ಕಾಲಕಾಲಕ್ಕೆ ನಡೆಯದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ; ನೇಮಕಾತಿ, ಬಡ್ತಿ ಮೇಲೆ ನೇರ ಪರಿಣಾಮ

ಬೆಂಗಳೂರು : ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಸಡಿಲಿಕೆ ಮಾಡಿ  ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ರಾಜ್ಯದ ಬಹುತೇಕ ಇಲಾಖೆಗಳು ʻವೃಂದ ಮತ್ತು ನೇಮಕಾತಿ ನಿಯಮʼಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

 

ಇದು ನೇಮಕಾತಿ ಮತ್ತು ಬಡ್ತಿ ಮೇಲೂ ನೇರವಾಗಿ ಪರಿಣಾಮ ಬೀರುತ್ತಿದೆ. ರಾಜ್ಯದ 38 ಇಲಾಖೆಗಳ ಪೈಕಿ 33 ಇಲಾಖೆಗಳು ಕಳೆದ ಐದು ವರ್ಷಗಳಿಂದ  ವೃಂದ ಮತ್ತು ನೇಮಕಾತಿ ನಿಯಮಗಳನ್ನು (ಸಿ ಅಂಡ್‌ ಆರ್‌) ಪರಿಷ್ಕರಿಸಿಲ್ಲ. ಇದರಲ್ಲಿ ಆರ್ಥಿಕ ಇಲಾಖೆ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಂದಾಯ ಇಲಾಖೆಗಳೂ ಸೇರಿವೆ. ಈ ಬಗ್ಗೆ ನಿಗಾ ವಹಿಸಬೇಕಾಗಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಕೂಡ ಈ ಪಟ್ಟಿಯಲ್ಲಿದೆ.

 

ಸರ್ಕಾರದ ಎಲ್ಲಾ ಇಲಾಖೆಗಳು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕನಿಷ್ಠ ಮೂರು ವರ್ಷಗಳಿಗೊಮ್ಮೆ ಪುನರಾವಲೋಕಿಸಬೇಕೆಂದು ರಾಜ್ಯ ಸರ್ಕಾರ 2004ರಲ್ಲಿ ಆದೇಶ (ಆದೇಶ ಸಂಖ್ಯೆ: ಸಿಆಸುಇ 97 ಸೇನಿಡಿ 2004, ದಿನಾಂಕ 08-10-2004) ಹೊರಡಿಸಿತ್ತು. ಆದರೆ ಕೆಲವು ಇಲಾಖೆಗಳು 20-30 ವರ್ಷಗಳಿಂದ ಈ ನಿಯಮಗಳನ್ನು ಪರಿಷ್ಕರಣೆ ಮಾಡಿಯೇ ಇಲ್ಲ.

 

ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಸಂಬಂಧಸಿದಿಂತೆ ಜುಲೈ 19 ರಂದು ಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ಅಲ್ಲದೆ, ಈ ನಿಯಮಗಳಿಗೆ ಪರಿಷ್ಕರಣೆ ಮಾಡುವ ಕುರಿತು ಆಗಸ್ಟ್‌ 6 ರಂದು ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಆದರೂ ಈ ಪರಿಷ್ಕರಣೆ ಕಾರ್ಯ ಕುಂಟುತ್ತಲೇ ಸಾಗಿದೆ.

 

ಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾವ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಯಾವ ಹಂತದಲ್ಲಿದೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿ, ಚರ್ಚಿಸಲಾಗಿತ್ತು.

 

ಈ ಮಾಹಿತಿಗೆ ಸಂಬಂಧಿಸಿದ ದಾಖಲೆ ʻದಿ ಫೈಲ್‌ʼಗೆ ಲಭ್ಯವಾಗಿದೆ.

 

c and r rules not updated in karnataka

 

ಇದರ ಪ್ರಕಾರ ಬಹುತೇಕ ಇಲಾಖೆಗಳಲ್ಲಿ ಪರಿಷ್ಕರಣೆಯ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಸಂಬಂಧ ಇಲಾಖಾ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಷ್ಕೃತ ಪ್ರಸ್ತಾವನೆ ಪಡೆದು ಇತರೆ ಇಲಾಖೆಗಳ ಅಭಿಪ್ರಾಯಕ್ಕೆ ಕಳಿಸಲು ಕ್ರಮವಹಿಸಲಾಗಿದೆ ಎಂದು ಈ ದಾಖಲೆಯಲ್ಲಿ ಹೇಳಲಾಗಿದೆ.

 

ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೋಡಿಕೊಳ್ಳುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 1978 ರಿಂದ  ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣೆಗೊಂಡೇ ಇಲ್ಲ. ಈಗ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡಿರುವ ಅಭಿಪ್ರಾಯದನ್ವಯ ಪರಿಶೀಲನಾ ಹಂತದಲ್ಲಿದೆ ಎಂದು ಈ ದಾಖಲೆಯಿಂದ ಗೊತ್ತಾಗಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸಮಗ್ರ ಪರಿಷ್ಕರಣೆ ಈಗಾಗಲೇ ಮಾಡಲಾಗಿದೆ. ಆದರೆ ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯದಲ್ಲಿ ಎಲ್ಲ ಹುದ್ದೆಗಳೂ ನಿಯೋಜನೆ ಹುದ್ದೆಗಳಾಗಿದ್ದು, ಪ್ರಸ್ತುತ ಹೊಸದಾಗಿ ಹುದ್ದೆಗಳು ಸೃಜನೆಯಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಇನ್ನೂ ರಚಿಸಬೇಕಾಗಿದೆ.

 

c and r rules not updated in karnataka

 

ಪಂಚಾಯತ್‌ ರಾಜ್‌ ಆಯುಕ್ತಾಲಯದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಸದಾಗಿ ರಚಿಸಲು ಇಲಾಖೆಯ ಆಂತರಿಕ ವೃಂದ ಮತ್ತು ನೇಮಕಾತಿ ನಿಯಮಗಳ ಉಪ ಸಮಿತಿಯನ್ನು ರಚಿಸಿದ್ದು, ಈಗಾಗಲೇ ಈ ಸಮಿತಿ 6 ರಿಂದ 7 ಸಭೆಗಳನ್ನು ನಡೆಸಿ, ಪ್ರಸ್ತುತ ವರದಿ ಸಲ್ಲಿಸುವ ಅಂತಿಮ ಹಂತದಲ್ಲಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.

 

ಕರ್ನಾಟಕ ಗೆಜೆಟಿಯರ್‌ ಇಲಾಖೆ ಮತ್ತು ರಾಜ್ಯ ಪತ್ರಾಗಾರ ಇಲಾಖೆ 2021ರಲ್ಲಿಯೇ ವಿಲೀನಗೊಂಡಿದ್ದರೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಲು ಇನ್ನೂ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಈ ದಾಖಲೆಯಲ್ಲಿ ವಿವರಿಸಲಾಗಿದೆ.

 

ಇದೇ ರೀತಿ 2020ರಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯನ್ನು ಖಜಾನೆ ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿತ್ತು. ಈ ಎರಡು ಇಲಾಖೆಯನ್ನು ಸೇರಿಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವಂತೆ 2024ರಲ್ಲಿಯೇ ಸೂಚಿಸಲಾಗಿತ್ತಾದರೂ ಇನ್ನೂ ನಿಯಮಗಳು ರಚನೆಯಾಗಿಲ್ಲ ಎಂದು ದಾಖಲೆ ವಿವರಿಸಿದೆ.

 

ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಣೆಗೆ ಸಂಬಂಧಿಸಿದಂತೆ ಕಳೆದ ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಮಧು ಜಿ. ಮಾದೇಗೌಡ ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ವಿವಿಧ ಇಲಾಖೆಗಳು ವೃಂದ ಮತ್ತು ನೇಮಕಾತಿ (C&R) ನಿಯಮಗಳ ಪರಿಷ್ಕರಣೆ ಪ್ರಸ್ತಾವನೆಗೆ ನಿಯಮಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನಾ ರಚನೆ ಇಲಾಖೆ ಮತ್ತು ಆರ್ಥಿಕ ಇಲಾಖೆಗಳೊಂದಿಗೆ ಸಮಾಲೋಚನೆ ಮಾಡಲು ಕ್ರಮವಹಿಸಿದ್ದು, ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಉತ್ತರಿಸಿದ್ದರು.

 

 

ಕೃಷಿ ಇಲಾಖೆ ಮಾತ್ರ ಮೂರು ವರ್ಷಗಳ ಹಿಂದೆ ಅಂದರೆ 2022ರಲ್ಲಿ  ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿದೆ. ಇದರ ಪ್ರಕಾರವೇ ಬಡ್ತಿಯನ್ನು ಕೂಡ ನೀಡಲಾಗಿದೆ. ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯು ಈ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾವಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಹಮತಿ ಪಡೆದಿದೆ. ನಿಯಮಗಳನ್ನು ಪರಿಷ್ಕರಿಸಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಈ ಇಲಾಖೆ ಮಾಹಿತಿ ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ.

 

ರಾಜ್ಯ ಪೊಲೀಸ್‌ ಇಲಾಖೆಯು ಸಬ್‌ ಇನ್ಸ್‌ಪೆಕ್ಟರ್‌ ಮತ್ತು ಪೊಲೀಸ್‌ ಕಾನ್ಸ್‌ಟೇಬಲ್‌ ವೃಂದಗಳಲ್ಲಿನ ಹುದ್ದೆಗಳಿಗೆ ವಯಸ್ಸು, ವಿದ್ಯಾರ್ಹತೆ, ದೈಹಿಕ ಅರ್ಹತೆ, ಸಹಿಷ್ಣುತೆ ಪರೀಕ್ಷೆ ಇತ್ಯಾದಿಗಳಲ್ಲಿ ಏಕರೂಪವನ್ನು ಅಳವಡಿಸಿಕೊಂಡು ಮತ್ತು ಸರ್ಕಾರದ  ಸೂಚನೆಯಂತೆ ಮುಂಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಲು ಪರಿಶೀಲಿಸುತ್ತಿದೆ. ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು ಎಂದು ಇಲಾಖೆಯು ಮಾಹಿತಿ ನೀಡಿರುವುದು ಈ ದಾಖಲೆಯಿಂದ ತಿಳಿದುಬಂದಿದೆ.

 

c and r rules not updated in karnataka

 

ನಗರಾಭಿವೃದ್ಧಿ ಇಲಾಖೆಯ, ಪೌರಾಡಳಿತ ಸೇವೆ, ಪೌರಾಡಳಿತ ನಿರ್ದೇಶನಾಲಯ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಕರ್ನಾಟಕ ಲೋಕಸೇವಾ ಆಯೋಗದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಚಿವ ಸಂಪುಟವು 2025ರ ಜನವರಿಯಲ್ಲಿ ಒಪ್ಪಿಗೆ ನೀಡಿದ್ದು, ರಾಜ್ಯಪಾಲರ ಅನುಮೋದನೆಗಾಗಿ ಇದನ್ನು ಮಂಡಿಸಲಾಗಿದೆ ಎಂಬುದು ದಾಖಲೆಯಿಂದ ಗೊತ್ತಾಗಿದೆ.

 

c and r rules not updated in karnataka

 

ಇನ್ನು ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮದ ತಿದ್ದುಪಡಿಗೆ ಸೆಪ್ಟೆಂಬರ್‌ 3ರಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಈ ಇಲಾಖೆಯಲ್ಲಿ ಪರಿಷ್ಕರಿಸಲಾಗಿತ್ತು. ಇದಕ್ಕೆ ತಿದ್ದುಪಡಿ ತರಲು ಶಿಕ್ಷಕರು ಹೋರಾಟ ನಡೆಸಿಕೊಂಡೇ ಬಂದಿದ್ದರು.

 

ಕಂದಾಯ ಇಲಾಖೆಯು ಆಯುಕ್ತಾಲಯದ  ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಲು ನಿರ್ಧರಿಸಿದ್ದ, ಇನ್ನೂ ಮಾಹಿತಿ ಸಂಗ್ರಹಿಸುತ್ತಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯು ಪರಿಷ್ಕರಣೆಯ ಕರಡು ಪ್ರತಿಯನ್ನು ಸಿದ್ಧಪಡಿಸುತ್ತಿದೆ. ಲೋಕೋಪಯೋಗಿ ಇಲಾಖೆಯು ಕೂಡ ಸಮಗ್ರವಾಗಿ ಪರಿಷ್ಕರಿಸಲು ಮುಂದಾಗಿದೆ ಎಂದು ಈ ದಾಖಲೆಗಳಿಂದ ತಿಳಿದು ಬಂದಿದೆ.

 

ಕಾಡುಕುರುಬ ಸೇರಿ 13 ಬುಡಕಟ್ಟುಗಳಿಗೆ ಸಿವಿಲ್ ಸೇವೆಗಳಲ್ಲಿ ವಿಶೇಷ ಪ್ರಾತಿನಿಧ್ಯ, ನೇಮಕಾತಿ; ಮಾನದಂಡವೇನು?

 

ಅರಣ್ಯದ ಅಂಚಿನಲ್ಲಿ ವಾಸಿಸುವ ಜೇನು ಕುರುಬ, ಮಲೆಕುಡಿಯ  ಸೇರಿದಂತೆ ಇನ್ನಿತರೆ 13 ಬುಡಕಟ್ಟು ಜನಾಂಗದವರಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲು ಮುಂದಾಗಿರುವ ಸಂಸದೀಯ ವ್ಯವಹಾರಗಳು, ಶಾಸನ ರಚನೆ  ಇಲಾಖೆಯು ಈ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ  ಹಲವು ಸ್ಪಷ್ಟನೆ ಮತ್ತು ಮಾಹಿತಿಯನ್ನು ಕೋರಿತ್ತು. ಈ ಕುರಿತು ಕೂಡ ʻದಿ ಫೈಲ್‌ʼ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts