತ್ತಿದೆ ಎಂದು ವಿವರಣೆ ನೀಡಿರುವ ನಗರಾಭಿವೃದ್ಧಿ ಇಲಾಖೆಯು ಹಲವು ಟೆಂಡರ್‌ಗಳಿಗೆ ಸರ್ಕಾರವು ಇನ್ನು ಅನುಮೋದನೆಯನ್ನೇ ನೀಡಿರಲಿಲ್ಲ.

 

ಬೆಂಗಳೂರು ನಗರದ ರಾಜಕಾಲುವೆಗಳಲ್ಲಿ ಕೊಲಚೆ ನೀರನ್ನು ಬೇರ್ಪಡಿಸಿ ಪುನರುಜ್ಜೀವನಗೊಳಿಸಿ ನಾಗರೀಕರಿಗೆ ವಿಹಾರ ತಾಣವಾಗಿ ಅಭಿವೃದ್ಧಿಪಡಿಸಲು 195.00 ಕೋಟಿ ರು. ವೆಚ್ಚದ ಮುಂದುವರೆದ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಶೇ.60ರಷ್ಟು ಪ್ರಗತಿ ಸಾಧಿಸಿದೆ.  ಮಾರ್ಚ್‌ 2023ರೊಳಗಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿತ್ತಾದರೂ  ಅದಕ್ಕೆ ಬದ್ಧತೆಯನ್ನು ಪ್ರದರ್ಶಿಸಿರಲಿಲ್ಲ.

 

ಮನೆಗಳು ಹಾಗೂ ವಸತಿ ಬಡಾವಣೆಗಳನ್ನು ನಿರ್ಮಿಸಲು ಅವಶ್ಯಕವಿರುವ ಹಲವು ಇಲಾಖೆಗಳ ಅನುಮತಿ ಪಡೆಯುವ ವಿಧಾನದಲ್ಲಿ ಸರಳೀಕರಣಗೊಳಿಸಲು ಉದ್ದೇಶಿಸಿದೆ ಎಂದು ಘೋಷಣೆ ಮಾಡಿದ್ದ ಇಲಾಖೆಯು, ಇನ್ನೂ ಅಂತರ್ಜಾಲ ತಂತ್ರಾಂಶದಲ್ಲಿ ಸಂಯೋಜನೆಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿರಲಿಲ್ಲ.

 

ಬೆಂಗಳೂರು ನಗರದ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 2006ರಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್‌ ರಸ್ತೆಯನ್ನು ಹಾದು ಹೋಗಿ ಹೊಸೂರು ರಸ್ತೆ ಸೇರುವ 73.0 ಕಿ ಮೀ ಉದ್ದ ಹಾಗೂ 100 ಮೀ ಅಗಲದ ಫೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರು.ಅನುಮೋದಿಸಿತ್ತು.

 

ಪ್ರಸಕ್ತ ವರ್ಷದಲ್ಲೇ ಕಾಮಗಾರಿ ನಿರ್ವಹಿಸಲು DBFOT ಮಾದರಿಯಲ್ಲಿ ಗುತ್ತಿಗೆದಾರರೇ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚವನ್ನು ಭರಿಸುವುದರೊಂದಿಗೆ ಟೆಂಡರ್‌ ಕರೆದು ಕಾಮಗಾರಿ ಚಾಲನೆಗೊಳಿಸಲಾಗುವುದು ಎಂದು ಹೇಳಿತ್ತು. ಈ ಸಂಬಂಧ ಬಿಡಿಎಯು ಟೆಂಡರ್‌ ಕರೆದಿತ್ತಾದರೂ ಇದುವರೆಗೂ ಈ ಪ್ರಕ್ರಿಯೆಯು ಅಂತಿಮಗೊಂಡಿರಲಿಲ್ಲ.

 

2022ರ ಜುಲೈ 16ರಂದು ಎರಡನೇ ಬಾರಿ ಟೆಂಡರ್‌ ಕರೆದಿತ್ತು. ಆದರೆ ಯಾವುದೇ ಬಿಡ್‌ದಾರರು ಭಾಗವಹಿಸಿಲ್ಲ. ಹೀಗಾಗಿ ಮೂರನೇ ಬಾರಿಗೆ ಟೆಂಡರ್‌ ಆಹ್ವಾನಿಸಲು ಕ್ರಮಕೈಗೊಂಡಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಹೇಳಿತ್ತು.

 

ಇದೇ ಬಡಾವಣೆಗೆ ಸಂಬಂಧಿಸಿದಂತೆ ವಿವಿಧ ಬ್ಲಾಕ್‌ಗಳ ನಡುವೆ ಸಂಪರ್ಕ ಏರ್ಪಡಿಸಲು ಅತ್ಯವಶ್ಯಕವಾಗಿರುವ 35 ಸೇತುವೆಗಳ ನಿರ್ಮಾಣ ಕಾಮಗಾರಿಗಳಿಗಾಗಿ ಅಂದಾಜು 3,217.00 ಲಕ್ಷ ರು.ಗಳಲ್ಲಿ ಟೆಂಡರ್‌ ಆಹ್ವಾನಿಸಲು ಪ್ರಸ್ತಾವನೆ ಸಲ್ಲಿಸಿದೆ. ನೀರು ಸರಬರಾಜು, ಒಳಚರಂಡಿ ಹಾಗೂ ಯುಟಿಲಿಟಿ ಡಕ್ಟ್‌ ಕಾಮಗಾರಿಗಳಿಗಾಗಿ 1,169 ಕೋಟಿ ರು. ವ್ಯಯಿಸಿರುವ ಬಿಡಿಎಯು ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 450.42 ಕೋಟಿ ರು. ಮತ್ತು ಸಿವಿಲ್‌ ಕಾಮಗಾರಿಗಾಗಿ 721.11 ಕೋಟಿ ವ್ಯಯಿಸಿದ್ದು ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 239.43 ಕೋಟಿ ಅನುದಾನಕ್ಕಾಗಿ ಸರ್ಕಾರವನ್ನು ಬಿಡಿಎಯು ಈಗಲೂ  ಎದುರು ನೋಡುತ್ತಿದೆ.

 

ಬನಶಂಕರಿ ಜಂಕ್ಷನ್‌ನಲ್ಲಿ 45 ಕೋಟಿ ರು. ವೆಚ್ಚದಲ್ಲಿ ಸ್ಕೈವಾಕ್ಗ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿತ್ತಾದರೂ ಈ ಸಂಬಂಧದ ಪ್ರಸ್ತಾವನೆಯು ಸರ್ಕಾರದ ಹಂತದಲ್ಲೇ ಇದೆ. ಕಡತವು ಆರ್ಥಿಕ ಇಲಾಖೆ ಸಹಮತಿಗಾಗಿ ಸಲ್ಲಿಕೆಯಾಗಿದೆಯೇ ವಿನಃ ವರ್ಷ ಕಳೆದರೂ ಸ್ಕೈವಾಕ್‌ ನಿರ್ಮಾಣವಾಗಿಲ್ಲ.

Your generous support will help us remain independent and work without fear.

Latest News

Related Posts