ಬೆಂಗಳೂರು : ರಾಜ್ಯ ಸರ್ಕಾರವು 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗಕ್ಕೆ ಇದುವರೆಗೆ 10.87 ಕೋಟಿ ರು. ಅನುದಾನ ನೀಡಿದೆ. ಆದರೆ ಈ ಆಯೋಗ ಮಾಡಿರುವ ಶಿಫಾರಸುಗಳಲ್ಲಿ ಶೇ. 50ರಷ್ಟನ್ನೂ ಜಾರಿಗೆ ತಂದಿಲ್ಲ ಎಂಬುದು ಬೆಳಕಿಗೆ ಬಂದಿದೆ.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಇದುವರೆಗೂ ಒಟ್ಟು 8 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಏಳು ವರದಿಗಳಲ್ಲಿ 5,039 ಶಿಫಾರಸುಗಳನ್ನು ಮಾಡಲಾಗಿತ್ತು. ಇದರಲ್ಲಿ ಕೇವಲ 1,576 ಶಿಫಾರಸುಗಳನ್ನು ಮಾತ್ರ ಅನುಷ್ಠಾನಕ್ಕೆ ತಂದಿದೆ. 944 ಶಿಫಾರಸುಗಳು ಇನ್ನೂ ಅನುಷ್ಠಾನ ಹಂತದಲ್ಲಿದ್ದು, 2,157 ಶಿಫಾರಸುಗಳನ್ನು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ. 362 ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿದೆ.
ಆಯೋಗವು 8ನೇ ವರದಿಯನ್ನು ಕಳೆದ ಮೇ ತಿಂಗಳಿನಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ 189 ಶಿಫಾರಸುಗಳನ್ನು ಮಾಡಲಾಗಿದೆ. ಇವುಗಳೆಲ್ಲವೂ ಇನ್ನೂ ಪರಿಶೀಲನೆಯ ಹಂತದಲ್ಲಿವೆ.
ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಆಗಸ್ಟ್‌ನಲ್ಲಿ ನಡೆದಿದ್ದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ಮಾಹಿತಿ ಒದಗಿಸಿದ್ದಾರೆ. ಮಧು ಜಿ. ಮಾದೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಅವರು, 2021ರಲ್ಲಿ ನೇಮಕಗೊಂಡಿರುವ 2ನೇ ಆಯೋಗವನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗಕ್ಕೆ 2021-22ನೇ ಸಾಲಿನಲ್ಲಿ175.97 ಲಕ್ಷ ರು., 2022-23ನೇ ಸಾಲಿನಲ್ಲಿ 207.18 ಲಕ್ಷ ರು., 2023-24ನೇ ಸಾಲಿನಲ್ಲಿ 255.39 ಲಕ್ಷ ರು. ಹಾಗೂ 2025-26ನೇ ಸಾಲಿನಲ್ಲಿ 265.20 ಲಕ್ಷ ರು. ಅನುದಾನ ನೀಡಲಾಗಿದೆ ಎಂದು ಈ ಸಂಬಂಧ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ. ಮೊದಲನೇ ಆಯೋಗಕ್ಕೆ ಕೇವಲ 53.90 ಲಕ್ಷ ಅನುದಾನ ಒದಗಿಸಲಾಗಿತ್ತು.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವನ್ನು ರಚಿಸಿ ಹೊರಡಿಸಲಾಗಿದ್ದ ಆದೇಶದಲ್ಲಿ (ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ-ಅಸು 05 ಅಸಪ 2020, ಬೆಂಗಳೂರು, ದಿನಾಂಕ 07-01-2021), ʻʻಆಯೋಗವು ತನ್ನ ಕಾರ್ಯಾಧ್ಯಯನವನ್ನು ಮುಗಿಸಿ ಅಂತಿಮ ವರದಿಯನ್ನು ಎರಡು ವರ್ಷಗಳ ಅವಧಿಯೊಳಗೆ ಸಲ್ಲಿಸತಕ್ಕದ್ದು ಹಾಗೂ ಮಧ್ಯಂತರ ವರದಿಯನ್ನು ಒಂದು ವರ್ಷ ಅವಧಿಯೊಳಗೆ ಸಲ್ಲಿಸುವುದುʼʼ ಎಂದು ಸೂಚಿಸಲಾಗಿತ್ತು.
ಆಯೋಗ ರಚನೆಯಾಗಿ ನಾಲ್ಕುವರೆ ವರ್ಷ ಕಳೆದರೂ ಆಯೋಗವು ತನ್ನ ಕಾರ್ಯಾಧ್ಯಯನವನ್ನು ಪೂರ್ಣಗೊಳಿಸಿಲ್ಲ.
ಆಯೋಗ ಮಾಡಿರುವ ಕೆಲವು ಶಿಫಾರಸುಗಳನ್ನು ಅನುಷ್ಠಾನಗೊಳಿಸದಿರಲು ಮೂರು ಕಾರಣಗಳನ್ನು ಮುಖ್ಯಮಂತ್ರಿ ವಿಧಾನ ಪರಿಷತ್ತಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಕೆಲವು ಶಿಫಾರಸುಗಳಿಗೆ ಒಂದಕ್ಕಿಂತ ಹೆಚ್ಚು ಇಲಾಖೆಗಳ ಸಮನ್ವಯದ ಅವಶ್ಯಕತೆ ಇದೆ. ಇನ್ನು ಕೆಲವು ಶಿಫಾರಸುಗಳಿಗೆ ಅಯವ್ಯಯದಲ್ಲಿ ಅವಕಾಶ ಕಲ್ಪಿಸಬೇಕಾಗಿರುತ್ತದೆ ಮತ್ತು 362 ಶಿಫಾರಸುಗಳ ಜಾರಿಗೆ ಇಲಾಖೆಗಳು ಒಪ್ಪಿಗೆ ನೀಡಿಲ್ಲ ಎಂದು ಅವರು ವಿವರಿಸಿದ್ದಾರೆ.
ಈ ಮೊದಲೇ ಕರ್ನಾಟಕ ಆಡಳಿ ಸುಧಾರಣಾ ಆಯೋಗವನ್ನು 2000ರ ಏಪ್ರಿಲ್ 17 ರಂದು ರಚಿಸಲಾಗಿತ್ತು. ಹಾರನಹಳ್ಳಿ ರಾಮಸ್ವಾಮಿ ಅವರು ಈ ಆಯೋಗದ ಅಧ್ಯಕ್ಷರಾಗಿದ್ದರು. ಈ ಆಯೋಗವು 2001ರ ವರೆಗೆ ಕಾರ್ಯನಿವರ್ಹಿಸಿತ್ತು. 2001 ರ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ 481 ಅಂತಿಮ ಹಾಗೂ 246 ಮದ್ಯಂತರ ಶಿಫಾರಸುಗಳನ್ನು ಮಾಡಲಾಗಿತ್ತು. ಇವುಗಳ ಪೈಕಿ 462 ಶಿಫಾರಸುಗಳು ಅನುಷ್ಠಾನಗೊಂಡಿವೆ. 216 ಶಿಫಾರಸುಗಳು ಇನ್ನೂ ಅನುಷ್ಠಾನದ ಹಂತದಲ್ಲಿವೆ. ಉಳಿದ 49 ಶಿಫಾರಸುಗಳನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
2021ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಈ ಆಯೋಗವನ್ನು ರಚನೆ ಮಾಡಿತ್ತು. ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 2023ರ ನವೆಂಬರ್ 30ರ ವರೆಗೆ ಅವರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಈ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ನೇಮಿಸಲಾಗಿತ್ತು. 2024ರ ಜನವರಿಯಿಂದ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2ನೇ ಆಯೋಗವು ಮೊದಲ ವರದಿಯನ್ನು 2021ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿತ್ತು. ನಂತರ ನಾಲ್ಕು ವರದಿಗಳನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿತ್ತು. ನಂತರದ ಮೂರು ವರದಿಗಳನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
ಪ್ರಮುಖ ಶಿಫಾರಸುಗಳ ಅನುಷ್ಠಾನವಿಲ್ಲ
ಮೊದಲನೇ ಆಯೋಗದ ಪ್ರಮುಖ 14 ಶಿಫಾರಸುಗಳು ಅನುಷ್ಠಾನಗೊಂಡಿಲ್ಲ ಎಂದು 2ನೇ ಆಯೋಗವು ತನ್ನ 8ನೇ ವರದಿಯಲ್ಲಿ ಉಲ್ಲೇಖಿಸಿದೆ.
ಇವುಗಳಲ್ಲಿ ಜಿಲ್ಲಾ ನೋಂದಣಾಧಿಕಾರಿ ಹಾಗೂ ಅವರ ಆತನ ಕಚೇರಿಯನ್ನು ರದ್ದುಪಡಿಸಬೇಕು. ಅಲ್ಲಿನ ಹೆಚ್ಚುವರಿ ಸಿಬ್ಬಂದಿಯನ್ನು ಉಪ ನೋಂದಣಾಧಿಕಾರಿಯವರ ಕಚೇರಿಗೆ ನೇಮಿಸಬೇಕು, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಗಡಿಪ್ರದೇಶ ಅಭಿವೃದ್ಧಿ ಮಂಡಳಿ ಮುಂತಾದ ಪ್ರದೇಶ ಅಭಿವೃದ್ಧಿ ಮಂಡಳಿಗಳನ್ನು ರದ್ದುಪಡಿಸಿ, ಇವುಗಳ ಚಟುವಟಿಕೆಗಳನ್ನು ಪಂಚಾಯತ್ ರಾಜ್ ಸಂಸ್ಥೆಯೊಂದಿಗೆ ವಿಲೀನಗೊಳಿಸಬೇಕು ಎಂಬಂತಹ ಶಿಫಾರಸುಗಳು ಸೇರಿವೆ.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳಲ್ಲಿ 841 ಸಾಮಾನ್ಯ ಶಿಫಾರಸುಗಳು ಅನುಷ್ಠಾನಗೊಂಡಿದ್ದರೆ, 603 ಶಿಫಾರಸುಗಳು ಅನುಷ್ಠಾನದ ಹಂತದಲ್ಲಿವೆ. 202 ಶಿಫಾರಸುಗಳು ಒಪ್ಪದೇ ಇರುವ ಸಾಮಾನ್ಯ ಶಿಫಾರಸುಗಳಾಗಿವೆ. 665 ಅನುಷ್ಠಾನಗೊಂಡ ಶಿಫಾರಸುಗಳು ಸೇವಾ ಶಿಫಾರಸುಗಳಾಗಿದ್ದು, 354 ಸೇವಾ ಶಿಫಾರಸುಗಳು ಅನುಷ್ಠಾನದ ಹಂತದಲ್ಲಿವೆ. 149 ಶಿಫಾರಸುಗಳನ್ನು ತಿರಸ್ಕರಿಸಲಾಗಿದೆ. ಒಟ್ಟು ಶಿಫಾರಸುಗಳಲ್ಲಿ 93 ಶಿಫಾರಸುಗಳು ಆದಾಯ ಹೆಚ್ಚಳ, ಶುಲ್ಕ ಪರಿಷ್ಕರಣೆ, ದಂಡ, ಸೇವಾ ಶುಲ್ಕಗಳಿಗೆ ಸಂಬಂಧಿಸಿದ ಶಿಫಾರಸುಗಳಾಗಿವೆ ಎಂದು 8ನೇ ವರದಿಯಲ್ಲಿ ಹೇಳಲಾಗಿದೆ.
ಭಾಗಶಃ ಅನುಷ್ಠಾನಗೊಂಡ ಎಲ್ಲಾ ಶಿಫಾರಸುಗಳನ್ನು 15 ರಿಂದ 30 ದಿನಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಪ್ರಸ್ತುತ ಪ್ರಗತಿಯಲ್ಲಿರುವ ಶಿಫಾರಸುಗಳನ್ನು ಒಂದು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಅಂಗೀಕರಿಸದ ಶಿಫಾರಸುಗಳನ್ನು ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಅಂತಿಮಗೊಳಿಸಬೇಕು ಮತ್ತು ಒಪ್ಪದೇ ಇರಲು ಕಾರಣಗಳನ್ನು ದಾಖಲಿಸಬೇಕು ಎಂದು ಕಳೆದ ಮೇ ನಲ್ಲಿ ಸಲ್ಲಿಕೆಯಾಗಿರುವ 8ನೇ ವರದಿಯಲ್ಲಿ ಆಯೋಗವು ಸರ್ಕಾರಕ್ಕೆ ಸೂಚಿಸಿತ್ತು.
ಬಹಳ ಮುಖ್ಯವಾಗಿ 2ನೇ ಆಡಳಿತ ಸುಧಾರಣಾ ಆಯೋಗವು ಮಾಡಿದ್ದ, ʻಸರ್ಕಾರದ ಎಲ್ಲ ಗ್ರೂಪ್ ಎ,ಬಿ, ಮತ್ತು ಸಿ ನೌಕರರು ಮತ್ತು ಸಾರ್ವಜನಿಕ ವಲಯದ ಮಂಡಳಿಗಳು ಮತ್ತು ನಿಗಮಗಳಲ್ಲಿ ಕೆಲಸ ಮಾಡುವ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ಹೇಳಿಕೆಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಇಡಬಹುದುʼʼ ಎಂಬ ಶಿಫಾರಸನ್ನು ಸರ್ಕಾರ ಸ್ವೀಕರಿಸಿಲ್ಲ. ಈ ಕುರಿತು ಆಯೋಗದ 8ನೇ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಯಾವೆಲ್ಲಾ ಪ್ರಮುಖ ಶಿಫಾರಸುಗಳನ್ನು ಸರ್ಕಾರ ಪರಿಶೀಲಿಸುತ್ತಿದೆ, ಅನುಷ್ಠಾನಕ್ಕೆ ಕ್ರಮ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ಕೂಡ ಈ ವರದಿಯಲ್ಲಿ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸಲು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಬೇಕೆಂಬ ಶಿಫಾರಸಿನ ಕುರಿತು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8 ಕ್ಕೆ ಇಳಿಸಬೇಕು, ಕಂದಾಯ ಇಲಾಖೆಯಿಂದ ನೀಡಲಾಗುವ ಜನಸಂಖ್ಯಾ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಬೆಳೆ ಪ್ರಮಾಣ ಪತ್ರ, ಕೃಷಿಕ ಪ್ರಮಾಣ ಪತ್ರಗಳನ್ನು ರದ್ದುಪಡಿಸಿ, ಪರ್ಯಾಯಗಳನ್ನು ನಿರ್ದಿಷ್ಟಪಡಿಸಲು ಸರ್ಕಾರಿ ಆದೇಶ ಹೊರಡಿಸಬೇಕು, ಆಸ್ತಿ ತೆರಿಗೆಯ ಮೇಲೆ ವಿಧಿಸಲಾಗುವ ಸೆಸ್ ಅನ್ನು ಸಂಗ್ರಹಿಸುವುದರ ಮೂಲಕ 75 ಲಕ್ಷಕ್ಕೂ ಹೆಚ್ಚಿರುವ ಅಸಂಘಟಿತ ಕಾರ್ಮಿಕರಿಗೆ ನೆರವಾಗಬೇಕು, ಪೊಲೀಸ್ ಠಾಣೆಗಳ ತನಿಖೆ ಮತ್ತು ಆಕಸ್ಮಿಕಗಳ ವೆಚ್ಚಗಳ ಮಿತಿಯನ್ನು ತಿಂಗಳಿಗೆ 25ರಿಂದ 50 ಸಾವಿರದ ವರೆಗೆ ಪರಿಷ್ಕರಿಸಬೇಕೆಂಬ ಶಿಫಾರಸುಗಳು ಅನುಷ್ಠಾನಗೊಂಡಿಲ್ಲ.
ಅಂಗೀಕರಿಸಲಾದ ಶಿಫಾರಸುಗಳು ಮತ್ತು ಅನುಷ್ಠಾನದಲ್ಲಿರುವ ಶಿಫಾರಸುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ತ್ವರಿತಗೊಳಿಸಲು ಸರ್ಕಾರದ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು, ಈ ಸಮಿತಿಯ ಅಧ್ಯಕ್ಷತೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ವಹಿಸಬೇಕು, ಶಿಫಾರಸುಗಳ ಅನುಷ್ಠಾನವ್ನನು ನಿರ್ದಿಷ್ಟವಾಗಿ ಪರಿಶೀಲಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಇದಕ್ಕಾಗಿ ಸಚಿವ ಸಂಪುಟ ಸಭೆಯನ್ನು ಕರೆಯಬೇಕು ಎಂದು ಕೂಡ 8ನೇ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
1 ಲಕ್ಷ 17 ಸಾವಿರ 884 ಸರ್ಕಾರಿ ನೌಕರರಿಗೆ 3 ತಿಂಗಳಾದರೂ ಪಾವತಿಯಾಗದ ವೇತನ; 834.89 ಕೋಟಿ ಬಾಕಿ
ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಸಲು ಆಯವ್ಯಯದಲ್ಲಿ ಅನುದಾನ ಒದಗಿಸಿದ್ದರೂ ಸಹ 2025ರ ಏಪ್ರಿಲ್‌ನಿಂದ ಜೂನ್ ವರೆಗೆ 1 ಲಕ್ಷ 17 ಸಾವಿರ ಸರ್ಕಾರಿ ನೌಕರರಿಗೆ ವೇತನ ನೀಡಲಾಗಿರಲಿಲ್ಲ. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.