ಬೆಂಗಳೂರು; ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಮಂಜೂರು ಮಾಡುವ ಆದೇಶಗಳನ್ನೇ ಜಿಲ್ಲಾ ಮಟ್ಟದ ಕೆಳ ಹಂತದ ಅಧಿಕಾರಿಗಳಿಂದಲೇ ಫೋರ್ಜರಿ ಮಾಡಲಾಗುತ್ತಿದೆ. ಮಂಜೂರು ಮಾಡಿದ್ದ ಮೊತ್ತಕ್ಕಿಂತಲೂ ಮೂರುಪಟ್ಟು ಅನುದಾನವನ್ನು ಮಂಜೂರು ಮಾಡಲಾಗಿದೆ ಎಂಬಂತೆ ಆದೇಶಗಳನ್ನು ಸೃಷ್ಟಿಸಲಾಗುತ್ತಿದೆ. ಫೋರ್ಜರಿ ಮಾಡಿರುವ ಆದೇಶಗಳನ್ನೇ ಗುತ್ತಿಗೆದಾರರಿಗೆ ನೀಡಿ ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಜಿಲ್ಲಾ ಹಂತದಲ್ಲಿರುವ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಸಿ) ರುಗಳೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇಲಾಖೆಗಳ ಮೇಲಾಧಿಕಾರಿಗಳ ನಿರ್ಲಕ್ಷ್ಯ ಅಥವಾ ಕೈಜೋಡಿಸುವುದರಿಂದ ಬೊಕ್ಕಸದ ಹಣವು ನೇರವಾಗಿ ಗುತ್ತಿಗೆದಾರರ ಜೇಬು ಸೇರುತ್ತಿದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಲ್ಲಿಯೂ ವಿಳಂಬವಾಗುತ್ತಿದೆ.
ಸರ್ಕಾರದ ಬೇರೆಲ್ಲಾ ಇಲಾಖೆಗಳಿಗಿಂತಲೂ ಸಮಾಜ ಕಲ್ಯಾಣ ಇಲಾಖೆಯಲ್ಲೇ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿವೆ. ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ಕಾರಿ ಆದೇಶಗಳನ್ನೇ ಫೋರ್ಜರಿ ಮಾಡಲಾಗಿದೆ. ಇಂತಹ ಹಲವು ಪ್ರಕರಣಗಳನ್ನು 2015ರಲ್ಲೇ ಪತ್ತೆ ಹಚ್ಚಿದ್ದ ಸಮಾಜ ಕಲ್ಯಾಣ ಇಲಾಖೆಯು, ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸಿತ್ತು.

ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣವನ್ನು 9 ವರ್ಷಗಳ ಕಾಲ ತನಿಖೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿ ಸಲ್ಲಿಕೆಯಾಗಿ ಒಂದು ವರ್ಷದ ಬಳಿಕ ಸಮಾಜ ಕಲ್ಯಾಣ ಇಲಾಖೆಯು ಆರೋಪಿತ ನೌಕರನನ್ನು ಅಮಾನತುಗೊಳಿಸಿದೆ.
ವಿಶೇಷವೆಂದರೇ ಈ ಪ್ರಕರಣದ ಬಗ್ಗೆ ದೂರುದಾರನಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿದ್ದ ಭಾಸ್ಕರ್ ಎಂಬುವರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳನ್ನೂ ಪ್ರತಿವಾದಿಯನ್ನಾಗಿ ಮಾಡಿದ್ದರು. ಆದರೀಗ ಈ ಪ್ರಕರಣದಲ್ಲಿ ದ್ವಿತೀಯ ದರ್ಜೆ ಸಹಾಯಕರೊಬ್ಬರನ್ನು ಮಾತ್ರ ಸೇವೆಯಿಂದ ಅಮಾನತುಗೊಳಿಸಿದೆ. 2025ರ ಆಗಸ್ಟ್ 28ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ
ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಕಚೇರಿ ಮೂಲಕ ಆದೇಶ ಹೊರಡಿಸಿತ್ತು. ಕೇಂದ್ರ ಕಚೇರಿಯ ಮೂಲ ಆದೇಶದ ಪ್ರಕಾರ ಕೋಲಾರ ಜಿಲ್ಲೆಯ ಕೋಲಾರ ಹಾಗೂ ಮುಳಬಾಗಿಲು ತಾಲೂಕಿನಲ್ಲಿನ 6 ಕಾಮಗಾರಿಗಳಿಗೆ ಮಾತ್ರ ಅನುದಾನವು 2012ರಲ್ಲೇ ಮಂಜೂರಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯ ಮೂಲ ಆದೇಶದಲ್ಲಿ ಈ ಸಂಬಂಧ 12 ಆದೇಶಗಳನ್ನು 2012ರ ಸೆ.13ರಂದು ಹೊರಡಿಸಲಾಗಿತ್ತು. ಈ ಆದೇಶಗಳಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಸಹಿ ಕೂಡ ಇತ್ತು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಸಹಿ ಹೊಂದಿದ್ದ 12 ಆದೇಶಗಳ ನೈಜತೆ ಬಗ್ಗೆ ಅನುಮಾನ ಹೊಂದಿದ್ದ ಇಲಾಖೆಯು ಈ ಸಂಬಂಧ 2 ವರ್ಷದ ಬಳಿಕ ಅಂದರೇ 2014ರ ಮೇ 19ರಂದು ಸ್ಪಷ್ಟನೆ ಕೋರಿತ್ತು. ಈ ಆದೇಶಗಳನ್ನು ಪರಿಶೀಲಿಸಿದ್ದ ಆಯುಕ್ತರ ಕಚೇರಿಯು ಈ ಆದೇಶಗಳನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತಾಲಯದಿಂದ ಹೊರಡಿಸಿಲ್ಲ ಮತ್ತು ಅನುದಾನವನ್ನೂ ಬಿಡುಗಡೆ ಮಾಡಿರಲಿಲ್ಲ ಎಂದು ವರದಿ ನೀಡಿತ್ತು.
ಮಂಜೂರಾಗಿದ್ದು 25 ಲಕ್ಷಕ್ಕೆ, ಫೋರ್ಜರಿ ಆಗಿದ್ದು 2.33 ಕೋಟಿಗೆ
ಕೇಂದ್ರ ಕಚೇರಿಯ ಮೂಲ ಆದೇಶದಲ್ಲಿ ಕೋಲಾರ ಜಿಲ್ಲೆಯ 25 ಲಕ್ಷ ರು.ಗಳಿಗೆ ಮಂಜೂರಾತಿ ನೀಡಿ ಆದೇಶ ಹೊರಡಿಸಿತ್ತು. ಆದರೆ ಫೋರ್ಜರಿ ಮಾಡಿರುವ ದಾಖಲೆಗಳಲ್ಲಿ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೋಲಾರ ತಾಲೂಕುಗಳಿಗೆ 47 ಕಾಮಗಾರಿಗಳಿಗೆ ಒಟ್ಟು 2.33 ಕೋಟಿ 46 ಲಕ್ಷ ರು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬಂತೆ ಆದೇಶಗಳನ್ನೇ ಸೃಷ್ಟಿಸಲಾಗಿತ್ತು.

ದ್ವಿತೀಯ ದರ್ಜೆ ಸಹಾಯಕ ಶಾಮೀಲು
ಈ ಕುರಿತು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದ್ದ ಇಲಾಖೆಯ ಅಧಿಕಾರಿಗಳು, ಈ ಪ್ರಕರಣದಲ್ಲಿ ದ್ವಿತೀಯ ದರ್ಜೆ ಸಹಾಯಕ ನಾರಾಯಣಸ್ವಾಮಿ ಎಂಬಾತ ಭಾಗಿಯಾಗಿದ್ದಾನೆ ಎಂದು ಸಾಬೀತುಪಡಿಸಿತ್ತು. ಆಯುಕ್ತರ ಕಚೇರಿಯಿಂದ ಹೊರಡಿಸದೇ ಇರುವ ಆದೇಶಗಳನ್ನು ನಾರಾಯಣಸ್ವಾಮಿ ಎಂಬಾತ 2.33 ಕೋಟಿ 46 ಲಕ್ಷ ಅನುದಾನ ಕಾಮಗಾರಿಗಳನ್ನು ಕೈಗೊಳ್ಳಲು ವಿವಿಧ ಗುತ್ತಿಗೆದಾರರಿಗೆ ಆದೇಶ ನೀಡಿದ್ದ.
ಈ ಮೂಲಕ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದ. ಈ ಸಂಬಂಧ ಆರೋಪವನ್ನು ಸಾಬೀತುಪಡಿಸಿದ್ದ ಅಧಿಕಾರಿಗಳು ಈತನ ವಿರುದ್ಧ ಕೋಲಾರ್‍ದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಿದ್ದರು. (ಸಂ. 75/2014). ಈತನ ವಿರುದ್ಧ ಕಲಂ 408, 420, 464, 465, 471, 471 ಅಡಿ ಪ್ರಕರಣ ದಾಖಲಾಗಿತ್ತು.

ಆರೋಪಿ ನಾರಾಯಣಸ್ವಾಮಿ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದರು. ಈತನ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ನಂತರ ಈತನ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಅಲ್ಲದೇ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಕೂಲಂಕಷವಾಗಿ ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಿಸಿದ್ದರು. ಹಾಗೆಯೆ ಈ ಪ್ರಕರಣವನ್ನು ಸಿಐಡಿ ತನಿಖಾ ಸಂಸ್ಥೆಗೆ ವಹಿಸಬಹುದು ಎಂದು 2014ರ ಸೆ.23ರಂದೇ ಇಲಾಖೆ ಅಯುಕ್ತರನ್ನು ಕೋರಿದ್ದರು.

ಸಿಐಡಿ ಬದಲು ಲೋಕಾಯುಕ್ತಕ್ಕೆ ವಹಿಸಿದ್ದೇಕೆ?
ಕೋಲಾರ ಜಿಲ್ಲಾಧಿಕಾರಿಯವರು ಈ ಪ್ರಕರಣವನ್ನು ಸಿಐಡಿ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಮಾಡಿದ್ದ ಶಿಫಾರಸ್ಸನ್ನು ಬದಿಗೊತ್ತಿದ್ದ ಸಮಾಜ ಕಲ್ಯಾಣ ಇಲಾಖೆಯು ಈ ಪ್ರಕರಣವನ್ನು 2015ರ ಆಗಸ್ಟ್ 13ರಂದು ಲೋಕಾಯುಕ್ತಕ್ಕೆ ವಹಿಸಲಾಗಿತ್ತು.

ಆದರೆ ಈ ಮಧ್ಯೆ ನಾರಾಯಣಸ್ವಾಮಿ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತನ್ನು ತೆರವುಗೊಳಿಸಿತ್ತು. ಈ ಆರೋಪಿತ ನೌಕರನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಈ ಮಧ್ಯೆ ಲೋಕಾಯುಕ್ತ ಸಂಸ್ಥೆಯು 12(3) ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದರಂತೆ ಈ ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ )ನಿಯಮಗಳು 1957ರ ನಿಯಮ 14(ಎ) ಅನ್ವಯ ಉಪ ಲೋಕಾಯುಕ್ತರಿಗೆ ವಹಿಸಲಾಗಿತ್ತು. ಈತನ ವಿರುದ್ಧ 2020ರ ಸೆ.11ರಂದು ಲೋಕಾಯುಕ್ತ ಸಂಸ್ಥೆಯು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಿತ್ತು. ಅಲ್ಲದೇ ಈತನ ವಿರುದ್ಧ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತೊಳಿಸಬೇಕು ಎಂದು ಶಿಫಾರಸ್ಸನ್ನು ಮಾಡಿತ್ತು.
ಆಪಾದಿತ ನೌಕರ ನಾರಾಯಣಸ್ವಾಮಿ ಎಂಬಾತ ಲೋಕಾಯುಕ್ತರು ನೀಡಿದ್ದ ವರದಿಯನ್ನು ಪ್ರಶ್ನಿಸಿದ್ದ. ಅಲ್ಲದೇ ವಿಚಾರಣಾಧಿಕಾರಿಗಳ ವರದಿಯನ್ನು ಪರಿಗಣಿಸಬಾರದು ಮತ್ತು ಆರೋಪದಿಂದ ದೋಷಮುಕ್ತಗೊಳಿಸಬೇಕು ಎಂದು ಕೋರಿದ್ದ. ಆದರೆ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆಯಲು ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಉಪ ಲೋಕಾಯುಕ್ತರ ಶಿಫಾರಸ್ಸಿನ ಅನ್ವಯ 2025ರ ಆಗಸ್ಟ್ 29ರಂದು ನಾರಾಯಣಸ್ವಾಮಿ ಎಂಬಾತನನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದೆ.

ಈ ಆದೇಶಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.





