ಬೆಂಗಳೂರು; ಶುದ್ಧ ಕುಡಿಯುವ ನೀರು ಸೇರಿದಂತೆ ಪ್ರವಾಸೋದ್ಯಮ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ಅನುದಾನವನ್ನು ನಿರ್ದಿಷ್ಟವಾಗಿ ಬಳಸಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಉಲ್ಲಂಘಿಸಿರುವುದನ್ನು ಇಂಡಿಯನ್ ಆಡಿಟ್ ಮತ್ತು ಅಕೌಂಟೆಂಟ್ ಜನರಲ್ ಅವರು ಪತ್ತೆ ಹಚ್ಚಿದ್ದಾರೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕೋಟ್ಯಂತರ ರುಪಾಯಿ ಅನುದಾನ ಒದಗಿಸಿತ್ತು. ಈ ಮೊತ್ತದಲ್ಲಿ ಪುನರಾವರ್ತಿತ ಕಾಮಗಾರಿಗಳನ್ನು ನಡೆಸಿರುವುದು ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.
ಈ ಕುರಿತು ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅವರು 2025ರ ಆಗಸ್ಟ್ 14ರಂದು ಪ್ರವಾಸೋದ್ಯಮ ಇಲಾಖೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗ ಲಭ್ಯವಾಗಿದೆ.
ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅವರು ಆಕ್ಷೇಪಣೆ ವ್ಯಕ್ತಪಡಿಸಿರುವ ಅವಧಿಯಲ್ಲಿ ಸಿ ಟಿ ರವಿ ಮತ್ತು ಆನಂದ್ ಸಿಂಗ್ ಅವರು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಪತ್ರದಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಣೆಗಳ ಕುರಿತು ಸಚಿವ ಎಚ್ ಕೆ ಪಾಟೀಲ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಆರ್ ಒ ಪ್ಲಾಂಟ್ ಒದಗಿಸುವುದು, ಸ್ನಾನಗೃಹಗಳು ಮತ್ತು ಶೌಚಾಲಯಗಳ ನಿರ್ಮಾಣ, ಪಾರ್ಕಿಂಗ್ ಸೌಲಭ್ಯ, ಪ್ರವಾಸಿ ಸೂಚನಾ ಫಲಕಗಳು, ಕುಳಿತುಕೊಳ್ಳುವ ಸೌಲಭ್ಯಗಳು, ಮೆಟ್ಟಿಲುಗಳು ಮತ್ತು ರೇಲಿಂಗ್‌ಗಳು, ಪ್ಯಾರಗೋಲಾ, ಪಾದಚಾರಿ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಒಳಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆಯು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಈ ಸಂಬಂಧ ಸುತ್ತೋಲೆಯನ್ನೂ (NO.PRAEE/YO-1/12/2019-20 DATED 04-07-2019) ಹೊರಡಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ.
ನಿಯಮಬಾಹಿರವಾಗಿ 1.00 ಕೋಟಿ ಖರ್ಚು
ಕೊಪ್ಪಳದ ಆನೆಗುಂದಿಯಲ್ಲಿನ ಅಂಜನಾದ್ರಿ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಿ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿತ್ತು. ವಿಶ್ರಾಂತ ತಂಗುದಾಣ, ಕಾಂಪೌಂಡ್, ಪ್ಲಾಟ್‌ಫಾರ್ಮ್ ಮತ್ತಿತರೆ ಮೂಲಸೌಕರ್ಯಗಳನ್ನು ಒದಗಿಸಲು 1.00 ಕೋಟಿ ರು ಅನುದಾನವನ್ನು ಹಂಚಿಕೆ ಮಾಡಿತ್ತು.
ಪ್ರವಾಸೋದ್ಯಮ ಇಲಾಖೆಯು ಈ ಅನುದಾನವನ್ನು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ಅನುದಾನವನ್ನು ಬಳಸಬೇಕಿತ್ತು. ಆದರೆ ಅನುಷ್ಠಾನ ಏಜೆನ್ಸಿಯು ಅಡುಗೆ ಮನೆ, ಊಟದ ಕೋಣೆಯನ್ನೂ ನಿರ್ಮಾಣ ಮಾಡಿದೆ. ಅನುಷ್ಠಾನ ಏಜೆನ್ಸಿಯು ಮಾಡಿರುವ ಈ ಕಾಮಗಾರಿಯನ್ನು ಒಪ್ಪಲು ಸಾಧ್ಯವಿಲ್ಲ. 2019ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ ಎಂದಿರುವ ಲೆಕ್ಕ ಪರಿಶೋಧಕರು ಇದು ನಿಯಮಬಾಹಿರವಾಗಿದೆ ಆಕ್ಷೇಪ ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.

ಅದೇ ರೀತಿ 1 ಕೋಟಿ ರು ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಲಖಡಿ ಬಾಬಾ ದೇವಸ್ಥಾನದಲ್ಲಿ ಕಾಂಪೌಡ್, ಪಿಲ್ಲರ್ ಕಾಮಗಾರಿ (7ನೇ ಫ್ಲಾಟ್‌ಫಾರ್ಮ್‌ವರೆಗೂ) ಕೈಗೆತ್ತಿಕೊಳ್ಳಲು ಕ್ರಿಡಿಲ್ ಅಂದಾಜು ವೆಚ್ಚ ರೂಪಿಸಿತ್ತು. ಇದಕ್ಕೆ 2020ರ ಜನವರಿ 16ರಂದು ತಾಂತ್ರಿಕ ಅನುಮೋದನೆಯೂ ದೊರೆತಿತ್ತು. ಆದರೆ ಯೋಜನೆಗೆ ವಿರುದ್ಧವಾಗಿ ಭೋಜನ ಭವನವನ್ನು ನಿರ್ಮಾಣ ಮಾಡಿತ್ತು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಲೆಕ್ಕ ಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಅನುಮೋದಿತ ಕಾಮಗಾರಿಗಳಲ್ಲಿ ಪರಿವೀಕ್ಷಣಾ ಮಂದಿರ ಮತ್ತು ವಿಶ್ರಾಂತಿ ತಂಗುದಾಣವೂ ಒಳಗೊಂಡಿತ್ತು. ಆದರೆ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಗಳಿಗೆ ಅವಕಾಶ ಮಾಡಿಕೊಂಡಿರಲಿಲ್ಲ. ಇದಕ್ಎಕ ವಿರುದ್ಧವಾಗಿ ಕಾಮಗಾರಿಗಳನ್ನು ನಡೆಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕಾಮಗಾರಿ ನಡಸಲು ಅಂದಾಜು ವೆಚ್ಚವನ್ನು ಒದಗಿಸಿಲ್ಲ ಮತ್ತು ಅಂದಾಜು ವೆಚ್ಚವನ್ನೂ ಸಿದ್ಧಪಡಿಸಿಲ್ಲ. ಬದಲಿಗೆ ಹಸ್ತಾಂತರ/ಸ್ವಾಧೀನದ ಆಧಾರದ ಮೇಲೆ ಅಂದಾಜುಗಳನ್ನು ಸಿದ್ಧಪಡಿಸಲಾಗಿದೆ ಅಥವಾ ಪುನರಾವರ್ತಿಸಲಾಗಿದೆ ಎಂದು ಲೆಕ್ಕ ಪರಿಶೋಧಕರು ಪತ್ರದಲ್ಲಿ ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ವಿಶ್ರಾಂತಿ ಮೇಲ್ಚಾವಣಿ, ಕುಳಿತುಕೊಳ್ಳುವ ಬೆಂಚುಗಳು, ಲಕಡಿ ಬಾಬಾ ದೇಗುಲ ಕಾಂಪೌಂಡ್ ಮತ್ತು ಭೋಜನ ಭವನಗಳ ನಿರ್ಮಾಣದ ಕೆಲಸಗಳು ವೀಕ್ಷಣಾ ಕೇಂದ್ರ, ವಿಶ್ರಾಂತಿ ಕೇಂದ್ರ, ವೇದಿಕೆಗಳು, ಗೋಡೆ ಇತ್ಯಾದಿಗಳ ನಿರ್ಮಾಣಕ್ಕೆ ಒಂದೇ ಆಗಿರುತ್ತವೆ. ಆದ್ದರಿಂದ, ಕೆಲಸವು ನಕಲು ಆಗುವ ಸಾಧ್ಯತೆಗಳು ಹೆಚ್ಚು ಮತ್ತು ಅದನ್ನು ತಳ್ಳಿಹಾಕಲಾಗುವುದಿಲ್ಲ ಎಂದೂ ಲೆಕ್ಕಪರಿಶೋಧಕರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಇದಲ್ಲದೆ ಈ ಕಾಮಗಾರಿಗಳನ್ನು ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಲಾಗಿದೆ. ಈ ವರದಿ ಪ್ರಕಾರ ಈ ಕೆಲಸ ಪೂರ್ಣಗೊಂಡಿಲ್ಲ ಮತ್ತು ವರದಿಯಲ್ಲಿ ಲಗತ್ತಿಸಲಾದ ಫೋಟೋಗಳನ್ನು ದಿನಾಂಕದೊಂದಿಗೆ ಜಿಪಿಎಸ್ ಟ್ಯಾಗ್ ಮಾಡಿಲ್ಲ ಎಂದು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.
ಅಲ್ಲದೆ, ಅನುಷ್ಠಾನ ಸಂಸ್ಥೆಯು ಕೆಲಸ ಪ್ರಾರಂಭವಾಗುವ ಮೊದಲೇ ಛಾಯಾಚಿತ್ರಗಳನ್ನು ಸಲ್ಲಿಸಿದೆ. ಮತ್ತು ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದೆ. ಆದರೆ ಆಡಿಟ್‌ಗೆ ಸಲ್ಲಿಸಿದ ದಾಖಲೆಗಳಲ್ಲಿ ಕಂಡುಬಂದಿಲ್ಲ. 2023ರ ಅಕ್ಟೋಬರ್ 16 ಮತ್ತು 17ರಂದು ನಡೆದ ಸ್ಥಳ ಪರಿಶೀಲನೆ/ ತಪಾಸಣೆ ವೇಳೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನಿಗಮದ ಸಹಾಯಕ ಸಹಾಯಕ ಎಂಜಿನಿಯರ್ ಹಾಜರಿರಲಿಲ್ಲ. ಆದರೆ 80 ಲಕ್ಷ ರು ವೆಚ್ಚಕ್ಕೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದರು.

ಆದರೂ ಸಹ ಈ ಕಾಮಗಾರಿಗಾಗಿ ಮಾಡಿದ್ದ ವೆಚ್ಚದಲ್ಲಿ ಶಾಸನಬದ್ಧ ಕಡಿತಗಳ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಹೇಳಿದೆ.
ಪ್ರವಾಸೋದ್ಯಮ ಇಲಾಖೆಯು ಈ ಕಾಮಗಾರಿಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ಹೀಗಾಗಿ ಶಾಸನಬದ್ಧ ಕಡಿತಗಳ ನಿಖರತೆ ಮತ್ತು ಸಂಬಂಧಪಟ್ಟ ಮೊತ್ತವು ಸರ್ಕಾರಕ್ಕೆ ಪಾವತಿ ಆಗಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಪರಿಶೋಧನೆಯು ಖಚಿತಪಡಿಸಿಕೊಂಡಿಲ್ಲ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಈ ಧೋರಣೆಯು ವಂಚನೆಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಲೆಕ್ಕ ಪರಿಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

‘ಪ್ರವಾಸೋದ್ಯಮ ಇಲಾಖೆಯು ಈ ಕಾಮಗಾರಿಯನ್ನು ಅನುಮೋದಿಸುವ ಮೊದಲು ವಿವರವಾದ ಅಂದಾಜಿನಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಇಲಾಖೆಯಲ್ಲಿನ ಶ್ರದ್ಧೆಯ ಕೊರತೆಯನ್ನು ಸೂಚಿಸುತ್ತದೆ. ಇಲಾಖೆಯ ಈ ನಿಷ್ಕ್ರಿಯತೆಯು ಅನುಷ್ಠಾನ ಸಂಸ್ಥೆಯಿಂದ ಕೆಲಸದ ನಕಲು ಅಥವಾ ಪುನರಾವರ್ತಿತ ಮತ್ತು ಮತ್ತು ವಂಚನೆಯ ಅಭ್ಯಾಸಗಳ ಸಾಧ್ಯತೆಗಳಿಗೆ ಕಾರಣವಾಗಬಹುದು,’ ಎಂದು ಪತ್ರದಲ್ಲಿ ವಿವರಿಸಿದೆ.
ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿರುವ ಅಂಜನಾದ್ರಿ ಬೆಟ್ಟ/ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಹೀಗಾಗಿ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ವರ್ಷಪೂರ್ತಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಯಾವುದೇ ವಸತಿ ನಿಲಯ ಸೌಲಭ್ಯಗಳಿಲ್ಲ ಮತ್ತು ಹಿರಿಯ ನಾಗರಿಕರು ದೇವಸ್ಥಾನವನ್ನು ತಲುಪಲು ಸುಮಾರು 600 ಮೆಟ್ಟಿಲುಗಳನ್ನು ಹತ್ತುವುದು ಕಷ್ಟಕರವಾಗಿದೆ ಎಂದು ಹೇಳಿದ್ದರು.

ಹನುಮಾನ್ ಜಯಂತಿಯ ಸಮಯದಲ್ಲಿ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶದಲ್ಲಿ ಸಮುದಾಯ ಭವನಗಳು ಮತ್ತು ಇತರ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಎರಡು ಹಂತಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹ 200 ಕೋಟಿ ಮೀಸಲಿಟ್ಟಿದ್ದರೂ ಸಹ ಇದುವರೆಗೆ ₹10 ಕೋಟಿ ಮಾತ್ರ ಬಿಡುಗಡೆಯಾಗಿತ್ತು.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ದೇವಾಲಯದ ಆಡಳಿತವನ್ನು 2018 ರಲ್ಲಿ ವಹಿಸಿಕೊಂಡಿತ್ತು.
ಭೂಮಿಯ ಕೊರತೆಯಿಂದಾಗಿ ಧಾರ್ಮಿಕ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿರಲಿಲ್ಲ. ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಣದ ಕೊರತೆಯಿಂದಾಗಿ 77.28 ಎಕರೆಗಳನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ.
ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಣಕಾಸು ಇಲಾಖೆ ಹಣವನ್ನು ಒದಗಿಸಬೇಕಾಗಿದೆ. ಅನೇಕ ಪ್ರಸ್ತಾವಿತ ಕಾಮಗಾರಿಗಳು ಅರಣ್ಯ ಪ್ರದೇಶದ ಅಡಿಯಲ್ಲಿ ಬರುವುದರಿಂದ, ಅರಣ್ಯ ಇಲಾಖೆಯಿಂದ ಆಕ್ಷೇಪಣೆ ರಹಿತ ಪ್ರಮಾಣಪತ್ರ ಪಡೆಯುವುದರಲ್ಲಿ ಸಮಸ್ಯೆ ಇದೆ.
ಹಿಂದಿನ ಬಿಜೆಪಿ ಸರ್ಕಾರವು ಬೆಟ್ಟದ ಸುತ್ತಲೂ 70 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಯಾತ್ರಿ ನಿವಾಸ, ಭೋಜನ ಶಾಲೆ, ಶಾಪಿಂಗ್ ಸಂಕೀರ್ಣಗಳು, ಪಾರ್ಕಿಂಗ್ ಪ್ರದೇಶ, ರಸ್ತೆ ವಿಸ್ತರಣೆ, ರೋಪ್‌ವೇ ಮತ್ತು ಇತರ ಕಾಮಗಾರಿಗಳ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೂ ಈ ಯೋಜನೆ ಕೇವಲ ಕಾಗದದಲ್ಲೇ ಉಳಿದಿದೆ. ಬೆಟ್ಟ ಮತ್ತು ಇತರ 10 ಪ್ರವಾಸಿ ಸ್ಥಳಗಳಿಗೆ ರೋಪ್‌ವೇ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ ನಂತರವೂ ಕಾಮಗಾರಿಗಳಿಗೆ ಚುರುಕು ಬಂದಿಲ್ಲ.
ಜಿಲ್ಲಾಡಳಿತವೇ ದೇವಸ್ಥಾನ ನಿರ್ವಹಣೆ ಹೊಣೆ ಹೊತ್ತುಕೊಂಡಿದೆ. ಖಾಸಗಿ ಒಡೆತನದ ಟ್ರಸ್ಟ್‌ನಿಂದ ವಶಕ್ಕೆ ಪಡೆದುಕೊಂಡ ವೇಳೆ ದೇವಸ್ಥಾನದ ಹುಂಡಿಯಲ್ಲಿ ಕೇವಲ 247 ರೂ.ಗಳು ಕಾಣಿಕೆ ಮಾತ್ರ ಇತ್ತು. ಸದ್ಯ ದೇವಸ್ಥಾನದ ಹುಂಡಿ ಹಣ, ಪಾರ್ಕಿಂಗ್ ಹಣ, ಲಾಡು, ತೀರ್ಥ ಪ್ರಸಾದಗಳ ಮಾರಾಟ, ನಾನಾ ಸೇವೆಗಳಿಂದ ಬರುವ ಹಣ ಸೇರಿ ಒಟ್ಟು 6 ವರ್ಷಗಳ ಅವಧಿಯಲ್ಲಿ6 ಕೋಟಿ ರೂ. ಗೂ ಅಧಿಕ ಆದಾಯ ಸಂಗ್ರಹವಾಗಿದೆ.
6 ಕೋಟಿ ರೂ. ಗೂ ಅಧಿಕ ಆದಾಯ
ತಾಲೂಕು ಆಡಳಿತ ದೇವಸ್ಥಾನದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ ನಂತರ 2018ರ ಜು. 23 ರಿಂದ ಮಾ.31ರ ವರೆಗೆ 73,09,505 ರೂ. ಸಂಗ್ರಹವಾಗಿದೆ. 2019ರ ಏ.1 ರಿಂದ 2020ರ ಮಾ.31ರ ವರೆಗೆ 1,12,62,404 ರೂ., 2020ರ ಏ.01 ರಿಂದ 2021ರ ಮಾ.31ರ ವರೆಗೆ 78,95,030 ರೂ., 2021ರ ಏ.01 ರಿಂದ 2022ರ ಮಾ.31ರ ವರೆಗೆ 1,29,42,104 ರೂ., 2022 ಮಾ.01 ರಿಂದ 2023ರ ಮಾ.31ರ ವರೆಗೆ 2,84,32,028 ರೂ. ಸಂಗ್ರಹವಾಗಿದೆ. ಒಟ್ಟು 6 ವರ್ಷಗಳ ಅವಧಿಯಲ್ಲಿ6,78,40,941 ರೂ. ಸಂಗ್ರಹವಾಗಿದೆ.
ಇದರಲ್ಲಿ ದೇವಸ್ಥಾನ ನಿರ್ವಹಣೆ, ಸಿಬ್ಬಂದಿ ವೇತನ ಸೇರಿದಂತೆ ನಾನಾ ಖರ್ಚು ವೆಚ್ಚ ಸೇರಿದಂತೆ ಒಟ್ಟು 3,83,49,281 ರೂ. ಗಳನ್ನು ಖರ್ಚು ಮಾಡಲಾಗಿದೆ. ಇನ್ನುಳಿದ 2,94,91,659 ರೂ.ಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ನಲ್ಲಿಯೂ ”ಆಂಜನೇಯ ಸ್ವಾಮಿಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಪ್ರವಾಸಿಗಳಿಗೆ ಮೂಲಭೂತ ಸೌಕರ್ಯ, ರೋಪ್‌ವೇ ಒಳಗೊಂಡಂತೆ ಕಾಮಗಾರಿಗಳನ್ನು 100 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು” ಎಂದು ಪ್ರಕಟಿಸಲಾಗಿತ್ತು.
ಈ ಹಿಂದೆಯೂ ಹಣ ನೀಡಿಕೆ!
2020ರ ರಾಜ್ಯ ಬಜೆಟ್‌ನಲ್ಲಿ ಈ ಬೆಟ್ಟದ ಅಭಿವೃದ್ಧಿಗೆ 20 ಕೋಟಿ ರೂ. ಘೋಷಿಸಲಾಗಿತ್ತು. 2021ರ ಬಜೆಟ್‌ನಲ್ಲಿ ಸಮಗ್ರ ಅಭಿವೃದ್ಧಿಗೆ 50 ಕೋಟಿ ನೀಡಲಾಗಿತ್ತು. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2.68 ಕೋಟಿ, ಮುಜರಾಯಿ ಇಲಾಖೆಯಿಂದ 1.40 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ., ಕೇಂದ್ರ ಕೈಗಾರಿಕೆ ಇಲಾಖೆಯ ಹ್ಯಾಂಡಿ ಕ್ರಾಫ್ಟ್‌ನಿಂದ 10 ಕೋಟಿ ರೂ. ಗಳು ಸೇರಿದಂತೆ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಪ್ರಥಮ ಹಂತದಲ್ಲಿ 64 ಕೋಟಿ ರೂ.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡಲಿದೆ ಎಂದು ಪ್ರಕಟಿಸಲಾಗಿತ್ತು.
ಆದರೆ ನಿಗದಿಯಂತೆ ಯಾವುದೇ ಮಹತ್ತರ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ಈಗ ಬಜೆಟ್‌ನಲ್ಲಿಯೇ ಒಟ್ಟು 100 ಕೋಟಿ ನೀಡಿರುವುದರಿಂದ ಭಕ್ತರ ನಿರೀಕ್ಷೆ ಹೆಚ್ಚಿತ್ತು. ಈ ಬೆಟ್ಟಕ್ಕೆ ಪ್ರತಿ ವರ್ಷ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ. ಭಕ್ತರಿಂದಲೇ ಕೊಟ್ಯಂತರ ಆರುಪಾಯಿ ಆದಾಯವಿದೆ. ಅಂಜನಾದ್ರಿಬೆಟ್ಟ ಏರುವ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಕೇಂದ್ರಗಳೇ ಇಲ್ಲ. ಪ್ರಾಥಮಿಕ ಚಿಕಿತ್ಸೆಗೂ ಅವಕಾಶವಿಲ್ಲ. ಕನಿಷ್ಟ ಸೌಲಭ್ಯಗಳೂ ಇಲ್ಲ.
ಬೆಟ್ಟ ಏರುವಾಗ ಹೃದಯಾಘಾತ, ಹೃದಯಸ್ಥಂಬನ ಹೀಗೆ ಒಂದೊಲ್ಲೊಂದು ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಪ್ರಾಣ ಬಿಟ್ಟವರೂ ಇದ್ದಾಋಎ. 2023ರಲ್ಲಿ ಕಲಘಟಗಿ ತಾಲೂಕಿನ ಕೊಟ್ರೇಶ, ಲಕ್ಕುಂಡಿ ಗ್ರಾಮದ ಕಾರ್ತಿಕಗೌಡ ಶೇಖರ ಗೌಢ, 2024ರಲ್ಲಿ ರಾಜಜಸ್ಥಾನದ ಬಾಗಚಾಂದ್ ಟಾಕ್ ಹೀಗೆ ಅನೇಕರ ಸಾವಿನ ಪಟ್ಟಿಯೇ ಇದೆ. ಇತ್ತೀಚೆಗಷ್ಟೇ ಬೆಟ್ಟದ ಮೇಲಿಂದ ಮಹಿಳೆಯೊಬ್ಬಳು ಕಂದಕಕ್ಕೆ ಬಿದ್ದಿದ್ದಳು.
ಅಂಜನಾದ್ರಿ ಈಗ ಸ್ಥಳೀಯ ಧಾರ್ಮಿಕ ತಾಣವಷ್ಟೇ ಅಲ್ಲ, ದೇಶ ಹಾಗೂ ವಿದೇಶಗಳಿಂದ ಕೋಟ್ಯಂತರ ಜನರು ಇಲ್ಲಿಗೆ ಬರುತ್ತಾರೆ. ಪ್ರತಿ ಶನಿವಾರ , ಭಾನುವಾರ, ಹಬ್ಬ, ಅಮಾವಾಸ್ಯೆ ಹುಣ್ಣಿಮೆ, ಹನುಮ ಜಯಂತಿ, ಹನುಮಾ ಮಾಲಾ ವಿಸರ್ಜನೆ ಹೀಗೆ ವಿಶೇಷ ದಿನಗಳಂದು ಜನಸಂದಣಿ ಇರುತ್ತದೆ. ಜನಸಂದಣಿ ವೇಳೆ ದುರ್ಘಟನೆ ಸಂಭವಿಸಿದರೆ ಪ್ರಾಥಮಿಕ ಚಿಕಿತ್ಸೆಗೆ ಅಂಜನಾದ್ರಿ ಸಮೀಪದಲ್ಲಿ ಚಿಕಿತ್ಸಾ ಕೇಂದ್ರಗಳಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.





