ಬೆಂಗಳೂರು; ಉಜಿರೆಯ ಕುಮಾರಿ ಸೌಜನ್ಯಳ ಮರಣೋತ್ತರ ಪರೀಕ್ಷೆಯಲ್ಲಿನ ಲೋಪ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದ ವೈದ್ಯರ ಪೈಕಿ ಡಾ ರಶ್ಮಿ ಅವರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಿಬಿಐ ಮಾಡಿದ್ದ ಶಿಫಾರಸ್ಸು ಅನುಷ್ಠಾನಗೊಳ್ಳುವ ಮೊದಲೇ ಅವರು ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ವಜಾಗೊಂಡಿದ್ದರು.
ಅನಧಿಕೃತವಾಗಿ ಗೈರು ಹಾಜರಿ ಹಿನ್ನೆಲೆಯಲ್ಲಿ ವಜಾಗೊಂಡಿದ್ದರಿಂದಾಗಿ ಸಿಬಿಐ ಶಿಫಾರಸ್ಸಿನಂತೆ ರಶ್ಮಿ ಅವರ ವಿರುದ್ಧ ಇಲಾಖೆ ವಿಚಾರಣೆಯೇ ನಡೆದಿಲ್ಲ ಎಂಬ ಸಂಗತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಾಖಲೆಗಳಿಂದ ಬಹಿರಂಗವಾಗಿದೆ.
ಡಾ ರಶ್ಮಿ ಮತ್ತು ಡಾ ಆದಂ ಉಸ್ಮಾನ್ ಅವರಿಬ್ಬರ ವಿರುದ್ಧ ಆರೋಪಗಳನ್ನು ಸಿಬಿಐ ತನಿಖಾ ಸಂಸ್ಥೆಯು ದೃಢಪಡಿಸಿದ್ದರೂ ಇಲಾಖೆ ವಿಚಾರಣೆಯಲ್ಲಿ ಆ ಎಲ್ಲಾ ದೃಢಪಟ್ಟ ಅಂಶಗಳನ್ನು ತಳ್ಳಿ ಹಾಕಿದ್ದರ ಬೆನ್ನಲ್ಲೇ ಡಾ ರಶ್ಮಿ ಅವರನ್ನು ಇಲಾಖೆ ವಿಚಾರಣೆಗೆ ಗುರಿಪಡಿಸಿರಲಿಲ್ಲ ಎಂಬ ವಿಚಾರವು ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್’ 432 ಪುಟಗಳ ಸಮಗ್ರ ಕಡತವನ್ನು ಆರ್‍ಟಿಐ ಅಡಿಯಲ್ಲಿ ಇಲಾಖೆಯಿಂದ ಪಡೆದುಕೊಂಡಿದೆ.
‘ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ವೈದ್ಯರಲ್ಲಿ ಹಿಂದಿನ ವೈದ್ಯಾಧಿಕಾರಿಯಾಗಿರುವ ಡಾ ಎನ್ ರಶ್ಮಿ ಅವರನ್ನು ಸರ್ಕಾರಿ ಸೇವೆಗೆ ಅನಧಿಕೃತ ಗೈರು ಹಾಜರಾಗಿರುವ ಆರೋಪದ ಮೇರೆಗೆ 2017ರ ಮಾರ್ಚ್ 10ರಂದು ಸರ್ಕಾರಿ ಸೇವೆಯಿಂದ (ಆದೇಶ ಸಂಖ್ಯೆ; ಆಕುಕ 243 ಎಂಎಸ್‌ಎ 2016 ) ವಜಾಗೊಳಿಸಲಾಗಿದೆ. ಆದ್ದರಿಂದ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ 2017ರಲ್ಲೇ ವಜಾಗೊಂಡಿದ್ದ ಡಾ. ರಶ್ಮಿ ಅವರನ್ನು 2020ರಲ್ಲಿ ಪುನಃ ಸರ್ಕಾರಿ ಸೇವೆಗೆ ಆಯ್ಕೆಯಾಗಿದ್ದರು.
‘ಹಿಂದಿನ ವೈದ್ಯಾಧಿಕಾರಿ ಡಾ. ರಶ್ಮಿ ಎನ್ ಅವರನ್ನು ಅನಧಿಕೃತ ಗೈರು ಹಾಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿದ್ದರಿಂದ ಆಯುಕ್ತರಿಗೆ ಪ್ರತ್ಯಾಯೋಜಿಸುವ ಅಧಿಕಾರದ ಅಡಿಯಲ್ಲಿ ಡಾ. ಆದಂ ಉಸ್ಮಾನ್ ಇವರಿಗೆ ಆಯುಕ್ತಾಲಯದ ಹಂತದಲ್ಲಿ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿ, ಇಲಾಖೆ ವಿಚಾರಣೆಗೆ ಆದೇಶವಾಗಿತ್ತು,’ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಇಬ್ಬರು ವೈದ್ಯರು 120 ದಿನಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ (ಆದೇಶ ಸಂಖ್ಯೆ; ಆಕುಕ 243 ಎಂಎಸ್‌ಎ 2016) 2017ರ ಮಾರ್ಚ್ 10ರಂದು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ಡಾ. ಆದಂ ಉಸ್ಮಾನ್ ಅವರ ವಿರುದ್ಧ ಮಾತ್ರವಷ್ಟೇ ಇಲಾಖಾ ವಿಚಾರಣೆ ನಡೆದಿತ್ತು. ಇವರಿಗಷ್ಟೇ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತೇ ವಿನಃ ರಶ್ಮಿ ಅವರಿಗೆ ಯಾವುದೇ ದೋಷಾರೋಪಣೆ ಪಟ್ಟಿ ಜಾರಿಯಾಗಿರಲಿಲ್ಲ. ಈ ಸಂಬಂಧ ಕಡತದ ಹಾಳೆಯಲ್ಲಿ ಎಲ್ಲಿಯೂ ರಶ್ಮಿ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಯಾಗಿರುವ ದಾಖಲೆಗಳು ಕಂಡು ಬಂದಿಲ್ಲ.
ಈ ಪ್ರಕರಣದಲ್ಲಿ ಡಾ. ರಶ್ಮಿ ಅವರು ವಿಚಾರಣೆಗೆ ಹಾಜರಾಗಿಲ್ಲವೆಂಬ ಕಾರಣಕ್ಕಾಗಿ ಆರೋಪಗಳು ಸಾಬೀತಾಗಿಲ್ಲ ಎಂಬ ನಿಲುವು ತೆಗೆದುಕೊಂಡಿರುವುದರ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ನಿಲುವುನ್ನು ವ್ಯಕ್ತಪಡಿಸಿದೆ.
ಇಲಾಖೆಯ ಶಾಖೆಯ ನಿಲುವೇನು?
ಈ ಪ್ರಕರಣದಲ್ಲಿ ವಿಚಾರಣಾಧಿಕಾರಿಗಳು ಕೇವಲ ಡಾ ರಶ್ಮಿ ಅವರು ವಿಚಾರಣೆಗೆ ಹಾಜರಾಗಿಲ್ಲವೆಂಬ ಕಾರಣಕ್ಕಾಗಿ ಅವರ ವಿರುದ್ಧದ ಆರೋಪಗಳು ಸಾಬೀತಾಗಿಲ್ಲವೆಂಬ ನಿಲುವು ತೆಗೆದುಕೊಂಡಿರುವುದು ಅವರ ಅಭಿಪ್ರಾಯದಿಂದ ತಿಳಿದು ಬಂದಿರುತ್ತದೆ. ಸಿಬಿಐ ವರದಿಯಲ್ಲಿ ವೈದ್ಯಾಧಿಕಾರಿಯವರ ಮರಣೋತ್ತರ ಪರೀಕ್ಷಾ ಸಮಯಯದಲ್ಲಿ ಅಗತ್ಯವಿರುವಷ್ಟು ವೆಜೈನಲ್ ಸ್ವಾಬ್ಸ್‌ನ್ನು ತೆಗೆಯದ ಕಾರಣ ಡಿಎನ್‌ಎ ಪರೀಕ್ಷೆಯು ಅಪೂರ್ಣವಾಗಿರುತ್ತದೆ ಎಂದು ನಿಲುವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾಧಿಕಾರಿಯವರ ಅಭಿಪ್ರಾಯದ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರಿಂದ ಸರ್ಕಾರವು ಸ್ಪಷ್ಟ ಅಭಿಪ್ರಾಯ ಕೋರಿತ್ತು. ಈ ಸಂಬಂಧ 2023ರ ಆಗಸ್ಟ್ 18ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ನದೀಮ್ ಅಹ್ಮದ್ ಅವರು 2023ರ ಆಗಸ್ಟ್ 18ರಂದು ಪತ್ರ ಬರೆದಿದ್ದರು.
ಈ ಪತ್ರದೊಂದಿಗೆ ಡಿಎನ್‌ಎ ವರದಿ ಮತ್ತು ಶವ ಪರೀಕ್ಷೆ ಮಾಡಿರುವ ಮರಣೋತ್ತರ ಪರೀಕ್ಷೆ ವರದಿಯನ್ನು ಲಗತ್ತಿಸಿದ್ದರು. ಫೋಟೋಗಳು ಲಭ್ಯವಿಲ್ಲದ ಕಾರಣ ಉಳಿದ ಮಾಹಿತಿಯನ್ನು ಒದಗಿಸಿರಲಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.
ಸಿಬಿಐ ದೋಷಾರೋಪವೇನು?
ಶವ ಪರೀಕ್ಷೆ ಮಾಡುವಾಗ ಪರೀಕ್ಷೆಗೆ ಅಗತ್ಯವಿರುವಷ್ಟು ವೆಜೈನಲ್ ಸ್ವಾಬ್ಸ್‌ನ್ನು ತೆಗೆಯದೇ ಡಿಎನ್‌ಎ ಪರೀಕ್ಷೆಯು ಅಪೂರ್ಣವಾಗುವಂತೆ ಮಾಡಲಾಗಿದೆ. ಹೊಟ್ಟೆಯಲ್ಲಿ ಜೀರ್ಣವಾಗದ ಹಾಗೂ ಸಣ್ಣ ಕರುಳಿನಲ್ಲಿ ಅರ್ಧಂಬರ್ಧ ಜೀರ್ಣವಾಗಿರುವ ಆಹಾರವಿದೆ ಎಂದು ತಪ್ಪು ಮಾಹಿತಿ ನೀಡಿರುವುದು, ವಿಸೆರಾ ಸಂಗ್ರಹಣೆ ( ಹೊಟ್ಟೆ ಹಾಗೂ ಅದರಲ್ಲಿರುವ ಪದಾರ್ಥ ಲಿವರ್ ಕಿಡ್ನಿ ಇತ್ಯಾದಿ) ಸಮರ್ಪಕವಾಗಿ ಮಾಡಿರಲಿಲ್ಲ ಎಂದು ಸಿಬಿಐ ದೋಷಾರೋಪ ಮಾಡಿತ್ತು.
ಕುಮಾರಿ ಸೌಜನ್ಯರ ಬಲ ಹಸ್ತದ ಹಿಂಬದಿಯಲ್ಲಿ ವೃತ್ತಾಕಾರದ ಕಣ್ಣಿಗೆ ಕಾಣಿಸುವ ಗಾಯದ ಗುರುತಿದ್ದರೂ ಸಹ ಮರಣೋತ್ತರ ಪರೀಕ್ಷೆಯಲ್ಲಿ ಅದನ್ನು ನಮೂದಿಸಿದೇ ಇರುವುದು, ಸೌಜನ್ಯರ ಕುತ್ತಿಗೆ ಬಿಗಿದ ಗುರುತಿರುವ ಜಾಗದ ಚರ್ಮದ ತುಣುಕುಗಳನ್ನು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಕಳುಹಿಸಿಲ್ಲ ಎಂದು ಸಿಬಿಐ ತನಿಖಾ ಸಂಸ್ಥೆಯು ಇಬ್ಬರು ವೈದ್ಯರ ವಿರುದ್ಧ ದೋಷಾರೋಪ ಮಾಡಿದ್ದನ್ನು ಸ್ಮರಿಸಬಹುದು.
ಸೌಜನ್ಯ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ; ಸಿಬಿಐ ತನಿಖೆ ಅಂಶಗಳನ್ನೇ ತಳ್ಳಿ ಹಾಕಿದ ಇಲಾಖೆ ವಿಚಾರಣೆ
‘ಸೌಜನ್ಯ ಪ್ರಕರಣದಲ್ಲಿ ಸರ್ಕಾರವು ತಿಪ್ಪೆ ಸಾರಿಸುವ ಕೆಲಸ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಇಲಾಖಾ ತನಿಖೆಯನ್ನು ಎದುರಿಸಬೇಕಾದ ವ್ಯಕ್ತಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡಿರುವುದು ಸಮಂಜಸವಲ್ಲ ಮತ್ತು ಸರ್ಕಾರವೇ ಈ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸಕ್ಕೆ ಸಹಕಾರ ನೀಡಿರುವುದು ಸ್ಪಷ್ಟವಾಗಿದೆ. ಸಿಬಿಐ ಈ ವೈದ್ಯರುಗಳ ಮೇಲೆ ಗುರುತರವಾದ ಆರೋಪಗಳನ್ನ ಮಾಡಿತ್ತು. ಆದರೆ ಅವರ ವಿರುದ್ಧ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದೆ. ನಿರಂತರವಾಗಿ ಇಂತಹ ತಪ್ಪುಗಳು ನಡೆಯಲು ಆಸ್ಪದ ಮಾಡಿಕೊಟ್ಟಿರುವುದರಿಂದ ಇಂದು ಎಸ್ ಐ ಟಿ ರಚಿಸಿ ತನಿಖೆ ಮಾಡಬೇಕಾಗಿದೆ. ಎಸ್ ಐ ಟಿ ಯು ಈ ವೈದ್ಯರುಗಳನ್ನು ತನಿಖೆಗೆ ಒಳಪಡಿಸಬೇಕು,’ ಎಂದಿದ್ದಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ದೀಪಕ್ ಸಿ. ಎನ್.