ಭ್ರಷ್ಟಾಚಾರ ನಿಯಂತ್ರಣ: ಲೋಕಾಯುಕ್ತ ವರದಿ ಕೊಟ್ಟರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಸರ್ಕಾರ

karnataka lokayukta submits reports to government

ಬೆಂಗಳೂರು: ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಬೇಕಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿಯೇ, ಭ್ರಷ್ಟ ಅಧಿಕಾರಿಗಳನ್ನು ಬೆದರಿಸಿ, ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿರುವ ಹೊತ್ತಿನಲ್ಲಿಯೇ, ಲೋಕಾಯುಕ್ತವು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ, ವಿಚಾರಣೆ ನಡೆಸಿ  ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದು ಮತ್ತು ಸರ್ಕಾರವು ಸಲ್ಲಿಕೆಯಾಗಿರುವ ಎಲ್ಲ ವರದಿಗಳ ಮೇಲೂ ಕ್ರಮ ತೆಗೆದುಕೊಳ್ಳದೇ ಇರುವ ವಿಷಯ ಬಹಿರಂಗಗೊಂಡಿದೆ.

 

ಲೋಕಾಯುಕ್ತದಲ್ಲಿ ಕಳೆದ  ಜುಲೈ ಅಂತ್ಯದ ವೇಳೆಗೆ  22,699 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿಯೇ ಲೋಕಾಯುಕ್ತ ಸಂಸ್ಥೆ ಪ್ರತಿ ವರ್ಷ ಎಷ್ಟು ಪ್ರಕರಣಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.

 

ಈ ವರ್ಷದ ಜೂನ್‌ ಅಂತ್ಯದವರೆಗೆ ಕರ್ನಾಟಕ ಲೋಕಾಯುಕ್ತವು ಒಟ್ಟು 113 ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.  ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 12(3) ಅಡಿಯಲ್ಲಿ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ತನಿಖೆ ನಡೆಸಿದ ನಂತರ ಆರೋಪ ಸಾಬೀತಾದಲ್ಲಿ ಅಥವಾ ದುರ್ನಡತೆಯ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತಾರೆ. ಈ ಶಿಫಾರಸುಗಳು ವರದಿಯ ರೂಪದಲ್ಲಿರುತ್ತವೆ.

 

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 12(3)ರಲ್ಲಿ  ಆಪಾದನೆಯನ್ನೊಳಗೊಂಡ ಯಾವುದೇ ಕ್ರಮದ ಕುರಿತು ತನಿಖೆ ನಡೆಸಿದ ತರುವಾಯ ಅಂಥ ಆಪಾದನೆಯನ್ನು ಪೂರ್ಣವಾಗಿ ಅಥವಾ ಭಾಗಶಃ ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ಮನದಟ್ಟಾದರೆ ಅವನು ತನ್ನ ನಿರ್ಣಯವನ್ನು ಮತ್ತು ಶಿಫಾರಸ್ಸುಗಳನ್ನು ಸಂಬಂಧಪಟ್ಟ ದಸ್ತಾವೇಜು, ಸಾಮಗ್ರಿಗಳು ಮತ್ತು ಇತರ ಸಾಕ್ಷ್ಯಗಳೊಡನೆ ಸಕ್ಷಮ ಪ್ರಾಧಿಕಾರಕ್ಕೆ ಲಿಖಿತ ವರದಿಯ ಮೂಲಕ ಪ್ರಾರಂಭವಾದ  ದಿನಾಂಕದಿಂದ ಆರು ತೊಂಗಳೊಳಗೆ ತಿಳಿಸತಕ್ಕದ್ದು.  ಲೋಕಾಯುಕ್ತ ಅಥವಾ ಉಪಲೋಕಾಯುಕ್ತನು ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ಸದರಿ ಅವಧಿಯನ್ನು ಆರು ತಿಂಗಳಿಗೆ ಮೀರದ ಮತ್ತಷ್ಟು ಅವಧಿಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ.

 

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(4)ರಲ್ಲಿ, ಸಕ್ಷಮ ಪ್ರಾಧಿಕಾರವು ತನಗೆ ಕಳಿಸಿದ ವರದಿಯನ್ನು ಪರೀಕ್ಷಿಸತಕ್ಕದ್ದು ಮತ್ತು ಅ ವರದಿಯು ಬಂದ ದಿನಾಂಕದಿಂದ ಮೂರು ತಿಂಗಳೊಳಗೆ ಆ ವರದಿಯನ್ನು ಆಧರಿಸಿ ಕೈಗೊಂಡ ಇಲ್ಲವೇ ಕೈಗೊಳ್ಳಲು ಉದ್ದೇಶಿಸಿದ ಕ್ರಮವನ್ನು ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ತಿಳಿಸತಕ್ಕದ್ದು ಅಥವಾ ತಿಳಿಸುವ ಏರ್ಪಾಡು ಮಾಡತಕ್ಕದ್ದು ಎಂದು ಹೇಳಲಾಗಿದೆ.

 

ಈ ಪ್ರಕಾರವಾಗಿ,  ಈ ವರ್ಷ  ಜೂನ್‌ ವರೆಗೆ 113 ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರ್ಷದ  ಜನವರಿಯಲ್ಲಿ 12, ಫೆಬ್ರವರಿಯಲ್ಲಿ 17, ಮಾರ್ಚ್‌ನಲ್ಲಿ 11, ಏಪ್ರಿಲ್‌ನಲ್ಲಿ 12, ಮೇ ನಲ್ಲಿ 37 ಹಾಗೂ ಜೂನ್‌ನಲ್ಲಿ 24 ಪ್ರಕರಣಗಳು ಸಲ್ಲಿಕೆಯಾಗಿವೆ ಎಂದು ಲೋಕಾಯುಕ್ತ ಸಂಸ್ಥೆಯೇ ತನ್ನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ.

 

2024ರಲ್ಲಿ ಲೋಕಾಯುಕ್ತವು  ಒಟ್ಟು 220 ಪ್ರಕರಣಗಳಿಗೆ ಸಂಬಂಧಿಸಿದಂತೆ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಕರ್ನಾಟಕ ಲೋಕಾಯುಕ್ತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇರುವುದರಿಂದ, ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗತಿಯಲ್ಲಿ ಮಾಡಬೇಕಾದ ಅವಶ್ಯಕತೆ ಇದ್ದರೂ, ವರದಿ ಸಲ್ಲಿಕೆ ಪ್ರಕ್ರಿಯೆಯು ಮಂದಗತಿಯಲ್ಲಿಯೇ ಸಾಗಿದೆ ಎಂಬುದು ಇದರಿಂದ ಸಾಬೀತಾಗಿದೆ.

 

karnataka lokayukta submits reports to government

 

2023 ರಲ್ಲಿ 165 ಪ್ರಕರಣಗಳಿಗೆ ಸಂಬಂಧಿಸಿಂತೆ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(3) ಅಡಿಯಲ್ಲಿ ವರದಿ ಸಲ್ಲಿಸಲಾಗಿತ್ತು. 2022ರಲ್ಲಿ ಈ ಸಂಖ್ಯೆ 323 ಕ್ಕೆ ಏರಿತ್ತು. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.  2021-22ನೇ ಸಾಲಿನಲ್ಲಿ 314 ವರದಿಗಳು, 2022ರಲ್ಲಿ 323 ವರದಿಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ  ವರ್ಷ ಅಂದರೆ 2023 ರಲ್ಲಿ 165 ವರದಿಗಳು ಹಾಗೂ 2024ರಲ್ಲಿ 220 ವರದಿಗಳು ಸಲ್ಲಿಕೆಯಾಗಿವೆ.

 

ವರದಿ ಸಲ್ಲಿಸಿದರೂ ಕ್ರಮವಿಲ್ಲ

 

ಲೋಕಾಯುಕ್ತವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಇಲಾಖಾ ವಿಚಾರಣೆ ನಡೆಸಲು ಶಿಫಾರಸು ಮಾಡಿದೆ. ಈ ಹಿಂದೆ ತಿಳಿಸಿದಂತೆ, ಲೋಕಾಯುಕ್ತ ಕಾಯಿದೆ ಕಲಂ 12(4)ರ ಪ್ರಕಾರ ಸಕ್ಷಮ ಪ್ರಾಧಿಕಾರವು ಈ ವರದಿಯ ಮೇಲೆ ಏನು ಕ್ರಮ ತೆಗೆದುಕೊಂಡಿದೆ ಅಥವಾ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಈ ವರದಿಯನ್ನು ಸ್ವೀಕರಿಸಿದ ಮೂರು ತಿಂಗಳ ಒಳಗೆ ಲೋಕಾಯುಕ್ತಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕಿರುತ್ತದೆ. ಲೋಕಾಯುಕ್ತವು ಸಲ್ಲಿಸಿದ ಈ ವರದಿಗಳನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ.

 

ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಸಲ್ಲಿಸುವ ಈ ವಿಚಾರಣಾ ವರದಿಗಳಲ್ಲಿ ಹೆಚ್ಚಿನವು ತಿರಸ್ಕೃತವಾಗುತ್ತಿವೆ. ಬಹುತೇಕ ವರದಿಗಳಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಲೋಕಾಯುಕ್ತಕ್ಕೆ ಬೆರಳೆಣಿಕೆಯಷ್ಟು ವರದಿಗಳಿಗೆ ಸಂಬಂಧಿಸಿದಂತೆ ಮಾತ್ರ ಅನುಪಾಲನಾ ವರದಿ ಸಲ್ಲಿಕೆಯಾಗಿದೆ.

 

ಲೋಕಾಯುಕ್ತವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರವೇ, 608 ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಕಲಂ 12(3)ರ ಅಡಿಯಲ್ಲಿ ಕಳುಹಿಸಲಾದ ವರದಿಗಳಲ್ಲಿ 4 ತಿಂಗಳ ನಂತರವೂ ಅನುಪಾಲನಾ ವರದಿಗಳು ಸ್ವೀಕೃತವಾಗಿಲ್ಲ. ಇದರಲ್ಲಿ ಲೋಕಾಯುಕ್ತರ ವ್ಯಾಪ್ತಿಗೆ ಒಳ ಪಟ್ಟ 32 ಪ್ರಕರಣಗಳು, ಉಪ ಲೋಕಾಯುಕ್ತ -1 ರವರ ವ್ಯಾಪ್ತಿಗೆ ಒಳಪಟ್ಟ335 ಪ್ರಕರಣಗಳು, ಉಪ ಲೋಕಾಯುಕ್ತ- 2 ರವರ ವ್ಯಾಪ್ತಿಗೆ ಒಳಪಟ್ಟ 241 ಪ್ರಕರಣಗಳು ಸೇರಿವೆ.

 

karnataka lokayukta submits reports to government

 

ಇನ್ನು 289 ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿ ಒಂದು ವರ್ಷವಾದರೂ ಅನುಪಾಲನಾ ವರದಿಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿಲ್ಲ. ಇದರಲ್ಲಿ ಲೋಕಾಯುಕ್ತರ ವ್ಯಾಪ್ತಿಗೆ ಒಳ ಪಟ್ಟ 15 ಪ್ರಕರಣಗಳು, ಉಪ ಲೋಕಾಯುಕ್ತ- 1 ರವರ ವ್ಯಾಪ್ತಿಗೆ ಒಳಪಟ್ಟ142 ಪ್ರಕರಣಗಳು, ಉಪ ಲೋಕಾಯುಕ್ತ- 2 ರವರ ವ್ಯಾಪ್ತಿಗೆ ಒಳಪಟ್ಟ 132 ಪ್ರಕರಣಗಳು ಸೇರಿವೆ.

 

207 ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿ 2 ವರ್ಷಗಳ ನಂತರವೂ ಅನುಪಾಲನಾ ವರದಿಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿಲ್ಲ. ಇದರಲ್ಲಿ ಲೋಕಾಯುಕ್ತರ ವ್ಯಾಪ್ತಿಗೆ ಒಳ ಪಟ್ಟ 13 ಪ್ರಕರಣಗಳು, ಉಪ ಲೋಕಾಯುಕ್ತ -1 ರವರ ವ್ಯಾಪ್ತಿಗೆ ಒಳಪಟ್ಟ88 ಪ್ರಕರಣಗಳು, ಉಪ ಲೋಕಾಯುಕ್ತ- 2 ರವರ ವ್ಯಾಪ್ತಿಗೆ ಒಳಪಟ್ಟ 106 ಪ್ರಕರಣಗಳು ಸೇರಿವೆ.

 

127  ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿ 3 ವರ್ಷಗಳ ನಂತರವೂ ಅನುಪಾಲನಾ ವರದಿಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿಲ್ಲ. ಇದರಲ್ಲಿ ಲೋಕಾಯುಕ್ತರ ವ್ಯಾಪ್ತಿಗೆ ಒಳ ಪಟ್ಟ 10 ಪ್ರಕರಣಗಳು, ಉಪ ಲೋಕಾಯುಕ್ತ- 1 ರವರ ವ್ಯಾಪ್ತಿಗೆ ಒಳಪಟ್ಟ 61 ಪ್ರಕರಣಗಳು, ಉಪ ಲೋಕಾಯುಕ್ತ- 2 ರವರ ವ್ಯಾಪ್ತಿಗೆ ಒಳಪಟ್ಟ 56 ಪ್ರಕರಣಗಳು ಸೇರಿವೆ.

 

ಸರ್ಕಾರ ವರದಿ ತಿರಸ್ಕರಿಸುವಂತಿಲ್ಲ

 

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರಳಿ ತನಿಖಾ ಅಧಿಕಾರ ನೀಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ವೇಳೆ, ರಾಜ್ಯ ಹೈ ಕೋರ್ಟ್‌ ಕೂಡ, ಲೋಕಾಯುಕ್ತ ವರದಿಗಳಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಗಳು ಸಲ್ಲಿಕೆಯಾಗದೇ ಇರುವ ಬಗ್ಗೆ ಅಂದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.  ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಸೆಕ್ಷನ್‌ 12(3)ರ ಅಡಿಯಲ್ಲಿ ಸಲ್ಲಿಸುವ ವರದಿಗಳನ್ನು ಸರ್ಕಾರ ಒಪ್ಪಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಇದೇ ಕಾಯ್ದೆಯ ಸೆಕ್ಷನ್‌ 12(4)ಕ್ಕೆ ತಕ್ಷಣವೇ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಅಭಿಪ್ರಾಯ ಪಟ್ಟಿತ್ತು.

 

2022ರ ಆಗಸ್ಟ್‌ 11ರಂದು ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಸಲಹೆ ನೀಡಿದ್ದರೂ, ಈ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

 

2016 ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ (WP No. 5361/2016 (S-KAT) dated 06-04-2016 Karnataka High Court ) ಕೂಡ ರಾಜ್ಯ ಹೈಕೋರ್ಟ್‌ ಇದೇ ತೆರನಾದ ಅಭಿಪ್ರಾಯ ವ್ಯಕ್ತಪಡಿಸಿತ್ತು. ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(3)ರ ಅಡಿಯಲ್ಲಿ ವಿಚಾರಣೆ ಆರಂಭಿಸಲು ಶಿಫಾರಸು ಮಾಡಿದಾಗ, ಆ ಶಿಫಾರಸನ್ನು ಸೂಕ್ತ ನ್ಯಾಯಾಲಯ ರದ್ದುಪಡಿಸದ ಹೊರತು ಅಥವಾ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ, ಅತ್ಯಂತ ಬಲವಾದ ಕಾರಣಗಳಿಲ್ಲದೆ ಸರ್ಕಾರ ಮುಂದಿನ ಕ್ರಮಗಳನ್ನು ಕೈಬಿಡಬಾರದು ಎಂದು ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ತೀರ್ಪು ನೀಡಿದ್ದರು.

 

ನ್ಯಾಯಾಂಗಕ್ಕೆ ಸೇರಿದವರೇ ಲೋಕಾಯುಕ್ತ ಸಂಸ್ಥೆಯ ನೇತೃತ್ವ ವಹಿಸಿದ ಸಂದರ್ಭದಲ್ಲಿ ಅವರ ಅಭಿಪ್ರಾಯಗಳು ಕೇವಲ ಕಾಗದದ ಮೇಲಿನ ನಿರ್ದೇಶನಗಳಾಗಿ ಉಳಿಯದ ರೀತಿಯಲ್ಲಿ ನೋಡಿಕೊಳ್ಳಬೇಕು. ಲೋಕಾಯುಕ್ತಕ್ಕೆ ಸೂಕ್ತವಾದ ಅಧಿಕಾರದ ಬಲವಿರಬೇಕು ಎಂದು ಸುಪ್ರೀಂ ಕೋರ್ಟ್‌ ಕೂಡ (Institution Of A. R Lokayukta and Upa Lokayukta, A. P.Versus T. Rama Subba Reddy (1997) 9 ncc 42) ಹೇಳಿದೆ.

 

karnataka lokayukta submits reports to government

 

ಸುಪ್ರೀಂ ಕೋರ್ಟ್‌ ಮತ್ತು  ಹೈಕೋರ್ಟ್‌ ಸಲಹೆ ನೀಡಿದ್ದರೂ  ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು, ಸರ್ಕಾರ ಕ್ರಮ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಇದರಿಂದಾಗಿ ನೂರಾರು ಪ್ರಕರಣಗಳು ಯಾವುದೇ  ಮುಂದುವರಿದ ಕ್ರಮಗಳಿಲ್ಲದೆ ಬಾಕಿ ಉಳಿದಿವೆ. ಭ್ರಷ್ಟಾಚಾರದ ಬಗ್ಗೆ ಬಂದ ದೂರುಗಳನ್ನು ಲೋಕಾಯುಕ್ತ ತನಿಖೆ ನಡೆಸಿ,  ವರದಿ ಸಲ್ಲಿಸಿದರೂ, ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ಲೋಕಾಯುಕ್ತ ಸ್ಥಾಪನೆಯ ಉದ್ದೇಶವನ್ನೇ ಮಣ್ಣುಪಾಲು ಮಾಡಿದೆ.

 

ಕರ್ನಾಟಕ ಲೋಕಾಯುಕ್ತ ಅಧಿನಿಯಮ-1984ರ ಅಡಿಯಲ್ಲಿ ʻಕರ್ನಾಟಕ ಲೋಕಾಯುಕ್ತʼವನ್ನು ಸ್ಥಾಪಿಸಲಾಗಿತ್ತು. ಆಡಳಿತ ನಿರ್ವಹಣೆಯಲ್ಲಿ ನಡೆಯುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಶಿಸ್ತಿನ ಪ್ರಕಣಗಳೂ ಸೇರಿದಂತೆ, ಆಡಳಿತ ಕ್ರಮಗಳ ಸಂಬಂಧದಲ್ಲಿ ಬಂದ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಮೂಲಕ  ಸಾರ್ವಜನಿಕ ಆಡಳಿತ ಗುಣಮಟ್ಟಗಳನ್ನು ಸುಧಾರಿಸುವ ಉದ್ದೇಶಕ್ಕಾಗಿ ಲೋಕಾಯುಕ್ತವೆಂಬ ಸಂಸ್ಥೆಯನ್ನು ರಚಿಸುವಂತೆ ಆಡಳಿತ ಸುಧಾರನಾ ಸಮಿತಿಯು ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಇದು ರಚನೆಗೊಂಡಿತ್ತು. ದೇಶದಲ್ಲಿಯೇ ಕರ್ನಾಟಕ ಈ ರೀತಿಯ ಸಂಸ್ಥೆ ರಚಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

 

ಪ್ರಸ್ತುತ  ನ್ಯಾ. ಬಿ.ಎಸ್‌. ಪಾಟೀಲ ಅವರು ಲೋಕಾಯುಕ್ತರಾಗಿ ಈಗ ಸೇವೆ ಸಲ್ಲಿಸುತ್ತಿದ್ದಾರೆ. ಉಪ ಲೋಕಾಯುಕ್ತರಾಗಿ  ಕೆ.ಎನ್‌. ಫಣೀಂದ್ರ ಮತ್ತು ಬಿ. ವೀರಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ.

 

ಮಹತ್ವದ ಪ್ರಕರಣಗಳಾದರೂ ಕ್ರಮವಿಲ್ಲ

 

ಲೋಕಾಯುಕ್ತವು ತನಿಖೆ ಮತ್ತು ವಿಚಾರಣೆ ನಡೆಸಿ, ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಬಹಳ ಪ್ರಮುಖವಾದ ಪ್ರಕರಣಗಳ ಕುರಿತೂ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ.

 

ಉದಾಹರಣೆಗೆ ಮೈಸೂರಿನಲ್ಲಿ ಇತ್ತೀಚೆಗೆ ಸುದ್ದಿಯಾಗುತ್ತಿರುವ  ʻಮುಡಾʼ ಹಗರಣದ  ರೀತಿಯಲ್ಲಿಯೇ,  ಹದಿನೈದು ವರ್ಷಗಳ ಹಿಂದೆ ಅಂದರೆ 2010ರಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ  ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ (ಸುಡಾ)  ಹಗರಣ ನಡೆದಿತ್ತು.

 

ಶಿವಮೊಗ್ಗದ ಶ್ರೀ ಅಟಲ್‌ ಬಿಹಾರಿ ವಾಜಪೇಯಿ (ಮಲ್ಲಿಗೇನಹಳ್ಳಿ) ಬಡಾವಣೆಯಲ್ಲಿ ಅಕ್ರಮ ನಿವೇಶನ ಹಂಚಿಕೆ, ಭೂ ಸ್ವಾಧೀನ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣ ಇದಾಗಿತ್ತು.  ಈ ಕುರಿತು ಲೋಕಾಯುಕ್ತ ತನಿಖೆಗೆ 2014ರ ಜುಲೈ 17 ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು (ಆದೇಶ ಸಂಖ್ಯೆ: ನಅಇ 158 ಬೆಂರೂಪ್ರಾ 2014, ಬೆಂಗಳೂರು, ದಿನಾಂಕ 17/07/2014).

 

ನಿಯಮಬಾಹಿರವಾಗಿ ವಿವೇಚನಾ ಕೋಟಾದಡಿಯಲ್ಲಿ 117 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, 55 ನಿವೇಶನ ಹಂಚಿಕೆ ಪ್ರಕರಣಗಳಲ್ಲಿ ಒಂದೇ ಕುಟುಂಬದ ಹಲವು ಸದಸ್ಯರಿಗೆ ನಿಯಮಬಾಹಿರವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ, 93 ಪ್ರಕರಣಗಳಲ್ಲಿ ಖಾತ್ರಿ ಠೇವಣಿಯಲ್ಲಿ ನಿವೇಶನದ ಮೌಲ್ಯ ಮಾಪಕ್ಕನುಗುಣವಾಗಿ ಪಾವತಿಸದೇ ಇದ್ದರೂ ನಿವೇಶನ ಹಂಚಿಕೆ ಮಾಡಲಾಗಿದೆ, 184 ಪ್ರಕರಣಗಳಲ್ಲಿ ವಾಸ ದೃಢೀಕರಣ ಪತ್ರ ಸಲ್ಲಿಸಿಲ್ಲದಿದ್ದರೂ ಹಂಚಿಕೆ ಮಾಡಲಾಗಿದೆ ಹೀಗೆ 807 ನಿವೇಶನ ಹಂಚಿಕೆಗಳಿಗೆ ಸಂಬಂಧಿಸಿದಂತೆ 25 ಆರೋಪಗಳನ್ನು ಮಾಡಲಾಗಿತ್ತು.

 

ಈ ಕುರಿತು ತನಿಖೆ ನಡೆಸಿದ ಲೋಕಾಯುಕ್ತವು 807 ನಿವೇಶನಗಳ ಹಂಚಿಕೆಯು ನಿಯಮ ಬಾಹಿರವಾಗಿವೆ, ಇದರಲ್ಲಿ 142 ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಬೇಕು, ಪತಿ ಮತ್ತು ಪತ್ನಿಗೆ ನಿವೇಶನ ನೀಡಿದ 32 ಪ್ರಕರಣಗಳಿಗೆ ಸಂಬಂಧಿಸಿದಂತೆ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಬೇಕು, ಹಾಗೆಯೇ ಈಗಾಗಲೇ ಬೇರೆ ಬೇರೆ ಪ್ರಾಧಿಕಾರಗಳಿಂದ ನಿವೇಶನ ಪಡೆದಿದ್ದರೂ, ಇಲ್ಲಿಯೂ ನಿವೇಶನ ಪಡೆದಿರುವ 50 ಅರ್ಜಿದಾರರ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಬೇಕೆಂದು ಶಿಫಾರಸು ಮಾಡಿತ್ತು.

 

karnataka lokayukta submits reports to government

 

ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಲ್ಲದೇ ಇದ್ದರೂ ಸರ್ಕಾರಿ ನೌಕರರ ಪ್ರವರ್ಗದಡಿಯಲ್ಲಿ ನೀಡಲಾಗಿರುವ ಎಂಟು ನಿವೇಶನಗಳ ರದ್ದತಿಗೂ ಶಿಫಾರಸು ಮಾಡಿದೆ. ಸರಿಯಾದ ಠೇವಣಿಯನ್ನು ನೀಡದೇ ನಿವೇಶನ ಪಡೆದ 93 ಅರ್ಜಿದಾರರಿಗೂ ಮತ್ತು ನಿಯಮ ಬಾಹಿರವಾಗಿ 34 ನಿವೇಶನಗಳನ್ನು ಪಡೆದ ಮಾಜಿ ಸೈನಿಕರಿಗೂ ನೀಡಲಾಗಿರುವ ನಿವೇಶನಗಳನ್ನು ರದ್ದುಪಡಿಸಬೇಕೆಂದು ಲೋಕಾಯುಕ್ತವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿತ್ತು.

 

ವಾಸ ದೃಢೀಕರಣ, ಉದ್ಯೋಗ ದೃಢೀಕರಣ ಮತ್ತು ಆದಾಯ ದೃಢೀಕರಣ ದಾಖಲೆಗಳನ್ನು ಒದಗಿಸದೇ ಇದ್ದರೂ ಮಂಜೂರು ಮಾಡಲಾಗಿದ್ದ ನಿವೇಶನಗಳ ರದ್ದತಿಗೂ ಲೋಕಾಯುಕ್ತ ಶಿಫಾರಸು ಮಾಡಿತ್ತು. ನಿಯಮಬಾಹಿರವಾಗಿ ವಿವೇಚನಾ ಕೋಟಾದಡಿಯಲ್ಲಿ ನೀಡಲಾಗಿದ್ದ ನಿವೇಶನಗಳ ರದ್ದತಿಗೂ ಶಿಫಾರಸು ಮಾಡಲಾಗಿತ್ತು.

 

ಈ ಹಗರಣ ನಡೆದಾಗ ಸುಡಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿದ್ದ ರಮೇಶ್‌ ಜಿ, ಸಹಾಯಕ ಇಂಜಿನಿಯರ್‌ ಆಗಿದ್ದ ವೈ.ಎನ್‌. ವಿಜಯಕುಮಾರ್‌ ಮತ್ತು ಕಿರಿಯ ಇಂಜಿನಿಯರ್‌ ಆಗಿದ್ದ ಜಿ.ಆರ್‌. ಬಸವರಾಜ್‌ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆಯು ಶಿಫಾರಸು ಮಾಡಲಾಗಿತ್ತು.

 

ಸೂಡಾದ ಅಧ್ಯಕ್ಷರಾಗಿದ್ದ ಶಿವಮೊಗ್ಗ ಬಿಜೆಪಿಯ ನಾಯಕರಾದ ಎಸ್‌. ಜ್ಞಾನೇಶ್ವರ್‌ ಮತ್ತು ಎಸ್‌. ದತ್ತಾತ್ರಿ ಅವರನ್ನು ಮೂರು ವರ್ಷ ಯಾವುದೇ ನಿಗಮ, ಮಂಡಳಿಗೆ ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ನೇಮಿಸದಂತೆಯೂ ಲೋಕಾಯುಕ್ತವು ಶಿಫಾರಸು ಮಾಡಿತ್ತು.

 

ಈ ವರದಿಯನ್ನು ಲೋಕಾಯುಕ್ತವು 2020ರ ಡಿಸೆಂಬರ್‌ 4 ಸರ್ಕಾರಕ್ಕೆ (ಸರ್ಕಾರ ಆದೇಶ ನೀಡಿದ ಆರು ವರ್ಷಗಳ ನಂತರ) ಕಳಿಸಿಕೊಟ್ಟಿತ್ತು. ಆದರೆ 2021ರ ಜುಲೈನಲ್ಲಿ ಆಗಿನ ಬಿಜೆಪಿ ಸರ್ಕಾರವು ಲೋಕಾಯುಕ್ತರ ಈ ಶಿಫಾರಸನ್ನು ಬದಿಗೆ ಸರಿಸಿ, ಈ ಬಡಾವಣೆಯ ಎಲ್ಲ ನಿವೇಶನಗಳ ಹಂಚಿಕೆಯನ್ನು ಸಿಂಧುಗೊಳಿಸಿತ್ತು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು.  ಇದರಿಂದ ಲೋಕಾಯುಕ್ತದ ಶ್ರಮವೆಲ್ಲ ವ್ಯರ್ಥವಾಗಿತ್ತು.

 

ಇದೇ ರೀತಿಯಾಗಿ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಲೋಕಾಯುಕ್ತ ಸಂಸ್ಥೆಯು ತನಿಖೆ ನಡೆಸಿ, ನೀಡಿದ ವರದಿಗಳ ಮೇಲೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತೆ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿಯೇ ಈ ಕುರಿತು ತೀರ್ಮಾನಗಳಾಗುತ್ತಿವೆ. ಇದು ಎಲ್ಲ ಪಕ್ಷಗಳ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನಡೆದುಕೊಂಡು ಬಂದಿದೆ.

 

ಲೋಕಾಯುಕ್ತದಲ್ಲಿ 22,699 ದೂರುಗಳ ವಿಚಾರಣೆ ಬಾಕಿ; 2009 ರಿಂದಲೂ ಪೆಂಡಿಂಗ್‌ನಲ್ಲಿವೆ ಕೇಸುಗಳು!

 

ಲೋಕಾಯುಕ್ತದಲ್ಲಿ ಕಳೆದ  ಜುಲೈ ಅಂತ್ಯದ ವೇಳೆಗೆ  22,699 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕೇವಲ ಜುಲೈ ತಿಂಗಳೊಂದರಲ್ಲಿಯೇ 1,270 ಪ್ರಕರಣಗಳು ದಾಖಲಾಗಿದ್ದವು. ಈ ತಿಂಗಳಿನಲ್ಲಿ  ಒಟ್ಟು  845 ಪ್ರಕರಣಗಳನ್ನಷ್ಟೇ ವಿಲೇವಾರಿ ಮಾಡಲು ಲೋಕಾಯುಕ್ತಕ್ಕೆ ಸಾಧ್ಯವಾಗಿದೆ. ಹೀಗೆ ಪ್ರತಿ ತಿಂಗಳೂ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಾವಿರಾರು ದೂರು ಪ್ರಕರಣಗಳ ವಿಚಾರಣೆಯೇ ಇನ್ನೂ ಆರಂಭಗೊಂಡಿಲ್ಲ. ಆರಂಭಗೊಂಡಿರುವ ಪ್ರಕರಣಗಳ ವಿಚಾರಣೆ ಕೂಡ ಆಮೆ ವೇಗದಲ್ಲಿ ನಡೆಯುತ್ತಿದೆ. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts