ಅರಣ್ಯ ಪ್ರದೇಶವನ್ನೇ ಗೋಮಾಳವೆಂದು ಮಾರ್ಪಾಡು; ಮಲ್ಲೇಶ್ವರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಗೆ ಅವಕಾಶ

ಚಿಕ್ಕಮಗಳೂರು; ಕಡೂರು ಗ್ರಾಮದ ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍ ‌118ರಲ್ಲಿನ ಅರಣ್ಯ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಕಡೂರು ತಾಲೂಕಿನ ಕಸಬಾ ಹೋಬಳಿಯ ಮಲ್ಲೇಶ್ವರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಕಾನೂನುಬಾಹಿರವಾಗಿ ಗುತ್ತಿಗೆ ನೀಡಲಾಗಿದೆ ಎಂದು ವರದಿ ಸಲ್ಲಿಕೆಯಾಗಿದ್ದರೂ ಅರಣ್ಯ ಇಲಾಖೆಯು ಇದುವರೆಗೂ ಬಿಗಿಯಾದ ಕ್ರಮವನ್ನು ಕೈಗೊಂಡಿಲ್ಲ. ಅಲ್ಲದೇ ಅರಣ್ಯ ಪ್ರದೇಶವನ್ನು ಗೋಮಾಳ ಎಂದು ಬದಲಿಸಿದ್ದರೂ ಸಹ ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.

 

ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಅರಣ್ಯ ಸಂರಕ್ಷಣಾಧಿಕಾರಿಗೆ ಈ ಕುರಿತು 2025ರ ಸೆ. 23ರಂದೇ ಸಮಗ್ರ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಲ್ಲೇಶ್ವರ ಗ್ರಾಮಸ್ಥರು ಮತ್ತು ಕಡೂರು ಪಟ್ಟಣದ ನಾಗರಿಕರು ಕರ್ನಾಟಕ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿಗೆ 2025ರ ಫೆ.28ರಂದು ದೂರು ನೀಡಿದ್ದರು. ಈ ದೂರನ್ನಾಧರಿಸಿ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯು 2025ರ ಏಪ್ರಿಲ್‌ 21ರಂದು ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಅರಣ್ಯ ಇಲಾಖೆಯು 4 ಪುಟಗಳ ವಸ್ತುನಿಷ್ಠ ವರದಿಯನ್ನು ಪಡೆದುಕೊಂಡಿದೆ.

 

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ದ್ವಂದ ನಿಲುವು

 

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 118ರಲ್ಲಿ ಈ ಹಿಂದೆ 5 ಎಕರೆ ವಿಸ್ತೀರ್ಣದ ಜಾಗವನ್ನು ಖಾಸಗಿಯವರಿಗೆ ಕಲ್ಲು ಗಣಿಗಾರಿಕೆ ಮಾಡಲು ಗುತ್ತಿಗೆ ನೀಡಲಾಗಿತ್ತು. ಪ್ರಸ್ತುತ ಇದೇ ಸರ್ವೇ ನಂಬರ್‍‌ನಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೋರಿ ಮತ್ತು ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಅನೇಕ ಪಾರಂಪರಿಕ ವೃತ್ತಿ ಕಸುಬುದಾರರರು 120 (3)ರಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿವೆ.

 

ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್ 118ರಲ್ಲಿ ಮೀಸಲು ಅರಣ್ಯವಿದೆ. ಸೆಕ್ಷನ್‌ 4 ಪ್ರಕಾರ ಘೋಷಿತ ಪ್ರದೇಶ ಹಾಗೂ ಡೀಮ್ಡ್‌ ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ನಿರಾಕ್ಷೇಪಣ ಪತ್ರ ನೀಡಿಲ್ಲ. ಆದರೆ 2015ರ ನವೆಂಬರ್‍‌ 16ರಂದೇ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 118ರ ಪ್ರದೇಶವು ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್‌ಒಸಿ ನೀಡಿದ್ದರು. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ದ್ವಂದ್ವ ನಿಲುವನ್ನು ಹೊಂದಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್‌ಒಸಿ ನೀಡಿರುವ ಕಾರಣ ಪಾರಂಪರಿಕ ವೃತ್ತಿ ಕಸುಬುದಾರರಿಗೆ ಅನ್ಯಾಯವಾಗಿತ್ತು. ಕ್ರಷರ್ ಮಾಲೀಕರೊಂದಿಗೆ ಶಾಮೀಲಾಗಿದ್ದಲ್ಲದೇ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ದಾರಿಮಾಡಿಕೊಡಲಾಗಿತ್ತು. ಈ ಸಂಬಂಧ ಮಲ್ಲೇಶ್ವರ ಗ್ರಾಮಸ್ಥರು ಮತ್ತು ಕಡೂರು ಪಟ್ಟಣ ನಾಗರೀಕರು ದೂರು ಸಲ್ಲಿಸಿದ್ದರು.

 

ಕಡೂರು ಗ್ರಾಮ ಪಂಚಾಯ್ತಿ

 

 

ಈ ಕುರಿತು ಅರಣ್ಯ ಇಲಾಖೆಯು ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದೆ. ಇದರ ಪ್ರಕಾರ ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 118ರಲ್ಲಿ ಮೂಲ ಆಕಾರ್ ಬಂದ್ ಪ್ರಕಾರ 234 ಎಕರೆ 26 ಗುಂಟೆ ವಿಸ್ತೀರ್ಣದ ಜಮೀನಿದೆ. ಕಂದಾಯ ಇಲಾಖೆಯ ದಾಖಲಾತಿಯಂತೆ (MR 7/1988-89) ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 118ರಲ್ಲಿ 220 ಎಕರೆ ಜಮೀನಿದೆ. ಸರ್ವೆ ನಂಬರ್‍‌ 117ರಲ್ಲಿ 10 ಎಕರೆ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ನಮೂದಾಗಿದೆ.

 

ಮಲ್ಲೇಶ್ವರ ಗಣಿಗಾರಿಕೆ ಸ್ಯಾಟ್‌ಲೈಟ್‌ ಚಿತ್ರ

 

 

ಅದರಂತೆ 2005ರ ಫೆ.17ರಿಂದ 2006ರ ಅಕ್ಟೋಬರ್‍‌ 27ರವರೆಗೆ ಈ ಸರ್ವೇ ನಂಬರ್‍‌ನ ಪಹಣಿಯಲ್ಲಿ ಕಲಂ 9ರಲ್ಲಿ 220 ಎಕರೆ 34 ಗುಂಟೆ ವಿಸ್ತೀರ್ಣದ ಪೈಕಿ 46 ಎಕರೆ 10 ಗುಂಟೆ ಖರಾಬು ಪ್ರದೇಶವಿತ್ತು.

 

 

 

 

ಇದನ್ನು ಹೊರತುಪಡಿಸಿ ಪಹಣಿಯ ಕಾಲಂ 9ರಲ್ಲಿ 170 ಎಕರೆ 24 ಗುಂಟೆ ಪ್ರದೇಶವು ಅರಣ್ಯ ಇಲಾಖೆಗೆ ಎಂದು ನಮೂದಾಗಿತ್ತು. 1978ರ ಮೇ 8ರ ಸರ್ಕಾರದ ಆದೇಶದ ಪ್ರಕಾರ ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 112, 132, 118ರ ಜಮೀನುಗಳನ್ನು MR 14/1993-94ರಂತೆ ಸರ್ವೆ ನಂಬರ್‍‌ 112ರಲ್ಲಿ 60 ಎಕರೆ, ಸರ್ವೆ ನಂಬರ್‍‌ 132ರಲ್ಲಿ 23 ಎಕರೆ 23 ಗುಂಟೆ, ಸರ್ವೆ ನಂಬರ್‍‌ 118ರಲ್ಲಿ 170 ಎಕರೆ 24 ಗುಂಟೆ ಪ್ರದೇಶವು ಅರಣ್ಯ ಇಲಾಖೆಗೆ ಖಾತೆ ದಾಖಲು ಎಂದು ಮ್ಯೂಟೇಷನ್‌ ಕೂಡ ದಾಖಲಾಗಿತ್ತು.

 

ಮಲ್ಲೇಶ್ವರ ಗ್ರಾಮದಲ್ಲಿ ನಡೆಯುತ್ತಿರುವ ಅನಧಿಕೃತ ಕಲ್ಲು ಗಣಿಗಾರಿಕೆ

 

ಅಲ್ಲದೇ 2007ರ ಆಗಸ್ಟ್‌31ರಿಂದ 2015ರ ಮಾರ್ಚ್‌ 4ವರೆಗಿನ ಪಹಣಿ ದಾಖಲೆ ಪ್ರಕಾರ ಸರ್ವೆ ನಂಬರ್‍‌ 118ರಲ್ಲಿ 220 ಎಕರೆ 34 ಗುಂಟೆ, 46 ಎಕರೆ 10 ಎಕರೆ ಫೂಟ್‌ ಖರಾಬ್‌, ಕಾಲಂ 9ರಲ್ಲಿ 4 ಎಕರೆ ಗೋಮಾಳ, ಇನ್ನುಳಿದ 170 ಎಕರೆ 24 ಗುಂಟೆ ಅರಣ್ಯ ಇಲಾಖೆ ಎಂದಿದೆ.

 

 

 

 

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯವು 2015ರ ಫೆ.3 ರಂದು 118ರ ಪಹಣಿ ದಾಖಲೆಯಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಅರಣ್ಯ ಪ್ರದೇಶವನ್ನು ಗೋಮಾಳ ಎಂದು ದಾಖಲಿಸಲು ಆದೇಶಿಸಿತ್ತು. ಅದರಂತೆ ಹಿಂದಿನ ಪಹಣಿ ದಾಖಲೆಯಲ್ಲಿ ಅರಣ್ಯ ಎಂದು ನಮೂದಾಗಿದ್ದ 170 ಎಕರೆ 24 ಗುಂಟೆಯನ್ನು ಗೋಮಾಳ ಎಂದು ದಾಖಲಿಸಲಾಗಿತ್ತು. 2015 ರ ಸೆ.1ರಿಂದ 2017ರ ಆಗಸ್ಟ್‌ 18ರವರೆಗೆ ಪಹಣಿ ದಾಖಲೆಯಲ್ಲಿ ಒಟ್ಟು 185 ಎಕರೆ 04 ಗುಂಟೆ ಗೋಮಾಳ ಎಂದು ದಾಖಲಾಗಿತ್ತು.

 

ನಂತರದ ದಿನಗಳಲ್ಲಿ ಮಲ್ಲೇಶ್ವರ ಗ್ರಾಮದ ಸರ್ವೆ ನಂಬರ್‍‌ 118ರಲ್ಲಿ ಪರಿಗಣಿತ ತಜ್ಞರ ಸಮಿತಿಯು ಡೀಮ್ಡ್‌ 1ರ ಪಟ್ಟಿಯಲ್ಲಿ 170 ಎಕರೆ 10 ಗುಂಟೆ ಜಾಗವನ್ನು ಸೇರಿಸಿತ್ತು. ಅಲ್ಲದೇ ಪರಿಷ್ಕರಿಸಿದ ಡೀಮ್ಡ್‌ 2ರ ಪಟ್ಟಿಯಲ್ಲಿ ಇದರ ಪೂರ್ಣ ವಿಸ್ತೀರ್ಣವನ್ನು ಕೈಬಿಡಲಾಗಿತ್ತು.

 

ವನ್‌ 1980, 1988 ಹಾಗೂ 2023ರ ತಿದ್ದುಪಡಿಗಳು, ವನ್‌ ನಿಯಮಗಳು 2023ರ ನಿಯಮಾನುಸಾರ ಕಂದಾಯ ದಾಖಲೆಗಳಲ್ಲಿ ಅರಣ್ಯವೆಂದು ದಾಖಲಿಸಿದ್ದ ಮಲ್ಲೇಶ್ವರದ ಸರ್ವೆ ನಂಬರ್‍‌ 118ರ ಅರಣ್ಯ ಪ್ರದೇಶದಲ್ಲಿ ಯಾವುದೇ ಕಲ್ಲು ಗಣಿ ಕೋರಿ ಸಲ್ಲಿಸುವಾ ಅರ್ಜಿಗಳನ್ನು ವನ ಸಂವರ್ಧನೆ ಕಾಯ್ದೆ, ವನ ಸಂರಕ್ಷಣೆ ವನ ಸಂವರ್ಧನೆ ಅಧಿನಿಯಮ 2023ರ ಪ್ರಕಾರ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ನಿರ್ದೇಶಿಸಲಾಗಿತ್ತು.

 

5 ಎಕರೆಯಲ್ಲಿ ಕಲ್ಲು ಗಣಿ ಗುತ್ತಿಗೆ

 

ಅರಣ್ಯ ಪ್ರದೇಶವನ್ನು ಗೋಮಾಳ ಎಂದು ಮಾರ್ಪಡಿಸುತ್ತಿದ್ದಂತೆ ಸರ್ವೆ ನಂಬರ್‍‌ 118ರಲ್ಲಿನ 170 ಎಕರೆ 24 ಗುಂಟೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಗ್ಗೆ ಈ ಪ್ರದೇಶದ ಮೂಲಸ್ಥಿತಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲಿಸಿರಲಿಲ್ಲ, ತಪಾಸಣೆಯನ್ನೂ ಮಾಡಿರಲಿಲ್ಲ. ಆದರೂ ಈ ಪ್ರದೇಶದಲ್ಲಿ ಕಲ್ಲು ಗಣಿ ಗುತ್ತಿಗೆ ಕೋರಿ ಸಲ್ಲಿಕೆಯಾದ ಅರ್ಜಿಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಎನ್ಒಸಿ ನೀಡಿದ್ದರು. ಈ ಎನ್‌ಒಸಿಯಂತೆ ಕೆ ಚೇತನ್‌ ಎಂಬುವರಿಗೆ 5 ಎಕರೆ ಪ್ರದೇಶದಲ್ಲಿ ಕಲ್ಲುಗಣಿ ಗುತ್ತಿಗೆ ನೀಡಿದ್ದರು.

 

 

 

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ

 

ಚಿಕ್ಕಮಗಳೂರು ಜಿಲ್ಲೆಯ ಕಂದಾಯ ದಾಖಲೆಗಳಲ್ಲಿ ಅರಣ್ಯವೆಂದು ನಮೂದಾಗಿರುವುದನ್ನು ಬದಲಿಸಿ ಗೋಮಾಳವೆಂದು ಮಾರ್ಪಡಿಸಿ ನೀಡಿದ ಆದೇಶವು ಮತ್ತು ಮಾರ್ಪಡಿಸಿದಂತಹ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆಗಾಗಿ ಅರಣ್ಯ ಅಭಿಪ್ರಾಯ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಅರಣ್ಯ ಸಂರಕ್ಷಣಾ ಕಾಯ್ದೆಯ 1980ರ ಮತ್ತು ಸರ್ವೋಚ್ಛ ನ್ಯಾಯಾಲಯವು ಗೋದಾವರ್ಮನ್ ತಿರುಮಲ ಪಾಡ್‌ ಮತ್ತು ಭಾರತ ಸರ್ಕಾರದ ರಿಟ್‌ ಅರ್ಜಿ (202/1995)ರ ಪ್ರಕರಣದಲ್ಲಿ ನೀಡಿದ ಆದೇಶದ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅರಣ್ಯವೋ…ಕಂದಾಯವೋ

 

ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದೆಯೇ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ 2023-24ನೇ ಸಾಲಿನಲ್ಲಿ ಒಟ್ಟು 199 ಎಕರೆ 04 ಗುಂಟೆ ಪ್ರದೇಶವನ್ನು ಜಂಟಿ ಮೋಜಣಿ ನಡಸಿ ಸ್ಥಳದ ನಕಾಶೆ ತಯಾರಿಸಲಾಗಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಅರಣ್ಯ ಮತ್ತು ಗೋಮಾಳ ಎಂದು ಗುರುತಿಸಬೇಕಿತ್ತು.

 

ಮಲ್ಲೇಶ್ವರ ಅರಣ್ಯ ವ್ಯಾಪ್ತಿಯೊಳಗೆ ಕಲ್ಲು ಗಣಿಗಾರಿಕೆ ನಡೆದಿರುವ ಚಿತ್ರ

 

ಹೀಗಾಗಿ ಕಡೂರು ತಾಲೂಕಿನ ತಹಶೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿ ಮೋಜಣಿ ನಡೆಸಲು ಪತ್ರ ಬರೆದಿದ್ದರು.  ಈ ಪ್ರಕ್ರಿಯೆ ಅಂತಿಮಗೊಳ್ಳುವವರೆಗೂ ಕಲ್ಲು ಗಣಿ ಗುತ್ತಿಗೆಗೆ ನೀಡಿರುವ ಪರವಾನಿಗೆಯನ್ನು ತಡೆ ಹಿಡಿಯಬೇಕು ಮತ್ತು ಯಾವುದೇ ಕಲ್ಲು ಗಣಿ ಉತ್ಪನ್ನವನ್ನು ಸಾಗಾಣಿಕೆ ಮಾಡಲು ರಹದಾರಿ ನೀಡಬಾರದು ಗಣಿ ಇಲಾಖೆಗೆ 2025ರ ಮಾರ್ಚ್‌ 15ರಂದೇ ಪತ್ರ ಬರೆದಿತ್ತು.

 

ಹೊರಭಾಗದಲ್ಲೂ ಅಕ್ರಮ ಗಣಿಗಾರಿಕೆ

 

ಆದರೂ ಕೆ ಚೇತನ್‌ ಎಂಬುವರಿಗೆ ಗುತ್ತಿಗೆ ನೀಡಿದ್ದ 5 ಎಕರೆ ಪ್ರದೇಶ ವ್ಯಾಪ್ತಿಯನ್ನೂ ಮೀರಿ ಹೆಚ್ಚುವರಿಯಾಗಿ ಹೊರಭಾಗದ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆದಿತ್ತು. ಈಕುರಿತು 2025ರ ಮೇ 5ರಂದು ವಲಯ ಅರಣ್ಯಾಧಿಕಾರಿ ವರದಿಯನ್ನೂ ಸಲ್ಲಿಸಿದ್ದರು. ಕಲ್ಲು ಗಣಿ ಗುತ್ತಿಗೆ ನೀಡಿರುವ ನಕ್ಷೆಯಂತೆಯೇ ಪ್ರದೇಶದ ಹೊರಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕ ಅರಣ್ಯ ಕಾಯ್ದೆ 1963ರ ಪ್ರಕರಣಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಲಾಗಿತ್ತು.

 

 

ಸದ್ಯ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ( ಗುತ್ತಿಗೆ ಸಂಖ್ಯೆ 526) ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ಡ್ರೋನ್‌ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಮೀಕ್ಷೆ ವರದಿ ಸ್ವೀಕೃತಗೊಂಡ ನಂತರ ನಷ್ಟದ ಪ್ರಮಾಣವನ್ನು ಒಳಗೊಂಡಂತೆ ತನಿಖಾ ವರದಿ ಸಲ್ಲಿಸಲಾಗುವುದು ಎಮದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts