ಬೆಂಗಳೂರು : ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ಸರ್ಕಾರದ ʻಸ್ವಚ್ಛ ವಾಯು ಸಮೀಕ್ಷೆ-2025ʼ ರಲ್ಲಿ ರಾಜ್ಯದ ಒಂದೇ ಒಂದು ನಗರ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಕೇಂದ್ರ ಸರ್ಕಾರದ ʻರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮʼವನ್ನು (ಎನ್‌ಸಿಎಪಿ) ಅನುಷ್ಠಾನಕ್ಕೆ ತರುವಲ್ಲಿ ರಾಜ್ಯದ ನಾಲ್ಕು ನಗರಗಳು ಸಂಪೂರ್ಣವಾಗಿ ವಿಫಲವಾಗಿರುವುದು ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ʻಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆʼ ಸಚಿವಾಲಯ 2019ರಲ್ಲಿ ʻರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮʼವನ್ನು ಜಾರಿಗೆ ತಂದಿತ್ತು. ನಗರಗಳ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ಕಾಲಮಿತಿಯ ಯೋಜನೆಗಳನ್ನು ಈ ಕಾರ್ಯಕ್ರಮದ ಅಡಿ ಜಾರಿಗೆ ತರಲಾಗಿತ್ತು. ದೇಶದ ಒಟ್ಟು 102 ನಗರಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇದರಲ್ಲಿ ರಾಜ್ಯದ ನಾಲ್ಕು ನಗರಗಳು ಅಂದರೆ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ಸೇರಿದ್ದವು. ಈ ನಾಲ್ಕೂ ನಗರಗಳು ಶುದ್ಧಗಾಳಿಗಾಗಿ ನಿಗದಿತ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿರುವ ನಗರಗಳು (ಎನ್‌ಎಸಿ) ಎಂದು ಈಗ ಗುರುತಿಸಲ್ಪಷ್ಟಿವೆ. ಈ ಯೋಜನೆಗೆ ಕೇಂದ್ರ ನೀಡಿದ್ದ 25.02 ಕೋಟಿ ರು. ವ್ಯರ್ಥವಾದಂತಾಗಿದೆ.
ಈ ವಿಷಯವು ಮಹಾಲೇಖಪಾಲರು (ಸಿಎಜಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಬಹಿರಂಗಗೊಂಡಿದ್ದು, ಮಂಡಳಿಯ ನಿಷ್ಕ್ರೀಯತೆಯೇ ಇದಕ್ಕೆ ಕಾರಣ ಎಂದು ಸಿಎಜಿಯು ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಈ ಯೋಜನೆ ಜಾರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿತ್ತು. ಆದರೆ ಅದರ ಹೊಣೆಗೇಡಿತನದಿಂದಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಬಿಡುಗಡೆಯಾದ 25.02 ಕೋಟಿ ರು. ಗಳಲ್ಲಿ ಎಷ್ಟು ಹಣ ಖರ್ಚಾಗಿದೆ, ಎಷ್ಟು ಸದ್ಭಳಕೆಯಾಗಿದೆ ಎಂಬ ಮಾಹಿತಿಯನ್ನು ಸಿಎಜಿಯ ವರದಿಯಲ್ಲಿ ದಾಖಲಿಸಲಾಗಿಲ್ಲ.
2019ರಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಎನ್ ಜಯರಾಮ್ ಅಧ್ಯಕ್ಷರಾಗಿದ್ದರು. ಇವರ ನಂತರ ಆರು ಮಂದಿ ಅಲ್ಪ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಶಾಂತ್ ಎ ತಿಮ್ಮಯ್ಯ ಅಧ್ಯಕ್ಷರಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಈ ಮಂಡಳಿಗೆ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಜಾರಿಗೆ ಬಂದ ಈ ಯೋಜನೆಯಲ್ಲಿ ಈ ನಾಲ್ಕು ನಗರಗಳಲ್ಲಿ ಐದು ವರ್ಷಗಳಲ್ಲಿ ಶೇ. 20 ರಿಂದ 30 ರಷ್ಟು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಗುರಿಯನ್ನು ನಿಗದಿಪಡಿಸಲಾಗಿತ್ತು. ಈ ಯೋಜನೆಯ ಅವಧಿಯು 2024ರ ಜನವರಿಗೆ ಅಂತ್ಯಗೊಂಡಿದ್ದು, ಗುರಿ ಮುಟ್ಟುವಲ್ಲಿ ರಾಜ್ಯದ ನಾಲ್ಕೂ ನಗರಗಳು ವಿಫಲವಾಗಿದ್ದವು ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.
ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದ ಈ ಯೋಜನೆಯ ಕ್ರಿಯಾ ಯೋಜನೆಗೆ 2019 ಏಪ್ರಿಲ್‌ನಲ್ಲಿ ಮತ್ತು ಬೆಂಗಳೂರಿನ ಕ್ರಿಯಾ ಯೋಜನೆಗೆ ಜುಲೈನಲ್ಲಿ ಅನುಮೋದನೆ ನೀಡಲಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಯೋಜನೆಗಳ ಅನುಷ್ಠಾನಕ್ಕಾಗಿ 25.02 ಕೋಟಿ ರು. ಆರ್ಥಿಕ ನೆರವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಡುಗಡೆ ಮಾಡಿತ್ತು. ಇದರಲ್ಲಿ 19.42 ಕೋಟಿ ರು.ಗಳನ್ನು ಕೆಎಸ್‌ಪಿಸಿಬಿಯು ಈ ನಗರಗಳ ಸ್ಥಳೀಯ ಆಡಳಿತಕ್ಕೆ ಬಿಡುಗಡೆ ಮಾಡಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಸ್ಥಳೀಯ ಸಂಸ್ಥೆಗಳು, ಈ ಹಣದಲ್ಲಿ ನಗರ ಕ್ರಿಯಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು, ಹಸಿರು ಬಫರ್ ವಲಯವನ್ನು ರಚಿಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇತ್ಯಾದಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿತ್ತು. ಆದರೆ ಈ ನಾಲ್ಕೂ ನಗರಗಳ ಸ್ಥಳೀಯ ಆಡಳಿತ ಈ ವಿಷಯದಲ್ಲಿ ವಿಫಲವಾಗಿದ್ದವು. ಕೆಎಸ್‌ಪಿಸಿಬಿ ಸರಿಯಾಗಿ ನೋಡಿಕೊಳ್ಳದೇ ಇರುವುದರಿಂದ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಸಿಎಜಿ ವರದಿಯು ಬೊಟ್ಟು ಮಾಡಿದೆ.
ಹಣ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಯೋಜನೆಯನ್ನು ಅನುಷ್ಠಾನಕ್ಕೆ ತಂದ ಬಗ್ಗೆ ಪ್ರಮಾಣಪತ್ರವನ್ನೇ ಸ್ಥಳೀಯ ಸಂಸ್ಥೆಗಳಿಂದ ಪಡೆದುಕೊಂಡಿರಲಿಲ್ಲ. ಅಲ್ಲದೆ, ಗಾಳಿಯ ಗುಣಮಟ್ಟ ಸೂಚ್ಯಂಕ (AQI) ದತ್ತಾಂಶವನ್ನು ಅಪ್‌ಲೋಡ್ ಮಾಡುವುದು ಮತ್ತು ತಪ್ಪು ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಮಗಳನ್ನು ಜಾರಿಗೊಳಿಸುವುದು ಮುಂತಾದ ಕಾರ್ಯಸಾಧ್ಯವಾದ ಅಂಶಗಳನ್ನೂ ಸರಿಯಾಗಿ ಪಾಲನೆ ಮಾಡಿರಲಿಲ್ಲ. ಕ್ರಿಯಾಯೋಜನೆಗಳ ಪ್ರಕಾರ ಈ ಕೆಲಸವನ್ನು ಮಂಡಳಿಯೇ ಮಾಡಬೇಕಾಗಿತ್ತು ಎಂದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಯೋಜನೆ ಜಾರಿಗೆ ಬಂದ ಮೇಲೆ ಹೆಚ್ಚಿದ ವಾಯು ಮಾಲಿನ್ಯ!
ನಗರಗಳ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದ ಮೇಲೂ ಧಾರವಾಡ ಮತ್ತು ಕಲಬುರಗಿ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ (PM 10) ಮೊದಲಿದ್ದ ಪ್ರಮಾಣದಷ್ಟೇ ಇತ್ತು ಅಥವಾ ಹೆಚ್ಚಾಗಿತ್ತು ಎಂದು ಸಿಎಜಿ ವರದಿಯು ಬೊಟ್ಟು ಮಾಡಿದೆ.
ಬೆಂಗಳೂರು ಮತ್ತು ದಾವಣಗೆರೆ ನಗರಗಳು PM 10 ವಿಷಯದಲ್ಲಿ ನಿಗದಿಪಡಿಸಿದ ಗುರಿಯನ್ನು ಸಾಧಿಸಿವೆ. ಆದರೆ ಒಟ್ಟಾರೆ ಗಾಳಿಯ ಗುಣಮಟ್ಟದ ಮೇಲ್ವಿಚಾರಣೆ ಸರಿಯಾಗಿ ನಡೆಸುವಲ್ಲಿ ವಿಫಲವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಿಎಜಿಯ ಈ ಎಲ್ಲ ಆಕ್ಷೇಪಣೆಗಳಿಗೆ ಉತ್ತರಿಸಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು, ಈ ಯೋಜನೆಯ ಹಣ ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ದಾವಣಗೆರೆ ಆಡಳಿತವು 2.9 ಕೋಟಿ ರು. ಮತ್ತು ಕಲಬುರಗಿ ಆಡಳಿತವು 40 ಲಕ್ಷ ರು. ಬಳಕೆ ಮಾಡಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸಿವೆ. ಹುಬ್ಬಳ್ಳಿ-ಧಾರವಾಡ ಸ್ಥಳೀಯ ಆಡಳಿತವು ಈ ಅನುದಾನವನ್ನು ಬಳಕೆಯೇ ಮಾಡಿಲ್ಲ ಎಂದು ತಿಳಿಸಿದೆ ಎಂದು ವಿವರಿಸಿದೆ. ಈ ನಾಲ್ಕು ನಗರಗಳಿಗೆ ಮಂಡಳಿಯು ಒಟ್ಟು 19.42 ಕೋಟಿ ರು. ಅನುದಾನವನ್ನು ನೀಡಿತ್ತು.
ಗಾಳಿಯ ಗುಣಮಟ್ಟ ಅಳೆಯುವಲ್ಲಿಯೂ ಗೋಲ್‌ಮಾಲ್
ರಾಜ್ಯದ ನಗರಗಳಲ್ಲಿನ ವಾಯು ಮಾಲಿನ್ಯದ ಪ್ರಮಾಣವನ್ನು ಅಳೆದು ಸೂಕ್ತ ಕ್ರಮಗಳಿಗೆ ಸೂಚಿಸುವುದು ಕೂಡ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿಯಾಗಿದೆ. ಆದರೆ ಈ ಕೆಲಸವನ್ನೂ ಮಂಡಳಿ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಸಿಎಜಿಯ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಗಾಳಿಯ ಗುಣಮಟ್ಟವನ್ನು, ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟ ಮಾನದಂಡಗಳ ಪ್ರಕಾರ (NAAQS), ಗಾಳಿಯಲ್ಲರುವ 12 ಮಾಲಿನ್ಯ ಕಾರಕಗಳು ಅಂದರೆ ಕಣಗಳು (PM10 and PM2.5), ಸಲ್ಫರ್ ಡೈ ಆಕ್ಸೈಡ್ (SO2), ಸಾರಜನಕ ಡೈ ಆಕ್ಸೈಡ್ (NO2), ಕಾರ್ಬನ್ ಮಾನಾಕ್ಸೈಡ್(CO), ಓಝೋನ್(O3), ಅಮೋನಿಯಾ (NH3), ಬೆಂಜೀನ್ (C6H6), ಬೆಂಜೋ ಪೈರೀನ್, ಆರ್ಸೆನಿಕ್ (As), ಸೀಸ (Pb) ಮತ್ತು ನಿಕ್ಕಲ್ (Ni) ಯಾವ ಪ್ರಮಾಣದಲ್ಲಿ ಇವೆ ಎಂಬುದರ ಮೇಲೆ ಗಾಳಿಯ ಗುಣಮಟ್ಟವನ್ನು ಮಂಡಳಿಯು ಅಳೆಯ ಬೇಕಾಗಿರುತ್ತದೆ.
ಇದಕ್ಕಾಗಿ ಮಂಡಳಿಯು ʻನಿರಂತರ ಸುತ್ತುವರಿದ ಗಾಳಿ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರʼ ( Continuous Ambient Air Quality Monitoring Stations-CAAQMS) ಮತ್ತು ಮಾನವರೇ ಅಳೆಯುವ ಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕಿರುತ್ತದೆ. ಇಲ್ಲಿ ಗಾಳಿಯ ಮಾಪನ ನಡೆಸಿ, ವರದಿಗಳನ್ನು ಸಿದ್ಧಪಡಿಸಬೇಕಾಗಿರುತ್ತದೆ. ಈ ಕಾರ್ಯವನ್ನು ಕೂಡ ಮಂಡಳಿಯು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಸಿಎಜಿಯು ವರದಿಯಲ್ಲಿ ವಿವರಿಸಿದೆ.

ಸಿಎಜಿಯು, ಕೆಎಸ್‌ಪಿಸಿಬಿಯು ʻರಾಷ್ಟ್ರೀಯ ಹಸಿರು ನ್ಯಾಯಾಧೀಕರಣʼ ಕ್ಕೆ ಸಲ್ಲಿಸಿದ ವರದಿಗಳ ಅಧ್ಯಯನ ನಡೆಸಿದ್ದು, ಇದರಿಂದಾಗಿ ಗೊತ್ತಾದ ವಿಷಯವೆಂದರೆ, ರಾಜ್ಯದಲ್ಲಿ ಸ್ಥಾಪಿಸಲಾಗಿರುವ, ನಿರಂತರ ಸುತ್ತುವರಿದ ಗಾಳಿ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ 12 ಮಾಲಿನ್ಯ ಕಾರಕಗಳಲ್ಲಿ ಸೀಸ, ಬೆಂಜೋ ಪೈರೀನ್, ಆರ್ಸೆನಿಕ್ ಮತ್ತು ನಿಕಲ್ ಅಂಶಗಳಿವೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಲೇ ಇಲ್ಲ. ಬೆಂಗಳೂರಿನಲ್ಲಿರುವ ಮಾಪನ ಕೇಂದ್ರಗಳಲ್ಲಿಯೂ ಇವುಗಳ ಪ್ರಮಾಣವನ್ನು ಅಳೆಯಲಾಗುತ್ತಿಲ್ಲ.
ಬೆಂಗಳೂರಿನಲ್ಲಿ ಮಾತ್ರ ಅಗತ್ಯಕ್ಕಿಂತ ಹೆಚ್ಚು ಮಾಪನ ಕೇಂದ್ರಗಳಿವೆ. ಆದರೆ ಇವುಗಳಲ್ಲಿ ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟ ಮಾನದಂಡಗಳ ಪ್ರಕಾರ (NAAQS) ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತಿಲ್ಲ ಎಂದು ಸಿಎಜಿಯ ವರದಿಯು ಹೇಳಿದೆ.
ʻರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮʼಕ್ಕೆ ಆಯ್ಕೆಯಾಗಿದ್ದ ರಾಜ್ಯದ ನಾಲ್ಕು ನಗರಗಳ ಪೈಕಿ ಬೆಂಗಳೂರನ್ನು ಹೊರತುಪಡಿಸಿ ಬೇರೆಲ್ಲೂ ಅಗತ್ಯವಾಗಿರುವಷ್ಟು ಮಾಪನ ಕೇಂದ್ರಗಳನ್ನೇ ಮಂಡಳಿ ಸ್ಥಾಪಿಸಿಲ್ಲ. ಅಲ್ಲದೆ, 13 ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ 12 ʻನಿರಂತರ ಸುತ್ತುವರಿದ ಗಾಳಿ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರʼ (CAAQMS)ಗಳನ್ನು ಸಿಎಜಿಯು ಪರಿಶೀಲಿಸಿದ್ದು, ಇದರಲ್ಲಿ ಬೆಂಗಳೂರಿನ ಪೀಣ್ಯದ ಎನ್‌ಟಿಟಿಎಫ್ ಬಳಿ ಹಾಗೂ ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಸ್ಥಾಪಿಸಿರುವ ಬಿಟ್ಟರೆ ಮಂಡಳಿಯು ಸ್ಥಾಪಿಸಿರುವ ಉಳಿದ ಒಂದೇ ಒಂದು ಕೇಂದ್ರವೂ, ಇದನ್ನು ಸ್ಥಾಪಿಸಲು ನಿಗದಿಪಡಿಸಲಾಗಿರುವ ಷರತ್ತುಗಳಿಗೆ ಅನುಗುಣವಾಗಿರಲಿಲ್ಲ ಎಂದು ಸಿಎಜಿ ವರದಿಯು ಹೇಳಿದೆ.

ಈ ಮಾಪನ ಕೇಂದ್ರಗಳನ್ನು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಸ್ಥಾಪಿಸಲಾಗಿದೆ. ಸರಿಯಾಗಿ ಗಾಳಿ ಬೀಸುವ ಜಾಗಗಳಿಗೆ ಬದಲಾಗಿ, ಮರಗಳು, ಕಟ್ಟಡಗಳು ಸುತ್ತುವರಿದ ಜಾಗದಲ್ಲಿ ನಿರ್ಮಿಸಲಾಗಿದೆ. ರಸ್ತೆಗೆ ಬಹಳ ಹತ್ತಿರದಲ್ಲಿ ಇರಿಸಲಾಗಿದೆ. ನೆಲಮಟ್ಟದಿಂದ ಹತ್ತು ಮೀಟರ್ ಎತ್ತರದಲ್ಲಿ ಮಾಪನವನ್ನು ಇರಿಸಲಾಗಿದೆ. ಹೀಗೆ ಎಲ್ಲೆಂದರಲ್ಲಿ ಸ್ಥಾಪಿಸಿರುವ ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗುವ ಗಾಳಿಯ ಗುಣಮಟ್ಟದ ವರದಿಯು ವಿಶ್ವಾಸಾರ್ಹವಾಗಿರುವುದಿಲ್ಲ ಎಂದೂ ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಬೆಳಗಾವಿ, ಬೀದರ್, ಹಾಸನ, ಕೋಲಾರ, ಮೈಸೂರು ಮತ್ತು ವಿಜಯಪುರದಲ್ಲಿ ಮಂಡಳಿಯ ಪ್ರಾದೇಶಿಕ ಕಚೇರಿ ಆವರಣದಲ್ಲಿಯೇ ʻನಿರಂತರ ಸುತ್ತುವರಿದ ಗಾಳಿ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರʼ ಮತ್ತು ಮಾನವರೇ ಅಳೆಯುವ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದೇ ಆವರಣದಲ್ಲಿ ಎರಡು ಉಪಕರಣಗಳನ್ನು ಅಳವಡಿಸಲು ಕಾರಣಗಳನ್ನು ದಾಖಲೆಗಳಲ್ಲಿ ತಿಳಿಸಲಾಗಿಲ್ಲ. ಅಲ್ಲದೆ, ಒಂದೇ ಆವರಣದಲ್ಲಿರುವ ಈ ಎರಡು ಕೇಂದ್ರದಲ್ಲಿ ಅಳೆಯಲಾಗಿರುವ ಮಾಲಿನ್ಯದ ವರದಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದನ್ನು ಗಮನಿಸಲಾಗಿದೆ ಎಂದು ಸಿಎಜಿಯ ವರದಿಯು ವಿವರಿಸಿದೆ.
ಈ ರೀತಿ ವ್ಯತ್ಯಾಸಗಳಿರುವುದರಿಂದ ಮಾಪನ ಕೇಂದ್ರಗಳು ನೀಡಿದ ವರದಿಯ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಸಿಎಜಿಯು ವರದಿಯಲ್ಲಿ ದಾಖಲಿಸಿದೆ.
ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಗಿರುವ ʻಸ್ವಚ್ಛ ವಾಯು ಸಮೀಕ್ಷೆ-2025ʼಯಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು 36ನೇ ಸ್ಥಾನಕ್ಕೆ ಕುಸಿದಿದೆ. 2023ರಲ್ಲಿ ಬೆಂಗಳೂರು 31ನೇ ಸ್ಥಾನದಲ್ಲಿತ್ತು. ದೇಶದ ಅತ್ಯಂತ ಶುದ್ಧ ಗಾಳಿ ಹೊಂದಿರುವ ನಗರವಾಗಿ ಇದೋರ್ ಹೊರಹೊಮ್ಮಿದೆ.
ಅಪಾಯಕಾರಿ ತ್ಯಾಜ್ಯ ನಿರ್ವಹಣೆ; ರಾಜ್ಯದ ಶೇ.32 ಕಾರ್ಖಾನೆಗಳು ಅಗತ್ಯ ಅನುಮತಿ ಪಡೆದೇ ಇಲ್ಲ
ರಾಜ್ಯದಲ್ಲಿ ಅಪಾಯಕಾರಿ ತ್ಯಾಜ್ಯಗಳನ್ನು ನಿರ್ವಹಿಸುತ್ತಿರುವ ಕೈಗಾರಿಕೆಗಳ ಪೈಕಿ ಶೇ. 32 ರಷ್ಟು ಕೈಗಾರಿಕೆಗಳು ಅಗತ್ಯವಾಗಿರುವ ಅನುಮತಿಗಳನ್ನು ಪಡೆದುಕೊಂಡೇ ಇಲ್ಲ. ರಾಜ್ಯದಲ್ಲಿ ಮಂಗಳೂರಿನಲ್ಲಿ ಅಗತ್ಯ ಅನುಮತಿ ಪಡೆಯದ ಅತಿ ಹೆಚ್ಚು ಕೈಗಾರಿಕೆಗಳಿವೆ. ಈ ಕುರಿತು ʻದಿ ಫೈಲ್ʼ ವಿಶೇಷ ವರದಿ ಪ್ರಕಟಿಸಿತ್ತು.





