ಹರಿಹರ ಚಿಕ್ಕಬಿದರೆ ಭೂ ಸ್ವಾಧೀನಕ್ಕೆ 18 ವರ್ಷ; ಅತ್ತ ರೈತರಿಗೆ ಪರಿಹಾರವೂ ಇಲ್ಲ, ಇತ್ತ ಭೂಮಿಯೂ ಇಲ್ಲ

land acquisition in harihar for bio fertilizer company

ಬೆಂಗಳೂರು: ದೇವನಹಳ್ಳಿ ಮತ್ತು ಬಾದಮಿಯಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಕೆಐಎಡಿಬಿ ರೈತರಿಗೆ ಹಿಂದಿರುಗಿಸಲು ವಿಳಂಬ ಮಾಡುತ್ತಿರುವ ಸುದ್ದಿಯ ನಡುವೆಯೇ  ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಅನಗತ್ಯವಾಗಿ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಕೆಐಡಿಬಿಯು 18 ವರ್ಷಗಳಾದರೂ ರೈತರಿಗೆ ಹಿಂದಿರುಗಿಸದೇ ಇರುವುದು ಬೆಳಕಿಗೆ ಬಂದಿದೆ.

 

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಚಿಕ್ಕಬಿದರೆಯಲ್ಲಿ ಎಸ್‌ ಎಸ್‌ ಬಯೋಫರ್ಟಿಲೈಸರ್ಸ್‌ ಕಂಪನಿಗಾಗಿ 61-23 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 2007 ರಲ್ಲಿಯೇ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಕೂಡ ಪ್ರಕಟವಾಗಿತ್ತು. ಆದರೆ ರೈತರಿಗೆ ಯಾವುದೇ ಪರಿಹಾರ ನೀಡಿರಲಿಲ್ಲ. ಈಗ ಭೂಮಿಯು ಕಾನೂನು ಜಂಜಾಟದಲ್ಲಿ  ಸಿಲುಕಿದೆ. ಹೀಗಾಗಿ  ಇತ್ತ ರೈತರಿಗೆ ಭೂ  ಪರಿಹಾರವೂ ಇಲ್ಲ, ಉಳುಮೆ ಮಾಡಲು ಭೂಮಿಯೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

 

ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಹರಿಹರದ ಶಾಸಕ ಬಿ.ಪಿ. ಹರೀಶ್‌ ಅವರು  ನಿಯಮ, 73ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.  ಇನ್ನೂ ಈ ಜಮೀನನ್ನು ಭೂಮಾಲೀಕರಿಗೆ ವಾಪಸ್ಸು ನೀಡುವ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು  ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌  ವಿಧಾನಸಭೆಗೆ ಉತ್ತರ ನೀಡಿದ್ದಾರೆ.

 

 

land acquisition in harihar for bio fertilizer company

 

 

ಏನಿದು ಪ್ರಕರಣ?

 

ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಚಿಕ್ಕಬಿದರಿ ಗ್ರಾಮದ ಸರ್ವೆ ನಂಬರ್ 30 ಮತ್ತು 67 ರಲ್ಲಿ ಒಟ್ಟು 38-15 ಎಕರೆ ಸರ್ಕಾರಿ ಜಮೀನು ಸೇರಿದಂತೆ ಒಟ್ಟು 99-38 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಎಸ್‌ಎಸ್‌ ಬಯೋಫರ್ಟಿಲೈಸರ್ಸ್‌ಗಾಗಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಯು 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.

 

ಇದರಲ್ಲಿ ಖಾಸಗಿ ಜಮೀನಾದ 61-23 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ದಿನಾಂಕ 2007 ಮೇ 15 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಭೂಸ್ವಾಧೀನದ ಮೂಲಕ ವಶಪಡಿಸಿಕೊಂಡ ಖಾಸಗಿ ಜಮೀನನ್ನು2008ರ ಫೆಬ್ರವರಿ 13 ರಲ್ಲಿಯೇ ಕೆಐಎಡಿಬಿಗೆ ಹಸ್ತಾಂತರಿಸಲಾಗಿತ್ತು.

 

ಆದರೆ ಯೋಜನೆಯ ಪ್ರವರ್ತಕ ಕಂಪನಿ ಎಸ್.ಎಸ್ ಬಯೋಫರ್ಟಿಲೈಸರ್ಸ್ ಅವಶ್ಯವಿರುವ ಭೂಸ್ವಾಧೀನದ ಬಾಕಿ ಮೊತ್ತವನ್ನು ಮಂಡಳಿಗೆ ಠೇವಣಿ ಮಾಡಿರಲಿಲ್ಲ.  ಹಾಗೆಯೇ ಈ ಜಮೀನು   ಏಕಘಟಕ ಸಂಕೀರ್ಣದ ಪರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.  ಈ  ಭೂಸ್ವಾಧೀನ ಕೈಬಿಡುವ ಕುರಿತು ಕೆಐಎಡಿ ಕಾಯ್ದೆ ಕಲಂ 4 ರ ಪ್ರಸ್ತಾವನೆಯನ್ನು ಸಲ್ಲಿಸಲು ದಿನಾಂಕ 2017ರ ಫೆಬ್ರವರಿಯಲ್ಲಿಯೇ  ನಡೆದಿದ್ದ   ಮಂಡಳಿಯ 347ನೇ ಸಭೆಯಲ್ಲಿ ನಿರ್ಣಯಿಸಲಾಗಿತ್ತು.

 

ಅದರಂತೆ 2017ರ ಮೇ 4 ರಂದು ಕಲಂ 4 ರ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಜಮೀನು ಈಗಾಗಲೇ ಕಲಂ 28(8) ರಡಿ ಮಂಡಳಿಗೆ ಹಸ್ತಾಂತರವಾಗಿರುವ ಕಾರಣ ಇಂತಹ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬದಲಾಗಿ ಮಂಡಳಿಯೇ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಕುರಿತು ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಿ ಪ್ರಸ್ತಾವನೆಯನ್ನು ಮಂಡಳಿಯ ಮುಂದೆ ಮಂಡಿಸಲು ನಿರ್ದೇಶನ ನೀಡಲಾಗಿತ್ತು ಎಂದು ಸಚಿವರು  ಗಮನ ಸೆಳೆಯುವ ಸೂಚನೆಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.

 

ಈ ವಿಷಯದ ಕುರಿತು 2018 ರಲ್ಲಿ ಜರುಗಿದ ಮಂಡಳಿಯ 352ನೇ ಸಭೆಯಲ್ಲಿ ಚರ್ಚಿಸಲಾಗಿತ್ತು.  ಪ್ರಸ್ತಾವಿತ ಜಮೀನುಗಳನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಎಸ್.ಎಸ್ ಬಯೋಫರ್ಟಿಲೈಸರ್ಸ್‌ ನವರು ಭೂ ಸ್ವಾಧೀನದ ಬಾಬ್ತು ಮಂಡಳಿಗೆ ಪಾವತಿಸಿರುವ ಮೊತ್ತದಲ್ಲಿ ನಿಯಮಾನುಸಾರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು ಎಂದು ಸಚಿವ ಎಂ.ಬಿ. ಪಾಟೀಲ್‌ ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

ಈ ಹಿನ್ನೆಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಅಧಿಕಾರಿಗಳು  ದಾವಣಗೆರೆಯ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಜಂಟಿ ಸ್ಥಳ ತನಿಖೆ ನಡೆಸಿ, ರೈತರಿಂದ ಪಡೆದ ಈ ಜಮೀನು ಗುಡ್ಡಕ್ಕೆ ಹೊಂದಿಕೊಂಡಿದೆ.  ಇಳಿಜಾರಿನಿಂದ ಏರಿಳಿತಗಳ ಭೌಗೋಳಿಕ ಲಕ್ಷಣ ಹೊಂದಿದೆ. ಅಲ್ಲದೆ, ಸಂಪರ್ಕ ರಸ್ತೆ ಕೂಡ ಇರುವುದಿಲ್ಲ. ಹೀಗಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದರು ಎಂದು  ಉತ್ತರದಲ್ಲಿ ಸಚಿವರು ವಿವರಿಸಿದ್ದಾರೆ.

 

land acquisition in harihar for bio fertilizer company

 

 

ಹೀಗಾಗಿ ಈ ಜಮೀನನ್ನು ಭೂಮಾಲೀಕರಿಗೆ ವಾಪಸ್ಸು ನೀಡಬೇಕೆಂದು ನಿರ್ಧರಿಸಲಾಗಿದೆಯಾದರೂ ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದಲೂ ಪರಿಶೀಲನೆ ನಡೆಸಲಾಗುತ್ತಲೇ ಇದೆ ಎಂಬುದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

2007ರಲ್ಲೇ ಅಂತಿಮ ಅಧಿಸೂಚನೆ

 

2007ರಲ್ಲಿಯೇ ಅಂತಿಮ ಅಧಿಸೂಚನೆ ಪ್ರಕಟಿಸಿ ಭೂ ಸ್ವಾಧೀನಪಡಿಸಿಕೊಂಡಿದ್ದರೂ ಇದುವರೆಗೂ ಯಾವುದೇ ರೀತಿಯ ಪರಿಹಾರವನ್ನು ಸಂತ್ರಸ್ಥ ರೈತರಿಗೆ ನೀಡಲಾಗಿಲ್ಲ. ರೈತರಿಗೆ ಭೂಮಿಯನ್ನು ಅಧಿಕೃತವಾಗಿ ಹಿಂದಿರುಗಿಸಲಾಗಿಲ್ಲ. ಹೀಗಾಗಿ ರೈತರುಗಳಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ, ಕಷ್ಟದ ಸಂದರ್ಭಗಳಲ್ಲಿ ಭೂಮಿ ಮಾರಾಟ ಅಥವಾ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಜಮೀನನ್ನು ಅಧಿಸೂಚನೆಯಿಂದ ಕೈ ಬಿಟ್ಟು ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಬಿ.ಪಿ. ಹರೀಶ್‌ ಈ ಗಮನ ಸೆಳೆಯುವ ಸೂಚನೆಯಲ್ಲಿ ಒತ್ತಾಯಿಸಿದ್ದರು.

 

ಸಚಿವರಿಗೆ ಸೇರಿದ ಕಾರ್ಖಾನೆ

 

ಈ ಕುರಿತು ʻದಿ ಫೈಲ್‌ʼನೊಂದಿಗೆ ಮಾತನಾಡಿದ ಹರಿಹರದ ಶಾಸಕ  ಬಿ.ಪಿ. ಹರೀಶ್‌, ʻಎಸ್‌ ಎಸ್‌ ಬಯೋಫರ್ಟಿಲೈಸರ್ಸ್‌ʼ ಕಂಪನಿಯು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಸೇರಿದೆ.  ಹೀಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ರೈತರಿಗೆ ಭೂಮಿಯನ್ನು ಹಿಂದಿರುಗಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

 

ಈ ಕುರಿತು ತಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಕೆಐಎಡಿಬಿಯು ಅನ್ಯಾಯವಾಗಿ  ರೈತರಿಂದ ವಶಪಡಿಸಿಕೊಂಡಿದ್ದ ಕೃಷಿ ಭೂಮಿಯನ್ನು ಅವರಿಗೆ ಹಿಂದಿರುಗಿಸುವವರೆಗೂ  ಹೋರಾಟ ನಡೆಸುತ್ತೇನೆ ಎಂದು ಶಾಸಕ ಬಿ.ಪಿ. ಹರೀಶ್‌  ಹೇಳಿದ್ದಾರೆ.

 

ಭೂಸ್ವಾಧೀನ ವಾಪಾಸ್‌: ದೇವನಹಳ್ಳಿಯಲ್ಲಿಯೂ ಇಲ್ಲ, ಬಾದಾಮಿಯಲ್ಲಿಯೂ ಇಲ್ಲ, ಸರ್ಕಾರದ ನಿಲುವು ಬದಲು?

 

ದೇವನಹಳ್ಳಿ ಭೂಸ್ವಾಧೀನವನ್ನು ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿ ಎರಡು ತಿಂಗಳು ಕಳೆದರೂ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿಯೇ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಭೂಸ್ವಾಧೀನ  ಕೈಬಿಡುವ ಕುರಿತೂ ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ತೋರುತ್ತಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್‌ʼ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts