ಬೆಂಗಳೂರು: ಅರಣ್ಯೀಕರಣದ ನೆಪದಲ್ಲಿ ಸಸಿ ನೆಡದೆ ಬಿಲ್ಲನ್ನು ಪಾವತಿಸಿ, ಲಕ್ಷಾಂತರ ರುಪಾಯಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡು, ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದ ಅರಣ್ಯಾಧಿಕಾರಿಯ ವಿರುದ್ಧ ರಾಜ್ಯ ಅರಣ್ಯ ಇಲಾಖೆಯು 14 ವರ್ಷಗಳ ನಂತರ ಕ್ರಮ ತೆಗೆದುಕೊಂಡಿದೆ.
ಈಗ ಈ ಅರಣ್ಯಾಧಿಕಾರಿಯು ನಿವೃತ್ತರಾಗಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214(1)(ಎ) ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನಿವೃತ್ತಿ ವೇತನದಿಂದ ಶೇ.15 ರಷ್ಟನ್ನು ಮೂರು ವರ್ಷಗಳ ಅವಧಿಗೆ ತಡೆಹಿಡಿಯುವ ದಂಡನೆಯನ್ನು ವಿಧಿಸಲಾಗಿದೆ. ಈ ಸಂಬಂಧ ಕಳೆದ ಏಪ್ರಿಲ್‌ನಲ್ಲಿ ಅರಣ್ಯ ಇಲಾಖೆಯು ಆದೇಶ ಹೊರಡಿಸಿದೆ.
ಈ ಆದೇಶದ ಪ್ರತಿ ʻದಿ ಫೈಲ್ʼಗೆ ಲಭ್ಯವಾಗಿದೆ.
ಈ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತವು ತನಿಖೆ ನಡೆಸಿ, 2023ರ ಜನವರಿ 25ರಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಗೆ ತನಿಖಾ ವರದಿ ಮತ್ತು ಶಿಫಾರಸನ್ನು ಸಲ್ಲಿಸಿತ್ತು. ಈ ವರದಿಯ ಕುರಿತು ಇಲಾಖೆಯು ತಪ್ಪಿತಸ್ಥ ವಲಯ ಅರಣ್ಯಾಧಿಕಾರಿ ಬಿ.ಆರ್. ಸೀತಾರಾಮ ಅವರಿಗೆ ಎರಡನೇ ಕಾರಣ ಕೇಳುವ ನೋಟಿಸ್ ಅನ್ನು 2023ರ ಮಾರ್ಚ್‌ನಲ್ಲಿ ನೀಡಿತ್ತು. ಇದಕ್ಕೆ ಸೀತಾರಾಮು ಅವರು 2024ರ ಜುಲೈ 3 ರಂದು ಉತ್ತರ ನೀಡಿದ್ದು, ಇದನ್ನು ಒಪ್ಪಿಕೊಳ್ಳದೇ ಇಲಾಖೆಯು ಈ ದಂಡನೆಯನ್ನು ಜಾರಿಗೆ ತಂದಿದೆ.
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಚಿವ ಈಶ್ವರ ಖಂಡ್ರೆ ನಿವೃತ್ತ ಅರಣ್ಯಾಧಿಕಾರಿಗೆ ದಂಡನೆ ವಿಧಿಸುವುದಕ್ಕೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ 7 ರಂದು ಆದೇಶ ಹೊರಡಿಸಲಾಗಿದೆ.
ಏನಿದು ಪ್ರಕರಣ?
ಚಿತ್ರದುರ್ಗ ಜಿಲ್ಲೆ ಅನ್ನೇಹಾಳು ಗ್ರಾಮ ಪಂಚಾಯಿತಿಗೆ ಸೇರಿದ ಸರ್ಕಾರಿ ಪ್ರೌಢಶಾಲೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಾಗೂ ಜಂಪಣ್ಣಹಟ್ಟಿಯಿಂದ ಕಡಿಯಾಲಮ್ಮನ ದೇವಸ್ಥಾನದವರೆಗೆ ಅರಣ್ಯೀಕರಣದ ಭಾಗವಾಗಿ ಸಸಿ ನೆಡುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿತ್ತು.
ಕಡಿಯಾಲಮ್ಮ ದೇವಸ್ಥಾನದ ರಸ್ತೆಯಲ್ಲಿ 70 ರಿಂದ 80 ಸಸಿಗಳನ್ನು ನೆಟ್ಟು 940 ಸಸಿಗಳನ್ನು ನೆಡಲಾಗಿದೆ ಎಂದು ಬಿಲ್‌ಗಳನ್ನು ಸೃಷ್ಟಿಸಿ ಹಣ ಪಾವತಿಸಲಾಗಿತ್ತು. ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಆವರಣದಲ್ಲಿಯೂ 25 ಸಸಿಗಳನ್ನು ನೆಟ್ಟು 1960 ಸಸಿಗಳನ್ನು ನೆಡಲಾಗಿದೆ ಎಂದು ಬಿಲ್ ಸೃಷ್ಟಿಸಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು.
ಸಸಿಗಳನ್ನು ನೆಟ್ಟ ಸಂದರ್ಭದಲ್ಲಿ ಶಾಲಾ-ಕಾಲೇಜುಗಳ ಮುಖ್ಯಸ್ಥರಲ್ಲಿ ಅನುಮತಿ ಪಡೆದಿರಲಿಲ್ಲ. ಅಲ್ಲದೆ ಸಸಿ ನೆಟ್ಟ ಮೇಲೆ ದೃಢೀಕರಣವನ್ನು ಪಡೆದುಕೊಂಡಿರಲಿಲ್ಲ. ಆದರೂ ಬಿಲ್ಲನ್ನು ಪಾವತಿಸಲಾಗಿತ್ತು.
ನೆಟ್ಟಿರುವ ಸಸಿಗಳಿಗೆ ವುಡನ್ ಸ್ಟಿಕ್ ಹಾಕಿರುವುದಾಗಿ ಲೆಕ್ಕ ಬರೆದು, ಹಣವನ್ನು ಪಾವತಿಸಲಾಗಿತ್ತು. ಆದರೆ ಯಾವುದೇ ಗಿಡಕ್ಕೂ ವುಡನ್ ಸ್ಟಿಕ್ ಹಾಕಿರಲಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಳ್ಳಲಾಗಿತ್ತು.
ಈ ಸಂಬಂಧ ಆಗ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ, ರೈತ ಸಂಘದ ಕಾರ್ಯಕರ್ತ ಎನ್. ನಿರಂಜನ ಮೂರ್ತಿ ಎಂಬುವರು ಲೋಕಾಯುಕ್ತಕ್ಕೆ ದೂರು (COMPT/UPLOK/BD/8813/2011) ಸಲ್ಲಿಸಿದ್ದರು. 2013 ರಲ್ಲಿ ಪ್ರಕರಣವನ್ನು ಕೈಗೆತ್ತಿಗೊಂಡಿದ್ದ ಲೋಕಾಯುಕ್ತವು ಶೋಕಾಸ್ ನೋಟಿಸು ನೀಡಿತ್ತು. 2015ರಲ್ಲಿ ದೂರಿನ ಅಂತಿಮ ಪರಿಶೀಲನೆಯನ್ನು ನಡೆಸಿ, ಅನ್ನೇಹಾಳು ಗ್ರಾಮ ಪಂಚಾಯಿತಿಯ ಪಿಡಿಒ ಗಂಗಾಧರಪ್ಪ, ವಲಯ ಅರಣ್ಯಾಧಿಕಾರಿ ಬಿ.ಆರ್. ಸೀತಾರಾಮ ಮತ್ತು ವನಪಾಲಕ ಸೈಯದ್ ಶಭೀರ್ ವಿರುದ್ಧ ತನಿಖೆ ಆರಂಭಿಸಿತ್ತು.
2015ರ ಅಕ್ಟೋಬರ್ 3 ರಂದು ತನಿಖಾಧಿಕಾರಿಯನ್ನು ನೇಮಿಸಲಾಗಿತ್ತು. ಆರೋಪಿಗಳ ವಿಚಾರಣೆ, ವಾದ-ಪ್ರತಿವಾದಗಳನ್ನು ಆಲಿಸಿದ ತನಿಖಾಧಿಕಾರಿಗಳು ಅರಣ್ಯ ಇಲಾಖೆಯ ದಾಖಲೆಗಳ ಪರಿಶೀಲನೆ ಕೂಡ ನಡೆಸಿದ್ದರು. 2023ರ ಜನವರಿ 19 ರಂದು ತನಿಖೆಯನ್ನು ಪೂರ್ಣಗೊಳಿಸಿ ಉಪ ಲೋಕಾಯುಕ್ತರಿಗೆ ವರದಿಯನ್ನು ಸಲ್ಲಿಸಲಾಗಿತ್ತು. 2023ರ ಜನವರಿ 25ರಂದು ತನಿಖಾ ವರದಿ ಮತ್ತು ಶಿಫಾರಸನ್ನು ಉಪ ಲೋಕಾಯುಕ್ತರು ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದ್ದರು.
ಕ್ರಿಯಾ ಯೋಜನೆಯಂತೆ ಕಾಮಗಾರಿ!
ಲೋಕಾಯುಕ್ತ ವರದಿ ಸಲ್ಲಿಸಿದ ಬೆನ್ನಲ್ಲೇ ಅರಣ್ಯ ಇಲಾಖೆಯು ಆರೋಪಿತ ವಲಯ ಅರಣ್ಯಾಧಿಕಾರಿ ಬಿ.ಆರ್. ಸೀತಾರಾಮ ಅವರಿಗೆ ಎರಡನೇ ಕಾರಣ ಕೇಳುವ ನೋಟೀಸ್ ನೀಡಿತ್ತು. ವನಪಾಲಕರಾಗಿದ್ದ ಸೈಯದ್ ಶಭೀರ್ ಅವರು 2020ರ ಜುಲೈ 28 ರಂದು ನಿಧನ ಹೊಂದಿದ್ದು, ಈ ಪ್ರಕರಣವನ್ನು Abated ಮಾಡುವಂತೆ ಲೋಕಾಯುಕ್ತವೇ ವರದಿಯಲ್ಲಿ ಶಿಫಾರಸು ಮಾಡಿತ್ತು.
ಎರಡನೇ ಕಾರಣ ಕೇಳಿ ನೀಡಿದ ನೋಟಿಸಿಗೆ ಒಂದು ವರ್ಷ ನಾಲ್ಕು ತಿಂಗಳ ನಂತರ ಉತ್ತರ ನೀಡಿದ ಆರೋಪಿತ ವಲಯ ಅರಣ್ಯಾಧಿಕಾರಿ ಬಿ.ಆರ್. ಸೀತಾರಾಮ ಅವರು, ಕ್ರಿಯಾ ಯೋಜನೆಯಂತೆಯೇ ಕಾಮಗಾರಿಯನ್ನು ನಡೆಸಲಾಗಿದೆ. ನಿಗದಿಯಷ್ಟು ಗಿಡಗಳನ್ನು ನೆಡಲಾಗಿದೆ. ಅಲ್ಲದೆ ಕಾಮಗಾರಿಯ ಹಣವನ್ನು ಚೆಕ್ ಮೂಲಕ ಪಾವತಿಸಲಾಗಿದೆ. ಇದರಿಂದ ಯಾವುದೇ ಹಣದ ದುರುಪಯೋಗವಾಗಿರುವುದಿಲ್ಲ ಎಂದು ವಾದಿಸಿದ್ದರು.
ಇಲಾಖೆಯು ಲೋಕಾಯುಕ್ತ ಸಂಸ್ಥೆಯ ವಿಚಾರಣಾಧಿಕಾರಿಗಳು ಸಲ್ಲಿಸಿರುವ ವಿಚಾರಣಾ ವರದಿ ಮತ್ತು ದಾಖಲಾತಿಗಳನ್ನು ಹಾಗೂ ಆರೋಪಿತರು ನೀಡಿರುವ ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿ, ಸಸಿಗಳನ್ನು ನಡೆದೇ ಬಿಲ್ಲನ್ನು ಪಾವತಿಸಿರುವುದು ದಾಖಲೆಗಳಿಂದ ಕಂಡು ಬಂದಿದ್ದರಿಂದ, ಅಲ್ಲದೆ ಅನುದಾನ ಮೊತ್ತವನ್ನು ಸರಿಯಾಗಿ ಸಮರ್ಪಕವಾಗಿ ಬಳಸಿರುವುದಕ್ಕೆ ಯಾವುದೇ ಬಿಲ್ ದಾಖಲೆಗಳನ್ನು ದಿನಚರಿಗಳನ್ನು ಪ್ರಸ್ತುತಪಡಿಸದೇ ಇರುವುದು ದೃಢಪಟ್ಟಿದ್ದರಿಂದ ಲೋಕಾಯಕ್ತ ಶಿಫಾರಸಿನಂತೆ ಕ್ರಮ ತೆಗೆದುಕೊಳ್ಳುವ ತೀರ್ಮಾನ ತೆಗೆದುಕೊಂಡಿತ್ತು.
ಅರಣ್ಯ ಇಲಾಖೆಯು 2025ರ ಏಪ್ರಿಲ್ ಏಳರಂದು ಹೊರಡಿಸಿರುವ ಆದೇಶದಲ್ಲಿ, ಲೋಕಾಯುಕ್ತ ಇಲಾಖಾ ವಿಚಾರಣಾ ಪ್ರಕರಣದಲ್ಲಿ ಬಿ.ಆರ್. ಸೀತಾರಾಮು ವಿರುದ್ಧದ ಆರೋಪಗಳು ರುಜುವಾತಾಗಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 (1) (ಎ) ಪ್ರಕಾರ ಪದತ್ತವಾದ ಅಧಿಕಾರವನ್ನು ಚಲಾಯಿಸಿ, ನಿವೃತ್ತಿ ವೇತನದಿಂದ ಶೇ. 15ರಷ್ಟನ್ನು 3 ವರ್ಷಗಳ ಅವಧಿಗೆ ತಡೆಹಿಡಿಯುವ ದಂಡನೆಯನ್ನು ವಿಧಿಸಲಾಗಿದೆ. ಹಾಗೂ ವನಪಾಲಕ ಸೈಯದ್ ಶಭೀರ್ ನಿಧನ ಹೊಂದಿರುವುದರಿಂದ ಅವರ ವಿರುದ್ಧದ ಪ್ರಕರಣದಿಂದ Abated ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಓರ್ವ ಆರೋಪಿತರಿಗೆ ದಂಡನೆ ವಿಧಿಸಲ್ಪಟ್ಟಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ದೂರುದಾರ ಎನ್. ನಿರಂಜನ ಮೂರ್ತಿ, ಈ ಪ್ರಕರಣದ ಕುರಿತು ʻದಿ ಫೈಲ್ʼ ನೊಂದಿಗೆ ಮಾತನಾಡಿ, ʻʻನಾನು ದೂರು ನೀಡಿದ ನಂತರ ನಾಲ್ಕೈದು ಬಾರಿ ಲೋಕಾಯುಕ್ತದಲ್ಲಿ ವಿಚಾರಿಸಿದ್ದೆ. ಆದರೆ ತನಿಖೆ, ವಿಚಾರಣೆ ಬಹಳ ಸಮಯ ತೆಗೆದುಕೊಂಡಿದ್ದರಿಂದ ಈ ಪ್ರಕರಣವನ್ನೇ ಮರೆತಿದ್ದೆ. ಈ ರೀತಿ ಸಾರ್ವಜನಿಕರ, ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡರೆ, ಕೊನೆಗೂ ಒಂದು ದಿನ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆʼʼ ಎಂದಿದ್ದಾರೆ.
ಮೂರು ವರ್ಷಗಳಲ್ಲಿ 222 ಲೋಕಾಯುಕ್ತ ದಾಳಿ; ಒಬ್ಬರೇ ಒಬ್ಬ ಅಧಿಕಾರಿಗೂ ಶಿಕ್ಷೆ ಇಲ್ಲ
ಕಳೆದ ಮೂರು ವರ್ಷಗಳಲ್ಲಿ ನಡೆದ ಲೋಕಾಯುಕ್ತ ದಾಳಿಗೆ ಒಳಪಟ್ಟ ಒಬ್ಬರೇ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಗೆ ತಿಳಿಸಿದ್ದರು. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.