ಸೌಜನ್ಯ ಪ್ರಕರಣ; ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವೆಂದಿದ್ದ ಇಲಾಖೆ

ಬೆಂಗಳೂರು; ಸೌಜನ್ಯಳ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯಾಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸಿಬಿಐ ಮಾಡಿದ್ದ ಆರೋಪಗಳು ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಯವರು ವರದಿ ನೀಡಿರುವುದರಿಂದ ಮತ್ತೆ ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ನಿಲುವನ್ನು ವ್ಯಕ್ತಪಡಿಸಿತ್ತು.

 

ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ನಿರಂತರವಾಗಿ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಈ ನಡುವೆ ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತು ಹಾಕಲಾಗಿದೆ ಎಂಬ ಕುರಿತು ಎಸ್‌ಐಟಿ ತನಿಖೆಯೂ ನಡೆಯುತ್ತಿದೆ. ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯಕುಮಾರ್ ಜೈನ್ ಎಂಬುವರನ್ನು ಎಸ್‌ಐಟಿ ಅಧಿಕಾರಿಗಳು ಈಚೆಗಷ್ಟೇ ವಿಚಾರಣೆಯನ್ನೂ ನಡೆಸಿದ್ದಾರೆ.

 

ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಸೌಜನ್ಯ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟಕರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿದ್ದ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ.

 

ಸೌಜನ್ಯಳ ಮರಣೋತ್ತರ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಲೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಮಾಡಿದ್ದ ಶಿಫಾರಸ್ಸಿನ ಅನುಷ್ಠಾನದ ಕುರಿತು ‘ದಿ ಫೈಲ್’, 438 ಪುಟಗಳ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಈ ಕಡತದ 49ನೇ ಪುಟದಲ್ಲಿ ಮರು ವಿಚಾರಣೆ ನಡೆಸುವ ಕರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಾವೇದ್‌ ಅಖ್ತರ್‍‌ ಅವರು ಅಭಿಪ್ರಾಯ ನೀಡಿದ್ದರು. ಈ ಅಭಿಪ್ರಾಯದ ಕುರಿತು ಅಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಬಿ ಶ್ರೀರಾಮುಲು ಅವರು ಸಹ ಚರ್ಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಜಾವೇದ್‌ ಅಖ್ತರ್‍‌ ಅವರು ನೀಡಿದ್ದ ಅಭಿಪ್ರಾಯದಲ್ಲೇನಿದೆ?

 

ಈ ಪ್ರಕರಣದಲ್ಲಿ ವಿಚಾರಣಾಧಿಕಾರಿಯವರು ವಿಚಾರಣೆ ನಡೆಸಿ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ. ಆದದರಿಂದ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಏನೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಮಂಡನಾಧಿಕಾರಿಯವರು ಯಾವುದೇ ಲಿಖಿತ ವಾದವನ್ನು ಸಲ್ಲಿಸಿರುವುದಿಲ್ಲ. ಹಾಗೂ ವಿಚಾರಣೆಗಾಗಿ ಸಾಕ್ಷಿದಾರರು ಹಾಜರಾಗಲು ವಿಫಲರಾಗಿರುತ್ತಾರೆ ಎಂದು ವಿಚಾರಣಾಧಿಕಾರಿಯವರು ತಿಳಿಸಿರುತ್ತಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

 

ಅದೇ ರೀತಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧಿಕಾರಿಗಳು ವರದಿಯಲ್ಲಿ ನೀಡಿರುವ ಅಭಿಪ್ರಾಯವನ್ನು/ವಿಚಾರಣೆ ವರದಿಯನ್ನು ಒಪ್ಪಬಹುದಾಗಿದೆ ಎಂಬ ಅಭಿಪ್ರಾಯ ನೀಡಿರುತ್ತಾರೆ. ಸಿಬಿಐನವರು These need not bo cited as relied upon documents in the Departmental Enquiry ಎಂದ ವರದಿ ನೀಡಿರುತ್ತಾರೆ. ‘ ಈ ಹಿನ್ನೆಲೆಯಲ್ಲಿ, ಮತ್ತೆ ವಿಚಾರಣೆ ನಡೆಸಿದರೂ ಆರೋಪಗಳು ರುಜವಾತಾಗವುದು ಕಷ್ಟವಾಗುತ್ತದೆ,’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‍‌ ಅವರು ಟಿಪ್ಪಣಿ ಹಾಳೆಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಜಾವೇದ್ ಅಖ್ತರ್‍‌ ಅವರು ನೀಡಿದ್ದ ಈ ಅಭಿಪ್ರಾಯದ ಕುರಿತು ಅಂದು ಸಚಿವರಾಗಿದ್ದ ಬಿ ಶ್ರೀರಾಮುಲು ಅವರು ‘ಚರ್ಚಿಸಿ’ ಎಂದು ಟಿಪ್ಪಣಿ ಹಾಳೆಯಲ್ಲಿ ಒಕ್ಕಣೆ ಹಾಕಿದ್ದರು.

 

ಶ್ರೀರಾಮುಲು ಉಲ್ಲೇಖಿಸಿರುವುದೇನು?

 

ಇಲಾಖೆ ವಿಚಾರಣೆ ಮಾಡಿದ ಇಲಾಖೆ ಅಧಿಕಾರಿಗಳು ಇಲಾಖೆಯ ವಿಚಾರಣೆಯಂತೆ ಕ್ರಮ ತೆಗೆದುಕೊಂಡ ಬಗ್ಗೆ ಉಲ್ಲೇಖ ಇರುವುದಿಲ್ಲ. ದುರ್ಮರಣಕ್ಕೆ ಈಡಾಗಿರುವುದು ಎಳೆ ವಯಸ್ಸಿನ ಯುವತಿ, ಇಂತಹ ಪ್ರಕರಣಗಳಲ್ಲಿ ವಿಚಾರಣೆಗಳನ್ನು ಕೂಲಂಕುಷವಾಗಿ ಸಾರ್ವಜನಿಕವಾಗಿ ಹಿತದೃಷ್ಟಿಯಿಂದ ಮಾಡುವುದು ಸೂಕ್ತ. ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯಾಧಿಕಾರಿಗಳು ಸರಿಯಾದ ರೀತಿಯಲ್ಲಿ ಪರೀಕ್ಷೆ ಮಾಡಿ ಸರಿಯಾದ ದಾಖಲೆಗಳನ್ನು ನೀಡಿಲ್ಲವೆಂದು ಸಿಬಿಐನವರು ತಮ್ಮ ಪತ್ರದಲ್ಲಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು ಈ ಬಗ್ಗೆ ಪುನರ್‍‌ ಪರಿಶೀಲಿಸಿ ಕಡತವನ್ನು ಸಲ್ಲಿಸಬೇಕು ಎಂದು ಶ್ರೀರಾಮುಲು ಅವರು ಟಿಪ್ಪಣಿ ಹಾಳೆಯಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.

 

 

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನವನ್ನೂ ಈಗಿನ ಕಾಂಗ್ರೆಸ್‌ ಸರ್ಕಾರವು ಒಪ್ಪಿದೆ. ಅಲ್ಲದೇ ವಿಚಾರಣೆ ವರದಿ ಆಧರಿಸಿ ಡಾ ಆದಂ ಉಸ್ಮಾನ್‌ ಅವರಿಗೆ  ನಿವೃತ್ತಿಯ ಸೌಲಭ್ಯಗಳನ್ನು ಬಿಡುಗಡೆಗೊಳಿಸಲು ಆದೇಶಿಸಿತ್ತು. ಇದಕ್ಕೆ ಈಗಿನ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೂ ಅನುಮೋದಿಸಿದ್ದರು ಎಂದು ಆದೇಶದಿಂದ ತಿಳಿದು ಬಂದಿದೆ.

 

ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಹರೀಶ್‌ ಪೂಂಜಾ, ವಿಧಾನಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ್‌ ನಾಯಕ್‌ ಅವರು ಅವರು 2023ರಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಕಾನೂನು ಇಲಾಖೆಗೆ ಕಡತವನ್ನು ಕಳಿಸಿದ್ದ ಗೃಹ ಇಲಾಖೆಯು ಅಭಿಪ್ರಾಯ (LAW 182 OPN 2023, HD 61 COD 2023) ಕೋರಿತ್ತು.

 

‘ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಗಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್‌ ಸೆಷನ್ಸ್‌ ನ್ಯಾಯಾಲಯ (children’s court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್‍‌ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ

 

ಇದಕ್ಕೆ ಸಂಬಂಧಿಸಿದ ಕಡತವು ಇಲಾಖೆಯಲ್ಲಿ 18 ತಿಂಗಳಿನವರೆಗೂ ಕಡತ ತೆವಳಿತ್ತು. ಯಾವುದೇ ತೀರ್ಮಾನವಾಗಿರಲಿಲ್ಲ.

 

ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ; 18 ತಿಂಗಳಿನಿಂದಲೂ ತೆವಳಿದ ಕಡತ, ಹೊರಬೀಳದ ತೀರ್ಮಾನ

 

ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವ ಸಂಬಂಧ ರಾಜ್ಯ ಅಡ್ವೋಕೇಟ್‌ ಜನರಲ್‌ ಕಚೇರಿಯಿಂದ ಯಾವುದೇ ಅಭಿಪ್ರಾಯವನ್ನು ನೀಡಿರಲಿಲ್ಲ.

 

ಸೌಜನ್ಯ ಹತ್ಯೆ ಮರು ತನಿಖೆ; ಅಡ್ವೋಕೇಟ್ ಜನರಲ್ ಕಚೇರಿಯಿಂದ ಬಾರದ ಕಾನೂನು ಅಭಿಪ್ರಾಯ!

 

ಸೌಜನ್ಯ ಕೊಲೆ ಪ್ರಕರಣವನ್ನು ಕೊನೆಯದಾಗಿ ತನಿಖೆ ನಡೆಸಿರುವ ಸಿಬಿಐ ಸಂಸ್ಥೆಯೇ ಕೈಗೊಂಡಿದ್ದರಿಂದ ಮರು ತನಿಖೆ ನಡೆಸುವ ಅಭಿಪ್ರಾಯವನ್ನೂ ಸಿಬಿಐನಿಂದಲೇ ಪಡೆಯಬೇಕು ಎಂದು ಸಿಐಡಿ ಡಿಜಿಪಿಯಾಗಿದ್ದ ಡಾ ಎ ಎಂ ಸಲೀಂ ಅವರು ಅಭಿಪ್ರಾಯ ನೀಡಿದ್ದರು.

 

ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ

 

ಮೃತ ವಿದ್ಯಾರ್ಥಿನಿ ತಂದೆ ಚಂದಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ. ಪ್ರಕರಣವನ್ನು ಮೊದಲಿಗೆ ಸಿಐಡಿ, ಆನಂತರ ಸಿಬಿಐ ತನಿಖೆ ನಡೆಸಿತ್ತು.

 

ಪ್ರಕರಣದಲ್ಲಿಸಾಕ್ಷಿಗಳಾಗಿರುವ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ್‌ ಜೈನ್‌ ವಿರುದ್ಧ ಸಂಶಯ ವ್ಯಕ್ತಪಡಿಸಿ ಅರ್ಜಿದಾರರು ಮರು ತನಿಖೆಗೆ ಆದೇಶಿಸಲು ಕೋರಿದ್ದರು. ಆ ಶಂಕೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಸಿಬಿಐ ಸರಿಯಾಗಿಯೇ ತನಿಖೆಗೆ ನಡೆಸಿದ್ದು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts