ಬೆಂಗಳೂರು: ದೇಶದಲ್ಲಿ ಅತ್ಯಂತ ನೀರಿನ ಒತ್ತಡ ಅನುಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ 3 ಜಿಲ್ಲೆಗಳು ಮಾತ್ರವೇ ನೀರಿನ ಲಭ್ಯತೆಯ ದೃಷ್ಟಿಯಿಂದ ಸುರಕ್ಷಿತ ಸ್ಥಿತಿಯಲ್ಲಿವೆ ಎಂದು ಸರ್ಕಾರದ ವರದಿಯೊಂದು ಹೇಳಿದೆ.
ರಾಜ್ಯದ 8 ಜಿಲ್ಲೆಗಳು ತೀವ್ರ ನೀರಿನ ಕೊರತೆ ಎದುರಿಸುವ ವರ್ಗದಲ್ಲಿದ್ದರೆ, 20 ಜಿಲ್ಲೆಗಳು ನೀರಿನ ಕೊರತೆ ವರ್ಗದಲ್ಲಿವೆ. ರಾಜ್ಯದ ಸುಮಾರು 50 ಲಕ್ಷ ಜನಸಂಖ್ಯೆ ಮಾತ್ರ ಜಲ ಸುಸ್ಥಿರತೆ ಹೊಂದಿದ್ದರೆ, ಉಳಿದ 5.60 ಕೋಟಿ ಜನರು ಜಲ ಬಿಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ʻಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರʼ ನಡೆಸಿದ ಈ ಅಧ್ಯಯನ ವರದಿ ವಿವರಿಸಿದೆ.
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ, ಮೌಲ್ಯ ಮಾಪನ ಸಮಾಲೋಚನಾ ಸಂಸ್ಥೆಯಾಗಿರುವ (ECO) ʻನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ʼ (ನ್ಯಾಬ್‌ಕಾನ್ಸ್- NABCONS) ಈ ಅಧ್ಯಯನ ನಡೆಸಿತ್ತು. ರಾಜ್ಯದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸದ 34 ನೀರು ಸರಬರಾಜು ಯೋಜನೆಗಳ ಕುರಿತು ಈ ಅಧ್ಯಯನ ನಡೆಸಲಾಗಿತ್ತು. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕೋರಿಕೆಯ ಮೇರೆಗೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ, ಈ ನೀರು ಸರಬರಾಜು ಯೋಜನೆಗಳ ಕುರಿತು ಅಧ್ಯಯನ ನಡೆಸಲು ಸೂಚಿಸಿತ್ತು.
ನಮ್ಮ ದೇಶದಲ್ಲಿ 1955ರಲ್ಲಿ ಪ್ರತಿ ವ್ಯಕ್ತಿಗೆ ಶುದ್ಧನೀರಿನ ಲಭ್ಯತೆಯು ವರ್ಷಕ್ಕೆ 5,277 ಘನ ಮೀಟರುಗಳಷ್ಟಿತ್ತು. ಈಗ ಅಂದರೆ 2025ಕ್ಕೆ , ವಿಶ್ವಸಂಸ್ಥೆಯ ಲೆಕ್ಕಾಚಾರದ ಪ್ರಕಾರ ಇದು ವರ್ಷಕ್ಕೆ 1,469 ಘನ ಮೀಟರುಗಳಿಗೆ ಕುಸಿದಿದೆ. ನೀತಿ ಆಯೋಗವು 2025 ಮತ್ತು 2050ನೇ ವರ್ಷಗಳಿಗೆ ದೇಶದಲ್ಲಿನ ನಾಗರಿಕರಿಗೆ ನೀರಿನ ಲಭ್ಯತೆಯ ಲೆಕ್ಕಾಚಾರದ ಮುನ್ನಂದಾಜು ಮಾಡಿತ್ತು. ಆ ಸಂದರ್ಭದಲ್ಲಿ ನಾಲ್ಕು ವರ್ಗೀಕರಣಗಳನ್ನು ಮಾಡಲಾಗಿತ್ತು.
(1) ವಾರ್ಷಿಕ ತಲಾವಾರು 1700 ಘನ ಮೀಟರ್ ಗಿಂತ ಹೆಚ್ಚು ನೀರು ಲಭ್ಯವಿರುವ ಪ್ರದೇಶಗಳು ಒತ್ತಡವಿಲ್ಲದ ಪ್ರದೇಶಗಳಾಗಿರುತ್ತವೆ.
(2) ವಾರ್ಷಿಕ ತಲಾವಾರು ನೀರಿನ ಲಭ್ಯತೆ 1000ದಿಂದ 1700 ಘನ ಮೀಟರ್ ನ ಒಳಗಿದ್ದರೆ ಅಂತಹ ಪ್ರದೇಶಗಳು ಒತ್ತಡದಲ್ಲಿರುವ ಪ್ರದೇಶಗಳಾಗಿರುತ್ತವೆ.
(3) ವಾರ್ಷಿಕ ತಲಾವಾರು ನೀರಿನ ಲಭ್ಯತೆಯು 500ದಿಂದ 1000 ಘನ ಮೀಟರ್ ಒಳಗಿರುವ ಪ್ರದೇಶಗಳು ನೀರಿನ ಕೊರತೆಯಿರುವ ಪ್ರದೇಶಗಳಾಗಿರುತ್ತವೆ.
(4) ವಾರ್ಷಿಕ ತಲಾವಾರು ನೀರಿನ ಲಭ್ಯತೆಯು 500 ಘನ ಮೀಟರ್ ಗಿಂತ ಕಡಿಮೆಯಿದ್ದರೆ ಅಂತಹ ಪ್ರದೇಶಗಳು ತೀವ್ರ ನೀರಿನ ಕೊರತೆಯಿರುವ ಪ್ರದೇಶಗಳಾಗಿರುತ್ತವೆ.
ಈ ವರ್ಗೀಕರಣದ ಪ್ರಕಾರವಾಗಿ, ರಾಜ್ಯದ ಉತ್ತರ ಕನ್ನಡ, ಹಾಸನ ಮತ್ತು ಧಾರವಾಡ ಜಿಲ್ಲೆಗಳು ನೀರಿನ ಒತ್ತಡವಿಲ್ಲದ ಪ್ರದೇಶಗಳಾಗಿವೆ. ಅಂದರೆ, ಈ ಜಿಲ್ಲೆಗಳಲ್ಲಿ ವಾರ್ಷಿಕ ತಲಾವಾರು ನೀರಿನ ಲಭ್ಯತೆ 1700 ಘನ ಮೀಟರ್‌ಗಿಂತ ಹೆಚ್ಚಿಗೆ ಇರುವ ವರ್ಗದಲ್ಲಿವೆ. ಉಳಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಮಂಡ್ಯ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿರುವ ವ್ಯಾಪ್ತಿಯು ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ವಲಯದಲ್ಲಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿರುವ ಒಟ್ಟು ಜನಸಂಖ್ಯೆಯು ಅಂದಾಜು 1.96 ಕೋಟಿ ಎಂದು ಹೇಳಲಾಗಿದ್ದು, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 32 ರಷ್ಟಾಗಿದೆ ಮತ್ತು ರಾಜ್ಯದ ಒಟ್ಟು ಭೂಪ್ರದೇಶದ ಶೇ 17.24ರಷ್ಟನ್ನು ಒಳಗೊಂಡಿದೆ.
ಉಳಿದ 20 ಜಿಲ್ಲೆಗಳು ಕೂಡ ನೀರಿನ ಕೊರತೆ ಇರುವ ಪ್ರದೇಶಗಳೇ ಆಗಿವೆ. ಅಚ್ಚರಿಯ ಅಂಶವೆಂದರೆ, ಹಲವಾರು ನದಿಗಳ ಉಗಮ ಸ್ಥಳಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕೂಡ ನೀರಿನ ಕೊರತೆ ಪ್ರದೇಶಗಳ ವರ್ಗದಡಿಯೇ ಬರುತ್ತವೆ. ಪಶ್ಚಿಮಘಟ್ಟದ ಸರಹದ್ದಿನಲ್ಲಿರುವ ಶಿವಮೊಗ್ಗ ಮತ್ತು ಬೆಳಗಾವಿ ಕೂಡ ‘ಕೊರತೆ’ ವರ್ಗದಲ್ಲಿವೆ ಎಂದು ಈ ಅಧ್ಯಯನ ವರದಿ ತಿಳಿಸಿದೆ.
ರಾಜ್ಯದಲ್ಲಿನ ನೀರಿನ ಕೊರತೆಯು ಬಹಳ ಮುಖ್ಯವಾಗಿ ಬಯಲುಸೀಮೆ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಹಾಸನ, ಹಾವೇರಿ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿಯಂತಹ ಜಿಲ್ಲೆಗಳ ಕೆಲವು ಭಾಗಗಳನ್ನು ಹೊರತುಪಡಿಸಿದರೆ, 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಬಲಯ ಸೀಮೆ ಪ್ರದೇಶಕ್ಕೆ ಸೇರುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ.
ರಾಜ್ಯದ ಒಟ್ಟು ನೀರಿನ ಬಳಕೆಯಲ್ಲಿ ಸರಿಸುಮಾರು ಶೇ. 26ರಷ್ಟು ಅಂತರ್ಜಲದಿಂದ ಕೂಡಿದೆ. ಸರಾಸರಿ ವಾರ್ಷಿಕ ತಲಾವಾರು ಸಿಹಿನೀರಿನ ಲಭ್ಯತೆಯನ್ನು 1500 ಘನ ಮೀಟರ್‌ಗಳೆಂದು ಅಂದಾಜಿಸಲಾಗಿದೆ. ಫಾಲ್ಕೆನ್ ಮಾರ್ಕ್ ಸೂಚಕದ ಪ್ರಕಾರ ರಾಜ್ಯವು ನೀರಿನ ಒತ್ತಡದ ಪ್ರವರ್ಗದಲ್ಲಿದೆ. ರಾಜ್ಯದಲ್ಲಿ ನೀರಿನ ಲಭ್ಯತೆಯಲ್ಲಿ ಗಮನಾರ್ಹವಾದ ತಾತ್ಕಾಲಿಕ ಮತ್ತು ಪ್ರಾದೇಶಿಕವಾಗಿ ಅಸಮಾನತೆಯನ್ನು ಕಾಣಬಹುದಾಗಿದೆ ಎಂದು ಈ ವರದಿ ಅಭಿಪ್ರಾಯ ಪಟ್ಟಿದೆ.
ಅಪಾಯದಲ್ಲಿ ಅಂತರ್ಜಲ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಕೈಗೊಂಡ ಅಧ್ಯಯನದ ಅನ್ವಯ ರಾಜ್ಯದಲ್ಲಿನ 26 ಜಿಲ್ಲೆಗಳು ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡಿವೆ. ಅಂತರ್ಜಲ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯವು 270 ಅಂತರ್ಜಲ ಬ್ಲಾಕುಗಳನ್ನು ಹೊಂದಿದೆ. ಈ ಪೈಕಿ 152 ಬ್ಲಾಕ್ ಗಳನ್ನು (ಶೇಕಡ 56) ‘ಸುರಕ್ಷಿತ’ ಎನ್ನಲಾಗಿದ್ದರೆ, 34 ಬ್ಲಾಕ್ ಗಳನ್ನು ‘ಅರೆ ನಿರ್ಣಾಯಕ’, 21 ಬ್ಲಾಕ್ ಗಳನ್ನು ‘ನಿರ್ಣಾಯಕ’ ಹಾಗೂ 63 ಬ್ಲಾಕ್ ಗಳನ್ನು ‘ಅತಿಯಾಗಿ ಬಳಸಲಾದವು’ ಎಂದು ಅಂತರ್ಜಲ ನಿರ್ದೇಶನಾಲಯವು 2020ರಲ್ಲಿ ವರ್ಗೀಕರಿಸಿರುವ ಅಂಶವನ್ನು ಅಧ್ಯಯನವು ಪ್ರಸ್ತಾಪಿಸಿದೆ.
ರಾಜ್ಯದಲ್ಲಿ ಅಂತರ್ಜಲ ಮೂಲಗಳು ಶೇ. 90ರಷ್ಟು ಕುಡಿಯುವ ನೀರು ಮತ್ತು ಸರಿಸುಮಾರು ಶೇ. 51ರಷ್ಟು ನೀರಾವರಿ ಅಗತ್ಯಗಳನ್ನು ಪೂರೈಸುತ್ತಿವೆ. ಕೃಷಿಗಾಗಿ ವಿದ್ಯುತ್ ಸಬ್ಸಿಡಿ ನೀಡುವ ಪದ್ಧತಿಯು ದೇಶದ ಅಂತರ್ಜಲ ಮಟ್ಟ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇದಲ್ಲದೆ, ಮೀಟರ್ ಇಲ್ಲದ ವಿದ್ಯುತ್ ಪೂರೈಕೆಯ ಜೊತೆಗೆ ಫ್ಲ್ಯಾಟ್ ಪದ್ಧತಿಯಲ್ಲಿ ಸುಂಕವನ್ನು ವಿಧಿಸುತ್ತಿರುವ ಪರಿಪಾಟವು ರಾಜ್ಯದ ಅಂತರ್ಜಲ ಪರಿಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ರೈತರ ಅಗತ್ಯಗಳು ಮತ್ತು ಅಂತರ್ಜಲದ ಸುಸ್ಥಿರ ಬಳಕೆ ಖಚಿತಪಡಿಸಿಕೊಳ್ಳುವುದರ ನಡುವೆ ಸಮತೋಲನ ಸಾಧಿಸುವುದು ಸವಾಲಾಗಿ ಪರಿಣಮಿಸಿದೆ ಎಂದು 2017ರ ಬಾಲಸುಬ್ರಮಣ್ಯಂ ಅವರ ವರದಿ ಉಲ್ಲೇಖಿಸಿರುವುದನ್ನು ಕೂಡ ಅಧ್ಯಯನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಅಂತರ್ಜಲ- ಆಧಾರಿತ ನೀರು ಸರಬರಾಜು ಯೋಜನೆಯು ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು, ಅಂತರ್ಜಲ ಮೂಲಗಳು ಋತುಕಾಲಿಕವಾಗಿ ಏರಿಳಿತವಾಗುವುದರಿಂದ ವರ್ಷಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಪೂರೈಕೆ ಲಭ್ಯವಾಗದಿರುವುದು. ಮತ್ತೊಂದು, ಸಮಸ್ಯೆ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ್ದು.
ಅಂದರೆ, ಅಂತರ್ಜಲದಲ್ಲಿ ಫ್ಲೋರೈಡ್, ಕಬ್ಬಿಣ, ನೈಟ್ರೇಟ್ ಮುಂತಾದ ರಾಸಾಯನಿಕ ಕಲ್ಮಶಗಳು ಅಂಕೆ ಮೀರಿದ ಪ್ರಮಾಣದಲ್ಲಿ ಇರುವುದು ದೃಢಪಟ್ಟಿದೆ. ಇಂತಹ ನೀರು ಮಾನವ ಬಳಕೆಗೆ ಅಸುರಕ್ಷಿತ. ರಾಜ್ಯದ ಬಹುತೇಕ ಕಡೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಏಕಕಾಲದಲ್ಲಿ ಒಂದೇ ವಿತರಣಾ ಜಾಲದ ಮೂಲಕ (ಐವಿಡಿಎನ್) ಸಂಸ್ಕರಿಸದ ಅಂತರ್ಜಲ ಮತ್ತು ಸಂಸ್ಕರಿಸಿದ ಎಂಎಎಸ್ ನೀರು ಪೂರೈಕೆಯಾಗುತ್ತಿರುವುದು ಜನರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಕಿತ್ತೂರು-ಕರ್ನಾಟಕ ಪ್ರದೇಶ ಮತ್ತು ಕಲ್ಯಾಣ ಕರ್ನಾಟಕದ ಗ್ರಾಮಗಳು ಹೆಚ್ಚಿನ ತಾಪಮಾನ ಅನುಭವಿಸುವುದರಿಂದ ನದಿಗಳು ಬತ್ತಿ ಹೋಗುತ್ತವೆ. ನೀರಿನಲ್ಲಿ ಹೆಚ್ಚಿನ ಪ್ರಮಾಣದ ಹಾನಿಕಾರಕ ಫ್ಲೋರೈಡ್ ಅಂಶದ ಇರುವಿಕೆಯು ಎಲ್ಲಾ 31 ಜಿಲ್ಲೆಗಳಲ್ಲೂ ಕಂಡುಬಂದಿದೆ. ಆರ್ಸೆನಿಕ್ ರಾಸಾಯನಿಕ ಅಂಶದ ಸಮಸ್ಯೆಯು 3 ಜಿಲ್ಲೆಗಳಲ್ಲಿ ಬಾಧಿಸುತ್ತಿದ್ದು, ಮನುಷ್ಯರ ಆರೋಗ್ಯಕ್ಕೆ ಗಂಭೀರವಾದ ಹಾನಿ ಎಸಗುತ್ತಿದೆ ಎಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಗೋದಾವರಿ, ಕೃಷ್ಣಾ, ಕಾವೇರಿಯಂತಹ ನದಿಗಳ ಜಲಾನಯನ ಪ್ರದೇಶವು ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇ. 76ರಷ್ಟನ್ನು ವ್ಯಾಪಿಸಿದ್ದು, ಶೇ. 42 ರಷ್ಟು ಜಲಸಂಪನ್ಮೂಲವನ್ನು ಹೊಂದಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಶೇ. 24 ರಷ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು, ಶೇ. 58ರಷ್ಟು ನೀರಿನ ಸಂಪನ್ಮೂಲಗಳಿಂದ ಕೂಡಿದೆ. ಇದು, ರಾಜ್ಯದ ವಿವಿಧ ಭೌಗೋಳಿಕ ಪ್ರದೇಶಗಳ ನಡುವೆ ನೀರಿನ ಪೂರೈಕೆ ಹಾಗೂ ಬೇಡಿಕೆಯಲ್ಲಿ ಗಣನೀಯವಾದ ಅಂತರಕ್ಕೂ ಕಾರಣವಾಗಿದೆ.
ಜೊತೆಗೆ, ರಾಜ್ಯದಲ್ಲಿ ಕೃಷಿ, ಕೈಗಾರಿಕೆ ಮತ್ತು ನಗರ ಪ್ರದೇಶಗಳ ನೀರಿನ ಬೇಡಿಕೆಯು ಶುಷ್ಕ ಪ್ರದೇಶದ ದಖ್ಖನ್ ವಲಯದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ಆದರೆ ಈ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆಯು ಬೇಡಿಕೆಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ ಎಂದು ವರದಿ ಹೇಳಿದೆ.
ನೀರಿನ ಕೊರತೆಯನ್ನು ನೀಗಿಸಲು ದೂರದೃಷ್ಟಿ ಹಾಗೂ ಸಮಗ್ರ ದೃಷ್ಟಿಕೋನ ಅಗತ್ಯ ಎಂಬುದನ್ನು ಇದು ಸೂಚಿಸುತ್ತದೆ. ರಾಜ್ಯವು ಎದುರಿಸುತ್ತಿರುವ ನೀರಿನ ಕೊರತೆಗೆ ಸುಲಭ ಪರಿಹಾರಗಳು ಲಭ್ಯವಿಲ್ಲ. ಕರ್ನಾಟಕವು ಸಾಂಪ್ರದಾಯಿಕ ನೀರು ನಿರ್ವಹಣಾ ಪದ್ಧತಿಗಳನ್ನು ಕಡೆಗಣಿಸಿದೆ.
ಇದಕ್ಕೆ ಬದಲಾಗಿ ಬೃಹತ್ ಪ್ರಮಾಣದ ಎಂಜಿನಿಯರಿಂಗ್-ಶಕ್ತಿ-ತಂತ್ರಜ್ಞಾನ ಆಧಾರಿತ ಮೂಲಸೌಕರ್ಯ ಕಲ್ಪಿಸಲು ‘ಹೈಡ್ರಾಲಿಕ್ ಮಾದರಿ’ ಯ ಅಳವಡಿಕೆಗೆ ಒತ್ತು ನೀಡಿದೆ. ಇದು ಸುಸ್ಥಿರ ನೀರಿನ ಲಭ್ಯತೆಗೆ ತೊಡಕಾಗಿ ಪರಿಣಮಿಸಿದೆ ಎಂಬ ಅಂಶಗಳನ್ನು ಈ ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ಒತ್ತಿ ಹೇಳಲಾಗಿದೆ.
32 ನೀರು ಸರಬರಾಜು ಯೋಜನೆಗೆ 214 ಕೋಟಿ ಖರ್ಚು; ಆದರೂ ದೊರೆಯುತ್ತಿಲ್ಲ ಯೋಗ್ಯ ಕುಡಿಯುವ ನೀರು
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸುಧಾರಿಸುವ ಉದ್ದೇಶದಿಂದ 2000ರಿಂದ 2016ರ ಅವಧಿಯಲ್ಲಿ ಜಾರಿಗೆ ತರಲಾದ 32 ಯೋಜನೆಗಳಿಗೆ ಮಿತಿ ಮೀರಿ ಹಣ ವಿನಿಯೋಗಿಸಲಾಗಿತ್ತು. ಆದರೆ ಈ ಯೋಜನೆಗಳು ಅಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಇವುಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.