ಬೆಂಗಳೂರು; ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಜೆ ಪಿ ಡಿಸ್ಟಿಲಿರಿ ಸೇರಿದಂತೆ 8 ಪ್ರಮುಖ ಡಿಸ್ಟಿಲಿರಿಗಳು ಮತ್ತು 5 ಬ್ರೂವೆರಿಗಳು ನವೀಕರಿಸಿರುವ ಘೋಷಿತ ಬೆಲೆಯನ್ನು ವಿಧಿಸಲಾಗಿಲ್ಲ. ಇದರಿಂದಾಗಿ 42.46 ಕೋಟಿ ಮೊತ್ತದಷ್ಟು ಹೆಚ್ಚುವರಿ ಅಬಕಾರಿ ಸುಂಕವು ರಾಜ್ಯ ಬೊಕ್ಕಸದಿಂದ ಕೈ ತಪ್ಪಿ ಹೋಗಿರುವುದನ್ನು ಸಿಎಜಿಯು ಬಹಿರಂಗಗೊಳಿಸಿದೆ.
ಈ ಡಿಸ್ಟಿಲಿರಿಗಳು ಮತ್ತು ಬ್ರೂವೆರಿಗಳು ಹಿಂದಿನ ಘೋಷಿತ ಬೆಲೆಯ ಆಧಾರದಲ್ಲೇ 4,41,787 ಐಎಮ್‌ಎಲ್ ಪೆಟ್ಟಿಗೆಗಳು ಮತ್ತು 26,41,633 ಬಿಯರ್ ಪೆಟ್ಟಿಗೆಗಳಲ್ಲಿ ಮದ್ಯ/ಬಿಯರ್‍ನ್ನು ಮಾರಾಟ ಮಾಡಿದ್ದವು.
2018-19ರಿಂದ 2022-23ರ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ನಡೆಸಿರುವ ಪ್ರಧಾನ ಮಹಾಲೇಖಪಾಲರು, ಘೋಷಿತ ಬೆಲೆಯನ್ನು ವಿಧಿಸದೇ ಕಡಿಮೆ ಶುಲ್ಕವನ್ನು ವಸೂಲಿ ಮಾಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
2025ರ ಆಗಸ್ಟ್‌ನಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಗೆ ಮಂಡನೆಯಾಗಿರುವ ಸಿಎಜಿ ವರದಿಯು ನವೀಕರಿಸಿದ ಘೋಷಿತ ಬೆಲೆಯನ್ನು ಅಳವಡಿಸಿಕೊಳ್ಳುವಲ್ಲಿ ಆಗಿರುವ ವಿಳಂಬದಿಂದಾಗಿರುವ ಆರ್ಥಿಕ ಪರಿಣಾಮ ಮತ್ತು ತಪ್ಪಿಹೋಗಿರುವ ಆದಾಯದ ಕುರಿತು ಚರ್ಚಿಸಿದೆ.
ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 2 ಎಇ ಉಪ ನಿಯಮ (1)ರ ಪ್ರಕಾರ ಡಿಸ್ಟಿಲಿರಿಗಳ ಪರವಾನಗಿದಾರರನು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ ಮದ್ಯದ ಬ್ರಾಂಡ್‌ಗಳ ಬೆಲೆಯನ್ನು ಘೋಷಿತ ಬೆಲೆ ರೂಪದಲ್ಲಿ ಅಬಕಾರಿ ಆಯುಕ್ತರಿಗೆ ಘೋಷಿಸಬೇಕು. ಈ ಘೋಷಿತ ಬೆಲೆ ಆಧಾರವಾಗಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತದೆ.
ಇದರಲ್ಲಿ ಈ ನಿಯಮಗಳ ನಿಯಮ 2-ಎಇ ಉಪ ನಿಯಮ (2)ರ ಪ್ರಕಾರ ಡಿಸ್ಟಿಲಿರಿ ಪರವಾನಗಿದಾರನು ಘೋಷಿತ ಬೆಲೆಯಲ್ಲೇ ಯಾವುದೇ ಬದಲಾವಣೆ ಮಾಡುವ ಉದ್ದೇಶ ಹೊಂದಿದ್ದಲ್ಲಿ ಅವರು ಬದಲಾಯಿಸಿ ಬೆಲೆಯನ್ನು ಡಿಆರ್‍ಪಿ ನಮೂನೆಯಲ್ಲಿ ನಾಲ್ಕು ಪ್ರತಿಗಳಲ್ಲಿ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಅಬಕಾರಿ ಆಯುಕ್ತರಿಗೆ ಸಲ್ಲಿಸಬೇಕು. ಮತ್ತು ಆಯುಕ್ತರ ಅನುಮೋದನೆ ನಂತರವೇ ಬದಲಾಯಿಸಿದ ಘೋಷಿತ ಬೆಲೆಯನ್ನು ಜಾರಿಗೆ ತರಲು ಅವಕಾಶವಿದೆ.
ಕರ್ನಾಟಕದಲ್ಲಿ ಡಿಸ್ಟಿಲಿರಿಗಳಿಂದ ಚಿಲ್ಲರೆ ವ್ಯಾಪಾರಿಗಳಿಗೆ ಐಎಂಎಲ್ ವಿತರಣೆ ಕೆಎಸ್‌ಬಿಸಿಎಲ್ ಮೂಲಕ ನಡೆದಿದೆ. ಚಿಲ್ಲರೆ ವ್ಯಾಪಾರಿಗಳಿಂದ ಬಂದ ಬೇಡಿಕೆ ಆಧಾರದಲ್ಲಿ ಪೂರೈಕೆ ಆದೇಶಗಳನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಮುಂದೆ ಇಡುತ್ತಿತ್ತು. ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲು ಇದು ಅನುಕೂಲವಾಗುತ್ತಿತ್ತು. ಘೋಷಿತ ಬೆಲೆಯಲ್ಲಿ ಬದಲಾವಣೆ ನಡೆದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವಿಕೆಯು ನವೀಕರಿಸಿದ ಬೆಲೆ ಆಧಾರದ ಮೇಲೆ ಇರಲಿದೆ.
ಈ ನಿಯಮಗಳು ರಾಜ್ಯದಲ್ಲಿ ಪಾಲನೆಯಾಗಿದೆಯೇ ಇಲ್ಲವೇ ಎಂಬುದರ ಕುರಿತು ಪ್ರಧಾನ ಮಹಾಲೇಖಪಾಲರು ಅವಲೋಕಿಸಿದ್ದಾರೆ.
ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿರುವುದೇನು?
ನವೀಕರಿಸಿದ ಘೋಷಿತ ಬೆಲೆಯನ್ನು ಅಳವಡಿಸಿಕೊಳ್ಳುವುದರ ಸಂಬಂಧ ಸಿಎಜಿಯು 2018-19ರಿಂದ 2022-23ರ ಅವಧಿಯವರೆಗಿನ ಪ್ರಕ್ರಿಯೆಗಳನ್ನು ಒರೆಗೆ ಹಚ್ಚಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಜಾನ್ ಡಿಸ್ಟಿಲಿರೀಸ್, ಜೆ ಪಿ ಡಿಸ್ಟಿಲಿರಿ, ಯುನಿಸ್ಟಿಲ್ ಅಲ್ಕೋಬ್ಲೆಂಡ್ಸ್ ಲಿ, ಸರ್ವದಾ ಡಿಸ್ಟಿಲಿರೀಸ್, ಕಾರ್ಲ್ಸ್ ಬರ್ಗ್ ಇಂಡಿಯಾ, ಅನ್ಹೂಸರ್ ಬುಷ್ ಇನ್ಬೇವ್ ಇಂಡಿಯಾ ಲಿಮಿಟೆಡ್ ಗಳು ತಮ್ಮ ಬ್ರಾಂಡ್‌ಗಳ ಘೋಷಿತ ಬೆಲೆಯಲ್ಲಿ ಬದಲಾವಣೆ ತಂದಿದ್ದವು.
ಆದರೆ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ನವೀಕರಿಸಿದ ಘೋಷಿತ ಬೆಲೆಯ ಆಧಾರದ ಮೇಲೆ ವಿಧಿಸಿರಲಿಲ್ಲ. ಹಿಂದಿನ ಘೋಷಿತ ಬೆಲೆಯ ಅಧಾರದಲ್ಲೇ 2ರಿಂದ 27ದಿನಗಳವರೆಗೆ ಮುಂದುವರೆಸಲಾಗಿತ್ತು. ಇದರಿಂದಾಗಿ 42.46 ಕೋಟಿ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿಮೆ ವಿಧಿಸಲಾಗಿತ್ತು. ಇದು 4,41,787 ಐಎಮ್‌ಎಲ್ ಪೆಟ್ಟಿಗೆಗಳು ಮತ್ತು 26,41,633 ಬಿಯರ್ ಪೆಟ್ಟಿಗೆಗಳಲ್ಲಿ ಕಂಡು ಬಂದಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ತಾಂತ್ರಿಕ ವಿಳಂಬ ಕಾರಣವೇ?
ನವೀಕರಿಸಿದ ಘೋಷಿತ ಬೆಲೆಯನ್ನು ಜಾರಿಗೆ ತರಲು ವಿಳಂಬವಾಗಿತ್ತು ಎಂದು ಅಬಕಾರಿ ಇಲಾಖೆಯು ಸಿಎಜಿಗೆ ಉತ್ತರಿಸಿತ್ತು. ಕರ್ನಾಟಕ ಪಾನೀಯ ನಿಗಮದ ಸಾಫ್ಟ್‌ವೇರ್‍ನಲ್ಲಿ ನವೀಕರಿಸಿದ ಬೆಲೆಗಳನ್ನು ನವೀಕರಿಸಿರಲಿಲ್ಲ. ಇದಕ್ಕೆ ತಾಂತ್ರಿಕ ವಿಳಂಬವೇ ಕಾರಣವಾಗಿತ್ತು. ಅಬಕಾರಿ ಆಯುಕ್ತರು ಅನುಮೋದಿಸಿದ ಘೋಷಿತ ಬೆಲೆಯ ಪರಿಷ್ಕರಣೆಯನ್ನು ಡಿಆರ್‍ಪಿ ನಮೂನೆಯಲ್ಲಿ ಅಬಕಾರಿ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೆ ಕರ್ನಾಟಕ ಪಾನೀಯ ನಿಗಮಕ್ಕೆ ಇದರ ಪ್ರತಿಯನ್ನು ನೇರವಾಗಿ ಕಳಿಸಿರಲಿಲ್ಲ. ಅಬಕಾರಿ ಆಯುಕ್ತರು ಮತ್ತು ಕರ್ನಾಟಕ ಪಾನೀಯ ನಿಗಮದ ಮಧ್ಯೆ ಸಂವಹನ, ಸಂಪರ್ಕ ಇಲ್ಲದಿರುವುದು ಸಹ ಕಾರಣವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈ ಲಿ., ಮತ್ತು ಯುನೈಟೆಡ್ ಬ್ರೂವೆರಿಸ್ ಲಿಮಿಟೆಡ್ ಗಳಿಗೆ ಅಬಕಾರಿ ಇಲಾಖೆಯು ಎಐಡಿಯ ಕಡಿಮೆ ಶುಲ್ಕವನ್ನು ವಸೂಲಿ ಮಾಡಲು ಡಿಮ್ಯಾಂಡ್ ನೋಟೀಸ್‌ಗಳನ್ನು ನೀಡಿದ್ದರು ಎಂದು ಅಬಕಾರಿ ಆಯುಕ್ತರು ಸಿಎಜಿಗೆ ಉತ್ತರಿಸಿದ್ದರು.
ಇದಲ್ಲದೇ ಬಾಟಲಿಯಲ್ಲಿರಿಸಿದ್ದ ಮತ್ತು ಕ್ಯಾನ್‌ನಲ್ಲಿ ಮಾಡಿದ್ದ ಬಿಯರ್ ಮೇಲೂ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು.
ಬಾಟಲಿಯಲ್ಲಿ ಪ್ಯಾಕ್ ಮಾಡಲಾದ ಬಿಯರ್‍ಗೆ ಘೋಷಿತ ಬೆಲೆಯು ಶೇ.175ರಷ್ಟು ಹೆಚ್ಚುವರಿ ಅಬಕಾರಿ ಸುಂಕ (ಎಐಡಿ) ಹಾಗೂ 30 ಗ್ಯಾಲನ್‌ಗಳು ಅಥವಾ ಅದಕ್ಕಿಂತ ಕಡಿಮೆ ಶಕ್ತಿ ಇರುವ ಪೀಪಾಯ್ ಅಥವಾ ಬ್ಯಾರೆಲ್ ಗಳಿಗಾಗಿ ಘೋಷಿತ ಬೆಲೆಯ ಶೇ.150 ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಬೇಕು ಎಂದು 2019ರ ಏಪ್ರಿಲ್ 1ರಿಂದಲೇ ಜಾರಿಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು.
ಆದರೆ ಬಿಯರ್ ವರ್ಕ್ಸ್ ರೆಸ್ಟೋರೆಂಟ್‌ಗಳು ಮತ್ತು ಮೈಕ್ರೋ ಬ್ರೂವೆರಿ ಪ್ರೈ ಲಿಮಿಟೆಡ್ ಬಾಟಲಿಯಲ್ಲಿ ಪ್ಯಾಕ್ ಮಾಡಿದ ಬಿಯರ್ ಮೇಲೆ ವಿಧಿಸಬೇಕಾದ ಹೆಚ್ಚುವರಿ ಅಬಕಾರಿ ಸುಂಕವನ್ನು ಘೋಷಿತ ಬೆಲೆಯ ಶೇ.175ರ ಬದಲು ಶೇ. 150ರಷ್ಟು ಮಾತ್ರ ವಿಧಿಸಲಾಗಿತ್ತು. ಇದರ ಪರಿಣಾಮ 2021ರ ಮಾರ್ಚ್‌ನಿಂದ 2023ರ ಜೂನ್ ಅವಧಿಯವರೆಗೆ 59.06 ಲಕ್ಷ ಮೊತ್ತದ ಹೆಚ್ಚುವರಿ ಅಬಕಾರಿ ಸುಂಕ ಕಡಿಮೆಯಾಗಿ ವಿಧಿಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಇಲಾಖೆ ನೀಡಿದ್ದ ಉತ್ತರವೇನು?
ಸಿಎಜಿ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳ ಕುರಿತು ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದರು. ಆರ್ಥಿಕ ಇಲಾಖೆ ಮತ್ತು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಾಗಿತ್ತು. ಇದಾದ ನಂತರ ಇಲಾಖೆಯು ಸಿಎಜಿಗೆ ಉತ್ತರವನ್ನು ಒದಗಿಸಿತ್ತು ಎಂದು ಗೊತ್ತಾಗಿದೆ.
ಗ್ರೋಲರ್ಸ್ ಎಂಬ ಹೊಸ ವರ್ಗದ ಪ್ಯಾಕ್ ಮಾಡಲಾದ ಬಿಯರ್ ಗೆ ಅನುಮತಿ ನೀಡಿತ್ತು. ಮತ್ತು 2 ಲೀಟರ್‍ವರೆಗೆ ಗ್ಲಾಸ್, ಸೆರಾಮಿಕ್, ಸ್ಟೇನ್‌ಲೆಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂನಲ್ಲಿ ಫಿಲ್ಟರ್ ಮಾಡದ ಬಿಯರ್‍ನ ಪ್ಯಾಕೇಜಿಂಗ್ ಗೆ ಶೇ.150 ಎಇಡಿಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಡ್ರಾಫ್ಟ್ ಬಿಯರ್ ಮಾರಾಟಕ್ಕೆ ಶೇ.150ರಷ್ಟು ಶುಲ್ಕ ವಿಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಸಿಎಜಿಗೆ ಉತ್ತರಿಸಿದ್ದರು. ಆದರೆ ಸಿಎಜಿಯು ಈ ಉತ್ತರವನ್ನು ಒಪ್ಪಿಕೊಂಡಿಲ್ಲ.